ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghava Sharma Nidle Column: ನ್ಯಾಯಮೂರ್ತಿಗಳ ಮೇಲಿನ ದಾಳಿ ಹೊಸತೇನಲ್ಲ. ಆದರೆ...

2009ರಲ್ಲಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ಮೇಲೆ ಮುಂಬೈ ಮೂಲದ ಪವಿತ್ರಾ ಮುರಳಿ ಎಂಬ ಮಹಿಳೆಯೊಬ್ಬರು ಚಪ್ಪಲಿ ಎಸೆದರು. ಆದರೆ ಗುರಿ ತಪ್ಪಿತ್ತು. ಮುಂಬೈನ ಬಾಸ್ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮಾಡು ತ್ತಿದ್ದಾಗ ಈ ದಾಳಿ ಮಾಡಲಾಯ್ತು.

ನ್ಯಾಯಮೂರ್ತಿಗಳ ಮೇಲಿನ ದಾಳಿ ಹೊಸತೇನಲ್ಲ. ಆದರೆ...

-

Ashok Nayak Ashok Nayak Oct 15, 2025 8:15 AM

ಜನಪಥ

ದಾಳಿಗಳ ಮೂಲಕ ನ್ಯಾಯಾಧೀಶರನ್ನು ಒತ್ತಡಕ್ಕೆ ಸಿಲುಕಿಸಲು ಅಥವಾ ಅವರನ್ನು ಶಿಕ್ಷಿಸಲು ಪ್ರಯತ್ನಿಸುವುದು ಕಾನೂನು ಹೋರಾಟದ ಬದಲಿಗೆ ಗುಂಪು ಘರ್ಷಣೆ ಮತ್ತು ಗೂಂಡಾಗಿರಿ ಗಳನ್ನು ಉತ್ತೇಜಿಸುವ ಅಪಾಯವಿರುತ್ತದೆ. ಹೀಗಾಗಿ, ರಾಕೇಶ್ ಕಿಶೋರ್ ಕಾನೂನಿನ ವಿಚಾರಣೆ ಗೊಳಪಡಬೇಕಿತ್ತು. ಆದರೆ, ಭಿನ್ನವಾಗಿ ಯೋಚಿಸಿದ ಸಿಜೆಐ ಗವಾಯಿ, “ಇದು ನನ್ನ ಮೇಲೆ ಪರಿಣಾಮ ಬೀರಿಲ್ಲ, ದಾಳಿಕೋರನನ್ನು ಕ್ಷಮಿಸಿದ್ದೇನೆ" ಎಂದರು !

1968 ರ ಮಾರ್ಚ್ 13. ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಹಮ್ಮದ್ ಹಿದಾಯತು ಹಾಗೂ ಸಹ ನ್ಯಾಯಮೂರ್ತಿಗಳಾದ ನ್ಯಾ.ಎ.ಎನ್.ಗ್ರೋವರ್ ಮತ್ತು ನ್ಯಾ. ವೈದ್ಯ ಲಿಂಗಮ್‌ರನ್ನು ಒಳಗೊಂಡ ನ್ಯಾಯಪೀಠವು ಪ್ರಕರಣವೊಂದರ ವಿಚಾರಣೆ ನಡೆಸುತ್ತಿತ್ತು. ಅಪರಿಚಿತ ವ್ಯಕ್ತಿಯೊಬ್ಬ ನ್ಯಾಯಾಲಯದ ಅಧಿಕಾರಿಯನ್ನು ಪಕ್ಕಕ್ಕೆ ತಳ್ಳಿ, ನ್ಯಾಯಪೀಠದ ಮೇಲೆ ಏರಿದ್ದ.

ತನ್ನಲ್ಲಿದ್ದ ಚೂರಿ ತೆಗೆದಾಗ ಇಂಕ್‌ಸ್ಟ್ಯಾಂಡ್ ಅನ್ನು ರಕ್ಷಣೆಗೆ ಬಳಸಿಕೊಳ್ಳಲು ನ್ಯಾ.ಹಿದಾಯತು ಮುಂದಾದರೂ, ನ್ಯಾ.ಎ.ಎನ್. ಗ್ರೋವರ್ ಮೇಲೆ ದಾಳಿ ಮಾಡಿ 2 ಬಾರಿ ಇರಿಯುವಲ್ಲಿ ಆತ ಯಶಸ್ವಿ ಯಾಗಿದ್ದ. ಮೂವರು ನ್ಯಾಯಮೂರ್ತಿಗಳೂ ನೆಲಕ್ಕೆ ಬಿದ್ದಿದ್ದರು. ನ್ಯಾ.ಗ್ರೋವರ್‌ರನ್ನು ದೆಹಲಿಯ ವಿಲ್ಲಿಂಗ್ಡನ್ (ಈಗಿನ ರಾಮ್ ಮನೋಹರ್ ಲೋಹಿಯಾ ಹಾಸ್ಪಿಟಲ್) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ‌

