#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Thimmanna Bhagwat Column: ಚಿಕಿತ್ಸೆಗೆ ಹಣವಿಲ್ಲ ವೆಂದರೆ ಯಮರಾಜ ಕಾಯುವನೇ ?

ಅಂಥ ವ್ಯಕ್ತಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಒದಗಿಸುವುದು ಕಡ್ಡಾಯವಲ್ಲ. ಗಾಯಾಳುಗಳಿಗೆ ವೈದ್ಯಕೀಯ ನೆರವಿನ ನಿರಾಕರಣೆಯನ್ನು ತಡೆಯುವುದು, ನೆರವಿಗೆ ಧಾವಿಸುವ ದಾರಿಹೋಕರಿಗೆ

Profile Ashok Nayak Dec 16, 2024 8:16 AM
ನ್ಯೂನ ಕಾನೂನು
ತಿಮ್ಮಣ್ಣ ಭಾಗ್ವತ್‌, ಮೂರೂರು
ವ್ಯಕ್ತಿಯೊಬ್ಬ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದನ್ನು ಕಂಡ ನಾಗರಿಕರು ಕಾಳಜಿ ವಹಿಸಿ ಕೂಡಲೇ ಸಮೀಪದ ಆಸ್ಪತ್ರೆಗೆ ಸೇರಿಸಿದರೆ ಆತನ ಪ್ರಾಣವನ್ನು ಉಳಿಸಬಹುದು. ಉಳಿದವರಿಗೆ ಆತ ಅಪರಿಚಿತನಿರಬಹುದು, ಆದರೆ ಪ್ರೀತಿಪಾತ್ರರಿಗೆ ಮತ್ತು ಅವಲಂಬಿತರಿಗೆ ಆತನ ಜೀವ ಅಮೂಲ್ಯ ವಾದದ್ದು. ದುಡಿಯುವ ವ್ಯಕ್ತಿಯೊಬ್ಬ ಮೃತಪಟ್ಟರೆ ಇಡೀ ಕುಟುಂಬವೇ ಬೀದಿಪಾಲಾಗುವ ಸಂದರ್ಭ ಗಳಿರುತ್ತವೆ.
ಅಪಘಾತ ಅಥವಾ ಇನ್ನಾವುದೇ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ‘ಸುವರ್ಣ ಗಳಿಗೆ’ (Golden Hour) ಎನ್ನಲಾ ಗುವ ಒಂದು ಗಂಟೆಯೊಳಗಾಗಿ ತುರ್ತು ಚಿಕಿತ್ಸೆ ನೀಡಿದರೆ, ಬಹಳಷ್ಟು ಸಲ ಸಾವನ್ನು ತಪ್ಪಿಸಬಹುದು. ಅಂಥ ವೇಳೆ ಹಣವಿಲ್ಲವೆಂದೋ ಅಥವಾ ಪೊಲೀಸ್ ಕೇಸ್‌ಗೆ ಹೆದರಿಯೋ, ಅಪಘಾತವನ್ನು ಕಂಡ ದಾರಿಹೋಕರು ಅಥವಾ ವೈದ್ಯರು ನಿರ್ಲಕ್ಷಿಸಿದರೆ ಅಮೂಲ್ಯಜೀವವನ್ನು ಉಳಿಸಲಾಗುವುದಿಲ್ಲ.
ಕೆಲವೊಮ್ಮೆ ವೈದ್ಯಕೀಯ ವ್ಯವಸ್ಥೆಯಿಂದ ಹಣದಾಹ ಮತ್ತು ಅಮಾನವೀಯ ವರ್ತನೆ ಹೊಮ್ಮುವುದಿದೆ, ಇದು ಬಹುಚರ್ಚಿತ ವಿಷಯ. ವೈದ್ಯರ ನಿಷ್ಕಾಳಜಿ ಮತ್ತು ನಿರ್ದಯತೆಯಿಂದಾಗಿ ಆಗುವ ಸಾವು ಅಕ್ಷಮ್ಯ. ಆ ನಿರ್ದಯತೆ ಇನ್ನೂ ಕ್ರೂರವೆನಿಸುವುದು, ರೋಗಿ ಹಣ ನೀಡಿಲ್ಲವೆಂದು ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಸಾವು ಸಂಭವಿಸಿದಾಗ.ಇನ್ನೂ ೨೦ ವರ್ಷ ದಾಟಿರದ ಸುಮಂತ್ ಮುಖರ್ಜಿ ಬಿ.ಟೆಕ್ ಮಾಡಿ ಬಾಳಿನಲ್ಲಿ ಏನೆಲ್ಲ ಸಾಧಿಸಬೇಕೆಂಬ ಕನಸುಕಂಡಿದ್ದ.
