ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Upadhyay Column: ಪ್ರಕೃತಿಯಲ್ಲಿ ಮಾನವ ಯಾಕಿಲ್ಲ?

ಒಂದೊಮ್ಮೆ ಇದ್ದರೂ ಖಳನಾಯಕನಾಗಿಯೇ ಹೊರತು ನಾಯಕನಾಗಿಯೂ ಅಲ್ಲ, ಸೇವಕನಾಗಿ ಯೂ ಅಲ್ಲ. ಪ್ರಕೃತಿಯಲ್ಲಿ ಸೇವಕನಿಗೂ ರಾಜ ಮರ್ಯಾದೆ. ಅಲ್ಲಿ ಯಾವುದೂ ಕನಿಷ್ಠ ಎಂಬುದಿಲ್ಲ. ಪ್ರಕೃತಿಯೊಂದಿಗೆ ಕ್ಷಿಪ್ತವಾದ ಪ್ರತಿಯೊಂದು ವಸ್ತುವೂ, ಪ್ರತಿಯೊಂದು ಕಾರ್ಯವೂ ಪರಮ ಪವಿತ್ರ. ಆ ಪಾವಿತ್ರ್ಯತೆಯ ಕೀಲು ಕಳಚುವ ಕಾರ್ಯ ಮಾಡುತ್ತಿರುವುದು ಮನುಷ್ಯ ಸಂತತಿ.

ವಿದೇಶವಾಸಿ

ನಿಸರ್ಗ ಅಥವಾ ಪ್ರಕೃತಿ ಎಂದರೆ ನಮಗೆ ಪಕ್ಕನೆ ನೆನಪಿಗೆ ಬರುವುದು ಹಸಿರು ಬನ, ಗಿಡ ಮರಗಳು, ಹುಲ್ಲುಗಾವಲು, ಹೂವು ಹಣ್ಣು, ನದಿ, ಸರೋವರಗಳು, ಗಿರಿ ಶಿಖರಗಳು. ಹಸಿರು ಹುಲ್ಲು ಹಾಸಿನ ಮೇಲೆ ಬೀಳುವ ವರ್ಷಧಾರೆ, ಎಲೆಯ ಅಂಚಿನಿಂದ ತೊಟ್ಟಿಕ್ಕುವ ಇಬ್ಬನಿ, ಕೊಳದ ಜಲಕ್ಕೆ ಮುತ್ತಿಡುವ ಸೂರ್ಯ ರಶ್ಮಿ, ಕುಸುಮ ದಳವನ್ನು ನೇವರಿಸಿ ಸಾಗುವ ತಿಳಿ ಗಾಳಿ. ಕೆಲವೊಮ್ಮೆ ಮಂದ ಮಾರುತನ ಮೆಲು ದನಿ, ಇನ್ನು ಕೆಲವೊಮ್ಮೆ ನೀರವ ಮೌನ.

ಇನ್ನೂ ಮುಂದಕ್ಕೆ ಹೋದರೆ ನಭದಲ್ಲಿ ಹಾರುವ ಖಗಗಳು, ವನದಲ್ಲಿ ಜಿಗಿಯುವ ವನ್ಯ ಜೀವಿಗಳು, ಇತ್ಯಾದಿ... ಇತ್ಯಾದಿ. ಪ್ರಕೃತಿಯಲ್ಲಿ ಸೇರಬೇಕಾದವುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದರಲ್ಲಿ ಸಣ್ಣ ಸಣ್ಣ ಕೀಟಗಳೂ ಸೇರುತ್ತಾ ಹೋಗುತ್ತವೆ. ಆ ಪಟ್ಟಿಯಿಂದ ಹೊರಗೆ ಉಳಿಯುವುದು ಮನುಜ ಕುಲ ಮಾತ್ರ. ಎದರೂ, ಎಂದಾದರೂ ನಿಸರ್ಗ ಎಂದಾಕ್ಷಣ ಮನುಷ್ಯ ನೆನಪಾಗುತ್ತಾನಾ? ಪ್ರಕೃತಿಯ ಪಟ್ಟಿಯಲ್ಲಿ ಮನುಷ್ಯನ ಹೆಸರು ಇದೆಯೇ? ಎಂದರೆ, ಖಂಡಿತ ಇಲ್ಲ.

