ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !

ಬೆಂಕಿ, ನೀರಿನ ಜತೆ ಸರಸವಾಡಬಾರದೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ನೀರಿನ ವಿಚಾರದಲ್ಲಂತೂ ಇದು ಅಕ್ಷರಶ: ಸತ್ಯ. ಪ್ರತಿದಿನವೂ ಅದೆಷ್ಟೋ ಮಂದಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪುವುದನ್ನು ಕಂಡಾಗ ನಮ್ಮ ಹಿರಿಯರ ಮಾತು ಅದೆಷ್ಟು ನಿಜ ಎನಿಸುತ್ತದೆ. ನಮ್ಮ ರಾಜ್ಯದಲ್ಲಿ ಪ್ರತಿದಿನ ಆರರಿಂದ ಏಳು ಮಂದಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಗಳು ವರದಿಯಾಗುತ್ತಿವೆ. ಸ್ವಲ್ಪವೇ ಈಜು ಗೊತ್ತಿದ್ದರೂ ಇವರಲ್ಲಿ ಹೆಚ್ಚಿನವರು ಬದುಕುಳಿಯುತ್ತಿದ್ದರು. ಅವರ ಕುಟುಂಬಕ್ಕೆ ಆಧಾರವಾಗಿ ಉಳಿಯುತ್ತಿದ್ದರು.

ಲೋಕಮತ

kaayarga@gmail.com

ಸಾವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ನಮ್ಮ ಕ್ಷೇಮದ ಬಗ್ಗೆ ನಾವೇ ಎಚ್ಚರಿಕೆ ವಹಿಸದೇ ಹೋದರೆ ಸಾವು ಕೂಡ ಬೆನ್ನಟ್ಟಿ ಬರುತ್ತದೆ ಎನ್ನುವುದು ವಾಸ್ತವ. ಅದೆಷ್ಟೋ ಮಂದಿ ಸಾವನ್ನು ಕೈಯಾರೆ ಬರ ಮಾಡಿಕೊಳ್ಳುತ್ತಾರೆ. ಮಾತ್ರವಲ್ಲ ತಮ್ಮ ಜತೆ ಉಳಿದವರ ಸಾವಿಗೂ ಕಾರಣರಾಗುತ್ತಾರೆ. ಸಂಚಾರಿ ನಿಯಮಗಳನ್ನು ಬಿಗಿಗೊಳಿಸಿದಾಗ ನಮ್ಮ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಆದರೆ ಸ್ವಲ್ಪ ಸಡಿಲಿಕೆ ಕಂಡು ಬಂದರೆ ಸಾವಿನ ಪ್ರಮಾಣವೂ ಮತ್ತೆ ಏರಿಕೆ ಕಾಣುತ್ತದೆ. ಸ್ವಯಂ ವಿವೇಚನೆ, ನಿಯಮ, ಕಾನೂನು, ಕಟ್ಟು ಪಾಡುಗಳಡಿಯಲ್ಲಿ ಇದ್ದಾಗ ಸಾವು ಕೂಡ ನಮ್ಮಿಂದ ದೂರವಿರುತ್ತದೆ. ಇವುಗಳನ್ನು ಮೀರಿದಾಗ ಮೃತ್ಯು ಹತ್ತಿರವಾಗುತ್ತದೆ.

