Shishir Hegde Column: ಏನಿದು ಡೊನಾಲ್ಡ್ ಟ್ರಂಪಣ್ಣನ ನೌಟ್ರಂಪ್ ಆಟ ?
ಮೊದಲ ಅವಧಿಯ ಟ್ರಂಪ್‌ಗೂ, ಸೋತು ನಾಲ್ಕು ವರ್ಷದ ನಂತರ ಎರಡನೇ ಅವಧಿಗೆ ಗದ್ದುಗೆ ಯೇರಿದ ಟ್ರಂಪ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಟ್ರಂಪ್ ಅಧಿಕಾರ ಕಳೆದಾದ ನಾಲ್ಕು ವರ್ಷದಲ್ಲಿ ಸಾಕಷ್ಟು ಹೋಂ ವರ್ಕ್ ಮಾಡಿರುವುದಂತೂ ಸ್ಪಷ್ಟ. ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ರಾದಾಗ ಟ್ರಂಪ್‌ಗೆ ರಾಜಕಾರಣ ಸಂಪೂರ್ಣ ಹೊಸತು. ಅಲ್ಲಿಯವರೆಗೆ ‘ಪಂಚಾಯ್ತಿ’ ಚುನಾವಣೆ ಯನ್ನೂ ಎದುರಿಸದ ಟ್ರಂಪ್ ದೇಶದ ಅಧ್ಯಕ್ಷರಾಗಿ ಕೂತಿದ್ದರು. ಎಲ್ಲವೂ ಬೆರಗು.

-

ಶಿಶಿರಕಾಲ
shishirh@gmail.com
Modi. He is a friend of mine. On the outside he looks like your father- he's the nicest human being, but he's a total killer. ಈ ವಿಡಿಯೋ ಅದೇಕೋ ಅಷ್ಟು ವೈರಲ್ ಆಗಲಿಲ್ಲ. ಹಿಂದಿನ ವರ್ಷ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಸಭೆಯೊಂದರ ಗ್ರೀನ್ ರೂಮಿನಲ್ಲಿ ಕೆಲವೊಂದಿಷ್ಟು ಆಪ್ತ ಪತ್ರಕರ್ತರ ಜತೆ ಹೀಗೆ ಮಾತನಾಡುತ್ತಿದ್ದರು- “ನೀವು ಪತ್ರಕರ್ತರು ಜಾಗತಿಕ ದೃಷ್ಟಿಕೋನವನ್ನು ಸರಿಮಾಡಿಕೊಳ್ಳಬೇಕು.
ಭಾರತ ಮೊದಲಾದ ದೇಶಗಳು ಹಲವು ಸಾಮರ್ಥ್ಯಗಳಲ್ಲಿ ನಮ್ಮಿಂದ ಹಿಂದೆ ಇರಬಹುದು, ಆದರೆ ಆ ದೇಶಗಳ ಹೊಸತಲೆಮಾರಿನ ನಾಯಕರಿದ್ದಾರಲ್ಲ, ಅವರು ಹಿಂದಿನವರಂತಲ್ಲ. ಮೋದಿ ಇವರೆಲ್ಲ ವಲ್ಡ್ ಕ್ಲಾಸ್ ನಾಯಕರು, ನುರಿತ ಸಂಧಾನಕಾರರು. ಅಮೆರಿಕ ಅವರೆಲ್ಲರ ಜತೆ ಹುಷಾರಾಗಿ ವ್ಯವಹರಿಸಲು ಕಲಿಯಬೇಕು".
ಅಮೆರಿಕದ ಆಡಳಿತ ವೈಖರಿಯಲ್ಲಿ ಸುಮ್ಸುಮ್ಮನೆ ಹೊಗಳುವ, ಮಣೆ ಹಾಕುವ ಪರಿಪಾಠವೇ ಇಲ್ಲ. ಟ್ರಂಪ್ ಮೋದಿಯನ್ನು ಹೊಗಳಿದ್ದು ಹೇಗೆಂದರೆ, “ಅಂಥ ಚತುರ ರಾಜಕಾರಣಿಗಳ ಜತೆ ವ್ಯವಹರಿಸುವುದು ಬೈಡನ್-ಕಮಲಾರಂಥವರಿಂದ ಸಾಧ್ಯವಿಲ್ಲ. ನಾನೇ ಆಗಬೇಕು" ಎನ್ನುವ ಧಾಟಿಯಲ್ಲಿ.
