ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr ViJay Darda Column: ದುಬೈ ಮೇಲೆ ಇರಾನ್‌ ಏಕೆ ದಾಳಿ ಮಾಡಿದೆ ?

ದುಬೈ ಮೇಲೆ ಇರಾನ್ ದಾಳಿ ನಡೆಸಿದ್ದೇಕೆ ಎಂದು ಆರಂಭವಾದ ಚರ್ಚೆ ಏಕೆ ದುಬೈನ ಅದ್ಭುತ ವಾದ ಪ್ರಗತಿಯ ಕಡೆ ಹೊರಳಿದೆ ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಸತ್ಯ ಏನೆಂದರೆ, ಈ ಬೆಳವಣಿಗೆಯೇ ದುಬೈ ಮೇಲಿನ ದಾಳಿಗೂ ಕಾರಣವಾಗಿದೆ. ಹೀಗಾಗಿ ದುಬೈನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಅಗತ್ಯ.

ಸಂಗತ

ಮಧ್ಯಪ್ರಾಚ್ಯದ ಯುದ್ಧದಲ್ಲಿ ಆಧುನಿಕ ನಗರಗಳ ಅಪರಿಮಿತ ಸಂಪತ್ತಿನ ಮೇಲೆ ಅನಗತ್ಯ ವಾಗಿ ದಾಳಿ ನಡೆಯುತ್ತಿದೆ. ಇದು ಅತ್ಯಂತ ಗಂಭೀರವಾದ ವಿಷಯ. ಯುಎಇ ವಿರುದ್ಧ ಇರಾನ್‌ಗೆ ಇರುವ ಐವತ್ತು ವರ್ಷಗಳ ಹಿಂದಿನ ದ್ವೇಷ ಬಹಳ ಜನರಿಗೆ ನೆನಪಿರಲಿಕ್ಕಿಲ್ಲ.

ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಇರಾನ್‌ನ ಉದ್ದೇಶ ಮತ್ತು ನಿಲುವು ಸ್ಪಷ್ಟ ವಾಗಿದೆ. ಅದು ಅಮೆರಿಕಕ್ಕೂ ಇಸ್ರೇಲ್'ಗೂ ತಲೆಬಾಗಲು ಸಿದ್ಧನಿಲ್ಲ. ಅಮೆರಿಕಕ್ಕೆ ಪಾಠ ಕಲಿಸಲು ಅದು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ನೆಲೆಗಳನ್ನು ಹೊಂದಿರುವ ದೇಶಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ.

ಆದರೆ, ದುಬೈನಲ್ಲಿ ಅಮೆರಿಕದ ಮಿಲಿಟರಿ ನೆಲೆಯೇ ಇಲ್ಲ. ಹೇಳಿಕೇಳಿ ದುಬೈ ಶಾಂತಿಪ್ರಿಯ ನಗರ. ಆದರೂ ಅದರ ಮೇಲೆ ಇರಾನ್ ದಾಳಿ ನಡೆಸುತ್ತಿರುವುದು ಏಕೆ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ದುಬೈ ಕೇವಲ ಒಂದು ನಗರವಲ್ಲ. ಅದು ಜಗತ್ಪ್ರಸಿದ್ಧ ವಾದ ಪ್ರವಾಸಿ ತಾಣ.

ಆಧುನಿಕ ಯುಗದ ‘ಕುಬೇರನ ನಗರಿ’ ಎಂದೇ ಅದನ್ನು ಕರೆಯುತ್ತಾರೆ. ಅಲ್ಲಿ ಅಪಾರವಾದ ಸಂಪತ್ತಿದೆ. ಶ್ರೀಮಂತಿಕೆಯು ದುಬೈನ ನರ ನಾಡಿಗಳಲ್ಲೂ ಹರಿದಾಡುತ್ತಿದೆ. ನಂಬರ್‌ಗಳಲ್ಲಿ ಹೇಳುವುದಾದರೆ, ಸುಮಾರು 200 ದೇಶಗಳ ಜನರು ದುಬೈನಲ್ಲಿ ನೆಲೆಸಿದ್ದಾರೆ!