ಜುಲೈ 20ರಿಂದ 22ರ ಮಧ್ಯೆ ಹಳೇ ಮೈಸೂರು ಭಾಗದಲ್ಲಿ 10ಕ್ಕೂ ಹೆಚ್ಚು ಮಂದಿ ನೀರು ಪಾಲಾಗಿದ್ದಾರೆ. ಬಹುತೇಕರು 20ರಿಂದ 25ರೊಳಗಿನ ಬಿಸಿರಕ್ತದ ಯುವಕರು. ಮಂಡ್ಯದ ನರ್ಸಿಂಗ್ ಕಾಲೇಜೊಂದರ ಮೂವರು ವಿದ್ಯಾರ್ಥಿಗಳು ಭಾನುವಾರ ಮೈಸೂರು ಮೀನಾಕ್ಷಿಪುರದ ಕಾವೇರಿ ಹಿನ್ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಹಿನ್ನೀರ ರಾಶಿ ನೋಡಲಷ್ಟೇ ಚೆಂದ. ಇದು ಈಜಲು ಪ್ರಶಸ್ತವಾದ ತಾಣವಲ್ಲ. ಹಿಂದೆ ಊರು, ಕೇರಿಗಳಾಗಿದ್ದ ಈ ಹಿನ್ನೀರಿನಲ್ಲಿ ಹಳ್ಳ ದಿಣ್ಣೆಗಳಿವೆ. ನಮ್ಮ ಪೂರ್ವಜರು ತೋಡಿದ ಬಾವಿಗಳಿವೆ. ಇತ್ತೀಚೆಗೆ ಮರಳಿಗಾಗಿ, ಇಟ್ಟಿಗೆಗಾಗಿ ತೋಡಿದ ಗುಣಿಗಳಿವೆ. ಸರಿಯಾಗಿ ಈಜು ಬಾರದೆ ಇಂತಹ ಜಾಗದಲ್ಲಿ ನೀರಿಗಿಳಿಯುವುದೆಂದರೆ ಮಲಗಿದ್ದ ಸಾವನ್ನು ತಟ್ಟಿ ಎಬ್ಬಿಸಿದಂತೆ.

ನೀರಿನ ‘ಸೆಳೆತ’ಕ್ಕೊಳಗಾದ ಇವರು ಸ್ವಲ್ಪವೇ ಎಚ್ಚರಿಕೆ ವಹಿಸಿದ್ದರೆ, ಸ್ಥಳೀಯ ಆಡಳಿತ ಮುಂಜಾ ಗ್ರತಾ ಕ್ರಮ ತೆಗೆದುಕೊಂಡಿದ್ದರೆ ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದಿತ್ತು. ಈ ಸಾವು ಇಲ್ಲಿನ ಸ್ಥಳೀಯರಿಗೆ, ಪೊಲೀಸರಿಗೆ ಹೊಸದೇನೂ ಅಲ್ಲ. ಕಾವೇರಿ ಹಿನ್ನೀರಿನಲ್ಲಿ ತಿಂಗಳಿ ಗೊಂದಾದರೂ ಇಂತಹ ಸಾವು ಸಂಭವಿಸುತ್ತಲೇ ಇರುತ್ತದೆ. ಬಾಳಿ ಬದುಕಬೇಕಾದ, ಮನೆ ಮಂದಿಗೆ ಆಸರೆಯಾಗಬೇಕಾದ ಜೀವಗಳು ಅರ್ಧದಲ್ಲೇ ಉಸಿರು ಚೆಲ್ಲಿದರೆ ಅವರ ಕುಟುಂಬಕ್ಕೆ ಆಗಬಹುದಾದ ನೋವು, ಆಘಾತ, ನಷ್ಟ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಸರಕಾರ ಮತ್ತು ಸ್ಥಳೀಯ ಅಧಿಕಾರಿಗಳ ಪಾಲಿಗೆ ಇದು ಇನ್ನೊಂದು ಸಾವು. ನಮಗೂ ಹಾಗೆಯೇ.

ಅಧಿಕೃತ ಅಂಕಿ ಅಂಶಗಳ ಪ್ರಕಾರ ನಮ್ಮ ರಾಜ್ಯದಲ್ಲಿ ಪ್ರತಿದಿನ ಸರಾಸರಿ ಆರರಿಂದ ಏಳು ಮಂದಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾಯುತ್ತಾರೆ. ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಪ್ರತ್ಯೇಕ. ಮಂಡ್ಯ ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಲ್ಲಿ 2022ರಿಂದ 2024ರ ನಡುವಣ ಮೂರು ವರ್ಷಗಳಲ್ಲಿ 410 ಜನರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಲಮುರಿ ಯೊಂದರಲ್ಲಿಯೇ 50ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Lokesh Kaayarga Column: ಬೇಕಿರುವುದು ವ್ಯಾಧಿ ಮೂಲಕ್ಕೆ ಮದ್ದು !

