ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Keshava Prasad B Column: ಅಮೆರಿಕದ ಸಾಲದ ಬೆಟ್ಟವನ್ನು ಕರಗಿಸಲಿದೆಯೇ ಬಿಟ್‌ ಕಾಯಿನ್‌ ?!

“ಅಮೆರಿಕವು ಬಿಟ್ ಕಾಯಿನ್ ಮತ್ತು ಬಂಗಾರವನ್ನು ಬಳಸಿಕೊಂಡು ಸಾಲದ ಬೆಟ್ಟವನ್ನು ಕರಗಿಸಲಿದೆ. ಇದು ಹಣಕಾಸು ಜಗತ್ತಿನ ರೂಪುರೇಷೆಗಳನ್ನೇ ಬದಲಿಸಲಿದೆ. ಕ್ರಿಪ್ಟೊ ಕರೆನ್ಸಿಯ ಮೂಲಕ ಸಾಂಪ್ರದಾ ಯಿಕ ಕರೆನ್ಸಿ ವ್ಯವಸ್ಥೆಗೆ ಪರ್ಯಾಯವನ್ನು ಅಳವಡಿಸಲಿದೆ" ಎನ್ನುತ್ತಾರೆ ಕೊಬ್ಯಾ ಕೋವ್. ಆದರೆ ಈ ಪ್ರಯತ್ನದಿಂದ ಜಾಗತಿಕ ಹಣಕಾಸು ವ್ಯವಸ್ಥೆ ಅಸ್ಥಿರವಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.

ಅಮೆರಿಕದ ಸಾಲದ ಬೆಟ್ಟವನ್ನು ಕರಗಿಸಲಿದೆಯೇ ಬಿಟ್‌ ಕಾಯಿನ್‌ ?!

-

ಮನಿ ಮೈಂಡೆಡ್

ಅಮೆರಿಕವು ವಿದೇಶಿ ಸರಕಾರಗಳಿಗೆ ತನ್ನ ಟ್ರೆಶರಿ ಬಾಂಡ್‌ಗಳನ್ನು ನೇರವಾಗಿ ಮಾರಾಟ ಮಾಡುವುದರ ಬದಲಿಗೆ ಸ್ಟೇಬಲ್ ಕಾಯಿನ್‌ಗಳನ್ನು ಬಿಡುಗಡೆಗೊಳಿಸುತ್ತಿದೆ. ಇದರಿಂದ ಡಿಜಿಟಲ್ ಡಾಲರ್‌ಗೆ ಜಗತ್ತಿನಾದ್ಯಂತ ಬೇಡಿಕೆ ಸೃಷ್ಟಿಯಾಗುತ್ತದೆ. ಅದು ಅಮೆರಿಕದ ಸಾಲ ಮರುಪಾವತಿಗೆ ಬಳಕೆಯಾಗುತ್ತದೆ. ಈ ಸ್ಟೇಬಲ್ ಕಾಯಿನ್‌ಗಳನ್ನು ವಿತರಿಸುವುದೇ ದೊಡ್ಡ ಬಿಸಿನೆಸ್ ಆಗಿ ಹೊರಹೊಮ್ಮಿದೆ.

ಪ್ರಪಂಚದ ಅತ್ಯಂತ ಶಕ್ತಿಶಾಲಿ ಕರೆನ್ಸಿ ಯಾವುದಪ್ಪಾ?’ ಎಂದು ಕೇಳಿದರೆ, ‘ಡಾಲರ್’ ಅಂತ ಚಿಕ್ಕ ಮಗು ಕೂಡ ಹೇಳಬಲ್ಲದು. ರುಪಾಯಿ ಸೇರಿದಂತೆ ಹಲವಾರು ಕರೆನ್ಸಿಗಳು ಇದರ ಎದುರು ಕುಸಿತ ಕ್ಕೀಡಾಗಿವೆ. ಆದರೆ ಸ್ವತಃ ಡಾಲರ್ ಕೂಡ ಕ್ರಮೇಣ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಕುತೂಹಲ ಕರ ಸಂಗತಿಯಾಗಿದೆ.

