ಸಂಗತ
ಬೆಳ್ಳಿಯು ಪರಿಶುದ್ಧತೆ, ಸಮೃದ್ಧಿ ಹಾಗೂ ದೈವೀಶಕ್ತಿಯ ಸಂಕೇತ. ಆದರೆ ಇತ್ತೀಚೆಗೆ ಬೆಳ್ಳಿಯ ದರ ಏರುತ್ತಿರುವ ಪರಿ ನೋಡಿದರೆ ಅಚ್ಚರಿಯಾಗುತ್ತಿದೆ. ಜಗತ್ತಿನಲ್ಲಿ ಬೆಳ್ಳಿಯ ನಿಕ್ಷೇಪ ಬಹಳ ಕಡಿಮೆಯಿದೆ, ಆದರೆ ಬೇಡಿಕೆ ಬಹಳ ಹೆಚ್ಚಿದೆ. ಹೀಗಾಗಿಯೇ ಈ ಅಮೂಲ್ಯ ಲೋಹ ನಮ್ಮ ಕೈಗೆಟಕುತ್ತಿಲ್ಲ.
ಪಾಕಿಸ್ತಾನಿ ಕವಿ ಕತೀಲ್ ಶಿಫಾಯ್ ಬರೆದ ಗಜಲ್ ಒಂದರ ಸಾಲು ಇತ್ತೀಚೆಗೆ ನನಗೆ ಪದೇಪದೇ ನೆನಪಾಗುತ್ತಿದೆ. ಸುಮ್ಮನೆ ನನ್ನಷ್ಟಕ್ಕೆ ನಾನದನ್ನು ಹಾಡಿಕೊಳ್ಳುತ್ತಿದ್ದೇನೆ. ‘ಚಾಂದಿ ಜೈಸಾ ರಂಗ್ ಹೈ ತೇರಾ! ಈ ಸಾಲಿನಲ್ಲಿ ಬೆಳ್ಳಿಯ ಸೌಂದರ್ಯವನ್ನು ಕವಿ ಎಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾನೆ. ಅಷ್ಟೇ ಸುಂದರವಾಗಿ ಪಂಕಜ್ ಉಧಾಸ್ ಅದನ್ನು ತನ್ಮಯತೆಯಿಂದ ಹಾಡಿ ನಮ್ಮ ಆತ್ಮಕ್ಕೆ ತಟ್ಟು ವಂತೆ ಮಾಡಿದ್ದಾರೆ. ಈ ಹಾಡು ಕೇಳಿದವರು ಯಾರಾದರೂ ಮರೆಯಲುಂಟೇ? ಏಕೆ ನನಗೀಗ ಇದು ನೆನಪಾಗುತ್ತಿದೆ ಅಂದರೆ ಬೆಳ್ಳಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಬನ್ನಿ, ನಾವೀಗ ಬೆಳ್ಳಿಯ ಬಗ್ಗೆಯೇ ಮಾತನಾಡೋಣ.
ಬೆಳ್ಳಿ ಎಂಬ ಲೋಹಕ್ಕೆ ವೈಜ್ಞಾನಿಕವಾಗಿ ಸಾಕಷ್ಟು ಮಹತ್ವವಿದೆ. ಆದರೆ ಭಾರತೀಯ ನಂಬಿಕೆಗಳ ಪ್ರಕಾರ ಇದು ಶುದ್ಧತೆ, ಸಮೃದ್ಧಿ ಮತ್ತು ದೈವೀಶಕ್ತಿಯ ಸಂಕೇತ. ಎಲ್ಲಾ ದೇವರಿಗೂ ಒಡೆಯನಾದ ಭಗವಾನ್ ಪರಮೇಶ್ವರ ಕೂಡ ಇದನ್ನು ತನ್ನ ಜಟೆಯ ಮೇಲೆ ಚಂದ್ರನೊಂದಿಗೆ ಧರಿಸಿದ್ದಾನೆ.