ಒಂದೊಮ್ಮೆ ಇದ್ದರೂ ಖಳನಾಯಕನಾಗಿಯೇ ಹೊರತು ನಾಯಕನಾಗಿಯೂ ಅಲ್ಲ, ಸೇವಕನಾಗಿ ಯೂ ಅಲ್ಲ. ಪ್ರಕೃತಿಯಲ್ಲಿ ಸೇವಕನಿಗೂ ರಾಜ ಮರ್ಯಾದೆ. ಅಲ್ಲಿ ಯಾವುದೂ ಕನಿಷ್ಠ ಎಂಬುದಿಲ್ಲ. ಪ್ರಕೃತಿಯೊಂದಿಗೆ ಕ್ಷಿಪ್ತವಾದ ಪ್ರತಿಯೊಂದು ವಸ್ತುವೂ, ಪ್ರತಿಯೊಂದು ಕಾರ್ಯವೂ ಪರಮ ಪವಿತ್ರ. ಆ ಪಾವಿತ್ರ್ಯತೆಯ ಕೀಲು ಕಳಚುವ ಕಾರ್ಯ ಮಾಡುತ್ತಿರುವುದು ಮನುಷ್ಯ ಸಂತತಿ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಾಣಿ, ಪಕ್ಷಿ, ನದಿ, ಬೆಟ್ಟ ಗುಡ್ಡಗಳು, ಪ್ರತಿಯೊಂದರ ಮೇಲೂ, ದಿನ ನಿತ್ಯ ಅತ್ಯಾಚಾರ ಮಾಡುವುದರಿಂದ ಹಿಡಿದು ಬದುಕಲು ಅತ್ಯವಶ್ಯಕವಾದ ಪ್ರಾಣವಾಯು ನೀಡುವ ಮರ ಕಡಿಯುವು ದರಲ್ಲೂ ಯಾವುದೇ ದಾಕ್ಷಿಣ್ಯ ತೋರಿಸುತ್ತಿಲ್ಲ.

ಇದನ್ನೂ ಓದಿ: Kiran Upadhyay Column: ಬಯಕೆ ಸುಂದರ, ದಾರಿ ಮನೋಹರ

ಮರ ಕಡಿಯುವುದೂ ಒಂದೇ, ತನ್ನ ಶ್ವಾಸಕೋಶ ಕತ್ತರಿಸುವುದೂ ಒಂದೇ ಎಂಬ ಅಲ್ಪ ಜ್ಞಾನವೂ ನಮಗೆ ಇಲ್ಲದೇ ಹೋಯಿತಲ್ಲ ಎಂಬುದು ಬೇಸರದ ಸಂಗತಿ. ಇರಲಿ, ದೈವದತ್ತವಾಗಿ ಬಂದದ್ದನ್ನು ಉಳಿಸಿಕೊಳ್ಳಲು ಆಗದಿದ್ದಾಗ, ಪರ್ಯಾಯ ವ್ಯವಸ್ಥೆಯೊಂದೇ ದಾರಿ. ಅಂತಹ ಪರ್ಯಾಯ ವ್ಯವಸ್ಥೆಗಳಲ್ಲಿ ಒಂದು, ಕೃತಕ ಉದ್ಯಾನವನ ಅಥವಾ ಪಾರ್ಕ್.

ನಮ್ಮ ಮನೆಯ ಮುಂಭಾಗದಲ್ಲಿ ಒಂದು ಸುಂದರವಾದ ಪಾರ್ಕ್ ಇದೆ. ರಣ ಮರುಭೂಮಿಯ ದೇಶದ ಪ್ರಮುಖ ನಗರದ ಮಧ್ಯಭಾಗದಲ್ಲಿರುವ ಈ ಪಾರ್ಕ್ ಉಳಿದ ಪಾರ್ಕ್‌ಗಳಿಗಿಂತ ಒಂದು ಪಟ್ಟು ಮೇಲೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಾರ್ಕ್ ಒಳಗೆ, ಕಬ್ಬಿಣದ ಬೇಲಿಗೆ ತಾಗಿ ಒಂದಕ್ಕೊಂದು ಹೊಂದಿಕೊಂಡ ಇಟ್ಟಿಗೆಗಳಿಂದ (ಇಂಟರ್‌ಲಾಕ್ ಬ್ರಿಕ್ಸ್) ನಿರ್ಮಿಸಿದ ನಡಿಗೆಯ ಮಾರ್ಗ ಇದೆ.

