ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಇವು ಯಾರ ಜಪ್ತಿಗೂ ಸಿಗದ ನವಿಲುಗಳು!

ಗಂಡು ನವಿಲನ್ನು ಮೊದಲ ಬಾರಿಗೆ ನೋಡುವಾಗ ಖುಷಿಯಾಗುತ್ತದೆ. ಅದು ಕುಣಿವ ಪರಿ ಚಂದ. ಅದೇನೂ ನಿಮಗೆ ಖುಷಿಯಾಗಲಿ ಎಂದು ನರ್ತಿಸುವುದಿಲ್ಲ. ಅದರ ಪ್ರಧಾನ ಉದ್ದೇಶ ಹೆಣ್ಣನ್ನು ಸೆಳೆಯುವುದು. ತನ್ನ ಪುಕ್ಕಗಳು ಹೆಚ್ಚು ಉದ್ದವಾಗಿವೆ, ಹೆಚ್ಚು ಬಲಿಷ್ಠವಾಗಿವೆ ಎಂದು ಸಾಬೀತುಪಡಿಸಿ ದರಷ್ಟೇ ಆ ಗಂಡಿಗೆ ಹೆಣ್ಣಿನ ಅಂತರಂಗದ ವಲಯಕ್ಕೆ ಪ್ರವೇಶ.

ಕಾಡುದಾರಿ

ಬೆಂಗಳೂರಿನ ನಮ್ಮ ಮನೆಯ ಪಕ್ಕದಲ್ಲೇ ಒಂದೆರಡು ಖಾಲಿ ಸೈಟುಗಳಿವೆ. ಅಲ್ಲಿ ಒಂದಿಷ್ಟು ಹುಲ್ಲು ಗಿಡ ಮರ ಬೆಳೆದುಕೊಂಡಿವೆ. ಒಂದು ದಿನ ಬೆಳಗ್ಗೆ ಬೀದಿ ನಾಯಿಗಳು ಸೇರಿಕೊಂಡು ಏನನ್ನೋ ಗುರಾಯಿಸುತ್ತಿದ್ದವು. ಕುತೂಹಲದಿಂದ ನೋಡಿದರೆ ಒಂದು ಗಂಡು ನವಿಲು. ತನ್ನ ಇಷ್ಟುದ್ದದ ರೆಕ್ಕೆಗಳನ್ನು ನೀಳವಾಗಿ ಬಿಟ್ಟುಕೊಂಡು ಕಂಪೌಂಡ್‌ ಮೇಲೆ ಕೂತಿತ್ತು. ನಾಯಿಗಳು ಹೊರಟು ಹೋದ ಬಳಿಕ ತನ್ನ ಪಾಡಿಗೆ ಹೋಗಬಹುದು ಎಂದುಕೊಂಡೆ. ಒಂದೆರಡು ದಿನ ಕಳೆದ ನಂತರವೂ ಅದು ಅಲ್ಲಿಯೇ ಓಡಾಡುತ್ತಿತ್ತು.

ಒಂದು ವಾರ ಕಳೆದ ನಂತರ, ಪಕ್ಕದಲ್ಲೇ ಇದ್ದ ಮಾರ್ವಾಡಿಯ ಮನೆಯೊಂದರ ಟೆರೇಸಿನಲ್ಲಿ ಒಣ ಹಾಕಿದ್ದ ಮೆಣಸನ್ನು ರಾಜಾರೋಷವಾಗಿ ತಿಂದು ಹೋಯಿತು. ಮೊನ್ನೆ ನೋಡಿದರೆ ಒಂದು ಪುಟ್ಟ ನಾಯಿಮರಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕುಕ್ಕುತ್ತಿತ್ತು. ಆ ಮರಿಯ ಜಾತಿಬಾಂಧವರು ಸಹಾಯಕ್ಕೆ ಬಾರದೇ ಹೋಗಿದ್ದರೆ ಬಹುಶಃ ಹಳೆಯ ಸೇಡು ತೀರಿಸಿಯೇ ಬಿಡುತ್ತಿತ್ತೋ ಏನೋ. ಇದೀಗ ಆ ಖಾಲಿ ಸೈಟುಗಳ ಅಕ್ಕಪಕ್ಕದ ಮನೆಯವರು ತಮ್ಮ ಮನೆಯಲ್ಲಿರುವ ಬೆಕ್ಕಿನ ಮರಿಗಳನ್ನು ಕಟ್ಟೆಚ್ಚರದಿಂದ ನೋಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ.

