ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Surya Mukundaraj Column: ನೋಂದಾಯಿತವಲ್ಲದ ಸಂಘಕ್ಕೆ ವಿವಾದ ಹಲವಾರು...

ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರಕಾರಿ ಮತ್ತು ಅನುದಾನಿತ ಶಾಲೆ ಗಳು ಹಾಗೂ ಸರಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸಿನಲ್ಲಿ ಭಾರತದ ಏಕತೆಯ ವಿರುದ್ಧವಾಗಿ ಹಾಗೂ ಸಂವಿ ಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ.

ತಿರುಗೇಟು

ಸೂರ್ಯ ಮುಕುಂದರಾಜ್

ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಕುರಿತಾದ ಅನೇಕ ವಿವಾದಗಳು, ಚರ್ಚೆಗಳು ಇಲ್ಲದೆ ಸಂಪೂರ್ಣವಾಗುವುದಿಲ್ಲ. ಬ್ರಿಟಿಷರ ಆಡಳಿತದಿಂದ ಮುಕ್ತಗೊಂಡು ಸಂವಿಧಾನ ಹೊಂದಿದ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬದಲಾದ ನಂತರವೂ ಅನೇಕ ವೈಚಾರಿಕ ಭಿನ್ನಾಭಿಪ್ರಾಯದ ಚರ್ಚೆಗಳು ಆರೆಸ್ಸೆಸ್‌ನ ಸುತ್ತ ನಡೆದಿವೆ.

ಆರೆಸ್ಸೆಸ್ ಸ್ಥಾಪನೆಯಾಗಿ ನೂರು ವರ್ಷ ಪೂರೈಸಿದ ಸಂದರ್ಭದಲ್ಲೂ ಕರ್ನಾಟಕದ ಮತ್ತು ದೇಶದ ವಿವಿಧ ರಾಜ್ಯಗಳ ಬರಹಗಾರರು, ಚಿಂತಕರು, ರಾಜಕೀಯ ನೇತಾರರು ಆರೆಸ್ಸೆಸ್ ಕುರಿತಾದ ಹಿಂದಿನ ವಿಚಾರಗಳನ್ನು ಮೆಲುಕು ಹಾಕಿದ್ದಾರೆ. ಈಗ ಚರ್ಚೆಯ ಪರಿಧಿ ಮತ್ತಷ್ಟು ವಿಸ್ತರಣೆಗೊಳ್ಳಲು ಕಾರಣ ವಾಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರ. ಅವರು ಈ ಪತ್ರದಲ್ಲಿ “ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್‌ನ ಚಟುವಟಿಕೆಗಳನ್ನು ನಡೆಸುವುದಕ್ಕೆ ಅವಕಾಶ ನೀಡಬಾರದು.

ಜನಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸು ವುದಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ಅಧಿಕಾರವನ್ನು ನೀಡುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸರಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸಿನಲ್ಲಿ ಭಾರತದ ಏಕತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬಲಾಗು ತ್ತಿದೆ.

ಇದನ್ನೂ ಓದಿ: Raghava Sharma Nidle Column: ನ್ಯಾಯಮೂರ್ತಿಗಳ ಮೇಲಿನ ದಾಳಿ ಹೊಸತೇನಲ್ಲ. ಆದರೆ...

ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಅಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಧ ಮಕ್ಕಳು ಹಾಗೂ ಯುವ ಜನರ ಮನಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿ ಯಿಂದ ಸರಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಮೈದಾನ, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್‌ನ ಶಾಖೆ, ಸಾಂಕ್ ಅಥವಾ ಬೈಠಕ್ ಹೆಸರಿನಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು" ಎಂದು ಕೋರಿದ್ದಾರೆ.

ಈ ಪತ್ರದ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ರಾಜಕೀಯ ಮುಖವಾದ ಬಿಜೆಪಿಯ ನಾಯಕರು ಸಾರ್ವಜನಿಕರಲ್ಲಿ ವಿಚಾರ ಮಂಡಿಸುತ್ತ, ‘ಖರ್ಗೆಯವರು ಆರೆಸ್ಸೆಸ್‌ನ ನಿಷೇಧಕ್ಕೆ ಪತ್ರ ಬರೆದಿದ್ದಾರೆ, ತಾಕತ್ತಿದ್ದರೆ ಸಂಘವನ್ನು ಬಂದ್ ಮಾಡಲಿ’ ಎಂದು ಎಂದಿನಂತೆ ಬೆಂಕಿಯುಗುಳಿದ್ದಾರೆ, ವಿಚಾರ ವನ್ನು ತಿರುಚಿ ಹೇಳುವ ಕಾರ್ಯವನ್ನು ಆರಂಭಿಸಿದ್ದಾರೆ.