ಭಾರತವು ಡಾಲರ್ ವಿರೋಧಿಯಲ್ಲದಿದ್ದರೂ, ಅಮೆರಿಕದ ಟ್ರೆಶರೀಸ್‌ಗಳನ್ನು ಖರೀದಿಸುವುದನ್ನು ಕಡಿಮೆ ಮಾಡುತ್ತಿದೆ. ಅಂದರೆ ಡಾಲರ್ ಮೇಲಿನ ಅವಲಂಬನೆಯನ್ನು ತಗ್ಗಿಸಲು ನಿರ್ಧರಿಸಿದೆ. 2025ರ ಮೇ ತಿಂಗಳಲ್ಲಿ ಅಮೆರಿಕದ ಬಾಂಡ್ ಗಳಲ್ಲಿ ಭಾರತದ ಹೂಡಿಕೆ 235 ಶತಕೋಟಿ ಡಾಲರ್‌ ನಷ್ಟಿತ್ತು. ಆದರೆ ಜೂನ್ ವೇಳೆಗೆ 227 ಶತಕೋಟಿ ಡಾಲರ್‌ನಷ್ಟಿತ್ತು.

ಟ್ಯಾರಿಫ್ ವಾರ್ ನಡೆಸುತ್ತಿರುವ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಪ್ರತಿಯಾಗಿ ‘ಬ್ರಿಕ್ಸ್’ ರಾಷ್ಟ್ರಗಳು (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಮುಂತಾದವು)‌ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಆಲೋಚಿಸುತ್ತಿವೆ. ರಷ್ಯಾ-ಉಕ್ರೇನ್ ಸಮರ ಆರಂಭವಾದಾಗ ಅಮೆರಿಕವು ಡಾಲರ್‌ಗಳಲ್ಲಿ ರಷ್ಯಾ ಮಾಡಿಟ್ಟಿದ್ದ ಹೂಡಿಕೆಯನ್ನು ಜಪ್ತಿ ಮಾಡಿಕೊಂಡಿತ್ತು.

ಇದನ್ನೂ ಓದಿ: Keshava Prasad B Column: ಜಿಎಸ್ʼಟಿ ಇಳಿಕೆಯಿಂದ ರಾಜ್ಯಗಳಿಗೆ ನಷ್ಟವೇ- ಲಾಭವೇ ?!

ಹೀಗೆ ತನ್ನ ವಿರೋಧಿಗಳನ್ನು ಆರ್ಥಿಕವಾಗಿಯೂ ಅಮೆರಿಕ ಹಣಿಯಬಲ್ಲದು. ಆದರೆ ಡಾಲರ್ ಪ್ರಾಬಲ್ಯ ಕಡಿಮೆಯಾಗಲು ಇದೊಂದೇ ಕಾರಣವಲ್ಲ. ಅಮೆರಿಕವು ಮನಸೋ ಇಚ್ಛೆ ಡಾಲರ್‌ ಗಳನ್ನು ಮುದ್ರಿಸುತ್ತದೆ. ಅದರ ಸಾಲವೂ ಬೃಹದಾಕಾರವಾಗಿದೆ. ಹಣದುಬ್ಬರ ಹೆಚ್ಚುತ್ತಿದೆ. ಈ ನಕಾರಾತ್ಮಕ ಬೆಳವಣಿಗೆಯು ಡಾಲರ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಅಮೆರಿಕದ ಆರ್ಥಿಕತೆಯ ಅನಿಶ್ಚಿತತೆಯ ಪರಿಣಾಮ ಹೂಡಿಕೆದಾರರು ಬಾಂಡ್ ಗಳನ್ನು ಮಾರುತ್ತಿದ್ದಾರೆ.