ಕಳೆದ ವರ್ಷ ಅಜಮಾಸು ಎರಡು ಕೋಟಿ ಅಂತಾರಾಷ್ಟ್ರೀಯ ಪ್ರವಾಸಿಗರು ದುಬೈಗೆ ಭೇಟಿ ನೀಡಿದ್ದರು. ಪ್ರತಿಯೊಬ್ಬರೂ ಜೀವಮಾನದಲ್ಲಿ ಒಮ್ಮೆಯಾದರೂ ದುಬೈಗೆ ಭೇಟಿ ನೀಡುವ ಕನಸು ಕಾಣುತ್ತಾರೆ. ಹೀಗೆ ಹೇಳುವಾಗ ನನಗೆ ಪಾಕಿಸ್ತಾನದ ‘ಚಲೋ ದುಬೈ’ ಎಂಬ ಸಿನಿಮಾ ಟೈಟಲ್ ನೆನಪಾಗುತ್ತದೆ. 1979ರಲ್ಲಿ ಆ ಸಿನಿಮಾ ಬಂದಿತ್ತು. ಆಗಿನ್ನೂ ಬ್ರಿಟನ್‌ ನಿಂದ ದುಬೈ ಸ್ವಾತಂತ್ರ್ಯ ಪಡೆದು ಕೇವಲ ಎಂಟು ವರ್ಷಗಳಷ್ಟೇ ಕಳೆದಿದ್ದವು.

ಇದನ್ನೂ ಓದಿ: Dr Vijay Darda Column: ಯುದ್ಧವನ್ನು ಯಾರ ಗೆದ್ದರೂ ಗೋಳು ಜನಸಾಮಾನ್ಯರದ್ದೇ !

ನಿರ್ದೇಶಕ ರಿಯಾ ಬತಾಲ್ವಿ ಈ ಸಿನಿಮಾ ಮಾಡಿದ್ದರು. ಬತಾಲ್ವಿಗೆ ಭವಿಷ್ಯ ಹೇಳಲು ಬರುತ್ತಿತ್ತಾ ಎಂದು ಅಚ್ಚರಿಯಾಗುತ್ತದೆ. ದುಬೈನ ಹಣೆಬರಹದಲ್ಲಿ ಈ ಪರಿ ಅದ್ಭುತವಾಗಿ ಬೆಳೆಯುವುದು ಬರೆದಿದೆ ಎಂದು ಯಾರಿಗೆ ತಾನೇ ಗೊತ್ತಿತ್ತು? ಜಗತ್ತಿನಲ್ಲಿ ಇನ್ನಾವುದೇ ನಗರಕ್ಕೆ ಸರಿಸಾಟಿಯಲ್ಲದ ರೀತಿಯಲ್ಲಿ ಹಣ, ಸಂಪತ್ತು, ಅವಕಾಶಗಳ ನಿಧಿಯಾಗಿ ದುಬೈ ಬೆಳೆಯುತ್ತದೆ ಎಂದು ಬತಾಲ್ವಿ ಹೇಗೆ ಅಂದೇ ಊಹಿಸಿದ್ದರು? ಅವರ ಮಾತನ್ನು ಇತಿಹಾಸವೇ ನಿಜಗೊಳಿಸಿದೆ.

ಇಂದು ಲಕ್ಷಾಂತರ ಭಾರತೀಯರು ಮತ್ತು ಪಾಕಿಸ್ತಾನೀಯರು ‘ದುಬೈ ನಮ್ಮ ಮನೆ’ ಎಂದು ಹೇಳಿಕೊಳ್ಳುತ್ತಾರೆ. ಒಂದು ಟ್ವಿಸ್ಟ್ ಏನು ಅಂದರೆ, ಪಾಕಿಗಳಿಗೆ ದುಬೈ ಈಗಾಗಲೇ ವೀಸಾ ನೀಡುವುದನ್ನು ನಿಲ್ಲಿಸಿದೆ. ದುಬೈ ಅರ್ಧ ಶತಮಾನದ ಹಿಂದೆ ಬರೀ ಕಿತ್ತಾಡಿಕೊಳ್ಳುತ್ತಿದ್ದ ಬುಡಕಟ್ಟುಗಳ ನಾಡಾಗಿತ್ತು.

