ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naveen Sagar Column: ಧಾರಾವಾಹಿ ಬಿಟ್ಟು ಸಿನೆಮಾ ನೋಡೋಕೆ ಬಂದ್ರು..!

ಎದ್ದು ಕಾಣುವ ಹೆಸರು ಮತ್ತು ಮುಖ ಅಂದರೆ ಅದು ರಂಗಾಯಣ ರಘು ಮಾತ್ರ. ಇನ್ನೆಲ್ಲವೂ ಸೀರಿಯಲ್ ಮುಖಗಳೇ. ಹಾಗಂತ ಈ ಚಿತ್ರ ಯಾವುದಾದರೂ ಗಿಮಿಕ್ ಮಾಡಿತಾ? ವಿಶೇಷ ಮಾದರಿಯ ಪ್ರಚಾರ ಮಾಡಿತಾ? ಕಾಂಟ್ರವರ್ಸಿ ಮೂಲಕ ಸುದ್ದಿಯಾಯ್ತಾ? ಉಹುಂ. ಹಾಗಾದ್ರೆ ಚಿತ್ರದ ಟ್ರೇಲರ್ ಆಗಲೀ ಹಾಡಾಗಲೀ, ಸಿನಿಮಾ ಬಿಡುಗಡೆಗೆ ಮುನ್ನವೇ ಹಿಟ್ ಆಗಿ ಪ್ರೇಕ್ಷಕರನ್ನು ಎಳೆತಂದಿತಾ? ಅದೂ ಇಲ್ಲ.

ಪದಸಾಗರ

ಕರ್ನಾಟಕದಲ್ಲಿ ಮಳೆ ಇಲ್ಲ... ಬರಗಾಲದ ಮುನ್ಸೂಚನೆ ಎಂಬುದು ಶುದ್ಧ ಸುಳ್ಳು. ರಾಜ್ಯಾದ್ಯಂತ ಮಳೆಯಾಗುತ್ತಿದೆ. ಹೌದು ಅದು ಒಲವಿನ ಮಳೆ. ರಾಜ್ಯಕ್ಕೆ ರಾಜ್ಯವೇ ಪ್ರೇಮದ ಊರಾಗಿ ಹೋಗಿದೆ. ಈ ಪ್ರೇಮದ ಊರಲಿ ಹೃದಯದ ತೇರಲಿ ಒಲವಿನ ಮಳೆಯಾಗುತ್ತಿದೆ. ಪ್ರವಾಹೋಪಾದಿಯಲ್ಲಿ ಥಿಯೇಟರ್ ಗಳು ಹೌಸ್ ಫುಲ್ ಆಗುತ್ತಿವೆ.

ಕನ್ನಡ ಚಿತ್ರರಂಗಕ್ಕೆ ಬಹುವರ್ಷಗಳಿಂದ ನಿರೀಕ್ಷಿಸುತ್ತಿದ್ದ ಪವಾಡವೊಂದು ಘಟಿಸಿ ಬಿಟ್ಟಿದೆ. ಇದು ಮುಂಗಾರು ಮಳೆಯ ನಂತರ ಬಂದ ಅತಿ ದೊಡ್ಡ ಒಲವಿನ ಮಳೆ. ‘ಪ್ರೇಮದ ಊರಲಿ’ ಎಂಬ ಎಲ್ಲ ರೀತಿಯಲ್ಲಿಯೂ ಅತಿ ಸಾಮಾನ್ಯ ಅನ್ನಬಹುದಾದ ಚಿತ್ರವೊಂದು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದರೆ, ಇದನ್ನು ಹೇಗೆ ವಿಶ್ಲೇಷಿಸಬೇಕೆಂದು ಅರ್ಥವಾಗದೇ, ಚಿತ್ರರಂಗ ಮೌನವಾಗಿ ಕಣ್ಣರಳಿಸಿಕೊಂಡು ನೋಡಿ ಸಂಭ್ರಮಿಸುತ್ತಿದೆ.

