ಸಂಗತ
ಭಾರತ ಕಳೆದ ವಾರ ಬಗ್ಲಿಹಾರ್ ಅಣೆಕಟ್ಟೆಯ ಮೂರು ಗೇಟುಗಳನ್ನು ತೆರೆದು ಪಾಕಿಸ್ತಾನದತ್ತ ನೀರು ಹರಿಬಿಟ್ಟಿತ್ತು. ಜಮ್ಮು ಮತ್ತು ಕಾಶ್ಮೀರದ ರಾಮ್‌ಬನ್ ಜಿಲ್ಲೆಯಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಅಲ್ಲಿಂದ ನೀರು ಬಿಡುತ್ತಿದ್ದಂತೆ ಗಡಿಯುದ್ದಕ್ಕೂ ಕೋಲಾಹಲ ಉಂಟಾಯಿತು.
ಇತ್ತೀಚಿನವರೆಗೂ ಭಾರತ ನೀರು ಬಿಡುತ್ತಿಲ್ಲ ಎಂದು ಗಲಾಟೆ ಮಾಡುತ್ತಿದ್ದ ಪಾಕಿಸ್ತಾನ, ಈಗ ನೀರು ಬಿಟ್ಟಾಗ ಅದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿತು. ಮಿಲಿಟರಿ ಅಧಿಕಾರಿಗಳಿಂದ ಹಿಡಿದು ರಾಜಕೀಯ ನಾಯಕರವರೆಗೆ ಎಲ್ಲರೂ ಜೋರಾದ ಧ್ವನಿಯಲ್ಲಿ ಭಾರತದ ವಿರುದ್ಧ ಮಾತನಾಡಿದರು. ಅತಿ ಹೆಚ್ಚು ತೀಕ್ಷ್ಣವಾಗಿ ಮಾತನಾಡಿದ್ದು ಬಿಲಾವಲ್ ಭುಟ್ಟೋ ಜರ್ದಾರಿ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಇವರು. ಏಕ್‌ದಂ ಭಾರತದ ಜೊತೆಗೆ ಸಂಘರ್ಷ ಹಾಗೂ ಸಮರದ ಭಾಷೆಯಲ್ಲೇ ಅವರು ಮಾತನಾಡಿದರು.
ಆದರೆ ಹಾಗೆ ಮಾತನಾಡುವಾಗ ಅವರಿಗೆ 1971ರ ಘಟನೆ ನೆನಪಿಗೆ ಬಂದಿರಲಿಕ್ಕಿಲ್ಲ. ಆ ವರ್ಷ 90000 ಪಾಕಿಸ್ತಾನಿ ಯೋಧರು ಭಾರತೀಯ ಸೇನೆಯ ಮುಂದೆ ಮಂಡಿಯೂರಿ ಶರಣಾಗಿದ್ದರು! ಕಳೆದ ಹಲವು ದಶಕಗಳಿಂದ ಯುದ್ಧ ವಿಶ್ಲೇಷಕರು ಭವಿಷ್ಯದ ಸಮರಗಳು ನೀರಿಗಾಗಿ ನಡೆಯುತ್ತವೆ ಎಂದು ಹೇಳುತ್ತಾ ಬಂದಿದ್ದಾರೆ. ಮೂರನೇ ವಿಶ್ವ ಮಹಾಯುದ್ಧ ನೀರಿನ ವಿಷಯಕ್ಕೆ ನಡೆಯಬಹುದು ಎಂಬಲ್ಲಿಯವರೆಗೂ ಅವರು ಮಾತನಾಡಿದ್ದಾರೆ. ಆದರೆ ಪಾಕಿಸ್ತಾನದ ವಿಷಯದಲ್ಲಿ ಈ ಹೇಳಿಕೆ ಕೇವಲ ಉಪಮೆಯಾಗಿ ಉಳಿದಿಲ್ಲ. ಭಾರತ-ಪಾಕ್ ನಡುವೆ ಯುದ್ಧದ ವಿಷಯ ಇಂದು ದೂರದ ಸಾಧ್ಯತೆಯಾಗಿ ಚರ್ಚೆಯಾಗುವು ದಿಲ್ಲ, ಬದಲಿಗೆ ಅದೊಂದು ರಾಜಕೀಯ ಟಾಕಿಂಗ್ ಪಾಯಿಂಟ್ ಆಗಿ ಪರಿಣಮಿಸಿದೆ. ಈ ವಿವಾದ ಶುರುವಾಗಿದ್ದು 1960ರ ಇಂಡಸ್ ನದಿ ಒಪ್ಪಂದದಿಂದ.
