ಕಾಡುದಾರಿ
ನಿಧಿ ಸಿಗಬಹುದು, ಸಿಕ್ಕರೆ ಬದುಕು ಬಂಗಾರ ಎಂಬುದು ಮನುಷ್ಯನ ಪುರಾತನ ಆಸೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ರಿತ್ತಿ ಮನೆತನದವರ ಮನೆಯ ಪಾಯ ಅಗೆಯುವಾಗ ಸಿಕ್ಕಿದ ಬಂಗಾರ, ಇದೀಗ ಇಡೀ ಲಕ್ಕುಂಡಿಯನ್ನು ಅಗೆದು ಗಾಳುಮೇಳು ಮಾಡುವ ಹಂತಕ್ಕೆ ಹೋಗಿದೆ. ಸಿಗಬಹುದು, ಸಿಗದೆ ಯೂ ಇರಬಹುದು.
ನಿಧಿಯನ್ನು ಸರಕಾರಕ್ಕೆ ಒಪ್ಪಿಸಿದವರನ್ನೂ ಒಂದು ಹಂತದಲ್ಲಿ ಕಾಡಿದ ಆಮಿಷ, ಮನುಷ್ಯ ಸಹಜವಾದದ್ದು. ಹಾಗೆ ನೋಡಿದರೆ ಎಲ್ಲ ಪುರಾತನ ದೇಗುಲಗಳು, ಪಾಳು ದೇವಾಲಯಗಳು, ರಾಜಮನೆತನಗಳ ಅರಮನೆಗಳು ನಿಧಿಗಳ ಮೇಲೆ ಕೂತಿರುವ ಸಾಧ್ಯತೆ ಇದ್ದೇ ಇದೆ. ಕಷ್ಟಕಾಲಕ್ಕೆ ಆಗಲೆಂದು, ಮುಂದಿನ ತಲೆಮಾರಿಗೆ ಸಿಗಲೆಂದು, ಅಯೋಗ್ಯರಿಗೆ ಸಿಗದಿರಲೆಂದು, ಯಾರಿಗೂ ದಕ್ಕದಿರಲೆಂದು- ಹೀಗೆ ನಾನಾ ಕಾರಣಗಳಿಗಾಗಿ ಬಂಗಾರ ಅವಿತಿಡುವುದು ಮನುಷ್ಯನ ಹುಟ್ಟು ಗುಣ.
ಹಂಪಿಯ ಯಾವ ಪಾಳುದೇಗುಲದ ಕಲ್ಲನ್ನೂ ನಿಧಿಚೋರರು ಕಿತ್ತೆಸೆದು ಹುಡುಕಾಡದೆ ಬಿಟ್ಟಿಲ್ಲ. ನಿಧಿಗಳ ಬಗ್ಗೆ ನಾವೆಲ್ಲ ಸಾಕಷ್ಟು ಕತೆಗಳನ್ನು ಕೇಳಿರುತ್ತೇವೆ. ನಾನಂತೂ ಕೇಳಿದ್ದೆ- ಪುತ್ತೂರಿನ ಬಳಿ ಆಗಮಿಸಿದ ಕೇರಳದ ಮಂತ್ರವಾದಿಯೊಬ್ಬ ನಿಧಿಯ ಆಸೆ ತೋರಿಸಿ ವೃದ್ಧ ದಂಪತಿಯನ್ನು ಕೊಂದು ಗಂಟಿನೊಂದಿಗೆ ಪರಾರಿಯಾದನಂತೆ.
ಪಡುಬಿದ್ರಿ ಬಳಿ ಪಾಳುಬಿದ್ದ ದೇವಾಲಯದಲ್ಲಿ ಯಾರೋ ನಿಧಿಯನ್ನು ಅಗೆದು ತೆಗೆದಿದ್ದಾರಂತೆ. ಕುದುರೆಮುಖದ ಪಾಳು ಬಿದ್ದ ಪಟ್ಟಣದಲ್ಲಿ, ಕೋಲಾರದ ಗಣಿ ಪ್ರದೇಶಗಳಲ್ಲಿ ನಿಧಿ ಹುಡುಕುತ್ತಾ ಕೆಲವು ಮಂದಿ ಅಲೆಯುತ್ತಿದ್ದಾರಂತೆ.