ಕೋಲ್ಕತ್ತದಲ್ಲಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ಬರುವಾಗ, ಟ್ರಾಮ್ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿಗಾಯಗೊಂಡ. ರಸ್ತೆಯಲ್ಲಿ ಸೇರಿದ್ದ ಜನರು ಅವನನ್ನು ಸನಿಹದ ರುಬಿ ಜನರಲ್ ಆಸ್ಪತ್ರೆಗೆ ಕರೆ ತಂದರು. ಅಲ್ಲಿಗೆಬರುವಾಗ ಸುಮಂತ್ ಎಚ್ಚರವಾಗಿಯೇ ಇದ್ದ. ತನ್ನ ಚಿಕಿತ್ಸೆಗೆಂದು 65000 ರುಪಾಯಿವರೆಗೆ ಆರೋಗ್ಯ ವಿಮೆ ಯಿರುವ ಮೆಡಿಕ್ಲೇಮ್ ಪಾಲಿಸಿಯನ್ನು ಆಸ್ಪತ್ರೆಯ ಸಿಬ್ಬಂದಿಗೆ ತೋರಿಸಿದ. ಎಷ್ಟೇ ಬಿಲ್ ಆದರೂ ತುಂಬ ಲಾಗುವುದು, ದಯವಿಟ್ಟು ಚಿಕಿತ್ಸೆ ಕೊಡಿ ಎಂದು ಆತನೇ ವಿನಂತಿಸಿದ.
ಚಿಕಿತ್ಸೆ ಪ್ರಾರಂಭಿಸಲು ವೈದ್ಯರು ಒಪ್ಪಿದರಾದರೂ, ಚಿಕಿತ್ಸಾ ವೆಚ್ಚ ಮತ್ತು ಇಂಜೆಕ್ಷನ್ ಸಲುವಾಗಿ 15000 ರು. ಪಾವತಿಸುವಂತೆ ತಿಳಿಸಿದರು. ಸುತ್ತಲಿನವರು ಸೇರಿ 2000 ರು. ಸಂಗ್ರಹಿಸಿ ಕೊಟ್ಟು, “ಚಿಕಿತ್ಸೆ ಕೊಡಿ, ರೋಗಿಯ ಪಾಲಕರನ್ನು ಸಂಪರ್ಕಿಸಿ ಉಳಿದ ಹಣವನ್ನು ಪಾವತಿಸುತ್ತೇವೆ" ಎಂದರೂ ಆಸ್ಪತ್ರೆಯ ಸಿಬ್ಬಂದಿ ಸ್ಪಂದಿಸಲಿಲ್ಲ. ಪರಿಣಾಮ, ಚಿಕಿತ್ಸೆಯನ್ನು ನಿಲ್ಲಿಸಲಾಯಿತು. ‘ನಾರಾಯಣೋ ಹರಿಃ’ ಆಗಬೇಕಿದ್ದ ವೈದ್ಯರೇ ‘ಯಮರಾಜನ ಸೋದರ’ರಾದರು. ಬಾಳಿ ಬದುಕಬೇಕಿದ್ದ ಆ ಯುವಕ ಚಿಕಿತ್ಸೆ ಸಿಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ.
ಧಾವಿಸಿ ಬಂದ ತಂದೆ-ತಾಯಿ ತಾವು ತಂದ ಹಣವನ್ನು ವೈದ್ಯರಿಗೆ ತೋರಿಸಿ, “ಇನ್ನಷ್ಟು ಹಣ ಬೇಕಾದರೂ ಕೊಡು ತ್ತೇವೆ, ಮಗನ ಜೀವವನ್ನು ಮರಳಿ ತನ್ನಿ" ಎಂದು ರೋದಿಸಿದರು. ಒಮ್ಮೆ ಹೋದ ಜೀವ ಎಲ್ಲಿಂದ ಬರಬೇಕು?!ಇದ್ದೊಬ್ಬ ಮಗನ ಸಾವಿನಿಂದಾಗಿ ತಾಯಿ ಮಾನಸಿಕ ರೋಗಿಯಾದರೆ, ಸ್ವತಃ ವೈದ್ಯರಾದ ತಂದೆ ಪ್ರವತ್‌ಕುಮಾರ್ಈ ಆಘಾತ ತಡೆಯಲಾಗದೆ ತಾವು ನಡೆಸುತ್ತಿದ್ದ ವೈದ್ಯಕೀಯ ಸಂಶೋಧನೆಯನ್ನೇ ನಿಲ್ಲಿಸಬೇಕಾಗಿ ಬಂತು.
