ಸಂಗತ
ಇರಾನ್ ಇಷ್ಟು ತೀವ್ರವಾಗಿ ತಿರುಗೇಟು ನೀಡುತ್ತದೆ ಎಂದು ಅಮೆರಿಕ ಯಾವತ್ತೂ ಯೋಚಿಸಿರಲಿಲ್ಲ. ಇರಾನ್‌ಗೆ ಚೀನಾ ಒಳಗೊಳಗೇ ಬೆಂಬಲ ನೀಡಿದೆ. ಹೀಗಾಗಿ ಇದು ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವಾಗದೆ ಇಡೀ ಮಧ್ಯಪ್ರಾಚ್ಯದ ಯುದ್ಧವಾಗಿದೆ ಮತ್ತು ಜಗತ್ತಿನ ಎಲ್ಲಾ ದೇಶಗಳಿಗೂ ಹೊಡೆತ ನೀಡುತ್ತಿದೆ.
ಯುದ್ಧದ ಕುರಿತು ಹಳೆಯ ಗಾದೆಯೊಂದಿದೆ- ‘ಯುದ್ಧದಲ್ಲಿ ಯಾರೇ ಗೆಲ್ಲಲಿ, ಯಾರೇ ಸೋಲಲಿ, ಗೋಳಾಡುವುದು ಮಾತ್ರ ಜನಸಾಮಾನ್ಯರು’ ಅಂತ. ಇರಾನ್‌ನ ಪರಮೋಚ್ಚ ನಾಯಕ ಅಯೊತೊಲ್ಲಾ ಖಮೇನಿಯನ್ನು ಕೊಂದಿರುವ ಕ್ಷಿಪಣಿಗಳೇ ಆ ದೇಶದ ಮುಗ್ಧ ಮಕ್ಕಳನ್ನೂ ಕೊಂದುಹಾಕಿವೆ! ಅಕ್ಕಪಕ್ಕದ ದೇಶಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದಾಗ ಅದರಲ್ಲಿ ಸತ್ತವರು ಅಥವಾ ಗಾಯಗೊಂಡವರು ಮುಗ್ಧ ಜನರು.
ಅವರಿಗೆ ಈ ಯುದ್ಧದಿಂದ ಏನೂ ಆಗಬೇಕಾಗಿದ್ದಿಲ್ಲ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಡಗಿನಲ್ಲಿ ತೈಲ ಸಾಗಿಸುವ ಸಿಬ್ಬಂದಿ ಏನು ಪಾಪ ಮಾಡಿದ್ದರು? ಇವತ್ತು ಅವರಲ್ಲೂ ಅನೇಕರು ಕ್ಷಿಪಣಿ ದಾಳಿಯಲ್ಲಿ ಸತ್ತಿದ್ದಾರೆ ಅಥವಾ ಸಮುದ್ರದಲ್ಲಿ ಅತಂತ್ರ ವಾಗಿ ಸಿಲುಕಿದ್ದಾರೆ.
ವಾಸ್ತವ ಏನೆಂದರೆ, ಯುದ್ಧವು ಅಪರಾಧಿಗಳ ಮತ್ತು ಮುಗ್ಧರ ನಡುವಿನ ವ್ಯತ್ಯಾಸವನ್ನೇ ನೋಡುವುದಿಲ್ಲ. ಯುದ್ಧದ ಏಕೈಕ ಉದ್ದೇಶವೆಂದರೆ ಭಯ ಹುಟ್ಟಿಸುವುದು, ನಾಶ ಮಾಡುವುದು ಮತ್ತು ಸಾಯಿಸುವುದು. ಇದು ನಿಮಗೆಲ್ಲರಿಗೂ ಗೊತ್ತು.