ಇದನ್ನೂ ಓದಿ: Harish Kera Column: ಖಗೋಳ-ಭೂಗೋಳ ಬೆಸೆದ ಶ್ರೀನಿವಾಸ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕೊಳ್ಳೇಗಾಲದ ಮಾಂತ್ರಿಕರು ಆಗಾಗ ಕಾಣಿಸಿಕೊಳ್ಳುತ್ತಾರಂತೆ. ನಿಧಿ ಸಿಗುತ್ತದೆ ಎಂಬ ಆಸೆಗೆ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಯಾರೋ ಮಂತ್ರವಾದಿ ಮಗು ವೊಂದನ್ನು ಬಲಿ ಕೊಟ್ಟನಂತೆ. ಹೀಗೆ ಎಲ್ಲೂ ಬಿಡದ ನಿಧಿಯ ಮಾಯೆ.
ಪಾಳು ಗುಡಿ ಕಂಡಾಗಲೆಲ್ಲ ಮನುಷ್ಯನಿಗೆ ಅನಿಸುವುದು: ಇದರೊಳಗೆ ಎಲ್ಲಾ ಹಿಂದಿನವರು ಚಿನ್ನ ಹೂತಿಟ್ಟಿರಬಹುದೆ? ಗರ್ಭಗುಡಿಯಲ್ಲಿದ್ದ ದೇವತೆ ಭಿನ್ನವಾಗಿ, ಗೋಡೆಗಳೆಲ್ಲ ಕುಸಿದು, ಅಲ್ಲಲ್ಲಿ ನಿಽಕಳ್ಳರು ಅಗೆದ ಗುರುತು. ಶತಮಾನಗಳ ಹಿಂದೆ ಸೋಮನಾಥ ದೇವಸ್ಥಾನಕ್ಕೆ ದಾಳಿ ಮಾಡಿದ ಘೋರಿ, ಘಜ್ಜಿಗಳಿಗೂ ಇದೇ ಆಸೆಯಿತ್ತು.
ಗರ್ಭಗುಡಿಯಲ್ಲಿರುವ ಕಲ್ಲಿನ ಮೂರ್ತಿಯ ಮೇಲೆ ಅಷ್ಟೊಂದು ಚಿನ್ನ ಇರುವಾಗ, ಒಳಗೆ ಇನ್ನಷ್ಟು ಇರದು ಎನ್ನಲಾಗುವುದೆ? ಇರಬಹುದು ಎಂದು ನಾವೂ ನಂಬಬಹುದು. ಅದಕ್ಕೆ ಕಾರಣವೂ ಇದೆ ಯಲ್ಲ- ತಿರುವಾಂಕೂರಿನ ಅನಂತಪದ್ಮನಾಭ ದೇವಾಲಯ. ಕೆಲ ವರ್ಷ ಹಿಂದೆ ನೆಲಮಾಳಿಗೆ ಕೋಣೆಯ ಕದ ತೆರೆದು ನೋಡಿದ ಅಧಿಕಾರಿಗಳಿಗೆ ಸಿಕ್ಕಿದ್ದು ಕೋಟಿ ಕೋಟಿ ಮೌಲ್ಯದ ಚಿನ್ನ.
ಅದರ ಲೆಕ್ಕಾಚಾರವೇ ಇನ್ನೂ ಮುಗಿದಿಲ್ಲ. ಇನ್ನೂ ಕೆಲ ಕೋಣೆಗಳು ತೆರೆಯದೆ ಬಾಕಿಯಿವೆ. ಅದರೊಳಗೇನಿದೆಯೊ? ಅನುಮಾನ, ಸೊತ್ತಿನ ಸ್ವಾಮಿತ್ವದ ತಗಾದೆ, ಕ್ರೈಂಗಳು ನಿಧಿಯ ಸುತ್ತಲಿನ ಹಾವಿನಂತೆ.ಹುಟ್ಟಿದ ಮನುಷ್ಯನನ್ನು ಕಟ್ಟಿಟ್ಟ ಗಂಟಿನ ಆಸೆ ಕಾಡುತ್ತಲೇ ಇರುವುದು ಕೊನೆತನಕ. ಅದಕ್ಕೆಂದೇ ನೂರಾರು ಕಥನಗಳು ಹುಟ್ಟಿಕೊಳ್ಳುತ್ತವೆ.