ಏನಿದೆ ಈ ಚಿತ್ರದಲ್ಲಿ? ಕೇವಲ ಎರಡೂವರೆ ಕೋಟಿ ಬಜೆಟ್ಟಿನಲ್ಲಿ, ಎರಡು ವರ್ಷಗಳಿಂದ ಕುಂಟುತ್ತ ತೆವಳುತ್ತಾ ತಯಾರಾಗಿ ಬಂದ ಈ ಚಿತ್ರ ಪವಾಡ ಮಾಡೀತೆಂದು ಯಾವ ಸಿನಿಪ್ರೇಮಿಯೂ ಎಣಿಸಿರಲಿಲ್ಲ. ಸಿನಿಪ್ರೇಮಿ ಬಿಡಿ, ಆ ಚಿತ್ರತಂಡವೇ ಎಣಿಸಿರಲಿಲ್ಲ. ಈ ಚಿತ್ರದಲ್ಲಿ ಸ್ಟಾರ್ ನಾಯಕ ನಿಲ್ಲ. ನಾಯಕಿ ಇಲ್ಲ. ಇದು ದೊಡ್ಡ ಹೆಸರಿನ ನಿರ್ದೇಶಕನ ಚಿತ್ರವಲ್ಲ, ಖ್ಯಾತ ಬ್ಯಾನರ್ ಆಗಲೀ ಪ್ರೊಡ್ಯೂಸರ್ ಆಗಲೀ ಇದಕ್ಕಿಲ್ಲ.

ಇದನ್ನೂ ಓದಿ: Naveen Sagar Column: ಧರ್ಮವಿಲ್ಲದ ಭಯೋತ್ಪಾದನೆ ಮತ್ತು ಹರಾಮಿ ಹವಾಮಿ !

ಎದ್ದು ಕಾಣುವ ಹೆಸರು ಮತ್ತು ಮುಖ ಅಂದರೆ ಅದು ರಂಗಾಯಣ ರಘು ಮಾತ್ರ. ಇನ್ನೆಲ್ಲವೂ ಸೀರಿಯಲ್ ಮುಖಗಳೇ. ಹಾಗಂತ ಈ ಚಿತ್ರ ಯಾವುದಾದರೂ ಗಿಮಿಕ್ ಮಾಡಿತಾ? ವಿಶೇಷ ಮಾದರಿಯ ಪ್ರಚಾರ ಮಾಡಿತಾ? ಕಾಂಟ್ರವರ್ಸಿ ಮೂಲಕ ಸುದ್ದಿಯಾಯ್ತಾ? ಉಹುಂ. ಹಾಗಾದ್ರೆ ಚಿತ್ರದ ಟ್ರೇಲರ್ ಆಗಲೀ ಹಾಡಾಗಲೀ, ಸಿನಿಮಾ ಬಿಡುಗಡೆಗೆ ಮುನ್ನವೇ ಹಿಟ್ ಆಗಿ ಪ್ರೇಕ್ಷಕರನ್ನು ಎಳೆತಂದಿತಾ? ಅದೂ ಇಲ್ಲ.

ಸು ಫ್ರಮ್ ಸೋ ಥರ ಪೇಯ್ಡ್ ಪ್ರೀಮಿಯರ್ ಮಾಡಿ, ಪ್ರೇಕ್ಷಕರಿಂದಲೇ ಪ್ರೊಮೋಟ್ ಮಾಡಿಸಿತಾ? ಇಲ್ಲ. ಸೆಲೆಬ್ರಿಟಿ ಶೋ ಮಾಡಿಯೋ, ಸೆಲೆಬ್ರಿಟಿಗಳ ಮೂಲಕ ಹೇಳಿಸಿ ಸಿನಿಮಾವನ್ನು ತಲುಪಿಸಿತಾ? ಇಲ್ಲವೇ ಇಲ್ಲ. ಹೊಸತಂಡದ ಎಲ್ಲ ಚಿತ್ರಗಳೂ ಹೇಗೆಲ್ಲ ತಮ್ಮ ಚಿತ್ರವನ್ನು ಜನರಿಗೆ ಪರಿಚಯಿಸಲು ಹೆಣಗಾಡುತ್ತವೆಯೋ ಹಾಗೆಯೇ ಈ ಚಿತ್ರವೂ ಪ್ರಾಮಾಣಿಕ ಪ್ರಯತ್ನ ಮಾಡಿತ್ತು. ‌

