ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Vijay Darda Column: ಭಾರತ-ಅಮೆರಿಕ ಸಂಬಂಧ ಹಳಿಗೇರಿಸುವರೇ ಹೊಸ ರಾಯಭಾರಿ ?

2021ರ ಜನವರಿಯಲ್ಲಿ ಕೆನೆತ್ ಜಸ್ಟರ್ ನಿರ್ಗಮನದ ಬಳಿಕ 2023ರ ಏಪ್ರಿಲ್‌ನಲ್ಲಿ ಎರಿಕ್ ಗಾರ್ಸೆಟಿ ಬರುವವರೆಗೆ ಭಾರತದಲ್ಲಿ ಅಮೆರಿಕದ ರಾಯಭಾರಿಯ ಹುದ್ದೆ ಖಾಲಿಯಿತ್ತು. ಅದಕ್ಕೆ ಕಾರಣವೇನು ಎಂಬುದು ಬಹಳ ಸಂಕೀರ್ಣ ವಿಷಯ. ಜೋ ಬೈಡೆನ್ ಅವರು ಎರಿಕ್ ಗಾರ್ಸೆಟಿಯ ಹೆಸರು ಅಂತಿಮ ಗೊಳಿಸಿದ್ದರೂ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದ ಪರಿಣಾಮ ಅವುಗಳ ತನಿಖೆ ಸುದೀರ್ಘ ಸಮಯ ತೆಗೆದುಕೊಂಡಿತು.

ಸಂಗತ

ಡಾ.ವಿಜಯ್‌ ದರಡಾ

ಭಾರತಕ್ಕೆ ಅಮೆರಿಕ ಹೊಸ ರಾಯಭಾರಿಯನ್ನು ನೇಮಿಸಿದೆ. ಅವರ ಹೆಸರು ಸೆರ್ಗಿಯೋ ಗೋರ್. ಡೊನಾಲ್ಡ್ ಟ್ರಂಪ್ ಅವರ ಆಪ್ತರ ತಂಡದಲ್ಲಿ ಈತ ಬಹಳ ಪವರ್ ಫುಲ್ ಮನುಷ್ಯ. ತೆರಿಗೆ ಯುದ್ಧದಲ್ಲಿ ಇವರಿಂದ ಭಾರತಕ್ಕೇನಾದರೂ ಅನುಕೂಲ ಆಗಬಹುದೆ? ಟ್ರಂಪ್‌ರಿಂದ ಹದೆಗೆಟ್ಟಿರುವ ಸಂಬಂಧವನ್ನು ಈತ ಸುಧಾರಿಸಬಹುದೇ ?

ದಿಲ್ಲಿ ದೂರ್ ಹೈ!

ಇದು ಬಹಳ ಪ್ರಸಿದ್ಧ ನುಡಿಗಟ್ಟು. ಅಮೆರಿಕಕ್ಕೂ ದೆಹಲಿ ಬಹಳ ದೂರದಲ್ಲೇ ಇದೆಯೇ? ಈ ಪ್ರಶ್ನೆ ಏಕೆ ಈಗ ಕೇಳಬೇಕಾಗಿ ಬಂದಿದೆ ಅಂದರೆ, ಭಾರತಕ್ಕೆ ಹೊಸತಾಗಿ ನೇಮಕಗೊಂಡ ಅಮೆರಿಕದ ರಾಯಭಾರಿ ದೆಹಲಿಗೆ ಬಂದು ತಲುಪುವುದಕ್ಕೆ ಬರೋಬ್ಬರಿ ಏಳು ತಿಂಗಳು ತೆಗೆದುಕೊಂಡಿದ್ದಾರೆ!