ಸುತ್ತಮುತ್ತ ಕಟ್ಟಡಗಳೇ ಇರುವ, ಎಲ್ಲೂ ಕಾಡಿಲ್ಲದ ಈ ನಗರದ ನಡುವೆ ಈ ನವಿಲು ಎಲ್ಲಿಂದ ಬಂತು ಎಂಬುದು ಕುತೂಹಲದ ಸಂಗತಿ. ಅಲ್ಲಿಂದ ಒಂದೆರಡು ಕಿಲೋಮೀಟರ್‌ ದೂರದಲ್ಲಿ ಒಂದು ಸಣ್ಣ ಗುಡ್ಡವೂ ನೈಸ್‌ ರಸ್ತೆಯ ಆಸುಪಾಸಿನ ಕುರುಚಲು ಕಾಡೂ ಇದೆ. ಅಲ್ಲಿ ಒಂದಷ್ಟು ನವಿಲುಗಳಿವೆ. ಸಂಜೆ ಆ ಪ್ರದೇಶದಲ್ಲಿ ವಾಕಿಂಗ್‌ಗೆ ಹೋದವರಿಗೆ ಹತ್ತಾರು ನವಿಲುಗಳ ಕೂಗು, ಗಂಡು ನವಿಲುಗಳ ಲೈಂಗಿಕ ಸಾಹಸದ ರಣಕೇಕೆಗಳು ಕೇಳಿಸುತ್ತವೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಈ ನವಿಲು ಎರಡೇ ಸೈಟುಗಳ ಖಾಲಿ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿದೆ. ಬಹುಶಃ ಅಲ್ಲಿಯೇ ಅದು ಮುಂದೆ ಸಂಸಾರವನ್ನೂ ಹೂಡಬಹುದು. ನಗರವಾಸಿಗಳು ಗಂಡು ನವಿಲುಗಳ ಪುರುಷತ್ವ ಪ್ರದರ್ಶನದ ನರ್ತನದ ಪುಗಸಟ್ಟೆ ಆನಂದವನ್ನೂ ಅನುಭವಿಸಬಹುದು.

ಇದನ್ನೂ ಓದಿ: Harish Kera Column: ಶಾಪದ ಅಗ್ನಿಕುಂಡದಲ್ಲಿ ಅರಳಿದ ಕೆಂಡಗಳು

ಗಂಡು ನವಿಲನ್ನು ಮೊದಲ ಬಾರಿಗೆ ನೋಡುವಾಗ ಖುಷಿಯಾಗುತ್ತದೆ. ಅದು ಕುಣಿವ ಪರಿ ಚಂದ. ಅದೇನೂ ನಿಮಗೆ ಖುಷಿಯಾಗಲಿ ಎಂದು ನರ್ತಿಸುವುದಿಲ್ಲ. ಅದರ ಪ್ರಧಾನ ಉದ್ದೇಶ ಹೆಣ್ಣನ್ನು ಸೆಳೆಯುವುದು. ತನ್ನ ಪುಕ್ಕಗಳು ಹೆಚ್ಚು ಉದ್ದವಾಗಿವೆ, ಹೆಚ್ಚು ಬಲಿಷ್ಠವಾಗಿವೆ ಎಂದು ಸಾಬೀತು ಪಡಿಸಿದರಷ್ಟೇ ಆ ಗಂಡಿಗೆ ಹೆಣ್ಣಿನ ಅಂತರಂಗದ ವಲಯಕ್ಕೆ ಪ್ರವೇಶ. ಮೊನ್ನೆ ಹೀಗೇ ವಾಕ್‌ ಹೋದಾಗ ನೈಸ್‌ ರಸ್ತೆಯ ಪಕ್ಕದ ಕಾಡಿನ ಅಂಚಿನಲ್ಲಿ ಒಂದು ಗಂಡು ನವಿಲು ತನ್ನ ಪುಕ್ಕಗಳನ್ನೆಲ್ಲಾ ಕೆದರಿಕೊಂಡು ಝಲ್‌ ಝಲ್‌ ಎಂದು ಸದ್ದು ಮಾಡುತ್ತ ಸ್ವಲ್ಪ ದೂರದಲ್ಲಿದ್ದ ಹೆಣ್ಣನ್ನು ಸರಸಮಯ ಸಮಯಕ್ಕೆ ಆಹ್ವಾನಿಸುತ್ತಿತ್ತು.

