ಕಾಡುದಾರಿ
ಹಿಮಾಚಲ ಪ್ರದೇಶದ ಚಂದ್ರನಹಾನ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದೆವು. ಅದು ಅಕ್ಟೋಬರ್‌ನ ಆರಂಭದ ದಿನಗಳು. ಹಿಮವೆಲ್ಲ ಕರಗಿ, ‘ಬುಗ್ಯಾಲ್’ ಎಂದು ಕರೆಯಲಾಗುವ ಹುಲ್ಲುಗಾವಲುಗಳೆಲ್ಲ ಹಸಿರು ಹಳದಿ ಹುಲ್ಲಿನಿಂದ ಹೊಳೆಯುತ್ತಿದ್ದವು. ಹಿಮವಿಲ್ಲದ ದಿನಗಳಾದುದರಿಂದ ಹಿಮದ ಟ್ರೆಕ್ಕಿಂಗ್‌ನ ತಯಾರಿ ನಮ್ಮಲ್ಲಿರಲಿಲ್ಲ. ಆದರೆ ಚಾರಣದ ಕೊನೆಯ ದಿನ, ಮುಂಜಾನೆಯ ಹೊತ್ತಿಗೆ ಇದ್ದಕ್ಕಿದ್ದಂತೆ ರಪರಪ ಎಂದು ಹಿಮದ ಮಳೆ ಸುರಿಯತೊಡಗಿತು.
ಟೆಂಟ್ ಓಪನ್ ಮಾಡಿ ಹೊರಬರಲಾಗದಂತೆ ಹಿಮ ಅವುಚಿಕೊಂಡಿತು. ನೋಟವೇನೋ ಮನೋಹರವಾಗಿತ್ತು. ಆದರೆ ವಸತಿ ಹೂಡಿದ್ದ ಹಳ್ಳಿಗೆ ಹಿಂದಿರುಗಲಿನ್ನೂ ಅರ್ಧ ದಾರಿಯಿತ್ತು. ನಾವು ಧರಿಸಿದ್ದ ಸಾಮಾನ್ಯ ಬೂಟುಗಳು ಹಿಮದಲ್ಲಿ ಸರ್ರನೆ ಜಾರುತ್ತಿದ್ದವು. ತಂಡದಲ್ಲಿದ್ದ ಕೆಲವರಿಗೆ ವಾತಾವರಣದಲ್ಲಿ ಆಕ್ಸಿಜನ್ ಇಳಿದ ಕಾರಣ ಉಸಿರು ಕಟ್ಟತೊಡಗಿತು. ಜೊತೆಗಿದ್ದ ಪಹಾಡಿ ಹುಡುಗರು ಅಕ್ಷರಶಃ ನಮ್ಮನ್ನು ಹೊತ್ತುಕೊಂಡಂತೆಯೇ ಬೆಟ್ಟದಿಂದ ಇಳಿಸಿದರು.
ಇನ್ನೊಂದು ಚಾರಣ. ಐದಾರು ದಿನಗಳ ಟ್ರೆಕ್ಕಿಂಗ್ ಮುಗಿಸಿ ಬಂದು ಹಳ್ಳಿಯಲ್ಲಿ ಉಳಿದುಕೊಂಡ ಗೆಸ್ಟ್ ಹೌಸ್‌ನಲ್ಲಿ ಬಿಸಿನೀರು ಸ್ನಾನಕ್ಕಿಳಿದೆವು. ಆರು ದಿನಗಳ ಸ್ನಾನ ಬಾಕಿಯಿತ್ತಲ್ಲ, ಮನಸೋ ಇಚ್ಛೆ ಮಿಂದೆವು. ನಮ್ಮ ಅಂದಾಜು, ನದಿಯ ಪಕ್ಕದಲ್ಲೇ ಇದ್ದ ಆ ಊರಿನಲ್ಲಿ ನೀರಿನ ಕೊರತೆ ಇರಲಿಕ್ಕಿಲ್ಲ ಎಂಬುದು. ಆದರೆ ಅಂದು ದೊಡ್ಡ ಕಲ್ಲೊಂದು ಕುಸಿದುಬಿದ್ದು ನೀರಿನ ಪೈಪ್‌ಲೈನ್ ಕತ್ತರಿಸಿ ಹೋಗಿತ್ತು. ಆ ಮನೆಯವರು ದೂರದಿಂದ ನೀರು ಹೊತ್ತುಕೊಂಡು ಬಂದು ನಾವಷ್ಟೂ ಮಂದಿಗೆ ಬಿಸಿನೀರು ಮಾಡಿಕೊಟ್ಟಿದ್ದರು. ಅತಿಥಿಗಳು ನೀಡುವ ಕಾಸು ಅವರ ಬದುಕಿನ ಆಧಾರ.