ಇಲ್ಲಿ ಮೊದಲು ನಾವು ಕಂಡುಕೊಳ್ಳಬೇಕಾದ ಸಂಗತಿಯೆಂದರೆ, ಖರ್ಗೆ ಅವರ ಪತ್ರವನ್ನು ಆಧರಿಸಿ ಸರಕಾರಿ ಶಾಲೆ, ಮೈದಾನ ಮತ್ತು ಪುರಾತತ್ವ ಇಲಾಖೆಯ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸಬಹುದೇ? ಹಾಗೆ ನಿಷೇಧಿಸಲು ಕಾನೂನಿನ ಮಾನ್ಯತೆಯಿದೆಯೇ? ಈ ನಿಷೇಧ ಕೇವಲ ಸರಕಾರಿ ಸ್ಥಳಗಳಿಗೆ ಸೀಮಿತವೆ? ಎಂಬುದು. ಖರ್ಗೆಯವರ ಪತ್ರವನ್ನು ಗಮನಿಸಿದಾಗ, ಅವರು ನಿಷೇಧಕ್ಕೆ ಕೋರಿರುವುದು ಸಂಪೂರ್ಣ ಚಟುವಟಿಕೆಗಲ್ಲ, ಸೀಮಿತ ವಿಚಾರಗಳಿಗೆ ಮಾತ್ರ ಎಂಬುದು ಸ್ಪಷ್ಟವಾಗುತ್ತದೆ.

ಇತಿಹಾಸವನ್ನು ಮೆಲುಕು ಹಾಕಿದಾಗ, ಮಿಲಿಟರಿ ಮಾದರಿ ಚಟುವಟಿಕೆ ನಡೆಸಿದ ಕಾರಣಕ್ಕೆ ಆರೆಸ್ಸೆಸ್ ಅನ್ನು ಬ್ರಿಟಿಷ್ ಸರಕಾರ ನಿಷೇಧಿಸಿತ್ತು. ಇನ್ನು, ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಸರ್ದಾರ್ ವಲ್ಲಭಭಾಯ್ ಪಟೇಲರು ನಿಷೇಧಿಸಿದ್ದರು. 1966ರಲ್ಲಿ, ಸಂಘದ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳದಂತೆ ತನ್ನ ನೌಕರರಿಗೆ ಕೇಂದ್ರ ಸರಕಾರ ಸೂಚನೆ ನೀಡಿತ್ತು. ಹಿಂದಿನ ಸರಕಾರ ಗಳು ನಿಷೇಧ ಹೇರಿದ ನಂತರ ಒಂದಿಲ್ಲೊಂದು ನೆಪದಲ್ಲಿ ಸರಕಾರಗಳಿಗೆ ಮನವಿ ಮಾಡುತ್ತಾ ಆರೆಸ್ಸೆಸ್ ತನ್ನ ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದೆ.

ಆದರೆ, ಬಹುಮುಖ್ಯವಾದ ಸಂಗತಿಯೆಂದರೆ ನೂರು ವರ್ಷದ ಇತಿಹಾಸವಿರುವ ಸಂಘದ ಅಧಿಕೃತ ನೋಂದಣಿಯೇ ಆಗಿಲ್ಲ. ನೋಂದಾಯಿತವಲ್ಲದ ಇಂಥ ಸಂಘದ ಚಟುವಟಿಕೆಗಳು ಸರಕಾರಿ ಸ್ಥಳ ಗಳಲ್ಲಿ ನಡೆಯುತ್ತಿರುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಸ್ವತಃ ಸಂಘದ ಮಾಜಿ ಪ್ರಚಾರಕರು ಗಳೇ ದೇಶದ ವಿವಿಧ ರಾಜ್ಯ ಸರಕಾರಗಳಿಗೆ ಅಧಿಕೃತವಾಗಿ ಪತ್ರ ಬರೆದು ಕೇಳಿದ್ದಿದೆ.