ಹೌದು, ಅವರನ್ನು ಏಳು ತಿಂಗಳ ಹಿಂದೆಯೇ ಭಾರತದ ರಾಯಭಾರಿಯಾಗಿ ಅಮೆರಿಕ ನೇಮಿಸಿತ್ತು. ಆದರೆ ಇತ್ತೀಚೆಗಷ್ಟೇ ಅವರು ಬಂದು ಅಧಿಕಾರ ಸ್ವೀಕರಿಸಿದ್ದಾರೆ. ಹೀಗಾಗಿ ನಾವು ಇನ್ನೊಂದು ನಾಣ್ಣುಡಿ ನೆನಪು ಮಾಡಿಕೊಳ್ಳುವುದು ಒಳ್ಳೆಯದು. ಬೆಟರ್ ಲೇಟ್ ದ್ಯಾನ್ ನೆವರ್! ಕೊನೆಗೂ ಬಂದರಲ್ಲ! ಬರದೇ ಇರುವುದಕ್ಕಿಂತ ತಡವಾಗಿ ಬರೋದಾದರೂ ಒಳ್ಳೆಯದೇ. ಅವರು ಬಂದಾದ ಮೇಲೆ ಇನ್ನೊಂದು ಪ್ರಶ್ನೆ ಎದ್ದಿದೆ. ಹೊಸ ರಾಯಭಾರಿ ಸೆರ್ಗಿಯೋ ಗೋರ್ ಭಾರತ ಮತ್ತು ಅಮೆರಿಕದ ನಡುವೆ ಹಳಸಿರುವ ಸಂಬಂಧವನ್ನು ಮರುಸ್ಥಾಪನೆ ಮಾಡುತ್ತಾರೆಯೇ? ಭಾರತಕ್ಕೆ ರಾಯಭಾರಿಯನ್ನು ನೇಮಕ ಮಾಡುವಲ್ಲಿ ಈ ಹಿಂದೆಯೂ ಅಮೆರಿಕ ಕೆಲವೊಮ್ಮೆ ಬಹಳ ವಿಳಂಬ ಮಾಡಿದ ನಿದರ್ಶನಗಳಿವೆ. ಆದರೆ ಈ ಬಾರಿ ಅದು ಹೆಚ್ಚು ಮಹತ್ವ ಪಡೆದಿದೆ, ಏಕೆಂದರೆ, ಈ ಹಿಂದೆ ಭಾರತ-ಅಮೆರಿಕ ನಡುವೆ ಉತ್ತಮ ಬಾಂಧವ್ಯವಿತ್ತು.

ಅದು ಈಗ ಹಳಸಿದೆ. ಅಮೆರಿಕವೀಗ ಎಲ್ಲಾ ದೇಶಗಳದ್ದೂ ನಂಬಿಕೆ ಕಳೆದುಕೊಂಡಿದೆ. ಭಾರತ ಕೂಡ ಅಮೆರಿಕವನ್ನು ಮೊದಲಿನಂತೆ ನಂಬುತ್ತಿಲ್ಲ. ಹೀಗಾಗಿ ಸೆರ್ಗಿಯೋ ಗೋರ್ ಮೇಲಿನ ಜವಾಬ್ದಾರಿಯ ಭಾರ ಹೆಚ್ಚಾಗಿದೆ.

ಇದನ್ನೂ ಓದಿ: Dr Vijay Darda Column: ತೈವಾನ್‌ ಮೇಲೆ ಯುದ್ದ ಸಾರಲಿದೆಯೇ ಚೀನಾ ?

2021ರ ಜನವರಿಯಲ್ಲಿ ಕೆನೆತ್ ಜಸ್ಟರ್ ನಿರ್ಗಮನದ ಬಳಿಕ 2023ರ ಏಪ್ರಿಲ್‌ನಲ್ಲಿ ಎರಿಕ್ ಗಾರ್ಸೆಟಿ ಬರುವವರೆಗೆ ಭಾರತದಲ್ಲಿ ಅಮೆರಿಕದ ರಾಯಭಾರಿಯ ಹುದ್ದೆ ಖಾಲಿಯಿತ್ತು. ಅದಕ್ಕೆ ಕಾರಣವೇನು ಎಂಬುದು ಬಹಳ ಸಂಕೀರ್ಣ ವಿಷಯ. ಜೋ ಬೈಡೆನ್ ಅವರು ಎರಿಕ್ ಗಾರ್ಸೆಟಿಯ ಹೆಸರು ಅಂತಿಮಗೊಳಿಸಿದ್ದರೂ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದ ಪರಿಣಾಮ ಅವುಗಳ ತನಿಖೆ ಸುದೀರ್ಘ ಸಮಯ ತೆಗೆದುಕೊಂಡಿತು.