ಇದನ್ನೂ ಓದಿ: Shishir Hegde Column: ಏಕಾಂತ ಸೆರೆವಾಸವೆಂಬ ಭೂಮಿಯ ಮೇಲಿನ ನರಕ
ಮೊದಲ ಅವಧಿಯ ಟ್ರಂಪ್‌ಗೂ, ಸೋತು ನಾಲ್ಕು ವರ್ಷದ ನಂತರ ಎರಡನೇ ಅವಧಿಗೆ ಗದ್ದುಗೆ ಯೇರಿದ ಟ್ರಂಪ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಟ್ರಂಪ್ ಅಧಿಕಾರ ಕಳೆದಾದ ನಾಲ್ಕು ವರ್ಷ ದಲ್ಲಿ ಸಾಕಷ್ಟು ಹೋಂ ವರ್ಕ್ ಮಾಡಿರುವುದಂತೂ ಸ್ಪಷ್ಟ. ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ರಾದಾಗ ಟ್ರಂಪ್‌ಗೆ ರಾಜಕಾರಣ ಸಂಪೂರ್ಣ ಹೊಸತು. ಅಲ್ಲಿಯವರೆಗೆ ‘ಪಂಚಾಯ್ತಿ’ ಚುನಾವಣೆ ಯನ್ನೂ ಎದುರಿಸದ ಟ್ರಂಪ್ ದೇಶದ ಅಧ್ಯಕ್ಷರಾಗಿ ಕೂತಿದ್ದರು. ಎಲ್ಲವೂ ಬೆರಗು. ಅಮೆರಿಕದ ಅಧ್ಯಕ್ಷನಾದವನ ತಾಕತ್ತು ಮತ್ತು ವ್ಯಾಪ್ತಿ ಇವೆರಡರ ಅಂದಾಜು ಹತ್ತಲು ಟ್ರಂಪ್‌ಗೆ ಮೊದಲೆರಡು ವರ್ಷ ಬೇಕಾಯಿತು.
ಟ್ರಂಪ್ ಚೀನಾದ ಜತೆ ಆಗಲೇ ಸುಂಕದ ಕುಸ್ತಿಗೆ ಇಳಿದದ್ದು. ಸುಂಕ ಎಂದು ಟ್ರಂಪ್ ಟೊಂಕ ಕಟ್ಟಿ ನಿಂತಾಗಲೇ ಕೋವಿಡ್ ಬಂತು, ಪರಿಣಾಮ ಟ್ರಂಪ್ ಸಂಕದಿಂದ ಹಳ್ಳಕ್ಕೆ ಬಿದ್ದಂತಾಯಿತು. ಕೋವಿಡ್ ಒಂದು ಬಾರದಿದ್ದರೆ ಬೈಡನ್ ಸೋಲುತ್ತಿದ್ದರು, ಟ್ರಂಪ್ ಹಿಂದಿನ ಬಾರಿಯೇ ಎರಡನೇ ಬಾರಿ ಆಯ್ಕೆಯಾಗಿಬಿಡುತ್ತಿದ್ದರು. ಆದರೆ ಕೋವಿಡ್ ಸರಿಯಾದ ಹೊಡೆತ ಕೊಟ್ಟಿತು.
ಚುನಾವಣೆಯೂ ಬಂತು, ಟ್ರಂಪ್ ಸೋತದ್ದೂ ಆಯಿತು. ಹಾಗೆ ನೋಡಿದರೆ ಟ್ರಂಪ್ ಅವರು ರಾಜಕಾರಣದ ನಾಜೂಕನ್ನು ಕಲಿತದ್ದೇ ಸೋತು ಅಧಿಕಾರದಿಂದ ಹೊರಗಿದ್ದ ನಾಲ್ಕು ವರ್ಷದಲ್ಲಿ. ಮೂರನೇ ಬಾರಿ ಚುನಾವಣೆಗೆ ಬಂದ ಟ್ರಂಪ್ ಇನ್ನಷ್ಟು ಬಲಪಂಥೀಯರಾಗಿದ್ದರು, ಅದಕ್ಕಿಂತ ಅವರಲ್ಲಿ ಏನೇನು ಮಾಡಬೇಕು ಎನ್ನುವ ಪಟ್ಟಿಯೇ ಸಿದ್ಧವಾಗಿತ್ತು. ಈಗ ಏನೇನು ನಡೆಯುತ್ತಿದೆ ಯಲ್ಲ- ಅದರಲ್ಲಿ ಬಹುತೇಕವನ್ನು ‘ನಾನು ಮಾಡುತ್ತೇನೆ’ ಎಂದು ಟ್ರಂಪ್ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಹೇಳಿದ್ದರು.
ಆದರೆ ಇದೆಲ್ಲವನ್ನೂ ಇಷ್ಟು ಕಡಿಮೆ ಅವಧಿಯಲ್ಲಿ- ಈ ರೀತಿಯಲ್ಲಿ, ವೇಗದಲ್ಲಿ ಹೇಳಿದ್ದನ್ನೆ ಮಾಡಲು ಮುಂದಾಗುತ್ತಾರೆ ಎಂಬ ಅಂದಾಜು ಯಾರಿಗೂ ಇರಲಿಲ್ಲ. ಅರ್ಥಶಾಸ್ತ್ರದಲ್ಲಿ ಸ್ವಲ್ಪವೇ ತಿಳಿವಳಿಕೆಯಿರುವವರಿಗೂ ‘ಟ್ರೇಡ್ ಡೆಫಿಸಿಟ್’ನ ಪರಿಣಾಮಗಳ ಅಂದಾಜಿರುತ್ತದೆ. ಅಮೆರಿಕದ ಜಿಡಿಪಿ 28 ಲಕ್ಷ ಕೋಟಿ ಡಾಲರ್. ವಾರ್ಷಿಕ ಬಜೆಟ್ 6 ಲಕ್ಷ ಕೋಟಿ. ಖೋತಾ ಒಂದುಕಾಲು ಲಕ್ಷ ಕೋಟಿ. ವಾರ್ಷಿಕ ರಫ್ತಿನ ಡೆಫಿಸಿಟ್ 1.2 ಲಕ್ಷ ಕೋಟಿ ಡಾಲರ್.