ಇದನ್ನೂ ಓದಿ: Harish Kera Column: ಎಐ ಕಂಪನಿಗಳ ಪುಸ್ತಕ ದ್ರೋಹ !
ಮೇಲಿನ ದೃಷ್ಟಾಂತಗಳನ್ನು ಹೇಳಿದ್ದು, ಹಿಮಾಲಯದಲ್ಲಿ ಒಂದೊಂದು ಕ್ಷಣವೂ ಹೇಗೆ ಅನಿರೀಕ್ಷಿತ ವಾಗಿರುತ್ತದೆ, ಅಲ್ಲಿನ ನಿವಾಸಿಗಳ ಬದುಕು ಎಷ್ಟು ಕಷ್ಟ ಎಂಬುದನ್ನು ತಿಳಿಸಲು. ಅವರು ರಮ್ಯ ಮನೋಹರವಾದ ಪ್ರಕೃತಿಯ ನಡುವೆ ಇದ್ದಾರೆ, ಅದೊಂದು ಸ್ವರ್ಗ ಎಂದು ನಾವು ಭಾವಿಸುತ್ತೇವೆ. ಒಂದು ಹಿಮನದಿ ಮಗುಚಿಕೊಂಡರೆ, ಒಂದು ಸಣ್ಣ ಭೂಕಂಪ ಆದರೆ ಹತ್ತು ಸೆಕೆಂಡ್‌ನಲ್ಲಿ ಅವರ ಬದುಕು ಖಲ್ಲಾಸ್ ಆಗುತ್ತದೆ. ನೇಪಾಳದಲ್ಲಿ ಸಂಭವಿಸಿದ ರಾಕ್ಷಸ ಪ್ರವಾಹದ ಒಂದೊಂದು ವಿಡಿಯೋ ನೋಡುತ್ತಿದ್ದರೆ, ಒಂದೊಂದು ಸುದ್ದಿ ಓದುತ್ತಿದ್ದರೆ ಈ ಬೆಟ್ಟವಾಸಿಗಳ ಬದುಕಿನ ಚಿತ್ರಿಕೆಗಳೇ ಕಣ್ಣಿಗೆ ಕಟ್ಟುತ್ತವೆ.
ನೀವು ಒಂದು ವೈರಲ್ ವಿಡಿಯೋ ನೋಡಿರುತ್ತೀರಿ. ತ್ರಿಶಾಲಿಯ ದುಂಗೇ ಬಜಾರ್ ಬಳಿಯ ಅಬ್ಬರಿಸುತ್ತಿರುವ ನದಿಯ ಅಲೆಗಳ ನಡುವೆ ಒಂಟಿಯಾಗಿ ಗಟ್ಟಿ ನಿಂತ ಹಸಿರು ಬಣ್ಣದ ಮನೆ ಮತ್ತು ಅದರ ಮಾಳಿಗೆಯಲ್ಲಿ ಆತಂಕಿತರಾಗಿ ನಿಂತಿರುವ ನಿವಾಸಿಗಳು. ಪ್ರವಾಹದಿಂದ ಬರ್ಬಾದ್ ಆದ ನೆಲದಲ್ಲಿ ಓಡಾಡುತ್ತಿರುವ ಪತ್ರಕರ್ತೆ ಬರ್ಖಾ ದತ್ ಈ ಮನೆಯ ಯಜಮಾನ/ನಿಯನ್ನು ಮಾತಾಡಿಸಿ ‘ನಿಮ್ಮ ಮನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತಲ್ಲ ಏನನ್ಸುತ್ತೆ?’ ಅಂತ ಕೇಳುತ್ತಿದ್ದರು.