ಮೊದಮೊದಲು ಸ್ಥಳೀಯ ಜನಪದ ಕತೆಗಳಾಗಿ ಬಾಯಿಂದ ಬಾಯಿಗೆ ಹರಿದಾಡುತ್ತವೆ. ಕೊನೆಗೆ ಕತೆಗಾರರ ಕತೆಗಳಲ್ಲಿ, ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಸಿನಿಮಾಗಳಾಗುತ್ತವೆ. ಭಾರ ತೀಯ ನೆಲದ ಕತೆಗಳಲ್ಲಿ ನಿಧಿಯನ್ನು ಕಾಯಲು ಸರ್ಪ ಕಾಯಂ. ಈಜಿಪ್ಟಿನ ಪಿರಮಿಡ್ ಕಥನ ಗಳಲ್ಲಿ ನಾನಾ ಬಗೆಯ ಹಾವು ಚೇಳುಗಳು.
ಅಮೆಜಾನ್ ನದಿ ತೀರದ ನೆಲಗಳಲ್ಲಿ ಸರ್ಪಗಳಂತೆ ಆದಿವಾಸಿಗಳು. ಅಂತೂ ಬಗೆಬಗೆಯ ಅಗ್ನಿದಿವ್ಯ ದಾಟದೆ ನಿಧಿ ದೊರೆಯದು. ನಮ್ಮ ಪುರಾತನರು ನಿಧಿ ಹುಗಿದಿಟ್ಟಿದ್ದಾರೆ ಎಂಬ ಅನಿಸಿಕೆ ಸಂಪೂರ್ಣ ಸುಳ್ಳು ಅನ್ನುವಂತಿಲ್ಲ. ಸುಳ್ಳು ಅಂದುಬಿಟ್ಟರೆ ರೋಚಕ ಜಗತ್ತೊಂದರ ಕದದ ಕೀಲಿಕೈಯನ್ನು ನಾವಾಗಿ ಎಸೆದುಬಿಟ್ಟಂತೆ. ನಮ್ಮ ಬಗೆಬಗೆಯ ನಿಧಿಶೋಧದ ಕತೆ ಕಾದಂಬರಿಗಳು ಸಿನಿಮಾಗಳಿಗೆ ವಸ್ತುವಾದ ಸಂಗತಿಗಳು ಎದುರು ನಿಂತು ಕಾಡುತ್ತವೆ.
ಉದಾಹರಣೆಗೆ, ದಕ್ಷಿಣ ಅಮೆರಿಕದ ಅರಿರೋನಾದ ಮರುಭೂಮಿಯಲ್ಲಿರುವ ಪರ್ವತಗಳು ಮತ್ತು ಗ್ರಾಂಡ್ ಕ್ಯಾನ್ಯನ್ ಕಣಿವೆ ಪರ್ವತಗಳು. ಸ್ಥಳೀಯ ನಿವಾಸಿಗಳಾದ ಅಪಾಚೆ ಇಂಡಿಯನ್ನರಿಗೆ ಇವು ಪವಿತ್ರ ಪ್ರದೇಶಗಳಾಗಿದ್ದವು. ಈ ಪ್ರದೇಶಗಳಿಗೆ ದಾಳಿಯಿಟ್ಟ ಸ್ಟೇನಿಗರು ಇಲ್ಲೇ ನಿಧಿಯಿದೆ ಎಂದು ಭ್ರಮಿಸಿ ಹುಡುಕತೊಡಗಿದರು.