ಆಸ್ಪತ್ರೆಯವರ ಅಮಾನುಷ ವರ್ತನೆಯಿಂದ ನೊಂದ ಅವರು ಗ್ರಾಹಕ ವೇದಿಕೆಯಲ್ಲಿ ದಾವೆ ದಾಖಲಿಸಿದರು. ಅಂತಿಮವಾಗಿ, ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಮುಂದೆ ಮೇಲ್ಮನವಿ ವಿಚಾರಣೆಗೆ ಬಂತು. ‘ಪ್ರವತ್‌ಕುಮಾರ್ ಮುಖರ್ಜಿ ವರ್ಸಸ್ ರುಬಿ ಜನರಲ್ ಆಸ್ಪತ್ರೆ’ ಎಂಬ ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ನ್ಯಾ. ಎಂ.ಬಿ. ಶಾಹ ಅವರು, “ಸಾವು ರೋಗಿಯ ಬಾಗಿಲು ತಟ್ಟುತ್ತಿರುವಾಗ ಶುಲ್ಕ ತುಂಬಿಲ್ಲ ವೆಂದು ವೈದ್ಯರು ಚಿಕಿತ್ಸೆಯನ್ನು ತಡೆಹಿಡಿಯಬಹುದೇ, ಖಂಡಿತ ಇಲ್ಲ. ಶುಲ್ಕದ ವಸೂಲಿಯನ್ನು ಮುಂದೂಡ ಬಹುದು, ಆದರೆ ಸಾವನ್ನಲ್ಲ ಮತ್ತು ಜೀವವುಳಿಸಲು ಬೇಕಾದ ಚಿಕಿತ್ಸೆಯನ್ನಲ್ಲ" ಎಂದು ಉದ್ಗರಿಸಿದರು. ಆಸ್ಪತ್ರೆ ಯವರ ನಿರ್ಲಕ್ಷ್ಯ, ಹೊಣೆಗೇಡಿತನ ಮತ್ತು ಸೇವೆಯ ನ್ಯೂನತೆಯಿಂದಾಗಿ ಮೃತನ ಪಾಲಕರು ಅನುಭವಿಸ ಬೇಕಾಗಿ ಬಂದ ತೀವ್ರ ಮಾನಸಿಕ ವೇದನೆ, ಆರ್ಥಿಕ ನಷ್ಟ ಇವೆಲ್ಲವನ್ನೂ ಗಮನಿಸಿದ ಆಯೋಗವು 10 ಲಕ್ಷ ರು. ಪರಿಹಾರ ವನ್ನು ನೀಡುವಂತೆ ಆಸ್ಪತ್ರೆಗೆ ಆದೇಶಿಸಿತು.
ಅಪಘಾತವಾದಾಗ ಗಾಯಾಳುಗಳನ್ನು ತುರ್ತು ಚಿಕಿತ್ಸೆಗೆಂದು ಸಮೀಪದ ಖಾಸಗಿ ಆಸ್ಪತ್ರೆಗೆ ಒಯ್ದರೆ, ಹಣವಿಲ್ಲ ವೆಂದೋ ಅಥವಾ ಪೊಲೀಸ್ ವಿಚಾರಣೆಗೆ ಅಂಜಿಯೋ ಸರಕಾರಿ ಆಸ್ಪತ್ರೆಗೇ ಒಯ್ಯಲು ಹೇಳುತ್ತಾರೆ. ದೂರದ ಸರಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಗಾಯಾಳು ಅಸುನೀಗುವ ಸಾಧ್ಯತೆಯೇ ಹೆಚ್ಚು. ಇಂಥದೇ ಘಟನೆಗಳಿಗೆ ಸಂಬಂಧಿಸಿದ ‘ಪರಮಾನಂದ ಕಟಾರಾ ವರ್ಸಸ್ ಭಾರತ ಸರಕಾರ’ ಮತ್ತು ‘ಪಶ್ಚಿಮ ಬಂಗಾ ಖೇಲ್ ಮಜ್ದೂರ್ ಸಮಿತಿ’ ವರ್ಸಸ್ ‘ಪಶ್ಚಿಮ ಬಂಗಾಳ ಸರಕಾರ’ ಎಂಬ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತುರ್ತು ಚಿಕಿತ್ಸೆಯ ನಿರಾಕರಣೆಯ ವಿರುದ್ಧ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.