‘ಹೌದು ವೈರಲ್ ಆಯ್ತು. ಆದ್ರೆ ನಮ್ಮದೆಲ್ಲಾ ಬಳಿದುಕೊಂಡು ಹೋಗಿದೆ, ಮೈಮೇಲಿರೋ ಬಟ್ಟೆ ಮಾತ್ರ ಈಗಿರೋದು’ ಎಂದು ಆಕೆ ಹೇಳುತ್ತಿದ್ದರು. ಬರ್ಖಾಳಂಥ ಬರ್ಖಾಗೂ ಇಂಥ ಸೆನ್ಸಿಟಿವ್ ಸಮಯದಲ್ಲಿ ಅವರನ್ನು ಹೇಗೆ ಮಾತಾಡಿಸಬೇಕು ಎಂಬ ಪರಿಜ್ಞಾನ ಇಲ್ಲವಾಯ್ತೇ ಎಂಬ ಸಂದೇಹ ಬರುವಂತಾಯ್ತು. ಅವರ ಬದುಕಿನ ಸರ್ವಸ್ವವೂ ಕೊಚ್ಚಿಕೊಂಡು ಹೋಗಿದೆ. ಅಕ್ಕಪಕ್ಕದ ಮನೆಗಳೂ ಅಂಗಡಿಗಳೂ ಮಟಾಶ್ ಆಗಿವೆ. ಆ ಮನೆಯಾತನ ತಮ್ಮನ ಅಂಗಡಿ, ಮನೆಗಳೆಲ್ಲಾ ನೀರಲ್ಲಿ ಹೋಗಿದೆ.
ಹತ್ತಾರು ಮಂದಿಗೆ ಕೆಲಸ ಕೊಟ್ಟವರೂ ಖಾಲಿ ಕೈಯಲ್ಲಿ ನಿಂತಿದ್ದಾರೆ. ತ್ರಿಶೂಲಿ ಮಾರುಕಟ್ಟೆಯಲ್ಲಿ ಎರಡು ದಶಕಗಳಿಂದ ಬಟ್ಟೆ ವ್ಯಾಪಾರ ನಡೆಸುತ್ತಿದ್ದ ಅಶೋಕ್ ಕುಮಾರ್ ಚೌರಾಸಿಯಾ ಭೀಕರ ಪ್ರವಾಹದಲ್ಲಿ ಮನೆ, ಅಂಗಡಿ, ಗೋದಾಮು ಕಳೆದುಕೊಂಡಿದ್ದಾರೆ. ಅವರಿಗಾದ ನಷ್ಟ ಸುಮಾರು 4.5 ಕೋಟಿ ರೂಪಾಯಿ. ಪ್ರವಾಹದಲ್ಲಿ ಅವರ ಅತ್ತಿಗೆ, ಸೋದರಳಿಯ ಪ್ರಾಣ ಕಳೆದುಕೊಂಡಿದ್ದಾರೆ. ವರ್ಷಗಳ ಪರಿಶ್ರಮದಿಂದ ಕಟ್ಟಿಕೊಂಡಿದ್ದ ಬದುಕು ಕಣ್ಣೆದುರೇ ಕೊಚ್ಚಿಹೋಗಿದೆ. ಸದ್ಯ ಬೇರೆಯ ವರು ನೀಡಿದ ಬಟ್ಟೆ ಧರಿಸಿಕೊಂಡು ಉಳಿದಿದ್ದಾರೆ.
ರಸುವಾ ಜಿಲ್ಲೆಯ ಗೋವಿಂದ ಪ್ರಸಾದ್ ದಹಲ್ ಎಂಬವರದೂ ಇದೇ ಕತೆ. ಅವರು ಕಳೆದು ಕೊಂಡದ್ದು 6.3 ಕೋಟಿ ರೂಪಾಯಿ ಆಸ್ತಿ. ಒಂದು ಜೊತೆ ಚಪ್ಪಲಿ ಮಾತ್ರ ಉಳಿದುಕೊಂಡಿದೆ. ಇಂಥ ನೂರಾರು ಮಂದಿ, ಇದೀಗ ಶೂನ್ಯದಿಂದ ಜೀವನ ಮರಳಿ ಆರಂಭಿಸಬೇಕಿದೆ.