ಅದು ಬಿಟ್ಟು ಪಾಕಿಸ್ತಾನ ಮೊದಲಾದ ‘ಕೋಲ್ಡ್ ವಾರ್’ (ಶೀತಲ ಯುದ್ಧದ) ಸಮಯದ ದೋಸ್ತಿ ಗಳಿಗೆ ಭಿಕ್ಷೆ ಕೊಡಬೇಕು. ದೇಶದ ಒಳಗೆ ಸರಕಾರಿ ವ್ಯವಸ್ಥೆಯಲ್ಲಿ ಹಣ ವ್ಯರ್ಥವಾಗುತ್ತಿದ್ದರೆ ಹೊರಗಿ ನಿಂದ ಇವೆಲ್ಲ ಅಮೆರಿಕದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತವನ್ನೇ ನೀಡುತ್ತಿರುವುದು ವ್ಯಾಪಾರಿ ಟ್ರಂಪ್‌ರ ಕಣ್ಣಿಗೆ ಬಿದ್ದಿರುವುದು ಸಹಜ. ಬದಲಾದ ಗ್ಲೋಬಲ್ ಡೈನಮಿಕ್ಸ್, ಯುದ್ಧ ಗಳಿಂದಾಗಿ ಅಮೆರಿಕದ ಆರ್ಥಿಕತೆಯನ್ನು ಮರುರೂಪಿಸಿಕೊಳ್ಳಲೇಬೇಕು ಎಂಬ ಟ್ರಂಪ್ ನಿಲುವು ಅಮೆರಿಕದ ಅವಶ್ಯಕತೆಯೂ ಆಗಿತ್ತು.
ಟ್ರಂಪ್ ಇಷ್ಟು ಕಡಿಮೆ ಅವಧಿಯಲ್ಲಿ ಇಡೀ ಅಮೆರಿಕದ ವ್ಯವಸ್ಥೆಯನ್ನೇ ಮೇಲೆ ಕೆಳಗೆ ಮಾಡುತ್ತಾರೆ ಎಂಬ ಕಲ್ಪನೆ ಖುದ್ದು ಅಮೆರಿಕನ್ನರಿಗೆ ಕೂಡ ಇರಲಿಲ್ಲ. ಟ್ರಂಪ್ ಅಧಿಕಾರ ಹಿಡಿದ ದಿನವೇ ಇಡೀ ಸರಕಾರಿ ಮರವನ್ನೇ ಬುಡ ಹಿಡಿದು ಅಲುಗಿಸಲು ಆರಂಭಿಸಿದರು. ಸರಕಾರಿ ವ್ಯವಸ್ಥೆಯಲ್ಲಿ ಯಥೇಚ್ಛ ಹಣ ಸೋರಿಕೆ, ದುರ್ಬಳಕೆ ನಡೆಯುತ್ತಿತ್ತು.
ಸರಕಾರಿ ಡಿಪಾರ್ಟ್ಮೆಂಟ್‌ಗಳಲ್ಲಿ ಹೆಗ್ಗಣಗಳೇ ತುಂಬಿದ್ದವು. ಈ ‘ಸ್ವಚ್ಛತಾ ಕಾರ್ಯ’ಕ್ಕೆ ಟ್ರಂಪ್ ಆಯ್ಕೆ ಮಾಡಿಕೊಂಡದ್ದು ಎಲಾನ್ ಮಸ್ಕ್ ರನ್ನು. ಎಲಾನ್ ಮಸ್ಕ್ ಸರಕಾರಿ ಹಣ ಎಲ್ಲಿ ಹೋಗುತ್ತಿದೆ, ಹೇಗೆ ವ್ಯರ್ಥವಾಗುತ್ತಿದೆ ಎನ್ನುವ ರಿಪೋರ್ಟ್ ಕೊಡುತ್ತಿದ್ದರು, ಟ್ರಂಪ್ ಮಾರನೆಯ ದಿನವೇ ನಿರ್ಧರಿಸಿ ಫರ್ಮಾನು ಹೊರಡಿಸುತ್ತಿದ್ದರು.
