ವಿದೇಶವಾಸಿ
ಕಳೆದ ತಿಂಗಳು ಮರ್ಸಿಡಿಸ್ ಬೆನ್ಜ್ ಕಾರಿನ ಕುರಿತಾಗಿ ಒಂದು ಅಂಕಣ ಬರೆದಿದ್ದೆ. ಬೆಸ್ಟ್ ಕಾರಿನ ಹುಟ್ಟು, ನಡೆದು ಬಂದ ದಾರಿಯ ಬಗ್ಗೆ ಹೇಳಿದ್ದೆ. ಆ ಅಂಕಣ ಅಪೂರ್ಣವಾಗಿತ್ತು. ಅದರ ಮುಂದಿನ ವಾರದ ಅಂಕಣದಲ್ಲಿಯೇ ಕಥೆಯನ್ನು ಮುಂದುವರಿಸಬೇಕಾಗಿತ್ತಾ ದರೂ, ಆ ಸಮಯದಲ್ಲಿ ಇರಾನ್ ಯುದ್ಧ ಮತ್ತು ಇತರ ಕೆಲವು ಘಟನೆಗಳು ನಡೆದ ಕಾರಣ, ಪ್ರಸಕ್ತ ಕಾಲಕ್ಕೆ ಸಮಂಜಸವೆನಿಸಿದ ವಿಷಯದ ಕುರಿತು ಬರೆಯಬೇಕಾಯಿತು.
ಸಾಕಷ್ಟು ಸ್ಪೀಡ್ ಬ್ರೇಕರ್‌ಗಳನ್ನು ದಾಟಿ ಗುರಿ ತಲುಪಿದ ಬೆನ್ಜ್ ಕಾರಿನ ಕಥೆಯನ್ನು ಬರೆಯುವಾಗ ಅಂಕಣವೂ ಸ್ಪೀಡ್ ಬ್ರೇಕರ್ ಅನ್ನು ಎದುರಿಸಬೇಕಾಗುತ್ತದೆ ಎಂದು ಎಣಿಸಿರಲಿಲ್ಲ. ಆ ಅಂಕಣದಲ್ಲಿ, ‘ಹೆಸರಿನಲ್ಲಿಯೇ ಕಾರು ಇರುವಾಗ ಆತ ಕಾರು ತಯಾರು ಮಾಡದೆ ಇನ್ನೇನು ಮಾಡಿಯಾನು’ ಎಂಬರ್ಥದ ಮಾತು ಹೇಳುವಾಗ ಮರ್ಸಿಡಿಸ್ ಬೆನ್ಜ್ ಹೆಸರಿನಲ್ಲಿ ಅದರ ಜನ್ಮದಾತ ಕಾರ್ಲ್ ಬೆನ ಹೆಸರು ಹೇಗೆ ಸೇರಿಕೊಂಡಿತು ಎಂದು ಹೇಳಿದ್ದೇ ನಾದರೂ ಮರ್ಸಿಡಿಸ್ ಹೆಸರು ಹೇಗೆ ಸೇರಿಕೊಂಡಿತು ಎಂದು ಹೇಳಿರಲಿಲ್ಲ.
ಕೆಲವು ಪ್ರಾಮಾಣಿಕ ಓದುಗರು ಈ ಕುರಿತಾಗಿ ಸಂದೇಶವನ್ನೂ ಕಳಿಸಿದ್ದರು. ಅಂಕಣಕ್ಕೆ ಅದರದ್ದೇ ಆದ ಪದಗಳ ಮಿತಿ ಮತ್ತು ಸ್ಥಳದ ಚೌಕಟ್ಟು ಇರುವುದರಿಂದ ಅದನ್ನು ಅಲ್ಲಿಗೇ ನಿಲ್ಲಿಸಬೇಕಾಗಿತ್ತು. ಈಗ ಮುಂದುವರಿಸುವ ಸಮಯ. ಅಷ್ಟಕ್ಕೂ ವಾಹನಗಳ ಇತಿಹಾಸದ ಪುಟಗಳಲ್ಲಿ ಮಹತ್ತರವಾದ ತಿರುವು ದಾಖಲಿಸಿದ, ವಿಶ್ವದ ಕೆಲವೇ ಪ್ರಮುಖ ಕಾರು ಕಂಪನಿಗಳ ಪಟ್ಟಿಯಲ್ಲಿ ಸ್ಥಾಯಿಯಾಗಿ ನಿಂತಿರುವ ಬೆನ್ಜ್ ಕಾರಿನ ಕುರಿತು ಬರೆಯುವುದಕ್ಕೆ ಒಂದು ಅಂಕಣ ಸಾಲದು ಎನ್ನುತ್ತಾ, ಅದರ ಯಶೋಗಾಥೆಯನ್ನು ಮುಂದುವರಿಸು ತ್ತಿದ್ದೇನೆ.
1890 ಮತ್ತು 1900ರ ದಶಕದ ಆರಂಭದಲ್ಲಿ ಬೆನ್ಜ್ ವಿಶ್ವದ ಅತಿದೊಡ್ಡ ಆಟೋಮೊಬೈಲ್ ಕಂಪನಿಯಾಗಿ ಸ್ಥಾಪಿತಗೊಂಡಿತ್ತು. ಕಾರು ಉತ್ಪಾದನೆಯೊಂದಿಗೆ ಅದು ತಯಾರಿಸುತ್ತಿದ್ದ ಎಂಜಿನ್ʼಗಳು ಬಹಳ ಜನಪ್ರಿಯವಾಗಿದ್ದವು. ಇದರಿಂದಾಗಿ ಸಂಸ್ಥೆಗೆ ಹೆಚ್ಚಿನ ಲಾಭ ಬರಲು ಆರಂಭವಾಯಿತು.
ಆ ಸಮಯದಲ್ಲಿ ಫ್ರೆಡ್ರಿಕ್ ವಾನ್ ಫಿಶರ್ ಮತ್ತು ಜೂಲಿಯಸ್ ಸ್ಕಾಟ್ಸ್ ಹೊಸ ಪಾಲುದಾರ ರಾಗಿ ಕಂಪನಿಯನ್ನು ಸೇರಿಕೊಂಡರು. ಅವರಲ್ಲಿ ಒಬ್ಬರು ವ್ಯವಹಾರವನ್ನು ನೋಡಿ ಕೊಂಡರೆ ಇನ್ನೊಬ್ಬರು ಮಾರ್ಕೆಟಿಂಗ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಕಾರ್ಲ್ ಬೆನ್ಜ್ ತಂತ್ರಜ್ಞಾನದ ಕಡೆ ಹೆಚ್ಚಿನ ಲಕ್ಷ್ಯ ವಹಿಸಲು ಅನುಕೂಲ ವಾಯಿತು.
ಇದನ್ನೂ ಓದಿ:Kiran Upadhyay Column: ವಿದೇಶವಾಸಿಗೆ ಆರು ವರುಷ, ಚರ್ಚಾವಾಸಿಗೆ ಒಂದು ನಿಮಿಷ...!
ಹೊಸ ಅನ್ವೇಷಣೆ ಮಾಡುವುದಕ್ಕೂ, ಹಳೆಯ ತಂತ್ರಜ್ಞಾನವನ್ನು ಉತ್ತಮಪಡಿಸಿ ಕೊಳ್ಳುವುದಕ್ಕೂ ಅವಕಾಶ ಒದಗಿತು. ಅವರು ನೂತನ ಮತ್ತು ಸುಧಾರಿತ ಆಟೋ ಮೊಬೈಲನ್ನು ವಿನ್ಯಾಸಗೊಳಿಸಿ, ಅದಕ್ಕೆ ಪೇಟೆಂಟ್ ಕೂಡ ಪಡೆದರು. ಆ ಕಾಲದಲ್ಲಿ ಬೆನ್ಜ್ ವಿಕ್ಟೋರಿಯಾ ಎಂಬ ಹೆಸರಿನಲ್ಲಿ ತಯಾರಾದ ಮೂರು ಅಶ್ವಶಕ್ತಿಯ (ಹಾರ್ಸ್ ಪವರ್) ಎಂಜಿನ್ ಗಂಟೆಗೆ ಹನ್ನೊಂದು ಮೈಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿತ್ತು.
ಇದು ಇಬ್ಬರು ಕುಳಿತು ಹೋಗುವ ಐಷಾರಾಮಿ ವಾಹನವಾಗಿದ್ದು, ಆ ಕಾಲದಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿದ್ದವು. ಆದರೆ ಬೆನ್ಜ್ ಕಂಪನಿ ತನ್ನ ಯಶಸ್ಸನ್ನು ಅನುಭವಿಸುತ್ತಿರುವಾಗಲೇ, ತನ್ನದೇ ದೇಶದ ಇನ್ನೊಂದು ಸಂಸ್ಥೆಯಾದ ಡೈಮ್ಲರ್ ಮೋಟೋರೆನ್ (ಮೋಟರ್) ಮತ್ತು ಗಸೆಲ್ ಶಾಫ್ಟ್ʼನಿಂದ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿತ್ತು.