ಸಾಮಾನ್ಯವಾಗಿ ದೇವರ ವಿಗ್ರಹಗಳನ್ನು ಬೆಳ್ಳಿಯಿಂದ ತಯಾರಿಸುತ್ತಾರೆ. ಬೆಳ್ಳಿಯ ಫಲಕದ ಮೇಲೆ ಅಸಂಖ್ಯ ಶಾಸನ ಅಥವಾ ಬರಹಗಳನ್ನು ಬರೆಯಲಾಗಿದೆ. ನಮ್ಮ ಯತಿ ಮುನಿಗಳು ಬೆಳ್ಳಿಯ ಲೋಟದಲ್ಲಿ ನೀರು ಕುಡಿಯುತ್ತಾರೆ. ಮನೆಗೆ ಬಂದ ವಿಶೇಷ ವ್ಯಕ್ತಿಗಳಿಗೆ ನಾವು ಹೆಚ್ಚಿನ ಆತಿಥ್ಯ ನೀಡಬೇಕು ಅಂದರೆ ಬೆಳ್ಳಿಯ ತಟ್ಟೆಯಲ್ಲಿ ಊಟ ಬಡಿಸುತ್ತೇವೆ.
ಇದನ್ನೂ ಓದಿ: Dr Vijay Darda Column: ಬಾಂಗ್ಲಾದೇಶದಲ್ಲಿ ಭಾರತದ ವಿರುದ್ಧ ಭಾರಿ ಷಡ್ಯಂತ್ರ
ಮಗುವಿಗೆ ಮೊದಲ ಊಟದ ತುತ್ತನ್ನು ಬೆಳ್ಳಿಯ ಚಮಚದಿಂದಲೇ ತಿನ್ನಿಸುವುದು ಭಾರತೀಯ ಪರಂಪರೆಯಲ್ಲಿ ರೂಢಿಯಲ್ಲಿದೆ. ‘ಅವನು ಬೆಳ್ಳಿಯ ಚಮಚವನ್ನು ಬಾಯಿಯಲ್ಲಿಟ್ಟುಕೊಂಡೇ ಹುಟ್ಟಿದ್ದಾನೆ ಎಂಬ ಜನಪ್ರಿಯ ನುಡಿಗಟ್ಟನ್ನಂತೂ ನಾವೆಲ್ಲರೂ ಕೇಳಿಯೇ ಇದ್ದೇವೆ. ಬೆಳ್ಳಿಯ ಮಹತ್ವದ ಬಗ್ಗೆ ಇನ್ನೊಂದು ಮಾತಿದೆ - ‘ಒಂದೋ ನೀವು ಬೆಳ್ಳಿಯ ಚಪ್ಪಲಿ ಹಾಕಿಕೊಂಡಿರಬೇಕು, ಇಲ್ಲಾ ಅಧಿಕಾರ ಹೊಂದಿರಬೇಕು’.
ಬೆಳ್ಳಿಗೆ ಇಷ್ಟೆಲ್ಲಾ ಮಹತ್ವ ಇರುವುದರಿಂದಲೇ ಕವಿಗಳು ಮತ್ತು ಗೀತ ರಚನೆಕಾರರು ಬೆಳ್ಳಿಯ ಸೌಂದರ್ಯ ಮತ್ತು ಚಂದ್ರನ ಬಗ್ಗೆ ಸಾಕಷ್ಟು ಕವಿತೆಗಳನ್ನು ಬರೆದಿದ್ದಾರೆ. ಕತೀಲ್ ಶಿಫಾಯಿ ಬರೆಯುತ್ತಾರೆ: ‘ಚಾಂದಿ ಜೈಸಾ ರಂಗ್ ಹೈ ತೇರಾ, ಸೋನೇ ಜೈಸೆ ಬಾಲ್; ಏಕ್ ತೂ ಹಿ ಧನವಾನ್ ಹೈ ಗೋರಿ, ಬಾಕಿ ಸಬ್ ಕಂಗಾಲ್! (ನಿನ್ನ ಮೈಬಣ್ಣ ಬೆಳ್ಳಿ, ಕೂದಲ ಬಣ್ಣ ಬಂಗಾರ. ಹುಡುಗಿ, ನೀನೊ ಬ್ಬಳೇ ಶ್ರೀಮಂತೆ. ಇನ್ನುಳಿದವರೆಲ್ಲ ತುಂಬಾ ಬಡವರು).
