Lokesh Kaayarga Column: ಬೇಕಿರುವುದು ವ್ಯಾಧಿ ಮೂಲಕ್ಕೆ ಮದ್ದು !
ನಮ್ಮ ನಿರ್ಲಕ್ಷ್ಯದ ಕಾರಣದಿಂದ ಎಳವೆಯಲ್ಲಿಯೇ ದೈಹಿಕ ಚಟುವಟಿಕೆಗಳಿಂದ ವಂಚಿತರಾದ ಮಕ್ಕಳು ಸಣ್ಣ ಪ್ರಾಯದಲ್ಲಿಯೇ, ಬೊಜ್ಜು, ಮಧುಮೇಹ, ರಕ್ತದೊತ್ತಡದಂತಹ ಜೀವನ ಶೈಲಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದೈಹಿಕ ಚಟುವಟಿಕೆಗಳು ಶರೀರಕ್ಕೆ ಮಾತ್ರವಲ್ಲ. ನಮ್ಮ ಮಕ್ಕಳ ಮಾನಸಿಕ ವಿಕಸನ ಕ್ಕೂ ಅಗತ್ಯವಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆಗಿಂತ ಉತ್ತಮ ಮಾರ್ಗ ಬೇರೆ ಇಲ್ಲ. ಆದರೆ ದೈಹಿಕ ಚಟುವಟಿಕೆಗಳಿಂದ ದೂರವಾದ ಯುವಕರು ಸಣ್ಣಪುಟ್ಟ ಒತ್ತಡಗಳನ್ನೂ ನಿಭಾಯಿಸ ಲಾಗದೆ ಅತಿರೇಕದ ಕ್ರಮಗಳಿಗೆ ಕೈ ಹಾಕುತ್ತಿದ್ದಾರೆ. ದೈಹಿಕ ಚಟುವಟಕೆಗಳಿಂದ ದೂರವಾದ ಸ್ಥೂಲ ಕಾಯರಿಂದ ತುಂಬಿದ ಸಮಾಜ ಹೇಗಿರಬಹುದೆನ್ನುವುದಕ್ಕೆ ಭಾರತವೇ ಉದಾಹರಣೆಯಾಗಿ ನಿಲ್ಲುತ್ತಿದೆ.


ಲೋಕಮತ
kaayarga@gmail.com
ಕರ್ನಾಟಕದಲ್ಲಿ ಹೃದಯಾಘಾತ ಸಂಬಂಧಿ ಸಾವುಗಳು ಹೆಚ್ಚುತ್ತಿವೆ ಎಂಬ ಆತಂಕ ವ್ಯಾಪಕವಾಗಿದೆ. ಸರಕಾರ ನೇಮಿಸಿದ ಸಮಿತಿ, ‘ಹಾಗೇನೂ ಇಲ್ಲ ಹಿಂದಿನ ವರ್ಷಗಳಲ್ಲೂ ಸಾವಿನ ಪ್ರಮಾಣ ಇಷ್ಟೇ ಇರುತ್ತಿತ್ತು’ ಎಂದು ವರದಿ ನೀಡಿದೆ. ಆದರೆ ಜನರು ಮಾತ್ರ ತಮ್ಮ ಕಣ್ಣೆದುರು ಕುಸಿದು ಬೀಳುತ್ತಿರು ವವರನ್ನು ಕಂಡು ಕಳವಳಗೊಂಡಿದ್ದಾರೆ. ದಶಕದ ಹಿಂದೆ 60ರ ಆಸುಪಾಸಿನಲ್ಲಿ ಮತ್ತು ನಗರವಾಸಿ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದ್ರೋಗ ಈಗ ಹಳ್ಳಿ, ಪಟ್ಟಣ, ಹಿರಿಯರು, ಯುವಕರು, ಮಕ್ಕಳೆಂಬ ಭೇದವಿಲ್ಲದೆ ಎಲ್ಲರನ್ನೂ ಅವರಿಸಿಕೊಂಡಿರುವುದು ಸತ್ಯ. 10 ವರ್ಷದೊಳಗಿನ ಮಕ್ಕಳು ಶಾಲಾ ಆವರಣದಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆಗಳನ್ನು ನಾವು ಈ ಹಿಂದೆ ಕೇಳಿದ್ದಿಲ್ಲ. ದೊಡ್ಡವರ ಸಾವಿಗೆ ಆಧುನಿಕ ಜೀವನಶೈಲಿಯತ್ತ ಬೊಟ್ಟು ಮಾಡುವುದಾದರೆ, ಈ ಮಕ್ಕಳ ಸಾವಿಗೆ ಏನು ಕಾರಣ ಎನ್ನುವುದು ನಿಗೂಢವಾಗಿಯೇ ಕಾಣುತ್ತದೆ. ಇಷ್ಟರ ನಡುವೆಯೂ ಸರಕಾರ ನೇಮಿಸಿದ ಸಮಿತಿ ರೋಗಕ್ಕೆ ಮದ್ದರೆಯಲು ಹೊರಟಿದೆಯೇ ಹೊರತು ರೋಗ ಮೂಲ ಪತ್ತೆ ಮಾಡುವಲ್ಲಿ ಯಾವುದೇ ಆಸಕ್ತಿ ತೋರಿಸಿಲ್ಲ.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ನೇಮಿಸಿದ ಸಮಿತಿಗಳ ವರದಿಗಳನ್ನು ಗಮನಿಸಿದರೆ, ಕೋವಿಡ್ ಲಸಿಕೆಯಿಂದ ಸಾವು ಸಂಭವಿಸಿಲ್ಲ ಎನ್ನುವ ಅಂಶದತ್ತ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತದೆ. ಕೋವಿಡ್ ಕಾರಣ ಅಲ್ಲ ಎಂದಾಗಿದ್ದರೆ ಇನ್ನೇನು ಕಾರಣ ಎಂದಾದರೂ ಈ ಸಮಿತಿಗಳು ಬೆಳಕು ಚೆಲ್ಲಬೇಕಿತ್ತು. ರಾಜ್ಯದಲ್ಲಾಗಲಿ, ರಾಷ್ಟ್ರದಲ್ಲಾಗಲೀ ನಮ್ಮ ಕಣ್ಣೆದುರು ಕುಸಿದು ಬಿದ್ದವರಲ್ಲಿ ಅತ್ಯುತ್ತಮ ಜೀವನ ಶೈಲಿ ರೂಪಿಸಿಕೊಂಡವರೂ ಇದ್ದಾರೆ. ಯಾವುದೇ ದುಶ್ಚಟಗಳಿಲ್ಲದ, ದೇಹದ ವ್ಯಾಯಮ ಮತ್ತು ಕಸರತ್ತುಗಳಿಗೆ ಒತ್ತುಕೊಟ್ಟ ಕ್ರೀಡಾಪಟುಗಳು ಹೃದಯ ಸ್ತಂಭನದಿಂದ ಮೈದಾನದಲ್ಲಿಯೇ ಉಸಿರು ಚೆಲ್ಲಿದ ಘಟನೆಗಳನ್ನು ಗಮನಿಸಿದರೆ, ಹೃದಯಬೇನೆಗೆ, ಈ ಸಮಿತಿ ಹೇಳಿದ ಕಾರಣಗಳಲ್ಲದೆ ಇನ್ನಾವುದೋ ಕಾರಣ ಇದೆ ಎನ್ನುವುದು ಸ್ಪಷ್ಟ.
ಇದನ್ನೂ ಓದಿ: Lokesh Kaayarga Column: ನ್ಯಾ.ಗವಾಯಿ ನಡೆ ನ್ಯಾಯಾಂಗಕ್ಕೆ ಮೇಲ್ಪಂಕ್ತಿ
ಸದ್ಯ ಈ ವಿಷಯಗಳೆಲ್ಲವೂ ಒತ್ತಟ್ಟಿಗಿರಲಿ. ನಮ್ಮ ನಿರೀಕ್ಷೆಗಳ ತೂಕದಲ್ಲಿ ಬಾಲ್ಯದಲ್ಲಿಯೇ ತಮ್ಮ ತೂಕ ಹೆಚ್ಚಿಸಿಕೊಂಡ ಎಳೆಯರ ಭವಿಷ್ಯದ ಬಗ್ಗೆ ಚಿಂತಿಸಿದರೆ ಅದೇಕೋ ತೀರಾ ಭಯ ಕಾಡುತ್ತದೆ. ನಮ್ಮ ಪ್ರತಿಷ್ಠಿತ ಶಾಲೆಗಳ ಗೇಟ್ ಮುಂದೆ ಶಾಲೆ ಆರಂಭ ಇಲ್ಲವೇ ಬಿಡುವ ವೇಳೆಗೆ ಸ್ವಲ್ಪ ಹೊತ್ತು ನಿಂತು ಗಮನಿಸಿ. ಹತ್ತಿಪ್ಪತ್ತು ಕಿಲೋ ಬ್ಯಾಗ್ ಹೊತ್ತ ನಾಲ್ಕು, ಐದನೇ ತರಗತಿ ಮಕ್ಕಳಲ್ಲಿ ಅನೇಕರು ಮೇಲ್ನೋಟಕ್ಕೇ 50 ಕಿಲೋಗಿಂತ ಹೆಚ್ಚಿನ ತೂಕ ಹೊಂದಿರುತ್ತಾರೆ. ಆರನೇ ತರಗತಿ ದಾಟುವ ಮುನ್ನವೇ ಅನೇಕ ಹೆಣ್ಣು ಮಕ್ಕಳಲ್ಲಿ ‘ಹರೆಯ’ದ ಲಕ್ಷಣಗಳು ಕಂಡು ಬರುತ್ತಿವೆ. ಎಲ್‌ಕೆಜಿ, ಯುಕೆಜಿಯಲ್ಲಿ ದಷ್ಟಪುಷ್ಟರಂತೆ ಕಾಣುವ ಮಕ್ಕಳು ಪ್ರಾಥಮಿಕ ತರಗತಿಗಳಿಗೆ ಬರುವಷ್ಟರಲ್ಲಿ ಒಂದೆರಡು ಮೆಟ್ಟಿಲು ಏರಬೇಕಾದರೂ ಏದುಸಿರು ಬಿಡುತ್ತಾರೆ. ಶ್ರೀಮಂತ, ಮಧ್ಯಮವರ್ಗದ ಮನೆಯ ಜೀವನ ಶೈಲಿ, ಆಹಾರ ಪದ್ಧತಿ ಮಾತ್ರವಲ್ಲ, ಶಾರೀರಿಕ ದಂಡನೆಗೆ ಎಳ್ಳಷ್ಟೂ ಅವಕಾಶ ವಿಲ್ಲದ ಶಿಕ್ಷಣ ಪದ್ಧತಿಯಲ್ಲಿ ನಮ್ಮ ಎಳೆಯರು ಫಾರಂ ಕೋಳಿಗಳಾಗದೆ ಇನ್ನೇನು ಆಗಲು ಸಾಧ್ಯ?
ರಾಜ್ಯ ಸರಕಾರ ನೇಮಿಸಿದ ಸಮಿತಿಯು 15 ವರ್ಷದೊಳಗಿನ ಮಕ್ಕಳ ಕಡ್ಡಾಯ ಹೃದಯ ತಪಾಸಣೆಗೆ ಶಿಫಾರಸು ಮಾಡಿದೆ. ಇದರಿಂದ ಹುಟ್ಟಿನಿಂದ ಹೃದಯದ ಕಾಯಿಲೆ ಇರುವ ಮಕ್ಕಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲವಾಗಬಹುದು. ಆದರೆ ಹೆತ್ತವರ ಜೀವನ ಶೈಲಿ ಮತ್ತು ಅವರ ಆಸೆ, ಆಕಾಂಕ್ಷೆಗಳ ಮೂಟೆ ಹೊತ್ತು ನಿಂತ ಮಕ್ಕಳ ಆರೋಗ್ಯದ ರಕ್ಷಣೆ ಹೇಗೆ ಎಂದರೆ ಯಾವುದೇ ಉತ್ತರ ಸಿಗುವುದಿಲ್ಲ. ದಿನದಿಂದ ದಿನಕ್ಕೆ ನಮ್ಮ ಮಕ್ಕಳ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುತ್ತಲೇ ಇವೆ. ಎದೆ ಹಾಲು ಉಣಿಸುವಾಗಲೇ ನೀಟ್, ಐಐಟಿ, ಐಐಎಂ, ಬಂಗಲೆ, ಕಾರು, ವಿದೇಶ ವಾಸ್ತವ್ಯದ ಕನಸುಗಳನ್ನು ಬಿತ್ತುವ ಹೆತ್ತವರು ಈ ಬೌದ್ಧಿಕ ಕಸರತ್ತಿನ ನಡುವೆ ದೈಹಿಕ ಕಸರತ್ತುಗಳು ಅಗತ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಂತಿದೆ. ಪೋಷಕರ ಈ ಕನಸುಗಳ ಮೇಲೆ ಹೂಡಿಕೆ ಮಾಡಿರುವ ಶಿಕ್ಷಣ ಸಂಸ್ಥೆಗಳು ಕೂಡ ದೈಹಿಕ ವ್ಯಾಯಾಮದ ಬಗ್ಗೆ ಯಾವುದೇ ಒತ್ತು ನೀಡದೆ, ಶಿಕ್ಷಣವನ್ನು ಪಾಠ, ಪ್ರವಚನಕ್ಕಷ್ಟೇ ಸೀಮಿತಗೊಳಿಸಿವೆ.