ಒಂದು ಸುತ್ತು ನಡೆದು ಬಂದರೆ ಬರೊಬ್ಬರಿ ಎರಡೂವರೆ ಕಿಲೋಮೀಟರ್ ಆಗುತ್ತದೆ. ಒಳಗೆ ಸ್ವಲ್ಪ ಭಾಗದಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ, ಅಲ್ಲಲ್ಲಿ ಮಕ್ಕಳಿಗೆ ಆಡಲು ಉಯ್ಯಾಲೆ, ಜಾರುಬಂಡಿ ಗಳಂತಹ ಸೌಲಭ್ಯಗಳು, ಇತ್ಯಾದಿ ಸಾಮಾನ್ಯ ಪಾರ್ಕ್‌ನಂತೆಯೇ ಇದೆ. ಪಾರ್ಕ್ ಒಳಗೆ ಜಾರುಬಂಡಿ ಇರುವ ಸ್ಥಳದಲ್ಲಿ ಸ್ವಲ್ಪ ಮರಳು, ಡಾಂಬರು ಹಾಕಿದ ಕಾರ್ ಪಾರ್ಕ್ ಮತ್ತು ಒಳಗಿನ ರಸ್ತೆಯ ಭಾಗ ಬಿಟ್ಟರೆ ಉಳಿದ ಎಲ್ಲಾ ಕಡೆ ಹಸಿರು, ಹಸಿರು, ಹಸಿರು. ಈ ಸ್ಥಳದಲ್ಲಿ ಸುಮಾರು ನೂರಕ್ಕೂ ಹೆಚ್ಚು ಖರ್ಜೂರದ ಮರ, ಮೂವತ್ತರಷ್ಟು ತಾಳೆ ಮರವೂ ಸೇರಿದಂತೆ ಐದು ನೂರು ಮರಗಳಿವೆ.

71 ಒಕ

ಎಲ್ಲವೂ ಇಪ್ಪತ್ತೈದರಿಂದ ಮೂವತ್ತು ಫೂಟ್‌ಗಿಂತಲೂ ಎತ್ತರ ಬೆಳೆದು ನಿಂತು ಭೂಮಿಗೆ ತಂಪೆರೆಯುತ್ತಿವೆ. ನಡು ನಡುವೆ ಇರುವ ಒಂದಿಷ್ಟು ಅಲಂಕಾರದ ಗಿಡಗಳ ಜೊತೆಗೆ ಒಂದೇ ಒಂದು ಮಲ್ಲಿಗೆ ಹೂವಿನ ಗಿಡ ಇದೆ. ಅದೊಂದನ್ನು ಯಾರು ತಂದು ನೆಟ್ಟರೋ, ಯಾವಾಗ ನೆಟ್ಟರೋ ಗೊತ್ತಿಲ್ಲ. ಇಷ್ಟೆಲ್ಲ ಇದ್ದ ಪಾರ್ಕ್‌ನ ಹೆಸರು ಏನೆಂದು ಕೇಳಿದರೆ ನನಗೆ ಗೊತ್ತಿಲ್ಲ. ಏಕೆಂದರೆ ಪಾರ್ಕ್‌ನ ದ್ವಾರದಗಲಿ, ಒಳಗಾಗಲಿ ಎಲ್ಲಿಯೂ ನಾಮ-ಲಕ ಇಲ್ಲ. ಒಂದು ಕಚೇರಿ, ಅದಕ್ಕೆ ಹೊಂದಿಕೊಂಡು ಒಂದು ಹಾಲ್ ಇದೆಯಾದರೂ ಕರೋನಾ ಮಹಾಮಾರಿಯ ನಂತರ ಅಲ್ಲಿಯೂ ಸಿಬ್ಬಂದಿಗಳು ಕಾಣುತ್ತಿಲ್ಲ.

ಒಂದಿಷ್ಟು ಕೆಲಸಗಾರರು ಬೆಳಗ್ಗೆ ಐದು ಗಂಟೆಗೆ ಬಂದು ಪಾರ್ಕ್ ಸ್ವಚ್ಛಗೊಳಿಸಿ, ಗಿಡಗಳಿಗೆ, ಹುಲ್ಲು ಹಾಸಿಗೆ ನೀರು ಹಾಯಿಸಿ, ಒಂದೆರಡು ಗಂಟೆಯಲ್ಲಿ ಹೊರಟು ಹೋಗುತ್ತಾರೆ. ನನಗೆ ಈ ಪಾರ್ಕ್ ಎಷ್ಟು ಆಪ್ತವಾಗಿದೆ ಎಂದರೆ, ಪ್ರತಿನಿತ್ಯ ಬೆಳಿಗ್ಗೆ ಎರಡು ಸುತ್ತು ನಡಿಗೆ ನಿತ್ಯೋಪಹಾರ. ಈಗಂತೂ ಆ ಸೆಳೆತವೇ ನನ್ನನ್ನು ಬೆಳಿಗ್ಗೆ ಬೇಗ ಎಬ್ಬಿಸುತ್ತಿದೆ. ಒಂದು ದಿನ ಯಾವುದೋ ಕಾರಣಕ್ಕೆ ಬೆಳಿಗ್ಗೆ ವಾಕಿಂಗ್ ಹೋಗಲು ಆಗಿರಲಿಲ್ಲ. ರಾತ್ರಿ ವಾತಾವರಣ ಹೇಗಿರುತ್ತದೆ ನೋಡೋಣವೆಂದು ಹೋಗಿದ್ದೆ.