ನೇಪಾಳದ ಈ ಬೆಟ್ಟಗಳ ಮಗ್ಗುಲುಗಳಲ್ಲಿ, ನದಿ ಪಾತ್ರಗಳಲ್ಲಿ ನೂರಾರು ಜಲವಿದ್ಯುತ್ ಘಟಕಗಳು ಕಾರ್ಯಾಚರಿಸುತ್ತವೆ. ಅವುಗಳಲ್ಲಿ ಸಾವಿರಾರು ಸಿಬ್ಬಂದಿಯೂ ಇದ್ದಾರೆ. ಈ ರಕ್ಕಸ ಪ್ರವಾಹಕ್ಕೆ ಹತ್ತಾರು ವಿದ್ಯುತ್ ಯೋಜನೆ ಘಟಕಗಳು ಸರ್ವನಾಶವಾಗಿವೆ. ಇವುಗಳಿಗೆ ಸಂಬಂಽಸಿದ ಪೈಪ್‌ಲೈನ್ ಸುರಂಗಗಳಲ್ಲಿ ಇನ್ನೂ ನೂರಾರು ಮಂದಿ ಸಿಬ್ಬಂದಿ ಬದುಕಿರಬಹುದು ಎಂಬ ಅಂದಾಜು ಇದೆ. ಆದರೆ ದಿನಕಳೆದಂತೆ ಅವರು ಬದುಕಿರುವ ಸಾಧ್ಯತೆಯೂ ಕ್ಷೀಣಿಸುತ್ತಿದೆ.
ಒಟ್ಟಾರೆ ಪ್ರವಾಹದಲ್ಲಿ ಸತ್ತವರ, ಕಣ್ಮರೆಯಾದವರ ಸಂಖ್ಯೆ ಅಸ್ಪಷ್ಟ. ಸುಮಾರು 4000 ಮಂದಿಗಾಗಿ ಹುಡುಕಾಟ ನಡೆದಿದೆ. ಭರವಸೆ ಇಟ್ಟುಕೊಂಡವರು ಹುಡುಕುತ್ತಿದ್ದಾರೆ. ನೂರಾರು ಕುಟುಂಬಗಳೇ ಅಳಿದಿವೆ. ಅದರಲ್ಲೂ ಉಳಿದವರು, ಸಾವಿಗೀಡಾಗಿರಬಹುದಾದ ತಮ್ಮ ಬಂಧುಗಳಿಗೆ ಕಟ್ಮಂಡುವಿನ ಪಶುಪತಿನಾಥ ದೇವಾಲಯದ ಆವರಣಕ್ಕೆ ಬಂದು ಸಾಂಕೇತಿಕ ಉತ್ತರಕ್ರಿಯೆ ನಡೆಸುತ್ತಿದ್ದಾರೆ. ಅವರು ನೂರಾರು ಅಡಿ ಭೂಗರ್ಭದಲ್ಲಿ ಮಲಗಿರಬಹುದು, ಅಥವಾ ಪ್ರವಾಹದಲ್ಲಿ ಕೊಚ್ಚಿ ಹೋಗಿ ಭಾರತ ದಲ್ಲೆಲ್ಲೋ ದಡ ಹತ್ತಿರಬಹುದು. ಕಾಲ ಆ ಕರುಣಾಜನಕ ಕತೆಗಳ ಸ್ಕ್ರೀನ್‌ಪ್ಲೇ ಸಿದ್ಧಪಡಿಸು ತ್ತಿದೆ.
ವಿಶಿಷ್ಟ, ವಿಲಕ್ಷಣ, ಹೀರೋಗಿರಿಯ, ಕ್ಷುದ್ರತೆಯ ಕತೆಗಳೂ ಇಂಥ ಭೀಕರ ಸನ್ನಿವೇಶಗಳಲ್ಲಿ ಅನಾವರಣ ಗೊಳ್ಳುತ್ತವೆ. ಅದು ಮನುಷ್ಯ ಸ್ವಭಾವಕ್ಕೆ ಹೊಸತಲ್ಲ. ಪ್ರಯಾಣದ ದಾರಿಯಲ್ಲಿ ಚಹಾ ಕುಡಿಯಲು ಕೆಲ ನಿಮಿಷ ನಿಂತ ಛತ್ತೀಸ್‌ಗಢದ ಐವರು ಸ್ನೇಹಿತರು, ಹತ್ತು ನಿಮಿಷ ಮೊದಲ ಹೊರಟಿದ್ದರೆ, ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಸೇತುವೆಯ ಮೇಲಿರುತ್ತಿದ್ದರು. ಒಂದು ಕಪ್ ಚಹಾ ಐದು ಜನರ ಜೀವ ಉಳಿಸಿತು.