ಮೂರ್ನಾಲ್ಕು ದಶಕಗಳ ಹಿಂದೆ ನಾವು ‘ಇಲ್ಲಗಳ’ ಮಧ್ಯೆ ನಮ್ಮ ಬಾಲ್ಯವನ್ನು ಕಳೆದರೆ, ಈಗಿನ ಮಕ್ಕಳು ಎಲ್ಲವೂ ಕೈಯಳತೆಯಲ್ಲಿ ಸಿಗುವ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ. ಈಗ ತೂತು ಚಡ್ಡಿಗೆ, ಹರಿದ ಬ್ಯಾಗಿಗೆ, ಮುರಿದ ಕೊಡೆಯ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಚಪ್ಪಲಿ ಇಲ್ಲದೆ ಮೈಲುಗಟ್ಟಲೆ ಹಳ್ಳ-ಕೊಳ್ಳ ದಾಟಿ ಶಾಲೆಯ ಹಾದಿ ಹಿಡಿಯಬೇಕಾದ ಅನಿವಾರ್ಯತೆಯೂ ಇಲ್ಲ. ಅಪ್ಪ-ಅಮ್ಮ ಇಸ್ತ್ರಿ ಮಾಡಿದ ಒಪ್ಪ ಓರಣವಾದ ಸಮವಸ್ತ್ರ ತೊಟ್ಟು, ಮಿರಿ ಮಿರಿ ಮಿಂಚುವ ಶೂ ತೊಟ್ಟು ಮನೆ ಬಾಗಿಲಿನಲ್ಲಿಯೇ ವ್ಯಾನೋ, ಬಸ್ಸೋ ಹತ್ತಿದರೆ ಮುಗಿಯಿತು. ಸಂಜೆ ಇದೇ ವ್ಯಾನ್ ಅಥವಾ ಬಸ್ಸಿನಲ್ಲಿ ವಾಪಸ್. ಮಕ್ಕಳಿಗೆಲ್ಲೂ ಬೆವರು ಹರಿಸುವ, ಒಂದಷ್ಟು ಹೊತ್ತು ನಡೆಯುವ, ನಡೆಯುತ್ತಲೇ ಓಡುವ, ದೈಹಿಕ ಕಸರತ್ತಿನಲ್ಲಿ ತೊಡಗುವ ಅವಕಾಶಗಳೇ ಇಲ್ಲ.
ಮೂರೂ ಹೊತ್ತು ಗಂಜಿ ಉಂಡರೂ ಬೇಸರಿಸಿಕೊಳ್ಳದ ನಮಗೆ ಅಂದು ಕೊಟ್ಟಿದೆಲ್ಲವನ್ನೂ ಬಾಚಿ ತಿನ್ನುವ ಅನಿವಾರ‌್ಯತೆ ಇತ್ತು. ಅಂದಿನ ಆ ಊಟ, ತಿಂಡಿ ಎಂದರೆ ನಮ್ಮ ಮಕ್ಕಳಿಗೆ ಅಷ್ಟಕ್ಕಷ್ಟೇ. ಬೆಳಿಗ್ಗೆ ಟಿ.ವಿ ಜಾಹೀರಾತಿನಲ್ಲಿ ಬಂದ ಪೌಡರ್‌ಗಳ ಪೇಯದ ಜತೆ ಅಷ್ಟಿಷ್ಟು ತಿಂಡಿ, 11ರ ಸುಮಾರಿಗೆ ಚಾಕ್ಲೆಟ್, ಬಿಸ್ಕೆಟ್, ಚಕ್ಕುಲಿ, ನಿಪ್ಪಟ್ಟು ಮಾದರಿಯ ಸ್ನ್ಯಾಕ್ಸ್, ಲಂಚ್‌ಗೆ ಕೆಚಪ್ ಹಚ್ಚಿದ ಬ್ರೆಡ್ಡು, ಸಂಜೆಗೆ ಮ್ಯಾಗಿ, ನೂಡಲ್ಸ್, ಗೋಬಿ, ಚಾಟ್ಸ್ ಅಥವಾ ಅಂಥದ್ದೇ ಮತ್ತೊಂದು ಖಾದ್ಯ. ಸಾಂಪ್ರದಾಯಿಕ ಅನ್ನ, ಸಾಂಬಾರ್, ರಸಂ, ಮೊಸರನ್ನ ಎಂದರೆ ಹೆಚ್ಚಿನ ಮಕ್ಕಳಿಗೆ ಅಲರ್ಜಿ. ಅದರಲ್ಲೂ ಸೊಪ್ಪು, ತರಕಾರಿ ಎಂದರೆ ಇನ್ನೂ ದೂರ.