ಕಳೆದ ಮೂರು ದಶಕಗಳ ಅಪರಾಧ ದಾಖಲೆ ಪರಿಶೀಲಿಸಿದರೆ ಶ್ರೀರಂಗಪಟ್ಟಣದ ಬಲಮುರಿ ಮತ್ತು ಮಳವಲ್ಲಿ ತಾಲ್ಲೂಕಿನ ಮತ್ತತ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ ಸಾವಿರಕ್ಕೂ ಹೆಚ್ಚು. ಈ ಹಿಂದೆ ಮತ್ತತ್ತಿ ಎಂಬ ಸಾವಿನ ಕೂಪದ ಬಗ್ಗೆಯೇ ಮೂರ್ನಾಲ್ಕು ಬಾರಿ ಬರೆದಿದ್ದೆ. ಮೂರ್ನಾಲ್ಕು ಯುವಕರು ಸಾವಿಗೀಡಾದಾಗ ಒಂದಿಬ್ಬರು ಬೀಟ್ ಪೊಲೀಸರು ಇಲ್ಲಿ ಪಹರೆ ಕಾಯುತ್ತಾರೆ. ತಿಂಗಳು ಕಳೆದ ಬಳಿಕ ಮತ್ತದೇ ಯಥಾಸ್ಥಿತಿ. ಹಾಗೆಂದು ಈ ತಾಣಗಳಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕ ವಸೂಲಿ ಎಂದೂ ತಪ್ಪಿಲ್ಲ. ಜನರೂ ಅಷ್ಟೇ, ಇಲ್ಲಿನ ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸಿ ನೀರಿಗಿಳಿಯುತ್ತಾರೆ. ಕೆಲವರು ಕಂಠಪೂರ್ತಿ ಕುಡಿದು ನೀರಿಗಿಳಿದು ಅಪಾಯ ತಂದುಕೊಳ್ಳುತ್ತಾರೆ. ರಕ್ಷಿಸಲು ಹೋದವರನ್ನೂ ಸಾವಿನ ಸುಳಿಗೆ ತಳ್ಳುತ್ತಾರೆ.

ಕೆಆರ್‌ಎಸ್ ಹಿನ್ನೀರು, ಗಗನಚುಕ್ಕಿ, ಚುಂಚನಕಟ್ಟೆ ಜಲಪಾತ, ಶ್ರೀರಂಗಪಟ್ಟಣ ದ್ವೀಪದಲ್ಲಿ ಕಾವೇರಿಯ ನಿಸರ್ಗ ರಮಣೀಯ ದೃಶ್ಯಗಳಿಗೆ ಮನಸೋಲದವರಿಲ್ಲ. ಆದರೆ ನೀರಿನ ಮೋಹಪಾಶಕ್ಕೆ ಸಿಲುಕಿದ ನೂರಾರು ಮಂದಿ ಇದೇ ಕಾರಣಕ್ಕೆ ಮೃತ್ಯುಪಾಶಕ್ಕೊಳಗಾದ ನೂರಾರು ಪ್ರಕರಣಗಳಿಗೆ ಈ ತಾಣಗಳು ಸಾಕ್ಷಿಯಾಗಿವೆ. ಕೊಡಗಿನ ಅಬ್ಬಿ, ಮಲ್ಲಳ್ಳಿ, ಇರುಪ್ಪು, ಚೇಲಾವರ ಜಲಪಾತಗಳ ದೃಶ್ಯ ವೈಭವವನ್ನು ಕಂಡು ನೀರಿಗಿಳಿಯಲು ಮಂದಾಗವರು ಕಡಿಮೆ. ಆದರೆ ಈ ಜಲಪಾತಗಳ ಆಳ, ಅಗಲ, ಅಪಾಯಗಳನ್ನರಿಯದ ಅದೆಷ್ಟೋ ಜೀವಗಳು ಪ್ರತೀ ವರ್ಷ ಇಲ್ಲಿನ ಜಲಪಾತಗಳಲ್ಲಿ ಒಂದಾಗಿ ಶವಗಳಾಗಿ ತೇಲುತ್ತವೆ. ಅಪಾಯದ ಸೂಚನೆ ಇರುವ ನಾಮಫಲಕಗಳನ್ನು ನೋಡಿಯೂ ಧುಮ್ಮಿಕ್ಕಿ ಹರಿಯುವ ಜಲರಾಶಿಯ ಹತ್ತಿರಕ್ಕೆ ಸಾಗುವ ಯುವಕರು ತಾವಾಗಿಯೇ ಸಾವಿನ ಕೂಪಕ್ಕೆ ಜಾರುತ್ತಾರೆ. ಒಮ್ಮೆ ಇಲ್ಲಿ ಬಿದ್ದವರು ಜೀವಂತವಾಗಿ ಬಂದ ಉದಾಹರಣೆಗಳು ಕಡಿಮೆ.