ಹೀಗಾಗಿ ಆತ ಭಾರತಕ್ಕೆ ಬಂದು ಅಧಿಕಾರ ಸ್ವೀಕರಿಸಲು ವರ್ಷಗಳೇ ಹಿಡಿಯಿತು. ತನಿಖೆಗೆ ಅಷ್ಟೊಂದು ಸಮಯ ಬೇಕಾಗಿತ್ತು ಅಂದರೆ ಮತ್ತು ಗಾರ್ಸೆಟಿ ಮೇಲೆ ಗಂಭೀರ ಆರೋಪಗಳಿದ್ದಿದ್ದರೆ ಬೇರೊಬ್ಬರನ್ನು ನೇಮಕ ಮಾಡಲು ಸಾಧ್ಯವಿರಲಿಲ್ಲವೇ? ಇದನ್ನೇ ಅಮೆರಿಕದ ಸಂಸದ ಮಾರ್ಕ್ ವಾರ್ನರ್ ಕೇಳಿದ್ದರು.

ಒಂದೆಡೆ ನಾವು ಭಾರತದ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳಬೇಕು ಎಂದು ಮಾತನಾಡುತ್ತೇವೆ, ಇನ್ನೊಂದೆಡೆ ಆ ದೇಶಕ್ಕೆ ಒಬ್ಬ ರಾಯಭಾರಿ ನೇಮಿಸದೆ ದೆಹಲಿಯಲ್ಲಿನ ಕುರ್ಚಿ ಖಾಲಿ ಬಿಡುತ್ತೇವೆ, ಹೀಗಾದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದರು. ಕೊನೆಗೆ ತಿಳಿದುಬಂದಿದ್ದು ಏನೆಂದರೆ, ‘ಭಾರತಕ್ಕೆ ನಾವು ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಹೀಗಾಗಿ ಅಲ್ಲಿಗೆ ಒಬ್ಬ ರಾಯಭಾರಿಯನ್ನು ನೇಮಿಸುವುದಕ್ಕೆ ನಮಗೇನೂ ತರಾತುರಿಯಿಲ್ಲ ಎಂಬ ಸಂದೇಶವನ್ನು ರವಾನಿಸಬೇಕೆಂಬ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಜೋ ಬೈಡೆನ್ ಹಾಗೆ ಮಾಡಿದ್ದರಂತೆ!

Screenshot_5 R

ಅದೇನೇ ಇರಲಿ, ಕೊನೆಗೆ ಗಾರ್ಸೆಟಿ ಭಾರತಕ್ಕೆ ರಾಯಭಾರಿಯಾಗಿ ಬಂದು 2025ರ ಮೇ ತಿಂಗಳಲ್ಲಿ ಅವಽ ಪೂರ್ಣಗೊಳಿಸಿದ್ದರು. ಈಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅತ್ಯಂತ ನಂಬಿಕಸ್ಥ ವ್ಯಕ್ತಿಯಾದ ಸೆರ್ಗಿಯೋ ಗೋರ್‌ರನ್ನು ಭಾರತದ ರಾಯಭಾರಿಯಾಗಿ ನೇಮಿಸಿದ್ದಾರೆ. ಆದರೆ ಈ ವ್ಯಕ್ತಿ ಭಾರತಕ್ಕೆ ಬಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲು ಏಳು ತಿಂಗಳು ತೆಗೆದುಕೊಂಡಿದ್ದಾರೆ. ಈ ನಡುವೆ ಚೀನಾ ಸೇರಿದಂತೆ ಅನೇಕ ದೇಶಗಳು 2024ರ ಡಿಸೆಂಬರ್ ಆಸುಪಾಸಿನಲ್ಲಿ ಭಾರತಕ್ಕೆ ಹೊಸ ರಾಯಭಾರಿಗಳನ್ನು ನೇಮಿಸಿವೆ.