ನಮ್ಮ ಅಂದಿನ ಶಾಲೆಗಳಲ್ಲಿ ಪ್ರತ್ಯೇಕ ಕ್ರೀಡಾಂಗಣ, ದೈಹಿಕ ಶಿಕ್ಷಕರು, ದೈಹಿಕ ಶಿಕ್ಷಣ ಪಾಠ ಇರಲಿಲ್ಲ. ಸಂಜೆ ಮೂರರ ಬಳಿಕದ ಒಂದು ಗಂಟೆ ಎಲ್ಲ ಮಕ್ಕಳಿಗೂ ಸಾಮೂಹಿಕ ಪಿ.ಟಿ ಪೀರಿಯಡ್ ಆಗಿತ್ತು. ಈ ಹೊತ್ತಲ್ಲಿ ಮಕ್ಕಳು ತಮಗೆ ಬೇಕಾದ ಆಟವನ್ನು, ಬೇಕಾದ ರೀತಿಯಲ್ಲಿ ಆಡಬಹುದಿತ್ತು. ಕೊನೆಗೆ ಜನಗಣಮನ ಹಾಡಿ ಮನೆಗೆ ಮರಳುವಷ್ಟರಲ್ಲಿ ಇಡೀ ದೇಹ ಬೆವರಿನಿಂದ ಒದ್ದೆಯಾಗಿರು ತ್ತಿತ್ತು. ಮನೆಗೆ ಬಂದ ಬಳಿಕವೂ ನಮ್ಮ ಆಟಕ್ಕೆ ಬ್ರೇಕ್ ಇರುತ್ತಿರಲಿಲ್ಲ. ದಣಿವು, ಸುಸ್ತು, ಬೋರು ಎಂಬ ಪದಗಳನ್ನು ನಾವು ಕೇಳಿಯೇ ಇರಲಿಲ್ಲ. ಎಸ್ಸೆಸ್ಸೆಲ್ಸಿಗೆ ಬಂದ ಹುಡುಗ, ಹುಡುಗಿಯರು ‘ಪೀಚಲು’ಗಳಂತೆ ಕಂಡರೂ ಆರೋಗ್ಯವಂತರಾಗಿರುತ್ತಿದ್ದರು. ಹಿರಿಯರ ಕೆಲಸಕ್ಕೆ ಸಾಥ್ ನೀಡುವ ಉಮೇದು ಇರುತ್ತಿತ್ತು. ಈಗ ಓದುವುದು ಬಿಟ್ಟು ಇನ್ನಾವುದೇ ಕೆಲಸ ಮಾಡದಂತೆ ನಮ್ಮ ಮಕ್ಕಳಿಗೆ ನಾವೇ ತಾಕೀತು ಮಾಡುತ್ತಿದ್ದೇವೆ. ಅಂದಿನ ‘ಅಭಾವ ವೈರಾಗ್ಯ’ ಪರೋಕ್ಷವಾಗಿ ನಮ್ಮ ಆರೋಗ್ಯ ವನ್ನು ಕಾಪಾಡಿತ್ತು. ಇಂದಿನ ಬಹುಪಾಲು ಮಕ್ಕಳಿಗೆ ಎಲ್ಲವನ್ನೂ ಕ್ಷಣಾರ್ಧದಲ್ಲಿ ಪಡೆಯುವ ಅವಕಾಶಗಳಿವೆ. ಆದರೆ ಈ ಅವಕಾಶಗಳು ದೈಹಿಕ, ಮಾನಸಿಕ ಆರೋಗ್ಯವನ್ನು ಬಿಟ್ಟು ಉಳಿದ ಎಲ್ಲವನ್ನು ನೀಡುತ್ತಿವೆ.