ಒಂದು ದಿನದ ಮೊದಲೇ ವೀಸಾ ಸಿಕ್ಕಿದರೆ ಆಂಧ್ರದ 80 ಕೈಲಾಸ ಮಾನಸ ಯಾತ್ರಾರ್ಥಿಗಳು ಪ್ರವಾಹದ ದಾರಿಯಲ್ಲಿರುತ್ತಿದ್ದರು. ಸಿಗದ ವೀಸಾ ಅವರ ಜೀವ ಉಳಿಸಿತು. ತ್ರಿಶೂಲಿಯ ತ್ರಿಭುವನ್ ಸ್ಕೂಲಿನ ಹೆಡ್‌ಮಾಸ್ಟರ್ ರಾಜೇಂದ್ರ ದಾವಡಿ, ಪ್ರವಾಹದ ಸಂದೇಶ ಬಂದ ಕೂಡಲೇ ಮಕ್ಕಳನ್ನು ಎತ್ತರಕ್ಕೆ ಒಯ್ದು 1600 ವಿದ್ಯಾರ್ಥಿಗಳ ಜೀವ ಉಳಿಸುತ್ತಾರೆ. ರಸುವಾ, ಧಡಿಂಗ್, ಚಿತ್ವಾನ್ ಮೊದಲಾದ ಕಡೆ 20ಕ್ಕೂ ಹೆಚ್ಚು ಬ್ಯಾಂಕ್‌ಗಳಿದ್ದವು. ಅಲ್ಲಿನ ವಾಲ್ಟ್‌ಗಳಲ್ಲಿ ಸಾಕಷ್ಟು ನಗದೂ, ಚಿನ್ನವೂ ಇತ್ತು. ಅದೆಲ್ಲವೂ ಕೊಚ್ಚಿಕೊಂಡು ಹೋಗಿವೆ. ಒಂದೆಡೆ ಅದನ್ನು ಟ್ರೇಸ್ ಮಾಡಲು ಸಾಹಸ ನಡೆಯುತ್ತಿದ್ದರೆ, ನದಿಯ ಕೆಳಗೆಲ್ಲೋ ಅದನ್ನು ಕಂಡವರು ವಾಲ್ಟ್ ಒಡೆದು ಒಳಗಿದ್ದು ದನ್ನು ದೋಚಿಕೊಂಡು ಹೋಗಿದ್ದಾರೆ. ಮಹಿಳೆಯರ ದೇಹಗಳಿಂದ ಚಿನ್ನದೋಲೆ ಕದ್ದವರಿದ್ದಾರೆ.
‘ರಕ್ಷಣಾ ಕಾರ್ಯಾಚರಣೆಗೆ ನಿಮ್ಮ ಸಹಾಯ ಬೇಕಿಲ್ಲ’ ಎಂದು ನೇಪಾಳ ಹೇಳಿದೆ. ಅವರು ಗಟ್ಟಿಗರು, ಪರ್ವತವಾಸಿಗಳು. ಜಗದೆಲ್ಲೆಡೆಯ ಟ್ರೆಕ್ಕರ್‌ಗಳನ್ನು ಎವರೆಸ್ಟ್ ಪರ್ವತಕ್ಕೆ ಹತ್ತಿಸುವವರೇ ಅವರು. ಅದು ತೇನ್‌ಸಿಂಗ್ ನೋರ್ಕೆಯ ನೆಲ. ಬೆಟ್ಟದಲ್ಲಿ ಬದುಕುವುದೂ ಸಾಯುವುದೂ ಅವರಿಗೆ ಹೊಸದಲ್ಲ. ಆದರೆ ‘ಇದಕ್ಕೆ ಚೀನಾ, ಭಾರತ, ಅಮೆರಿಕ ನಷ್ಟ ಪರಿಹಾರ ಕೊಡಬೇಕು’ ಎಂಬ ಮಾತು ಅವರಿಂದ ಬಂತು. ಅದು ನೂರಕ್ಕೆ ನೂರು ಸರಿ.