ಅದೂ ಕೂಡ ಗೋರ್ ನೇಮಕದ ವಿಳಂಬದ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿದೆ. ಅದಕ್ಕಿಂತ ಹೆಚ್ಚಾಗಿ ಗೋರ್ ಅವರಿಗೆ ಕೇವಲ ಭಾರತದ ಜವಾಬ್ದಾರಿ ಮಾತ್ರ ನೀಡಿಲ್ಲ, ಅದರ ಜೊತೆಗೆ ಅವರು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿ ಕೂಡ ಆಗಿದ್ದಾರೆ. ಇದರರ್ಥ, ಅವರ ಹುದ್ದೆ ತುಂಬಾ ಮಹತ್ವದ್ದು.

ಆದರೆ, ಇನ್ನೂ ಮಹತ್ವದ ಪ್ರಶ್ನೆ ಏನೆಂದರೆ, ಭಾರತದ ಜೊತೆಗಿನ ಅಮೆರಿಕದ ಸಂಬಂಧ ಗೋರ್ ಮುಂದಾಳತ್ವದಲ್ಲಿ ಸುಧಾರಣೆಯಾಗುತ್ತದೆಯೇ? ಎಷ್ಟರಮಟ್ಟಿಗೆ ಉಭಯ ದೇಶಗಳ ನಡುವೆ ಈಗ ಕದಡಿರುವ ನೀರು ತಿಳಿಯಾಗುತ್ತದೆ? ದೆಹಲಿಯಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಅವರು ‘ಅಮೆರಿಕ ಕ್ಕೆ ಎಲ್ಲಾ ದೇಶಗಳಿಗಿಂತ ಭಾರತದ ಜೊತೆಗಿನ ಸಂಬಂಧ ಮುಖ್ಯ. ಹೀಗಾಗಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಸುಧಾರಣೆಗೆ ನಾನು ಗರಿಷ್ಠ ಗಮನ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರ ಈ ಮಾತು ಭಾರತಕ್ಕೆ ಹೊಸ ಆಶಾಕಿರಣದಂತಿದೆ.

ಏಕೆಂದರೆ ಗೋರ್ ಅವರು ಡೊನಾಲ್ಡ್ ಟ್ರಂಪ್‌ರ ಅತ್ಯಂತ ಆಪ್ತ ಅಧಿಕಾರಿ. ಅವರಿಗೆ ಟ್ರಂಪ್ ಜೊತೆಗೆ ನೇರವಾದ ಸಂಪರ್ಕವಿದೆ. ಟ್ರಂಪ್ ಟೀಮ್ ನಲ್ಲಿ ಗೋರ್ ಅತ್ಯಂತ ಪ್ರಭಾವಿ ವ್ಯಕ್ತಿಯೆಂದು ಪರಿಗಣಿಸಲ್ಪಡುತ್ತಾರೆ. ಸ್ವತಃ ಟ್ರಂಪ್ ಕೂಡ ಗೋರ್ ಜೊತೆಗೆ ತಮ್ಮ ಕುಟುಂಬಕ್ಕೆ ನಿಕಟ ಸಂಬಂಧ ವಿರುವ ಬಗ್ಗೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರೇ ಖುದ್ದಾಗಿ ಗೋರ್ ಮೇಲೆ ಹೊಗಳಿಕೆಯ ಮಳೆ ಸುರಿಸಿದ್ದಾರೆ. ಇಷ್ಟೇ ಅಲ್ಲ, ಟ್ರಂಪ್ ಅವರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್‌ಗೆ ಗೋರ್ ಆಪ್ತ ಗೆಳೆಯ. ಹೀಗಾಗಿ, ಭಾರತದ ಜೊತೆಗೆ ಮಧುರವಾದ ಸಂಬಂಧ ಇರಿಸಿಕೊಳ್ಳದೆ ದಕ್ಷಿಣ ಏಷ್ಯಾದಲ್ಲಿ ಚೀನಾ ವನ್ನು ನಿಯಂತ್ರಿಸುವುದು ಅಮೆರಿಕಕ್ಕೆ ಸಾಧ್ಯವಿಲ್ಲ ಎಂಬುದನ್ನು ಟ್ರಂಪ್‌ಗೆ ಗೋರ್ ಮನವರಿಕೆ ಮಾಡಿಕೊಡುವ ಎಲ್ಲಾ ಸಾಧ್ಯತೆಗಳೂ ಇವೆ.