ನೀವಾಗಲೀ, ನಾನಾಗಲೀ, ನಮ್ಮ ಭಾರತ ದೇಶವಾಗಲೀ ಈಗ ನಡೆಯುತ್ತಿರುವ ಯುದ್ಧದಲ್ಲಿ ಭಾಗಿಯಾಗಿಲ್ಲ. ಆದರೆ ನಾವು ಕೂಡ ಅದರ ಬಿಸಿ ಅನುಭವಿಸುತ್ತಿದ್ದೇವೆ. ಸಾವಿರಾರು ಭಾರತೀಯರು ಯುದ್ಧದಿಂದಾಗಿ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದಷ್ಟು ಭಾರತೀಯರು ಹಡಗುಗಳಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: Dr Vijay Darda Column: ರಾಜಕಾರಣದಲ್ಲಿ ಬಣ್ಣ ಬದಲಿಸುವ ವಿಶಿಷ್ಟ ಕಲೆಗಾರಿಕೆ
ಮಧ್ಯಪ್ರಾಚ್ಯದಲ್ಲಿ ಅಥವಾ ಕೊಲ್ಲಿ ದೇಶಗಳಲ್ಲಿ ಕೋಟಿಗಟ್ಟಲೆ ಭಾರತೀಯರು ವಾಸಿಸು ತ್ತಿದ್ದಾರೆ. ಅವರ ಬಗ್ಗೆ ನಮಗೆಲ್ಲರಿಗೂ ಆತಂಕವಿದೆ. ಹೊರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದಾಗ ಶಾಂತಿಪ್ರಿಯ ಭಾರತ ದೇಶ ಕೂಡ ಅಡುಗೆ ಅನಿಲದ ಕೊರತೆ ಅನುಭವಿಸಿತು.
ಅನಿಲ ಕೊರತೆಯ ವಿಷಯದಲ್ಲಿ ಸಾಕಷ್ಟು ರಾಜಕಾರಣ ಕೂಡ ನಡೆಯುತ್ತಿದೆ. ಸರಕಾರ ಅದನ್ನು ನೋಡಿಕೊಳ್ಳುತ್ತದೆ. ಜನರ ಸಹಕಾರದಿಂದ ಈ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಆಶಿಸೋಣ. ನನಗೆ ಚಿಂತೆಯಿರುವುದು ರಸ್ತೆ ಬದಿಯ ಸಣ್ಣಪುಟ್ಟ ಹೋಟೆಲ್ ಅಥವಾ ಢಾಬಾಗಳ ಬಗ್ಗೆ. ಅವುಗಳನ್ನು ನಡೆಸುವವರು ಬಡವರು ಮತ್ತು ಅಲ್ಲಿ ತಿನ್ನುವವರು ಕೂಡ ಜನಸಾಮಾನ್ಯರು.
ಅಮೆರಿಕ ಬಹಳ ಕಾಲದಿಂದ ಪಾಲಿಸಿಕೊಂಡು ಬಂದಿರುವ ಸಿದ್ಧಾಂತವೇನೆಂದರೆ, ತಾನು ಭಾಗವಹಿಸುವ ಯುದ್ಧದಲ್ಲಿ ಏನೇ ಬೆಲೆ ತೆತ್ತಾದರೂ ಸರಿ, ತಾನೇ ಗೆಲ್ಲಬೇಕು. ಇದನ್ನು ಅರ್ಥ ಮಾಡಿಕೊಳ್ಳಲು ನಾಲ್ಕು ದಶಕದ ಹಿಂದಕ್ಕೆ ಹೋಗಬೇಕು. 1979ರ ಇರಾನ್ ಕ್ರಾಂತಿಯ ಸಮಯದಲ್ಲಿ ಮೊಹಮ್ಮದ್ ರೇಜಾ ಶಾ ಪಹ್ಲವಿ (ಶಾ ಆಫ್ ಇರಾನ್) ಇರಾನ್‌ನಲ್ಲಿ ಆಡಳಿತ ನಡೆಸುತ್ತಿದ್ದ. ಅವನಿಗೆ ಅಮೆರಿಕದ ಬೆಂಬಲವಿತ್ತು. ಆದರೆ ಇರಾನ್‌ನ ಜನಸಾಮಾನ್ಯರ ಬೆಂಬಲ ಪಡೆದು, ಅವನ ವಿರುದ್ಧ ಹೋರಾಟ ನಡೆಸಿ, ಪದಚ್ಯುತಗೊಳಿಸಿ, ರುಹೊಲ್ಲಾ ಖೊಮೇನಿ ಅಧಿಕಾರಕ್ಕೆ ಬಂದ.