ಅಮೆರಿಕದ ಆರೋಗ್ಯ ಇಲಾಖೆಯಲ್ಲಿನ 20 ಸಾವಿರ ಸರಕಾರಿ ನೌಕರರನ್ನು ರಾತ್ರಿ ಬೆಳಗಾಗುವು ದರೊಳಗೆ ‘ಫೈರ್ ಮಾಡಿ’ ಮನೆಗೆ ಕಳುಹಿಸಿದ್ದು, ಫೆಡರಲ್- ದೇಶದ ಮಟ್ಟದಲ್ಲಿದ್ದ ಶಿಕ್ಷಣ ಇಲಾಖೆಯನ್ನೇ ಮುಚ್ಚಿದ್ದು ಹೀಗೆ ಒಂದೆರಡಲ್ಲ. ಸರಕಾರಿ ವ್ಯವಸ್ಥೆಯ ಕ್ಷಮತೆಯನ್ನು ಹೆಚ್ಚಿಸ ಲಿಕ್ಕೆಂದೇ ಹೊಸತೊಂದು ಡಿಪಾರ್ಟ್ಮೆಂಟ್ ( DOGE- Department of Govt. Efficiency) ಒಂದನ್ನು ಮಾಡಿದ್ದು ತೀರಾ ಹೊಸ ನಡೆ. ಎಲ್ಲ ದೇಶಗಳಲ್ಲಿಯೂ ಇಂಥ ಡಿಪಾರ್ಟ್ಮೆಂಟುಗಳೆಂಬ ಹೆಗ್ಗಣದ ಬಿಲಗಳದ್ದೇ ದೊಡ್ಡ ಖರ್ಚು. ಈ ಕ್ಷಮತೆಯ ಡಿಪಾರ್ಟ್ಮೆಂಟ್, ಯಾವ ಯಾವ ಸರಕಾರಿ ಡಿಪಾರ್ಟ್ಮೆಂಟ್ ಅನವಶ್ಯಕ ಎಂದು ಹೇಳಿತೋ ಅದನ್ನೆಲ್ಲ ಟ್ರಂಪ್ ಮುಚ್ಚಿದ್ದಾಗಿದೆ.
ಈಗ ಹೆಚ್ಚಿನ ಸರಕಾರಿ ನಿರ್ಧಾರಗಳನ್ನು ಕೃತಕ ಬುದ್ಧಿಮತ್ತೆ (AI) ತೆಗೆದುಕೊಳ್ಳುವತ್ತ ಇಡೀ ವ್ಯವಸ್ಥೆ ಯನ್ನು ಬದಲಿಸಲಾಗುತ್ತಿದೆ. ಜತೆಯಲ್ಲಿ ಯಥೇಚ್ಛ ಪ್ರಮಾಣದ ಸರಕಾರಿ ಹಣ ಇಲ್ಲಿನ ದೊಡ್ಡ ದೊಡ್ಡ ಯೂನಿವರ್ಸಿಟಿಗಳಿಗೆ ಹೋಗುತ್ತಿತ್ತು. ಬಹುತೇಕ ಯೂನಿವರ್ಸಿಟಿಗಳಲ್ಲಿನ ಆವಿಷ್ಕಾರಗಳಿಗೆ ಸರಕಾರಿ ಹಣ ಪೋಲಾಗುತ್ತಿತ್ತು. ರಿಸರ್ಚ್ ಗ್ರಾಂಟ್, ಹಾಳು-ಮೂಳು ಎಂದು ಕೆಲವು ಯೂನಿವರ್ಸಿಟಿಗಳಿಗೆ ಕೊಡುತ್ತಿದ್ದ ಹಣಗಳಿಗೆ ಲಗಾಮು ಬಿದ್ದಿದೆ. ಇವೆಲ್ಲ ಸಣ್ಣ ಮೊತ್ತವಲ್ಲ- ಹಾರ್ವರ್ಡ್ ಯೂನಿವರ್ಸಿಟಿಗೆ ಸರಕಾರ ವಾರ್ಷಿಕ ಸುಮಾರು 2.3 ಬಿಲಿಯನ್ ಡಾರ್ಲರ್- 18 ಸಾವಿರ ಕೋಟಿ ರೂಪಾಯಿ ನೀಡುತ್ತಿತಂತೆ. ಪಾಕಿಸ್ತಾನ ಆಗಾಗ ಅಮೆರಿಕದ ಬಳಿ ಭಿಕ್ಷೆ ಕೇಳಲು ಹೋದಾಗ ಬೇಡಿಕೆಯಿಡುವುದು ಇಷ್ಟೇ ಮೊತ್ತವನ್ನು!
ಈಗ ಎಲ್ಲಿ ಹಣ ಸೋರಿಕೆಯಾಗುತ್ತಿತ್ತೋ ಆ ವ್ಯವಸ್ಥೆಗಳಿಗೆ ದೊಡ್ಡ ಪ್ರಮಾಣದ ಹಣವನ್ನು ನಿಲ್ಲಿಸ ಲಾಗಿದೆ. ಪರಿಣಾಮ ಇಡೀ ವ್ಯವಸ್ಥೆಯ ಮೇಲೆ, ಆರ್ಥಿಕತೆಯ ಮೇಲೆ, ಉದ್ಯೋಗದ ಮೇಲೆ ಹೀಗೆ ಸಾರ್ವತ್ರಿಕ ಏರುಪೇರಾಗಿ ನಿಂತಿದೆ ಇಡೀ ಆಡಳಿತ ವ್ಯವಸ್ಥೆ. ನಿಮಗೆಲ್ಲ ಟಿವಿ ಟಿಆರ್‌ಪಿ ರೇಟಿಂಗ್ ಬಗ್ಗೆ ಗೊತ್ತಿರುತ್ತದೆ. ಯಾವ ಚಾನಲ್ಲಿನ ಯಾವ ಕಾರ್ಯಕ್ರಮ ಎಷ್ಟು ನೋಡಲ್ಪಡುತ್ತದೆ, ಯಾವುದು ಜನಪ್ರಿಯ ಎಂಬ ರೇಟಿಂಗ್ ನೀಡುವ ವ್ಯವಸ್ಥೆಯಿದು.