ಇನ್ನು, ಭಾರತವಂತೂ ನಾನಾ ಜಾಗತಿಕ ಕಾರಣಗಳಿಂದಾಗಿ ಅಮೆರಿಕಕ್ಕೆ ವಿಶ್ವಾಸಾರ್ಹ ಪಾಲುದಾರ ನಾಗುವ ಎಲ್ಲಾ ಅರ್ಹತೆ ಹೊಂದಿದೆ. ಹಾಗೆ ನೋಡಿದರೆ ಕಳೆದ ಒಂದು ದಶಕದಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಬಹಳ ಸುಧಾರಿಸಿತ್ತು. ಎರಡೂ ದೇಶಗಳು ಪರಸ್ಪರರನ್ನು ಸಾಕಷ್ಟು ಗೌರವದಿಂದ ನೋಡುತ್ತಾ, ವ್ಯಾಪಾರ ವ್ಯವಹಾರಗಳ ಪಾಲುದಾರಿಕೆಯನ್ನು ಕೂಡ ಹೆಚ್ಚಿಸಿಕೊಂಡಿದ್ದವು.

ಆದರೆ ಟ್ರಂಪ್ ಬಂದ ಮೇಲೆ ಈ ಸಂಬಂಧ ಹಳ್ಳ ಹಿಡಿದಿದೆ. ಹೀಗಾಗಿ ಗೋರ್ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಆದರೂ ಗೋರ್ ಈ ವಿಷಯದಲ್ಲಿ ಯಶಸ್ಸು ಕಾಣುತ್ತಾರೆಂದು ನನಗೆ ನಂಬಿಕೆಯಿದೆ. ಏಕೆಂದರೆ ಈ ಮನುಷ್ಯ ಅಸಾಧ್ಯವಾದುದನ್ನು ಕೂಡ ಸಾಧ್ಯವಾಗಿಸುವ ಚಾಕಚಕ್ಯತೆ ಹೊಂದಿ ದ್ದಾರೆ. ಇವರಿಗೆ ಭಾರತದ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ಅರಿವಿದೆ. ಭಾರತವು ಸ್ನೇಹಕ್ಕೆ ತುಂಬಾ ಮಹತ್ವ ನೀಡುತ್ತದೆ ಎಂಬುದು ಗೋರ್‌ಗೆ ಗೊತ್ತಿದೆ.