beach

ಚಾಮರಾಜನಗರದ ಹೊಗೇನಕಲ್, ಭರಚುಕ್ಕಿ ಫಾಲ್ಸ್‌, ಚಿಕ್ಕಮಗಳೂರಿನ ಸೂತನಬ್ಬಿ, ಹೆಬ್ಬೆ ಮುಂತಾದ ಹಲವು ಜಲಪಾತಗಳು, ರಾಮನಗರದ ಮೇಕೆದಾಟು, ಶಿವಮೊಗ್ಗ ಹೊಸನಗರ ತಾಲ್ಲೂಕಿನ ಅಬ್ಬಿ ಮತ್ತು ತಲಸಿ ಅಬ್ಬಿ ಜಲಪಾತ, ಬೆಳಗಾವಿ ಮತ್ತು ಉತ್ತರಕನ್ನಡದ ಹಲವು ಜಲಪಾತ, ಕರಾವಳಿಯ ಜಿಲ್ಲೆಗಳ ಪಣಂಬೂರು, ಉಳ್ಳಾಲ, ಸೋಮೇಶ್ವರ ಕಡಲ ತೀರ, ಗೋಕರ್ಣದ ಓಂ ಬೀಚ್, ಮುರ್ಡೇಶ್ವರ, ಧರ್ಮಸ್ಥಳದ ನೇತ್ರಾವತಿ ತೀರ್ಥಘಟ್ಟ, ಸುಬ್ರಹ್ಮಣ್ಯದ ಕುಮಾರಧಾರ ತೀರ್ಥಘಟ್ಟಗಳಲ್ಲಿ ನೀರುಪಾಲಾದವರಿಗೆ ಲೆಕ್ಕವಿಲ್ಲ. ವಿಶೇಷ ಎಂದರೆ ಪ್ರತಿ ದಿನವೂ ಇದೇ ಪರಿಸರದಲ್ಲಿ ಅಡ್ಡಾಡುವ ಸ್ಥಳೀಯರು ನೀರು ಪಾಲಾದ ಉದಾಹರಣೆಗಳು ಕಡಿಮೆ. ಆದರೆ ಪ್ರವಾಸಕ್ಕೆಂದು ಬಂದವರು ಈಜುವ, ಹತ್ತಿರದಿಂದ ಸೆಲ್ಫಿ ಕ್ಲಿಕ್ಕಿಸುವ ಸಾಹಸ ಮಾಡಲು ಹೋಗಿ ದುರಂತ ಸಾವನ್ನು ಕಂಡ ಪ್ರಕರಣಗಳೇ ಹೆಚ್ಚು.