ವಾಕಿಂಗ್‌ಗೆ ಬಂದ ನಾಲ್ಕಾರು ಮಂದಿ ನವಿಲುಗಳ ಈ ತೀರಾ ಖಾಸಗಿ ಸಂಗತಿಯನ್ನು ಮೊಬೈಲ್‌ ಗಳಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ನರಪೇತಲ ಬೀದಿನಾಯಿಯೊಂದು ಹೆಣ್ಣು ನವಿಲಿನ ಮೇಲೆ ದಾಳಿ ಮಾಡಲು ಸಮೀಪಿಸಿತು. ಗಂಡು ನವಿಲು ರೋಷಾವೇಶದಿಂದ ಆ ನಾಯಿ ಯನ್ನು ಅಟ್ಟಿಸಿಕೊಂಡು ಹೋಯಿತು. ಬಲಿಷ್ಠವಾಗಿದ್ದ ಈ ನವಿಲಿನ ಕೊಕ್ಕಿನ ಆಘಾತಕ್ಕೆ ಬೆದರಿ ಆ ನಾಯಿ ಸತ್ತೆನೋ ಕೆಟ್ಟೆನೋ ಎಂದು ಸ್ಥಳದಿಂದ ಪರಾರಿಯಾಯಿತು. ಪುಕ್ಕದ ಕೆದರುವಿಕೆಯ ಜೊತೆಗೆ ಹೆಣ್ಣನ್ನು ಇಂಪ್ರೆಸ್‌ ಮಾಡಲು ತನ್ನ ಕೊಕ್ಕಿನ ಶಕ್ತಿಯನ್ನೂ ಬಳಸಿಕೊಂಡು ಬೀಗಿದ ಆ ಗಂಡು ಆ ಹೆಣ್ಣಿನ ಮನಸ್ಸನ್ನು ಗೆದ್ದುಕೊಂಡಿರಬಹುದು ಎಂಬುದು ನನ್ನ ಊಹೆ.

ಬೆಂಗಳೂರಿನಂಥ ಮೆಟ್ರೋ ನಗರದಲ್ಲಿ ಈ ಕತೆ. ಹಳ್ಳಿಗಳ ಕತೆಯೇನು. ಮೊದಲು ಅಭಯಾರಣ್ಯಗಳ ಸಂಗತಿ ನೋಡಿ. ಈಗ ನೀವು ನಾಗರಹೊಳೆ ಅಥವಾ ಬಂಡೀಪುರ ಕಡೆಗೆ ಹೋದರೆ, ಸಫಾರಿಯೇ ಹೋಗಬೇಕೆಂದಿಲ್ಲ, ಕಾಡಿನ ನಡುವೆ ಹಾದುಹೋಗುವ ರಸ್ತೆಯಲ್ಲಿ ಸುಮ್ಮನೇ ಹೋದರೂ ಸಾಕು ಹತ್ತಾರು ನವಿಲುಗಳು ಸ್ವಚ್ಛಂದವಾಗಿ ಓಡಾಡುವುದನ್ನು ಕಾಣಬಹುದು. ಮೊದಮೊದಲು ಇವುಗಳನ್ನು ನೋಡುತ್ತ ಆನಂದವಾಗಿತ್ತು. ನಾನು ಹುಟ್ಟಿ ಬೆಳೆದ ಮಲೆನಾಡಿನ ದಟ್ಟ ಕಾಡಿನ ಪರಿಸರದಲ್ಲಿ ನವಿಲಿನ ಸಂತತಿಯೇ ಇರಲಿಲ್ಲ. ಹೀಗಾಗಿ ಜೀವಂತ ನವಿಲು ನೋಡಲು ಸಿಕ್ಕಿದ್ದು ಮೈಸೂರಿನ ಮೃಗಾಲಯಕ್ಕೆ ಪ್ರವಾಸಕ್ಕೆ ಬಂದಾಗಲೇ. ಮೊದಲ ಬಾರಿ ಹೆಣ್ಣು ನವಿಲು ನೋಡಿ, ಅದಕ್ಕೆ ಬಾಲವಿಲ್ಲದ್ದನ್ನೂ ಅದು ಕುಣಿಯದೇ ಇದ್ದುದನ್ನೂ ಕಂಡು, ಈ ಕವಿಗಳೆಲ್ಲಾ ವರ್ಣಿಸಿದ್ದು ಹಸಿ ಸುಳ್ಳು ಎನಿಸಿ ಸಿಟ್ಟೇ ಬಂದಿತ್ತು.