ಬಸ್ಸು ರೈಲು, ಕಾಲೇಜು, ಜನಜಂಗುಳಿ ಇರುವ ಜಾಗಗಳು, ಎಡೆ ಚಿತ್ರತಂಡ ಓಡಾಡಿ ತಮ್ಮದೊಂದು ಚಿತ್ರ ಬರುತ್ತಿದೆ ಎಂಬ ಸುದ್ದಿಯನ್ನು ಶಕ್ತಿಮೀರಿ ತಲುಪಿಸಿತ್ತು. ಸೋಷಿಯಲ್ ಮೀಡಿಯಾವನ್ನು ಮಾತ್ರ ನಂಬಿ ಕೂರಲಿಲ್ಲ. ತಮ್ಮ ಆಡಿಯೆನ್ಸ್ ಸೋಷಿಯಲ್ ಮೀಡಿಯಾದಲ್ಲಿ ಇರುವವರು ಮಾತ್ರ ಅಲ್ಲ. ಅದರ ಹೊರಗಿರುವವರಿಗೇ ಹೆಚ್ಚು ಆಪ್ತವಾಗುವ ಚಿತ್ರ ಇದು ಎಂದು ಮನಗಂಡಿದ್ದ ತಂಡ ಆ ವರ್ಗಕ್ಕೆ ಸುದ್ದಿ ಮುಟ್ಟಿಸಲು ಗರಿಷ್ಠ ಶ್ರಮ ಹಾಕಿತ್ತು. ‌

62 ok

ರಾಜ್ಯಾದ್ಯಂತ ಸಿನಿಮಾ ರಿಲೀಸಾದ ದಿನ ಚಿತ್ರದ ಗಳಿಕೆ ಎಷ್ಟು? ಕೇವಲ ಒಂಬತ್ತು ಲಕ್ಷ. ಸಾಕಷ್ಟು ಪ್ರದರ್ಶನಗಳೂ ಇರಲಿಲ್ಲ. ಹೊಸಬರ ಚಿತ್ರಗಳು ಮೊದಲ ದಿನ ಒಂದು ಲಕ್ಷ ಗಳಿಕೆ ಕಾಣುವುದೂ ದುಸ್ತರವಾಗಿರುವ ಕಾಲದಲ್ಲಿ ಒಂಬತ್ತು ಲಕ್ಷ ಎಂಬುದು ಕಡಿಮೆ ಏನಲ್ಲ. ಆದರೆ ಬಹಳಷ್ಟು ಚಿತ್ರಗಳ ಮೊದಲ ದಿನದ ಗಳಿಕೆ, ನಿರ್ಮಾಪಕನ ಹಣದಿಂದ ಹರಿದ ಟಿಕೆಟ್‌ಗಳದ್ದೇ ಆಗಿರುತ್ತದೆ. ಹೀಗಾಗಿ ಅದನ್ನು ಚಿತ್ರದ ಬಂಡವಾಳಕ್ಕೆ ಅಥವಾ ಖರ್ಚಿನ ಲೆಕ್ಕಕ್ಕೆ ಸೇರಿಸಬೇಕಾಗುತ್ತದೆ.

ಎರಡನೆಯ ದಿನದಂದು ಚಿತ್ರಗಳು ಪ್ರೇಕ್ಷಕರಿಲ್ಲದೇ ಕ್ಯಾನ್ಸಲ್ ಆಗಿ, ಮೂರನೆಯ ದಿನಕ್ಕೆ ಮಸಣ ಸೇರುವುದು ಸದ್ಯದ ಕನ್ನಡ ಚಿತ್ರರಂಗದ ರೀತಿಯಾಗಿತ್ತು. ಆದರೆ ಪ್ರೇಮದ ಊರಲಿ ಚಿತ್ರದ ವಿಷಯಕ್ಕೆ ಬಂದರೆ, ಪವಾಡ ನಡೆದದ್ದೇ ಇಲ್ಲಿ.

ಮೊದಲನೆಯ ದಿನವೇ ಸಾಮಾನ್ಯ ಪ್ರೇಕ್ಷಕ ಚಿತ್ರದ ಬಗ್ಗೆ ಒಳ್ಳೆಯ ಮಾತನಾಡಲು ಶುರು ಮಾಡಿದ. ಬಾಯಿಂದ ಕಿವಿಗೆ, ಕಿವಿಯಿಂದ ಬಾಯಿಗೆ, ಬಾಯಿಂದ ಬಾಯಿಗೆ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಹರಿದಾಡಲು ಶುರುವಾದವು. ಎರಡನೆಯ ದಿನದ ಗಳಿಕೆ ಮೂವತ್ತು ಲಕ್ಷಕ್ಕೇರಿತು. ಓಹ್ ಈ ಸಿನಿಮಾಗೆ ಜನ ಬರುತ್ತಿದ್ದಾರೆ, ಮೆಚ್ಚಿಕೊಳ್ಳುತ್ತಿದ್ದಾರೆ ಅಂತ ಗೊತ್ತಾಗುತ್ತಿದ್ದಂತೆ, ಶೋಗಳ ಸಂಖ್ಯೆ ಹೆಚ್ಚಳವಾಯಿತು.