ರಾಜ್ಯದ ಯಾವುದೇ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿತವಲ್ಲದ ಸಂಘಟನೆಯು ಹೇಗೆ ಸರಕಾರಿ ಜಾಗಗಳಲ್ಲಿ ತನ್ನ ಚಟುವಟಿಕೆ ನಡೆಸಲು ಅಧಿಕೃತವಾಗಿ ಅನುಮತಿ ಪಡೆಯುತ್ತಿದೆ? ಅದರ ಕಾರ್ಯ ಚಟುವಟಿಕೆಗಳಿಗೆ ಆದಾಯದ ಮೂಲ ಯಾವುದು? ಎಂಬ ಉಪಪ್ರಶ್ನೆಗಳು ಕೂಡ ಸಾರ್ವಜನಿಕರಲ್ಲಿವೆ.

ಈಗ ಪ್ರಿಯಾಂಕ್ ಖರ್ಗೆಯವರ ಪತ್ರದ ಕಾನೂನಾತ್ಮಕ ಅಂಶಗಳಿಗೆ ಮರಳೋಣ. ಸಂಘದ ಚಟುವಟಿಕೆಗಳನ್ನು ಸರಕಾರಿ ಶಾಲೆ, ಮೈದಾನ, ಪುರಾತತ್ವ ಇಲಾಖೆಯ ಸ್ಥಳಗಳಲ್ಲಿ ನಿಷೇಧಿಸಲು ಸಾಧ್ಯವೇ ಎಂಬುದನ್ನು ಕಾನೂನಾತ್ಮಕವಾಗಿ ನೋಡುವುದಾದರೆ ಸಂಘದ ಚಟುವಟಿಕೆಗಳು ಆರಂಭದಿಂದಲೂ ಏಕಧರ್ಮ ಸ್ಥಾಪನೆ, ಪರಧರ್ಮ ಅಸಹಿಷ್ಣುತೆ ಮತ್ತು ಯುವಕರು- ಮಕ್ಕಳಿಗೆ ಶಸ್ತ್ರಾಭ್ಯಾಸ ಮಾಡಿಸುವುದು, ಒಂದು ರಾಜಕೀಯ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡಿಸುವುದು ಇವೆಲ್ಲವೂ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು.

ನಮ್ಮ ಸಂವಿಧಾನದ ಆರ್ಟಿಕಲ್ 14 ಎಲ್ಲರಿಗೂ ಕಾನೂನಿನ ಮುಂದೆ ಸಮಾನತೆಯನ್ನೂ, ಆರ್ಟಿಕಲ್ 15 ಜಾತಿ, ಧರ್ಮ, ಲಿಂಗ, ವರ್ಣ, ಹುಟ್ಟಿದ ಸ್ಥಳಗಳ ಆಧಾರಿತ ತಾರತಮ್ಯ ಮಾಡದಿರು ವುದನ್ನೂ, ಆರ್ಟಿಕಲ್ 25 ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೂ ಪ್ರತಿಪಾದಿಸುತ್ತವೆ; ಇವುಗಳ ವಿರುದ್ಧದ ಧೋರಣೆಯ ವಿಚಾರಗಳನ್ನು ಮಕ್ಕಳಿಗೆ ಸಂಘದ ಶಾಖೆಗಳಲ್ಲಿ ತುಂಬಲಾಗುತ್ತಿರುವು ದಂತೂ ಮೇಲ್ನೋಟಕ್ಕೆ ಗೋಚರಿಸುತ್ತದೆ.

ನಿಷೇಧವನ್ನು ಕೇವಲ ಇಷ್ಟಕ್ಕೇ ಸೀಮಿತಗೊಳಿಸಿರುವ ಕಾರಣ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಅನ್ವಯ ಕಾರ್ಯಗತಗೊಳಿಸಲು ಸರಕಾರಕ್ಕೆ ಅಧಿಕಾರವಿದೆ. ಖರ್ಗೆಯವರು ತಮ್ಮ ಪತ್ರ ದಲ್ಲಿ ಎಲ್ಲೂ ಸಂಘದ ಸಂಪೂರ್ಣ ಚಟುವಟಿಕೆಗಳನ್ನು ನಿಷೇಧಿಸಲು ಕೋರಿಲ್ಲದ ಕಾರಣ ಕಾನೂನಾತ್ಮಕವಾಗಿ ಸಂಘಟನೆಗಳ ನಿಷೇಧಕ್ಕೆ ಇರುವ ‘ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ-(ತಿದ್ದುಪಡಿ 2019)’ (ಯುಎಪಿಎ ಕಾಯ್ದೆ) ಪ್ರಕಾರ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುವ ಅಗತ್ಯವಿಲ್ಲ.