ಇದನ್ನೂ ಓದಿ: Dr Vijay Darda Column: ಬಿಡಿಸಲಾಗದ ದ್ವಿಪಕ್ಷೀಯ ಸಂಬಂಧದ ಗಂಟುಗಳು
ಭಾರತ ಹಾಗೂ ಪಾಕ್ ನಡುವೆ ನದಿಗಳ ನೀರಿನ ಹಂಚಿಕೆಯಲ್ಲಿ ಈ ಒಪ್ಪಂದ ಸುಮಾರು ಆರು ದಶಕ ಗಳಿಂದ ಕೆಲಸ ಮಾಡುತ್ತಾ ಬಂದಿದೆ. ಈ ಒಪ್ಪಂದದ ಅನ್ವಯ ಭಾರತಕ್ಕೆ ರಾವಿ, ಸಟ್ಲೆಜ್ ಮತ್ತು ಬಿಯಾಸ್ ನದಿಗಳ ನೀರಿನ ಮೇಲೆ ಸಂಪೂರ್ಣ ಹಕ್ಕಿದೆ. ಪಾಕಿಸ್ತಾನಕ್ಕೆ ಝೇಲಂ, ಇಂಡಸ್ ಮತ್ತು ಚೆನಾಬ್ ನದಿಯಿಂದ ನೀರು ಹರಿಸಬೇಕು. ಇತಿಹಾಸವನ್ನು ಗಮನಿಸಿದರೆ, ಯಾವಾಗ ಈ ನದಿಗಳಲ್ಲಿ ಪ್ರವಾಹ ಬಂದಾಗಲೂ ಭಾರತವು ಪಾಕಿಸ್ತಾನಕ್ಕೆ ಪ್ರವಾಹದ ಮುನ್ನೆಚ್ಚರಿಕೆ ನೀಡುತ್ತಿತ್ತು. ಆದರೆ, ಕಳೆದ ವರ್ಷದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂದು ಘೋಷಿಸಿತು.
ಬಳಿಕ ಪಾಕಿಸ್ತಾನದ ಜೊತೆಗಿನ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇರಿಸಿತು. ಪರಿಣಾಮ, ಭಾರತವೀಗ ನದಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನದ ಜೊತೆಗೆ ಹಂಚಿಕೊಳ್ಳಬೇಕಿಲ್ಲ. ಹೀಗಾಗಿಯೇ ಕಳೆದ ವಾರ ಬಗ್ಲಿಹಾರ್ ಅಣೆಕಟ್ಟೆಯಿಂದ ನೀರು ಬಿಡುವುದಕ್ಕಿಂತ ಮೊದಲು ಪಾಕಿಸ್ತಾನಕ್ಕೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ.
ಪಾಕಿಸ್ತಾನದ ಸುಮಾರು ಶೇ.90ರಷ್ಟು ಕೃಷಿ ಚಟುವಟಿಕೆಗಳು ಇಂಡಸ್ ನದಿಯ ಮೇಲೆ ಅವಲಂಬಿತ ವಾಗಿವೆ. ನೀರು ಹೆಚ್ಚಿದ್ದಾಗ ಸಂಗ್ರಹಿಸಿಟ್ಟುಕೊಂಡು, ಅಗತ್ಯವಿದ್ದಾಗ ಬಳಕೆ ಮಾಡಿಕೊಳ್ಳಲು ಪಾಕಿಸ್ತಾನ ದಲ್ಲಿ ಸಾಕಷ್ಟು ಜಲಾಶಯಗಳಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಆ ದೇಶಕ್ಕೆ ನೀರಿನ ತೊಂದರೆ ಯಾಗುತ್ತದೆ. ಭಾರತದ ಜೊತೆಗಿನ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಅಂತಾರಾಷ್ಟ್ರೀಯ ವೇದಿಕೆಗಳು ಹಾಗೂ ವಿಶ್ವಸಂಸ್ಥೆಗೆ ಪಾಕ್ ಪತ್ರ ಬರೆದಿದೆ.