ಇತ್ತೀಚೆಗೆ ಅವು ಹಳ್ಳಿಗಳಲ್ಲೂ ಪೇಟೆಗಳಲ್ಲೂ ಬೀದಿನಾಯಿಗಳ ಥರ ರಸ್ತೆ ಬದಿಯಲ್ಲೇ ಅಬ್ಬೇಪಾರಿ ಗಳಂತೆ ಓಡಾಡುವುದನ್ನು ಕಂಡರೆ ಜಿಗುಪ್ಸೆಯೇ ಉಕ್ಕುತ್ತದೆ. ಜಿಗುಪ್ಸೆ ನವಿಲುಗಳ ಬಗೆಗಲ್ಲ, ಈ ಹಕ್ಕಿಗಳು ಸೂಚಿಸುತ್ತಿರುವ ನಮ್ಮ ಪರಿಸರದ ದುಃಸ್ಥಿತಿಯ ಬಗೆಗೆ. ಇಷ್ಟುದ್ದ ಭಾರದ ತಮ್ಮ ದೇಹ ವನ್ನು ಹೊತ್ತುಕೊಂಡು ಓಡಾಡಬೇಕಾದ, ಮರದಿಂದ ಮರಕ್ಕೆ ಹಾರುವ ಶಕ್ತಿಯಿಲ್ಲದ, ಬೀದಿನಾಯಿ ಗಳಿಂದ ತಪ್ಪಿಸಿಕೊಳ್ಳಲು ಪರದಾಡುವ ಈ ಹಕ್ಕಿಗಳು ಇಷ್ಟೊಂದು ಸಂಖ್ಯೆಯಲ್ಲಿ ನಮ್ಮ ಹಳ್ಳಿಗಳ ನಡುವೆ ಬಂದುದಾದರೂ ಹೇಗೆ.

ಮಲೆನಾಡು- ಬಯಲುಸೀಮೆ ನಡುವಿನ ಹಲವು ಹಳ್ಳಿಗಳಲ್ಲಿ ಈಗ ರೈತರು ಅತೀ ಹೆಚ್ಚು ಗಾಬರಿ ಯಾಗುತ್ತಿರುವುದು ನವಿಲುಗಳ ಬಗ್ಗೆ. ತೋಟ, ಹೊಲಗಳಿಗೆ ನುಗ್ಗಿ ಬೆಳೆಯನ್ನು ತಿಂದು ಮುಗಿಸು ತ್ತಿವೆ. ರಾಗಿ, ಅವರೆಕಾಯಿ, ಹುರುಳಿ, ಬತ್ತ, ಹೆಸರು, ಟೊಮೇಟೊ, ಮೆಣಸಿನಕಾಯಿ ಸೇರಿದಂತೆ ಎಲ್ಲಾ ಬೆಳೆಗಳೂ ಕಾಳು ಕಟ್ಟುವ ಹಂತದಲ್ಲೇ ನವಿಲುಗಳಿಂದ ಸ್ವಾಹಾ. ಇದನ್ನು ಮನುಷ್ಯ- ವನ್ಯಮೃಗ ಸಂಘರ್ಷ ಎಂದು ಕರೆಯೋಣವೆ? ಊಹೂಂ, ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕಾಡಾನೆ, ಜಿಂಕೆ, ಹಂದಿ ಸೇರಿದಂತೆ ಇತರ ಕಾಡು ಪ್ರಾಣಿಗಳಿಂದ ಸಂಭವಿಸುವ ಬೆಳೆ ಹಾನಿಗೆ ಅರಣ್ಯ ಇಲಾಖೆಯಿಂದ ರೈತರಿಗೆ ಪರಿಹಾರ ನೀಡಲಾಗುತ್ತದೆ. ಆದರೆ ನವಿಲಿನಿಂದ ಸಂಭವಿಸುವ ಬೆಳೆ ಹಾನಿಗೆ ಯಾವುದೇ ಪರಿಹಾರ ಇಲ್ಲ.

