ಪದಸಾಗರ
ಲಗೇ ರಹೋ ಮುನ್ನಾ ಭಾಯ್ ಸಿನಿಮಾ. ಮುಂಬೈಯ ಗೂಂಡಾ ಮುನ್ನಾಭಾಯಿಯನ್ನು ಎಫ್ʼಎಮ್ ಚಾನೆಲ್ಲಿನ ನಿರೂಪಕಿ ಜಾಹ್ನವಿ ತನ್ನ ಧ್ವನಿಯಿಂದಲೇ ಮೋಡಿ ಮಾಡಿ ಗೆದ್ದಿದ್ದಾಳೆ. ಆಕೆ ನೋಡೋಕೆ ಹೇಗಿದ್ದಾಳೆ ಅಂತಲೇ ಗೊತ್ತಿಲ್ಲದಿದ್ದರೂ ಆಕೆಯ ಮಾತುಗಾರಿಕೆ ಮತ್ತು ಕಂಠದಿಂದ ಮುನ್ನಾಭಾಯಿಗೆ ಒಂಥರಾ ಲವ್ವಾಗಿ ಹೋಗಿದೆ.
ಪ್ರತಿದಿನ ಸಮುದ್ರದ ದಂಡೆ ಮೇಲೆ ರೇಡಿಯೋ ಇಟ್ಕೊಂಡು ಅವಳ ಕಾರ್ಯಕ್ರಮ ಕೇಳುತ್ತಾ ಆಕೆಯ ಭೇಟಿಗಾಗಿ ಹಂಬಲಿಸುತ್ತಿರುವ ಮುನ್ನಾಭಾಯಿಗೆ ಆ ಅದೃಷ್ಟವೂ ಒಲಿದು ಬಂದು ಬಿಡುತ್ತದೆ. ಗಾಂಧೀಜಿ ಬಗ್ಗೆ ಆಕೆ ನಡೆಸುವ ರೇಡಿಯೋ ಕ್ವಿಜ್ ಕಾರ್ಯಕ್ರಮ ಗೆದ್ದ ಮುನ್ನಾಭಾಯಿಗೆ ಆಕೆಯೊಂದಿಗೆ ಸಂದರ್ಶನಕ್ಕಾಗಿ ಕೂರುವ ಅವಕಾಶ ಲಭಿಸುತ್ತದೆ. ರೌಡಿಸಂ ಭಾಷೆ ಮಾತ್ರ ಗೊತ್ತಿರುವ ಮುನ್ನಾಭಾಯಿ, ರೇಡಿಯೋ ನಿರೂಪಕಿ ಜೊತೆಯೂ ಹಾಗೆಯೇ ಮಾತಾಡುವುದು ಸರಿಯೇ? ಅದರಲ್ಲೂ ಆಕೆಯ ಮೇಲೆ ಆಕರ್ಷಣೆ ಹೊಂದಿರುವವ ಹಾಗೇನಾದರೂ ರೌಡಿಸಂ ಭಾಷೆಯ ಮಾತನಾಡಿದರೆ ಮೊದಲ ಹೆಜ್ಜೆಯ ಆಕೆಯ ಕಣ್ಣಲ್ಲಿ ಅಗ್ಗವಾಗಿ ಹೋಗೋದಿಲ್ಲವೇ? ಹೀಗಾಗಿ ಆತನ ಗೆಳೆಯ ಬುದ್ಧಿ ಹೇಳ್ತಾನೆ.