ಒಂದೆಡೆ 2036ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯವನ್ನು ವಹಿಸುವಂತೆ ನಮ್ಮ ಸರಕಾರ ಬಿಡ್ ಸಲ್ಲಿಸಲು ಮುಂದಾಗಿದೆ. ಇನ್ನೊಂದೆಡೆ ನಮ್ಮ ಸರಕಾರಿ ಮತ್ತು ಖಾಸಗಿ ಶಾಲೆಗಳೆಲ್ಲವೂ ಆಟೋಟ ಗಳೆಲ್ಲವನ್ನೂ ಬಿಟ್ಟು ಮಕ್ಕಳಿಗೆ ಪಠ್ಯವನ್ನು ಉರು ಹೊಡೆಸಿ ಅತ್ಯಧಿಕ ಪರ್ಸೆಂಟೇಜ್‌ನೊಂದಿಗೆ ಎಸ್ಸೆಸೆಲ್ಸಿ , ಪಿಯುಸಿ ತೇರ್ಗಡೆ ಮಾಡಿಸಲು ಟೊಂಕ ಕಟ್ಟಿ ನಿಂತಿವೆ. ಎಲ್‌ಕೆಜಿಯಿಂದ ಪದವಿ ಹಂತದವರೆಗೆ ಯಾವ ಸಂದರ್ಭಗಳಲ್ಲೂ ತಮ್ಮ ಬಟ್ಟೆಯ ಇಸ್ತ್ರಿ ಹಾಳು ಮಾಡಿಕೊಳ್ಳದ ಮಕ್ಕಳು; ಬೆವರು, ಮಣ್ಣು ಎಂದರೆ ಕೊಳಕು, ಆಟೋಟಗಳೆಲ್ಲವೂ ವೇಸ್ಟು, ಉತ್ತಮ ಅಂಕ ಗಳಿಸಿ, ಒಳ್ಳೆಯ ಉದ್ಯೋಗ ಗಿಟ್ಟಿಸಿ ಸಂಪಾದನೆಯ ದಾರಿ ಹಿಡಿಯುವುದೇ ಜೀವನದ ಪರಮ ಉದ್ದೇಶ ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಅದಕ್ಕೆ ನಾವಲ್ಲದೆ ಇನ್ನಾರು ಕಾರಣ ?
2020ರ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಖೇಲೋ ಇಂಡಿಯಾದಂತಹ ಸರಕಾರಿ ಯೋಜನೆಗಳು ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವನ್ನು ಒತ್ತಿಹೇಳುತ್ತವೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಕ್ರೀಡೆಗಳಲ್ಲಿ ಅವರ ಸಾಧನೆಯನ್ನು ಉಲ್ಲೇಖಿಸಬೇಕಾಗಿದೆ. ಆದರೆ ವಾಸ್ತವದಲ್ಲಿ ಇವೆಲ್ಲವೂ ಯೋಜನಾ ಹಂತಕ್ಕಿಂತ ಮೇಲೇರುವ ಯಾವ ಸಾಧ್ಯತೆಯೂ ಕಾಣುತ್ತಿಲ್ಲ.
ಕರ್ನಾಟಕವೂ ಸೇರಿದಂತೆ ದೇಶದ ಮುಕ್ಕಾಲು ಪಾಲು ಶಾಲೆಗಳಲ್ಲಿ ಆಟದ ಮೈದಾನಗಳು, ಕ್ರೀಡಾ ಸಲಕರಣೆಗಳ ಕೊರತೆ ಇದೆ. ಬೆಂಗಳೂರಿನಂತಹ ನಗರದಲ್ಲಿಯೇ 7,000 ಶಾಲೆಗಳ ಪೈಕಿ ಶೇ 40ರಷ್ಟ ರಲ್ಲಿ ಸುಸಜ್ಜಿತ ಕ್ರೀಡಾ ಮೈದಾನಗಳಿಲ್ಲ. ಕ್ರೀಡಾ ಪರಿಕರಗಳಿಲ್ಲ. ಅದೆಷ್ಟೋ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಪಠ್ಯೇತರ ಚಟುವಟಿಕೆಗಳಿಗಿಂತ ಅಕಾಡೆಮಿಕ್ ಅಂಕಗಳಿಗೆ ಹೆಚ್ಚು ಒತ್ತು ನೀಡುವ ಪೋಷಕರಿಗೂ ಶಾಲೆಗಳಲ್ಲಿ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುವುದು ಬೇಕಿಲ್ಲ.