ದಾಳಿಕೋರನ ಹೆಸರು ಮನಮೋಹನ್ ದಾಸ್, ಆತ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯವನಾಗಿದ್ದ. ‘ಅರೆಹುಚ್ಚನಿಂದ ನ್ಯಾಯಮೂರ್ತಿ ಮೇಲೆ ಹಲ್ಲೆ’ ಎಂದು ಪತ್ರಿಕೆಯೊಂದು ಅಂದು ಸಂಪಾದಕೀಯ ಬರೆದಿತ್ತು.

ಇದನ್ನೂ ಓದಿ: Raghava Sharma Nidle Column: ನ್ಯಾಯಾಂಗವನ್ನೇ ಹೊಣೆಯಾಗಿಸುವುದು ಪಲಾಯನವಾದವಲ್ಲವೇ ?

****

1975ರ ಮಾರ್ಚ್ ೨೦. ಸಿಜೆಐ ಅಜಿತ್‌ನಾಥ್ ರೇ ಸಂಜೆ 4.15ರ ಸುಮಾರಿಗೆ ಸುಪ್ರೀಂಕೋರ್ಟ್ ಬಳಿಯ ತಿಲಕ್ ಮಾರ್ಗ್ ಮತ್ತು ಭಗವಾನ್ ದಾಸ್ ರೋಡ್ ನಡುವೆ ತಮ್ಮ ಕಾರಿನಲ್ಲಿದ್ದರು. ಸುದೇಶ್ ಆನಂದ್ ಮತ್ತು ಸಂತೋಷ್ ಅವಧೂತ್ ಆನಂದ್ ಎಂಬ ದುಷ್ಕರ್ಮಿಗಳಿಬ್ಬರು ಕಾರಿ ನೊಳಗೆ ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದರು. ಅದೃಷ್ಟವಶಾತ್ ಅವು ಸ್ಫೋಟಗೊಳ್ಳಲಿಲ್ಲ ಮತ್ತು ನ್ಯಾ. ರೇ ಹತ್ಯೆಯಿಂದ ಪಾರಾಗಿದ್ದರು. ಇಬ್ಬರು ಅಪರಾಧಿಗಳೂ 14 ವರ್ಷಗಳ ಜೈಲುಶಿಕ್ಷೆ ಅನುಭವಿಸಿದರು.

‘ನ್ಯಾ.ಎ.ಎನ್.ರೇ ಅವರು ಇಂದಿರಾ ಗಾಂಧಿಯವರ ಸರಕಾರದ ಸಹಾಯಕರಂತೆ ಕೆಲಸ ಮಾಡುತ್ತಿದ್ದಾರೆ ಮತ್ತು ಕೇಂದ್ರ ಸರಕಾರ ಕೂಡ ೨-೩ ಹಿರಿಯ ನ್ಯಾಯಮೂರ್ತಿಗಳನ್ನು ಕಡೆಗಣಿಸಿ ರೇ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದೆ’ ಎಂದು ಓರ್ವ ಅಪರಾಧಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಸಿಜೆಐ ಹುದ್ದೆ ತಪ್ಪಿದ ಹಿರಿಯ ನ್ಯಾಯಮೂರ್ತಿಗಳಲ್ಲಿ 1968ರಲ್ಲಿ ದಾಳಿಗೊಳಗಾಗಿದ್ದ ನ್ಯಾ.ಎ.ಎನ್. ಗ್ರೋವರ್ ಕೂಡ ಇದ್ದರು!

“ಬಾಬಾ ಆನಂದ ಮೂರ್ತಿ ಎಂಬುವವರ ಜಾಮೀನು ಅರ್ಜಿ ತಿರಸ್ಕರಿಸಿದ್ದು ಕೂಡ ನಮ್ಮ ಈ ಕೃತ್ಯಕ್ಕೆ ಕಾರಣ" ಎಂದೂ ಅಪರಾಧಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದರು.