ಎಲ್ಲ ಶೋಗಳೂ ಭರ್ತಿಯಾಗತೊಡಗಿದವು. ವಾರಾಂತ್ಯದ ಹೊತ್ತಿಗೆ ಸಿನಿಮಾದ ಒಟ್ಟು ಗಳಿಕೆ ಕೋಟಿ ಮುಟ್ಟಿತ್ತು. ಅಲ್ಲಿಂದ ಮುಂದಿನದು ಅಕ್ಷರಶಃ ಯಶೋಗಾಥೆ. ಮೊದಲ ದಿನ ಅರವತ್ತು ಪ್ರದರ್ಶನಗಳನ್ನು ಕಾಣುತ್ತಿದ್ದ ಚಿತ್ರ ಹದಿನೆಂಟನೆಯ ದಿನಕ್ಕೆ ಬರೋಬ್ಬರಿ 1300 ಪ್ರದರ್ಶನಗಳನ್ನು ಕಾಣುತ್ತಿದೆ. ಮೊದಲ ದಿನ ಒಂಬತ್ತು ಲಕ್ಷ ಗಳಿಸಿದ್ದ ಚಿತ್ರದ ಹದಿನೆಂಟನೆಯ ದಿನದ ಕಲೆಕ್ಷನ್ ಸುಮಾರು ಒಂಬತ್ತು ಕೋಟಿ. ಕೇವಲ 18 ದಿನಗಳಲ್ಲಿ ಚಿತ್ರ ಗಳಿಸಿರುವುದು 65 ಕೋಟಿ!

ಇಂದಿನ ಟ್ರೆಂಡ್ ನೋಡಿದರೆ, ನೂರು ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದರೆ ಈ ಚಿತ್ರದ ಇಂಥ ದೊಡ್ಡ ಗೆಲುವಿಗೆ ಕಾರಣವೇನು? ನಿಜಕ್ಕೂ ಇದೊಂದು ಅದ್ಭುತ ಚಿತ್ರವಾ? ಪ್ರೇಕ್ಷಕರು ಹೇಳುತ್ತಿರುವ ಹಾಗೆ ಇದು ಮುಂಗಾರು ಮಳೆಯನ್ನೂ ಮೀರಿಸುವ ಚಿತ್ರವಾ? ಹಿಂದೆಂದೂ ಕನ್ನಡ ಪ್ರೇಕ್ಷಕ ನೋಡಿರದಂಥ ಚಿತ್ರವಾ? ಕನ್ನಡದಲ್ಲಿ ಕಾಣುತ್ತಿರುವ ಯಶಸ್ಸನ್ನು ಕಂಡು ಪ್ರೇಮದ ಊರಲಿ ತಂಡ, ತೆಲುಗಿಗೆ ಡಬ್ ಮಾಡಿ ಆಂಧ್ರದಲ್ಲಿ ಬಿಡುಗಡೆ ಮಾಡಿದೆ. ಆದರೆ ತೆಲುಗಿನಲ್ಲಿ ಒಂದು ವಾರದಲ್ಲಿ ಈ ಚಿತ್ರ ಗಳಿಸಿದ್ದು ಒಂದು ಕೋಟಿಗಿಂತ ಕಡಿಮೆ.

ಹಾಗಾದರೆ ಅಲ್ಲಿನ ಪ್ರೇಕ್ಷಕನಿಗೆ ಯಾಕೆ ಇದು ಚೂರೂ ರುಚಿಸಲಿಲ್ಲ? ಸೋಲಿನ ಪೋಮಾರ್ಟಂಗಿಂತ ಸಿನಿಮಾ ಪಂಡಿತರು, ಸಿನಿಮಾ ತಯಾರಕರು ಗೆಲುವಿನ ವಿಶ್ಲೇಷಣೆ ಮಾಡುವುದು ಅಗತ್ಯ. ಬಹಳಷ್ಟು ಮಂದಿ ತಮ್ಮ ಗೆಲುವಿನ ಫಾರ್ಮ್ ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಇದೇ ಕಾರಣದಿಂದ. ಪ್ರೇಮದ ಊರಲಿ ಚಿತ್ರದ ಗೆಲುವಿನ ರಹಸ್ಯ ಭೇದಿಸುವುದು ಈ ಹಂತದಲ್ಲಿ ಬಹಳ ಮುಖ್ಯವಾಗುತ್ತದೆ.

