ಕಾಡುದಾರಿ
ಹಬೆಯಾಡುವ ಕಾಫಿ ಒಂದೊಂದೇ ಸಿಪ್ ಒಳಗಿಳಿಯುತ್ತಾ ಕಪ್ಪಿನಲ್ಲಿ ಉಳಿದ ಕೊನೆಯ ಗುಟುಕು. ಕೊನೆಯ ಸಿಪ್ ತುಸು ಸಿಹಿ, ತುಸು ಕಹಿ. ಈ ಹೊತ್ತಿಗೆ ಇದೇ ಲಾಸ್ಟ್ ಸಿಪ್ ಎಂಬ ಅರಿವಿನಿಂದ, ಇದರ ಅನುಭವ ಬಾಚಿಕೊಳ್ಳೋಣ ಎಂಬ ತಹತಹದಿಂದ ಮೂಡಿದ ಸಿಹಿ.
ಮುಗಿಯಿತ ಎಂಬ ಯೋಚನೆಯಿಂದ ಮೂಡಿದ ಕಹಿ. ನಾಳೆ ಮುಂಜಾನೆ ಮತ್ತೆ ಹೀರಲಿರುವ ಒಂದು ಕಪ್ ಕಾಫಿಯ ನಿರೀಕ್ಷೆಯಿಂದ ಮೂಡಿದ ಉಪಶಾಂತಿ. ಡಿಸೆಂಬರಿನ ಕೊನೆಯ ವಾರ. ಇನ್ನೇನು ಕಳಚಲಿರುವ ಕೊನೆಯ ಹಳದಿ ಎಲೆ. ಮತ್ತೆ ಮೂಡಲಿರುವ ಚಿಗುರಿಗೆ ತುಡಿಯುತ್ತಿರುವ ಒಣ ಕೊಂಬೆ. ಕೊಂಬೆಯ ಮೇಲೆ ಚಳಿಗೆ ಮುದುಡಿ ಕುಳಿತ ಹಳೆಯ ಹದ್ದು.
ಹಿಮ ತುಂಬಿದ ದಾರಿಯಲ್ಲಿ ಕುದುರೆಯ ಮೇಲೆ ಕುಳಿತು ಸಾಗುತ್ತಿದ್ದಾನೆ ಕವಿ. ದಾರಿಯ ಸುತ್ತಮುತ್ತ ಸೂಚಿಪರ್ಣ ವೃಕ್ಷಗಳು ಬೆಳೆದು ನಿಂತಿವೆ. ಈ ಕಾಡು ಯಾರದೋ ನನಗೆ ಅಸ್ಪಷ್ಟವಾಗಿ ನೆನಪಿದೆ ಎಂದುಕೊಳ್ಳುತ್ತೇನೆ. ಅವನ ಮನೆ ಇಲ್ಲೇ ಎಲ್ಲೋ ಪಕ್ಕದ ಊರಿನಲ್ಲಿದೆ. ಈ ಕಾಡು ಸುರಿಯುತ್ತಿರುವ ಹಿಮದಿಂದ ತುಂಬಿ ಹೋಗುತ್ತಿದೆ. ಅದನ್ನು ನೋಡಲು ನಾನು ನಿಂತಿರುವೆ ಎಂಬುದು ಅವನಿಗೆ ಗೊತ್ತಾಗದು.
ಯಾವ ಫಾರ್ಮ್ ಹೌಸೂ ಹತ್ತಿರದಲ್ಲಿ ಇಲ್ಲದೆ, ಕಗ್ಗಾಡು ಮತ್ತು ಮಂಜುಗಟ್ಟಿರುವ ಸರೋವರಗಳ ನಡುವೆ ನಾನು ಪಯಣ ನಿಲ್ಲಿಸಿರುವುದು ನನ್ನ ಕುದುರೆಗೆ ವಿಚಿತ್ರ ಅನಿಸಿರಬಹುದು- ಎಂದು ಬರೆಯುತ್ತಾನೆ ಕವಿ. ನಂತರ ಬರೆಯುತ್ತಾನೆ ಈ ಒಂದು ಕಂಗೆಡಿಸುವ ಸಾಲು- The darkest evening of the year ಈ ವರುಷದ ಕಗ್ಗತ್ತಲಿನ ಸಂಜೆಯಿದು.