ಆದರೆ ಇದನ್ನು ಬರೆಯುವಾಗ ಮುಂದೊಂದು ದಿನ ಬೆಳ್ಳಿ ಇಷ್ಟೊಂದು ದುಬಾರಿಯಾದೀತು ಎಂದು ಕತೀಲ್ ಯೋಚನೆ ಮಾಡಿದ್ದರೇ? ‘ಹರ್ ಆಂಗನ್ ಮೇ ಆಯೇ ತೇರೆ ಉಜಾಲೇ ರೂಪ್ ಕೀ ಧೂಪ್; ಛೇಲ್ ಛಬೀಲಿ ರಾಣಿ ತೋಡಾ ಗೂಂಘಟ್ ಔರ್ ನಿಕಾಲ್! (ನಿನ್ನ ಪ್ರಕಾಶಮಾನವಾದ ರೂಪದ ಬೆಳಕು ಎಲ್ಲಾ ಅಂಗಳವನ್ನೂ ತಲುಪಲಿ.
ಓ ಸುಂದರ ರಾಣಿ, ಮುಖದ ಪರದೆ ಸರಿಸಿ ಸ್ವಲ್ಪ ಹೊರಗೆ ಓಡಾಡು). ಆದರೆ ಚೋದ್ಯವೇನಾಗಿದೆ ನೋಡಿ. ಆ ರಾಣಿ ತನ್ನ ಮುಸುಕನ್ನು ಯಾವ ಪರಿ ಎತ್ತಿದ್ದಾಳೆ ಅಂದರೆ, ಅದರ ಪ್ರಖರತೆಗೆ ಈಗ ಜಗತ್ತೇ ‘ಅಯ್ಯೋ ಬೆಳ್ಳಿ ಅಯ್ಯೋ ಬೆಳ್ಳಿ! ಎಂದು ಅಳುತ್ತಿದೆ. ಗಜಲ್‌ನ ಮುಂದಿನ ಸಾಲು ‘ಸಾಮನೇ ತು ಆಯೇ ತೋ ಧಡಕನ್ ಮಿಲ್ ಕರ್ ಲಾಖೋಂ ದಿಲ್; ಅಬ್ ಜಾನಾ ಧರತಿ ಪರ್ ಕೈಸೇ ಆತೇ ಹೈ ಭೌಚಾಲ್! ನೀನು ನನ್ನ ಮುಂದೆ ಬಂದಾಗ ಲಕ್ಷಾಂತರ ಹೃದಯಗಳು ಒಂದಕ್ಕೊಂದು ಬಡಿಯು ತ್ತವೆ. ಈಗ ನನಗೆ ಗೊತ್ತಾಯಿತು, ಭೂಕಂಪನಗಳು ಹೇಗೆ ಸಂಭವಿಸುತ್ತವೆ ಎಂದು!