ನಂತರ ಅವನು ಇರಾನಿಯನ್ನರಿಗಿದ್ದ ಎಲ್ಲಾ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಂಡ. ಪಹ್ಲವಿಯ ಆಡಳಿತಕ್ಕೆ ಹತ್ತಿರದಲ್ಲಿದ್ದ ವಿಜ್ಞಾನಿಗಳು, ರಕ್ಷಣಾ ವಲಯದ ಪ್ರಮುಖರು ಮತ್ತು ಸಮಾಜದ ಗಣ್ಯರನ್ನೆಲ್ಲ ಅವನು ಗಲ್ಲಿಗೇರಿಸಿದ. ಕೆಲವರು ಮಾತ್ರ ಓಡಿ ಹೋಗಿ ಬದುಕಿಕೊಂಡರು. ಮುಂದಿನ ವರ್ಷ ಅಮೆರಿಕವು ಇರಾಕ್‌ನ ಸದ್ದಾಂ ಹುಸೇನ್‌ಗೆ ಬೆಂಬಲ ನೀಡಿತು. ಅವನು ಇರಾನ್ ಮೇಲೆ ದಾಳಿ ನಡೆಸಿದ.
ಇರಾಕ್‌ಗೆ ಅಮೆರಿಕ ಸಾಕಷ್ಟು ಶಸ್ತ್ರಾಸ್ತ್ರಗಳು ಹಾಗೂ ಹಣದ ನೆರವು ನೀಡಿತು. ಆ ಯುದ್ಧ ಎಂಟು ವರ್ಷಗಳ ಕಾಲ ನಡೆಯಿತು. ಆದರೂ ಇರಾನ್ ದೇಶವನ್ನು ಸೋಲಿಸಲು ಇರಾಕ್‌ಗೆ ಸಾಧ್ಯವಾಗಲಿಲ್ಲ. ಕಾರಣವೇನು? ಇರಾನ್‌ಗೆ ಇಸ್ರೇಲ್‌ನಿಂದ ನೆರವು ಬರುತ್ತಿತ್ತು. ಇಸ್ರೇಲ್‌ನ ಹಿಂದೆ ನಿಂತಿದ್ದವರು ಯಾರು? ಅಮೆರಿಕ! ಯಾಕೆ ಅಮೆರಿಕ ಹಾಗೆ ನಡೆದುಕೊಂಡಿತು ಎಂದು ನಿಮಗೆ ಆಶ್ಚರ್ಯವಾಗಬಹುದು.
ಅಮೆರಿಕದ ಉದ್ದೇಶ ಇರಾನ್ ಮತ್ತು ಇರಾಕ್ ಎರಡೂ ದೇಶವನ್ನು ದುರ್ಬಲಗೊಳಿಸುವು ದಾಗಿತ್ತು. ಆ ಯುದ್ಧದಲ್ಲಿ ಲಕ್ಷಾಂತರ ಜನರು ಪ್ರಾಣ ತೆತ್ತರು. ರಾಸಾಯನಿಕ ಶಸ್ತ್ರಾಸ್ತ್ರ ಗಳನ್ನು ಕೂಡ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತು. ಅಮೆರಿಕದ ಕೈಗೊಂಬೆ ಯಂತೆ ವರ್ತಿಸಿದ್ದ ಸದ್ದಾಂ ಹುಸೇನ್ʼನನ್ನೇ ಕೊನೆಗೆ ಹತ್ಯೆ ಮಾಡಲಾಯಿತು. ಅವನು ಸಮೂಹನಾಶಕ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದ್ದ ಎಂಬ ಆರೋಪ ಹೊರಿಸಲಾಯಿತು. ಆದರೆ ಇವತ್ತಿನವರೆಗೂ ಇರಾಕ್‌ನಲ್ಲಿ ಅಂಥ ಯಾವುದೇ ಅಸಗಳ ಕುರುಹು ಸಿಕ್ಕಿಲ್ಲ. ಆ ಯುದ್ಧದಲ್ಲಿ ಇರಾಕ್‌ನ ಜನಸಾಮಾನ್ಯರ ಬದುಕು ಮಾತ್ರ ಸಂಪೂರ್ಣ ನಾಶವಾಯಿತು.