ಈ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಡಾಲರ್ ಇಂಡೆಕ್ಸ್‌ ನಲ್ಲಿ 7 ಪರ್ಸೆಂಟ್ ಇಳಿಕೆಯಾಗಿದೆ. ಆದ್ದರಿಂದ ಡಾಲರ್‌ನ ದರ್ಬಾರಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಲು ಅಮೆರಿಕ ಹೊಸ ತಂತ್ರ ಕಂಡುಕೊಳ್ಳುತ್ತಿದೆಯೇ? ‌ಹೌದು, ಎನ್ನುತ್ತಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಪ್ತ ಸಲಹೆಗಾರ ಆಂಟನ್ ಕೊಬ್ಯಾಕೋವ್! ಹಾಗಾದರೆ ಅವರು ಇತ್ತೀಚೆಗೆ ಮಾಡಿರುವ ಸ್ಫೋಟಕ ಆರೋಪವೇನು? ಜಗತ್ತಿನ ಅತಿ ದೊಡ್ಡ ಸಾಲಗಾರ ಅಮೆರಿಕದ ಸಾಲದ ಪ್ರಮಾಣ 35 ಟ್ರಿಲಿಯನ್ ಡಾಲರ್ (ರುಪಾಯಿ ಲೆಕ್ಕದಲ್ಲಿ 3 ಸಾವಿರ ಲಕ್ಷ ಕೋಟಿಗೂ ಹೆಚ್ಚು).

Bin coin

“ಅಮೆರಿಕವು ಬಿಟ್ ಕಾಯಿನ್ ಮತ್ತು ಬಂಗಾರವನ್ನು ಬಳಸಿಕೊಂಡು ಸಾಲದ ಬೆಟ್ಟವನ್ನು ಕರಗಿಸ ಲಿದೆ. ಇದು ಹಣಕಾಸು ಜಗತ್ತಿನ ರೂಪುರೇಷೆಗಳನ್ನೇ ಬದಲಿಸಲಿದೆ. ಕ್ರಿಪ್ಟೊ ಕರೆನ್ಸಿಯ ಮೂಲಕ ಸಾಂಪ್ರದಾಯಿಕ ಕರೆನ್ಸಿ ವ್ಯವಸ್ಥೆಗೆ ಪರ್ಯಾಯವನ್ನು ಅಳವಡಿಸಲಿದೆ" ಎನ್ನುತ್ತಾರೆ ಕೊಬ್ಯಾ ಕೋವ್. ಆದರೆ ಈ ಪ್ರಯತ್ನದಿಂದ ಜಾಗತಿಕ ಹಣಕಾಸು ವ್ಯವಸ್ಥೆ ಅಸ್ಥಿರವಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.

ಅಮೆರಿಕದ ಬಾಂಡ್ ಅಥಾ ಟ್ರೆಶರಿ ಸೆಕ್ಯುರಿಟೀಸ್‌ಗಳನ್ನು ಖರೀದಿಸುವ ಮೂಲಕ ಇಷ್ಟೊಂದು ಸಾಲವನ್ನು ಕೊಟ್ಟವರು ಯಾರು? ವಿದೇಶಿ ಸರಕಾರಗಳು, ಸಾಂಸ್ಥಿಕ ಹೂಡಿಕೆದಾರರು, ಅಮೆರಿಕದ ನಾಗರಿಕರು. ದಶಕಗಟ್ಟಲೆ ಕಾಲಗಳ ಬಜೆಟ್ ಕೊರತೆ, ಭಾರಿ ಮೊತ್ತದ ಆರ್ಥಿಕ ನೆರವಿನ ಪ್ಯಾಕೇಜ್‌ ಗಳು, ಮಿಲಿಟರಿ ವೆಚ್ಚಗಳು, ಸಾಮಾಜಿಕ ಭದ್ರತೆ ಯೋಜನೆಗಳು, ಮೆಡಿಕೇರ್ ಖರ್ಚುಗಳಿಂದ ಆ ದೇಶದ ಸಾಲ ಪ್ರತಿವರ್ಷ ಹೆಚ್ಚುತ್ತಲೇ ಇದೆ.