ಡೈಮ್ಲರ್ ಮೋಟಾರ್ ಮತ್ತು ಗಸೆಲ್ ಶಾಫ್ಟ್ ಸಂಸ್ಥೆಯ ನೇತೃತ್ವವನ್ನು ಇಬ್ಬರು ಪ್ರತಿಭಾ ನ್ವಿತ ಎಂಜಿನಿಯರ್‌ಗಳಾದ ಗಾಟ್ಲೀಬ್ ಡೈಮ್ಲರ್ ಮತ್ತು ವಿಲ್ಹೆಲ್ಮ್ ಮೇಬ್ಯಾಕ್ ವಹಿಸಿದ್ದರು. ಇದೇನು ಮರ್ಸಿಡಿಸ್ ಬೆನ್ಜ್ ಕಥೆಯಲ್ಲಿ ಹೊಸದೊಂದು ಸಂಸ್ಥೆ ಮತ್ತು ಇಬ್ಬರು ವ್ಯಕ್ತಿಗಳ ಹೆಸರು ಸೇರ್ಪಡೆಗೊಳ್ಳುತ್ತಿದೆ ಎನ್ನಬೇಡಿ.
ಮರ್ಸಿಡಿಸ್ ಬೆಂಜ್ ಬೆಳೆಯುವುದಕ್ಕೆ ಮತ್ತು ಇಂದಿಗೂ ಗಟ್ಟಿಯಾಗಿ ನಿಲ್ಲುವುದಕ್ಕೆ ಈ ಇಬ್ಬರ ಪಾತ್ರವೂ ಮಹತ್ತರವಾಗಿದೆ. ಕಾರ್ಲ್ ಬೆನ್ಜ್ ಒಳ್ಳೆಯ ಎಂಜಿನಿಯರ್ ಆಗಿದ್ದರೂ ಒಳ್ಳೆಯ ವ್ಯವಹಾರಸ್ಥರಾಗಿರಲಿಲ್ಲ. ಆದರೆ ಡೈಮ್ಲರ್ ವ್ಯವಹಾರ ನಡೆಸುವುದರಲ್ಲಿ ನಿಷ್ಣಾತ ರಾಗಿದ್ದರು.
ಡೈಮ್ಲರ್ ಸಂಸ್ಥೆ 1892ರಲ್ಲಿ ಮೊದಲ ವಾಣಿಜ್ಯ ವಾಹನವನ್ನು ಮಾರುಕಟ್ಟೆಗೆ ತಂದಿತು. ಐದು ವರ್ಷಗಳ ನಂತರ, ಕಾರಿನಲ್ಲಿ ಮೊದಲ ಬಾರಿ ಎಂಜಿನ್ ಅನ್ನು ಮುಂದೆ ಅಳವಡಿಸಿ ಮಾರುಕಟ್ಟೆಗೆ ಬಿಟ್ಟರು. ಡೈಮ್ಲರ್ ವಾಹನಗಳು ಸಾರ್ವಜನಿಕರಿಗೆ ಹೆಚ್ಚು ಆರಾಮದಾಯಕ ವಾಗಿಯೂ, ಆಕರ್ಷಕವಾಗಿಯೂ ಕಾಣುತ್ತಿದ್ದವು. ಆದ್ದರಿಂದ ಡೈಮ್ಲರ್ ಕಾರುಗಳು ಬೆನ್ಜ್ ಕಾರುಗಳಿಗಿಂತ ಹೆಚ್ಚು ಮಾರಾಟವಾಗುತ್ತಿದ್ದವು.
1900ರ ವೇಳೆಗೆ ಅವರು ಅದ್ಭುತವಾದ, ಇಂದಿನ ಆಧುನಿಕ ಯುಗಕ್ಕೆ ಹೊಂದಿಕೊಳ್ಳ ಬಹುದಾದ ಒಂದು ಕಾರನ್ನು ನಿರ್ಮಿಸಿದರು. ಆ ಕಾರು ಶಕ್ತಿಯುತವಾದ ಎಂಜಿನ್ ಅನ್ನು ಹೊಂದಿತ್ತು, ಕಾರಿನ ದೇಹವು ದೊಡ್ಡದಾಗಿತ್ತು, ಉಕ್ಕಿನ ಚಾಸಿಸ್ ಅನ್ನು ಹೊಂದಿತ್ತು.
ಮೊದಲ ಬಾರಿಗೆ ಗಂಟೆಗೆ 56 ಮೈಲಿ ವೇಗವಾಗಿ ಚಲಿಸಬಹುದಾಗಿದ್ದ ಈ ಕಾರನ್ನು ರೇಸ್ ಗಳಿಗಾಗಿ ಬಳಸುತ್ತಿದ್ದರು. ಬೆಟ್ಟ-ಗುಡ್ಡಗಳನ್ನು ಹತ್ತುವುದಕ್ಕಾಗಿ ಜನರು ಇದನ್ನು ಉಪಯೋಗಿಸಲು ಆರಂಭಿಸಿದರು.