ಈಗ ಇರಾನ್ ವಿಷಯಕ್ಕೆ ಬರೋಣ. ಇರಾನ್ ಮೇಲೆ ಭಯಾನಕ ಬಂಕರ್ ಬಸ್ಟರ್ ಬಾಂಬ್ ಹಾಕಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ‘ಇರಾನ್‌ನ ಅಣ್ವಸ್ತ್ರ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ’ ಎಂದು ಹೇಳಿಕೆ ನೀಡಿದರು. ನಂತರ ಸಂಧಾನಕ್ಕೆ ಯತ್ನ ನಡೆಯಿತು. ಅಣ್ವಸ್ತ್ರ ಅಭಿವೃದ್ಧಿಯನ್ನು ನಿಲ್ಲಿಸುವುದು ಮಾತ್ರವಲ್ಲ, ಖಂಡಾಂತರ ಕ್ಷಿಪಣಿ ಗಳ ಅಭಿವೃದ್ಧಿಯನ್ನು ಕೂಡ ನಿಲ್ಲಿಸಬೇಕು ಎಂದು ಟ್ರಂಪ್ ಷರತ್ತು ವಿಧಿಸಿದರು.
ಯಾವ ದೇಶ ತನ್ನ ಸಾರ್ವಭೌಮತೆಯ ವಿಷಯದಲ್ಲಿ ಇಷ್ಟೆಲ್ಲಾ ರಾಜಿ ಮಾಡಿಕೊಳ್ಳಲು ಒಪ್ಪುತ್ತದೆ? ಟ್ರಂಪ್ ವಿಧಿಸಿದ ಷರತ್ತನ್ನು ಇರಾನ್ ತಿರಸ್ಕರಿಸಿತು. ಹೀಗಾಗಿ ಇರಾನ್ ಮೇಲಿನ ದಾಳಿಯನ್ನು ಅಮೆರಿಕ ತೀವ್ರಗೊಳಿಸುವುದು ಬಹುತೇಕ ನಿಶ್ಚಿತವಾಗಿತ್ತು. ಆದರೆ ದಾಳಿ ನಡೆಸುವುದಕ್ಕೂ ಮುನ್ನ ಅಮೆರಿಕಕ್ಕೆ ಇರಾನ್ ಇಷ್ಟೊಂದು ತೀವ್ರವಾಗಿ ತಿರುಗೇಟು ನೀಡುತ್ತದೆ ಎಂಬ ನಿರೀಕ್ಷೆ ಇರಲಿಲ್ಲ.
ಕೊಲ್ಲಿ ರಾಷ್ಟ್ರಗಳಲ್ಲಿರುವ ತನ್ನ ಸೇನಾನೆಲೆಗಳ ಮೇಲೆ ಇರಾನ್ ದಾಳಿ ನಡೆಸುತ್ತದೆ, ಆಗ ಇದು ಇಡೀ ಮಧ್ಯಪ್ರಾಚ್ಯದ ಯುದ್ಧವಾಗಿ ಮಾರ್ಪಾಡಾಗುತ್ತದೆ ಎಂಬ ಅಂದಾಜನ್ನು ಅಮೆರಿಕ ಮಾಡಿರಲಿಲ್ಲ. ಈಗ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ದಲ್ಲೂ ದಾಳಿಗಳು ನಡೆದಿವೆ. ದುಬೈ ಇಡೀ ಜಗತ್ತಿನ ಆರ್ಥಿಕ ಕೇಂದ್ರಗಳಲ್ಲಿ ಒಂದು. ಜಗತ್ತಿನ ಮೂಲೆ ಮೂಲೆಗಳಿಂದ ಬಂದ ಸಂಪತ್ತು ದುಬೈನಲ್ಲಿ ಹೂಡಿಕೆಯಾಗಿದೆ.