ಇಷ್ಟೊಂದು ಸರ್ವನಾಶ ಅನುಭವಿಸಿದರಲ್ಲ, ಇವರೆಲ್ಲ ಮಾಡಿದ ತಪ್ಪಾದರೂ ಏನು?
ಏನೂ ಇಲ್ಲ. ಹಾಗೆ ನೋಡಿದರೆ, ನೇಪಾಳಿಗರ ಬದುಕು ನಮ್ಮಷ್ಟು ಧಾವಂತದ್ದಲ್ಲ. ನೇಪಾಳವೆಂದೇನು, ಬೆಟ್ಟಗಾಡುಗಳಲ್ಲಿ ಬದುಕುವ ನಮ್ಮ ಹಿಮಾಚಲ ಪ್ರದೇಶ, ಉತ್ತರಾಖಂಡ, ಲೇಹ್ ಲಡಾಖ್ ನಿವಾಸಿಗಳ ಬದುಕು ಕೂಡ ಸ್ಲೋ ಮೋಷನ್‌ನದು. ಅವರು ನಮ್ಮಷ್ಟು ಹೊಗೆ ಉಗುಳುವುದಿಲ್ಲ. ನಮ್ಮಷ್ಟು ಕಸ ಸೃಷ್ಟಿಸುವುದಿಲ್ಲ. ನಮ್ಮ ಹಾಗೆ ಬೋರ್‌ವೆಲ್ ಕೊರೆದು ಅಂತರ್ಜಲ ದೋಚಿಲ್ಲ. ನಾವೂ ಮೋಜು ಮಾಡಲು ಅಲ್ಲಿಗೆ ಹೋದರೆ, ಅವರು ಬದುಕಿಗೆ ದಾರಿ ಹುಡುಕಿಕೊಂಡು ಬೆಂಗಳೂರಿಗೆ ಬಂದು ಗಿಗ್ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಮತ್ಯಾಕೀ ಶಿಕ್ಷೆ ಅವರಿಗೆ?
‘ಎವರೆಸ್ಟ್ ಟುಡೇ’ ಎಂಬ ಎಕ್ಸ್ ಅಕೌಂಟ್‌ನಲ್ಲಿ ನೇಪಾಳಿಗರೊಬ್ಬರು ಬರೆದುಕೊಂಡದ್ದರ ಭಾವಾನು ವಾದ ಇಲ್ಲಿ ಕೊಡುತ್ತಿದ್ದೇನೆ. ನಾವೆಲ್ಲ ಅದನ್ನು ಓದಿದರೆ, ಈ ಪ್ರವಾಹವನ್ನು ನೋಡುವ ರೀತಿ ಸ್ವಲ್ಪವಾದರೂ ಬದಲಾಗಬಹುದು ಅನಿಸುತ್ತದೆ.
‘ನಾನು ಈ ಮಾತುಗಳನ್ನು ಹಿಮಾಲಯದ ಮಡಿಲಿನಿಂದ ಬರೆಯುತ್ತಿದ್ದೇನೆ. ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಕೇವಲ ಶೇ. 0.1ರಷ್ಟು ಪಾಲು ಹೊಂದಿರುವ ಒಂದು ದೇಶದಿಂದ ನಾನು ಮಾತನಾಡುತ್ತಿದ್ದೇನೆ. ನಮ್ಮ ದೇಶದ ಸುಮಾರು ಶೇ. 46ರಷ್ಟು ಭೂಭಾಗ ಅರಣ್ಯದಿಂದ ಆವೃತವಾಗಿದೆ. ನಮ್ಮ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸುಮಾರು ಶೇ. 94ರಷ್ಟು ಜಲವಿದ್ಯುತ್ ನಿಂದ ಬರುತ್ತದೆ.