ಕರ್ನಾಟಕ ಸರಕಾರದ 2018ರ ಕ್ರೀಡಾ ನೀತಿಯು 2030 ರೊಳಗೆ ರಾಜ್ಯವ್ಯಾಪಿ ಕ್ರೀಡಾ ವಾತಾವರಣ ವನ್ನು ಸೃಷ್ಟಿಸುವ, ಎಲ್ಲರನ್ನೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಗುರಿ ಹೊಂದಿದೆ. ರಾಜ್ಯದ ಎಲ್ಲೆಡೆ, ಎಲ್ಲಾ ವಯೋ ಮಾನದವರಿಗೆ ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಬಗ್ಗೆಯೂ ಈ ನೀತಿಯಲ್ಲಿ ಪ್ರಸ್ತಾವಿಸಲಾಗಿದೆ. ಈ ಗುರಿ ಈಡೇರಲು ಇನ್ನು ಕೇವಲ ಐದು ವರ್ಷಗಳಷ್ಟೇ ಬಾಕಿ ಇದೆ. ಆದರೆ ವಾಸ್ತವ ಏನು ಗೊತ್ತೇ ? 2017ರಿಂದ ನಮ್ಮ ಯಾವುದೇ ಸರಕಾರಿ ಶಾಲೆಗಳಿಗೆ ದೈಹಿಕ ಶಿಕ್ಷಕರ ನೇಮಕ ಆಗಿಲ್ಲ. ನಿವೃತ್ತರಾದ ಶಿಕ್ಷಕರ ಸ್ಥಾನಗಳಿಗೆ ಹೊಸಬರನ್ನು ನೇಮಿಸಿಲ್ಲ. ಕ್ರೀಡಾ ಚಟುವಟಿಕೆಗಳಲ್ಲಿ ಮುಂದಿರುವ ವಿಜಯಪುರ, ಚಾಮರಾಜನಗರ, ದಕ್ಷಿಣ ಕನ್ನಡ, ಕಲಬುರಗಿ ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಪದವಿ ಪೂರ್ವ ಕಾಲೇಜುಗಳ ಸ್ಥಿತಿ ಇನ್ನೂ ಶೋಚನೀಯವಾಗಿದೆ. ರಾಜ್ಯದ ಸುಮಾರು 1300 ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಕೇವಲ 20 ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿಯೂ ಕೇವಲ 6 ಹುದ್ದೆಗಳು ಮಾತ್ರ ತುಂಬಿವೆ ಎಂಬ ಮಾಹಿತಿ ಇದೆ. ನಿಯಮಾವಳಿಗಳ ಪ್ರಕಾರ 200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರಿರಬೇಕು. ಇದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ದೈಹಿಕ ಶಿಕ್ಷಕರನ್ನು ಹೊಂದುವ ಭಾಗ್ಯವೂ ಇಲ್ಲ.
ನಮ್ಮ ನಿರ್ಲಕ್ಷ್ಯದ ಕಾರಣದಿಂದ ಎಳವೆಯಲ್ಲಿಯೇ ದೈಹಿಕ ಚಟುವಟಿಕೆಗಳಿಂದ ವಂಚಿತರಾದ ಮಕ್ಕಳು ಸಣ್ಣ ಪ್ರಾಯದಲ್ಲಿಯೇ, ಬೊಜ್ಜು, ಮಧುಮೇಹ, ರಕ್ತದೊತ್ತಡದಂತಹ ಜೀವನ ಶೈಲಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದೈಹಿಕ ಚಟುವಟಿಕೆಗಳು ಶರೀರಕ್ಕೆ ಮಾತ್ರವಲ್ಲ. ನಮ್ಮ ಮಕ್ಕಳ ಮಾನಸಿಕ ವಿಕಸನಕ್ಕೂ ಅಗತ್ಯವಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆಗಿಂತ ಉತ್ತಮ ಮಾರ್ಗ ಬೇರೆ ಇಲ್ಲ. ಆದರೆ ದೈಹಿಕ ಚಟುವಟಿಕೆಗಳಿಂದ ದೂರವಾದ ಯುವಕರು ಸಣ್ಣಪುಟ್ಟ ಒತ್ತಡಗಳನ್ನೂ ನಿಬಾಯಿಸಲಾಗದೆ ಅತಿರೇಕದ ಕ್ರಮಗಳಿಗೆ ಕೈ ಹಾಕುತ್ತಿದ್ದಾರೆ. ದೈಹಿಕ ಚಟುವಟಕೆಗಳಿಂದ ದೂರವಾದ ಸ್ಥೂಲಕಾಯರಿಂದ ತುಂಬಿದ ಸಮಾಜ ಹೇಗಿರಬಹುದೆನ್ನುವುದಕ್ಕೆ ಭಾರತವೇ ಉದಾಹರಣೆಯಾಗಿ ನಿಲ್ಲುತ್ತಿದೆ.