ಚುನಾವಣೆಯ ವೇಳೆ ಟ್ರಂಪ್‌ಗೆ ಭಾರತ ಹೇಗೆ ಬೆಂಬಲ ನೀಡಿತ್ತು ಎಂಬುದನ್ನು ಅವರೇ ಬಹಿರಂಗ ವಾಗಿ ನೆನಪಿಸಿಕೊಂಡಿದ್ದಾರೆ. ಭಾರತ ಮತ್ತು ಅಮೆರಿಕದ ನಡುವೆ ವಾಣಿಜ್ಯ ಸಂಬಂಧ ಇನ್ನಷ್ಟು ವಿಸ್ತರಿಸಿದರೆ ಎರಡೂ ದೇಶಕ್ಕೆ ಲಾಭವಿದೆ ಎಂಬುದು ಮೃದು ಸ್ವಭಾವದ ಗೋರ್‌ಗೆ ತಿಳಿದಿದೆ. ಭಾರತ ಮತ್ತು ಅಮೆರಿಕದ ಪ್ರಜೆಗಳ ನಡುವೆ ನಿಜವಾದ ಸ್ನೇಹಶೀಲ ಸಂಬಂಧವಿರಬೇಕು ಎಂಬ ಭಾವನೆ ಯನ್ನೇ ಅವರು ಹೊಂದಿದ್ದಾರೆ.

ಒಂದು ಸಂಗತಿಯಂತೂ ನಿಜ. ಯಾವುದೇ ದೇಶದ ರಾಯಭಾರಿ ತಾನು ಕೆಲಸ ಮಾಡುವ ದೇಶ ದಲ್ಲಿದ್ದುಕೊಂಡು ತನ್ನ ಮಾತೃದೇಶದ ಹಿತಾಸಕ್ತಿಯನ್ನು ಕಾಪಾಡುವ ಕುರಿತೇ ಸದಾ ಯೋಚಿಸು ತ್ತಾನೆ. ಅಂದರೆ ಭಾರತದಲ್ಲಿದ್ದುಕೊಂಡು ಸೆರ್ಗಿಯೋ ಗೋರ್ ಕೂಡ ಅಮೆರಿಕದ ಹಿತವನ್ನು ಕಾಪಾಡುವ ಕೆಲಸ ಮಾಡುತ್ತಾರೆಯೇ ಹೊರತು ಭಾರತದ ಹಿತ ಕಾಪಾಡುವ ತಲೆನೋವನ್ನು ಅವರೇನೂ ತೆಗೆದುಕೊಳ್ಳುವುದಿಲ್ಲ.

ಮೇಲಾಗಿ ಈ ವ್ಯಕ್ತಿ ಡೊನಾಲ್ಡ್ ಟ್ರಂಪ್ ಅವರ ‘ಅಮೆರಿಕ ಮೊದಲು ಎಂಬ ನೀತಿಯ ಕಟ್ಟರ್ ಬೆಂಬಲಿಗ. ಗ್ರೀನ್‌ಲ್ಯಾಂಡನ್ನು ವಶಪಡಿಸಿಕೊಳ್ಳುವ ಬಗ್ಗೆ ಟ್ರಂಪ್ ಮಾತನಾಡುವಾಗ ಮತ್ತು ಕೆಲವೇ ದಿನಗಳ ನಂತರ ಡೊನಾಲ್ಡ್ ಟ್ರಂಪ್ ಜೂನಿಯರ್ ಗ್ರೀನ್‌ಲ್ಯಾಂಡ್ ಗಡಿಗೆ ಭೇಟಿ ನೀಡುವಾಗ ಇಬ್ಬರ ಜೊತೆಗೂ ಗೋರ್ ಇದ್ದರು. ನಾನೇಕೆ ಈ ಘಟನೆಯನ್ನಿಲ್ಲಿ ಉಲ್ಲೇಖಿಸಿದೆ ಅಂದರೆ, ಸೆರ್ಗಿಯೋ ಗೋರ್ ಡೊನಾಲ್ಡ್ ಟ್ರಂಪ್ ಮತ್ತು ಅವರ ಮಗನಿಗೆ ಎಷ್ಟು ಹತ್ತಿರದವರು ಹಾಗೂ ಭಾರತದಲ್ಲಿ ದ್ದರೂ ಇವರ ಹೃದಯ ಹೇಗೆ ಅಮೆರಿಕಕ್ಕಾಗಿ ತುಡಿಯುತ್ತಿರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವುದಕ್ಕೆ. ಗೋರ್ ಹೀಗೆ ಇರುವುದರಲ್ಲಿ ತಪ್ಪೇನಿಲ್ಲ.