ಇದು ಕನ್ನಡ ಪ್ರೇಕ್ಷಕ ಪ್ಯಾನ್ ಇಂಡಿಯಾ ಮತ್ತು ಬಿಗ್ ಬಜೆಟ್ ಚಿತ್ರಗಳ ವಿರುದ್ಧ ತೋರಿದ ಸ್ಪಷ್ಟ ಜನಾದೇಶ. ಹಿಂಸೆ, ರಕ್ತಪಾತ, ಗನ್, ಮಚ್ಚುಲಾಂಗು, ಸುಲಭಕ್ಕೆ ಅರ್ಥವಾಗದ ನಿರೂಪಣೆ, ಎಲ್ಲ ಭಾಷೆಯ ನಟನಟಿಯರನ್ನು ತುಂಬಿ ಮಾಡುವ ಜಾತ್ರೆ, ಇವೆಲ್ಲದಕ್ಕೂ ಕೊಟ್ಟ ಕಪಾಳಮೋಕ್ಷ. ಇಡೀ ಭಾರತಕ್ಕೆ, ಇಡೀ ಜಗತ್ತಿಗೆ ಸಲ್ಲುವ ಚಿತ್ರ ಮಾಡಲು ಹೋಗಿ, ಯಾರಿಗೂ ಸಲ್ಲದಂಥ ಚಿತ್ರವಾಗುತ್ತಿವೆ ಸೋ ಕಾಲ್ಡ್ ಪ್ಯಾನ್ ಇಂಡಿಯಾ ಚಿತ್ರಗಳು. ‌

ಈ ಸಿನಿಮಾಗಳ ವಿರುದ್ಧದ ಸಿಟ್ಟನ್ನು ಪ್ರೇಮದ ಊರಲಿ ಎಂಬ ಚಿತ್ರವನ್ನು ಗೆಲ್ಲಿಸುವ ಮೂಲಕ ಪ್ರೇಕ್ಷಕ ತೋರಿಸಿದ್ದಾನೆ. ನಮಗೆ ಟಾಕ್ಸಿಕ್ ಥರದ ಚಿತ್ರ ಬೇಕಾಗಿಲ್ಲ. ವಿಕ್ರಾಂತ್ ರೋಣ, ಕಬ್ಜಾ, ಕೇಡಿ, ಮಾರ್ಟಿನ್ ಯಾವುದೂ ಬೇಕಾಗಿಲ್ಲ. ಕೆಜಿಎಫ್ ಕಾಂತಾರಗಳು ಅಪರೂಪಕ್ಕೊಮ್ಮೆ ಬಂದರಷ್ಟೇ ಚೆಂದ. ನಾವು ಹಸಿರು ನೋಡದೇ ಯಾವ ಕಾಲವಾಯ್ತು? ತೆರೆ ಮೇಲೆ ಬೆಳಕು ಕಾಣದೇ ಎಷ್ಟು ದಶಕಗಳಾದವು? ಒಂದು ಮುಗ್ಧ ಪ್ರೀತಿ, ಅನ್ಯೋನ್ಯ ಕುಟುಂಬ, ಗ್ರಾಮೀಣ ಸೊಗಡು ಇವನ್ನೆಲ್ಲ ಸಿನಿಮಾದಲ್ಲಿ ಕಾಣದೇ ಅದೆಷ್ಟು ದಿನಗಳಾದವು? ಥಿಯೇಟರಲ್ಲಿ ಸಿನಿಮಾ ನೋಡ್ತಾ ಕಣ್ಣೀರು ಹಾಕಿ ಎಷ್ಟು ದಿನಗಳಾಯ್ತು? ಕೊನೆಯ ಬಾರಿ ಅಪ್ಪ ಅಮ್ಮ ಅಜ್ಜಿ ತಾತ ಎಲ್ಲರನ್ನೂ ಸಿನಿಮಾಗೆ ಕರೆದೊಯ್ದದ್ದು ಯಾವಾಗ? ಹೀಗೆಲ್ಲ ಪ್ರೇಕ್ಷಕ ಅಂತರಂಗದಲ್ಲಿ ಮಾತನಾಡಿಕೊಂಡಾಗ ಸಿಕ್ಕಿದ್ದು ಪ್ರೇಮದ ಊರಲಿ ಚಿತ್ರ. ‌