ಈ ಸರಣಿಯ ಮೊದಲ ಕಾರನ್ನು ಶ್ರೀಮಂತ ಉದ್ಯಮಿಯಾಗಿದ್ದ ಎಮಿಲ್ ಜೆಲೀನ್ ಅವರ ಕೋರಿಕೆಯ ಮೇರೆಗೆ ತಯಾರಿಸಲಾಗಿತ್ತು. ಅವರಿಗೆ ‘ಮರ್ಸಿಡಿಸ್’ ಹೆಸರಿನ ಮಗಳಿದ್ದಳು. ಅವರು ತಮ್ಮ ಮಗಳ ಹೆಸರನ್ನು ಈ ಕಾರಿಗೆ ಇಡಲು ನಿರ್ಧರಿಸಿದ್ದರು. ಮರ್ಸಿಡಿಸ್ ಹೆಸರು ಸೇರಿಕೊಂಡದ್ದು ಹೀಗೆ. ಹಾಗೆ ನೋಡಿದರೆ, ಹೆಸರು ಕೊಟ್ಟದ್ದು ಬಿಟ್ಟರೆ ಉದ್ಯಮಿಯ ಮಗಳ ಕೊಡುಗೆ ಏನೂ ಇಲ್ಲ.
ಇರಲಿ, ಮರ್ಸಿಡಿಸ್ ಯಶಸ್ವಿಯಾದ ಬೆನ್ನಲ್ಲೇ ಡೈಮ್ಲರ್ ಕಂಪನಿಯವರು ತಮ್ಮ ಎಲ್ಲಾ ವಾಹನಗಳಿಗೂ ಮರ್ಸಿಡಿಸ್ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದರು. ಮುಂದೆ ಅದೇ ಹೆಸರಿನಲ್ಲಿ ರೇಸಿಂಗ್ ಕಾರುಗಳು ಮತ್ತು ಸಾರ್ವಜನಿಕ ಬಳಕೆಗಾಗಿನ ಹೊಸ ಮಾದರಿಗಳ ವಾಹನಗಳನ್ನು ಉತ್ಪಾದಿಸಲು ಪ್ರಾರಂಭಿಸಿದರು. ಆದರೆ ಅಲ್ಲಿಯೂ ಕೆಲಸ ಸುಸೂತ್ರವಾಗಿರಲಿಲ್ಲ.
ಈ ಕಾರು ಮಾರುಕಟ್ಟೆಗೆ ಬರುವುದಕ್ಕಿಂತ ಮೊದಲೇ ಡೈಮ್ಲರ್ ತೀರಿ ಹೋದರು. ಕಂಪನಿಯ ಜವಾಬ್ದಾರಿ ಮೇ ಬ್ಯಾಕ್ ಹೆಗಲಿಗೆ ಬಿದ್ದಿತ್ತು. ದುರದೃಷ್ಟವೆಂದರೆ 1901ರಲ್ಲಿ ಮರ್ಸಿಡಿಸ್ ಮಾರುಕಟ್ಟೆಗೆ ಬಂದಿತ್ತು, ಅದಕ್ಕೂ ಒಂದು ವರ್ಷ ಮೊದಲೇ ಅದನ್ನು ವಿನ್ಯಾಸಗೊಳಿಸಿದ ಡೈಮ್ಲರ್ ನಿಧನರಾಗಿದ್ದರು. ಈ ಕಡೆ, ಮರ್ಸಿಡಿಸ್‌ನ ಬೆಳವಣಿಗೆ ಕಂಡು ಬೆನ್ಜ್ ಪಾಲುದಾರರು ಆತಂಕಗೊಂಡಿದ್ದರು. ಸ್ಪರ್ಧೆ ಎದುರಿಸಲು ಅವರು ಶೀಘ್ರ ಉಪಾಯವನ್ನು ಬಯಸುತ್ತಿದ್ದರು.
ಪ್ರತಿಸ್ಪರ್ಧಿಯನ್ನು ಹಣಿಯಲು ಅವರು ಕಾರ್ಲ್ ಅನುಮತಿ ಇಲ್ಲದೆಯೇ ಕೆಲವು ಫ್ರೆಂಚ್ ವಿನ್ಯಾಸಕರನ್ನು ಕರೆತಂದರು. ಈ ಬೆಳವಣಿಗೆಯಿಂದ ಕಾರ್ಲ್ ಬೆನ್ಜ್ ಅಸಮಾಧಾನ ಗೊಂಡರು. ಅವರಿಗೆ ರೇಸಿಂಗ್ ಕಲ್ಪನೆ ಇಷ್ಟವಾಗಿರಲಿಲ್ಲ. ಅವರು ಸುರಕ್ಷತೆಯ ಕಡೆ ಹೆಚ್ಚಿನ ಗಮನ ವಹಿಸಿದ್ದರು. ವಾಹನಗಳನ್ನು ನಿಧಾನವಾಗಿ, ಎಚ್ಚರಿಕೆಯಿಂದ ನಡೆಸಬೇಕು ಎಂಬುದು ಬೆನ್ಜ್ ನಿಲುವಾಗಿತ್ತು.