ಇದನ್ನೂ ಓದಿ: Harish Kera Column: ಚಿಂತನೆಯನ್ನು ಟ್ರಿಮ್ ಮಾಡುವ ರೇಜರ್ʼಗಳು
ರಾಬರ್ಟ್ ಫ್ರಾಸ್ಟ್ ಎಂಬ ಆಂಗ್ಲ ಕವಿಗೆ Stopping by Woods ಎಂಬ ಕವನ ಬರೆಯು ವಾಗ ಇದು ಕಾಲದ ಪರೀಕ್ಷೆಯಲ್ಲಿ ಮಸುಕಾಗದೆ ಉಳಿಯಬಲ್ಲ ಕವನ ಎಂದು ಗೊತ್ತಾಗಿತ್ತೋ ಇಲ್ಲವೋ ತಿಳಿಯದು. ಅದು ಓದುಗನಲ್ಲಿ ವಿಚಿತ್ರ ತಳಮಳ ಹುಟ್ಟಿಸುವ ಪದ್ಯ. ಅದು ಕಾಲ ಕಾಲಾಂತರದ ಯಾತ್ರಿಕನ ಕಳವಳ, ನಿಟ್ಟುಸಿರು, ಕಾಯುವಿಕೆ, ದೃಢತೆ ಎಲ್ಲವನ್ನು ಕಾಣಿಸುವ ಹಾಡು.
ವರ್ಷದ ಕಗ್ಗತ್ತಲಿನ ಸಂಜೆ ಎಂದರೇನು. ಅದು ದಕ್ಷಿಣಾಯನದ ನಡುಗಾಲವೇ, ನಮ್ಮ ದಕ್ಷಿಣಾ ಯನ ಎಂಬ ಪರಿಕಲ್ಪನೆ ಫ್ರಾಸ್ಟ್‌ಗೆ ಗೊತ್ತೇ, ಹಗಲು ಚಿಕ್ಕದಾಗಿ ಇರುಳು ಸುದೀರ್ಘವಾಗಿರುವ ಚಳಿಗಾಲದ ಒಂದು ಸಂಜೆಯೇ, ಅಥವಾ ಪಯಣ ಎಲ್ಲಿಗೂ ತಲುಪಿಸದ ಹತಾಶೆಯಿಂದ ಒಳಗೊಳಗೇ ಹಬ್ಬಿದ ನೈರಾಶ್ಯದ ಸಂಜೆಯೇ- ಕವಿ ನಮಗೇ ಬಿಟ್ಟುಬಿಡುತ್ತಾನೆ.
ನಂತರ ಕುದುರೆ ಸಣ್ಣದಾಗಿ ಕತ್ತು ತೊನೆದು ಗಂಟೆ ಸದ್ದು ಮಾಡುತ್ತದೆ. ದಾರಿ ತಪ್ಪಿತೇ ಎಂದು ಯಜಮಾನನನ್ನು ಅದು ಕೇಳುತ್ತಿರುವಂತಿದೆ. ಯಜಮಾನ ಮಾತನಾಡುವುದಿಲ್ಲ. ಅವನು ನಿಸರ್ಗದ ಇತರ ನಿಗೂಢ ಸದ್ದುಗಳಲ್ಲಿ ಮಗ್ನ. ಅವೂ ಹೆಚ್ಚಿಲ್ಲ- ಊ ಎಂದು ಉಯ್ಯಲಿಡುವ ಶೀತಗಾಳಿ ಮತ್ತು ತುಂಬಾ ಮೃದುವಾಗಿ ಹೂ ದಳಗಳಂತೆ ಬೀಳುತ್ತಿರುವ ಹಿಮದ ಪಕಳೆಗಳ ಸದ್ದು ಮಾತ್ರ. ನಂತರ ಬರುತ್ತದೆ ನೋಡಿ ಫ್ರಾಸ್ಟ್‌ನ ಟ್ರಂಪ್‌ಕಾರ್ಡ್- The woods are lovely, dark and deep/ But I have promises to keep/ And miles to go before I sleep/ And miles to go before I sleep.