“ಅಪಘಾತಕ್ಕೊಳಗಾಗಿ ವೈದ್ಯಕೀಯ ನೆರವಿಗಾಗಿ ಕರೆ ತರಲ್ಪಡುವ ವ್ಯಕ್ತಿಯ ಜೀವ ಉಳಿಸಬೇಕಾದ್ದು ವೈದ್ಯರ, ಪೊಲೀಸರ ಮತ್ತು ಆ ವೇಳೆ ಉಪಸ್ಥಿತರಿರುವ ನಾಗರಿಕರ ಪ್ರಾಥಮಿಕ ಜವಾಬ್ದಾರಿ. ಗಾಯಾಳುವು ಮುಗ್ಧನೋ,ಕ್ರಿಮಿನಲ್ ಅಪರಾಧಿಯೋ ಎಂಬುದು ಚಿಕಿತ್ಸೆಯ ಸಂದರ್ಭದಲ್ಲಿ ಪ್ರಸ್ತುತವಲ್ಲ. ಇದು ಖಾಸಗಿ ಆಸ್ಪತ್ರೆಗಳಿಗೂಅನ್ವಯಿಸುತ್ತದೆ. ಕ್ರಿಮಿನಲ್ ಕಾಯ್ದೆಯಡಿ ಕೈಗೊಳ್ಳಬೇಕಾದ ಕ್ರಮಗಳೇನಾದರೂ ಇದ್ದಲ್ಲಿ, ಅದನ್ನು ನಂತರನೆರವೇರಿಸಬೇಕೇ ಹೊರತು, ಜೀವ ಉಳಿಸುವ ಪ್ರಕ್ರಿಯೆಗೆ ಆ ಉಪಕ್ರಮಗಳು (procedures) ಅಡ್ಡಿಯಾಗಬಾರದು.ಪೊಲೀಸರು ಬಂದು ಎಫ್ಐ‌ಆರ್ ದಾಖಲಿಸುವವರೆಗೆ ಗಾಯಾಳುವಿನ ಚಿಕಿತ್ಸೆಗೆ ಮುಂದಾಗಬಾರದು ಎಂಬ ಯಾವನಿಬಂಧನೆಯೂ ಭಾರತೀಯ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಅಥವಾ ಮೋಟರ್ ವಾಹನಗಳ ಕಾಯ್ದೆ ಗಳಲ್ಲಿಲ್ಲ.
ಇಂಥ ಪ್ರಕರಣಗಳಲ್ಲಿ ವೈದ್ಯ ವೃತ್ತಿಯಲ್ಲಿರುವವರಿಗೆ ಪೊಲೀಸರಿಂದ ಅಥವಾ ವಕೀಲರಿಂದ ಯಾವುದೇ ಕಿರಿಕಿರಿ, ಶೋಷಣೆ ಆಗದಂತೆ ಸಂಬಂಧಿತ ಕಾಯ್ದೆಗಳಿಗೆ ಅವಶ್ಯ ತಿದ್ದುಪಡಿ ತರಬೇಕಾದದ್ದು ಸರಕಾರದ ಕರ್ತವ್ಯ" ಎಂಬ ಆದೇಶಗಳನ್ನು ಸುಪ್ರೀಂಕೋರ್ಟ್ ನೀಡಿತು.