ಅದೇ ರೀತಿ ಅಧ್ಯಕ್ಷರ ಟಿಆರ್‌ಪಿ Approval Rating ವ್ಯವಸ್ಥೆ ಅಮೆರಿಕದಲ್ಲಿದೆ. ಅಧ್ಯಕ್ಷರನ್ನು ಸದ್ಯ ಎಷ್ಟು ಅಮೆರಿಕನ್ನರು ಒಪ್ಪುತ್ತಾರೆ, ಒಪ್ಪುವುದಿಲ್ಲ ಎಂಬ ಸ್ಯಾಂಪಲ್‌ಗಳ ಪ್ರತಿಶತ ಲೆಕ್ಕ. ಈ ಸಂಖ್ಯೆ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಅಧ್ಯಕ್ಷರಾದವರು ಮಾಡಿದ್ದು ಸರಿಯೆನಿಸಿದರೆ ಇದು ಮೇಲಕ್ಕೇರು ತ್ತದೆ, ಅಲ್ಲದಿದ್ದರೆ ಕೆಳಕ್ಕಿಳಿಯುತ್ತದೆ. ಇದು ಅಧ್ಯಕ್ಷರೆಡೆಗಿನ ಜನರ ಸೆಂಟಿಮೆಂಟ್‌ನ ಸ್ಪಷ್ಟ ಸೂಚಕ.
ಇತ್ತೀಚಿನ ಲೆಕ್ಕದ ಪ್ರಕಾರ ಟ್ರಂಪ್‌ರ ಒಪ್ಪಿಗೆಯ ರೇಟಿಂಗ್ ಶೇ.14ರಷ್ಟು ಕೆಳಕ್ಕೆ ಬಿದ್ದಿದೆ. ಸದ್ಯ ಟ್ರಂಪ್‌ರನ್ನು ಒಪ್ಪುವವರು ಶೇ.44ರಷ್ಟು ಇದ್ದರೆ, ಒಪ್ಪದವರು ಶೇ.51ರಷ್ಟು. ಇದು ಬೈಡನ್‌ರಿಗಿಂತ ಕಡಿಮೆ. ಟ್ರಂಪ್‌ರ ಕಾರ್ಯವೈಖರಿ ಬಹಳ ಮಜವಾಗಿದೆ. ಇವತ್ತು ಅದ್ಯಾವುದೋ ಒಂದು ಡಿಪಾರ್ಟ್ಮೆಂಟ್ ಅನ್ನು ನಿಲ್ಲಿಸುವುದಾಗಿ ಘೋಷಿಸುತ್ತಾರೆ.
ಮಾರನೆಯ ದಿನ ಭಾರತಕ್ಕೆ ಐವತ್ತು ಶೇಕಡಾ ಸುಂಕ ವಿಧಿಸಿ ಸಹಿ ಹಾಕುತ್ತಾರೆ, ಮೆಕ್ಸಿಕೋದ ಬಾರ್ಡರ್‌ನಲ್ಲಿ ಹೆಚ್ಚಿನ ಮಿಲಿಟರಿ ನಿಯೋಜಿಸುತ್ತಾರೆ, ಅದರ ಮಾರನೆಯ ದಿನ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯ ಕ್ರೈಂ ಹೆಚ್ಚಿರುವ ಜಾಗಗಳಲ್ಲಿ 2000 ಸೇನೆಯವರನ್ನು ನಿಯೋಜಿಸುತ್ತಾರೆ. ಉಕ್ರೇನಿನ ಅಧ್ಯಕ್ಷರನ್ನು ವೈಟ್ ಹೌಸ್‌ನಲ್ಲಿ ಕೂರಿಸಿ, ಮಾಧ್ಯಮದ ಎದುರೇ ಅವಮಾನಿಸುತ್ತಾರೆ.
ಮಾರನೆಯ ದಿನ, ‘ಭಾರತ ಒಂದು ಮುಳುಗುತ್ತಿರುವ ಆರ್ಥಿಕತೆ’ ಎನ್ನುತ್ತಾರೆ, ಆಮೇಲೆ ‘ಮೋದಿ ನನ್ನ ಸ್ನೇಹಿತ’ ಎನ್ನುತ್ತಾರೆ. ಇತ್ತ ‘ಶಿಕಾಗೋದ ಕ್ರೈಮ್ ಹೆಚ್ಚಾಗಿದೆ, ಸೈನ್ಯವನ್ನು ಕಳುಹಿಸುತ್ತೇನೆ’ ಎಂದು ಗುಟುರುಹಾಕುತ್ತಾರೆ. ತಮಾಷೆಗಲ್ಲ- ಅಮೆರಿಕದಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿನಿತ್ಯ ಒಂದಿಂದು ದೊಡ್ಡ ಬೆಳವಣಿಗೆ ನಡೆಯುತ್ತಲೇ ಇದೆ.