ಅಂದು ಆಶ್ಚರ್ಯ ಎನಿಸುವಂತೆ ಒಂದು ಬಿಳಿ ಬಣ್ಣದ ಮೊಲ ಎದುರಾಯಿತು. ಸರಿಯಾಗೇ ಓದಿದ್ದೀರಿ, ಮೊಲ ಎದುರಾಯಿತು. ಮರುಭೂಮಿಯ ಮಧ್ಯೆ ಪಾರ್ಕ್ ಮಾಡುವುದೇ ದೊಡ್ದ ಸಾಹಸ, ಅದರಲ್ಲಿ ಮೊಲ ಬೇರೆ ಇದೆ ಎಂದರೆ ನಂಬಲಾಗಲಿಲ್ಲ. ಯಾರಾದರೂ ತಂದು ಬಿಟ್ಟಿರ ಬಹುದೇ? ಅಷ್ಟು ಚೆಂದದ ಮೊಲವನ್ನು ನೋಡಿದರೆ, ಯಾರಿಗೂ ವೈರಾಗ್ಯ ಬರಲು ಸಾಧ್ಯವೇ ಇಲ್ಲ.

ಒಂದು ವೇಳೆ ಮೊಲ ಸಾಕಾಣಿಕೆ ಸಾಕು ಎಂದಾದರೂ, ಬಹುತೇಕವಾಗಿ ಅದರ ಅಂತ್ಯ ಊಟದ ತಟ್ಟೆಯಲ್ಲಿ ಹೊರತು ಉದ್ಯಾನವನದಲ್ಲಲ್ಲ. ಅದೂ ಅಲ್ಲದೆ, ಬೇಡ ಎಂದರೆ ಹಣಕ್ಕೆ ಖರೀದಿಸುವ ಪೆಟ್ ಶಾಪ್‌ಗಳೂ ಇಲ್ಲಿವೆ. ಅಂದರೆ ಅದು ಯಾರೂ ಬಿಟ್ಟು ಹೋಗಿರಲು ಸಾಧ್ಯವಿಲ್ಲ. ಇನ್ನುಳಿದ ಸಾಧ್ಯತೆ ಎಂದರೆ, ಅಕ್ಕ ಪಕ್ಕದಲ್ಲಿರುವ, ಸಾಕಿದವರ ಮನೆಯಿಂದ ತಪ್ಪಿಸಿಕೊಂಡು ಬಂದಿರ ಬಹುದು. ಆ ಸಾಧ್ಯತೆಯೇ ಹೆಚ್ಚು. ಆದರೆ ತಪ್ಪಿಸಿಕೊಂಡ ಆ ಜೀವಿಗೆ ಹತ್ತಿರದಲ್ಲಿಯೇ ತಾನು ಬದುಕಬಲ್ಲ ಸ್ಥಳವೊಂದಿದೆ ಎಂದು ತಿಳಿದದ್ದಾದರೂ ಹೇಗೆ? ಅದಕ್ಕೆ ಮಾರ್ಗದರ್ಶನ ಮಾಡಿದವರು ಯಾರು? ಬಹುಶಃ ಅದೇ ಪ್ರಕೃತಿ ನಿಯಮ. ಏನೇ ಇರಲಿ, ಕಂಡ ಕ್ಷಣದಿಂದಲೇ ಅದು ಹೃದ್ಯವಾಯಿತು.

ಮಾರನೆಯ ದಿನ ವಾಕಿಂಗ್ ಹೋಗುವಾಗ ಒಂದು ಗಜ್ಜರಿ ಹಿಡಿದುಕೊಂಡು ಹೋದೆ. ತಿನ್ನದೆ ಎಷ್ಟು ದಿನವಾಗಿತ್ತೋ ಏನೋ, ನಿಮಿಷಾರ್ಧದಲ್ಲಿ ತಿಂದು ಮುಗಿಸಿತು. ಅಂದಿನಿಂದ ಪ್ರತಿ ರಾತ್ರಿ ಕ್ಯಾರೆಟ್ ವಾಕ್ ಆರಂಭವಾಯಿತು. ಎರಡು ವಾರ ಕಳೆದ ನಂತರ ಒಮ್ಮೆ ಬಿಳಿಯ ಮೊಲದೊಂದಿಗೆ ಬೂದು ಬಣ್ಣದ ಮೊಲ, ನಂತರ ಇನ್ನೊಂದು ಹೀಗೆ ಮೂರು ಮೊಲಗಳು ಕಾಣಿಸಿಕೊಂಡವು. ಆ ಮೂರೂ ಮೊಲದ ವಾಸ್ತವ್ಯ ಒಂದೇ ಪೊದೆಯಲ್ಲಿ. ಅಲ್ಲಿಗೆ ರಾತ್ರಿ ವಾಕ್‌ನ ಬಜೆಟ್ ಮೂರು ಗಜ್ಜರಿಗೆ ಏರಿತು.