‘ಭಾಯ್.. ಆಕೆಯ ಜೊತೆ ಮಾತಾಡುವಾಗ ಧ್ವನಿಯಂದು ತೂಕ ಇರಲಿ, ಮಾತಿನಲ್ಲಿ ವಿನಮ್ರತೆ ಇರಲಿ, ಖಾಲಿಪೀಲಿ ಪದಗಳನ್ನೆಲ್ಲ ಬಳಸಬೇಡ, ಮಾತಿನ ಮಧ್ಯ ದೊಡ್ಡ ದೊಡ್ಡ ಪದಗಳನ್ನು ಬಳಸು. ಆಗ ನಿನ್ನ ಬಗ್ಗೆ ಗೌರವ ಬರುತ್ತೆ..’! ಸಿನಿಮಾದಲ್ಲಿ ಬಹಳ ಕಾಮಿಡಿಯಾಗಿ ಸಾಗುವ ಈ ದೃಶ್ಯ, ಹಲವು ಬಾರಿ ನನ್ನನ್ನು ಚಿಂತನೆಗೆ ಒಳಪಡಿಸಿದ್ದಿದೆ. ಹೌದಲ್ಲವಾ..? ಧ್ವನಿ ಎಂಬುದು, ಮಾತಿನ ಓಘ, ಏರಿಳಿತ, ಮಾತಿನ ನಡುನಡುವೆ ಕೊಡುವ ಸೂಕ್ತ ವಿರಾಮ, ಬಳಸುವ ಶಕ್ತಿಶಾಲಿ ಪದಗಳು, ಕೋಟ್ ಗಳು, ಕಥೆಗಳು ಎಷ್ಟೊಂದು ಡಿಫರೆನ್ಸ್ ಮಾಡುತ್ತವೆ ಅಲ್ಲವಾ ಅಂತ!
ಇದನ್ನೂ ಓದಿ:Naveen Sagar Column: ಗಾಂಧಿ ನೆಹರೂಗಳ ನಡುವೆ ಕಳೆದುಹೋದ ವೆಂಕಯ್ಯ !
ಭಾರತ ಚಿತ್ರರಂಗವನ್ನೇ ಒಮ್ಮೆ ಗಮನಿಸಿ ನೋಡಿದರೆ ನಮಗೆ ಒಬ್ಬೇ ಒಬ್ಬ ಕೂಡ ಬೇಸ್ ವಾಯ್ಸ್ ಕಾಮಿಡಿಯನ್ ಸಿಗುವುದಿಲ್ಲ. ಯಾಕಂದ್ರೆ ನಮಗೆ ಹಾಸ್ಯ ಅಂದರೆ ಅದು ಕೀರಲು ಧ್ವನಿಯಾತನಿಗೆ ಮೀಸಲಾದ ಸರಕು ಅನಿಸಿಬಿಟ್ಟಿದೆ. ದಪ್ಪ ಧ್ವನಿ ತಂತಾನೇ ನಮ್ಮೊಳಗೆ ಗೌರವ, ಭಯ, ಗಾಂಭೀರ್ಯ ಮೂಡಿಸುತ್ತದೆ. ಹಾಗೊಮ್ಮೆ ಬೇಸ್ ವಾಯ್ಸಿನಲ್ಲಿ ಕಾಮಿಡಿ ಮಾಡಿದರೂ ಅದಕ್ಕೆ ಬೇರೆಯದೇ ಶ್ರೇಷ್ಠತೆ ದಕ್ಕಿಬಿಡುತ್ತದೆ.
ಧ್ವನಿ ಕುರಿತ ನಮ್ಮ ಪೂರ್ವಗ್ರಹವಾ ಇದು? ಗೊತ್ತಿಲ್ಲ. ಈ ಆಲೋಚನೆಗೆ ಮತ್ತೊಮ್ಮೆ ಇತ್ತೀಚೆಗೆ ನನ್ನನ್ನು ಸೆಳೆದದ್ದು ಯಶ್. ಕರ್ನಾಟಕ ಮಾತ್ರವಲ್ಲ ಇಡೀ ಭಾರತ, ಯಶ್ ಅಭಿನಯ ಮತ್ತು ಸಹ ನಿರ್ಮಾಣದ ಟಾಕ್ಸಿಕ್ ಬಗ್ಗೆ ಮಾತನಾಡುತ್ತಿದೆ. ಟಾಕ್ಸಿಕ್ ಪ್ರಚಾರ ಕಾರ್ಯದಲ್ಲಿ ಯಶ್ ಅವರ ಸಾರ್ವಜನಿಕ ಮಾತು, ಸಂದರ್ಶನದಲ್ಲಿ ಕಂಡ ಪ್ರಬುದ್ಧ ನಡವಳಿಕೆಯ ಬಗ್ಗೆ ಪ್ರಶಂಸೆಯ ಮಹಾ ಪೂರವೇ ಹರಿದುಬರುತ್ತಿದೆ. ಆದರೆ ಅದೆಲ್ಲದರ ನಡುವೆ ನನ್ನನ್ನು ಸೆಳೆದದ್ದು ಯಶ್ ಧ್ವನಿ.