ಹಾಗೆ ನೋಡಿದರೆ, ಖರ್ಗೆಯವರ ಪತ್ರದ ಸಾರಾಂಶ ಮತ್ತು ಸಂಘಶಿಕ್ಷಣ ಪಡೆದು ಬಿಜೆಪಿ ಸೇರಿ ಹೇಳಿಕೆ ನೀಡುವ ಸಿ.ಟಿ. ರವಿ, ಪ್ರತಾಪ್ ಸಿಂಹ, ಯತ್ನಾಳ್, ಪ್ರಲ್ಹಾದ ಜೋಷಿ ಅವರ ಹೇಳಿಕೆಗಳು ನೇರವಾಗಿ ಅನ್ವಯವಾಗುವುದು ಯುಎಪಿಎ ಕಾಯ್ದೆಯ ಸೆಕ್ಷನ್ ೨(ಪಿ). ಈ ಸೆಕ್ಷನ್ ಪ್ರಕಾರ ಯಾವುದೇ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳಿಗೆ ನೆರವು/ಪ್ರೋತ್ಸಾಹ ನೀಡುವುದು ಅಥವಾ ಭಾಗವಹಿಸುವುದು ಮತ್ತು ಹಿಂದಿನ ಭಾರತ ದಂಡ ಸಂಹಿತೆಯ ಕಲಂ 153 ಎ, ವಿವಿಧ ಗುಂಪುಗಳ (ಧರ್ಮ, ಜನಾಂಗ, ಭಾಷೆ ಇತ್ಯಾದಿ) ನಡುವೆ ದ್ವೇಷ, ಕೆಟ್ಟ ಮನೋಭಾವವನ್ನು ಉತ್ತೇಜಿಸುವುದು, ಈ ಕೃತ್ಯ ಗಳನ್ನು ಧಾರ್ಮಿಕ ಸ್ಥಳಗಳಲ್ಲಿ ಮಾಡುವುದು ಶಿಕ್ಷಾರ್ಹ ಅಪರಾಧ.

ಸೆಕ್ಷನ್ 153 ಬಿ-ವಿವಿಧ ಧಾರ್ಮಿಕ, ಜನಾಂಗೀಯ ಅಥವಾ ಭಾಷಾ ಗುಂಪುಗಳ ನಡುವೆ ದ್ವೇಷ ಅಥವಾ ಅಸಂಗತತೆಯನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡುವ ಅಥವಾ ಪ್ರಕಟಿಸುವವರಿಗೆ ಶಿಕ್ಷೆ ವಿಧಿಸುತ್ತದೆ. ಬಹುತೇಕ ಸಂಘ ಪರಿವಾರದವರ ಭಾಷೆ ಈ ಕಾನೂನಿನ ಪ್ರಕಾರ ಅಪರಾಧ. ಇಂಥ ಶಿಕ್ಷಣ ಪಡೆಯುವ ಮಕ್ಕಳ ಪರಿಸ್ಥಿತಿ ಭವಿಷ್ಯದಲ್ಲಿ ಏನಾಗ ಬಹುದು? ಬೆಳೆಯುವ ಮಕ್ಕಳ ಮನಸ್ಸಿನಲ್ಲಿ ಈ ವಿಷಚಿಂತನೆಯನ್ನು ಬಿತ್ತುವುದನ್ನು ತಡೆಯುವ ಸಲುವಾಗಿ ಖರ್ಗೆಯವರು ಇಟ್ಟ ಹೆಜ್ಜೆ ಸರಿಯಾಗಿದೆ.

ಸಂಘದಲ್ಲಿದ್ದು ಬಿಜೆಪಿ ಸೇರಿ ಮಂತ್ರಿ, ಶಾಸಕರುಗಳಾದವರು, ಬೆಂಕಿಯುಗುಳುವ ಮಾತುಗಳ ನ್ನಾಡುವವರು ಯಾರೂ ತಮ್ಮ ಮಕ್ಕಳಿಗೆ ಸಂಘದ ಶಾಖೆ ಹತ್ತಿಸುವುದಿಲ್ಲ. ಬಡವರ-ಶ್ರಮಿಕರ- ದಲಿತರ ಮಕ್ಕಳಿಗೆ ಬಾಲ್ಯದಲ್ಲಿಯೇ ಧರ್ಮದ ಅಫೀಮು ತುಂಬುವ ಕಾರ್ಯವನ್ನು ತಡೆಗಟ್ಟುವ ಸಲುವಾಗಿ ಸರಕಾರಿ ಜಾಗಗಳಲ್ಲಿ ನೋಂದಾಯಿತವಲ್ಲದೆ ಗುರುತೇ ಇಲ್ಲದ ಸಂಘದ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಸರಕಾರ ನಿಷೇಧಿಸಬೇಕಿದೆ.