ನಿಜವೇ ಅಲ್ಲವೇ? ಇತ್ತೀಚೆಗೆ ಜಗತ್ತಿನಲ್ಲಿ ಬೆಳ್ಳಿಯ ಬೆಲೆ ಭೂಕಂಪನವನ್ನೇ ಉಂಟುಮಾಡಿದೆಯಲ್ಲ. 2000ನೇ ಇಸ್ವಿಯಲ್ಲಿ 7900 ರುಪಾಯಿ ಇದ್ದ ಒಂದು ಕೆಜಿ ಬೆಳ್ಳಿಯ ಬೆಲೆ 2025ರಲ್ಲಿ ಮೂವತ್ತು ಪಟ್ಟು ಹೆಚ್ಚಿನ ಬೆಲೆಗೆ ಮೌಲ್ಯವನ್ನು ಏರಿಸಿಕೊಳ್ಳುತ್ತದೆ ಎಂದು ಯಾರು ತಾನೇ ಊಹಿಸಿದ್ದರು? ಬೆಳ್ಳಿಯ ಈಗಿನ ಪರಿಸ್ಥಿತಿಯನ್ನು ನೋಡಿದರೆ ಕವಿತೆಯ ಇನ್ನೊಂದು ಸಾಲು ನೆನಪಾಗುತ್ತದೆ: ‘ಬೀಚ್ ಮೇ ರಂಗ್ ಮಹಲ್ ಹೈ ತೇರಾ ಖಾಯಿ ಚಾರೋ ಔರ್; ಹಮ್ ಸೇ ಮಿಲನೇ ಕೀ ಅಬ್ ಗೋರಿ ತೂ ಹೈ ರಾಹ್ ನಿಕಾಲ್!
ನಿನ್ನ ಸುತ್ತ ನಾಲ್ಕೂ ಕಡೆಗಳಲ್ಲಿ ಬಣ್ಣದ ಗೋಡೆಗಳ ಅರಮನೆಯಿದೆ. ಹೇ ಹುಡುಗಿ, ನನ್ನನ್ನು ಭೇಟಿ ಯಾಗಲು ಹೇಗೆ ಬರಬೇಕೆಂದು ನೀನೇ ಈಗೊಂದು ದಾರಿ ಹುಡುಕು. ಆದರೆ ಏನು ತಾನೇ ಹೇಳಲು ಸಾಧ್ಯ? ನಿಮ್ಮ ಮತ್ತು ನನ್ನಂತಹ ಆಭರಣ ಮೋಹಿಗಳ ಸಮಸ್ಯೆಯೇ ಬೇರೆ. ಬೆಳ್ಳಿಯ ಬೆಲೆ ನಮ್ಮ ಕಿಸೆಯನ್ನು ಸುಡುತ್ತಿದೆ, ಏನು ಮಾಡುವುದು ಎಂದು ನಾವು ಪರದಾಡುತ್ತಿದ್ದೇವೆ. ಈಗ ಅದೇ ಗಜಲ್‌ನ ಕೊನೆಯ ಸಾಲನ್ನು ಕೇಳಿ: ‘ಯೇ ದುನಿಯಾ ಹೈ ಖುದ್ ಗರಜೋಂ ಕಿ ಲೇಕಿನ್ ಯಾರ್ ಕತೀಲ್; ತೂನೆ ಹಮಾರೇ ಸಾತ್ ದಿಯಾ ತೋ ಜಿಯೇ ಹಜಾರೋಂ ಸಾಲ್!
ಇದು ಸ್ವಾರ್ಥಿಗಳ ಜಗತ್ತು. ಆದರೆ ಗೆಳೆಯ ಕತೀಲ್, ನೀನು ನಮ್ಮೊಂದಿಗೆ ನಿಂತರೆ ಸಾವಿರಾರು ವರ್ಷಗಳ ಕಾಲ ಹೀಗೇ ಬದುಕಬಹುದು. ಬಹುಶಃ ಇದೇ ಕಾರಣಕ್ಕೆ ನಮ್ಮ ಹಿರಿಯರು ಇನ್ನೊಂದು ನುಡಿಗಟ್ಟು ಬಳಸುತ್ತಿದ್ದರು. ‘ಚಾಂದಿ ಕಾಟ್ನಾ ಎಂಬ ಹಿಂದಿ ನುಡಿಗಟ್ಟು. ಅಂದರೆ ಅದ್ಧೂರಿಯಾಗಿ, ಬಿಂದಾಸ್ ಆಗಿ, ನಮ್ಮದೇ ಸ್ಟೈಲ್‌ನಲ್ಲಿ ಬದುಕುವುದು.