120 ವರ್ಷಗಳಿಂದ ಹುಡುಕುತ್ತಲೇ ಇದ್ದಾರೆ. ಹುಡುಕಾಟದಲ್ಲಿ ನೂರಾರು ಮಂದಿ ನಿಗೂಢವಾಗಿ ಸತ್ತಿದ್ದಾರೆ. ಕೆಲವರಿಗೆ ಇದು ಭ್ರಮೆಗೆ ತೆತ್ತ ಬೆಲೆಯಾದರೆ, ಇನ್ನು ಕೆಲವರಿಗೆ ನಿಧಿಯಿದೆಯೆನ್ನಲು ಇದೇ ಸಾಕ್ಷಿ. ಇನ್ನು ಎಲ್ ಡೊರಾಡೋ ಎಂಬ ಚಿನ್ನದ ಪಟ್ಟಣ. ಇದು ದಕ್ಷಿಣ ಅಮೆರಿಕಾದ ಅಮೆಝಾನ್ ನದಿ ತೀರದ ಗೊಂಡಾರಣ್ಯದ ಇರುವ ಪುರಾತನ ಪಟ್ಟಣ, ಇಲ್ಲಿ ಚಿನ್ನ ತುಂಬಿ ತುಳುಕುತ್ತಿತ್ತಂತೆ. ಇಲ್ಲಿನ ರಾಜ ಚಿನ್ನದ ಹುಡಿಯ ಸ್ನಾನ ಮಾಡುತ್ತಿದ್ದನಂತೆ. ಈ ದಂತಕತೆಯನ್ನು ನಂಬಿ ಕೊಲಂಬಿಯಾ, ಬ್ರೆಜಿಲ, ವೆನೆಜುವೆಲಾ ದೇಶಗಳನ್ನೆಲ್ಲ ಪಾಶ್ಚಾತ್ಯ ಶೋಧಕರು ಹುಡುಕಿದ್ದೇ ಹುಡುಕಿದ್ದು, ಇಲ್ಲೂ ಹಲವಾರು ಸಂಶೋಧಕರು ಹೇಳಹೆಸರಿಲ್ಲದೆ ನಾಪತ್ತೆಯಾದರು.
ಮೂರನೆಯದು ಈಜಿಪ್ಟಿನ ಪಿರಮಿಡ್‌ಗಳು. ಇವು ಮೊದಲಿನಿಂದಲೂ ನಿಧಿಕಳ್ಳರಿಗೆ ಸ್ವರ್ಗಸಮಾನ. 1797ರಲ್ಲಿ ಗಿಸೆಪ್ ಫೆರ್ಲಿನಿ ಎಂಬ ಇಟಲಿಯ ಶೋಧಕ ಈಜಿಪ್ಟಿನ ಹಲವಾರು ಪಿರಮಿಡ್‌ಗಳನ್ನು ಹುಡಿಗಟ್ಟಿ, ಅಲ್ಲಿ ಹುಗಿದಿಡಲಾಗಿದ್ದ ನಿಧಿಯನ್ನು ಎತ್ತಿ ಕೊಂಡೊಯ್ದ. ಈತ ತಾನು ಪಡೆದ, ಮಾರಿದ ಚಿನ್ನದ ದಾಖಲೆ ಇಟ್ಟ. ಉಳಿದವರು ಅದೂ ಮಾಡಲಿಲ್ಲ.
1922ರಲ್ಲಿ ರಾಜ ಟೂಟಾಂಖಮುನ್ನ ಸಮಾಧಿ ಇಂಥದೊಂದು ಪಿರಮಿಡ್‌ನಡಿಯಲ್ಲಿ ಪತ್ತೆ ಯಾಯ್ತು. ಅಲ್ಲಿ ನೂರಾರು ಚಿನ್ನದ ವಸ್ತುಗಳು ಸಿಕ್ಕವು. ಇದು ಇನ್ನಷ್ಟು ಪಿರಮಿಡ್ ಗಳಡಿಯಲ್ಲಿ ಚಿನ್ನವಿದೆಯೆನ್ನಲು ಸಾಕ್ಷ್ಯವಾಯ್ತು. ಆದರೆ ಇಂದು ಪಿರಮಿಡ್‌ಗಳಿಗೆ ಸರ್ಪಗಾವಲು. ಅಲ್ಲಿ ಏನು ಸಿಕ್ಕಿದರೂ ಸರಕಾರಕ್ಕೆ ಹೋಗಬೇಕು.