ನನ್ನಂಥ ಸುದ್ದಿಪೋತರೂ ಹಿಂದೆಬೀಳುವಷ್ಟು ಸುದ್ದಿ ಪ್ರತಿನಿತ್ಯ. ಹಿಂದಿನ ವಾರ- ಎರಡು ದಿನ ಟ್ರಂಪ್ ಯಾವುದೇ ದೊಡ್ಡ ಪಟಾಕಿ ಹೊತ್ತಿಸಲಿಲ್ಲ, ಯಾವ ಮಾಧ್ಯಮಕ್ಕೂ ಕಾಣಿಸಿಕೊಳ್ಳಲಿಲ್ಲ. ತಮಾಷೆಗಲ್ಲ- ಟ್ರಂಪ್ ಮೌನವಾಗಿದ್ದದ್ದು, ಕಾಣಿಸಿಕೊಳ್ಳದಿದ್ದದ್ದು ಕಂಡು ಆ ದಿನ ಇಂಟರ್ನೆಟ್ ನಲ್ಲಿ ‘ಟ್ರಂಪ್ ಸತ್ತೇಹೋದರು’ ಎಂಬುದೇ ಸುದ್ದಿಯಾಗಿ ವೈರಲ್ ಆಯಿತು.
ವೈಟ್ ಹೌಸ್‌ನಲ್ಲಿ ಪತ್ರಕರ್ತರು ‘ಟ್ರಂಪ್ ಬದುಕಿದ್ದಾರೆಯೇ?’ ಎಂದು ಪ್ರಶ್ನಿಸಿದರು! ಟ್ರಂಪ್‌ರ ಒಂದು ನಿರ್ಧಾರವನ್ನು ಖಂಡಿಸಲು ಪ್ರತಿಪಕ್ಷಗಳಿಗೆ ಸಮಯಾವಕಾಶವೇ ಆಗುತ್ತಿಲ್ಲ. ಇವತ್ತು ಇದನ್ನು ಖಂಡಿಸುತ್ತೇನೆ ಎನ್ನುತ್ತಾರೆ, ಮಾರನೆಯ ದಿನ ಟ್ರಂಪ್ ಇನ್ನೊಂದು ನಿರ್ಧಾರ ತೆಗೆದು ಕೊಂಡಿರುತ್ತಾರೆ. ಪ್ರತಿಪಕ್ಷಗಳಂತೂ ಪ್ರತಿದಿನ ‘ಖಂಡಿಸುತ್ತೇವೆ’ ಎನ್ನುವುದು ಬಿಟ್ಟರೆ ಇನ್ನೇನನ್ನೂ ಮಾಡಲಾಗುತ್ತಿಲ್ಲ.
ಟ್ರಂಪ್‌ರ ನಡೆ ನಿರ್ಧಾರಗಳು ಯಾವುದೂ ಅಕಾರಣವಲ್ಲ. ಅವೆಲ್ಲದಕ್ಕೂ ಸಕಾರಣವಿದೆ, ದೇಶಹಿತದ ಉದ್ದೇಶವಿದೆ. ಅದರಲ್ಲಿ ದೂಸ್ರಾ ಮಾತೇ ಇಲ್ಲ. ಟ್ರಂಪ್ ಅಪ್ಪಟ ದೇಶಪ್ರೇಮಿ. ಆದರೆ ಟ್ರಂಪ್ ರ ಬದಲಾವಣೆಯ ವೇಗಕ್ಕೆ ಅಮೆರಿಕನ್ ವ್ಯವಸ್ಥೆ ಒಗ್ಗಿಕೊಳ್ಳುವಲ್ಲಿ ಹಿಂದೆ ಬೀಳುತ್ತಿದೆ. ಟ್ರಂಪ್‌ರ ಸುಂಕದ ಅಸ ಮತ್ತು ಇತ್ತೀಚೆಗೆ ಮೋದಿ, ಪುಟಿನ್, ಕ್ಸಿ ಜಿನ್‌ಪಿಂಗ್ ಇವರೆಲ್ಲ ಭೇಟಿಯಾ ದದ್ದು, ಅಮೆರಿಕಕ್ಕೆ ಸಡ್ಡು ಹೊಡೆದದ್ದು ಇತ್ಯಾದಿ ಸುದ್ದಿ ಕೇಳಿರುತ್ತೀರಿ. ಈ ಮೀಟಿಂಗ್‌ನ ಅಸಲಿ ಜಾಗತಿಕ ಪರಿಣಾಮಕ್ಕಿಂತ, ಮಾಧ್ಯಮಗಳು ಊಹಿಸಿದ್ದೇ ಜಾಸ್ತಿ.