ಕೇವಲ ಮೀನುಗಾರಿಕೆ, ಮುತ್ತುಗಳಿಗಾಗಿ ಸಮುದ್ರದಲ್ಲಿ ಮುಳುಗೇಳುವುದು, ಸಣ್ಣ ಪ್ರಮಾಣದ ಕರಾವಳಿ ವ್ಯಾಪಾರ ಮಾತ್ರ ಅಲ್ಲಿ ನಡೆಯುತ್ತಿತ್ತು. ಅಂಥ ಊರು ಕೇವಲ 50 ವರ್ಷದಲ್ಲಿ ಈ ಪರಿಯ ಅಭಿವೃದ್ಧಿಯನ್ನು ಸಾಧಿಸಿದ್ದು ಹೇಗೆ ಎಂದು ಎಂಥವರಿಗೂ ಅಚ್ಚರಿಯಾಗುತ್ತದೆ.

ದುಬೈ ಮೇಲೆ ಇರಾನ್ ದಾಳಿ ನಡೆಸಿದ್ದೇಕೆ ಎಂದು ಆರಂಭವಾದ ಚರ್ಚೆ ಏಕೆ ದುಬೈನ ಅದ್ಭುತವಾದ ಪ್ರಗತಿಯ ಕಡೆ ಹೊರಳಿದೆ ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಸತ್ಯ ಏನೆಂದರೆ, ಈ ಬೆಳವಣಿಗೆಯೇ ದುಬೈ ಮೇಲಿನ ದಾಳಿಗೂ ಕಾರಣವಾಗಿದೆ. ಹೀಗಾಗಿ ದುಬೈನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಅಗತ್ಯ. ನಾವು ಸಂಯುಕ್ತ ಅರಬ್ ಸಂಸ್ಥಾನಗಳ (ಯುಎಇ) ಬಗ್ಗೆ ಮಾತನಾಡುವಾಗಲೆಲ್ಲ ಮೊದಲಿಗೆ ಬರುವ ಹೆಸರು ದುಬೈ. ಆದರೆ ಯುಎಇ ಎಂಬುದು ಏಳು ಸಂಸ್ಥಾನಗಳ ಒಂದು ಒಕ್ಕೂಟ.

ದುಬೈ, ಅಬುಧಾಬಿ, ಶಾರ್ಜಾ, ಉಮ್ ಅಲ್ ಕುವೇನ್, ಅಜ್ಮಾನ್, ಫುಜೈರಾ ಹಾಗೂ ರಾಸ್ ಅಲ್ ಖೈಮಾ ಎಂಬ ಸಂಸ್ಥಾನಗಳು ಅಲ್ಲಿವೆ. ಸಂಯುಕ್ತ ಅರಬ್ ಸಂಸ್ಥಾನಗಳ ರಾಜಧಾನಿ ಅಬುಧಾಬಿ. ಈ ಎಲ್ಲ ಸಂಸ್ಥಾನಗಳು ಪ್ರತ್ಯೇಕವಾಗಿ 1971ರ ಡಿಸೆಂಬರ್ 1ರಂದು ಬ್ರಿಟನ್‌ ನಿಂದ ಸ್ವಾತಂತ್ರ್ಯ ಪಡೆದವು. ಮರುದಿನವೇ ರಾಸ್ ಅಲ್ ಖೈಮಾವನ್ನು ಹೊರತುಪಡಿಸಿ ಇನ್ನೆಲ್ಲಾ ಸಂಸ್ಥಾನಗಳು ಒಕ್ಕೂಟ ರಚನೆ ಮಾಡಿಕೊಂಡವು.