ದಿನಗಳೆದಂತೆ ಹೇಗಾಯಿತೆಂದರೆ, ವಾಕ್ ಮಾಡಲು ಮನಸ್ಸಿಲ್ಲದಿದ್ದರೂ ಮೊಲಕ್ಕೆ ಗಜ್ಜರಿ ಕೊಡಲಾದರೂ ಹೋಗಬೇಕು ಎನ್ನುವಷ್ಟು ಬಾಂಧವ್ಯ ಬೆಳೆಯಿತು. ಹೀಗಿರುವಾಗ ಒಂದು ದಿನ ಐದು ಆರು ಪುಂಡು ಹುಡುಗರು ಅದನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಅವರನ್ನೇನೋ ಗದರಿಸಿ ಕಳಿಸಿದರೆ, ಮರುದಿನ ಯುವಕರ ತಂಡವೊಂದು ಸಿದ್ಧವಾಗಿ ಬಂದಿತ್ತು. ಅವರಲ್ಲಿ ವಾದಕ್ಕೇ ನಿಲ್ಲಬೇಕಾಯಿತು. ಈ ಬೇಸಿಗೆಯ ತಾಪದಿಂದ ಮೊಲವನ್ನು ಬಚಾವು ಮಾಡಲು ಬಂದಿದ್ದೇವೆ ಎಂದು ವಾದಮಾಡುತ್ತಿದ್ದ ಯುವಕರ ಕೈಯಲ್ಲಿ ದೊಡ್ಡ ದೊಡ್ಡ ಬಡಿಗೆಗಳಿದ್ದವು.

ಸ್ಥಳೀಯ ಯುವಕರೊಂದಿಗೆ ತಲೆ ಚಚ್ಚಿಕೊಳ್ಳುವುದು ಬೇಡ ಎಂದುಕೊಂಡು, ಭಾರವಾದ ಮನಸ್ಸಿನಿಂದಲೇ ಅಲ್ಲಿಂದ ಹೊರಟೆ. ಆದರೆ, ಮೂರೂ ಮೊಲಗಳ ಆಯುಷ್ಯ ಗಟ್ಟಿಯಾಗಿದೆ ಎಂದು ಮಾರನೆ ದಿನ ಸಾಬೀತಾಗಿತ್ತು. ಮನುಷ್ಯ ಕೊಲ್ಲುವ ವಿದ್ಯೆ ಕಲಿತರೆ ಪ್ರಾಣಿಗಳು ಬದುಕುವ ವಿದ್ಯೆಯನ್ನೂ ಕಲಿತಿವೆ! ಆ ವಿದ್ಯೆ ಅವನ್ನು ಇನ್ನೆಷ್ಟು ದಿನ ಬದುಕಿಸಬಲ್ಲದೋ ಗೊತ್ತಿಲ್ಲ!

ಬೇರೆ ಬೇರೆ ರೀತಿಯ ವ್ಯಕ್ತಿತ್ವ ನಮಗೆ ಕಾಣಸಿಗುವ ಸ್ಥಳಗಳಲ್ಲಿ ಪಾರ್ಕ್ ಕೂಡ ಒಂದು. ಆರೋಗ್ಯ ಸುಧಾರಿಸಿಕೊಳ್ಳಲು ಬರುವವರು, ಇದ್ದ ಆರೋಗ್ಯ ನಿಭಾಯಿಸಿಕೊಳ್ಳಲು ಬರುವವರು, ಬೇರೆಯವರ ಆರೋಗ್ಯ ಹಾಳು ಕೆಡವಲು ಬರುವವರು, ಎಲ್ಲರನ್ನೂ ಒಟ್ಟಿಗೇ ನೋಡಬಹುದಾದ ಸ್ಥಳ ಪಾರ್ಕ್. ಅಲ್ಲಿ ಒಂದಿಷ್ಟು ಜನ ಓಡುತ್ತಿರುತ್ತಾರೆ, ಒಂದಿಷ್ಟು ಜನ ಆಡುತ್ತಿರುತ್ತಾರೆ, ಒಂದಿಷ್ಟು ಮಂದಿ ಆಡುವ ನೆಪದಲ್ಲಿ, ವಿಹಾರದ ನೆಪದಲ್ಲಿ ತಮಗೆ ಅರಿವಿದ್ದೋ, ಇಲ್ಲದೆಯೋ ವಾತಾವರಣ ಹಾಳುಗೆಡರಲ್ಲಿ ನಿರತರಾಗಿರುತ್ತಾರೆ. ಈ ಪಾರ್ಕಿನಲ್ಲಿ ಸಾಯಂಕಾಲ ಫ್ರಿಸ್‌ಬೀ, ಕ್ರಿಕೆಟ, ಫುಟ್ ಬಾಲ್ ಆಡಲು, ಮನೆಯವರೊಂದಿಗೆ, ಮಕ್ಕಳೊಂದಿಗೆ ವಿಹಾರಕ್ಕೆ ಬರುವವರಿದ್ದಾರೆ. ಆ ಕುರಿತು ಯಾವ ತಕರಾರೂ ಇಲ್ಲ, ಪಾರ್ಕ್ ಇರುವುದೇ ಅದಕ್ಕೆ. ಆದರೆ ಯಾವುದೇ ಸ್ಥಳಕ್ಕೆ ಹೋದರೂ ಒಂದು ಶಿಷ್ಟಾಚಾರ ಎನ್ನುವುದು ಇರುತ್ತದೆ.