ಸಾಲದ ಮಿತಿಯನ್ನು ಅಲ್ಲಿನ ಸರಕಾರಗಳು ಏರಿಸುತ್ತಲೇ ಇವೆ. ಆದರೆ ಇದೀಗ ಡಾಲರ್ ಮೇಲಿನ ವಿಶ್ವಾಸ ನಷ್ಟವಾಗುತ್ತಿರುವುದರಿಂದ ಅದನ್ನು ತಡೆಯಲು ಬಿಟ್ ಕಾಯಿನ್ ಮತ್ತು ಬಂಗಾರವನ್ನು ಬಳಸಲು ಅಮೆರಿಕ ನಿರ್ಧರಿಸಿದೆ ಎನ್ನುತ್ತಾರೆ ಕೊಬ್ಯಾಕೋವ್. ಕೊಬ್ಯಾಕೋವ್ ಪ್ರಕಾರ, ಅಮೆರಿಕ ತನ್ನ ರಾಷ್ಟ್ರೀಯ ಸಾಲದ ಒಂದು ಭಾಗವನ್ನು ಸ್ಟೇಬಲ್ ಕಾಯಿನ್ಸ್ ( Stable coins ) ಎಂಬ ಕ್ರಿಪ್ಟೊ ಕರೆನ್ಸಿಗೆ ಪರಿವರ್ತಿಸಲಿದೆ.

ಬಳಿಕ ಅದನ್ನು ಅಪಮೌಲ್ಯಗೊಳಿಸಲಿದೆ. ಆಗ ಅಮೆರಿಕದ ಸಾಲವೂ ಕರಗಲಿದೆ ಎನ್ನುತ್ತಾರೆ ಅವರು. ಡಿಜಿಟಲ್ ಕರೆನ್ಸಿಗಳು ಡಾಲರ್ ಮತ್ತು ಇತರ ಕರೆನ್ಸಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬ ಕುತೂಹಲ ಈಗ ಉಂಟಾಗಿದೆ. ಹಾಗಾದರೆ ಏನಿದು ಸ್ಟೇಬಲ್ ಕಾಯಿನ್ಸ್? ಇದರ ಮೂಲಕ ಅಮೆರಿಕ ತನ್ನ ಸಾಲವನ್ನು ಜಗತ್ತಿಗೇ ರಫ್ತು ಮಾಡುತ್ತಿದೆಯೇ? ಸ್ಟೇಬಲ್ ಕಾಯಿನ್ ಎಂದರೆ ಡಿಜಿಟಲ್ ಡಾಲರ್ ಆಗಿದ್ದು, ಇದು ಒಂದು ವಿಧದ ಕ್ರಿಪ್ಟೊ ಕರೆನ್ಸಿಯಾಗಿದೆ.

ಅಮೆರಿಕದ ಟ್ರೆಶರಿ ಮತ್ತು ಡಾಲರ್ ಮೌಲ್ಯಕ್ಕೆ ಅದು ಸಮಾನವಾಗಿದೆ. ಆದ್ದರಿಂದ ಡಾಲರ್ ಕರೆನ್ಸಿ ನೋಟಿನ ಬದಲಿಗೆ ಇದನ್ನು ಬಳಸಬಹುದು. ಅದಕ್ಕೆ ಅಲ್ಲಿನ ಸರಕಾರ ಕಾನೂನು ಮಾನ್ಯತೆ ಕೊಟ್ಟಿದೆ. ಆದರೆ ಇದನ್ನು ಜಗತ್ತಿನಾದ್ಯಂತ ಬಳಕೆದಾರರು ಬಳಸುವಾಗ, ಅಥವಾ ಇಟ್ಟುಕೊಂಡಾಗ, ತಮಗೆ ಅರಿವಿಲ್ಲದಂತೆ ಅಮೆರಿಕದ ಸಾಲ ತೀರಿಸಿದಂತೆ ಆಗುತ್ತದೆ. ಟ್ರಂಪ್ ಸರಕಾರ 2025ರ ಜುಲೈ 18ರಂದು ಜೀನಿಯಸ್ ಕಾಯಿದೆ (GENIUS Act) ಮೂಲಕ ಈ ಮಾದರಿಯನ್ನು ಔಪಚಾರಿಕ ಗೊಳಿಸಿದೆ.