ನರೇಂದ್ರ ಮೋದಿ ಅಮೆರಿಕಕ್ಕೆ ಬಂದಾಗ ಟ್ರಂಪ್ ಅವರ ಕೈ ಹಿಸುಕಿ ‘ಹೌಡಿ ಮೋದಿ’ ಎಂದಾಗ ಮಾಧ್ಯಮಗಳು ಅದನ್ನು ನಿರೂಪಿಸಿದ ರೀತಿ ಮತ್ತು ಈಗ ನಿರೂಪಿಸುತ್ತಿರುವ ರೀತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನನಗೆ ವಿಚಿತ್ರವೆನಿಸಿದ್ದು ಭಾರತೀಯರು ಇಂಥ ಮಾಧ್ಯಮಗಳ ನಿರೂಪಣೆಗೆ ಸ್ಪಂದಿಸಿದ ರೀತಿ. ಅದ್ಯಾರೋ ಪುಣ್ಯಾತ್ಮ ಅಂದು ಟ್ರಂಪ್‌ರ ಮೂರ್ತಿ ಇಟ್ಟು ಪೂಜಿಸಿದ್ದ. ಟ್ರಂಪ್ ಅಧಿಕಾರಕ್ಕೆ ಬರಲಿ ಎಂದು ಭಾರತದಲ್ಲಿ ಚಂಡಿ ಹವನ ಮಾಡಿದವರಿದ್ದಾರೆ.
ಆಗ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾದಾಗಲೂ ಅಷ್ಟೆ, ‘ಭಾರತದ ಮಗಳು’ ಎಂದು ಎಲ್ಲರೂ ತಮಟೆ ಹೊಡೆದವರೇ. ಆಮೇಲೆ ಅವರಿಂದಾಗಿ ಭಾರತಕ್ಕೆ ಆದ ಉಪಕಾರ ನಾಲ್ಕಾಣೆಗಿಂತ ಸ್ವಲ್ಪ ಕಡಿಮೆ. ಈಗಲೂ ಮೋದಿ, ಪುಟಿನ್, ಕ್ಸಿ ಜಿನ್‌ಪಿಂಗ್ ಭೇಟಿಯಿಂದಾಗಿ ‘ಅಮೆರಿಕದ ಜತೆಗಿನ ಸಂಬಂಧವೇ ಕಡಿದುಹೋಯಿತು, ಎಲ್ಲ ಮುಗಿಯಿತು, ಇನ್ನು ಮೇಲೆ ಅಮೆರಿಕ ನಮ್ಮ ವಿರುದ್ಧ, ಚೀನಾ ನಮಗೆ ಸಮೀಪ’ ಎಂಬ ನಿರೂಪಣೆಗಳು.
ಆದರೆ ಒಂದು ನೆನಪಿರಲಿ- ಇದೆಲ್ಲ ‘ಯಾರೋ ಈ ನೆಂಟರ ಬದಲಿಗೆ ಆ ನೆಂಟರ ಮನೆಗೆ ಹೋದರು, ಹಾಗಾಗಿ ಒಂದು ನೆಂಟಸ್ತಿಕೆ ಮುಗಿಯಿತು, ಇನ್ನೊಂದು ಹೊಸ ನೆಂಟಸ್ತಿಕೆ ಶುರುವಾಯ್ತು’ ಎನ್ನು ವಂತೆ ತೀರಾ ಬಾಲಿಶ. ಅಮೆರಿಕ ಮತ್ತು ಭಾರತ ಎರಡೂ ದೇಶಗಳಲ್ಲಿ ಪರಸ್ಪರ ಅವಲಂಬನೆಯಿದೆ. ಆ ಅವಲಂಬನೆಯಿಂದ ಅಷ್ಟು ಬೇಗ ವಿಮುಖವಾಗಲು ಸಾಧ್ಯವಿಲ್ಲ. ಇದು ದಶಕಗಳ ಕಾಲ ಬೆಳೆದು ನಿಂತ ಅವಲಂಬನೆ.
ಅಮೆರಿಕದಿಂದ ಸೈನ್ಯ ಸಲಕರಣೆಗಳು, ಇಲೆಕ್ಟ್ರಿಕ್ ಸಾಮಾನುಗಳು ಇತ್ಯಾದಿ 40 ಬಿಲಿಯನ್ ಡಾಲರ್ ನಷ್ಟು ಮೌಲ್ಯದ್ದು ಭಾರತಕ್ಕೆ ಆಮದಾಗುತ್ತವೆ. ಭಾರತದಿಂದ ಔಷಧಿಗಳು, ವಜ್ರ, ಮುತ್ತು, ರಾಸಾ ಯನಿಕಗಳು ಇತ್ಯಾದಿ ಸುಮಾರು 77 ಬಿಲಿಯನ್ ಡಾಲರ್‌ನಷ್ಟು ಮೌಲ್ಯದ್ದು ಅಮೆರಿಕಕ್ಕೆ ಬರುತ್ತವೆ. ಒಂದು ಬಿಲಿಯನ್ ಡಾಲರ್ ಎಂದರೆ ಹತ್ತಿರತ್ತಿರ 88 ಸಾವಿರ ಕೋಟಿ ರುಪಾಯಿ. ಅದು ಬಿಟ್ಟು ಭಾರತವು 45 ಬಿಲಿಯನ್ ಡಾಲರ್‌ನಷ್ಟು ಐಟಿ-ಬಿಟಿ ಸೇವೆಯನ್ನು ರಫ್ತು ಮಾಡುತ್ತದೆ.