ಆಯಾ ಸ್ಥಳಕ್ಕೆ ಕೊಡಬೇಕಾದ ಮರ್ಯಾದೆಯನ್ನು ನಾವು ಕೊಡಲೇಬೇಕು. ಉದ್ಯಾನವನಕ್ಕೆ ಬಂದು ಊಟ ಉಪಹಾರ ಸೇವಿಸುವುದು ಸಾಮಾನ್ಯ. ಒಂದು ವರ್ಗದವರು ತಾವು ಬೀರಿದ ಎಲ್ಲಾ ಕಸವನ್ನೂ ಎತ್ತಿ ಕಸದಬುಟ್ಟಿಗೆ ಹಾಕಿ ಹೋಗುತ್ತಾರೆ, ಒಳ್ಳೆಯದು. ಇಲ್ಲಿ ಬರುವವರಲ್ಲಿ ಇನ್ನೊಂದು ವರ್ಗದವರಿರುತ್ತಾರೆ, ಪಾರ್ಕ್‌ಗೆ ಬಂದಾಗ ಇದ್ದಕ್ಕಿದ್ದಂತೆ ಅವರೊಳಗೆ ಹುದುಗಿದ್ದ ’ಪರೋಪಕಾ ರಾರ್ಥಂ ಇದಂ ಶರೀರಂ’ ಮಂತ್ರ ಜಾಗೃತಗೊಳ್ಳುತ್ತದೆ. ಅವರ ಔದಾರ್ಯ ತುಳುಕುವುದು ಇಲ್ಲಿ ಮಾತ್ರ.

ತಾವು ತಿಂದು ಬಿಟ್ಟ, ಕೆಳಗೆ ಬೀರಿದ ಆಹಾರವನ್ನು ಹಕ್ಕಿಗಳು ತಿಂದು ಬದುಕಲಿ ಎಂಬ ಉದಾರ ಮನಸ್ಸು ಅವರದ್ದು. ಇಂಥವರು ಬಿಟ್ಟು ಹೋಗದಿದ್ದರೆ ಬಹುಶಃ ಹಕ್ಕಿಗಳು ಬದುಕುತ್ತಲೇ ಇರಲಿಲ್ಲವೇನೋ? ಅದಿರಲಿ, ಹಕ್ಕಿಗಳು ಪ್ಲಾಸ್ಟಿಕ್, ಚೂಯಿಂಗ್‌ಗಮ್, ಕೋಳಿಯ ಕಾಲು, ಮೀನಿನ ಮೂಳೆಯನ್ನೂ ತಿನ್ನುತ್ತವೆಯೇ? ಅವರು ಕಲಿತದ್ದು ಹೆಚ್ಚಾಯಿತೇ? ಅಥವಾ ನಾವು ಕಲಿತದ್ದೇ ಕಡಿಮೆ ಆಯಿತೇ! ಅರ್ಥವಾಗುತ್ತಿಲ್ಲ. ‌