ಕವಿತೆಗಳನ್ನು ದಾಟಿ ವಾಸ್ತವಕ್ಕೆ ಬರೋಣ. ಏಕೆ ಇತ್ತೀಚೆಗೆ ಬೆಳ್ಳಿಯ ಬೆಲೆ ಆ ಪರಿ ನಾಟಕೀಯವಾಗಿ ಏರಿಕೆಯಾಗುತ್ತಿದೆ? ಏಕೆ ಚಿನ್ನದ ದರಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳ್ಳಿ ಬೆಲೆ ಏರಿಕೆಯಾಗುತ್ತಿದೆ? ಸರಳವಾಗಿ ಹೇಳಬೇಕು ಅಂದರೆ, ತಾಂತ್ರಿಕ ಪ್ರಗತಿಯು ಬೆಳ್ಳಿಯ ಬೇಡಿಕೆ ಗಗನಕ್ಕೇರುವಂತೆ ಮಾಡಿದೆ. ಇಂದು ಔದ್ಯೋಗಿಕ ಕ್ಷೇತ್ರದಲ್ಲಿ ಬೆಳ್ಳಿಗೆ ತುಂಬಾ ಬೇಡಿಕೆ ಬಂದಿದೆ. ವಿದ್ಯುಚ್ಚಾಲಿತ ವಾಹನಗಳು, ವಿದ್ಯುತ್ ಉಪಕರಣಗಳಿಂದ ಹಿಡಿದು ಸೋಲಾರ್ ಪ್ಯಾನೆಲ್‌ಗಳು ಮತ್ತು ರಕ್ಷಣಾ ಉಪಕರಣ ಗಳವರೆಗೆ ನಾನಾ ರೀತಿಯ ವಸ್ತುಗಳಲ್ಲಿ ಬೆಳ್ಳಿಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ.
ಬೆಳ್ಳಿಯ ಬೇಡಿಕೆ ಹೆಚ್ಚಳದ ಹಿಂದೆ ಚೀನಾದ ಪಾತ್ರ ದೊಡ್ಡದಿದೆ. 2022ರಲ್ಲೊಂದೇ ಚೀನಾ ಸುಮಾರು 4000 ಟನ್ʼಗಳಷ್ಟು ಬೆಳ್ಳಿಯನ್ನು ಕೇವಲ ಸೋಲಾರ್ ಉತ್ಪನ್ನಗಳ ತಯಾರಿಕೆಗೆ ಬಳಸಿದೆ. ಈಗ ಅದರ ಬೇಡಿಕೆ ಇನ್ನೆಷ್ಟು ಹೆಚ್ಚಾಗಿರಬಹುದು ಎಂಬುದನ್ನು ಯಾರಾದರೂ ಊಹಿಸ ಬಹುದು.
ಚೀನಾ ಬಳಿ 70000 ಟನ್‌ಗಳಷ್ಟು ಬೆಳ್ಳಿಯ ದಾಸ್ತಾನಿದೆ. ಪ್ರತಿ ವರ್ಷ ಅದು 3300 ಟನ್‌ಗಳಷ್ಟು ಬೆಳ್ಳಿಯನ್ನು ಉತ್ಪಾದಿಸುತ್ತದೆ. ಮೆಕ್ಸಿಕೋ ದೇಶ ವಾರ್ಷಿಕ 6000 ಟನ್ ಬೆಳ್ಳಿ ಉತ್ಪಾದನೆಯೊಂದಿಗೆ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ.
ಭಾರತದ ವಿಷಯಕ್ಕೆ ಬರೋಣ. 2024ರಲ್ಲಿ ಜಗತ್ತಿನಲ್ಲಿ ಒಟ್ಟು 25000 ಟನ್ ಬೆಳ್ಳಿ ಉತ್ಪಾದನೆ ಮಾಡಿದ್ದರೆ, ಭಾರತದಲ್ಲಿ ಕೇವಲ 700 ಟನ್ ಬೆಳ್ಳಿ ಉತ್ಪಾದನೆ ಮಾಡಲಾಗಿತ್ತು. ನಮ್ಮ ದೇಶದಲ್ಲಿ ಬೆಳ್ಳಿಯನ್ನು ಉತ್ಪಾದನೆ ಮಾಡುವ ಅತಿದೊಡ್ಡ ಕಂಪನಿಯೆಂದರೆ ಅನಿಲ್ ಅಗರ್ವಾಲ್ ನೇತೃತ್ವದ ವೇದಾಂತ ಗ್ರೂಪ್‌ಗೆ ಸೇರಿದ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಕಂಪನಿ.