ಹೀಗಾಗಿ ದುಬೈ ಮೇಲೆ ನಡೆದ ದಾಳಿಯು ಇಡೀ ಜಗತ್ತಿಗೆ ಈ ಯುದ್ಧವನ್ನು ವಿಸ್ತರಿಸಿದೆ. ತನ್ಮೂಲಕ ಅಮೆರಿಕ, ಇಸ್ರೇಲ್, ಇರಾನ್ ನಡುವಿನ ಯುದ್ಧವು ಜಾಗತಿಕ ಮಟ್ಟದ ಯುದ್ಧ ವಾಗಿ ಪರಿಣಮಿಸಿದೆ. ಇದೂ ರಣತಂತ್ರವೇ ಇರಬಹುದೇ? ಈಗ ಸಂಯುಕ್ತ ಅರಬ್ ಸಂಸ್ಥಾನ (ಯುಎಇ), ಸೌದಿ ಅರೇಬಿಯಾ, ಕುವೈತ್, ಬಹ್ರೈನ್, ಕತಾರ್ ಮತ್ತು ಜೋರ್ಡಾನ್ ದೇಶಗಳು ಯುದ್ಧ ನಿಲ್ಲಿಸುವಂತೆ ಅಮೆರಿಕದ ಮೇಲೆ ಒತ್ತಡ ಹೇರುತ್ತಿವೆ.
ಅವುಗಳ ಮಾತನ್ನು ಟ್ರಂಪ್ ಕೇಳುತ್ತಾರಾ? ಇರಾನ್ ಈಗ ಯುದ್ಧ ಮಾಡುತ್ತಿರುವ ರೀತಿ ಯಿಂದಾಗಿ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಯಾವಾಗ, ಯಾವ ದೇಶದ ಮೇಲೆ ದಾಳಿ ನಡೆಯುತ್ತದೆ, ಯಾವ ನಗರದ ಮೇಲೆ ಕ್ಷಿಪಣಿಗಳು ಬಂದು ಬೀಳುತ್ತವೆ ಎಂಬುದು ಯಾರಿಗೂ ಗೊತ್ತಿಲ್ಲ. ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾದ ಈ ಆತಂಕ ದಿಂದ ಇರಾನ್‌ಗೇ ಲಾಭವಾಗುತ್ತಿರುವಂತಿದೆ.
ಖಮೇನಿ ಮತ್ತು ಇರಾನ್‌ನ ಇನ್ನಿತರ ಉನ್ನತ ನಾಯಕರ ಸಾವಿನ ನಂತರವೂ ಆ ದೇಶ ಇಷ್ಟೊಂದು ತೀಕ್ಷ್ಣವಾಗಿ ಪ್ರತಿದಾಳಿ ಮುಂದುವರಿಸುತ್ತದೆ ಎಂಬುದನ್ನು ಅಮೆರಿಕ ನಿರೀಕ್ಷಿಸಿ ತ್ತೋ ಇಲ್ಲವೋ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರ ಹೇಳುವುದು ಕಷ್ಟ. ಆದರೆ ಇರಾನ್ ಗೆ ಚೀನಾ ಮತ್ತು ರಷ್ಯಾದ ಬೆಂಬಲವಿದೆ ಎಂಬುದಂತೂ ಸ್ಪಷ್ಟ.