6 R

****

2009ರಲ್ಲಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ಮೇಲೆ ಮುಂಬೈ ಮೂಲದ ಪವಿತ್ರಾ ಮುರಳಿ ಎಂಬ ಮಹಿಳೆಯೊಬ್ಬರು ಚಪ್ಪಲಿ ಎಸೆದರು. ಆದರೆ ಗುರಿ ತಪ್ಪಿತ್ತು. ಮುಂಬೈನ ಬಾಸ್ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮಾಡುತ್ತಿದ್ದಾಗ ಈ ದಾಳಿ ಮಾಡಲಾಯ್ತು.

ಪ್ರಕರಣದ ವಿಚಾರಣೆ ಮಾಡಿದ್ದ ನ್ಯಾ.ಪಸಾಯತ್ ಮತ್ತು ನ್ಯಾ.ಎ.ಕೆ.ಗಂಗೂಲಿಯವರಿದ್ದ ನ್ಯಾಯ ಪೀಠ, ನ್ಯಾಯಾಲಯಕ್ಕೆ ಅಗೌರವ ತೋರಿದ್ದಕ್ಕಾಗಿ ಪವಿತ್ರಾ, ಲೀಲಾ ಡೇವಿಡ್ ಮತ್ತು ಆನೆಟ್ ಕೊಟ್ಯಾನ್ ಎಂಬ ಮೂವರು ಮಹಿಳೆಯರಿಗೆ 2012ರಲ್ಲಿ ೩ ತಿಂಗಳ ಜೈಲು ಹಾಗೂ ೧ ಲಕ್ಷ ರುಪಾಯಿ ದಂಡ ವಿಧಿಸಿತು.

ಬಾಸ್ ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥೆಯನ್ನು ಮುಚ್ಚಿಸಿದ್ದಕ್ಕಾಗಿ ಮಹಾರಾಷ್ಟ್ರ ಸರಕಾರ ಹಾಗೂ ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ (ಹಲವು ಎಚ್ಚರಿಕೆಗಳ ಹೊರತಾಗಿಯೂ) ಮಹಿಳೆ ಯರು ಆಕ್ಷೇಪಾರ್ಹ ಮಾತುಗಳಾಡಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಕೇಸು ಎದುರಿಸಿದ್ದರು.

****

ಮೇಲೆ ಹೇಳಲಾದ ಮೂರು ಘಟನೆಗಳಂತೆ, ಅಕ್ಟೋಬರ್ 1ರಂದು, ಹಾಲಿ ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬ ಕುತ್ಸಿತ ಮನಸ್ಸಿನ ವಕೀಲರು ಶೂ ಎಸೆಯಲು ಮುಂದಾ ದರು. ‘ಸನಾತನ್ ಧರ್ಮ್ ಕಾ ಅಪಮಾನ್ ನಹಿ ಸಹೇಗಾ ಹಿಂದೂಸ್ತಾನ್’ ಎಂದ ರಾಕೇಶ್ ಕಿಶೋರ್ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡರು.

ವಕೀಲರಾಗಿದ್ದುಕೊಂಡು, ನ್ಯಾಯಾಂಗದ ಘನತೆ ಎತ್ತಿಹಿಡಿಯಬೇಕಾದ ವ್ಯಕ್ತಿಯೇ ಈ ಕೃತ್ಯ ಎಸಗಿದ್ದು, ಅತ್ಯಂತ ಕೆಟ್ಟ ಸಾರ್ವಜನಿಕ ಸಂದೇಶವನ್ನು ರವಾನೆ ಮಾಡಿತು. ಇಂಥ ದಾಳಿಗಳ ಮೂಲಕ ನ್ಯಾಯಾಧೀಶರನ್ನು ಒತ್ತಡಕ್ಕೆ ಸಿಲುಕಿಸಲು ಅಥವಾ ಅವರನ್ನು ಶಿಕ್ಷಿಸಲು ಪ್ರಯತ್ನಿಸು ವುದು ಕಾನೂನು ಹೋರಾಟದ ಬದಲಿಗೆ ಗುಂಪು ಘರ್ಷಣೆ ಮತ್ತು ಗೂಂಡಾಗಿರಿಗಳನ್ನು ಉತ್ತೇಜಿ ಸುವ ಅಪಾಯವಿರುತ್ತದೆ.