‘ಚೆಲುವಾಗಿವೆ ವನವೆಲ್ಲವು, ಕತ್ತಲಿಟ್ಟಿದೆ, ಗಾಢವಾಗಿದೆ/ ಆದರೆ ನಾನು ಕೊಟ್ಟಿರುವ ಭರವಸೆ ಪಾಲಿಸ ಕಿದೆ/ ನಿದ್ರಿಸುವ ಮೊದಲು ಸಾಗಬೇಕಿದೆ ಮೈಲುಗಳ ದೂರ/ ನಿದ್ರೆ ಹೋಗುವ ಮುನ್ನ ತಲುಪಬೇಕಿದೆ ದೂರ ತೀರ’. ಇಲ್ಲಿಗೆ ಕವಿತೆ ಮುಗಿಯುತ್ತದೆ. ಈ ಕಾಡು ಎಷ್ಟೊಂದು ದಟ್ಟವಾಗಿದೆ, ನಿಗೂಢವಾಗಿದೆ, ಆಳವಾಗಿದೆ. ಆದರೆ ಪ್ರೀತಿ ಹುಟ್ಟಿಸುವಂತಿದೆ.
ಆದರೇನು ಮಾಡಲಿ, ನಾನು ಯಾರಿಗೋ ಬರುವೆನೆಂದು ವಚನ ಕೊಟ್ಟಿದ್ದೇನೆ. ಅದನ್ನು ಪಾಲಿಸ ಬೇಕಿದ್ದರೆ ಪಯಣ ಮುಂದುವರಿಸಬೇಕಿದೆ. ಕೊನೆಯ ಸಾಲನ್ನು ಎರಡೆರಡು ಸಲ ಕವಿ ಹೇಳುತ್ತಿರು ವುದು ಪಯಣಿಗ ತನ್ನ ಗಮ್ಯವನ್ನು ಮತ್ತೆ ದೃಢಪಡಿಸಿಕೊಳ್ಳಲೆಂದು, ದಾರಿಯ ಮೇಲಿನ ನಂಬಿಕೆ ತಪ್ಪದಿರಲೆಂದು, ಆತ್ಮವಿಶ್ವಾಸ ಕುಸಿದು ಪಯಣ ಅರ್ಧಕ್ಕೆ ನಿಲ್ಲದಿರಲೆಂದು.
ಈ ಪದ್ಯ ನಮಗೆ ನೀಡಿರುವುದು ಕೆಲವು ಬಿಂಬಗಳನ್ನು ಮಾತ್ರ. ಕುದುರೆ ಮೇಲೆ ಸಾಗುತ್ತಿರುವ ಪಯಣಿಗ, ಕಾಡು, ಮಂಜುಗಟ್ಟಿದ ಸರೋವರ, ಉದುರುತ್ತಿರುವ ಹಿಮ, ದಟ್ಟ ಸಂಜೆ. ಕಾಣಿಸದ ಚಿತ್ರಗಳು ಕೆಲವಿವೆ- ಪಯಣಿಗನ ನಾವರಿಯದ ಗಮ್ಯ, ಆತನ ಗುರುತರಿಯದ ಸ್ನೇಹಿತ, ಪಕ್ಕದ ಇರಬಹುದಾದ ಊರು. ಹೇಳಿದ್ದಕ್ಕಿಂತಲೂ ಹೇಳದಿರುವ ಸಂಗತಿಗಳನ್ನೇ ನಮ್ಮ ಮನದಲ್ಲಿ ನೆಡು ತ್ತದೆ ಪದ್ಯ. ಅಲ್ಲೇ ಎಲ್ಲೋ ಸನಿಹದಲ್ಲಿರುವ, ಆದರೆ ಇವನ ಗಮನ ತಿಳಿದಿಲ್ಲದ ಅವನ ಗೆಳೆಯ ಯಾರು.