ಇಲ್ಲದಿದ್ದರೆ ಇಷ್ಟು ದೊಡ್ಡ ಪ್ರಮಾಣದ ಪ್ರತಿ ದಾಳಿ ನಡೆಸುವುದು ಇರಾನ್ʼಗೆ ಸುಲಭವಲ್ಲ. ಇರಾನ್‌ನ ಕ್ಷಿಪಣಿ ಯೋಜನೆ ದೊಡ್ಡ ಪ್ರಮಾಣದಲ್ಲಿ ಚೀನಾವನ್ನು ಅವಲಂಬಿಸಿದೆ. ಚೀನಾ ತನ್ನ ಬೆನ್ನಿಗೆ ನಿಂತಿರುವಾಗ ಇರಾನ್ ಯಾಕೆ ಸುಮ್ಮನಿರುತ್ತದೆ? ತನ್ನ ಸಾರ್ವಭೌಮತೆಗೇ ಪೆಟ್ಟು ಬಿದ್ದಾಗ ಅದು ಖಂಡಿತ ತಿರುಗಿಸಿ ಹೊಡೆಯುತ್ತದೆ.
ಸ್ವತಃ ಅಮೆರಿಕವೇ ಇರಾನ್ ಮೇಲೆ ದಾಳಿ ನಡೆಸಿದ್ದರಿಂದ ಚೀನಾ ನೇರವಾಗಿ ಈ ಯುದ್ಧ ರಂಗದೊಳಗೆ ಶಸಾಸಗಳನ್ನು ಹಿಡಿದುಕೊಂಡು ಇರಾನ್ ಪರವಾಗಿ ಪ್ರವೇಶ ಮಾಡಿಲ್ಲ. ಆದರೆ ಅದು ಬಹಿರಂಗವಾಗಿ ಇರಾನ್‌ಗೆ ನೆರವು ನೀಡಿದೆ. ಚೀನಾದ ನೆರವಿನಿಂದ ಇರಾನ್ ತಯಾರಿಸಿಕೊಂಡ ಸೋವಿ ದರದ ಕ್ಷಿಪಣಿಗಳು ಅಮೆರಿಕದ ನಿದ್ದೆಗೆಡಿಸಿವೆ.
ಇರಾನ್‌ನ ಅಗ್ಗದ ಕ್ಷಿಪಣಿಗಳನ್ನು ತಡೆಯಲು ಅಮೆರಿಕ ಅತ್ಯಂತ ದುಬಾರಿ ಇಂಟರ್ ಸೆಪ್ಟರ್‌ಗಳನ್ನು ಬಳಸಬೇಕಾಗಿ ಬಂದಿದೆ. ಅಮೆರಿಕಕ್ಕೆ ಆರ್ಥಿಕವಾಗಿ ಹೊಡೆತ ನೀಡಬೇಕು ಎಂಬುದು ಚೀನಾದ ಉದ್ದೇಶಗಳಲ್ಲಿ ಒಂದು. ಅಮೆರಿಕದ ಸೇನಾನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಯಿಂದ ಉಂಟಾದ ಹಾನಿಯ ಉಪಗ್ರಹ ಚಿತ್ರಗಳನ್ನು ಸ್ವತಃ ಚೀನಾ ಬಿಡುಗಡೆ ಮಾಡಿದೆ.
ತನ್ಮೂಲಕ ಅಮೆರಿಕಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಿಸುಮುರಿಸು ಉಂಟುಮಾಡಿದೆ. ವಾಸ್ತವವಾಗಿ, ಅಮೆರಿಕದ ಖರ್ಚಿನಲ್ಲಿ ಚೀನಾ ಖುಷಿಪಡುತ್ತಿರುವಂತೆ ಕಾಣಿಸುತ್ತಿದೆ! ಈ ಮಧ್ಯೆ ರಷ್ಯಾ ಕೂಡ ಅಮೆರಿಕಕ್ಕೆ ಮೂರನೇ ವಿಶ್ವ ಮಹಾಯುದ್ಧ ಭುಗಿಲೇಳಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ. ಹಾಗಿದ್ದರೆ ಮುಂದೆ ಈ ಯುದ್ಧದ ಹಣೆಬರಹ ಏನಾಗುತ್ತದೆ ಎಂಬುದು ಸದ್ಯಕ್ಕಿರುವ ಪ್ರಶ್ನೆ.