ಹೀಗಾಗಿ, ರಾಕೇಶ್ ಕಿಶೋರ್ ಕಾನೂನಿನ ವಿಚಾರಣೆಗೊಳಪಡಬೇಕಿತ್ತು. ಆದರೆ, ಭಿನ್ನವಾಗಿ ಯೋಚಿಸಿದ ಸಿಜೆಐ ಗವಾಯಿ, “ಇದು ನನ್ನ ಮೇಲೆ ಪರಿಣಾಮ ಬೀರಿಲ್ಲ ಮತ್ತು ದಾಳಿಕೋರನನ್ನು ಕ್ಷಮಿಸಿದ್ದೇನೆ" ಎಂದದ್ದಲ್ಲದೆ, “ಘಟನೆ ಮುಗಿದ ಅಧ್ಯಾಯ" ಎಂದರು!

ಮುಖ್ಯ ನ್ಯಾಯಮೂರ್ತಿ ಎಂಬ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಯಾವ ಕೋಮು ಅಥವಾ ಜಾತಿಯವರು ಎನ್ನುವುದು ಮುಖ್ಯವಲ್ಲ. ಅವರು ನೀಡುವ ತೀರ್ಪುಗಳು, ಕಾನೂನಿನ ವಿಶ್ಲೇಷಣೆ ಹಾಗೂ ಜನಸಾಮಾನ್ಯರ ನೋವಿಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದಷ್ಟೇ ಮುಖ್ಯ. ಆದರೆ, ಜಾತಿಯ ಚರ್ಚೆ ಬದಿಗೊತ್ತಲು ಸಾಧ್ಯವೇ ಇಲ್ಲದ ಸಾಮಾಜಿಕ ಸನ್ನಿವೇಶವು ದೇಶದಲ್ಲಿರುವಾಗ ಸಹಜವಾಗಿಯೇ, ಸಿಜೆಐ ಗವಾಯಿ ಅವರು ದಲಿತ ಸಮುದಾಯದಿಂದ ಬಂದವರು ಎಂಬುದು ಚರ್ಚೆಗೆ ಬಂದು, ಶೂ ಎಸೆದ ಘಟನೆ “ಇದು ಜಾತಿ ಮೇಲಿನ ವ್ಯವಸ್ಥಿತ ದಾಳಿ" ಎಂಬ ಆಯಾಮ ವನ್ನೂ ಪಡೆದುಕೊಂಡಿತು. ಇದು ಸನಾತನವಾದಿ ಆರೆಸ್ಸೆಸ್‌ನ ಮನ ಸ್ಥಿತಿ ಎಂದೆ ಹೀಗಳೆಯ ಲಾಯಿತು!

ಏತನ್ಮಧ್ಯೆ, “ನಾನೂ ದಲಿತ" ಎಂದು ರಾಕೇಶ್ ಕಿಶೋರ್ ಮಾಧ್ಯಮಗಳ ಮುಂದೆ ಹೇಳಿಕೊಂಡರು. ಆ ಘಟನೆಗೆ ಕೆಲ ದಿನಗಳಿಗೆ ಮುನ್ನ, “ಮಧ್ಯಪ್ರದೇಶದ ಖಜುರಾಹೋದ ಜವಾರಿ ದೇವಾಲಯದಲ್ಲಿ ೭ ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಮರುಸ್ಥಾಪನೆಗೊಳಿಸಬೇಕು. ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ, ಭಕ್ತರ ಪೂಜೆಯ ಹಕ್ಕಿನ ರಕ್ಷಣೆ ಮಾಡಬೇಕು" ಎಂದು ರಾಕೇಶ್ ದಲಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ್ದ ಸಿಜೆಐ ಬಿ.ಆರ್.ಗವಾಯಿ, “ಇದು ಪ್ರಚಾರ ಹಿತಾಸಕ್ತಿಯ ಅರ್ಜಿ.

ನೀವು ದೇವರ ಬಳಿ ಹೋಗಿ, ಏನಾದರೂ ಮಾಡು ಎಂದು ಕೇಳಿ. ವಿಷ್ಣುವಿನ ಮಹಾನ್ ಭಕ್ತ ಎಂದು ಹೇಳಿಕೊಳ್ಳುತ್ತಿದ್ದೀರಿ. ಹಾಗಾಗಿ ಹೋಗಿ, ದೇವರನ್ನೇ ಪ್ರಾರ್ಥಿಸಿ, ಧ್ಯಾನ ಮಾಡಿ. ಆ ಜಾಗ ಪುರಾತತ್ವ ಇಲಾಖೆಗೆ ಸೇರಿದ್ದು.. ಇಲಾಖೆಯೇ ಏನನ್ನಾದರೂ ಮಾಡಬೇಕು... ಕ್ಷಮಿಸಿ" ಎಂದು ಮೌಖಿಕವಾಗಿ ಹೇಳಿದ್ದರು.