ಹಾಗಾಗಿ ಕಾರ್ಲ್ ಮತ್ತು ಉಳಿದ ಪಾಲುದಾರರ ನಡುವೆ ಬಿಕ್ಕಟ್ಟು ಆರಂಭವಾಯಿತು. ಕಂಪನಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟ ಕಾರ್ಲ್ ಬೆನ್ಜ್, ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ನಿರ್ದೇಶಕರಾಗಿ ಮಾತ್ರ ಉಳಿದುಕೊಂಡರು.
ಬದಲಾವಣೆ ಜಗದ ನಿಯಮ ಆಗಿರುವಾಗ ಕಾರ್ಲ್ ಬೆನ್ಜ್ ಅದಕ್ಕೆ ಹೊರತಾಗಿರಲು ಸಾಧ್ಯ ವಿರಲಿಲ್ಲ. ತಮ್ಮ ಕಾರುಗಳು ರೇಸ್ ಮಾಡುವುದಕ್ಕೆ ಅವರು ಒಪ್ಪಿಕೊಂಡರು. ಈ ನಿರ್ಣಯ ವೇ ಅವರ ಕಂಪನಿಯನ್ನು ಉಳಿಸಿತು ಎಂದರೂ ತಪ್ಪಾಗಲಿಕ್ಕಿಲ್ಲ.
1908ರ ಹೊತ್ತಿಗೆ ಬೆನ್ಜ್ 120 ಅಶ್ವಶಕ್ತಿಯ ರೇಸರ್ ಕಾರನ್ನು ತಯಾರಿಸಿದರು. ಅದಾಗಿ ಒಂದು ವರ್ಷದಲ್ಲಿಯೇ, 200 ಅಶ್ವ ಶಕ್ತಿಯ ಕಾರುಗಳು ಮಾರುಕಟ್ಟೆಗೆ ಬಂದವು. 1911ರಲ್ಲಿ, ಗಂಟೆಗೆ 140 ಮೈಲು (200 ಕಿಲೋಮೀಟರ್) ವೇಗದಲ್ಲಿ ಚಲಿಸುವ ಕಾರುಗಳನ್ನು ನಿರ್ಮಿಸಿದರು. ಆ ಕಾಲದಲ್ಲಿ ನಿರ್ಮಿಸಲಾದ ಈ ರೇಸ್ ಕಾರುಗಳು, ಆ ಸಮಯದಲ್ಲಿ ವಿಮಾನ, ರೈಲು ಅಥವಾ ಇನ್ಯಾವುದೇ ವಾಹನ ಚಲಿಸುವುದಕ್ಕಿಂತಲೂ ವೇಗವಾಗಿ ಚಲಿಸುತ್ತಿತ್ತು.
ಒಂದು ವರದಿಯ ಪ್ರಕಾರ, ಆ ಕಾಲದಲ್ಲಿ ವಿಮಾನವು ಗಂಟೆಗೆ ಎಪ್ಪತ್ತರಿಂದ ಎಂಬತ್ತು ಮೈಲು ವೇಗದಲ್ಲಿ ಚಲಿಸುತ್ತಿತ್ತು. ಇದರಿಂದಾಗಿ ಬೆನ್ಜ್ ಕೂಡ ಡೈಮ್ಲರ್ ಜತೆ ಸರಿ ಸಮಾನ ವಾದ ಪೈಪೋಟಿಗೆ ಇಳಿದಂತಾಗಿತ್ತು. ಎರಡೂ ಕಂಪನಿಗಳು ಯಶಸ್ಸಿನ ಉತ್ತುಂಗದಲ್ಲಿ ದ್ದವು. ಆದರೆ ಈ ಯಶಸ್ಸಿನ ದಾರಿಯಲ್ಲಿ ಇನ್ನೊಂದು ತಿರುವಿತ್ತು.
1914ರಲ್ಲಿ ಪ್ರಥಮ ವಿಶ್ವ ಯುದ್ಧ ಆರಂಭವಾಯಿತು. ಆ ಯುದ್ಧ ಎಲ್ಲರ ಜೀವನ ಮತ್ತು ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸಿಬಿಟ್ಟಿತ್ತು. ಅದಕ್ಕೆ ಜರ್ಮನಿಯೂ ಹೊರತಾಗಿರ ಲಿಲ್ಲ. 1918ರ ಕೊನೆಯಲ್ಲಿ ಯುದ್ಧ ಮುಗಿದು, ನಂತರ ಆರು ವರ್ಷಗಳಾದರೂ ದೇಶದ ಆರ್ಥಿಕತೆ ಮಾತ್ರ ಸುಧಾರಿಸಿರಲಿಲ್ಲ.