ಅಂತಾರಾಷ್ಟ್ರೀಯ ಡಯಾಬಿಟಿಸ್ ಫೆಡರೇಶನ್ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳನ್ನು ಹೊಂದಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಭಾರತ ದಲ್ಲಿ 0-19 ವರ್ಷ ವಯಸ್ಸಿನ ಸುಮಾರು ಮೂರು ಲಕ್ಷ ಮಂದಿ ಟೈಪ್ 1 ಮಧುಮೇಹದಿಂದ ಬಳಲು ತ್ತಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂದು ಲಕ್ಷಕಿಂತ ಹೆಚ್ಚು ಮಕ್ಕಳು ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದಾರೆ.
ಇದರ ಜತೆಗೆ ಟೈಪ್ ಟೈಪ್ 2 ಮಧುಮೇಹದ ಪ್ರಮಾಣವೂ ಇತ್ತೀಚೆಗೆ ಗಣನೀಯವಾಗಿ ಹೆಚ್ಚಾಗಿದೆ. ಡಯಾಬಿಟಿಸ್ ಫೆಡರೇಶನ್ ವರದಿಯ ಪ್ರಕಾರ, ಭಾರತ 10 ಕೋಟಿಗಿಂತಲೂ ಹೆಚ್ಚು ಮಧುಮೇಹಿ ಗಳನ್ನು ಹೊಂದಿದೆ. ಸುಮಾರು 14 ಕೋಟಿ ಮಂದಿ ಮಧುಮೇಹ ಪೂರ್ವ ಹಂತದಲ್ಲಿದ್ದಾರೆ. ಈ ಒಟ್ಟು ಸಂಖ್ಯೆಯಲ್ಲಿ ಮಕ್ಕಳ ಅನುಪಾತವೂ ಹೆಚ್ಚಾಗುತ್ತಲೇ ಇದೆ.
ನಿಜ ಹೇಳಬೇಕೆಂದರೆ ಹೃದಯದ ಕಾಯಿಲೆ ಎಂದರೆ ನಮ್ಮ ಮನಸ್ಸಿನ ಕಾಯಿಲೆಯೂ ಹೌದು. ಮನಸ್ಸಿನೊಳಗೆ ಬೇಕುಗಳ ಒತ್ತಡ ಹೆಚ್ಚಿದಂತೆಲ್ಲ, ಶರೀರವನ್ನೂ ಸಜ್ಜುಗೊಳಿಸಬೇಕಾಗುತ್ತದೆ. ಆಧುನಿಕ ಜೀವನದ ಅಗತ್ಯ ಮತ್ತು ಅನಿವಾರ್ಯತೆಗಳಿಗೆ ಒಡ್ಡಿಕೊಂಡ ದೇಹಕ್ಕೆ ಅಗತ್ಯ ದಂಡನೆ, ಆರೈಕೆ, ಪೋಷಣೆ, ಸಾಂತ್ವನ, ವಿಶ್ರಾಂತಿ ದೊರೆಯದೆ ಹೋದಾಗ ಶರೀರವೂ ಜರ್ಜರಿತಗೊಳ್ಳುತ್ತದೆ. ನಮ್ಮ ಎಲ್ಲ ‘ಇಲ್ಲ’ಗಳ ನಡುವೆ ಇರುವುದರ ಬಗ್ಗೆ ಯೋಚಿಸಿ ಅದರಲ್ಲಿ ನೆಮ್ಮದಿ ಕಂಡುಕೊಂಡರೆ ಹೃದಯಕ್ಕೂ ಸಾಂತ್ವನ ದೊರಕಬಹುದು. ವ್ಯಾಧಿಯ ಮೂಲ ಪತ್ತೆ ಹಚ್ಚದೆ ರೋಗ ವಾಸಿ ಮಾಡಲು ಸಾಧ್ಯವಿಲ್ಲ. ನಮ್ಮ ಪ್ರತಿಭೆ, ಸಾಮರ್ಥ್ಯ ಎಲ್ಲವನ್ನು ಪಠ್ಯಾಧಾರಿತ ಅಂಕಗಳಿಂದಲೇ ಅಳೆಯುವ, ಅಂಕ ಗಳಿಕೆಯ ನೆಪದಲ್ಲಿ ದೈಹಿಕ ಚಟುವಟಿಕೆಗಳಿಂದ ದೂರ ಮಾಡುವ ಶಿಕ್ಷಣದ ಮೂಲವ್ಯಾಧಿಗೆ ಮದ್ದರೆಯುವುದು ಸದ್ಯದ ತುರ್ತು ಅಗತ್ಯ.