ಇಷ್ಟೊಂದು ಪ್ರಮಾಣದ ವ್ಯವಹಾರದಲ್ಲಿ ಬದಲಾವಣೆಯಾದರೆ ಅದರ ಪರಿಣಾಮವನ್ನು ಎರಡೂ ದೇಶಗಳು ಅನುಭವಿಸಬೇಕಾಗುತ್ತದೆ. ಅಲ್ಲದೆ ಚೀನಾದ ಜತೆ ಗಡಿ ಸಮಸ್ಯೆಯಿದೆ. ಚೀನಾ ಯಾವತ್ತೂ ನಂಬಲರ್ಹ ದೇಶವಾಗಿಲ್ಲ. ಅಲ್ಲಿಂದಿಲ್ಲಿಗೂ ಭಾರತದ ಕತ್ತು ಕೊಯ್ದದ್ದೇ ಜಾಸ್ತಿ. ಅದು ಗಡಿಯ ವಿಚಾರವಿರಬಹುದು ಅಥವಾ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿರಬಹುದು.
ಯಾವುದೇ ಸಮಸ್ಯೆಯಾದಾಗ, ಭಾರತ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಹೊರಟಾಗ, ಚೀನಾ ಪಾಕಿಸ್ತಾನದ ಹಿಂದೆ ನಿಂತದ್ದೇ ಜಾಸ್ತಿ. ಅಲ್ಲಿಂದಿಲ್ಲಿಯವರೆಗೂ ಭಾರತದ ಜತೆಯಲ್ಲಿಯೇ ನಿಂತದ್ದು ರಷ್ಯಾ ಮಾತ್ರ. ಚೀನಾದ ಆಕ್ರಮಣಕಾರಿ ರಾಜಕಾರಣ, ಭಾರತವನ್ನು, ನಮ್ಮ ದ್ವೀಪಗಳನ್ನು ಒತ್ತುವರಿ ಮಾಡಿಕೊಳ್ಳಲು ಅದು ಪ್ರಯತ್ನಿಸಿದ್ದು ಇವೆಲ್ಲವನ್ನೂ ಅಷ್ಟು ಬೇಗ ಮರೆತರೆ ಮೂರ್ಖತನವಾದೀತು.
ಅರುಣಾಚಲ ಪ್ರದೇಶವನ್ನು ಚೀನಾ ‘ಇದು ದಕ್ಷಿಣ ಟಿಬೆಟ್, ನನ್ನದೇ ಜಾಗ’ ಎಂದು ಹೇಳಿಕೊಂಡು ಕೆಲವು ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿದೆ. ಅಕ್ಸಾಯ್ ಚಿನ್ ಮತ್ತು ಉತ್ತರಾಖಂಡ, ಹಿಮಾಚಲ ಪ್ರದೇಶದ ಬರಹೋಟಿ, ಶಿಪ್ಕಿ ಮೊದಲಾದ ಜಾಗವೂ ತನ್ನದೇ ಎನ್ನುತ್ತಿದೆ. ಇದೆಲ್ಲ ಬೆಳವಣಿಗೆಯನ್ನು ಕಂಡು ದೇಶಗಳ ನಡುವೆ ‘ಮನುಷ್ಯಸದೃಶ’ ಸಂಬಂಧವನ್ನು ಆರೋಪಿಸಿ ನೋಡಿದರೆ ನಮಗೆ ಸ್ಥೂಲ ಚಿತ್ರಣದ ಸ್ಪಷ್ಟತೆ ಸಾಧ್ಯವಾಗುವುದಿಲ್ಲ.
ಇಂಥ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ರಾಜಕೀಯ ದಿಶೆಯನ್ನು, ಸಂಬಂಧವನ್ನು ಬದಲಿಸ ಬಹುದು. ಆದರೆ ಇದೆಲ್ಲ ಒಂದೆರಡು ದಿನಗಳಲ್ಲಿ ಬದಲಾಗುವುದಿಲ್ಲ. ಹಾಗಾಗಿ ಈ ರೀತಿಯ ಅಂತಾ ರಾಷ್ಟ್ರೀಯ ಬೆಳವಣಿಗೆಯಾದಾಗ ಮಾಧ್ಯಮದ ನಿರೂಪಣೆಗಳಿಗೆ ಅನುಗುಣವಾಗಿ ನಾವು ಜನಸಾಮಾನ್ಯರು ಮುಂಗಾಲು ಹುಲಿಯಪ್ಪನಂತೆ ಆತುರ ಬಿದ್ದು ಪ್ರತಿಕ್ರಿಯಿಸಬೇಕಿಲ್ಲ, ಪ್ರೀತಿಸ ಬೇಕಿಲ್ಲ, ದ್ವೇಷಿಸಬೇಕಿಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಯಾರು ಯಾರಿಗೂ ಸ್ನೇಹಿತರಲ್ಲ- ಅಲ್ಲಿ ಎಲ್ಲವನ್ನೂ ನಿರ್ಧರಿಸುವುದು ದೇಶದ ಆ ಸಮಯದ ವ್ಯಾಪಾರ- ವ್ಯವಹಾರಗಳ ಹಿತಾಸಕ್ತಿ ಮಾತ್ರ. ಬಾಕಿದೆಲ್ಲ ನಾನ್ಸೆನ್ಸ್!