ಉದಯ್‌ಪುರದ ಬಳಿಯಲ್ಲಿರುವ ಜವಾರ್ ಮೈನ್ಸ್ ನಮ್ಮ ದೇಶದ ಅತಿದೊಡ್ಡ ಬೆಳ್ಳಿಯ ಗಣಿ. ಆಂಧ್ರ ಪ್ರದೇಶ, ಜಾರ್ಖಂಡ್ ಮತ್ತು ಕರ್ನಾಟಕದಲ್ಲೂ ಸೀಮಿತ ಪ್ರಮಾಣದಲ್ಲಿ ಬೆಳ್ಳಿಯ ನಿಕ್ಷೇಪ ಮತ್ತು ಉತ್ಪಾದನೆಯಿದೆ. ಭಾರತವು ತಾನು ಉತ್ಪಾದಿಸುವುದಕ್ಕಿಂತ ಹೆಚ್ಚು ಬೆಳ್ಳಿಯನ್ನು ಬಳಕೆ ಮಾಡು ತ್ತದೆ. ಇಲ್ಲಿ ಬೆಳ್ಳಿ ಹೆಚ್ಚಾಗಿ ಬಳಕೆಯಾಗುವುದು ಆಭರಣಕ್ಕೆ. ಆದರೆ ಈಗ ಔದ್ಯೋಗಿಕ ವಲಯದಿಂದ ಬೆಳ್ಳಿಗೆ ಬೇಡಿಕೆ ವಿಪರೀತವಾಗಿ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಬೆಳ್ಳಿಯ ಬೆಲೆ ಗಗನಕ್ಕೇರುವು ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಆದರೆ ಹೀಗೇ ಎಷ್ಟು ದಿನ ನಡೆಯುತ್ತದೆ? ಜಗತ್ತು ಚಿಂತೆಗೆ ಬಿದ್ದಿದೆ. ಭೂಗರ್ಭದಿಂದ ನಾವು ಕೇಳಿ ದಷ್ಟು ಕಾಲ ಬೆಳ್ಳಿ ಸಿಗುತ್ತಲೇ ಇರುವುದಿಲ್ಲ. ಅಮೆರಿಕದ ಜಿಯಾಲಜಿಕಲ್ ಸರ್ವೇ ಇಲಾಖೆಯ ಅಧ್ಯಯನದ ಪ್ರಕಾರ, ಭೂಗರ್ಭದಲ್ಲಿ ಸದ್ಯಕ್ಕೆ ಗುರುತು ಮಾಡಿದಂತೆ ಒಟ್ಟು 5.3 ಲಕ್ಷ ಟನ್ ಬೆಳ್ಳಿಯ ಸಂಗ್ರಹವಿದೆ.
ಮುಂದಿನ ಎಂಟು ವರ್ಷಗಳಲ್ಲಿ ಅದು ಖಾಲಿಯಾಗುತ್ತದೆ. ಇದರ ಹೊರತಾಗಿ ಭೂಮಿಯ ಆಳದಲ್ಲಿ ಇರಬಹುದಾದ ಬೆಳ್ಳಿಯ ನಿಕ್ಷೇಪವನ್ನೂ ಗಣನೆಗೆ ತೆಗೆದುಕೊಂಡರೆ ಹೆಚ್ಚೆಂದರೆ ಮುಂದಿನ 20 ವರ್ಷಗಳ ಕಾಲ ಬೆಳ್ಳಿ ಸಿಗಬಹುದು. ಸದ್ಯಕ್ಕೆ ನಾವು ಮಾಡಬಹುದಾದ ಏಕೈಕ ಕೆಲಸವೆಂದರೆ ಇನ್ನೂ ದೊಡ್ಡ ಪ್ರಮಾಣದ ಬೆಳ್ಳಿಯ ನಿಕ್ಷೇಪಗಳು ಮುಂದಿನ ದಿನಗಳಲ್ಲಿ ಸಿಗಬಹುದು ಎಂಬ ಆಶಾಭಾವನೆಯನ್ನು ಇರಿಸಿಕೊಳ್ಳುವುದಷ್ಟೆ.