ಪವಿತ್ರ ಬೈಬಲ್‌ನ Gospel of Luke (10:25-37)ನಲ್ಲಿ ಹೀಗೊಂದು ಉಲ್ಲೇಖವಿದೆ: ಒಬ್ಬ ವ್ಯಕ್ತಿಯನ್ನು ದರೋಡೆ ಕೋರರು ಥಳಿಸಿ ಗಾಯಗೊಳಿಸಿ ವಿವಸ್ತ್ರನನ್ನಾಗಿಸಿ ದಾರಿಯಂಚಿಗೆ ಎಸೆದುಹೋಗುತ್ತಾರೆ. ಆ ದಾರಿಯಲ್ಲೇ ಸಾಗುತ್ತಿ ರುವ ಒಬ್ಬ ಪಾದ್ರಿ ಮತ್ತು ಅವರ ಸಹಾಯಕ, ಆ ಗಾಯಾಳುವನ್ನು ನೋಡಿಯೂ ಸುಮ್ಮನೆ ಹೋಗುತ್ತಾರೆ. ಆದರೆ ‘ಪರೋಪಕಾರಿ ದಾರಿಹೋಕ’ನೊಬ್ಬ (Good Samaritan) ಗಾಯಾಳುವನ್ನು ಉಪಚರಿಸಿ, ವೈದ್ಯರಲ್ಲಿಗೆ ಕರೆತಂದು ಜೀವ ಉಳಿಸಲು ಕಾರಣನಾಗುತ್ತಾನೆ. ಈ ಘಟನೆಯನ್ನು ವಿವರಿಸಿದ ಯೇಸುಕ್ರಿಸ್ತರು, “ಅವನು ಸಮೇರಿಟನ್ (ಕ್ರೈಸ್ತನಲ್ಲದವ) ಆದರೂ, ಆತನೇ ನಿಜವಾದ ಮಿತ್ರನೇ ಹೊರತು, ಸಹಾಯಮಾಡದ ಪಾದ್ರಿ ಅಥವಾ ಅವರ ಸಹಾಯಕರಲ್ಲ" ಎಂದು ಉಪದೇಶಿಸುತ್ತಾರೆ.
Parable of Good Samaritan ಎಂದು ಕರೆಯಲ್ಪಡುವ ಈ ನೀತಿಕಥೆಯು, ಅಪಘಾತ ಅಥವಾ ಇತರ ತುರ್ತು ಚಿಕಿತ್ಸೆಯ ಅವಶ್ಯಕತೆಯಿರುವಾಗ ನೆರವಿಗೆ ಧಾವಿಸುವ ನೈತಿಕ ಜವಾಬ್ದಾರಿಯನ್ನು ವಿವರಿಸುತ್ತದೆ. Law of Good Samaritan ಎಂಬ ಹೆಸರು ಬರಲು ಈ ದೃಷ್ಟಾಂತವೇ ಕಾರಣವಾಗಿರಬಹುದು. ವ್ಯಕ್ತಿಯೊಬ್ಬ ಅಪಘಾತ ದಿಂದ ತೀವ್ರವಾಗಿ ಗಾಯಗೊಂಡಿದ್ದನ್ನು ಕಂಡ ನಾಗರಿಕರು ಕಾಳಜಿ ವಹಿಸಿ ಕೂಡಲೇ ಸಮೀಪದ ಆಸ್ಪತ್ರೆಗೆ ಸೇರಿಸಿದರೆ ಆ ವ್ಯಕ್ತಿಯ ಪ್ರಾಣವನ್ನು ಉಳಿಸಬಹುದು. ಉಳಿದವರಿಗೆ ಆತ ಅಪರಿಚಿತನಿರಬಹುದು, ಆದರೆ ಪ್ರೀತಿಪಾತ್ರರಿಗೆ ಮತ್ತು ಅವಲಂಬಿತರಿಗೆ ಆತನ ಜೀವ ಅಮೂಲ್ಯವಾದದ್ದು.
ದುಡಿಯುವ ವ್ಯಕ್ತಿಯೊಬ್ಬ ಮೃತಪಟ್ಟರೆ ಇಡೀ ಕುಟುಂಬವೇ ಬೀದಿ ಪಾಲಾಗುವ ಸಂದರ್ಭಗಳಿರುತ್ತವೆ. ಆದರೆಅಪಘಾತವಾದಾಗ ಗಾಯಾಳುಗಳಿಗೆ ನೆರವಾಗಲು ಜನ ಹಿಂದೇಟು ಹಾಕುತ್ತಾರೆ. ನೆರವಾಗಲು ಹೋಗಿ ಅನವಶ್ಯಕಖರ್ಚು, ಪೊಲೀಸರ ಕಿರಿಕಿರಿ ಮತ್ತು ಗಾಯಾಳುವನ್ನು ಆಸ್ಪತ್ರೆಗೆ ಒಯ್ಯುವಾಗ ಸಂಭವಿಸಬಹುದಾದ ಸಾವು ಇತ್ಯಾದಿಸಾಧ್ಯತೆಗಳಿಂದಾಗಿ ಆ ಉಸಾಬರಿಯೇ ಬೇಡವೆಂದು ನೋಡಿಯೂ ನೋಡದಂತೆ ಸುಮ್ಮನೆ ಹೋಗಿಬಿಡುವವರೇ ಜಾಸ್ತಿ.