ಇರಾನ್‌ನಲ್ಲಿ ಆಡಳಿತ ವ್ಯವಸ್ಥೆಯನ್ನು (ರೆಜೀಮ್) ಬದಲಿಸಬೇಕು ಎಂಬ ಅಮೆರಿಕದ ಉದ್ದೇಶ ಈಡೇರುವುದೇ? ವಾಯುದಾಳಿಯ ವಿಷಯದಲ್ಲಿ ಅಮೆರಿಕ ಅತ್ಯಂತ ನುರಿತ ರಣತಂತ್ರಗಳನ್ನು ಹೊಂದಿದೆ. ಆದರೆ ಇತಿಹಾಸವನ್ನು ಗಮನಿಸಿದರೆ, ಯಾವತ್ತೂ ಕೇವಲ ವಾಯುದಾಳಿ ನಡೆಸಿ ಯಾವುದೋ ದೇಶದಲ್ಲಿ ಆಡಳಿತ ವ್ಯವಸ್ಥೆಯನ್ನು ಬದಲಿಸಿದ ಉದಾಹರಣೆಗಳು ಇಲ್ಲ.
ಅಮೆರಿಕದ ಸೇನೆ ಈ ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಸೇನೆ ಎಂಬುದು ನಿಜ. ಆದರೆ, ಭೌಗೋಳಿಕವಾಗಿ ಇರಾನ್ ಅತ್ಯಂತ ಆಯಕಟ್ಟಿನ ಜಾಗದಲ್ಲಿದೆ. ಈ ಯುದ್ಧವನ್ನು ದಶಕಗಳ ಕಾಲ ಮುಗಿಯದಂತೆ ನಡೆಸುತ್ತಲೇ ಇರಲು ಇರಾನ್‌ಗೆ ಅವಕಾಶವಿದೆ.
ಇನ್ನು, ಈ ಸಂಘರ್ಷದಿಂದಾಗಿ ಇರಾನ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುವುದರ ಪರ ಜನರು ಕ್ರಾಂತಿ ನಡೆಸಬಹುದೆ? ಅಲಿ ಖಮೇನಿ ಸತ್ತಿದ್ದರೂ, ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷ ನರಿ ಗಾರ್ಡ್ ಕೋರ್ (ಐಆರ್‌ಜಿಸಿ) ಎಂಬ ನಿರ್ದಯ ಸೇನಾಪಡೆ ಎಷ್ಟು ಶಕ್ತಿಶಾಲಿಯಾಗಿದೆ ಅಂದರೆ, ಅದು ಜನರು ದಂಗೆಯೇಳುವುದಕ್ಕೆ ಅವಕಾಶ ನೀಡುವ ಸಾಧ್ಯತೆ ತುಂಬಾ ಕಡಿಮೆ. ಇರಾನ್‌ನ ಜನರು ಈಗಾಗಲೇ ವಿನಾಶದ ನಡುವೆ ಬದುಕುತ್ತಿದ್ದಾರೆ.
ಒಂದು ಕಡೆ ಖಮೇನಿಯ ಕಟ್ಟರ್ ಬೆಂಬಲಿಗರು ಜನರನ್ನು ದಮನ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅಮೆರಿಕದ ಕ್ಷಿಪಣಿಗಳು ಆಕಾಶದಿಂದ ತೂರಿ ಬಂದು ಇರಾನಿಯನ್ನರನ್ನು ಬಲಿ ಪಡೆಯುತ್ತಿವೆ. ಇಂಥ ಸನ್ನಿವೇಶದಲ್ಲಿ ಜನಸಾಮಾನ್ಯರು ತಮ್ಮ ಹಣೆಬರಹಕ್ಕೆ ಶಾಪ ಹಾಕುವುದನ್ನು ಬಿಟ್ಟರೆ ಇನ್ನೇನು ತಾನೇ ಮಾಡಲು ಸಾಧ್ಯ?
(ಲೇಖಕರು ಹಿರಿಯ ಪತ್ರಿಕೋದ್ಯಮಿ)