ಕ್ರಿಮಿಕೀಟ ಹಾವುಗಳನ್ನು ಭಕ್ಷಿಸುವ ನವಿಲು ರೈತನ ಮಿತ್ರ ಅಲ್ಲವೆ? ಅದು ಯಾವಾಗಿನಿಂದ ಶತ್ರುವಾಯಿತು ಎಂದು ನೀವು ಕೇಳಬಹುದು. ಪರಿಸರದ ಆಹಾರ ಸರಪಳಿ ಸರಿಯಾಗಿ ಇದ್ದಾಗ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತದೆ. ಒಮ್ಮೆ ಆ ಸರಪಳಿ ತುಂಡಾಯಿತೆಂದರೆ ಸಮಸ್ಯೆ ಶುರು. ನವಿಲುಗಳು ಇಲಿ ಹೆಗ್ಗಣ ಹಾವುಗಳಿಂದ ಹಿಡಿದು ಅಕ್ಕಿ ರಾಗಿಯವರೆಗೆ ಎಲ್ಲವನ್ನೂ ತಿನ್ನುತ್ತವೆ. ಹೀಗಾಗಿ ಇವು ಒಂಥರಾ ಮನುಷ್ಯನಂತೆಯೇ ಆಹಾರ ಸರಪಳಿಯ ಮೇಲ್ಭಾಗದಲ್ಲಿವೆ. ನವಿಲುಗಳನ್ನು ಭಕ್ಷಿಸಬಲ್ಲಂಥವು ಹುಲಿ ಚಿರತೆ ಕಾಡುನಾಯಿ ನರಿ ತೋಳ ಮಾತ್ರ. ಊರಿನ ನಾಯಿಗಳಿಗೆ ಬೇಟೆಯಾಡಿ ಅಭ್ಯಾಸ ಇರುವುದಿಲ್ಲವಾದ್ದರಿಂದ ಸುಲಭವಾಗಿ ಹಿಡಿಯಲಾರವು. ಇನ್ನು ಮನುಷ್ಯ ನವಿಲನ್ನು ಕೊಂದರೆ ಜೈಲುವಾಸ ಖಚಿತ. ಹೀಗಾಗಿ ಇವು ಎಗ್ಗಿಲ್ಲದೆ ಹೆಚ್ಚಿ ಕೊಂಡಿವೆ. ಇದು ಈ ಹಕ್ಕಿಗಳ ಹೆಚ್ಚಳದ ಒಂದು ಮುಖ.

ತಜ್ಞರು ಈ ಬೆಳವಣಿಗೆಯ ಇನ್ನೊಂದು ಆತಂಕಕಾರಿ ಆಯಾಮವನ್ನು ಮುಂದಿಡುತ್ತಾರೆ. ಇದೇನೂ ಹೊಸ ವಿಚಾರವಲ್ಲ. 2020ರಲ್ಲೇ ಬಿಡುಗಡೆಯಾದ 'ಭಾರತದ ಪಕ್ಷಿಗಳ ಸ್ಥಿತಿಗತಿʼ ಎಂಬ ವರದಿಯ ಪ್ರಕಾರ ಕಳೆದ 30 ವರ್ಷಗಳಲ್ಲಿ ಕರ್ನಾಟಕದಲ್ಲಿ ನವಿಲುಗಳ ಸಂಖ್ಯೆಯಲ್ಲಿ ಶೇ. 491ರಷ್ಟು ಏರಿಕೆ ಯಾಗಿದೆ! ಇದೇ ಕಾಲಕ್ಕೆ ದೇಶದಲ್ಲಿ ಒಟ್ಟಾರೆಯಾಗಿ ನವಿಲುಗಳ ಏರಿಕೆ ಶೇ. 149ರಷ್ಟು. ಕಳೆದ 7-8 ವರ್ಷಗಳಲ್ಲಿ ಸುಮಾರು ಶೇ. 400ರಷ್ಟು ಏರಿಕೆ ಕಂಡುಬಂದಿದೆಯಂತೆ. ಇದಕ್ಕಿರುವ ಇನ್ನೊಂದು ಕೋನವೆಂದರೆ, ಇತರ ಹಲವಾರು ಜಾತಿಯ ಪಕ್ಷಿಗಳ ಸಂಖ್ಯೆಯಲ್ಲಿನ ಕುಸಿತ. ಅಂದರೆ ಬೇರೆ ಹಕ್ಕಿಗಳ ಜಾಗವನ್ನು ಕೂಡ ನವಿಲು ಆಕ್ರಮಿಸಿಕೊಳ್ಳುತ್ತಿದೆ. ಇದು ಜೀವವೈವಿಧ್ಯಕ್ಕೆ ಪೂರಕ ಅಲ್ಲವೇ ಅಲ್ಲ.