ಈ ಡಿಜಿಟಲ್ ಡಾಲರ್ ಸ್ಟೇಬಲ್ ಕಾಯಿನ್ ಅನ್ನು ಜಗತ್ತಿನ ನಾನಾ ದೇಶಗಳಲ್ಲಿ ಬಳಸಬಹುದು. ಆದರೆ ರಿಸರ್ವ್ ಅಮೆರಿಕದ ಟ್ರೆಶರಿಯಲ್ಲಿರುತ್ತದೆ. ಇದರ ಅರ್ಥ ಏನೆಂದರೆ ವಿದೇಶಗಳಲ್ಲಿರುವ ಸ್ಟೇಬಲ್ ಕಾಯಿನ್ ಬಳಕೆದಾರರು ಪರೋಕ್ಷವಾಗಿ ಅಮೆರಿಕದ ಸಾಲಕ್ಕೆ ಫೈನಾನ್ಸ್‌ ಒದಗಿಸಿ ದಂತಾಗುತ್ತದೆ. ಆಗ ಭವಿಷ್ಯದ ದಿನಗಳಲ್ಲಿ ಡಾಲರ್ ಪ್ರಾಬಲ್ಯ ಮತ್ತು ಮೌಲ್ಯವು ಕಡಿಮೆಯಾಗ ದಂತೆ ಇದು ನೋಡಿಕೊಳ್ಳಬಹುದು.

ಹೀಗಾಗಿ ಈ ಡಿಜಿಟಲ್ ಡಾಲರ್ ಜಗತ್ತಿನೆಡೆ ಚಲಾವಣೆಯಲ್ಲಿ ಇರಲಿ ಎಂದು ಅಮೆರಿಕ ಬಯಸು‌ ತ್ತಿದೆ. ಬಿಟ್ ಕಾಯಿನ್‌ಗಳನ್ನು ಸಂಗ್ರಹಿಸುತ್ತಾ ಹೋಗುವುದು ಮತ್ತು ಕನಿಷ್ಠ 20 ವರ್ಷಗಳ ಕಾಲ ಠೇವಣಿ ಇಡುವುದು, ಮೌಲ್ಯ ಹೆಚ್ಚಳವಾದ ಬಳಿಕ ಸಾಲ ತೀರಿಸಲು ಬಳಸುವುದು ಮತ್ತೊಂದು ಕಾರ್ಯತಂತ್ರ. ಅಮೆರಿಕವು ವಿದೇಶಿ ಸರಕಾರಗಳಿಗೆ ತನ್ನ ಟ್ರೆಶರಿ ಬಾಂಡ್ ಗಳನ್ನು ನೇರವಾಗಿ ಮಾರಾಟ ಮಾಡುವುದರ ಬದಲಿಗೆ ಸ್ಟೇಬಲ್ ಕಾಯಿನ್‌ಗಳನ್ನು ಬಿಡುಗಡೆಗೊಳಿಸುತ್ತಿದೆ.

ಇದರಿಂದ ಡಿಜಿಟಲ್ ಡಾಲರ್‌ಗೆ ಜಗತ್ತಿನಾದ್ಯಂತ ಬೇಡಿಕೆ ಸೃಷ್ಟಿಯಾಗುತ್ತದೆ. ಅದು ಅಮೆರಿಕದ ಸಾಲ ಮರುಪಾವತಿಗೆ ಬಳಕೆಯಾಗುತ್ತದೆ. ಈ ಸ್ಟೇಬಲ್ ಕಾಯಿನ್‌ಗಳನ್ನು ವಿತರಿಸುವುದೇ ದೊಡ್ಡ ಬಿಸಿನೆಸ್ ಆಗಿ ಹೊರಹೊಮ್ಮಿದೆ. ಟೆದರ್ (Tether) ಎಂಬ ಕಂಪನಿಯು ವಿಶ್ವದ ಅತಿ ದೊಡ್ಡ ಸ್ಟೇಬಲ್ ಕಾಯಿನ್ ವಿತರಕನಾಗಿದೆ. ಸ್ವತಃ ಡೊನಾಲ್ಡ್ ಟ್ರಂಪ್ ಅವರ ಕುಟುಂಬವೂ ಸ್ಟೇಬಲ್ ಕಾಯಿನ್‌ಗಳನ್ನು ಮಾರಾಟ ಮಾಡುವ ವ್ಯಾಪಾರದಲ್ಲಿದೆ.