ವಿದೇಶಗಳಿಂದ ತನಗೆ ರಾಜತಾಂತ್ರಿಕ ನೆರವು ಬೇಕು ಎಂದೂ ಕೇಳಿದೆ. ಆದರೆ ಭಾರತದ ನಿಲುವು ಅಚಲ ವಾಗಿದೆ: ‘ಭಯೋತ್ಪಾದನೆ ನಿಲ್ಲಿಸಿ, ನಂತರವಷ್ಟೇ ಮಾತುಕತೆಗೆ ಬರುತ್ತೇವೆ. ಹೀಗೆ ತೊಂದರೆಗೆ ಸಿಲುಕಿರುವ ಪಾಕಿಸ್ತಾನವೀಗ ಪದೇಪದೆ ಭಾರತಕ್ಕೆ ಧಮಕಿ ಹಾಕತೊಡಗಿದೆ. ಇಂಡಸ್ ನದಿ ಒಪ್ಪಂದವನ್ನು ಭಾರತ ಅಮಾನತಿನಲ್ಲಿ ಇರಿಸಿದ ಕೂಡಲೇ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಸಿ, ‘ನದಿ ನೀರನ್ನು ತಡೆಯುವ ಅಥವಾ ತಿರುಗಿಸುವ ಯಾವುದೇ ಪ್ರಯತ್ನವನ್ನು ಯುದ್ಧವೆಂದೇ ಪರಿಗಣಿಸುತ್ತೇವೆ’ ಎಂದು ಘೋಷಿಸಿತು. ಇತ್ತೀಚೆಗೆ ಕೋರ್ ಕಮಾಂಡರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಕಿಸ್ತಾನದ ಸೇನಾಪಡೆ ಮುಖ್ಯಸ್ಥ ಆಸಿಮ್ ಮುನೀರ್, ‘ನಮ್ಮ ನ್ಯಾಯಬದ್ಧ ಹಕ್ಕುಗಳನ್ನು ಯಾವುದೇ ರೀತಿಯಲ್ಲೂ ರಕ್ಷಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಕ್ ದಾರ್ ಕೂಡ, ನೀರಿಗೆ ತಡೆಯೊಡ್ಡುವುದು ನಮ್ಮ ಜೊತೆಗಿನ ಸಂಘರ್ಷವೆಂದೇ ಪರಿಗಣಿಸುತ್ತೇವೆ ಎಂದಿದ್ದಾರೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಲ್ಲರೂ ಈಗ ಯುದ್ಧದ ಭಾಷೆಯಲ್ಲೇ ಮಾತನಾಡುತ್ತಿದ್ದಾರೆ. ಆದರೆ ಬಿಲಾವಲ್ ಭುಟ್ಟೋ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಗಿಲ್ಗಿಟ್‌ನಲ್ಲಿ ಸಾರ್ವಜನಿಕ ಸಭೆಯೊಂದ ರಲ್ಲಿ ಮಾತನಾಡಿದ ಅವರು, ಭಾರತವು ಪಾಕಿಸ್ತಾನದ ವಿರುದ್ಧ ಇಂಡಸ್ ನದಿಯನ್ನು ಅಸ್ತ್ರವಾಗಿ ಬಳಸಲು ಯತ್ನಿಸುತ್ತಿದೆ. ಯುದ್ಧವು ಅನಿವಾರ್ಯವೇ ಆದರೆ ಅದಕ್ಕೆ ಪಾಕಿಸ್ತಾನ ಸಿದ್ಧವಾಗುತ್ತದೆ ಎಂದು ಹೇಳಿದರು.
ನನಗೆ ಬಿಲಾವಲ್ ಭುಟ್ಟೋ ಮಾತು ಕೇಳಿ ನಗು ಬಂತು. ಅವರ ತಾತ ಜುಲ್ಫಿಕರ್ ಅಲಿ ಭುಟ್ಟೋ ಹಾಗೂ ತಾಯಿ ಬೆನಜೀರ್ ಭುಟ್ಟೋ ಇಂದು ಬದುಕಿದ್ದಿದ್ದರೆ ಪಾಕಿಸ್ತಾನಕ್ಕೆ ಯುದ್ಧ ಸಾರುವ ಶಕ್ತಿ ಇಲ್ಲ ಮಗನೇ ಎಂದು ತಿಳಿಹೇಳುತ್ತಿದ್ದರು. ಮಿಸ್ಟರ್ ಭುಟ್ಟೋ, ಭಾರತ ಯಾವಾಗಲೂ ಔದಾರ್ಯ ಹಾಗೂ ಸಂಯಮ ವನ್ನೇ ತೋರುತ್ತಾ ಬಂದಿದೆ. ಆದರೆ ಯಾರಾದರೂ ಬೆದರಿಕೆ ಹಾಕಿದರೆ ಅಥವಾ ಅಪಾಯ ತಂದೊಡ್ಡಲು ಮುಂದಾದರೆ ಭಾರತದ ತಾಳ್ಮೆ ಅಲ್ಲಿಗೇ ಮುಗಿಯುತ್ತದೆ! ಯಾವತ್ತು ಪಾಕಿಸ್ತಾನವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸುತ್ತದೆಯೋ ಆವತ್ತೇ ಭಾರತ ಕೂಡ ಹಳೆಯ ಗಾಯಗಳನ್ನು ಅಲ್ಲಿಗೇ ಬಿಟ್ಟು, ಕ್ಷಮಿಸಿ, ಮುಂದೆ ಸಾಗಲು ಸಿದ್ಧವಿದೆ.