ಚಾರ್ಲ್ಸ್‌ ಡಾರ್ವಿನ್ನನ ʼಸರ್ವೈವಲ್‌ ಆಫ್‌ ದಿ ಫಿಟ್ಟೆಸ್ಟ್‌ʼ ತತ್ವಕ್ಕೆ ನವಿಲು ಉದಾಹರಣೆ. ಫಿಟ್‌ ಎಂದರೆ ಬಲಿಷ್ಠ ಎಂದಲ್ಲ, ʼಪರಿಸರಕ್ಕೆ ತಕ್ಕಂತೆ ಬದಲಾಗಬಲ್ಲ ಗುಣ ಹೊಂದಿದʼ ಎಂದರ್ಥ. ನವಿಲು ತಾನಿರುವ ಪರಿಸರಕ್ಕೆ ಸಂಪೂರ್ಣ ಹೊಂದಿಕೊಂಡು ಬದುಕಬಲ್ಲುದು. ನಗರಗಳ ಖಾಲಿ ಸೈಟು ಗಳಲ್ಲಿ ಬಿಡಾರ ಹೂಡಿ ಬದುಕಿಕೊಂಡಿರುವುದೇ ಅದಕ್ಕೆ ಸಾಕ್ಷಿ. ನಗರಗಳಲ್ಲಿ ಅದು ಏನನ್ನು ಭಕ್ಷಿಸಿ ಬದುಕುತ್ತದೆ ಎಂಬುದೊಂದು ಪ್ರಶ್ನೆ. ಅದರ ಆಹಾರವಾದ ಇಲಿ ಹೆಗ್ಗಣಗಳು ಪುಷ್ಕಳವಾಗಿ ಸಿಗುತ್ತಿರ ಬೇಕು. ಇದರಲ್ಲಿ ಸಂಶಯವಿಲ್ಲ ಯಾಕೆಂದರೆ ನಾವು ತಿಂದು ಹೆಚ್ಚಾಗಿ ಎಸೆಯುವ ಆಹಾರ, ಬೇಳೆ ಕಾಳು ಮತ್ತಿತರ ಆಹಾರಗಳಿಂದ ಇಲಿ ಹೆಗ್ಗಣಗಳು ಹೆಚ್ಚಿಕೊಂಡಿವೆ. ಇಲಿಗಳು ಅಧಿಕ ಸಂಖ್ಯೆ ಯಲ್ಲಿರುವುದರಿಂದ ಹಾವುಗಳೂ ಹೆಚ್ಚುವುದು ಸ್ವಾಭಾವಿಕ. ಬೀದಿನಾಯಿಗಳೇನೂ ಇಲಿ ಹಾವು ಗಳನ್ನು ತಿನ್ನುವುದಿಲ್ಲವಲ್ಲ. ಇವುಗಳ ನಿಯಂತ್ರಣಕ್ಕೆ ನವಿಲೇ ಆಗಬೇಕಷ್ಟೆ.