ಎರಡು ತಿಂಗಳ ಬಳಿಕ ಇರಾನ್ ದೇಶವು ಹೊರ್ಮುಜ್ ಜಲಸಂಽಯ ಒಂದು ಭಾಗವನ್ನು ವಶಕ್ಕೆ ಪಡೆದುಕೊಂಡಾಗ ರಾಸ್ ಅಲ್ ಖೈಮಾ ಕೂಡ ಯುಎಇಯನ್ನು ಸೇರಿಕೊಂಡಿತು. ಭವಿಷ್ಯದಲ್ಲೇನಾದರೂ ಇರಾನ್ ಜತೆಗೆ ಸಂಘರ್ಷ ನಡೆದರೆ ತಾನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದು ಆ ಹೆಜ್ಜೆ ಇರಿಸಿತ್ತು.

ಹೀಗೆ ಇರಾನ್ ಜತೆಗೆ ಯುಎಇಗೆ ಆಗಿನಿಂದಲೂ ಸಂಘರ್ಷವಿದೆ. ಅದು ಈವರೆಗೂ ಮುಂದುವರಿದುಕೊಂಡು ಬಂದಿದೆ. ದುಬೈ ನಗರ ಇಂದು ಇಷ್ಟು ಶ್ರೀಮಂತವಾಗಿ ಬೆಳೆದಿರುವುದಕ್ಕೆ ಶೇಖ್ ಮೊಹಮ್ಮದ್ ಅವರ ದೂರದೃಷ್ಟಿತ್ವ ಹಾಗೂ ಅಸಾಮಾನ್ಯ ನಾಯಕತ್ವವೇ ಕಾರಣ.

ಗಮನಿಸಬೇಕಾದ ಸಂಗತಿಯೆಂದರೆ ದುಬೈನ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) ತೈಲದಿಂದ ಸಿಗುವ ಕೊಡುಗೆ ಶೇ.1ರಷ್ಟು ಮಾತ್ರ. ಆದರೂ ಅವರು ಈ ನಗರ ಶರವೇಗದಲ್ಲಿ ಬೆಳೆಯುವಂಥ ವಾತಾವರಣವನ್ನು ಸೃಷ್ಟಿಸಿದ್ದಾರೆ.

ಅವರ ನೀತಿ ಸ್ಪಷ್ಟವಾಗಿದೆ: ‘ನಮ್ಮಲ್ಲಿಗೆ ಬನ್ನಿ, ಕೆಲಸ ಮಾಡಿ, ಬಿಸಿನೆಸ್ ಮಾಡಿ, ಚೆನ್ನಾಗಿ ಊಟ ಮಾಡಿ, ಎಂಜಾಯ್ ಮಾಡಿ; ಆದರೆ ಏನೂ ಅಪರಾತಪರಾ ಮಾಡಬೇಡಿ!’ ಅಂತ. ದುಬೈನಲ್ಲಿ ಕಾನೂನು ಬಹಳ ಕಠಿಣವಾಗಿದೆ. ಇಡೀ ದೇಶ ತೆರಿಗೆಯಿಂದ ಮುಕ್ತವಾಗಿದೆ. ಬಿಸಿನೆಸ್ ನಡೆಸಲು ಇರುವ ನಿಯಮಗಳು ಬೇರೆಲ್ಲಾ ದೇಶಗಳಲ್ಲಿ ಇರುವುದಕ್ಕಿಂತ ಇಲ್ಲಿ ಸರಳವಾಗಿವೆ. ಆದ್ದರಿಂದಲೇ ದುಬೈ ಇಂದು ಜಗತ್ತಿನ ಅತ್ಯಂತ ಮುಂಚೂಣಿಯಲ್ಲಿರುವ ಆರ್ಥಿಕ ಕೇಂದ್ರವಾಗಿ ಬೆಳೆದಿದೆ. ಅಕ್ಷರಶಃ ಇಲ್ಲಿಗೆ ಹಡಗುಗಟ್ಟಲೆ ಚಿನ್ನದ ಗಟ್ಟಿಗಳು ಬರುತ್ತವೆ!