ಟ್ರಂಪ್ ಕುಟುಂಬವು ‘ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್’ ( WLFI) ಎಂಬ ಕಂಪನಿಯ ಮೂಲಕ ಈ ಡಿಜಿಟಲ್ ಡಾಲರ್‌ಗಳನ್ನು ಮಾರುತ್ತಿದೆ. ಮತ್ತಷ್ಟು ಕಂಪನಿಗಳು ಈ ಮಾರಾಟಕ್ಕೆ ಮುಂದಾಗುತ್ತಿವೆ. ಕರ್ನಾಟಕದಲ್ಲೂ ರಿಟೇಲ್ ಹೂಡಿಕೆದಾರರು ಕ್ರಿಪ್ಟೊ ಎಕ್ಸ್‌ಚೇಂಜ್‌ಗಳ ಮೂಲಕ ಸ್ಟೇಬಲ್ ಕಾಯಿನ್‌ಗಳನ್ನು ಖರೀದಿಸುತ್ತಾರೆ. ಅದರಲ್ಲಿ ಉಳಿತಾಯ ಮಾಡುತ್ತಾರೆ. ಅವರಿಗೇ ಗೊತ್ತಿಲ್ಲದಂತೆ ಅಮೆರಿಕದ ಸಾಲ ತೀರಿಸಲು ಸಹಕರಿಸುತ್ತಿದ್ದಾರೆ.

ಈ ಬಿಟ್ ಕಾಯಿನ್ ಬೆಲೆ 2016ರಲ್ಲಿ ಕೇವಲ 30000 ರು. ಇತ್ತು. ಈಗ 1 ಕೋಟಿ ರುಪಾಯಿಗೆ ಜಿಗಿದಿದೆ! ಜಗತ್ತಿನಲ್ಲಿ ಬೇರೆ ಯಾವುದೇ ಅಸೆಟ್ ಈ ಪರಿಯಲ್ಲಿ ಕಳೆದ ದಶಕದಿಂದೀಚೆಗೆ ಈ ಪರಿಯಲ್ಲಿ ತನ್ನ ಮೌಲ್ಯವನ್ನು ಹೆಚ್ಚಿಸಿಲ್ಲ. ಜಗತ್ತಿನಲ್ಲಿ ಒಟ್ಟು 2.1 ಕೋಟಿ ಬಿಟ್ ಕಾಯಿನ್‌ಗಳು ಮಾತ್ರ ಇವೆ. ಅದಕ್ಕಿಂತ ಒಂದೂ ಜಾಸ್ತಿ ಆಗುವುದಿಲ್ಲ. ಆದ್ದರಿಂದ ಬಿಟ್ ಕಾಯಿನ್‌ಗೆ ಅಗಾಧ ಬೇಡಿಕೆ ಇದೆ. ಹೀಗಾಗಿ ಜ್ವರದಂತೆ ಅದರ ದರವೂ ಏರುತ್ತಿದೆ. ಬಿಟ್ ಕಾಯಿನ್ ಮೇಲೆ

ಅಮೆರಿಕಕ್ಕೆ ಇರುವ ವ್ಯಾಮೋಹ ನಿಮ್ಮನ್ನು ಬೆರಗಾಗಿಸಬಹುದು. ಜಗತ್ತಿನಲ್ಲಿ ಅತಿ ಹೆಚ್ಚು ಬಿಟ್ ಕಾಯಿನ್ ಅಮೆರಿಕದ ಬಳಿ ಇದೆ. ಇದನ್ನು ಕಾಪಿಡಲು ಟ್ರಂಪ್ ಸರಕಾರ ‘ಸ್ಟ್ರಾಟಜಿಕ್ ಬಿಟ್ ಕಾಯಿನ್ ರಿಸರ್ವ್’ ಅನ್ನು ಸ್ಥಾಪಿಸಿದೆ. ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಗೆ ಮನ್ನ, ಚಿನ್ನ ದಂತೆ ಬಿಟ್ ಕಾಯಿನ್ ಸಂಗ್ರಹಕ್ಕೆ ಪ್ರತ್ಯೇಕ ರಿಸರ್ವ್ ಅನ್ನು ಸ್ಥಾಪಿಸುವ ಘೋಷಣೆ ಮಾಡಿದ್ದರು.