ಎಲ್ಲರೂ ಅವರವರ ದೇಶವನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. ಆದರೆ, ಭಾರತದಲ್ಲಿನ ಅಮೆರಿಕದ ರಾಯಭಾರಿಯಾಗಿದ್ದುಕೊಂಡು ಎರಡೂ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವ ಕಾರ್ಯದಲ್ಲಿ ಯಶಸ್ವಿಯಾಗಬೇಕು ಅಂದರೆ ಅವರಿಗೆ ಭಾರತದ ಹಿತಾಸಕ್ತಿಗಳು ಏನು ಎಂಬುದರ ಅರಿವು ಕೂಡ ಇರಬೇಕು.

ಅಮೆರಿಕದ ಇತ್ತೀಚಿನ ಆಟಗಳನ್ನು ನೋಡಿ ಭಾರತೀಯರು ಬೇಸತ್ತಿದ್ದಾರೆ. ಒಂದು ಕಾಲದಲ್ಲಿ ನಾವು ವಿಶ್ವಾಸದಿಂದ ಕಂಡಿದ್ದ ಅಮೆರಿಕ ಈಗ ನಮ್ಮ ಜೊತೆಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತಿದೆ ಯೇ ಎಂದು ಭಾರತೀಯರು ಪ್ರಶ್ನಿಸುತ್ತಿದ್ದಾರೆ. ಅಮೆರಿಕ ಏಕೆ ಇಂದು ಪಾಕಿಸ್ತಾನದ ಪರ ನಿಂತಿದೆ? ರಷ್ಯಾದಿಂದ ಚೀನಾ ತೈಲ ಖರೀದಿಸುತ್ತಿದೆ, ಯುರೋಪಿಯನ್ ದೇಶಗಳು ಗ್ಯಾಸ್ ಖರೀದಿಸುತ್ತಿವೆ ಮತ್ತು ಸ್ವತಃ ಅಮೆರಿಕವೇ ಯುರೇನಿಯಂ ಖರೀದಿಸುತ್ತಿದೆ.

ಆದರೆ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ ಎಂಬ ನೆಪ ಹೇಳಿ ಭಾರತದ ಮೇಲಷ್ಟೇ ಏಕೆ ಟ್ರಂಪ್ ತೆರಿಗೆ ಯುದ್ಧ ನಡೆಸುತ್ತಿದ್ದಾರೆ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತಕ್ಕೆ 500% ತೆರಿಗೆ ವಿಧಿಸುವ ಎಚ್ಚರಿಕೆ ಕೂಡ ನೀಡುತ್ತಿದ್ದಾರೆ. ಅಂದರೆ ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಯಿರುವ ದೇಶವನ್ನು ಅವರು ಬೆದರಿಸಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೂ ಸೆರ್ಗಿಯೋ ಗೋರ್ ಉತ್ತರ ಕಂಡುಕೊಳ್ಳಬೇಕು.

ಬಳಿಕ ಟ್ರಂಪ್‌ಗೆ ಭಾರತದ ದೃಷ್ಟಿಕೋನವೇನು ಎಂಬುದನ್ನು ತಿಳಿ ಹೇಳಬೇಕು. ಆಗ ಮಾತ್ರ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಪುನಃ ಸಿಹಿ ಸುರಿಯಲು ಗೋರ್‌ಗೆ ಸಾಧ್ಯವಾದೀತು. ಭಾರತದ ಶುಭ ಹಾರೈಕೆಗಳಂತೂ ಅವರ ಜೊತೆಗೆ ಇದ್ದೇ ಇರುತ್ತವೆ.

ಡಾ.ವಿಜಯ್‌ ದರಡಾ

View all posts by this author