ವಿಸ್ತಾರವಾದ ಆಯಾಮದಿಂದ ನೋಡಿದರೆ ಈ ಬೆಳವಣಿಗೆ ನಮ್ಮ ಪರಿಸರದ ಆರೋಗ್ಯದ ಕುಸಿತ ವನ್ನೂ ಸೂಚಿಸುವಂಥದು. ನವಿಲುಗಳು ಒಣಕಾಡುಗಳಲ್ಲಿ ಬದುಕುವ ಪಕ್ಷಿಗಳು. ಮಲೆನಾಡಿ ನಲ್ಲೂ ಇವುಗಳ ಸಂಖ್ಯೆಯ ಏರಿಕೆಯಾಗುತ್ತಿರುವುದು ಏನನ್ನು ಸೂಚಿಸುತ್ತಿದೆ? ಮಲೆನಾಡು ಕೂಡ ಒಣಭೂಮಿಯಾಗುತ್ತಿದೆ ಎಂಬುದನ್ನೇ ಹೊರತು ಇನ್ನೇನಲ್ಲ. ಈಗ ಭಯಂಕರ ಮಳೆ ಸುರಿಯು ತ್ತಿರುವ ಮಲೆನಾಡನ್ನು ನೀವು ಏಪ್ರಿಲ್‌ ಮೇ ತಿಂಗಳಲ್ಲಿ ಒಂದು ಸಲ ಹೊಕ್ಕು ನೋಡಿ. ಹಳ್ಳಕೊಳ್ಳ ಗಳು ಬತ್ತಿ ಗಾಬರಿಯಾಗಿ ಕಂಗೆಡುವಷ್ಟು ಒಣಗುತ್ತವೆ.

ನಿಧಾನವಾಗಿ ಮರುಭೂಮಿಗಳಾಗುತ್ತಿದೆ. ಹಾಗಾದರೆ ಜೂನ್‌ ಜುಲೈನಲ್ಲಿ ಸುರಿದ ಮಳೆಯೆಲ್ಲ ಎಲ್ಲಿ ಹೋಯಿತು? ಅದನ್ನು ನಾವು ಗೌರವಪೂರ್ವಕವಾಗಿ ಸಮುದ್ರಕ್ಕೆ ಕಳಿಸಿಕೊಟ್ಟೆವು. ನೀರು ಇಂಗ ಬೇಕಾದ ಜಾಗಗಳಲ್ಲಿ ಕಾಂಕ್ರೀಟು ಡಾಮರು ಮೆತ್ತಿದೆವು. ಚಳಿಗಾಲದಲ್ಲಿ ಬೆಚ್ಚಗಿರಲು ಕಂಬಳಿಗಳು ಬೇಕಾಗುತ್ತಿದ್ದವು. ಒಂದು ಕಂಬಳಿ ಚಳಿ, ಎರಡು ಕಂಬಳಿ ಚಳಿ ಎಂಬ ನುಡಿಗಟ್ಟುಗಳನ್ನು ನೀವು ಕೇಳಿರಬಹುದು. ಈಗ ಮಲೆನಾಡಿನಲ್ಲಿ ಚಳಿಯೇ ಇರುವುದಿಲ್ಲ.

ಹಾಗಾದರೆ ಪ್ರತಿಯೊಂದು ಪ್ರಾಣಿ ಪಕ್ಷಿ ಕ್ರಿಮಿಕೀಟದ ಸಂಖ್ಯೆಯ ಏರಿಕೆ ಅಥವಾ ಇಳಿಕೆಯೂ ಪರಿಸರದ ಒಂದೊಂದು ಬದಲಾವಣೆಯ ಸೂಚಕವೇ? ಹೌದು. ಜೇನುಹುಳಗಳು, ಗುಬ್ಬಚ್ಚಿಗಳು, ಕಾಗೆಗಳು ಕಡಿಮೆಯಾಗುತ್ತಿವೆ. ಪಾರಿವಾಳಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇವುಗಳಂತೂ ಆಧುನಿಕ ಹಾಗೂ ಪಾರಂಪರಿಕ ಕಟ್ಟಡಗಳನ್ನೆಲ್ಲಾ ಹಿಕ್ಕೆಯಿಂದ ತುಂಬಿಸಿ ಅವುಗಳ ಅಂದಚಂದವನ್ನೆಲ್ಲ ಸರ್ವನಾಶ ಮಾಡುವಷ್ಟು ಹೆಚ್ಚಿಕೊಂಡಿವೆ. ಅವೂ ಮನುಷ್ಯನಿಗೆ ಹೊಂದಿಕೊಂಡಿವೆ. ನವಿಲುಗಳೂ ಇನ್ನು ಕೆಲದಿನಗಳಲ್ಲಿ ಪಾರಿವಾಳಗಳಷ್ಟು ಸರ್ವೇಸಾಮಾನ್ಯ ಆಗಲಿವೆ.

ಹರೀಶ್‌ ಕೇರ

View all posts by this author