ಅವನ ಬಳಿಯೇಕೆ ಈತ ಹೋಗಲಿಲ್ಲ. ಆ ಇರುಳುಗತ್ತಲಿನ ಸಂಜೆಯಲ್ಲಿ ಕಾಡು ಹಾಗೂ ಸರೋ ವರದ ನಡುವೆ ಇವನೇಕೆ ಕುದುರೆ ನಿಲ್ಲಿಸಿದ. ಇವನೆಲ್ಲಿಗೆ ಹೋಗಬೇಕಿದೆ. ಯಾರಿಗೆ ಯಾವ ವಚನ ಕೊಟ್ಟಿzನೆ. ನಿದ್ರಿಸುವ ಮೊದಲು ಬಲುದೂರ ಸಾಗಬೇಕಿದೆ ಎಂದರೆ, ನಿದ್ರೆಗಾಗಿಯೇ ಆ ಗಮ್ಯ ತಲುಪಿಕೊಳ್ಳೋಣ ಎಂಬ ಹಂಬಲವಿರಬಹುದೇ.
ಯಾವುದದು ಆ ಅಂತಿಮ ತಂಗುದಾಣ. ಪ್ರಶ್ನೆಗಳು ಮುಗಿಯುವುದಿಲ್ಲ- ಇವನು ಪಯಣ ಮುಂದು ವರಿಸಿದಂತೆ ಈ ಕಾಡು ಮತ್ತು ಇಳಿಮಂಜಿನ ಸಂಜೆಯ ಸೊಗಸು ಏನಾಗುತ್ತದೆ. ಅದು ಅವನಲ್ಲಿ ಉಳಿದು ಬೆಳೆಯುತ್ತದೆಯೋ, ಇನ್ನಷ್ಟು ದೃಢತೆ ತುಂಬುತ್ತದೆಯೋ, ಅಥವಾ ಇದನ್ನು ಬಿಟ್ಟು ಹೋಗಬೇಕಲ್ಲ ಎಂಬ ವಿಷಾದವನ್ನು ತುಂಬುತ್ತವೆಯೋ. ವರ್ಷದ ಈ ಕೊನೆಯ ತಿಂಗಳಲ್ಲಿ ನಿಂತು ನೋಡಿದಾಗ, ಈ ವರ್ಷದಲ್ಲಿ ನಾವು ಸಾಗಿಬಂದ ದಾರಿ ಸೊಗಸಾಗಿತ್ತು ಅನಿಸಿತೇ ಅಥವಾ ವಿಷಾದ ಮೂಡಿಸಿತೇ. ಹಾಗೇ ಕಳೆದ ಹತ್ತು ವರ್ಷ? ಇಪ್ಪತ್ತು ವರ್ಷ? ಈ ಬದುಕು? ಒಂದು ಒಳ್ಳೆಯ ಕವನ ಹೀಗೆ ನಮ್ಮಲ್ಲಿ ನಾವೇ ಉತ್ತರಿಸಿಕೊಳ್ಳಬೇಕಾದ ಪ್ರಶ್ನೆಗಳನ್ನೂ ಬಿತ್ತುವುದು.
ಇದೇ ಕವನದ ಮುಂದುವರಿದ ಭಾಗದಂತಿರುವ ಇನ್ನೊಂದು ಕವನವನ್ನೂ ಇದರ ಜೊತೆಗೇ ನೋಡೋಣ. ಇದನ್ನು ಬರೆದವನು ಹೆನ್ರಿ ವರ್ಡ್ಸ್ ವರ್ತ್ ಲಾಂಗ್ ಫೆಲೋ ಎಂಬ ಅಮೆರಿಕನ್ ಕವಿ. ಬಹುಶಃ ರಾಬರ್ಟ್ ಫ್ರಾಸ್ಟ್‌ನ ಆ ಕವಿತೆಗಿಂತಲೂ (1923) ನಲುವತ್ತನಾಲ್ಕು ವರ್ಷ ಮೊದಲೇ (1879) ಇದನ್ನಾತ ಬರೆದ. ವಿಶೇಷ ಅಂದರೆ ಇದೂ ಕಾಲ ಹಾಗೂ ಪಯಣಕ್ಕೇ ಸಂಬಂಧಿಸಿದ್ದು.