ಜಗತ್ತಿನ ಎಲ್ಲಾ ಕಡೆಯಿಂದ ಸಂಪತ್ತು ಹರಿದುಬರುತ್ತದೆ. ಇಲ್ಲಿ ಎಲ್ಲಾ ದೇಶಗಳ ಶ್ರೀಮಂತ ರು ಹಣ ಹೂಡಿಕೆ ಮಾಡುತ್ತಾರೆ. ಇಸ್ರೇಲ್, ಚೀನಾದಂಥ ದೇಶಗಳಿಂದಲೂ ಇಲ್ಲಿಗೆ ಬಂಡವಾಳ ಹರಿಯುತ್ತದೆ. ಆದರೆ ಅವು ಹೆಚ್ಚಾಗಿ ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡುತ್ತವೆ. ಒಂದು ಕಾಲದಲ್ಲಿ ಬೆಲ್ಜಿಯಂ ಮತ್ತು ಇಸ್ರೇಲ್‌ನಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದ ವಜ್ರದ ವ್ಯಾಪಾರ ಇಂದು ದುಬೈನಲ್ಲಿ ನಡೆಯುತ್ತದೆ.

ಸಂಯುಕ್ತ ಅರಬ್ ಸಂಸ್ಥಾನದಲ್ಲಿ, ಅದರಲ್ಲೂ ವಿಶೇಷವಾಗಿ ದುಬೈನಲ್ಲಿ, ಎಲ್ಲರಿಗೂ ಏನಾದರೊಂದು ಅವಕಾಶವಿದೆ. ಕ್ರಿಕೆಟ್ ಕೂಡ ಇಲ್ಲಿ ಬಲವಾಗಿ ಕಾಲೂರಿದೆ. ಹಿಂದೆ ಯುರೋಪ್‌ನಲ್ಲಿ ಗಗನಚುಂಬಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಆದರೆ ಈಗ ಯುಎಇನಲ್ಲಿ ಜಗತ್ತಿನ ಬೇರೆಲ್ಲಾ ಕಟ್ಟಡಗಳನ್ನೂ ಮೀರಿಸುವಂಥ ಕಟ್ಟಡಗಳು ತಲೆಯೆತ್ತಿವೆ.

ಬುರ್ಜ್ ಖಲೀಫಾ, ಪಾಮ್ ಜುಮೇರಾ, ದುಬೈ ಮರೀನಾ, ಜುಮೇರಾ ಲೇಕ್ ಟವರ್ಸ್ ಮತ್ತು ಜುಮೇರಾ ಹೈಟ್ಸ್‌ನಂಥ ಕಟ್ಟಡಗಳು ಎಂಥವರನ್ನೂ ಬೆರಗುಗೊಳಿಸುತ್ತವೆ. ಪಾಮ್ ಜುಮೇರಾ ಎಂಬುದು ಸಂಪೂರ್ಣ ಮಾನವ ನಿರ್ಮಿತ ದ್ವೀಪ. ಕಾಂಕ್ರೀಟ್ ಅಥವಾ ಉಕ್ಕನ್ನು ಬಳಸದೆಯೇ, 120 ಮಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ಸಮುದ್ರದ ಮರಳಿನಿಂದಲೇ ಈ ದ್ವೀಪವನ್ನು ನಿರ್ಮಿಸಲಾಗಿದೆ.

