ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naveen Sagar Column: ಟಿಕೆಟ್‌ ಕೊಡಿಸಲಾಗದವ ಯಾವ ಸೀಮೆ ಶಾಸಕ !?

ವಿಧಾನಸಭಾ ಅಧಿವೇಶನದ ನಡುವೆ ಸದನದಲ್ಲಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರು ಆಡಿದ ಮಾತುಗಳು ಮೂರ್ನಾಲ್ಕು ದಿನಗಳ ಸೋಷಿಯಲ್ ಮೀಡಿಯಾ ಸರಕಾಯ್ತು. ರಾಜ್ಯವು ಸಮಸ್ಯೆಗಳಿಂದ ತತ್ತರಿಸುತ್ತಾ ಇರುವಾಗ, ಜಗತ್ತು ಯುದ್ಧದ ಅಡ್ಡಪರಿಣಾಮ ಎದುರಿ ಸುತ್ತಿರುವಾಗ, ಜನಪ್ರತಿನಿಧಿಯಾಗಿ ಸದನದಲ್ಲಿ ಮಂಡಿಸಲು ಹಲವಾರು ವಿಷಯಗಳು ಇರು ವಾಗ ಐಪಿಎಲ್ ಟಿಕೆಟ್ ಬೇಕು ಅಂತ ಕೇಳಿದ್ದು ವ್ಯಾಪಕ ಟೀಕೆ, ಟ್ರೋಲ್ ಮತ್ತು ಆಕ್ರೋಶ ಕ್ಕೆ ಗುರಿಯಾಯ್ತು

ಪದಸಾಗರ

ರಾಜಕಾರಣಿಗಳಿಂದ ಪ್ರಜೆಗಳು ಅಭಿವೃದ್ಧಿ ಕೆಲಸ, ಸಮಾಜೋಪಯೋಗಿ ಕೆಲಸ ಗಳನ್ನು ನಿರೀಕ್ಷಿಸುವ ಬದಲು, ಐಪಿಎಲ್ ಟಿಕೆಟ್ ಕೊಡಿಸಲಿ, ಯಾವುದೋ ಕಾಲೇಜಿ ನಲ್ಲಿ ಸೀಟ್ ಕೊಡಿಸಲಿ, ಪಾಸ್ ಮಾಡಿಸಲಿ, ರೆಕಮೆಂಡ್ ಮಾಡಿ ಕೆಲಸ ಕೊಡಿಸಲಿ, ಬಿಗ್ ಬಾಸ್ ಎಂಟ್ರಿ ಕೊಡಿಸಲಿ, ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಹಿಡಿದಾಗ ಬಿಡಿಸಲಿ.. ಈ ಥರದ ಕೆಲಸಗಳನ್ನೇ ನಿರೀಕ್ಷಿಸುತ್ತಾರೆ. ಪರ್ಸನಲ್ ಫೇವರ್‌ಗಳನ್ನು ಬಯಸುವ ಪ್ರಜೆಗಳು ಇರುವ ತನಕ ರಾಜಕಾರಣಿಗಳು ಬದಲಾಗುವುದಿಲ್ಲ.

ವಿಧಾನಸಭಾ ಅಧಿವೇಶನದ ನಡುವೆ ಸದನದಲ್ಲಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರು ಆಡಿದ ಮಾತುಗಳು ಮೂರ್ನಾಲ್ಕು ದಿನಗಳ ಸೋಷಿಯಲ್ ಮೀಡಿಯಾ ಸರಕಾಯ್ತು. ರಾಜ್ಯವು ಸಮಸ್ಯೆಗಳಿಂದ ತತ್ತರಿಸುತ್ತಾ ಇರುವಾಗ, ಜಗತ್ತು ಯುದ್ಧದ ಅಡ್ಡ ಪರಿಣಾಮ ಎದುರಿಸುತ್ತಿರುವಾಗ, ಜನಪ್ರತಿನಿಧಿಯಾಗಿ ಸದನದಲ್ಲಿ ಮಂಡಿಸಲು ಹಲವಾರು ವಿಷಯಗಳು ಇರುವಾಗ ಐಪಿಎಲ್ ಟಿಕೆಟ್ ಬೇಕು ಅಂತ ಕೇಳಿದ್ದು ವ್ಯಾಪಕ ಟೀಕೆ, ಟ್ರೋಲ್ ಮತ್ತು ಆಕ್ರೋಶಕ್ಕೆ ಗುರಿಯಾಯ್ತು. ಆದರೆ ನನ್ನ ಮನಸು ಕೇಳಿಕೊಳ್ಳುತ್ತಿತ್ತು. ಈ ಸದನ ದಲ್ಲಿ ಯಾವತ್ತು ತಾನೇ ಅರ್ಥಪೂರ್ಣ ಚರ್ಚೆ ಆಗಿದೆ.