ಕನ್ನಡ ಪ್ರೇಕ್ಷಕ ಒಂದು ಸರಳಾತಿ ಸರಳ ಚಿತ್ರಕ್ಕಾಗಿ ಅದೆಷ್ಟು ಬರಗೆಟ್ಟಿದ್ದ ಅಂದರೆ, ಟಾಕ್ಸಿಕ್‌ನ ಬೆನ್ನ ಈ ಚಿತ್ರ ಬರುತ್ತಿದ್ದಂತೆ ಇದನ್ನು ಗೆಲ್ಲಿಸಲೇಬೇಕು ಎಂದು ನಿರ್ಧರಿಸಿಬಿಟ್ಟಿದ್ದ. ನಮಗೆ ಇಷ್ಟು ಸಿಂಪಲ್ ಚಿತ್ರ ಸಾಕು ಗುರೂ ಅಂದುಬಿಟ್ಟ. ಕಿರುತೆರೆ ಧಾರಾವಾಹಿ ಮಾದರಿಯ ನಿರೂಪಣೆ, ಇಪ್ಪತ್ತೈದು ವರ್ಷಗಳ ಹಿಂದೆ ಬರುತ್ತಿದ್ದ ಚಿತ್ರಗಳಂಥ ಕಥೆ, ಸಾಧಾರಣ ನಟನೆ, ವಿಶೇಷವಿಲ್ಲದ ಛಾಯಾಗ್ರಹಣ, ಸುಮಾರಾದ ಸಂಗೀತ ಇವೆಲ್ಲ ಇಟ್ಟುಕೊಂಡೇ ಗೆಲ್ಲುತ್ತಿರುವ ಚಿತ್ರ ಪ್ರೇಮದ ಊರಲಿ. ಇದರ ಗೆಲುವಿರುವುದೇ ಅದರ ಸರಳತೆಯಲ್ಲಿ.

ಅಪ್ಪಟ ಕನ್ನಡತನದಲ್ಲಿ. ಚಿತ್ರದ ಹೆಗ್ಗಳಿಕೆ ಅಂದರೆ ಎಲ್ಲಿಯೂ ಪರಭಾಷೆಯ ಪ್ರಭಾವ ಕಾಣುವುದಿಲ್ಲ. ಕಥೆಗೆ ಅಗತ್ಯವಿರುವ ಆ ಒಂದೇ ಒಂದು ದೃಶ್ಯ ಹೊರತುಪಡಿಸಿದರೆ, ಕುಟುಂಬ ಸಮೇತ ನೋಡುವಾಗ ಮುಜುಗರವಾಗುವ ಯಾವುದೇ ಸೀನ್ ಇಲ್ಲ. ಹಾಡುಗಳು ಸಿನಿಮಾಗೆ ಭಾರವೆನಿಸುವುದಿಲ್ಲ. ಅನಗತ್ಯ ದೃಶ್ಯಗಳು ಇಲ್ಲವೇ ಇಲ್ಲ. ಸೆಕೆಂಡ್ ಇನ್ನಿಂಗ್ಸ್ ಆಡುತ್ತಿರುವ ರಂಗಾಯಣ ರಘು ಅವರದ್ದು ಕಲಾತ್ಮಕ ಮತ್ತು ಭಾವನಾತ್ಮಕ ಆಟ. ಅವರೇ ಚಿತ್ರದ ಹೀರೋ. ಮಿಕ್ಕವರೆಲ್ಲರದ್ದೂ ಪೋಷಕ ಪಾತ್ರ. ‌

ಬಹುತೇಕ ಸ್ಪೂನ್ ಫೀಡಿಂಗ್‌ನಂತೆ, ನಿರೀಕ್ಷೆಯಂತೆಯೇ ಸಾಗುವ ಕಥೆಯೇ ಸಿನಿಮಾದ ಶಕ್ತಿ. ಸೀರಿಯಲ್ ನೋಡುವ ಹೆಂಗಳೆಯರನ್ನು ಸೆಳೆದಿರುವುದೇ ಈ ಅಂಶ. ಓಟಿಟಿ ಸಿನಿಮಾಗಳನ್ನು, ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನೋಡಿ ಜಡ್ಡುಗಟ್ಟಿರುವ ಪ್ರೇಕ್ಷಕನಿಗೆ ಪ್ರೇಮದ ಊರಲಿ ನೋಡಿದಾಗ ಅಳು ಬಾರದಿರಬಹುದು. ಆದರೆ ಸೀರಿಯಲ್ ನೋಡುವ ಹೆಣ್ಣುಮಕ್ಕಳಿಗೆ ಅಳಿಸಲು ನಗಿಸಲು ಇದು ಟೇಲರ್ ಮೇಡ್ ಚಿತ್ರ. ಯಜಮಾನ, ಮುಂಗಾರು ಮಳೆ ಥರದ ಚಿತ್ರಗಳನ್ನು ನೋಡಿದ ನಂತರ ಥಿಯೇಟರ್‌ನಿಂದ ದೂರ ಉಳಿದಿದ್ದ ದೊಡ್ಡ ಸಂಖ್ಯೆಯ ಪ್ರೇಕ್ಷಕ ವರ್ಗ ಇಂದು ಮತ್ತೆ ಸಿನಿಮಾ ಥಿಯೇಟರ್ ಹೊಕ್ಕಿದೆ. ಅವರು ಬಯಸುವ ಚಿತ್ರ ಮತ್ತೆ ಸಿಕ್ಕಂತಾಗಿದೆ.