ಈಗ ಆಧುನಿಕ ಟ್ರೆಷರ್ ಹಂಟ್ ಒಂದರ ಕಥೆ. 2010ರಲ್ಲಿ ಫಾರೆಸ್ಟ್ ಫೆನ್ ಎಂಬ ವಿಚಿತ್ರ ಸ್ವಭಾವದ ಕೋಟ್ಯಾಧಿಪತಿ ಕಲಾ ವ್ಯಾಪಾರಿ ವಿಲಕ್ಷಣ ನಿಧಿಶೋಧಕ್ಕೆ ಚಾಲನೆ ನೀಡಿದ. ಅವನಿಗಾಗಲೇ 80 ವರ್ಷ. ಕ್ಯಾನ್ಸರ್ ಬಂದಿತ್ತು. ಅವನು ರಾಕಿ ಪರ್ವತ ಶ್ರೇಣಿಯ ಅರಣ್ಯದಲ್ಲಿ ಎಲ್ಲ ಒಂದು ಕಡೆ ಸುಮಾರು 15 ಲಕ್ಷ ಡಾಲರ್ ಬೆಲೆಬಾಳುವ ಚಿನ್ನಾಭರಣ ಇತ್ಯಾದಿಗಳನ್ನು ಹುಗಿದಿಟ್ಟ.
ನಂತರ ತನ್ನ ಆತ್ಮಕತೆ (The Thrill of the Chase) ಬರೆದು, ಅದರಲ್ಲಿ ನಿಧಿಯ ಸುಳಿವು ನೀಡುವ 24 ಸಾಲುಗಳ ‘ರಹಸ್ಯಸೂತ್ರ’ ಕವನವೊಂದನ್ನು ಬರೆದಿಟ್ಟ. ತಗೊಳ್ಳಿ, ನೂರಾರು ಮಂದಿ ಈ ನಿಧಿಯ ಹಿಂದೆ ಬಿದ್ದರು. ಹುಡುಕಾಟ ಸುಲಭವಾಗಿರಲಿಲ್ಲ. ಶೋಧದಲ್ಲಿ ಐದು ಮಂದಿ ಮೃತಪಟ್ಟರು.
2016ರಲ್ಲಿ 54 ವರ್ಷದ ರ‍್ಯಾಂಡಿ ಬಿಲಿಯು ಎಂಬಾತ ನಿಧಿ ಹುಡುಕುತ್ತಾ ಹೋಗಿ ನದಿಗೆ ಬಿದ್ದು ಸತ್ತ. ಅವನ ಮೃತದೇಹ ನ್ಯೂ ಮೆಕ್ಸಿಕೋದಲ್ಲಿನ ರಿಯೋ ಗ್ರಾಂಡೆ ನದಿಯ ಬಳಿ ಏಳು ತಿಂಗಳ ನಂತರ ಪತ್ತೆಯಾಯಿತು. ಮುಂದಿನ ನಾಲ್ಕು ವರ್ಷಗಳಲ್ಲಿ ಇನ್ನೂ ನಾಲ್ವರು ಜೀವ ಕಳೆದುಕೊಂಡರು. 80 ವರ್ಷದ ವ್ಯಕ್ತಿ ಹೋಗಲು ಸಾಧ್ಯವಾಗದ ಜಾಗದಲ್ಲಿ ಖಜಾನೆ ಇಟ್ಟಿಲ್ಲ ಎಂದು ಫೆನ್ ಸ್ಪಷ್ಟವಾಗಿ ಹೇಳಿದ್ದರೂ, ಗೊಂಡಾರಣ್ಯದಲ್ಲಿ ಶೋಧ ಮುಂದುವರಿಯಿತು.
ಜನ ಅಪಾಯಕಾರಿ ಸ್ಥಳಗಳಲ್ಲಿ ಒದ್ದಾಡಿದರು. ಅನುಭವವಿಲ್ಲದ ಹೈಕರ್‌ಗಳು ಜೀವಕ್ಕೆ ಅಪಾಯ ವಾಗುವ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡರು. ವಿವಾದಗಳು, ಬೆದರಿಕೆಗಳು ಮತ್ತು ಕಾನೂನು ಸಮಸ್ಯೆ ಗಳು ಎದ್ದವು. ಫೆನ್ ಕುಟುಂಬಕ್ಕೆ ಮರಣ ಬೆದರಿಕೆಗಳು ಬಂದವು. ಫೆನ್ ಅವರ ಮೊಮ್ಮಗಳನ್ನು ಕೇಡಿಗಳು ಬೆಂಬತ್ತಿ ಕಾಡಿದರು. ಆದರೂ ಹುಡುಕಾಟ ಮುಂದುವರಿಯಿತು.