ಇಲ್ಲವಾದರೆ ‘ಚಾಂದಿ ಜೈಸಾ ರಂಗ್ ಹೈ ತೇರಾ ಎಂದು ಹಾಡುತ್ತಾ ಇರಬಹುದು. ಒಂದು ಕುತೂಹಲ ಕರ ಸಂಗತಿ ಹೇಳುತ್ತೇನೆ. ಅಮೆರಿಕ ತನ್ನ ಮೊದಲ ಪರಮಾಣು ಬಾಂಬ್ ತಯಾರಿಸಿದಾಗ ಅದಕ್ಕೆ ಅಪಾರ ಶಕ್ತಿಯುಳ್ಳ ಅಯಸ್ಕಾಂತದ ಅಗತ್ಯವಿತ್ತು. ಆ ಅಯಸ್ಕಾಂತವನ್ನು ತಯಾರಿಸಲು ಸುಮಾರು 12000 ಟನ್‌ನಿಂದ 14000 ಟನ್‌ಗಳಷ್ಟು ಬೆಳ್ಳಿಯನ್ನು ಬಳಸಲಾಗಿತ್ತು.
ಹಾಗಂತ ಬೆಳ್ಳಿಯು ಪರಮಾಣು ಬಾಂಬ್‌ನ ಒಂದು ಭಾಗವೇನೂ ಆಗಿರಲಿಲ್ಲ. ಆದರೆ ಬೆಳ್ಳಿಯನ್ನು ಬಳಸದೆ ಇದ್ದಿದ್ದರೆ ಪರಮಾಣು ಬಾಂಬ್ ವಿನಾಶಕಾರಿಯಾಗುತ್ತಿರಲಿಲ್ಲ. ಅಂದರೆ ಬೆಳ್ಳಿಯು ತನ್ನದೇ ಆದ ರೀತಿಯಲ್ಲಿ ಮಹಾನ್ ವಿನಾಶಕಾರಿ ಲೋಹ ಎಂದಾಯಿತು!
ನೂರು ವರ್ಷಗಳ ಹಿಂದೆ ಬ್ರಿಟಿಷ್ ಕವಿ ವಾಲ್ಟರ್ ಡಿ ಲಾ ಮೇರ್ ಬರೆದ ಪದ್ಯ ನೆನಪಿಗೆ ಬರುತ್ತಿದೆ: ನಿಧಾನವಾಗಿ, ನಿಶ್ಶಬ್ದವಾಗಿ, ಚಂದ್ರನುಬೆಳ್ಳಿಯ ಬೂಟಿನಲ್ಲಿ ರಾತ್ರಿ ನಡೆಯುತ್ತಿದ್ದಾನೆ; ಈ ಕಡೆ, ಆ ಕಡೆ ಇಣುಕಿ ನೋಡುತ್ತಿದ್ದಾನೆ, ಬೆಳ್ಳಿ ಮರದ ಮೇಲೆ ಬೆಳ್ಳಿ ಹಣ್ಣುಗಳು ಕಾಣುತ್ತಿವೆ!
ನಿಜವಾಗಿಯೂ ಈಗ ಬೆಳ್ಳಿಯು ಬೆಳ್ಳಿಯ ಮರವನ್ನೇ ಹತ್ತಿ ಕುಳಿತಿದೆ. ಚಿನ್ನದ ವಿಷಯವನ್ನು ಇನ್ನೊಮ್ಮೆ ಮಾತನಾಡೋಣ!