ಫ್ರಾಸ್ಟ್ ನ ಕವಿತೆಯಲ್ಲಿ ಕುದುರೆಯೇರಿ ಕಾಡಿನ ನಡುವೆ ಸಾಗಿರುವ ಪಯಣಿಗನಿದ್ದರೆ, ಇದರಲ್ಲಿ ಸಮುದ್ರ ತೀರದಲ್ಲಿ ನಡೆದು ಸಾಗಿರುವ ಪ್ರವಾಸಿಯಿದ್ದಾನೆ. The tide rises, the tide falls ಎಂದು ಆರಂಭವಾಗುತ್ತದೆ ಕವಿತೆ. ಕಡಲಿನ ಅಲೆ ಏರುತ್ತಿದೆ, ಅಲೆ ಇಳಿಯುತ್ತಿದೆ.
ಸಂಜೆಗತ್ತಲು ಗಾಢವಾಗುತ್ತಿದೆ. ಕಡಲ ಹಕ್ಕಿ ದೂರದಿಂದ ಕೂಗುತ್ತಿದೆ. ಅಲೆಗಳಿಂದ ಒದ್ದೆಯಾದ ಕಂದು ಮರಳಿನ ಮೇಲೆ ಪ್ರಯಾಣಿಕ ಯಾವುದೋ ಪಟ್ಟಣದ ಕಡೆಗೆ ಸಾಗಿzನೆ. ಮನೆಯ ಮೇಲ್ಚಾ ವಣಿ, ಗೋಡೆಗಳ ಮೇಲೆ ಕತ್ತಲು ನಿಧಾನವಾಗಿ ಬಂದು ಕುಳಿತುಕೊಳ್ಳುತ್ತದೆ. ಇರುಳಿನಲ್ಲಿಯೇ ಸಮುದ್ರ ಭೋರ್ಗರೆಯುತ್ತಿದೆ. ಸಣ್ಣ ಅಲೆಗಳು ಸಾಗಿ ಬಂದು ತಮ್ಮ ಮೃದುವಾದ ಬಿಳಿ ಕೈಗಳಿಂದ ಮರಳಿನ ಮೇಲಿನ ಹೆಜ್ಜೆ ಗುರುತುಗಳನ್ನು ಅಳಿಸುತ್ತವೆ.
ಕವಿ ಹೀಗೆ ಮುಗಿಸುತ್ತಾನೆ- The morning breaks; the steeds in their stalls/ Stamp and neigh, as the hostler calls/ The day returns, but nevermore/ Returns the traveller to the shore/ And the tide rises, the tide falls .- ಇಷ್ಟೆ. ರಾತ್ರಿ ಕಳೆದು ಬೆಳಗು ಹರಿಯುತ್ತದೆ.
ಹಯಶಾಲೆಯಲ್ಲಿ ಕುದುರೆಗಳ ಹೇಷಾರವ. ಹಗಲು ಮರಳಿದೆ. ಆದರೆ ಆ ಪಯಣಿಗ ಅದೇ ತೀರಕ್ಕೆ ಮತ್ತೆ ಮರಳುವುದಿಲ್ಲ. ಮತ್ತು, ಅಲೆ ಏಳುತ್ತಿರುತ್ತದೆ, ಬೀಳುತ್ತಿರುತ್ತದೆ. ಕವಿ ಹೇಳದೆ ಬಿಟ್ಟದ್ದೂ ಮುಖ್ಯ. ಆ ಸಂಜೆ ಕಡಲಿನ ಸಣ್ಣ ತೆರೆಗಳು ಬಂದು ಮರಳಿನ ಮೇಲೆ ಅಳಿಸಿದ ಹೆಜ್ಜೆ ಗುರುತುಗಳು ಪಯಣಿಗನದಿರಬಹುದು. ಕವಿ ಹಾಗೆಂದು ಹೇಳುವುದಿಲ್ಲ.
ಇಲ್ಲಿ ಪಯಣಿಗನ ಗಮ್ಯ ನಗಣ್ಯ. ಅವನು ನಿರಂತರವಾಗಿ ಮರಳಿ ಮರಳಿ ಬಂದು ದಂಡೆಗೆ ಬಡಿಯುತ್ತಿರುವ ಕಡಲಿನ ತೆರೆಗಳ ಪಕ್ಕದ ಸಾಗಿಹೋಗುವ ಒಂದು ಕ್ಷಣದ ಯಾತ್ರಿಕ. ಅಂಥ ಲಕ್ಷ ಯಾತ್ರಿಕರು ಆ ಕಡಲಿನ ಪಕ್ಕದಲ್ಲಿ ಹೋಗಿರಬಹುದು. ಅವರು ಅತ್ತ ಹೋದ ಕೂಡಲೇ ತೆರೆಗಳು ಬಂದು ಆ ಹೆಜ್ಜೆ ಗುರುತುಗಳನ್ನು ಅಳಿಸಿಹಾಕುತ್ತವೆ.