ಚಿತ್ರದ ಶೀರ್ಷಿಕೆಯಿಂದ ನಿರೂಪಣೆಯ ತನಕ ಎಲ್ಲವೂ ಅಂದಿನ ಯಜಮಾನ, ಮುಂಗಾರು ಮಳೆಯ ಕಾಲzಗಿರುವುದೇ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆದಿರುವುದಕ್ಕೆ ಕಾರಣ. ಹಾಗಂತ ಮತ್ತೆ ಇದೇ ಟ್ರೆಂಡ್ ಅನುಸರಿಸಿದರೆ, ಆ ಸಿನಿಮಾಗಳಿಗೆ ಪ್ರೇಕ್ಷಕ ಬರುತ್ತಾನಾ? ಇಲ್ಲ. ಆದರೆ ಬೇಸಿಕ್ ಗಳು ಇವೇ ಆಗಿದ್ದು, ಈ ಬುನಾದಿಯ ಮೇಲೆ ಏನೇ ಆಟ ಆಡಿದರೂ ಅವು ಗೆಲ್ಲುತ್ತವೆ ಎಂಬ ಸತ್ಯ ಚಿತ್ರರಂಗ ಅರ್ಥ ಮಾಡಿಕೊಳ್ಳಬೇಕು.

ಗೆಲುವಿಗೆ ಸಿದ್ಧಸೂತ್ರ ಎಂಬುದಿಲ್ಲ. ಆದರೆ ಕುಟುಂಬವನ್ನು ಎಳೆತರುವ ಅಂಶಗಳು, ಭಾವುಕತೆ ಯನ್ನು ಚಿವುಟುವ ದೃಶ್ಯಗಳು, ಗಂಟಲುಬ್ಬಿಸುವ, ಕಣ್ಣುತೇವಗೊಳಿಸುವ ವಿಷಯಗಳು, ಪಂಚೇಂದ್ರಿಯಗಳಿಗೆ ಹಿತಾನುಭವ ಕೊಡುವ ವಸ್ತು ಚಿತ್ರದಲ್ಲಿದ್ದಿದ್ದೇ ಆದರೆ ಚಿತ್ರ ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಇದನ್ನು ಚಿತ್ರರಂಗ ಅರ್ಥಮಾಡಿಕೊಳ್ಳಬೇಕಿದೆ.

ತೆಲುಗು ತಮಿಳು ಮಲಯಾಳಂ ರಂಗದಲ್ಲಿ ಫೀಲ್ ಗುಡ್ ಚಿತ್ರಗಳಿಗೆ ಮತ್ತು ಸರಳ ಮನರಂಜನಾ ತ್ಮಕ ಚಿತ್ರಗಳಿಗೆ ಕೊರತೆ ಇಲ್ಲ. ಹೀಗಾಗಿ ಅವರಿಗೆ ಪ್ರೇಮದ ಊರಲಿ ಚಿತ್ರ ವಿಶೇಷ ಅನಿಸುವುದಿಲ್ಲ. ಕನ್ನಡ ಚಿತ್ರರಂಗ ಕಳೆದ ಐದಾರು ವರ್ಷಗಳಿಂದ ಅಥವಾ ಒಂದೂವರೆ ದಶಕಗಳಿಂದ ಫೀಲ್ ಗುಡ್ ಚಿತ್ರಗಳಿಲ್ಲದೇ ಬರಗೆಟ್ಟಿತ್ತು. ಅಪ್ಪಟ ಕನ್ನಡದ ಕುಟುಂಬಸಮೇತ ನೋಡುವ ಚಿತ್ರಕ್ಕಾಗಿ ಚಾತಕಪಕ್ಷಿಯಂತೆ ಕಾದಿತ್ತು.