ಚಿನ್ನದಂತೆ ಹೊಳೆವ ಮುಚ್ಚಳ
ಹಂಗೇರಿ ದೇಶದ ರಾಜಧಾನಿ ಬುಡಾಪೆಸ್ಟ್. ಅಲ್ಲಿನ ಬೀದಿಗಳಲ್ಲಿ ಓಡಾಡುತ್ತಿದ್ದಾಗ ವಿಚಿತ್ರ ದೃಶ್ಯ ವೊಂದು ನನ್ನ ಗಮನ ಸೆಳೆಯುತ್ತಿತ್ತು. ಅಲ್ಲಿನ ಮ್ಯಾನ್‌ಹೋಲ್‌ಗಳ ಮುಚ್ಚಳಗಳು ಚಿನ್ನದಿಂದ ತಯಾರಿಸಿದಂತೆ ಹೊಳೆಯುತ್ತಿದ್ದವು. ಚಿನ್ನದಿಂದ ಮಾಡಿದ್ದಲ್ಲ ಎಂಬುದು ನನಗೆ ಗೊತ್ತು. ಆದರೆ ಕೊನೆಯ ಪಕ್ಷ ಅವು ಹಿತ್ತಾಳೆಯಿಂದ ಮಾಡಿದ್ದಂತೂ ಹೌದು.
ಆಶ್ಚರ್ಯವಾಗಿದ್ದೇನು ಅಂದರೆ, ಪ್ರತಿನಿತ್ಯ ನೂರಾರು ಜನರು ಅವುಗಳ ಮೇಲೆ ಓಡಾಡಿದರೂ ಸದಾಕಾಲ ಅವು ಪಾಲಿಶ್ ಮಾಡಿಟ್ಟಂತೆ ಹೇಗೆ ಹೊಳೆಯುತ್ತವೆ? ಉತ್ತರ ಬಹಳ ಸರಳ. ಪ್ರತಿ ವಾರ ಅವುಗಳನ್ನು ತೊಳೆದು ಸ್ವಚ್ಛಗೊಳಿಸುತ್ತಾರೆ. ಮೇಲಾಗಿ ಬುಡಾಪೆಸ್ಟ್‌ನಲ್ಲಿ ಮಾಲಿನ್ಯ ತುಂಬಾ ಕಡಿಮೆಯಿದೆ. ಹೀಗಾಗಿ ಅವು ಸದಾ ಹೊಳೆಯುತ್ತಿರುತ್ತವೆ. ಭಾರತದಲ್ಲೂ ಹಿಂದೊಂದು ಕಾಲದಲ್ಲಿ ಇಂತಹ ನಾಗರಿಕ ಮೂಲ ಸೌಕರ್ಯಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇಂದು ನಗರಗಳಲ್ಲಿ ಮ್ಯಾನ್‌ಹೋಲ್ ಮುಚ್ಚಳ ಗಳನ್ನು ಸಾಮಾನ್ಯವಾಗಿ ಕಬ್ಬಿಣದಿಂದ ಮಾಡಿರುತ್ತಾರೆ. ಅವುಗಳನ್ನು ಕದ್ದು ಮಾರುವುದಕ್ಕೆಂದೇ ಕಳ್ಳರ ಸಂಪರ್ಕ ಜಾಲಗಳು ಹರಡಿಕೊಂಡಿವೆ.