ಫ್ರಾಸ್ಟ್‌ನ ಕವಿತೆಯಲ್ಲಿ ಯಾತ್ರಿಕ ಮುಖ್ಯ, ಅವನ ಪಯಣ ಮುಖ್ಯ. ನಿದ್ರಿಸುವ ಮುನ್ನ ಅಂದು ಕೊಂಡ ಗುರಿ ತಲುಪುವುದು ಮುಖ್ಯ. ಲಾಂಗ್-ಲೋ ಕವಿತೆಯಲ್ಲಿ ಏರಿಳಿವ ಹಗಲು- ಇರುಳುಗಳ ಚಕ್ರ ಮುಖ್ಯ. ಎಷ್ಟೋ ಯಾತ್ರಿಕರನ್ನು ಕಂಡರೂ ತನ್ನ ಕರ್ತವ್ಯದಲ್ಲಿ ವಿಚಲಿತಗೊಳ್ಳದ ಕಡಲು ಮುಖ್ಯ. ಪ್ರಯಾಣಿಕ ಅಮುಖ್ಯ.
ಮೇಲೆ ಹೇಳಿದ ರಾಬರ್ಟ್ ಫ್ರಾಸ್ಟ್ ಇನ್ನೂ ಒಂದು ಕವನ ಬರೆದಿzನೆ- ದಿ ರೋಡ್ ನಾಟ್ ಟೇಕನ್ ಎಂಬುದದರ ಹೆಸರು. ಹಿಡಿಯದ ದಾರಿ. ಬೇರೆ ಯಾರೂ ಹಿಡಿದಿರದ, ಆದ್ದರಿಂದಲೇ ಸವೆದಿರದ, ನಡೆದು ನೋಡು ಬಾ ಎಂದು ಆಹ್ವಾನಿಸುವ, ಕಾಡಿನ ನಡುವೆ ಸಾಗುವ ದಾರಿ. ಯಾರೂ ಹಿಡಿಯದ ದಾರಿಯಲ್ಲಿ ಸಾಗಿದ ಕವಿ ಜೀವನದಲ್ಲಿ ಬಹಳ ದೊಡ್ಡ ವ್ಯತ್ಯಾಸವನ್ನು ಕಾಣುತ್ತಾನೆ- ಇತರರಿಂದ ಸಾಧ್ಯವಾಗಿರದ ಹೊಸತನವನ್ನು ನೋಡುತ್ತಾನೆ.
ಡಿಸೆಂಬರಿನ ಈ ಕೊನೆಯ ದಿನಗಳಲ್ಲಿ ನಿಂತು ನೋಡಿದರೆ ಏನೆನ್ನಿಸುತ್ತದೆ. ಇಷ್ಟು ದಿನ ನಡೆದು ಬಂದ ದಾರಿ ಸವೆಯಿತು; ಹಾಗೆಯೇ ಸವೆದಿರುವ ಇನ್ನೊಂದು ದಾರಿ ಹಿಡಿದು ಹೋಗೋಣವೇ ಅಥವಾ ಬೇರೆ ದಾರಿ ಹಿಡಿಯೋಣವೇ. ಪಯಣಕ್ಕೆ ಮೊದಲು ಕೊಂಚ ನಿಂತು ಸುತ್ತಮುತ್ತ ನೋಡಿ ಈ ಸಂಜೆಯನ್ನು ಸವಿಯೋಣವೇ. ನಾವು ಸಾಗಿದ ಬಳಿಕ ನಮ್ಮ ಹೆಜ್ಜೆಗಳನ್ನೂ ಈ ಕಡಲು ಅಳಿಸಿ ಹಾಕುತ್ತದೆ ಎಂಬುದನ್ನು ಮರೆಯದೇ ತುಸು ವಿನಯದಿಂದ ಹೆಜ್ಜೆಗಳನ್ನು ಇಡೋಣವೇ?