ಪ್ರತಿದಿನವೂ ಅಪ್ರಬುದ್ಧ, ಅಪ್ರಸ್ತುತ ವಿಷಯಗಳ ಮಂಡನೆ, ವೈಯಕ್ತಿಕ ತೇಜೋವಧೆ, ರೌಡಿಗಳ ಥರದ ಭಾಷಾಪ್ರಯೋಗ, ಪರಸ್ಪರ ಕೆಸರೆರಚಾಟ, ಅಪರೂಪಕ್ಕೆ ಒಳ್ಳೇ ಮೂಡಲ್ಲಿ ದ್ದಾಗ ತಮಾಷೆ!

ಇದರ ಹೊರತಾಗಿ ರಾಜ್ಯದ ಸಮಸ್ಯೆಗಳ ಕುರಿತಾಗಿ, ಅಭಿವೃದ್ಧಿಯ ವಿಚಾರವಾಗಿ ಯಾವ ಒಳ್ಳೆಯ ಚರ್ಚೆಗಳು ಕೇಳಿವೆ. ಹುಡುಕಿದರೂ ಒಬ್ಬೇ ಒಬ್ಬ ಒಳ್ಳೆಯ ಸಂಸದೀಯ ಪಟು ಕಾಣುತ್ತಿಲ್ಲ. ಪಳಗಿದ ಅನುಭವಿ ರಾಜಕಾರಣಿಗಳು ಕೂಡ ಸದನದಲ್ಲಿ ಹಾದಿ ತಪ್ಪಿ ಮಾತನಾಡುವಂತಾಗಿ ಹೋಗಿದೆ.

ಇನ್ನು ನಿಜಕ್ಕೂ ಚೆನ್ನಾಗಿ ಮಾತನಾಡುವ ವ್ಯಕ್ತಿ ಎದ್ದು ನಿಂತರೆ, ಗಹನವಾದ ವಿಚಾರ ಮಾತನಾಡಲು ಶುರುವಿಟ್ಟರೆ ಸ್ಪೀಕರ್ ತಡೆದು ನಿಲ್ಲಿಸಿ ಬಾಯಿಮುಚ್ಚಿಸಿ ಮುಗಿಸಿ ಬಿಡುತ್ತಾರೆ. ನಿಜಕ್ಕೂ ಇಂಥ ಅಶಿಸ್ತಿನ ಸದನ ಮತ್ತು ಅಧಿವೇಶನ ನೋಡಲು ಅಸಹ್ಯ ವಾಗುತ್ತದೆ.

ಇದನ್ನೂ ಓದಿ: Naveen Sagar Column: ಕಥೆ ಹೇಳುವೇ ನನ್ನ ಕಥೆ ಹೇಳುವೆ...!!

ಪ್ರಜೆಗಳ ಕೋಟಿಗಟ್ಟಲೆ ಹಣವನ್ನು ಹವಾನಿಯಂತ್ರಿತ ಹಾಲ್‌ನಲ್ಲಿ ಕೂತು ನಿರುಪಯೋಗಿ ಮಾತನಾಡುತ್ತಾ ದಂಡ ಮಾಡುತ್ತಿದ್ದಾರಲ್ಲ ಎಂದು ಆಕ್ರೋಶ ಹುಟ್ಟುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಗಳ ಅಧಿವೇಶನ ನೋಡಿದಾಗ ಅಲ್ಲಿಗೂ ಇಲ್ಲಿಗೂ ಎಷ್ಟು ವ್ಯತ್ಯಾಸವಿದೆ ಯಲ್ಲ ಅನಿಸುತ್ತದೆ.