ದುಬೈ ಮೆಟ್ರೋ ಇನ್ನೊಂದು ವಿಸ್ಮಯ. ಒಟ್ಟಾರೆ ಹೇಳುವುದಾದರೆ, ದುಬೈ ತಾನು ಕಂಡ ಕನಸನ್ನೆಲ್ಲ ನನಸು ಮಾಡಿಕೊಂಡಿದೆ. ಜಗತ್ತಿನ ಎಲ್ಲಾ ಕಡೆಯಿಂದ ಪ್ರತಿಭೆಗಳನ್ನು ಆಕರ್ಷಿಸಲು ಅದು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ. ವಿದೇಶಿ ವಲಸಿಗರಿಗೆ ಕೆಲ ಸಾಮಾಜಿಕ ಸ್ವಾತಂತ್ರ್ಯಗಳನ್ನು ಕೂಡ ನೀಡಿದೆ.

ಉದಾಹರಣೆಗೆ, ಯುಎಇನಲ್ಲಿ ಮೂಲ ನಿವಾಸಿಗಳಿಗೆ ‘ಲಿವಿಂಗ್ ಟುಗೆದರ್’ ನಿಷಿದ್ಧ. ಆದರೆ ವಲಸಿಗ ಯುವಕ-ಯುವತಿಯರು ಮದುವೆಯಾಗದೆಯೂ ಒಟ್ಟಿಗೆ ಇರಲು ಅನುಮತಿ ನೀಡಿದೆ. ಇದು ಅಲ್ಲಿನ ನಾಯಕರ ದೂರದೃಷ್ಟಿಯನ್ನು ತೋರಿಸುತ್ತದೆ. ಎಲ್ಲಾ ದೇಶಗಳ ಜತೆಗೂ ಯುಎಇ ಸೌಹಾರ್ದ ಸಂಬಂಧವನ್ನು ಇರಿಸಿಕೊಂಡಿದೆ. ತನ್ನ ಸಂಸ್ಥಾನಗಳಲ್ಲಿ ದೊಡ್ಡ ದೊಡ್ಡ ಮಸೀದಿಗಳನ್ನು ನಿರ್ಮಿಸಿದರೂ, ಜಾತ್ಯತೀತ ಮೌಲ್ಯಗಳಿಗೆ ಗೌರವ ನೀಡಲು ಅಬುಧಾಬಿಯಲ್ಲಿ ಹಿಂದೂ ದೇವಸ್ಥಾನಕ್ಕೂ ಅನುಮತಿ ನೀಡಿದೆ.

ಈಗ ಮುಖ್ಯವಾದ ಪ್ರಶ್ನೆಗೆ ಬರೋಣ. ಏಕೆ ಯುಎಇ ಮೇಲೆ, ಅದರಲ್ಲೂ ದುಬೈ ಮೇಲೆ ಇರಾನ್ ದಾಳಿ ನಡೆಸುತ್ತಿದೆ? ಇಲ್ಲಿಯವರೆಗೆ ಇರಾನ್ 2000ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್ʼಗಳನ್ನು ದುಬೈ ಕಡೆಗೆ ಹಾರಿಸಿದೆ. ಅವುಗಳಲ್ಲಿ ಹೆಚ್ಚಿನವುಗಳನ್ನು ಇಂಟರ್‌ಸೆಪ್ಟ್ ಮಾಡಿ ನಿಷ್ಕ್ರಿಯಗೊಳಿಸಲಾಗಿದೆ. ಆದರೂ ಕೆಲವು ಕ್ಷಿಪಣಿಗಳು ದುಬೈನ ಕಟ್ಟಡಗಳಿಗೆ ಬಂದು ಅಪ್ಪಳಿಸಿವೆ.