ಸಿಜೆಐ ಮಾತುಗಳಿಗೆ ಸೋಷಿಯಲ್ ಮೀಡಿಯಾ ಸೇರಿ ಎಡೆ ವ್ಯಾಪಕ ಟೀಕೆ ವ್ಯಕ್ತವಾಯಿತು. “ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದೀರಿ, ಅನ್ಯಧರ್ಮೀಯರ ಬಗ್ಗೆಯೂ ನೀವು ಹೀಗೆಯೇ ಮಾತನಾಡುತ್ತೀರಾ?" ಎಂದೆ ಪ್ರಶ್ನಿಸಲಾಯಿತು. ಈ ಪರಿಯ ಪ್ರತಿರೋಧ ನಿರೀಕ್ಷಿಸದಿದ್ದ ಸಿಜೆಐ ಸ್ಪಷ್ಟನೆ ನೀಡಿ, “ನಾನು ಎಲ್ಲಾ ಧರ್ಮಗಳನ್ನೂ ಗೌರವಿಸುತ್ತೇನೆ" ಎಂದರು. ಆದರೆ, ಈ ಹೇಳಿಕೆಯಿಂದ ಕುದಿಯುತ್ತಿದ್ದವರ ಆಕ್ರೋಶ ತಣಿದಿರಲಿಲ್ಲ.

ಕೆಲ ದಿನಗಳ ಹಿಂದೆ ಮಾರಿಷಸ್‌ನಲ್ಲಿ ಏರ್ಪಡಿಸಲಾಗಿದ್ದ ‘ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ (ಭಾರತ) ಕಾನೂನಿನ ಆಳ್ವಿಕೆ’ ಎಂಬ ವಿಷಯದ ಕುರಿತ ಸರ್ ಮೌರಿಸ್ ರಾಲ್ಟ್ ಸ್ಮಾರಕ ಉಪನ್ಯಾಸದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ, “ಭಾರತದಲ್ಲಿ ಬುಲ್ಡೋಜರ್ ನ್ಯಾಯ ನಡೆಯು ವುದಿಲ್ಲ" ಎಂದ ಸಿಜೆಐ ಗವಾಯಿ, ಬುಲ್ಡೋಜರ್ ಮೂಲಕ ಕಟ್ಟಡ ಕೆಡಹುವ ಕೃತ್ಯಗಳ ವಿರುದ್ಧ ತಮ್ಮನ್ನೊಳಗೊಂಡಿದ್ದ ನ್ಯಾಯಪೀಠದ ತೀರ್ಪನ್ನು ಉಲ್ಲೇಖಿಸಿದ್ದರು.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಕಟ್ಟಾ ಅಭಿಮಾನಿಯಾಗಿರುವ ರಾಕೇಶ್ ಕಿಶೋರ್‌ಗೆ ಸುಪ್ರೀಂ ಕೋರ್ಟಿನ ‘ಬುಲ್ಡೋಜರ್ ನ್ಯಾಯ’ದ ತೀರ್ಪು ಹಿಡಿಸಿರಲಿಲ್ಲ. ಮುಸ್ಲಿಮರು ಸರಕಾರಿ ಜಾಗ ಅತಿಕ್ರಮಣ ಮಾಡಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ. ಇಂಥಾ ಅಕ್ರಮಗಳಿಗೆ ಕಡಿವಾಣ ಹಾಕುವವರ ಪರ ಕೋರ್ಟುಗಳೂ ನಿಲ್ಲುತ್ತಿಲ್ಲ ಎಂದು ಅವರು ಸಿಟ್ಟಾಗಿದ್ದರು. ಅದಕ್ಕಾಗಿ, ಕಾನೂನನ್ನೇ ಕೈಗೆತ್ತಿಕೊಂಡು ಶೂ ಎಸೆಯುವ ಹುಚ್ಚುತನ ಮೆರೆಯಲು ಮುಂದಾದರು.