‘ಸೇವ್ ಲೈಫ್‌ ಫೌಂಡೇಷನ್ ವರ್ಸಸ್ ಭಾರತ ಸರಕಾರ’ ಎಂಬ ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಗಾಯಾಳುಗಳ ಸಹಾಯಕ್ಕೆ ಧಾವಿಸುವ ‘ಪರೋಪಕಾರಿ ದಾರಿಹೋಕ’ರ ರಕ್ಷಣೆಗೆಂದು ಮತ್ತು ಅವರಿಗೆ ಅನವಶ್ಯಕ ಕಿರುಕುಳವಾಗುವುದನ್ನು ತಪ್ಪಿಸಲೆಂದು ಕಾಯ್ದೆಯ ಚೌಕಟ್ಟನ್ನು ರೂಪಿಸಬೇಕೆಂದು ಆದೇಶಿಸಿತು. ಇದರನ್ವಯ ಭಾರತ ಸರಕಾರ ಈ ನಿಟ್ಟಿನಲ್ಲಿ ಅಧಿಸೂಚನೆಗಳನ್ನು ಹೊರಡಿಸಿತು. ಅತಿವಿರಳ ನಿದರ್ಶನವಾಗಿ, ಸಂವಿಧಾನದ ೩೨ ಮತ್ತು ೧೪೨ನೇ ವಿಧಿಯನ್ವಯ ಪ್ರದತ್ತ ಅಧಿಕಾರವನ್ನು ಉಪಯೋಗಿಸಿ ಸದರಿ ಅಧಿಸೂಚನೆ ಗಳನ್ನು ‘ಸುಪ್ರೀಂಕೋರ್ಟ್ ವಿಧಿಸಿದ ಕಾನೂನು’ (Law declared by the Supreme Court) ಎಂದು ಆದೇಶಿಸಿತು.
ಈ ಅಧಿಸೂಚನೆಯ ಅಂಶಗಳನ್ನು ವಿವಿಧ ರಾಜ್ಯಗಳಲ್ಲಿ Good Samaritans Act ರೂಪದಲ್ಲಿ ಅಳವಡಿಸಲಾಯಿತು. ಉದಾಹರಣೆಗೆ, Karnataka State Good Samaritan and Medical professionals (Protection and Regulationduring Emergency Situation) Act. ‘ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ 2019’ರ ಹೊಸ ಸೆಕ್ಷನ್ 134 (ಎ) ಅನ್ವಯ, ಗಾಯಾಳುವಿಗೆ ತುರ್ತು ಚಿಕಿತ್ಸೆ ಒದಗಿಸುವ ಅಥವಾ ಇನ್ನಿತರ ಸಹಾಯ ನೀಡುವ ಸಂದರ್ಭಗಳಲ್ಲಿ, ಅಂಥ ಪರೋಪಕಾರಿಯಿಂದ ಆಗಬಹುದಾದ ಆಕಸ್ಮಿಕ ಅಜಾಗರೂಕತೆ ವಿಷಯದಲ್ಲಿ ಸಿವಿಲ್ ಅಥವಾ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳುವಂತಿಲ್ಲ.
ಅಂಥ ವ್ಯಕ್ತಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಒದಗಿಸುವುದು ಕಡ್ಡಾಯವಲ್ಲ. ಗಾಯಾಳುಗಳಿಗೆ ವೈದ್ಯಕೀಯ ನೆರವಿನ ನಿರಾಕರಣೆಯನ್ನು ತಡೆಯುವುದು, ನೆರವಿಗೆ ಧಾವಿಸುವ ದಾರಿಹೋಕರಿಗೆ ಮತ್ತು ಚಿಕಿತ್ಸೆ ನೀಡುವ ವೈದ್ಯರಿಗೆ ಅನವಶ್ಯಕ ಪೊಲೀಸ್ ವಿಚಾರಣೆ, ಕೋರ್ಟ್ ಸಾಕ್ಷ್ಯ ಮುಂತಾದ ಕಿರಿಕಿರಿಗಳನ್ನು ತಪ್ಪಿಸಿ, ಅವರನ್ನು ಉತ್ತೇಜಿಸುವುದು ಈ ಎಲ್ಲ ಉಪಕ್ರಮಗಳ ಉದ್ದೇಶವಾಗಿದೆ.