ಒಂದು ದಿನ ಈ ಪಾರ್ಕ್‌ನ ಹುಲ್ಲು ಹಾಸಿನಮೇಲೆ ಇಬ್ಬರು ಸುಮ್ಮನೆ ವಾಲಿಬಾಲ್ ಆಡುತ್ತಿದ್ದು ದನ್ನು ನೋಡಿದೆ. ಮಾರನೆ ದಿನ ನೆಟ್ ತಂದು ಎರಡು ಕರೆಂಟ್ ಕಂಬದ ನಡುವೆ ಬಿಗಿದು, ಕೋರ್ಟ್ ಅಳತೆಯಂತೆ ಗಡಿ ಗುರುತಿಸಲು ಹಗ್ಗ ಇಟ್ಟರು. ಸರಿಹೋಗಲಿಲ್ಲವೇನೋ, ಮಾರನೆ ದಿನ ಹಗ್ಗದ ಬದಲು ಸುಣ್ಣದಲ್ಲಿ ಮಾರ್ಕ್ ಮಾಡಿದರು. ಅದೂ ಸರಿಯಾಗದಿದ್ದಾಗ ಗುದ್ದಲಿ, ಪಿಕಾಸು ತಂದು ಹುಲ್ಲನ್ನು ಕೆತ್ತಿ, ಎರಡು ಕಂಬ ಹುಗಿದು ನೆಟ್ ಕಟ್ಟಿ ಆಡಲು ಆರಂಭಿಸಿದರು. ಅವರ ತಯಾರಿ ನೋಡಿ ಬಹುಶಃ ಅವರದ್ದು ದೊಡ್ಡ ತಂಡವೇ ಇರಬಹುದು ಎಂದು ಎಣಿಸಿದೆ.

ಊಹೆ ಸರಿಯಾಗಿತ್ತು, ಮಾರನೆಯ ದಿನ ತಂಡ ಬೆಳೆದು, ಆ ಇಬ್ಬರೊಂದಿಗೆ ಇಬ್ಬರು ಮಕ್ಕಳು ಬಂದಿದ್ದರು. ಈಗ ಒಂದೊಂದು ತಂಡದಲ್ಲಿ ಬರೊಬ್ಬರಿ ಇಬ್ಬರಿದ್ದಾರೆ, ಒಮ್ಮೆಯೂ ಬಾಲ್ ಹಿಂತಿರುಗಿ ಸರ್ವೀಸ್ ಮಾಡಿದ ಕೋರ್ಟಿಗೆ ಹೋದದ್ದು ಕಂಡಿಲ್ಲ. ಹೊಂಡ ಹೊಡೆದದ್ದೇ ಸಾಧನೆ! ಕೊನೆಯದಾಗಿ ಒಂದು ಬಾಬಾನ ಕತೆ ಹೇಳುತ್ತೇನೆ. ಬಾಬಾ ಎಂದರೆ ಸನ್ಯಾಸಿಯಲ್ಲ. ಅದು ಈ ಪ್ರದೇಶದಲ್ಲಿ ಹಿರಿಯರನ್ನು ಗೌರವದಿಂದ ಕರೆಯಲು ಬಳಸುವ ಪದ.

ಮುಂಜಾನೆಯ ಸೂರ್ಯ ಕಿರಣ ಸೇವಿಸಲು ಕಾರಿನಲ್ಲಿ ಬರುವ ಸುಮಾರು ಎಂಬತ್ತು ವರ್ಷದ ಬಾಬಾ, ಡಿಕ್ಕಿಯಿಂದ ಮಡಚಿಟ್ಟ ಕುರ್ಚಿ ಹೊರತೆಗೆದು ಬಿಡಿಸಿ, ಸೂರ್ಯಾಭಿಮುಖವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಾನೆ. ಅರ್ಧ ಗಂಟೆ ಕಳೆಯುತ್ತಿದ್ದಂತೆ ಅವನ ಮೊಮ್ಮಗ ಬರುತ್ತಾನೆ. ಪಾರ್ಕ್‌ನ ಒಳಗೆ ಬರಲು ಮೂರು ಪ್ರವೇಶ ದ್ವಾರಗಳಿದ್ದರೂ ಆತ ಕಬ್ಬಿಣದ ಬೇಲಿಯ ಮಧ್ಯೆ ನುಸುಳಿಯೇ ಬರುವುದು. ನೂರು ಕಿಲೋ ತೂಗುವ ಹದಿನಾರು ವರ್ಷದ ಮೊಮ್ಮಗ ತೂರಿಕೊಂಡು ಬರಲು ವ್ಯವಸ್ಥೆ ಮಾಡಿಕೊಟ್ಟವರು ಯಾರೋ ಗೊತ್ತಿಲ್ಲ. ವಿಶೇಷವೆಂದರೆ ಪಾರ್ಕ್‌ನ ಕಬ್ಬಿಣದ ಬೇಲಿಯ ಅಲ್ಲಲ್ಲಿ ಮೂರು ನಾಲ್ಕು ಕಡೆ ಈ ವ್ಯವಸ್ಥೆಯಿದೆ!