ನಮ್ಮ ಕಳ್ಳರು ಎಷ್ಟು ಚಾಲಾಕಿಗಳು ಅಂದರೆ, ಕೆಲವೊಮ್ಮೆ ಅವರು ಕರೆಂಟ್ ಹರಿಯುತ್ತಿರುವ ವೈರ್‌ಗಳನ್ನು ಕೂಡ ಕತ್ತರಿಸಿ ಮಾರುತ್ತಾರೆ. ಏಕೆ ಇಂತಹ ಘಟನೆಗಳು ನಡೆಯುತ್ತವೆ? ಏಕೆ ನಮ್ಮಲ್ಲಿ ಹೊಸತಾಗಿ ನಿರ್ಮಿಸಿದ ಸುರಂಗ ಮಾರ್ಗಗಳಲ್ಲೂ ನೀರು ಸೋರುತ್ತದೆ? ಏಕೆ ಒಂದೇ ಒಂದು ಮಳೆಗಾಲಕ್ಕೆ ರಸ್ತೆಗಳು ಹಾಳಾಗುತ್ತವೆ? ಏಕೆ ಸೇತುವೆಗಳು ಕುಸಿಯುತ್ತವೆ? ಬುಡಾಪೆಸ್ಟ್ʼನ ರಸ್ತೆಗಳಲ್ಲಿ ವಾಹನ ಸವಾರಿ ಮಾಡು ತ್ತಿದ್ದರೆ ಎಷ್ಟು ನಯವಾದ ಅನುಭವ, ಆಹಾ! ಹಿಂದಿಯಲ್ಲೊಂದು ಗಾದೆಯಿದೆಯಲ್ಲ, ಹೊಟ್ಟೆಯಲ್ಲಿರುವ ನೀರು ಕೂಡ ಕಲಕುವುದಿಲ್ಲ ಎಂದು, ಹಾಗೆ ಸುಂಯ್ಯನೆ ಹೋಗಬಹುದು.
ನನಗೆ ಇಂದೋರ್ ಮತ್ತು ಯವತ್ಮಾಲ್ ನಡುವಿನ ರಸ್ತೆ ನೆನಪಾಯಿತು. ಅದು ಸಮೃದ್ಧಿ ಎಕ್ಸ್‌ಪ್ರೆಸ್ ವೇ. ವಾಹನಗಳು ಜೋರಾಗಿ ಹೋಗುವಾಗ ಒಮ್ಮೊಮ್ಮೆ ಅಲ್ಲಿ ಮೇಲಕ್ಕೆ ಹಾರಿ ಕೆಳಗೆ ಕುಸಿಯುತ್ತವೆ. ಅಷ್ಟೊಂದು ಏರು-ತಗ್ಗಿನ ರಸ್ತೆ ಮಾಡಿದ್ದಾರೆ. ಹಿಂದೆ ನಾನು ರಾಜ್ಯಸಭೆಯಲ್ಲಿದ್ದೆ. ಆಗ ಸಾರ್ವಜನಿಕ ಕೆಲಸಗಳಿಗೆ ಎಂಪಿಲಾಡ್ ನಿಧಿ ಹಂಚಿಕೆ ಮಾಡುತ್ತಿದ್ದೆ. ಆದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಯಾವಾಗಲೂ ಆಕ್ಷೇಪಗಳು ಕೇಳಿಬರುತ್ತಿದ್ದವು.
ಗುಣಮಟ್ಟ ನಿಯಂತ್ರಣ ಅಧಿಕಾರಿಗಳ ಬಳಿ ಈ ವಿಷಯ ಎತ್ತಿದಾಗಲೆಲ್ಲ ಅವರ ಪ್ರತಿಕ್ರಿಯೆ ಸಾಮಾನ್ಯವಾಗಿ ಒಂದೇ ಆಗಿರುತ್ತಿತ್ತು. ಇನ್ನೂ ಸ್ವಲ್ಪ ಆಳಕ್ಕಿಳಿದು ತನಿಖೆ ನಡೆಸಿದರೆ, ಕೊನೆಗೆ ಬರುವ ತೀರ್ಪು ‘ಎಲ್ಲವೂ ಸರಿಯಾಗಿದೆ’ ಎಂಬುದಾಗಿರುತ್ತಿತ್ತು! ಕಳಪೆ ಗುಣಮಟ್ಟವನ್ನೂ ಹೀಗೆ ಸಹಜವಾಗಿ ಒಪ್ಪಿಕೊಳ್ಳುವ ಗುಣ ಮತ್ತು ಎಲ್ಲವೂ ಸರಿಯಾಗಿದೆ ಎಂಬ ಉಡಾಫೆಯ ವರ್ತನೆಯೇ ನಮ್ಮ ದೇಶದ ಬಹುತೇಕ ಸಮಸ್ಯೆಗಳ ಮೂಲ ಕಾರಣ.