ಇಷ್ಟೆಲ್ಲ ಕಾನೂನು ವ್ಯವಸ್ಥೆಯನ್ನು ಒದಗಿಸಲಾಗಿದ್ದರೂ, ಅಪಘಾತವಾಗಿ ರಸ್ತೆಯಲ್ಲಿ ಬಿದ್ದವರ ನೆರವಿಗೆ ಬಹುತೇಕಸಂದರ್ಭಗಳಲ್ಲಿ ಯಾರೂ ಬರುವುದಿಲ್ಲ ಎಂಬುದು ಕಹಿವಾಸ್ತವ. ಸಾಲುಸಾಲು ವಾಹನಗಳಿದ್ದರೂ, ಆಂಬುಲನ್ಸ್ಬರುವವರೆಗೆ ಆ ವ್ಯಕ್ತಿಯನ್ನು ಯಾರೂ ಮುಟ್ಟಲು ಹೋಗುವುದಿಲ್ಲ. ನಮ್ಮ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಎಷ್ಟೊಂದು ಹದಗೆಟ್ಟಿದೆಯೆಂದರೆ, ನೆರವಾಗಲು ಹೋದವರನ್ನೇ ಅಪರಾಽಯೆಂಬಂತೆ ಅಲೆದಾಡಿಸುವಪ್ರಕರಣಗಳೂ ಇರಬಹುದು.
ವೈದ್ಯರಂತೂ ‘ಮೋಟರ್ ವೆಹಿಕಲ್ ಆಕ್ಸಿಡೆಂಟ್ ಪ್ರಕರಣ’ ಎಂದರೆ ಹೆದರುವಷ್ಟು ಕೆಟ್ಟ ಸ್ಥಿತಿ ಇದೆ. ಪೊಲೀಸರಲ್ಲದೆ ವಕೀಲರು, ವಿಮಾ ಕಂಪನಿಯವರು, ಮೃತರ ಸಂಬಂಧಿಗಳು ಎಲ್ಲರೂ ಅವರನ್ನು ಕಾಡಿಸುವವರೇ. ದಿನೇ ದಿನೆ ಅಪಘಾತಗಳು ಹೆಚ್ಚುತ್ತಿವೆಯೇ ಹೊರತು, ಗಾಯಾಳುಗಳ ರಕ್ಷಣೆಗಾಗಿ ಇರಬೇಕಾದ ತುರ್ತುಚಿಕಿತ್ಸೆ ಮತ್ತು ಸಾಕಷ್ಟು ಸುಸಜ್ಜಿತ ಆಂಬುಲನ್ಸ್ ವ್ಯವಸ್ಥೆಗಳು ಬೆಂಗಳೂರಿನಂಥ ಮಹಾನಗರದಲ್ಲೂ ಇಲ್ಲ. ಜತೆಗೆ ಟ್ರಾಫಿಕ್ ಜಾಮ್ ಎಂಬ ಪೆಡಂಭೂತದ ಕಾಟ ಬೇರೆ. ಈ ಪರಿಸ್ಥಿತಿಯ ಸುಧಾರಣೆಗೆ ಸಂಬಂಧಪಟ್ಟ ಎಲ್ಲರೂ ಜತೆಗೂಡಿ ಕಾರ್ಯೋ ನ್ಮುಖರಾಗದಿದ್ದಲ್ಲಿ, ಮೋಟಾರು ವಾಹನಗಳೇ ಕೊಲ್ಲುವ ಯಂತ್ರಗಳಾಗಿಬಿಡುವ ಸಾಧ್ಯತೆಗಳಿವೆ!
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)
ಇದನ್ನೂ ಓದಿ: Thimmanna Bhagwat Column: ಗುರಾಣಿಯನ್ನು ಅಸ್ತ್ರವಾಗಿ ಬಳಸುವುದು ಸಲ್ಲ