ಆದ್ದರಿಂದ 1924ರಲ್ಲಿ ಡೈಮ್ಲರ್ ಮತ್ತು ಬೆನ್ಜ್ ಕಂಪನಿಗಳು ಅಸ್ತಿತ್ವವನ್ನು ಉಳಿಸಿ ಕೊಳ್ಳುವುದಕ್ಕಾಗಿ ತಮ್ಮ ಪೈಪೋಟಿಯನ್ನು ಬದಿಗಿಟ್ಟು ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಕಂಪನಿಯ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ, ತಮ್ಮ ಉತ್ಪಾದನೆ, ಪ್ರಚಾರ ಇತ್ಯಾದಿಗಳನ್ನು ಜಂಟಿಯಾಗಿ ನಿರ್ವಹಿಸುವುದಕ್ಕಾಗಿ ಈ ಒಮ್ಮತಕ್ಕೆ ಬಂದಿದ್ದವು.
ಆದರೆ ವೈಯಕ್ತಿಕ ಹೆಸರುಗಳನ್ನು ಇಬ್ಬರೂ ಹಾಗೆಯೇ ಉಳಿಸಿಕೊಂಡಿದ್ದರು. ಒಪ್ಪಂದ ಎರಡು ವರ್ಷಗಳ ಕಾಲ ಮುಂದುವರಿಯಿತು. ಜರ್ಮನಿಯ ಆರ್ಥಿಕತೆ ಇನ್ನೂ ಹದಗೆಟ್ಟಿತು. ಆಗ ಎರಡು ಸಂಸ್ಥೆಗಳು ಸಂಪೂರ್ಣವಾಗಿ ವಿಲೀನಗೊಳ್ಳಲು ನಿರ್ಣಯಿಸಿ, ‘ಡೈಮ್ಲರ್-ಬೆಂಜ್’ ಎಂಬ ಹೊಸ ಉದ್ಯಮ ರಚನೆಯಾಯಿತು.
ಡೈಮ್ಲರ್ ಬೆನ್ಜ್ ಕಂಪನಿ ತಮ್ಮ ವಾಹನಗಳಿಗೆ ‘ಮರ್ಸಿಡಿಸ್ ಬೆಂಜ್’ ಎಂದು ಮರು ನಾಮಕರಣ ಮಾಡಿತು. 1920ರ ದಶಕದ ಅಂತ್ಯದಲ್ಲಿ ಮರ್ಸಿಡಿಸ್ ಬೆನ್ಜ್, 630, SSS ಮತ್ತು SK1 ನಂಥ ಹಲವಾರು ಪ್ರಭಾವಶಾಲಿ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿತು. ಈ ವಾಹನಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡಿದ ಎಂಜಿನಿಯರ್ ಗಳಲ್ಲಿ ‘ಪೊರ್ಷೆ’ ಕೂಡ ಒಬ್ಬರಾಗಿದ್ದರು.
ಮುಂದೊಂದು ದಿನ ಕಾರು ಉದ್ಯಮದಲ್ಲಿ ಅವರ ಹೆಸರೂ ಸಾಕಷ್ಟು ಪ್ರಸಿದ್ಧಿ ಪಡೆಯಿತು. ಕಾರು ಉದ್ಯಮದಲ್ಲಿ ಅವರ ಕೊಡುಗೆಯೂ ಮಹತ್ತರವಾಗಿದ್ದು, ಅವರ ಕುರಿತಾಗಿ ಮತ್ತೊಮ್ಮೆ ಬರೆಯುತ್ತೇನೆ. ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದ ಕಾರ್ಲ್ ಬೆನ್ಜ್, ಡೈಮ್ಲರ್ ಬೆನ್ಜ್ ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿಯೂ ಇದ್ದರು.
ಎಲ್ಲ ಏಳುಬೀಳುಗಳಿಗೆ ಅವರು ಸಾಕ್ಷಿಯಾಗಿದ್ದರು. 1929ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಕಾರ್ಲ್ ಬೆನ್ಜ್ ನಿಧನರಾದರು. ಅವರ ಮರಣದ ನಂತರವೂ ಕಂಪನಿ ಬೆಳೆಯುತ್ತಲೇ ಇತ್ತು. ವಿಶ್ವದ ಅತ್ಯುತ್ತಮ ಕಾರ್ಯಕ್ಷಮತೆಯ ಕಾರು ಉತ್ಪಾದಕರಲ್ಲಿ ಒಂದಾಯಿತು. 1933ರಲ್ಲಿ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಬಂದ ನಂತರ ಅದು ಇನ್ನಷ್ಟು ವೃದ್ಧಿ ಯಾಯಿತು.