ಹೀಗಾಗಿ ಪ್ರೇಮದ ಊರಲಿ ಗೆದ್ದಿದೆ. ತಲೆಮೇಲೆ ಹೊತ್ತು ಮೆರೆಸಲಾಗುತ್ತಿದೆ. ಮುಂಗಾರುಮಳೆ ಯನ್ನೂ ಮೀರಿಸುವ ಚಿತ್ರವೆಂದು ಅತಿರೇಕದ ಹೊಗಳಿಕೆ ನೀಡಲಾಗುತ್ತಿದೆ. ಕನ್ನಡದಲ್ಲಿ ಮುಂಗಾರು ಮಳೆಯ ನಂತರ ಒಳ್ಳೆಯ ಕೌಟುಂಬಿಕ ಪ್ರೇಮ ಕಥೆಯ ಚಿತ್ರ ಅಥವಾ ಫೀಲ್ ಗುಡ್ ಚಿತ್ರ ಬಂದೇ ಇಲ್ಲವೇ? ಬಂದಿದೆ.

ಆದರೆ ಪ್ರೇಕ್ಷಕ ಅವುಗಳನ್ನು ನೋಡುವ ಪ್ರಯತ್ನ ಕೂಡ ಮಾಡಿರಲಿಲ್ಲ. ಆದರೆ ಟಾಕ್ಸಿಕ್ ಚಿತ್ರ ಪ್ರೇಕ್ಷಕನಲ್ಲಿ ಒಂದು ಕಿಚ್ಚು ಮೂಡಿಸಿತು. ತನಗೇನು ಬೇಕು ಎಂದು ಸ್ಪಷ್ಟವಾಗಿ ಹೇಳಲು ಅವನಿಗೊಂದು ಚಿತ್ರ ಬೇಕಿತ್ತು. ಪ್ರೇಮದ ಊರಲಿ ಸಿಕ್ಕಿತು. ಇದು ಟಾಕ್ಸಿಕ್ ಕನ್ನಡ ಚಿತ್ರರಂಗಕ್ಕೆ ಮಾಡಿದ ಅತಿ ದೊಡ್ಡ ಉಪಕಾರ. ಟಾಕ್ಸಿಕ್ ಕೆಟ್ಟ ಚಿತ್ರವಲ್ಲದಿರಬಹುದು. ಆದರೆ ಪ್ರೇಕ್ಷಕನಿಗೆ ಅಷ್ಟೆಲ್ಲ ಹೆವಿ ಕಂಟೆಂಟ್ ಬೇಕಿಲ್ಲ ಎಂಬುದನ್ನು ಅರ್ಥ ಮಾಡಿಸಿದ ಚಿತ್ರ. ಜಗತ್ತನ್ನು ಮೆಚ್ಚಿಸುವ ಮುನ್ನ ಮನೆಯವರನ್ನು ಮೆಚ್ಚಿಸು ಎಂಬುದನ್ನು ತಿಳಿಸಿಕೊಟ್ಟ ಚಿತ್ರ. ಪ್ರೇಮದ ಊರಲಿ ಚಿತ್ರ ನೋಡುವಾಗ, ಇದೇ ರಂಗಾಯಣ ರಘು ನಟಿಸಿದ್ದ ಯಶ್ ನಾಯಕತ್ವದ ಮೊದಲ ಸಲ ಎಂಬ ಚಿತ್ರ ಪದೇಪದೆ ನೆನಪಾಗಿದ್ದು ಹೌದು.

ಇಂದಿಗೆ ಅದು ಮರು ಬಿಡುಗಡೆಯಾದರೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದರೂ ಅಚ್ಚರಿ ಇಲ್ಲ. ಸಿನಿಮಾ ಎಂಬುದು ಮೆದುಳಿಗಿಂತ ಹೆಚ್ಚು ಹೃದಯಕ್ಕೆ ಸಂಬಂಧಪಟ್ಟ ವಿಷಯ ಎಂಬುದು ಅಂತಿಮ ಸತ್ಯ. ಗೆಲುವಿನ ಫಾರ್ಮುಲಾ ಇರುವುದೂ ಆ ಸತ್ಯದಲ್ಲಿಯೇ.

ನವೀನ್‌ ಸಾಗರ್‌

View all posts by this author