ದಾರಿ ಮಧ್ಯೆ ಸಿಕ್ಕ ಭೋರ್ಗರೆಯುವ ತೊರೆಗಳಲ್ಲಿ ಮೈಯೊಡ್ಡಬೇಕಾದರೆ, ಜಲಪಾತದ ಪಾಚಿಗಟ್ಟಿದ ಬಂಡೆಯಲ್ಲಿ ಕಾಲಿಡಬೇಕಾದರೆ, ರಭಸದ ನಾಲೆ, ನದಿ ನೀರಿನಲ್ಲಿ ಇಳಿಯಬೇಕಾದರೆ, ಆಳ ಗೊತ್ತಿಲ್ಲದ ಮಡುವಿಗೆ ಹಾರಬೇಕಾದರೆ, ಆಳೆತ್ತರದ ಅಲೆಗಳ ಮುಂದೆ ನಿಂತು ಸಮುದ್ರ ಸ್ನಾನ ಮಾಡಬೇಕಾದರೆ ವಿವೇಕ ಮತ್ತು ವಿವೇಚನೆ ಎರಡೂ ನಮ್ಮ ಜತೆಗಿರಬೇಕು. ಇಲ್ಲವಾದರೆ ಈಜು ಗೊತ್ತಿದ್ದರೂ ಸಾವನ್ನು ಹಿಂಬಾಲಿಸಿ ಹೊರಡಬೇಕಾಗುತ್ತದೆ.

ಜಾಗತಿಕವಾಗಿ ವಾರ್ಷಿಕ ಸುಮಾರು 3.6 ಲಕ್ಷ ಜನರು ನೀರಿನಲ್ಲಿ ಮುಳುಗಿ ಸಾಯುತ್ತಾರೆ ಎಂಬ ಮಾಹಿತಿಯೊಂದಿಗೆ ತುಲನೆ ಮಾಡಿದರೆ ಜಲಸಮಾಧಿ ಪ್ರಮಾಣ ನಮ್ಮ ದೇಶದಲ್ಲಿ ಗಣನೀಯ ವಾಗಿದೆ. ರಾಷ್ಟ್ರೀಯ ಅಪರಾಧ ಮಾಹಿತಿ ಮಂಡಳಿ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿದಿನ ಸರಾಸರಿ 80ಕ್ಕಿಂತ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾರೆ. ಅಂದರೆ, ವಾರ್ಷಿಕ 30 ಸಾವಿರಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಾರೆ. ಪ್ರತೀ ವರ್ಷ 2500ಕ್ಕೂ ಹೆಚ್ಚು ಜನರು ನೀರುಪಾಲಾಗುವ ಕರ್ನಾಟಕಕ್ಕೆ ದೇಶದಲ್ಲಿ ಮೂರನೇ ಸ್ಥಾನ.

ನೀರಿನಲ್ಲಿ ಕೊಚ್ಚಿ ಹೋಗುವ ಜೀವಗಳಲ್ಲಿ ಎಳೆಯ ಮಗುವಿನಿಂದ ಹಿಡಿದು 29ರ ವಯಸ್ಸಿನವರೇ ಹೆಚ್ಚು. ಅದರಲ್ಲೂ ಪುರುಷರ ಸಾವಿನ ಪ್ರಮಾಣ ದುಪ್ಪಟ್ಟು. ವೈದ್ಯ ವಿದ್ಯಾರ್ಥಿಗಳು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈಜಲು ಹೋಗಿ ನೀರುಪಾಲಾಗುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ತಮ್ಮ ಕುಟುಂಬಕ್ಕೆ ಆಸರೆಯಾಗಬೇಕಾದ ಈ ಜೀವಗಳು ಬಾರದ ಲೋಕಕ್ಕೆ ತೆರಳಿದರೆ, ಅವರ ಕುಟುಂಬ ವರ್ಗ ಜೀವನ ಪರ‌್ಯಂತ ಈ ಕೊರಗಿನಲ್ಲಿಯೇ ಜೀವ ಸವೆಸಬೇಕಾಗುತ್ತದೆ. ಜೀವನದ ಅತ್ಯಂತ ಫಲಪ್ರದ ವಯಸ್ಸಿನಲ್ಲಿ ಯಾವುದೇ ವ್ಯಕ್ತಿಯ ಅಗಲಿಕೆ ಎಂದರೆ ಕುಟುಂಬದ ಆಧಾರ ಕಳಚಿದಂತೆ. ಆದರೆ ಸರಕಾರದ ಪಾಲಿಗೆ ಇವೆಲ್ಲವೂ ಆಕಸ್ಮಿಕ ಸಾವುಗಳಾಗಿ ಕಾಣುತ್ತವೆಯೇ ಹೊರತು ರಾಷ್ಟ್ರೀಯ ಸಮಸ್ಯೆಯಾಗಿ ಕಾಣುವುದಿಲ್ಲ.