ಕೊನೆಗೂ 2020 ಜೂನ್ 6ರಂದು, ಜ್ಯಾಕ್ ಸ್ಟ್ಯೂ- ಎಂಬ ವೈದ್ಯಕೀಯ ವಿದ್ಯಾರ್ಥಿ ನಿಧಿಯನ್ನು ವ್ಯೋಮಿಂಗ್ ಸ್ಟೇಟ್‌ನ ಗುಪ್ತ ಸ್ಥಳದಲ್ಲಿ ಪತ್ತೆ ಹಚ್ಚಿದೆನೆಂದು ಹೇಳಿಕೊಂಡ. ಫೆನ್ ತಮ್ಮ ಬ್ಲಾಗ್ ನಲ್ಲಿ ನಿಧಿ ಪತ್ತೆಯಾಗಿದೆ ಎಂದು ಖಚಿತಪಡಿಸಿದರು. ಈ ಕತೆ ನಿಧಿಶೋಧದ ಥ್ರಿಲ್‌ನ ಜೊತೆಗೆ ನಿಧಿ ಕಾಪಿಡುವ ಮನುಷ್ಯನ ಚಪಲದ ಬಗೆಗೂ ಸಾಕಷ್ಟು ಹೇಳುತ್ತದೆ.
ಎಲ್ಲಿ ನಿಧಿ ಇದೆಯೋ ಇಲ್ಲವೋ, ನಮ್ಮ ಜನಪ್ರಿಯ ಸಾಹಿತ್ಯ, ಹಾಲಿವುಡ್ ಸಿನಿಮಾಗಳಲ್ಲಂತೂ ಸಾಕಷ್ಟು ಇದೆ. ಹೆಚ್ಚಿನ ವೆಸ್ಟರ್ನ್ ಕೌಬಾಯ್ಸ್ ಮೂವಿಗಳಲ್ಲಿ ನಿಧಿಯ ಹುಡುಕುವಿಕೆ ಅನಿವಾರ್ಯ ಅಂಗ. ಮೆಕಾನಸ್ ಗೋಲ್ಡ್, ದಿ ಗುಡ್ ದಿ ಬ್ಯಾಡ್ ಆಂಡ್ ದಿ ಅಗ್ಲಿ ಇಂಥ ಚಿತ್ರಗಳಲ್ಲ ಅನುಪಮ ವಾದ್ದು. ನಮ್ಮ ‘ಇವನೇ ಶ್ರೀಮನ್ನಾರಾಯಣ’ ಕೂಡ. ನಿಧಿ ಕೆಟ್ಟವರಿಗೆ ದಕ್ಕದೆ ಒಳ್ಳೆಯವರಿಗೆ ಸಿಕ್ಕು ವುದು, ಕೆಲವೊಮ್ಮೆ ಯಾರಿಗೂ ಸಿಗದೆ ಮಣ್ಣಿನಡಿ ಸಮಾಧಿಯಾಗುವುದು, ಇಂಥ ಚಿತ್ರಗಳಿಗೆಲ್ಲ ಸಾಮಾನ್ಯವಾದ ಕಥಾಹಂದರ.