‘ನನ್ನ ಸಮಕಾಲೀನರಿಗಿಂತ ನನ್ನ ರಾಜಕೀಯ ನಿಲುವು ಶ್ರೇಷ್ಠವಾದದ್ದು’ ಎನ್ನುವುದನ್ನು ಜಗತ್ತಿಗೆ ತಿಳಿಸುವ ಆಶಯದೊಂದಿಗೆ ಅಧಿಕಾರಕ್ಕೆ ಬಂದಿದ್ದ ಹಿಟ್ಲರ್, ಜರ್ಮನ್ ತಂತ್ರಜ್ಞಾನವನ್ನು ಜಗತ್ತಿಗೆ ಪ್ರದರ್ಶಿಸಲು ಬಯಸಿದ್ದರು. ಅಂತಾರಾಷ್ಟ್ರೀಯ ಮೋಟರ್ಸ್ ಸ್ಪೋರ್ಟ್ಸ್‌ಗಳಲ್ಲಿ ಜರ್ಮನ್ ಕಾರುಗಳನ್ನು ಪ್ರದರ್ಶಿಸುವುದು ಹಿಟ್ಲರ್ ಜಗತ್ತನ್ನು ಮೆಚ್ಚಿಸಲು ಆಯ್ದುಕೊಂಡ ಮಾರ್ಗಗಳಲ್ಲಿ ಒಂದಾಗಿತ್ತು. ಆ ಕಾರಣಕ್ಕಾಗಿ ಅವರು ಡೈಮ್ಲರ್ ಬೆನ್ಜ್ ಸಂಸ್ಥೆಗೆ ದೊಡ್ಡ ಪ್ರಮಾಣದ ತೆರಿಗೆ ವಿನಾಯಿತಿ ನೀಡಿದರು. ಅದರ ಪರಿಣಾಮವಾಗಿ 1934ರಿಂದ 1939ರವರೆಗೆ ಮರ್ಸಿಡಿಸ್ ಬೆನ್ಜ್ ಕಾರುಗಳು ಗ್ರ್ಯಾಂಡ್ ಫಿಕ್ಸ್ ರೇಸ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದವು.
ಮರ್ಸಿಡಿಸ್ ಬೆನ್ಜ್, ಹಿಟ್ಲರ್ನ ನೆಚ್ಚಿನ ಕಾರ್ ಆಗಿ ಮಾರ್ಪಟ್ಟಿತು. ಆದರೆ 1939ರಲ್ಲಿ ಎರಡನೇ ಮಹಾಯುದ್ಧ ಆರಂಭವಾದಾಗ ಸಂಸ್ಥೆ ಮತ್ತೊಮ್ಮೆ ಅಪಾಯಕ್ಕೆ ಸಿಲುಕಿತು.
ಯುದ್ಧಕಾಲದಲ್ಲಿ ಕಾರುಗಳಿಗೆ ಬೇಡಿಕೆ ಕಡಿಮೆಯಾದಾಗ ಸಂಸ್ಥೆಯು ನಾಜಿ ಮಿಲಿಟರಿಗಾಗಿ ವಾಹನಗಳು, ಜಲಂತರ್ಗಾಮಿಗಳು ಮತ್ತು ವಿಮಾನದ ಎಂಜಿನ್‌ಗಳನ್ನು ತಯಾರಿಸಲು ಆರಂಭಿಸಿತು. ಐದರಿಂದ ಆರು ಟನ್ ವಜ್ಜೆ ಹೊರುವ ಮಿಲಿಟರಿ ಟ್ರಕ್ ಅನ್ನು ತಯಾರಿ ಸಿತು.
1942ರ ಹೊತ್ತಿಗೆ ಸಂಸ್ಥೆ ಕಾರು ಉತ್ಪಾದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಏಕೆಂದರೆ ಅವರ ಎಲ್ಲಾ ಸಂಪನ್ಮೂಲಗಳು ಯುದ್ಧದ ವಾಹನ ಉತ್ಪಾದಿಸುವುದರ ಕಡೆಗೇ ತಿರುಗಿಸಲ್ಪಟ್ಟಿತ್ತು. ಆ ಕಾಲದಲ್ಲಿ ಅವರಿಗೆ ಕಾರ್ಮಿಕರ ತೊಂದರೆಗಳೂ ಆದವು. ಅದರಿಂದ ಮಹಿಳೆಯರು, ಕೈದಿಗಳನ್ನು ಕೂಡ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು (ಅದು ಇನ್ನೊಂದು ದೊಡ್ಡ ಕಥೆ).