ಈಜಬೇಕು, ಈಜು ಕಲಿತು ಬದುಕಬೇಕು !

ಈಜು ಎಂಬ ಮೂಲ ವಿದ್ಯೆಯನ್ನು ಕಲಿತಿದ್ದರೆ ನೀರು ಪಾಲಾಗುವವರ ಪೈಕಿ ಅರ್ಧಕ್ಕಿಂತ ಹೆಚ್ಚು ಜನರ ಜೀವಾಪಾಯವನ್ನು ತಪ್ಪಿಸಲು ಸಾಧ್ಯವಿದೆ. ಆದರೆ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡಿದ ನಮಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಈಜು, ಸೈಕಲ್ ಸವಾರಿಯಂತಹ ಮೂಲ ವಿದ್ಯೆ ಕಲಿಸಬೇಕಾದ ತುರ್ತು ಎಂದೂ ಮನದಟ್ಟಾಗಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇವೆಲ್ಲವೂ ಪ್ರಾಥಮಿಕ ಶಿಕ್ಷಣದ ಭಾಗ. ಇಂತಿಷ್ಟು ಅಂಕಗಳೆಂದು ನಿಗದಿಪಡಿಸಿದ್ದರೆ ನಮ್ಮಲ್ಲೂ ಈಜು ಕಲಿಕೆಗೆ ಪಾಲಕರು ಒತ್ತು ನೀಡುತ್ತಿದ್ದರೇನೋ ?

ರಾಜ್ಯ ಕರಾವಳಿಯ ಕಡಲ ತೀರಗಳಲ್ಲಿ ಮುಳುಗಿ ಮೃತಪಟ್ಟವರ ಬಗ್ಗೆ ಅಧ್ಯಯನ ನಡೆಸಿರುವ ಮಹಾಬಲೇಶ್ ಶೆಟ್ಟಿ 1999-2004 ರ ಮಧ್ಯೆ 3684 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ 350 ಮಂದಿ ಈಜು ತಿಳಿಯದೇ ಮೃತಪಟ್ಟವರು. ಹೆಚ್ಚಿನವರು 20 ರಿಂದ 40ರ ವಯೋಮಾನ ದೊಳಗಿನವರು. ಇದೊಂದು ಗಂಭೀರ ಸಮಸ್ಯೆಯಾಗಿದ್ದರೂ ಸರಕಾರವಾಗಲಿ, ಜನರಾಗಲಿ ಎಚ್ಚೆತ್ತುಕೊಳ್ಳದಿರುವ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಸಂಭವಿಸಿದ ಜಲಾಘಾತ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿದ ಆದಿಚುಂಚನಗಿರಿ ವಿವಿಯ ಪ್ರಾಧ್ಯಾಪಕರ ತಂಡವೂ ಇದೇ ಅಭಿಪ್ರಾಯವನ್ನು ದಾಖಲಿಸಿದೆ.