ಅಲ್ಲಿಯೂ ಅಂದು ಇಂದು ಅಪ್ರಬುದ್ಧ ಪಪ್ಪೂಗಳು ಇವೆ ನಿಜ. ಆದರೆ ಮೆಜಾರಿಟಿ ಮಾತು ಗಳು ವಿಷಯಾಧಾರಿತವಾಗಿರುತ್ತವೆ. ಸಾಕಷ್ಟು ಅಭಿವೃದ್ಧಿ ಕುರಿತ ಚರ್ಚೆಗಳಾಗುತ್ತವೆ. ಸಮಸ್ಯೆಗಳನ್ನು ಮುಂದಿಡುವ ಪ್ರಯತ್ನವಾಗುತ್ತದೆ. ರಾಜ್ಯ ವಿಧಾನಸಭೆ ಯಾಕಿಷ್ಟು ಗಬ್ಬೆದ್ದು ಹೋಗಿದೆ ಎಂದು ಸಂಕಟವಾಗುತ್ತದೆ.

ಇಲ್ಲಿಯ ಮೇಲ್ಮನೆ ಕೂಡ ಕೆಳಮನೆಗಿಂತ ಕೆಳಮಟ್ಟಕ್ಕಿಳಿದು ಹೋಗಿದೆ ಎಂಬುದು ಇನ್ನೂ ಬೇಸರದ ವಾಸ್ತವ. ಇಂಥ ಸದನದಲ್ಲಿ ಕಾಶಪ್ಪನವರ್ ಮಾತು ಮಾತ್ರವೇ ಇಷ್ಟೊಂದು ಟೀಕೆಗೆ ಗುರಿಯಾಯ್ತು. ಅಫ್‌ ಕೋರ್ಸ್ ಅದು ಟೀಕೆಗೆ ಅರ್ಹವಿದ್ದ ಮಾತುಗಳೇ.

ಎಮ್ಮೆಲ್ಲೆಗಳಿಗೆ ಫ್ರೀ ಐಪಿಎಲ್ ಟಿಕೆಟ್‌ಗಳನ್ನು ಕೊಡಬೇಕು, ಅವರಿಗೆ ಕೂರೋದಕ್ಕೆ ಪ್ರತ್ಯೇಕ ಗ್ಯಾಲರಿ ಬೇಕು ಎಂಬ ಮಾತುಗಳನ್ನು ಕೇಳಿದರೆ ಕಪಾಳಕ್ಕೆ ಬಾರಿಸಬೇಕು ಅನಿಸದಿರದು. ಆದರೆ ಇನ್ನೊಂದು ದೃಷ್ಟಿಕೋನದಲ್ಲಿ ನೋಡಿದಾಗ, ಶಾಸಕರನ್ನು ಹೀಗೆ ಮಾಡಿದವರು ನಾವೇ ಅಲ್ಲವೇ ಎಂಬ ಪ್ರಶ್ನೆ ಏಳುತ್ತದೆ.

ರಾಜಕಾರಣಿಗಳಿಂದ ಪ್ರಜೆಗಳು ಅಭಿವೃದ್ಧಿ ಕೆಲಸ, ಸಮಾಜೋಪಯೋಗಿ ಕೆಲಸಗಳನ್ನು ನಿರೀಕ್ಷಿಸುವ ಬದಲು, ಐಪಿಎಲ್ ಟಿಕೆಟ್ ಕೊಡಿಸಲಿ, ಯಾವುದೋ ಕಾಲೇಜಿನಲ್ಲಿ ಸೀಟ್ ಕೊಡಿಸಲಿ, ಪಾಸ್ ಮಾಡಿಸಲಿ, ರೆಕಮೆಂಡ್ ಮಾಡಿ ಕೆಲಸ ಕೊಡಿಸಲಿ, ಬಿಗ್ ಬಾಸ್ ಎಂಟ್ರಿ ಕೊಡಿಸಲಿ, ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಹಿಡಿದಾಗ ಬಿಡಿಸಲಿ.. ಈ ಥರದ ಕೆಲಸಗಳನ್ನೇ ನಿರೀಕ್ಷಿಸುತ್ತಾರೆ.