ಪಳೆಯುಳಿಕೆ ಇಂಧನ ಬಳಸುವ ವಾಹನಗಳಿಂದಲೂ ನಾವು ವೇಗವಾಗಿ ದೂರವಾಗುತ್ತಿದ್ದೇವೆ. 2025-26ರಲ್ಲಿ ನೇಪಾಳಕ್ಕೆ ಆಮದುಗೊಂಡ ನಾಲ್ಕು ಚಕ್ರದ ಪ್ರಯಾಣಿಕ ವಾಹನಗಳಲ್ಲಿ ಸುಮಾರು ಶೇ. 74ರಷ್ಟು ವಿದ್ಯುತ್ ವಾಹನಗಳಾಗಿದ್ದವು. ನಾವು ಕಾಡುಗಳನ್ನು ರಕ್ಷಿಸುತ್ತೇವೆ. ನಮ್ಮ ನದಿಗಳಿಂದ ವಿದ್ಯುತ್ ಉತ್ಪಾದಿಸುತ್ತೇವೆ. ಜಗತ್ತಿನ ಕೆಲವೇ ದೇಶಗಳು ಸಾಧಿಸಿರುವ ವೇಗದಲ್ಲಿ ನಾವು ವಿದ್ಯುತ್ ಚಾಲಿತ ಸಂಚಾರವನ್ನು ಅಳವಡಿಸಿಕೊಳ್ಳುತ್ತಿದ್ದೇವೆ.
ಆದರೆ ಇಂದು ನಮ್ಮ ಜನ ಕೆಸರಿನ ರಾಶಿಯೊಳಗೆ ತಮ್ಮವರನ್ನು ಹುಡುಕುತ್ತಿದ್ದಾರೆ. ನದಿಗಳಲ್ಲಿ ಕೊಚ್ಚಿಹೋದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾಣೆಯಾಗಿರುವ ತಮ್ಮ ಪ್ರೀತಿಪಾತ್ರರ ಹೆಸರು ಯಾವಾಗ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ದೂರವಾಣಿಗಳ ಪಕ್ಕದ ಕಾದು ಕುಳಿತಿದ್ದಾರೆ.
ಭೋಟೆ ಕೋಶಿ ನದಿಯ ಪ್ರವಾಹ, ವೇಗವಾಗಿ ಬದಲಾಗುತ್ತಿರುವ ಹಿಮಾಲಯದ ಹಿಮಪ್ರಪಂಚದ ಕೆಳಗೆ ಬದುಕುವುದು ಎಂದರೇನು ಎಂಬುದನ್ನು ನಮಗೆ ತೋರಿಸಿದೆ. ನಮ್ಮ ಹಿಮನದಿಗಳು ಹಿಂದೆ ಸರಿಯುತ್ತಿವೆ. ಹಿಮದಿಂದ ಆವೃತವಾಗಿದ್ದ ಪರ್ವತಗಳು ದಿನದಿಂದ ದಿನಕ್ಕೆ ಹೆಚ್ಚು ಅಸ್ಥಿರವಾಗುತ್ತಿವೆ. ನಮಗೆ ಶುದ್ಧ ವಿದ್ಯುತ್ ನೀಡುವ ಇದೇ ನದಿಗಳು, ಕೆಲವೊಮ್ಮೆ ಕೆಳಗಿನ ಹಳ್ಳಿಗಳಿಗೂ ಸಮುದಾಯಗಳಿಗೂ ವಿನಾಶವನ್ನು ಹೊತ್ತು ತರುವ ಶಕ್ತಿಯನ್ನೂ ಹೊಂದಿವೆ.
ಪೀಳಿಗೆಗಳ ಕಾಲ ಕಲ್ಲಿದ್ದಲು ಮತ್ತು ತೈಲವನ್ನು ಸುಟ್ಟು ನಾವು ನಮ್ಮ ಸಮೃದ್ಧಿಯನ್ನು ಕಟ್ಟಿಕೊಂಡಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಹವಾಮಾನ ಬಿಕ್ಕಟ್ಟನ್ನು ಸೃಷ್ಟಿಸುವಲ್ಲಿ ನಮ್ಮ ಕೊಡುಗೆ ಬಹುತೇಕ ಶೂನ್ಯ. ಆದರೂ ಅದರ ಪರಿಣಾಮಗಳನ್ನು ಅನುಭವಿಸಿ ಬದುಕುಳಿಯುವ ಹೊರೆ ನಮ್ಮ ಮೇಲಿದೆ.