ಹಳೆಯ ಕಾಲದ ಹರಿದ ಚರ್ಮದ ಮ್ಯಾಪುಗಳು, ಎದೆಗೆಡಿಸುವ ಅಪಾಯಕಾರಿ ಜಾಡುಗಳು, ದುರಾಸೆ ಹೊತ್ತ ಮನುಜರು, ನಿಗೂಢ ಕೀಲಿಗಳನ್ನುಳ್ಳ ಗಜಗಾತ್ರದ ಬಾಗಿಲುಗಳು, ಲಡ್ಡು ಹಿಡಿದ ಮರದ ಪೆಟ್ಟಿಗೆಗಳಲ್ಲಿ ಅವಿತಿಟ್ಟ ವಜ್ರಗಳು, ನೇರ ಯಮಲೋಕಕ್ಕೆ ಕಳಿಸಬಲ್ಲ ವಿಷಕಾರಿ ಜೇಡ- ಇರುವೆ- ಹಾವುಗಳು, ನಂಬಿಸಿ ಎರಡೆಣಿಸುವ ಜೊತೆಗಾರರು ಇವೆಲ್ಲ ಟ್ರೆಷರ್‌ಹಂಟ್ ಸಿನಿಮಾಗಳಲ್ಲಿ ಇರಲೇಬೇಕು. ಭಾರತದಲ್ಲಿ ಸಾಕಷ್ಟು ಕಡೆ ಊಹಿಸಲಾಗದ ಮೊತ್ತದ ನಿಧಿಯಿದೆ ಎಂದು ಹೇಳುವು ದುಂಟು.
ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ, ಕೃಷ್ಣಾ ನದಿ ಪಾತ್ರದಲ್ಲಿ ಕೊಹಿನೂರ್ ವಜ್ರ ದೊರೆತ ಗೋಲ್ಗೊಂಡಾ ಗಣಿ ಪ್ರದೇಶ, ಹೈದರಾಬಾದಿನ ಚಾರ್ ಮಿನಾರ್ ಮತ್ತು ಗೋಲ್ಗೊಂಡಾ ಕೋಟೆ ಯನ್ನು ಸೇರಿಸುವ ಸುರಂಗ, ಹೈದರಾಬಾದಿನ ಕೊನೆಯ ನಿಜಾಮ್ ಅಡಗಿಸಿಟ್ಟ ಸಂಪತ್ತು, ಜಹಾಂಗೀರ್ ಅಡಗಿ ಕುಳಿತ ಆಳ್ವಾರ್ ಕೋಟೆ, ಜೈಗಢದ ರಾಜಾ ಮಾನ್‌ಸಿಂಗ್‌ನ ಅಮಿತ ಸಂಪತ್ತು (ಇದನ್ನು ಇಂದಿರಾ ಗಾಂಽ ಸೇನೆ ಕಳಿಸಿ ಹುಡುಕಿ ವಿಫಲರಾಗಿದ್ದರು ಎಂಬ ಪ್ರತೀತಿ) ಇವೆಲ್ಲ ನಿಧಿಯಾಸೆಯ ಬೆಂಕಿಗೆ ತುಪ್ಪವೆರೆಯುವಂಥ ಸಂಗತಿಗಳೇ.
ಎಲ್ಲರಲ್ಲೂ ಅಂಥದೊಂದು ಕನಸಿನ ಬಾಗಿಲುಗಳಿವೆ. ಅದು ತೆರೆಯುವುದನ್ನೇ ಕಾದು ಕೂತಿzರೆ ಎಲ್ಲರೂ. ತಿಳಿದೋ ತಿಳಿಯದೆಯೋ ಕಾಸಿನ ಬೆನ್ನು ಹತ್ತಿರುವ ನಾವುಗಳೆಲ್ಲ ಅಂಥದೊಂದು ನಿಧಿ ಯನ್ನು ಎಚ್ಚರದಂತಿರುವ ಮಂಪರಿನಲ್ಲಿ ಹುಡುಕುತ್ತಿದ್ದೇವೆ. ಲಕ್ಷ ಹೂಡಿ ಕೋಟಿ ಬರುತ್ತದೆಂದು ಜೊಲ್ಲು ಸುರಿಸುವ ಬೆಂಗಳೂರಿನ ರಿಯಲ್ ಎಸ್ಟೇಟ್, ದಿನದ ದುಡಿಮೆಯನ್ನು ತಂದು ಕುದುರೆ ಕಾಲಿಗೆ ಕಟ್ಟುವ ರೇಸು, ಯಾವುದೋ ಕಂಪೆನಿಯನ್ನು ನಂಬಿ ಜೀವಮಾನದ ಗಳಿಕೆಯನ್ನು ಹೂಡುವ ಷೇರು...ಇವೆಲ್ಲ ನಿಧಿಶೋಧನೆಗಳಲ್ಲದೆ ಇನ್ನೇನು?