ದುಬೈ ವಿಮಾನ ನಿಲ್ದಾಣದ ಸಮೀಪದಲ್ಲೂ ಸ್ಫೋಟ ಸಂಭವಿಸಿದೆ. ಅದರಲ್ಲಿ ಜೀವಹಾನಿ ಯಾಗಿದೆ. ದುಬೈ ‘ಸುರಕ್ಷಿತ ಸ್ವರ್ಗ’ ಎಂಬ ಅಭಿಪ್ರಾಯವನ್ನು ಸುಳ್ಳು ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಭಯ ಹುಟ್ಟುಹಾಕುವುದು, ತನ್ಮೂಲಕ ಬಂಡವಾಳ ಮತ್ತು ಜನರು ದುಬೈಗೆ ಹರಿದು ಬರುವುದನ್ನು ತಡೆಯುವುದು ಇದರ ಹಿಂದಿನ ಉದ್ದೇಶವಿರ ಬಹುದು. ಆದರೆ ಇರಾನ್ ಇದರಲ್ಲಿ ಯಶಸ್ವಿಯಾಗುತ್ತದೆಯೇ? ಗೊತ್ತಿಲ್ಲ. ಆದರೆ, ಇರಾನ್‌ನ ಸಂದೇಶ ಮಾತ್ರ ಸ್ಪಷ್ಟವಾಗಿದೆ: ನೀವು ಅಮೆರಿಕದ ಜತೆಗೆ ಕೈಜೋಡಿಸಿದರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ.

ಯುದ್ಧಪೀಡಿತ ಪ್ರದೇಶಗಳಲ್ಲಿ ಸದಾ ಕ್ಷಿಪಣಿ ದಾಳಿಯ ಭೀತಿಯಲ್ಲೇ ಬದುಕುವ ಜನರ ಸಂಕಷ್ಟವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರ ಬದುಕಿನ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ತಮ್ಮ ಮಕ್ಕಳ ಭವಿಷ್ಯವೇನು ಎಂದು ಅಪ್ಪ-ಅಮ್ಮಂದಿರು ಚಿಂತಿತರಾಗಿದ್ದಾರೆ.

ಇವತ್ತು ಬದುಕಿದ್ದೇವೆ, ನಾಳೆ ಬದುಕಿರುತ್ತೇವೋ ಇಲ್ಲವೋ ಗೊತ್ತಿಲ್ಲ ಎಂಬ ಭಯದಲ್ಲೇ ಜೀವನ ನಡೆಸುವುದು ಎಷ್ಟು ಕಷ್ಟವಲ್ಲವೇ? ಆದರೆ ಜನಸಾಮಾನ್ಯರ ಬಗ್ಗೆ ಯಾರು ಯೋಚಿಸುತ್ತಾರೆ? ದೈತ್ಯರು ಸಂಘರ್ಷಕ್ಕೆ ಇಳಿದಾಗ ಅದುರುವುದು ಮೈದಾನ. ಕಾಲಿಗೆ ಸಿಲುಕಿದವರು ಅಪ್ಪಚ್ಚಿಯಾಗಬೇಕು.

ಇಂದು ಶಾಂತಿಯ ಬಗ್ಗೆ ಮಾತನಾಡುವ ವಿಶ್ವಸಂಸ್ಥೆ ಹಾಗೂ ಇನ್ನಿತರ ಜಾಗತಿಕ ಸಂಘಟನೆ ಗಳು ನಿಷ್ಕ್ರಿಯವಾಗಿವೆ. ‘ಪ್ರಬಲರ ಉಳಿವು’ ಎಂಬ ಹಳೆಯ ಸಿದ್ಧಾಂತವೇ ಮತ್ತೊಮ್ಮೆ ನಿಜವಾಗುತ್ತಿದೆ. ‘ಜಗತ್ತಿಗೆ ನಾನೇ ನಾಯಕ’ ಎಂದು ಅಮೆರಿಕ ಹೇಳಿಕೊಳ್ಳುವು ದಾದರೆ ನಿಜವಾದ ನಾಯಕನಂತೆ ವರ್ತಿಸುವ ಜವಾಬ್ದಾರಿಯೂ ಅದರ ಮೇಲಿದೆ. ಟ್ರಂಪ್ ಇದನ್ನು ಅರ್ಥ ಮಾಡಿಕೊಳ್ಳುವರೇ?

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಡಾ.ವಿಜಯ್‌ ದರಡಾ

View all posts by this author