ಪರ್ಸನಲ್ ಫೇವರ್‌ಗಳನ್ನು ಬಯಸುವ ಪ್ರಜೆಗಳು ಇರುವ ತನಕ ರಾಜಕಾರಣಿಗಳು ಬದಲಾಗುವುದಿಲ್ಲ. ರಾಜಕಾರಣಿಗೆ ಯಾರಾದರೂ ಫೋನ್ ಮಾಡಿ ‘ನಿಮ್ ಪ್ರಭಾವ ಬಳಸಿ ಒಂದು ಐಪಿಎಲ್ ಟಿಕೆಟ್ ಕೊಡಿಸಿ’ ಅಂದಾಗ ಆ ರಾಜಕಾರಣಿ ತಿರುಗಿ ಬಯ್ದ ಅಂದ್ಕೊಳಿ, ಆತ ದೊಡ್ಡ ವಿಲನ್ ಆಗಿ ಹೋಗ್ತಾನೆ.

‘ಇಲ್ಲಪ್ಪ, ಟಿಕೆಟ್ ಸಿಗೋದು ಕಷ್ಟ ಇದೆ’ ಅಂತ ಹೇಳ್ದ ಅಂದ್ಕೊಳ್ಳಿ, ‘ಅಯ್ಯೋ ಏನ್ ಶಾಸಕ ನೋ ಇವ್ನು, ಆಫ್ಟರಾಲ್ ಒಂದು ಐಪಿಎಲ್ ಟಿಕೆಟ್ ಕೊಡಿಸೋಕೆ ಆಗಲ್ವಂತೆ.. ವೇಸ್ಟು’ ಅಂತಾರೆ. ಹೀಗಿದೆ ಸಮಾಜ. ಮನೆ ಮಕ್ಕಳು, ‘ನಮ್ಮಪ್ಪ ಮಂತ್ರಿ ಇದಾನೆ, ಐಪಿಎಲ್ ಟಿಕೆಟ್ ಕೊಡಿಸ್ತಾನೆ’ ಅಂತ ಬಿಲ್ಡಪ್ ಕೊಟ್ಕೊಂಡಿರ್ತವೆ.

ಐಪಿಎಲ್ ಟಿಕೆಟ್ ಕೊಡಿಸದೇ ಹೋದ್ರೆ ಅವರ ಮರ್ಯಾದೆಯೇ ಹರಾಜಾಗಿ ಹೋಗಿ ಬಿಡುತ್ತೆ. ಅವರೆದುರು ರಾಜಕಾರಣಿ ದುರ್ಬಲ ಅನಿಸಿ ಬಿಡುತ್ತಾನೆ. ರಾಜಕಾರಣಿಗಳದ್ದು, ತಾವು ನೋಡಲಿ ಬಿಡಲಿ, ತಮ್ಮ ಕೋಟಾಗೆ ಒಂದು ಐದು ಟಿಕೆಟ್ ಸಿಕ್ಕರೆ ಹವಾ ಮೇಂಟೇನ್ ಮಾಡಬಹುದು ಎಂಬ ಲೆಕ್ಕಾಚಾರ.

ಐಪಿಎಲ್ ಟಿಕೆಟ್ ಮಾರಾಟದಲ್ಲಿ ಪಾರದರ್ಶಕತೆ ಇದ್ದಿದ್ದರೆ, ಜನಸಾಮಾನ್ಯನಿಗೂ ಟಿಕೆಟ್ ಸಿಕ್ಕಿರುತ್ತಿತ್ತು, ಮಂತ್ರಿಗಳಿಗೂ ಟಿಕೆಟ್ ಸಿಕ್ಕಿರುತ್ತಿತ್ತು. ಮೂಲ ಸರಿ ಮಾಡದೇ ಬೇರೆಲ್ಲೋ ಸರಿಮಾಡಲು ಹೋದರೆ ಸರಿಯಾಗಲು ಸಾಧ್ಯವೇ? ಖಂಡಿತ ಇಲ್ಲ. ಹಿಂದೊಮ್ಮೆ, ಮಾಜಿ ಸಂಸದ ಪ್ರತಾಪ್ ಸಿಂಹ, ‘ಸಂಸದರ ಸಂಬಳ ಮತ್ತು ಭತ್ಯೆ ಹೆಚ್ಚಿಸಬೇಕು’ ಎಂಬ ಅಹವಾಲು ಮುಂದಿಟ್ಟಿದ್ದರು.