1945ರಲ್ಲಿ ಯುದ್ಧ ಕೊನೆಗೊಂಡಾಗ, ಕಂಪನಿ ದೊಡ್ಡ ಪೆಟ್ಟನ್ನೇ ತಿಂದಿತ್ತು. ಪಾಟ್ಸ್‌ಡ್ಯಾಮ್ ಒಪ್ಪಂದದಿಂದಾಗಿ ವಿದೇಶದಲ್ಲಿರುವ ಎಲ್ಲ ಜರ್ಮನ್ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಅದನ್ನು ಪರಿಹಾರದ ಪಾವತಿಗೆ ಬಳಸಿಕೊಳ್ಳಲಾಯಿತು. ಇದರಿಂದಾಗಿ ಸಂಸ್ಥೆ ತನ್ನ ಎಲ್ಲಾ ವಿದೇಶಿ ಅಂಗಸಂಸ್ಥೆಗಳು ಮತ್ತು ಶಾಖೆಗಳನ್ನು ಕಳೆದು ಕೊಳ್ಳಬೇಕಾಯಿತು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಂಸ್ಥೆ ಹೊಸದಾಗಿ ಪುನರ್ ನಿರ್ಮಾಣಕ್ಕೆ ತೊಡಗಿಕೊಳ್ಳಬೇಕಾಯಿತು. ಪುನರ್ ನಿರ್ಮಾಣದ ನಂತರ ಸಂಸ್ಥೆ ಆಂಬುಲೆನ್ಸ್, ಪೊಲೀಸ್ ವಾಹನ ಮತ್ತು ವಿತರಣಾ ವ್ಯಾನ್‌ಗಳನ್ನು ಉತ್ಪಾದಿಸಲು ಆರಂಭಿಸಿತು. ಅದಾಗಿ ಎರಡು ವರ್ಷದ ನಂತರ ಸಂಸ್ಥೆ ಪ್ರಯಾಣಿಕರ ವಾಹನಗಳನ್ನು ಪುನಃ ಉತ್ಪಾದಿಸಲು ಆರಂಭಿಸಿತು.
1947ರ ಹೊತ್ತಿಗೆ ಸುಮಾರು ಹತ್ತು ಸಾವಿರ ಕಾರುಗಳು ಮಾತ್ರ ಉತ್ಪಾದಿಸಲ್ಪಟ್ಟವು. 1950ರ ದಶಕದಲ್ಲಿ ಮರ್ಸಿಡಿಸ್ ಬೆನ್ಜ್ ಕಾರುಗಳು ಸ್ಪೋರ್ಟ್ಸ್ ಇವೆಂಟ್‌ಗಳಲ್ಲಿ ಪುನರಾಗಮನ ಮಾಡುವುದರೊಂದಿಗೆ ವಿಶ್ವದಾದ್ಯಂತ ಯಶಸ್ವಿ ಮಾರಾಟವನ್ನು ಸಾಧಿಸಿದವು. ಈ ಮೂಲಕ ಸಂಸ್ಥೆ ತನ್ನ ಪ್ರಭಾವವನ್ನು ಮರಳಿ ಪಡೆಯಲು ಸಾಧ್ಯವಾಯಿತು.
ನಂತರದ ಬೆಳವಣಿಗೆ ಹೇಗಿತ್ತು ಎಂದರೆ, 1954ರ ಹೊತ್ತಿಗೆ ಕಂಪನಿ ಒಂದು ಶತಕೋಟಿ ಡಾಲರ್ʼಗಿಂತ ಹೆಚ್ಚು ವಹಿವಾಟು ನಡೆಸಿತು. ಅಲ್ಲಿಂದ ಮರ್ಸಿಡಿಸ್ ಬೆಂಜ್ ಹಿಂತಿರುಗಿ ನೋಡಿದ್ದೇ ಇಲ್ಲ ಎನ್ನಬಹುದು. ಈಗಲೂ ವಿಶ್ವದ ಅತ್ಯಂತ ಮೌಲ್ಯಯುತ ಕಾರುಗಳಲ್ಲಿ ಮರ್ಸಿಡಿಸ್ ಬೆನ್ಜ್ ಒಂದಾಗಿದೆ.
ಇದಕ್ಕೆಲ್ಲ ಪ್ರಮುಖ ಕಾರಣರಾದವರು, ಕಾರ್ಲ್ ಬೆನ್ಜ್, ಅವರ ಮಡದಿ ಬರ್ತಾ, ಪಾಲುದಾರ ಡೈಮ್ಲರ್, ಮೇಬ್ಯಾಕ್, ಎಂಜಿನಿಯರ್ ಪೋರ್ಷೆ. ಇವರೆಲ್ಲರ ಸಹಾಯದಿಂದ ಸಂಸ್ಥೆ ಬೆಳೆದದ್ದು ನಿಜವಾದರೂ, ಕಾರ್ಲ್ ಬೆನ್ಜ್ ಇಲ್ಲದಿದ್ದರೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ.
ತಮಗೆ ಎದುರಾದ ಸವಾಲುಗಳನ್ನು ಅವರು ಬಗೆಹರಿಸಿಕೊಂಡ ಪರಿ, ವಿಮರ್ಶಕರ ಟೀಕೆಗಳ ನಡುವೆಯೂ ತಮ್ಮ ಕನಸನ್ನು ನನಸಾಗಿಸಲು ಅವರು ತೋರಿದ ಧೈರ್ಯ ಮತ್ತು ದೃಢ ಸಂಕಲ್ಪಗಳು ಎಲ್ಲರಿಗೂ ಮಾದರಿ.