ನೀರು ಪಾಲಾಗುವ ಬಹುತೇಕ ಪ್ರಕರಣಗಳಲ್ಲಿ ಸಾವನ್ನು ತಪ್ಪಿಸುವ ಅವಕಾಶಗಳಿವೆ. ಈಜು ತಿಳಿದಿರುವುದು ಮೊಟ್ಟ ಮೊದಲನೆಯ ಅವಕಾಶ. ಇಂತಹ ಸಂದರ್ಭಗಳಲ್ಲಿ ಯಾವ ರೀತಿ ರಕ್ಷಣಾ ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ಅರಿವು ಅಗತ್ಯ. ಶಾಲಾ ಕಾಲೇಜುಗಳಲ್ಲಿ ಪ್ರಥಮ ಚಿಕಿತ್ಸೆಯ ಭಾಗವಾಗಿ ಇವುಗಳನ್ನು ಕಲಿಸಿಕೊಡಲಾಗುತ್ತದೆ. ಆದರೆ ಪ್ರಾಯೋಗಿಕ ಈಜು ಕಲಿಕೆ ಇಲ್ಲದೆ ಇವೆಲ್ಲವೂ ಅಪ್ರಯೋಜಕವೆನಿಸುತ್ತವೆ.

ಪಾಲಕರು ಮನಸ್ಸು ಮಾಡಿದರೆ ಮಕ್ಕಳಿಗೆ ರಾಜು ಕಲಿಸುವುದು ಕಷ್ಟದ ಮಾತೇನಲ್ಲ. ಬೇಸಿಗೆ ರಜೆಗಳಲ್ಲಿ ಬಿಡುವು ಮಾಡಿಕೊಂಡು ಮಕ್ಕಳಿಗೆ ಸಮೀಪದ ನದಿ, ಕೆರೆ ಅಥವಾ ಬಾವಿಗಳಲ್ಲಿ ಒಂದೆರಡು ವಾರಗಳ ಈಜು ಕಲಿಸಿ ಕೊಡುವುದು ಕಷ್ಟವೇನಲ್ಲ. ನಗರಗಳಲ್ಲಿ ಇಂದು ಸಾಕಷ್ಟು ಈಜುಕೊಳಗಳಿವೆ. ದುಬಾರಿ ಎನಿಸಿದರೂ ಆಪತ್ಕಾಲದಲ್ಲಿ ಜೀವವುಳಿಸುವ ಈ ವಿದ್ಯೆ ಎಲ್ಲರಿಗೂ ತಿಳಿದಿರಲೇಬೇಕು.

ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿಯೇ ಈಜು ಕಲಿಸಿಕೊಡಬೇಕು. ವರ್ಷದ ಹಿಂದೆ ಉಳ್ಳಾಲದ ರೆಸಾರ್ಟ್‌ವೊಂದರಲ್ಲಿ ಈಜುಕೊಳಕ್ಕಿಳಿದ ಮೂವರು ಹೆಣ್ಣುಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಆ ಈಜುಕೊಳವು ಆರಡಿಗಿಂತಲೂ ಕಡಿಮೆ ಆಳವಿತ್ತು. ಸ್ಪಲ್ಪವೇ ಈಜು ಗೊತ್ತಿದ್ದರೂ ಇವರು ಬದುಕುಳಿಯಬಹುದಿತ್ತು. ಇದೊಂದೇ ಅಲ್ಲ. ಎಳೆಯ ಜೀವಗಳ ಇಂತಹ ನೂರಾರು ಸಾವಿನ ಉದಾಹರಣೆಗಳಿವೆ. ನಾವು ಮನಸ್ಸು ಮಾಡಿದರೆ ಈ ಸಾವನ್ನು ಖಂಡಿತ ವಾಗಿಯೂ ತಪ್ಪಿಸಬಹುದು !

ಲೋಕೇಶ್​ ಕಾಯರ್ಗ

View all posts by this author