ಭೀಕರ ಶಿಕ್ಷೆಯಾಗಲಿ
ನನಗೆ ಸುಲಭಕ್ಕೆ ಸಿಟ್ಟು ಬರುವುದಿಲ್ಲ. ಆದರೆ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ 13 ವರ್ಷದ ಬಾಲಕಿಯ ಮೇಲೆ ನಡೆದ ಅಮಾನುಷ ದೌರ್ಜನ್ಯದ ಬಗ್ಗೆ ಕೇಳಿ ತುಂಬಾ ಸಿಟ್ಟುಗೊಂಡಿದ್ದೇನೆ. ಮನಸ್ಸು ಕಳವಳಗೊಂಡಿದೆ. ಅಂತಹ ದೌರ್ಜನ್ಯಗಳನ್ನು ಎಸಗಲು ಹೇಗೆ ತಾನೇ ಅಪರಾಽಗಳಿಗೆ ಮನಸ್ಸು ಬರುತ್ತದೆ? ನಾಲ್ಕು ವರ್ಷ, ಆರು ವರ್ಷ ಅಥವಾ 13 ವರ್ಷದ ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ಮನಸ್ಥಿತಿ ಎಂಥದ್ದಿರಬಹುದು? ನನ್ನ ಪ್ರಕಾರ, ಇಂತಹ ಭಯಾನಕ ಅಪರಾಧ ಕೃತ್ಯಗಳಿಗೆ ಅಷ್ಟೇ ಭಯಾನಕವಾದ ಶಿಕ್ಷೆಯೂ ಆಗಬೇಕು.
ಸಂತ್ರಸ್ತರು ಎಷ್ಟು ನರಳಿದ್ದಾರೋ ಅಪರಾಧಿಗಳೂ ಅಷ್ಟೇ ನರಳಬೇಕು. ಸಾರ್ವಜನಿಕ ವಲಯದಲ್ಲಿ ಆಗಾಗ ಗಲ್ಲು ಶಿಕ್ಷೆಯ ಬಗ್ಗೆಯಷ್ಟೇ ಚರ್ಚೆ ನಡೆಯುತ್ತದೆ. ಇನ್ನೂ ಕ್ರೂರ ಶಿಕ್ಷೆಯ ಬಗ್ಗೆ ಚರ್ಚೆಗಳು ನಡೆಯಬೇಕು. ಶಿಕ್ಷೆ ಎಷ್ಟು ಭಯಾನಕವಾಗಿರಬೇಕು ಅಂದರೆ, ಅಪರಾಧಿಗಳು ಅಪರಾಧ ಎಸಗುವುದಕ್ಕೂ ಮೊದಲು ಅವರಿಗೆ ಒಮ್ಮೆಯಾದರೂ ಆ ಕೃತ್ಯಕ್ಕೆ ಲಭಿಸುವ ಶಿಕ್ಷೆಯ ಬಗ್ಗೆ ಹೆದರಿಕೆ ಮೂಡಬೇಕು. ಹಾಗೆ ಘೋರವಾಗಿ ಶಿಕ್ಷಿಸುವುದು ಅಮಾನವೀಯ ಅಥವಾ ಕ್ರೌರ್ಯವಾಗುತ್ತದೆ ಎಂದು ಕೆಲವರು ವಾದಿಸಬಹುದು.
ನನಗೇನೂ ಹಾಗನ್ನಿಸುವುದಿಲ್ಲ. ಏಕೆಂದರೆ, ಅಪರಾಧಕ್ಕೆ ತೀಕ್ಷ್ಣಾತಿತೀಕ್ಷ್ಣ ಶಿಕ್ಷೆಯಾಗುತ್ತದೆ ಎಂಬ ಭಯ ಸಮಾಜದಲ್ಲಿ ಇಲ್ಲದಿದ್ದರೆ ಅಂತಹ ಅಪರಾಧಗಳು ಕಡಿಮೆಯಾಗುವುದೇ ಇಲ್ಲ. ಅಪರಾಧ ಕೃತ್ಯಗಳನ್ನು ಎಸಗಲು ಕ್ರೂರಿಗಳಿಗೆ ಅಡೆತಡೆಯೇ ಇಲ್ಲದಂತಾಗುತ್ತದೆ.