ಸೆನೆಟರ್ ಸೈಂತಿಯಾ ಲ್ಯುಮ್ಮಿಸ್ ಪ್ರಕಾರ, ಈ ಸ್ಟ್ರಾಟಜಿಕ್ ಬಿಟ್ ಕಾಯಿನ್ ರಿಸರ್ವ್ 2045ರ ವೇಳೆಗೆ ಅಮೆರಿಕದ ಅರ್ಧದಷ್ಟು ಸಾಲವನ್ನು ಕಡಿತಗೊಳಿಸಲಿದೆ! ಒಂದು ಅಂದಾಜಿನ ಪ್ರಕಾರ ಬಿಟ್ ಕಾಯಿನ್ ದರವು 2045ರ ವೇಳೆಗೆ ಕನಿಷ್ಠ 26 ಕೋಟಿಗೆ ಏರಿಕೆಯಾಗಲಿದೆ. ಗರಿಷ್ಠ 426 ಕೋಟಿಗೂ ಜಿಗಿಯಬಹುದು! (ರುಪಾಯಿ ದರ 87ರ ಲೆಕ್ಕದಲ್ಲಿ).

ವಾರ್ಟನ್ ಬಿಸಿನೆಸ್ ಸ್ಕೂಲ್‌ನ ಪ್ರೊಫೆಸರ್ ಜೆರ್ಮಿ ಸೈಗೆಲ್ ಅವರು, “ಬಿಟ್ ಕಾಯಿನ್ ಭವಿಷ್ಯದಲ್ಲಿ ಡಾಲರ್‌ಗೆ ಪ್ರಬಲ ಸವಾಲು ಒಡ್ಡಬಹುದು. ಈಗಾಗಲೇ ‘ಡಿಜಿಟಲ್ ಗೋಲ್ಡ್’ ಆಗಿ ಜನಪ್ರಿಯ ವಾಗುತ್ತಿದೆ. ಇದು ಕೇವಲ‌ ಯೂರೊ ಮಾದರಿಯ ಇತರ ಕರೆನ್ಸಿಗಳ ಹಾಗಿಲ್ಲ. ಆಧುನಿಕ ಹಣಕಾಸು ವ್ಯವಸ್ಥೆಯನ್ನು ಇದು ಬಲಪಡಿಸಲಿದೆ. ಡಾಲರ್‌ಗೆ ಬ್ರಿಕ್ಸ್ ಕರೆನ್ಸಿ ಕೂಡ ಸವಾಲು ಆಗದು. ವಿಶ್ವದ ರಿಸರ್ವ್‌ ಕರೆನ್ಸಿಯಾಗಿ ಡಾಲರ್ ಅನ್ನು ಬದಲಿಸಬಲ್ಲ ಶಕ್ತಿ ಬಿಟ್ ಕಾಯಿನ್‌ಗೆ ಇದೆ.

ಬಿಟ್ ಕಾಯಿನ್ ಸೀಮಿತ ಸಂಖ್ಯೆಯಲ್ಲಿ ಇರುವುದು, ಹೆಚ್ಚುವರಿ ಸೃಷ್ಟಿಗೆ ಅವಕಾಶ ಇಲ್ಲದಿರುವುದು, ವಿಕೇಂದ್ರೀಕರಣ ಸ್ವರೂಪ, ದಕ್ಷತೆ ಮತ್ತು ಹೂಡಿಕೆದಾರರ ವಿಶ್ವಾಸದ ಪರಿಣಾಮ ಬಿಟ್ ಕಾಯಿನ್, ಡಾಲರ್‌ಗೆ ಸವಾಲೊಡ್ಡಬಲ್ಲದು. ಹಣದುಬ್ಬರ ಮತ್ತು ನೋಟುಗಳ ಮುದ್ರಣದಿಂದ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕೆ ಇದು ಪರಿಹಾರ ಆಗಲಿದೆ" ಎನ್ನುತ್ತಾರೆ.