‘ಸಂಸದರು ಸಂಬಳ ನಂಬಿಕೊಂಡು ಜೀವನ ಮಾಡ್ತಾರಾ? ಅವರಿಗೇನು ಕಮ್ಮಿ, ಅಕ್ರಮ ವಾಗಿ ಸಾಕಷ್ಟು ಹಣ ಹರಿದು ಬರತ್ತೆ, ಅದರ ಮೇಲೂ ಸಂಬಳ ಬೇರೆ ಜಾಸ್ತಿ ಮಾಡಿ ಅಂತ ಕೇಳ್ತಾರಲ್ಲ?’ ಎಂಬೆಲ್ಲ ಟೀಕೆಗಳು ಬಂದಿದ್ದವು. ಪ್ರಾಮಾಣಿಕ ಸಂಸದರಾಗಿದ್ದರಿಂದಲೇ, ಸಂಬಳವನ್ನು ಮಾತ್ರ ನಂಬಿಕೊಂಡಿದ್ದರಿಂದಲೇ ಪ್ರತಾಪಸಿಂಹ ಅಂದು ಹೆಚ್ಚಳಕ್ಕೆ ಆಗ್ರಹಿಸಿದ್ದಾಗಿತ್ತು.

ಒಬ್ಬ ಪ್ರಾಮಾಣಿಕ ಸಂಸದನ ಕಷ್ಟಗಳೇನು, ಏನೇನು ಸವಾಲುಗಳು, ಖರ್ಚುಗಳು ಬರುತ್ತವೆ ಎಂದೆಲ್ಲ ವಿವರಿಸಿ, ಕಡೇ ಪಕ್ಷ ಅಂಥವನ್ನೆಲ್ಲ ಸರಿದೂಗಿಸೋಕಾದ್ರೂ ಸಂಬಳ ಹೆಚ್ಚಳದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ನಾವು ರಾಜಕಾರಣಿಗಳನ್ನು ‘ಸೂಪರ್ ಪವರ್’ ಮಾಡಿಟ್ಟಿದ್ದೇವೆ. ಹೀಗಾಗಿ ಅವರ ನಿಸ್ಸಹಾಯಕತೆಯನ್ನು ಒಪ್ಪುವುದಿಲ್ಲ, ಪ್ರಾಮಾ ಣಿಕತೆಯನ್ನು ‘ದೌರ್ಬಲ್ಯ’ ಎಂದುಕೊಳ್ಳುತ್ತೇವೆ. ಕೆಲಸಕ್ಕೆ ಬಾರದವನು ಎಂದು ಕೊಳ್ಳುತ್ತೇವೆ.

ಇವತ್ತು ಶಾಸಕ ಸುರೇಶ್ ಕುಮಾರ್, ನನಗೂ ಐಪಿಎಲ್ ಟಿಕೆಟ್ ಬೇಡ, ನಾನ್ಯಾರಿಗೂ ಕೊಡಿಸುವುದೂ ಇಲ್ಲ ಎಂದಿದ್ದಾರೆ. ಆ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಸಿಗಬಹುದೇ ಹೊರತು, ಅಂಥವರ ಸುತ್ತ ಪಟಾಲಂ ಸೇರುವುದೇ ಇಲ್ಲ. ಹಾಗಾದರೆ ಯಾರನ್ನು ಬಯ್ಯಬೇಕು? ಇಂಥ ದ್ವಂದ್ವಗಳ ನಡುವೆ ರಾಜ್ಯಸಭೆಯ ಒಂದು ಅರ್ಥಪೂರ್ಣ ವಿಷಯ ಮಂಡನೆ ನನ್ನ ಗಮನ ಸೆಳೆಯಿತು. ಅದು ಆಮ್ ಆದ್ಮಿ ಪಾರ್ಟಿಯ ರಾಘವ್ ಚಡ್ಡಾ ಅವರ ಮಾತು.