ವಿಪರ್ಯಾಸ ಎಂದರೆ ನ್ಯಾಯಾಂಗ ವ್ಯವಸ್ಥೆ ಮೇಲಿನ ಈ ದುರುಳ ಕೃತ್ಯವನ್ನು ಅನೇಕರು ಸಂಭ್ರಮಿಸಿದರು. ಸಿಜೆಐ ಮಾತುಗಳ ಬಗ್ಗೆ ಆಕ್ಷೇಪವಿದ್ದರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಅಥವಾ ನ್ಯಾಯಾಲಯದಲ್ಲಿ ಅವರ ವಿರುದ್ಧವೇ ದಾವೆ ಹೂಡುವ ಕಾನೂನಾತ್ಮಕ ಅವಕಾಶಗಳನ್ನು ನಮ್ಮ ಸಂವಿಧಾನ ನೀಡಿದೆಯೇ ವಿನಾ, ದೈಹಿಕ ಹಗೆ ಅವಕಾಶವಿಲ್ಲ.

ಹೇಳಿಕೇಳಿ ಇದು ಸೋಷಿಯಲ್ ಮೀಡಿಯಾ ಯುಗ. ಘನ ಹುದ್ದೆಯಲ್ಲಿರುವ ವ್ಯಕ್ತಿಗಳ ಮಾತು ಗಳಲ್ಲಿ ಸಣ್ಣ ಎಡವಟ್ಟಾದರೂ, ಸಾಮಾಜಿಕ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಗಳಿರುತ್ತವೆ. ಖಜುರಾಹೊ ವಿಷ್ಣು ಪ್ರತಿಮೆಯ ಕೇಸಿಗೆ ಸಂಬಂಧಿಸಿ ೨೦ ವರ್ಷಗಳ ಹಿಂದೆ ನ್ಯಾಯಾ ಧೀಶರು ಈ ರೀತಿ ಮಾತುಗಳನ್ನಾಡಿದ್ದಿದ್ದರೆ ಬಹುಶಃ ಏನೂ ಆಗುತ್ತಿರಲಿಲ್ಲವೇನೋ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ.

ಒಂದೊಂದು ಹೇಳಿಕೆಯೂ ಹತ್ತಾರು ಕಡೆ ತಪ್ಪು- ಸರಿಗಳ ವಿಮರ್ಶೆಗೊಳಪಡುತ್ತಿದೆ. ಹೀಗಾಗಿ, ಸಿಜೆಐ ಮಾತು ಗಳು ಒಂದು ವರ್ಗದ ಆಕ್ರೋಶವನ್ನು ದುಪ್ಪಟ್ಟುಗೊಳಿಸಿತು. ತಪ್ಪು/ಸರಿಗಳ ಬಗ್ಗೆ ಸಾರ್ವಜನಿಕ ಚರ್ಚೆಗಳಾದವು. ತಮ್ಮ ಮಾತು ಹಿಂದೂ ಆಸ್ತಿಕ ವರ್ಗದ ಬಹುಪಾಲು ಮಂದಿಗೆ ಹಿಡಿಸಲಿಲ್ಲ ಎನ್ನುವುದೂ ಸಿಜೆಐ ಅರಿವಿಗೆ ಬಂದಿತ್ತು.

ಕಳೆದ ವರ್ಷ, ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವಿ. ಶ್ರೀಶಾನಂದ ಅವರು ಬೆಂಗಳೂರಿನ ಮುಸ್ಲಿಂ ಬಾಹುಳ್ಯದ ಗೋರಿಪಾಳ್ಯವನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದು ವಿವಾದ ಕ್ಕೀಡಾಗಿದ್ದರು. ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಮಾಡಿತ್ತು. ನ್ಯಾ. ಶ್ರೀಶಾನಂದರು ಕ್ಷಮೆ ಕೇಳಿದ್ದರಿಂದ ಪ್ರಕರಣ ಅಲ್ಲಿಗೆ ಮುಗಿದಿತ್ತು.

ಬೀದಿಯಲ್ಲಿ ಓಡಾಡುವ ಮಂದಿ ಇಂಥಾ ಮಾತುಗಳನ್ನಾಡಿದರೆ ಯಾರೂ ತಲೆಕೆಡಿಸಿ ಕೊಳ್ಳುವುದಿಲ್ಲ. ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಮಾತನಾಡಿದಾಗ ಬರುವ ಪ್ರತಿಕ್ರಿಯೆಯ ಮಾದರಿ ಬೇರೆಯದೇ ರೀತಿಯಲ್ಲಿರುತ್ತದೆ.