ಬರುವಾಗ ಮೊಮ್ಮಗನ ಕೈಯಲ್ಲಿ ಲೇಯ್ಸ್ ಕಂಪನಿಯ ಅತಿದೊಡ್ಡ ಚಿಪ್ಸ್ ಪ್ಯಾಕೆಟ, ಒಂದೆರಡು ಸ್ಯಾಂಡ್‌ವಿಚ್, ಒಂದಿಷ್ಟು ಚಾಕಲೇಟ್, ಎರಡೂವರೆ ಲೀಟರ್‌ನ ದೊಡ್ಡ ಪೆಪ್ಸಿ ಬಾಟಲ್ ಇರುತ್ತದೆ. ಅಜ್ಜ ಮೊಮ್ಮಗ ಕೂತು ಅರ್ಧ ಗಂಟೆಯಲ್ಲಿ ಅದನ್ನೆಲ್ಲ ಮುಗಿಸಿದ ನಂತರ ಮೊಮ್ಮಗ ಅಲ್ಲಿಂದ ಹೊರಡುತ್ತಾನೆ. ಮುಂದೇನು ಎಂದು ಕೇಳಬೇಡಿ, ಇನ್ನೊಂದು ಅರ್ಧ ಗಂಟೆ ಬಿಟ್ಟು ಬಾಬಾನೂ ಹೊರಡುತ್ತಾನೆ. ಚಾಕಲೇಟ್ ಕಾಗದ, ಖಾಲಿ ಚಿಪ್ಸ್ ಪ್ಯಾಕೆಟ್, ಖಾಲಿ ಪೆಪ್ಸಿ ಬಾಟಲ್, ಪ್ಲಾಸ್ಟಿಕ್ ಚೀಲಗಳೆಲ್ಲವೂ ಅ ಬಾಕಿ! ಹೇಳೋಣವೆಂದರೆ ದೇಶ, ಭಾಷೆ, ವಯಸ್ಸು ಎಲ್ಲವೂ ಅಡ್ಡ ಬರುತ್ತವೆ! ಸುಮ್ಮನೆ ತಲೆ ಕೊಡವಿಕೊಂಡು ಮುನ್ನಡೆಯಬೇಕು ಅಷ್ಟೇ. ಈ ಸಮಸ್ಯೆ ಇಲ್ಲಿ-ಅಲ್ಲಿ ಎಂದಲ್ಲ. ಬಹುತೇಕ ಎಲ್ಲಾ ಭಾಗದಲ್ಲೂ ಇದ್ದದ್ದೇ.

ನಿತ್ಯ ನಿರಂತರ ಪ್ರಕೃತಿಯ ಮೇಲೆ ದೌರ್ಜನ್ಯಎಸಗುವವರ ನಡುವೆ ಕೆಲವರು ಬದಲಿ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗುತ್ತಾರೆ. ಪ್ರಕೃತಿಗೆ ಪರ್ಯಾಯವಾಗಿ ನಿರ್ಮಿಸಿದ ಕೃತಕ, ಉಚಿತ ಸೌಲಭ್ಯದ ಜವಾಬ್ದಾರಿಯನ್ನೂ ಬೇರೆಯವರೇ ಹೊರಬೇಕು ಎಂದರೆ... ಅಷ್ಟಕ್ಕೂ ನಾವು ಪಾರ್ಕ್ ನಲ್ಲಿ ಎರಡು ಗಂಟೆ ಕುಳಿತು ತಿಂದು, ಉಳಿದ ಕಸ ಎತ್ತಿ ಪಕ್ಕದಲ್ಲಿರುವ ಕಸದಬುಟ್ಟಿಗೆ ಹಾಕಲು ಎಷ್ಟು ಸಮಯ ಬೇಕಾಗುತ್ತದೇ? ಹಾಗಾದರೆ ತಿಂದ ಜಾಗವನ್ನು ಸ್ವಚ್ಛ ಮಾಡಿ, ಮುಂದೆ ಬರುವವ ರಿಗೆ ಅನುಕೂಲವಾಗುವಂತೆ ಇಡುವುದಕ್ಕೆ ಸಮಸ್ಯೆ ಏನು? ಸುಸ್ತು? ಶಕ್ತಿಹೀನತೆ? ಆಲಸ್ಯ? ಅಸಡ್ಡೆ? ಅಥವಾ ನಮ್ಮೊಳಗಿರುವ ಅಹಂಕಾರ? ಇದೇ ಅಹಂಕಾರವನ್ನು ಗಿಡ-ಮರಗಳೂ, ಪಕ್ಷಿಗಳೂ ತೋರಿಸುವಂತಿದ್ದರೆ ಏನಾಗುತ್ತಿತ್ತು...!

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author