ಇಂದು ನದಿಗಳಿಂದ ಹೊರತೆಗೆಯಲಾಗುತ್ತಿರುವ ಮೃತದೇಹಗಳ ಸಂಬಂಧಿಕರು ಈ ಬಿಕ್ಕಟ್ಟನ್ನು ಸೃಷ್ಟಿಸಿದವರಲ್ಲ. ಇನ್ನೂ ಸಾವಿರಾರು ಕಾಣೆಯಾದವರಿಗಾಗಿ ಕಾಯುತ್ತಿರುವ ಕುಟುಂಬಗಳು ಈ ಬಿಕ್ಕಟ್ಟಿಗೆ ಕಾರಣರಲ್ಲ. ತಮ್ಮೆಲ್ಲವನ್ನೂ ಕಳೆದುಕೊಂಡ ಮಕ್ಕಳು, ರೈತರು, ಕಾರ್ಮಿಕರು ಮತ್ತು ಪರ್ವತ ಪ್ರದೇಶದ ಸಮುದಾಯಗಳು ಈ ಹವಾಮಾನ ದುರಂತವನ್ನು ಸೃಷ್ಟಿಸಿದವರಲ್ಲ.
ಹಿಮಾಲಯದ ಮಡಿಲಿನಿಂದ ನಾವು ಕೈಗಾರಿಕೀಕೃತ ಜಗತ್ತನ್ನು ಕೇಳುವ ಪ್ರಶ್ನೆಗಳಿವು- ಇನ್ನೆಷ್ಟು ಹಿಮಾಲಯದ ಜೀವಗಳು ಬಲಿಯಾದರೆ ನಿಮಗೆ ಸಾಕು? ಮತ್ತೆಂದೂ ಮರಳಿ ಬಾರದ ತಮ್ಮ ಮಕ್ಕಳಿಗಾಗಿ ಇನ್ನೆಷ್ಟು ತಾಯಂದಿರು ಕಾಯಬೇಕು? ಇನ್ನೆಷ್ಟು ಹಳ್ಳಿಗಳು ಭೂಪಟದಿಂದ ಅಳಿದುಹೋಗಬೇಕು? ಆಗಲಾದರೂ, ಹವಾಮಾನ ನ್ಯಾಯ ಎನ್ನುವುದು ಮತ್ತೊಂದು ಅಂತಾರಾಷ್ಟ್ರೀಯ ಸಮ್ಮೇಳನದ ಭಾಷಣವಾಗದೆ, ಕ್ರಿಯೆಗಿಳಿಯಬಹುದೇ?
ಮೃತದೇಹಗಳ ಎಣಿಕೆ ಮುಗಿದ ನಂತರ ಕೇವಲ ಸಹಾನುಭೂತಿಯ ಮಾತುಗಳೊಂದಿಗೆ ನಮ್ಮ ಬಳಿಗೆ ಬರಬೇಡಿ. ಜವಾಬ್ದಾರಿಯೊಂದಿಗೆ ಬನ್ನಿ. ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಅಗತ್ಯವಾದ ನೆರವಿನೊಂದಿಗೆ ಬನ್ನಿ. ನಷ್ಟ ಮತ್ತು ಹಾನಿಗೆ ಪರಿಹಾರ ನೀಡುವ ವ್ಯವಸ್ಥೆಯೊಂದಿಗೆ ಬನ್ನಿ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಧೈರ್ಯದೊಂದಿಗೆ ಬನ್ನಿ.ನಮಗೆ ಹವಾಮಾನ ನ್ಯಾಯ ಬೇಕು. ನಮ್ಮದೇ ಪರ್ವತಗಳಲ್ಲಿ ಬದುಕುವ ಹಕ್ಕು ಬೇಕು. ನಾವು ಸೃಷ್ಟಿಸದ ಹವಾಮಾನ ಬಿಕ್ಕಟ್ಟಿನ ಕಾರಣಕ್ಕೆ ಹಿಮಾಲಯದಲ್ಲಿ ಹುಟ್ಟುವುದೇ ಮರಣದಂಡನೆಯಾಗದಂತಹ ಜಗತ್ತು ಬೇಕು.’
ನಮ್ಮ ಪಶ್ಚಿಮ ಘಟ್ಟಗಳಲ್ಲಿ ವಾಸಿಸುವವರೂ ಇಂಥದೊಂದು ಪತ್ರ ಬರೆಯುವ ದಿನ ಬಾರದಿರಲಿ.