ನ್ಯಾಯಾಧೀಶರು ತಮ್ಮ ತೀರ್ಪುಗಳ ಮೂಲಕ ಮಾತನಾಡಬೇಕು ಎಂಬ ನುಡಿ ನ್ಯಾಯಾಂಗ ಸಂಯಮದ ತತ್ವವನ್ನು ಒತ್ತಿ ಹೇಳುತ್ತದೆ. ವಿಚಾರಣೆ ವೇಳೆ ನೀಡುವ ಮೌಖಿಕ ಹೇಳಿಕೆಗಳು ಅಧಿಕೃತ ದಾಖಲೆಯ ಭಾಗವಾಗುವುದಿಲ್ಲ ಮತ್ತು ಅದಕ್ಕೆ ಕಾನೂನಿನ ಸಿಂಧುತ್ವ ಇರುವುದಿಲ್ಲ. ಲಿಖಿತ ಆದೇಶಗಳು ಮತ್ತು ತಾರ್ಕಿಕ ತೀರ್ಪುಗಳೇ ನಿರ್ಣಾಯಕ. ಈ ತತ್ವವು ನ್ಯಾಯಾಂಗ ಹೊಣೆಗಾರಿಕೆ, ನ್ಯಾಯ ಸಮ್ಮತತೆ ಮತ್ತು ನ್ಯಾಯದ ಔಪಚಾರಿಕ ಪ್ರಕ್ರಿಯೆಯನ್ನು ಎತ್ತಿ ಹಿಡಿಯುತ್ತದೆ.

ಇದಕ್ಕೆ ಪೂರಕ ಎಂಬಂತೆ, ಸೆ.೨೮ರಂದು ಬಾಂಬೆ ಹೈಕೋರ್ಟ್‌ ನಲ್ಲಿ ಭಾಷಣ ಮಾಡಿದ್ದ ಸುಪ್ರೀಂಕೋರ್ಟ್ ನ್ಯಾ.ಪಿ.ಎಸ್.ನರಸಿಂಹ, “ನ್ಯಾಯಾಧೀಶರ ಕಡ್ಡಾಯ ಅಗತ್ಯವೆಂದರೆ ಕಡಿಮೆ ಮಾತನಾಡುವುದು. ಆದರೆ, ಇದನ್ನು ಬಹುತೇಕರು ಆದ್ಯತೆ ಎಂದು ಪರಿಗಣಿಸುತ್ತಿಲ್ಲ. ತೂಕದ, ಅಗತ್ಯ ಮಾತು- ಭಾಷಣಗಳಷ್ಟೇ ಸತ್ಯದ ದಾರಿ ತೋರಿಸುತ್ತವೆ ಮತ್ತು ಎಲ್ಲರ ಸಮೃದ್ಧಿಗೆ ಕಾರಣವಾಗುತ್ತವೆ" ಎಂಬುದಾಗಿ ಸಹನ್ಯಾಯಾಧೀಶರಿಗೆ ಎಚ್ಚರಿಕೆ ನೀಡಿದ್ದನ್ನಿಲ್ಲಿ ನೆನಪಿಸಿಕೊಳ್ಳ ಬಹುದು.

ವಿಚಾರಣೆ ವೇಳೆ ನ್ಯಾಯಾಧೀಶರು ಮಾತನಾಡಬಾರದು ಎಂದಲ್ಲ. ಪ್ರಕರಣದ ಆಳ-ಅಗಲ ಬೆಳಕಿಗೆ ಬರುವುದು ವಕೀಲರನ್ನು ಹೆಚ್ಚೆಚ್ಚು ಪ್ರಶ್ನಿಸಿದಾಗಲೇ. ಹೀಗಿದ್ದರೂ, ನ್ಯಾಯಮೂರ್ತಿಗಳು ಮಾತಾಡಿzಲ್ಲವೂ ವರದಿಯಾಗುತ್ತಿರುವ ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಮಾತಿನ ತಾಳ ತಪ್ಪಿದರೆ ಏನಾಗುತ್ತದೆ ಎಂಬುದನ್ನು ಈಚಿನ ಕೆಲ ಘಟನೆಗಳೇ ಸಾರಿ ಹೇಳುತ್ತಿವೆ...

(ಲೇಖಕರು ಹಿರಿಯ ಪತ್ರಕರ್ತರು)