ಸೆಂಟ್ರಲ್ ಬ್ಯಾಂಕ್‌ಗಳು ನೋಟುಗಳನ್ನು ಅತಿಯಾಗಿ ಮುದ್ರಿಸಿದಾಗ ಏನಾಗುತ್ತದೆ? ಮೊದಲನೆಯ ದಾಗಿ ವ್ಯವಸ್ಥೆಯಲ್ಲಿ ನಗದು ಪೂರೈಕೆ ಹೆಚ್ಚುತ್ತದೆ. ಆದರೆ ಅದಕ್ಕೆ ತಕ್ಕಷ್ಟು ಉತ್ಪಾದನೆ ಮತ್ತು ಸೇವೆಗಳು ಲಭಿಸದಿದ್ದರೆ, ಬೆಲೆ ಏರಿಕೆಯಾಗುತ್ತದೆ. ಹಣದುಬ್ಬರ ಹೆಚ್ಚುತ್ತದೆ. ಕರೆನ್ಸಿಯ ಮೌಲ್ಯ ಇಳಿದು ದುರ್ಬಲವಾಗುತ್ತದೆ. ಆದರೆ ಬಿಟ್ ಕಾಯಿನ್ ಅನ್ನು ಬೇಕಾದಂತೆಲ್ಲ ಟಂಕಿಸಲು ಸಾಧ್ಯ ವಾಗುವುದಿಲ್ಲ. ಈಗ ಇರುವುದಕ್ಕಿಂತ ಒಂದೇ ಒಂದು ಬಿಟ್ ಕಾಯಿನ್ ಕೂಡ ಉತ್ಪಾದಿಸಲು ಸಾಧ್ಯ ವಾಗುವುದಿಲ್ಲ. ಆದ್ದರಿಂದ ಅದರ ನಿಜವಾದ ಮೌಲ್ಯ ಉಳಿದುಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು.

ಹೀಗಿದ್ದರೂ, ಬಿಟ್ ಕಾಯಿನ್ ಒಂದೇ ಅಮೆರಿಕವನ್ನು ಅದರ ಬೃಹತ್ ಸಾಲದ ಸಮಸ್ಯೆಯಿಂದ ಪಾರು ಮಾಡಬಹುದೇ? ಇಲ್ಲ, ಅಮೆರಿಕದ ಭಾರಿ ಸಾಲದ ಎದುರು ಬಿಟ್ ಕಾಯಿನ್ ಮೌಲ್ಯ ಏನೇನೂ ಅಲ್ಲ ಎಂಬ ವಾದವೂ ಇದೆ. ಭಾರತದಲ್ಲಿ ಬಿಟ್ ಕಾಯಿನ್ ಬಳಕೆಗೆ ನಿರ್ಬಂಧವಿಲ್ಲ. ಆದರೆ ಆರ್‌ಬಿಐ ಮಾನ್ಯತೆ ಇದಕ್ಕೆ ಇನ್ನೂ ಸಿಕ್ಕಿಲ್ಲ. ಹೀಗಿದ್ದರೂ, ಭಾರತದಲ್ಲೂ ‘ಬಿಟ್ ಕಾಯಿನ್ ಸ್ಟ್ರಾಟಜಿಕ್ ಕ್ರಿಪ್ಟೊ ರಿಸರ್ವ್’ ಅನ್ನು ಸ್ಥಾಪಿಸಬೇಕು ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಇತ್ತೀಚೆಗೆ ಮನವಿ ಮಾಡಿದ್ದರು. ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ವೈವಿಧ್ಯಮಯ ಗೊಳಿಸಲು ಇದು ಸಹಕಾರಿ ಎಂದಿದ್ದರು.