ಇಂಟರ್‌ನೆಟ್ ಡೇಟಾ ಕುರಿತಾದ ಮೂರು ನಿಮಿಷದ ಸರಾಗವಾದ ಮಾತು ಅದು. ಮೇಲ್ನೋಟಕ್ಕೆ ‘ಅಯ್ಯೋ ಇಂಟರ್ನೆಟ್ ಡೇಟಾ ಚರ್ಚಿಸಬೇಕಾದ ವಿಷಯಾನಾ? ಹೊಟ್ಟೆಗೆ ತಿನ್ನೋ ಅನ್ನದ ಬಗ್ಗೆ ಚರ್ಚಿಸೋ ಬದಲು ಡೇಟಾ ಬಗ್ಗೆ ಮಾತಾಡ್ತಿದಾರಲ್ಲಪ್ಪಾ?’ ಅಂತ ಅದನ್ನೂ ಟ್ರೋಲ್ ಮಾಡಬಹುದು. ಆದರೆ ಅಂಥ ಚರ್ಚೆಗಳು ಇನ್ನಷ್ಟು ವಿಷಯ ಮಂಡನೆಗೆ ದಾರಿ ಮಾಡಿಕೊಡುತ್ತವೆ, ಯೋಚನೆಗೆ ಹಚ್ಚುತ್ತವೆ ಎಂದು ಒಪ್ಪಲೇಬೇಕು.

ರಾಘವ್ ಚಡ್ಡಾ ವಾದದಲ್ಲಿ ಬಹಳ ಸ್ಪಷ್ಟತೆ ಇತ್ತು. ನಾವು ಪ್ರತಿದಿನ ಬಳಸುವ ಇಂಟರ್ನೆಟ್ ಡೇಟಾ ವಿಷಯದಲ್ಲಿ ಗ್ರಾಹಕರಿಗೆ ನ್ಯಾಯ ಸಿಗುತ್ತಿಲ್ಲ. ಟೆಲಿಕಾಮ್ ಆಪರೇಟರ್‌ಗಳು ರಿಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನಕ್ಕೆ ಇಂತಿಷ್ಟು ಡೇಟಾ ಅಂತ ಕೊಡುತ್ತಿವೆ. ದಿನಕ್ಕೆ ಒಂದೂವರೆ, ಎರಡು ಅಥವಾ ಮೂರು ಜಿಬಿ ಡೇಟಾ ಲಿಮಿಟ್ ಅಂತ ಕೊಡ್ತವೆ. ಹಾಗೆ ಕೊಡುವ ಡೇಟಾವನ್ನು ನಾವು ಪೂರ್ತಿ ಬಳಸಿದರೆ ಓಕೆ. ಆದರೆ ಪ್ರತಿದಿನವೂ ಗ್ರಾಹಕರು ಪೂರ್ತಿ ಡೇಟಾ ಬಳಸುವುದಿಲ್ಲ.