ಹಾಗೆ ನೋಡುವುದಾದರೆ, ಗಾಂಧೀಜಿ ಅವರಿಗಿಂತ ದೊಡ್ಡ ಹಿಂದೂ ಮತ್ತೊಬ್ಬ ಸಿಗುವುದಿಲ್ಲ. ಆದರೆ, ಅವರು ಪ್ರತಿಪಾದಿಸಿದ್ದು ಪ್ರಕೃತಿಗೆ ಹತ್ತಿರವಾದ, ಎಲ್ಲರನ್ನೂ ಪ್ರೀತಿಸುವ, ಗೌರವಿಸುವ, ಸಮಾನತೆ-ಸಾಮರಸ್ಯ ನೀಡುವ ಹಿಂದುತ್ವವನ್ನು; ಸಂಘಪರಿವಾರದ ದ್ವೇಷದ ಹಿಂದುತ್ವವನ್ನಲ್ಲ.

ಖರ್ಗೆಯವರ ಪತ್ರಕ್ಕೆ ಬಿಜೆಪಿ ನಾಯಕರು ನೀಡುತ್ತಿರುವ ದ್ವೇಷದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಅವರ ಮಿದುಳಿನಲ್ಲಿ ಎಳವೆಯಿಂದ ತುಂಬಲಾದ ದ್ವೇಷದ ವಿಷ ಎಷ್ಟಿರಬಹುದು ಎಂಬುದು ಅರಿವಾಗುತ್ತದೆ. ಇಷ್ಟು ದಿನ ಸರಕಾರ ಏಕೆ ಸುಮ್ಮನಿತ್ತು? ಕಾಂಗ್ರೆಸ್ಸಿನ ಅನೇಕರಿಗೆ ಈ ವಿಚಾರದಲ್ಲೇಕೆ ಸಹಮತವಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ಸಹಜವಾಗಿ ಆರೆಸ್ಸೆಸ್ ಬದಲು ಬಿಜೆಪಿ ಕೇಳುತ್ತಿರ ಬಹುದು.

ಸಂಘ ಪರಿವಾರದ ಈ ವಿಭಜನಕಾರಿ ನೀತಿಯ ಬಗ್ಗೆ ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್‌ನ ನಾಯಕರಿಗೆ ಸ್ಪಷ್ಟ ನಿಲುವಿದೆ. ಇದು ಸಂಘಟನೆಯ ಸಂಪೂರ್ಣ ನಿಷೇಧವಲ್ಲ, ಸರಕಾರಿ ಸ್ಥಳಗಳಿಗೆ ಸೀಮಿತವಾದ ನಿಷೇಧಕ್ಕೆ ಮಾಡಿದ ಮನವಿಯಾಗಿದೆ. ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಮತೀಯವಾದ ಚಟುವಟಿಕೆಗಳಲ್ಲಿ ತೊಡಗುವ ಸಂಘಟನೆಗಳ ನಿಷೇಧದ ಕುರಿತು ಉಲ್ಲೇಖಿಸ ಲಾಗಿದೆ.

ಒಟ್ಟಿನಲ್ಲಿ ರಾಜ್ಯದ ಸಾಮರಸ್ಯ, ರಾಜಧರ್ಮದ ಪರಿಪಾಲನೆ ಹಾಗೂ ಸಂವಿಧಾನದ ಆಶಯಗಳಿಗೆ ಪೂರಕವಾದ ಮನವಿಯನ್ನು ಖರ್ಗೆಯವರು ಮಾಡಿದ್ದಾರೆ, ಸರಕಾರ ಇದಕ್ಕೆ ಸೂಕ್ತವಾಗಿ ಸ್ಪಂದಿಸು ತ್ತದೆ ಎಂಬುದು ಸಾಮರಸ್ಯ ಬಯಸುವವರ ಬಯಕೆಯಾಗಿದೆ.

(ಲೇಖಕರು ಕೆಪಿಸಿಸಿ ವಕ್ತಾರರು, ಕಾನೂನು ಘಟಕದ ಕಾರ್ಯಾಧ್ಯಕ್ಷರು)