ಇಪ್ಪತ್ನಾಲ್ಕು ಗಂಟೆಗಳಲ್ಲಿ ಪೂರ್ತಿ ಡೇಟಾ ಬಳಕೆ ಆಗದೇ ಹೋದಲ್ಲಿ, ಆ ದಿನದ ಡೇಟಾ ಎಕ್ಸ್‌ʼಪೈರ್ ಆಗಿ ಬಿಡುತ್ತದೆ. ಮರುದಿನ ಮತ್ತೆ ಹೊಸತಾಗಿ ಆ ದಿನದ ಡೇಟಾ ಲಿಮಿಟ್ ಶುರುವಾಗುತ್ತದೆ. ಇದು ಗ್ರಾಹಕನಿಗೆ ಆಗ್ತಾ ಇರೋ ಅನ್ಯಾಯ. ಪ್ರತಿ ದಿನದ ಅಂತ್ಯಕ್ಕೆ ಗ್ರಾಹಕನ ಬಳಿ ಡೇಟಾ ಬಾಕಿ ಉಳಿದಿದ್ದಲ್ಲಿ ಅದು ಮರುದಿನಕ್ಕೆ ವರ್ಗಾವಣೆ ಆಗಬೇಕು. ಒಂದು ತಿಂಗಳ ರಿಚಾರ್ಜ್ ಮಾಡಿಸುವವನಿಗೆ, ಪ್ರತಿದಿನದ ಲೆಕ್ಕದಲ್ಲಿ ಡೇಟಾ ಕೊಡುವು ದೇಕೆ? ತಿಂಗಳ ಲೆಕ್ಕದ ಡೇಟಾ ಕೊಡಬಹುದಲ್ಲವೇ? ಪ್ರತಿದಿನ ಬಾಕಿ ಉಳಿಯುವ ಹನಿಹನಿ ಡೇಟಾ ತಿಂಗಳ ಕೊನೆಯಲ್ಲಿ ಹಳ್ಳವಾಗಿ ಉಳಿದುಕೊಂಡಿದ್ದಲ್ಲಿ, ಅದಕ್ಕೆ ಮುಂದಿನ ರಿಚಾರ್ಜ್‌ನಲ್ಲಿ ಅಡ್ಜಸ್ಟ್ ಮಾಡುವ ಪದ್ಧತಿ ಬರಬೇಕು.‌ ಇದು ರಾಘವ್ ಚಡ್ಡಾ ವಾದ.

ಇದಕ್ಕೆ ಅವರು ಕೊಡುವ ಉದಾಹರಣೆಯೂ ಬಹಳ ಲಾಜಿಕಲ್. ಇಪ್ಪತ್ತು ಲೀಟರ್ ಪೆಟ್ರೋಲ್ ಹಾಕಿಸಿ ಗಾಡಿ ಓಡಿಸುವ ನಮಗೆ ತಿಂಗಳ ಕೊನೆಯಲ್ಲಿ ಹದಿನೈದೇ ಲೀಟರ್ ಖಾಲಿ ಮಾಡಿದ್ದರೆ, ಪೆಟ್ರೋಲ್ ಬಂಕ್‌ನವನು ಐದು ಲೀಟರ್ ವಾಪಸ್ ಕೇಳುವುದಿಲ್ಲ.

ವಿದ್ಯುತ್ ಕೂಡ ನಮಗೆ ಎಷ್ಟು ಬಳಸಿದ್ದೇವೆಯೊ ಅಷ್ಟಕ್ಕೇ ಬಿಲ್ ಬರುತ್ತದೆ. ಹೀಗಿರುವಾಗ ಡೇಟಾ ವಿಷಯದಲ್ಲಿ ಮಾತ್ರ ಯಾಕೆ ಹೀಗೆ? ತಿಂಗಳಿಗೆ ಸುಮಾರು ಅರವತ್ತು ಜಿಬಿ ಡೇಟಾಗೆ ನಾವು ಹಣ ತೆತ್ತಿರುತ್ತೇವೆ. ಮೂವತ್ತೇ ಜಿಬಿ ಬಳಸಿದ್ದಾಗ, ಒಂದೋ ಆ ಡೇಟಾ ಮುಂದಿನ ತಿಂಗಳು ಬಳಸಲು ಸಾಧ್ಯವಾಗಬೇಕು ಅಥವಾ ಅದಕ್ಕೆ ತಕ್ಕಂತೆ ಮುಂದಿನ ರಿಚಾರ್ಜ್‌ನಲ್ಲಿ ಅಡ್ಜಸ್ಟ್ ಮಾಡುವಂತಿರಬೇಕು. ಅಷ್ಟೇ ಅಲ್ಲ ಡೇಟಾ ಪ್ಯಾಕ್ ಟ್ರಾನ್ಸ್‌ʼಫರ್ ಮಾಡುವ ಆಪ್ಶನ್ ಕೂಡ ಕೊಡಬೇಕು.

ಡೇಟಾ ಕೂಡ ಹಣಕ್ಕೆ ಸಮ. ಇದನ್ನು ಸುಮ್ಮನೆ ಪ್ರತಿದಿನ ವ್ಯರ್ಥವಾಗಿಸೋ ಬದಲು, ಕ್ಯಾರಿ ಫಾರ್ವರ್ಡ್, ಡಿಸ್ಕೌಂಟ್ ಮತ್ತು ಟ್ರಾನ್ಸ್ʼಫರ್ ಸೌಲಭ್ಯ ತರಬೇಕು ಎಂಬ ಬಹಳ ಲಾಜಿಕಲ್ ವಾದವನ್ನು ರಾಘವ್ ಚಡ್ಡಾ ಮಂಡಿಸಿದರು. ಡೇಟಾ ಅನ್ನೋದು ಲಕ್ಸುರಿ ಅಲ್ಲ. ಅದು ಇಂದಿನ ಮೂಲಭೂತ ಸೌಕರ್ಯಗಳಂದು ಎಂಬ ನಿಟ್ಟಿನಲ್ಲಿ ಆ ವಾದ ಬಹಳ ಸಮರ್ಥ ವಾಗಿತ್ತು.

ಇಂಟರ್ನೆಟ್ ಡೇಟಾ ಇಂದು ದುರ್ಬಳಕೆ ಆಗುತ್ತಿರಬಹುದು, ಕಾಲಹರಣಕ್ಕೂ ಮೂಲ ವಾಗಿರಬಹುದು. ಆದರೆ ಅದು ಉದ್ಯೋಗ, ವ್ಯವಹಾರ ಮತ್ತಿತರ ಕ್ಷೇತ್ರಗಳ ಮೂಲ ಅಗತ್ಯ ವೂ ಆಗಿದೆ. ಈ ನಿಟ್ಟಿನಲ್ಲಿ ಇಂಥದ್ದೊಂದು ಚರ್ಚೆ ಅರ್ಥಪೂರ್ಣ. ಹಾಗೆ ಕ್ಯಾರಿ ಫಾರ್ವರ್ಡ್ ಮಾಡುವುದು, ಟ್ರಾನ್ಸ್‌ʼಫರ್ ಮಾಡುವುದು, ಮುಂದಿನ ರಿಚಾರ್ಜ್‌ʼಗೆ ಅಡ್ಜಸ್ಟ್ ಮಾಡುವುದು ಇವೆಲ್ಲ ಸಾಧ್ಯವಾ? ನ್ಯಾಯಯುತವಾ? ಎಂಬ ಬಗ್ಗೆ ಆಳವಾದ ಚರ್ಚೆ ನಡೆಯಬಹುದು, ಟೆಲಿಕಾಂ ಕಂಪನಿಗಳು ಇದರ ಬಗ್ಗೆ ಸಂಶೋಧನೆ ನಡೆಸಬಹುದು.

ಇದರಿಂದ ಯಾವುದೋ ಬದಲಾವಣೆಗಳು ಆಗಲೂಬಹುದು, ಹೊಸ ಪಾಲಿಸಿಗಳು ಜಾರಿ‌ ಯಾದರೂ ಆಗಬಹುದು. ಜನಪ್ರತಿನಿಧಿಗಳಿಂದ ಆಗಬೇಕಿರೋದು ಇಂಥ ಚರ್ಚೆಯೇ ಹೊರತು ಐಪಿಎಲ್ ಟಿಕೆಟ್ಟಿಂದಾಗಲೀ, ಬಿಗ್ ಬಾಸ್ ಕಾರ್ಯಕ್ರಮದ್ದಾಗಲೀ ಅಲ್ಲ. ಅಥವಾ ನಮ್ಮ ಜನಪ್ರತಿನಿಧಿಗಳ ಯೋಗ್ಯತೆ ಅರ್ಥಮಾಡಿಕೊಳ್ಳಲು ಇಂಥ ಪ್ರಹಸನಗಳು ನಡೆಯ ಬೇಕೇನೋ!

ನವೀನ್‌ ಸಾಗರ್‌

View all posts by this author