ಇಂಥ ಸೂಕ್ಷ್ಮಗಳನ್ನು ಸೂಕ್ತ ವ್ಯಕ್ತಿಯೊಂದಿಗೆ ಹಂಚಿಕೊಂಡರೆ ಖುಷಿ ಅಂತ, ಗೆಳೆಯ ಮತ್ತು ಖ್ಯಾತ ಮಿಮಿಕ್ರಿ ಕಲಾವಿದ ಯೋಗಿಗೌಡರಿಗೆ ಮೆಸೇಜ್ ಹಾಕಿದೆ. ‘ನೀವು ಗಮನಿಸಿದ್ರಾ? ಮಾತಿನ ಶೈಲಿ, ಧ್ವನಿ, ಭಾಷೆ ಈ ಮೂರರ ಮೇಲೂ ಯಶ್ ವಿಪರೀತ ಸೀರಿಯಸ್ಸಾಗಿ ವರ್ಕ್ ಮಾಡಿದ್ದಾನೆ ಅನಿಸೋ ದಿಲ್ವಾ? ರಾಜಾಹುಲಿ, ಕಿರಾತಕ, ಡ್ರಾಮಾ, ಗೂಗ್ಲಿ ಸಿನಿಮಾಗಳ ಸಮಯದ ಯಶ್ ಧ್ವನಿಯೇ ಬೇರೆ. ಈಗ ಟಾಕ್ಸಿಕ್ ಕಾಲದ ಯಶ್ ಧ್ವನಿಯೇ ಬೇರೆ. ಅದರಲ್ಲೊಂದು ಗಡಸುತನ, ಬೇಸ್ ಬಂದಿದೆ. ಮಾತಿನ ಶೈಲಿಯಲ್ಲಿ ಸಂಪೂರ್ಣವಾಗಿ ಸೊಫಿಸ್ಟಿಕೇಶನ್ ಬಂದಿದೆ.
ಕ್ರೈಸಿಸ್ ಇದ್ದ ವ್ಯಕ್ತಿತ್ವದಲ್ಲಿ ಈಗ ಪರಿಪೂರ್ಣತೆ, ಕ್ಲಾರಿಟಿ ಎದ್ದು ಕಾಣುತ್ತಿದೆ. ಒಂದು ಸಾತ್ವಿಕ ಆಟಿಟ್ಯೂಡ್ ಜೊತೆಯ ನಮ್ರತೆ. ಹಿಂದೆಂದೂ ಕಾಣದ ಹೊಸ ಥರದ ತುಂಟನಗು, ತೆರೆಮೇಲಿನ ಭ್ರಮಾಲೋಕದ ಆಚೆ ಒಬ್ಬ ರಿಯಲ್ ಲೈಫ್ ಹೀರೋ ಹೇಗಿರಬೇಕು ಎಂಬ ಪರಿಜ್ಞಾನ ಇವೆಲ್ಲ ಎದ್ದು ಕಾಣುತ್ತಿವೆ’ ಅಂದೆ.
ಯಶ್‌ಗೆ ಇದ್ಯಾವುದೂ ರಾತ್ರೋರಾತ್ರಿ ಒಲಿದಿದ್ದಲ್ಲ. ಈ ಧ್ವನಿ ಅಥವಾ ಮಾತುಗಾರಿಕೆ ಯಶ್ ಪ್ರೆಸ್‌ಮೀಟ್‌ನ ಹಿಂದಿನ ದಿನ ಅಭ್ಯಾಸ ಮಾಡಿಕೊಂಡು ಬಂದಿರುವುದಲ್ಲ. ಆತ ಸಿನಿಮಾಗಾಗಿ ಎಷ್ಟು ತಯಾರಿ ನಡೆಸಿಕೊಂಡು ಬಂದಿದ್ದಾನೋ, ಅಷ್ಟೇ ತಯಾರಿಯನ್ನು ತೆರೆಯಿಂದಾಚೆ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವು ದಕ್ಕೆ ಮಾಡಿದ್ದಾನೆ.
ಟಾಕ್ಸಿಕ್ ಭಾರತೀಯ ಸಿನಿಮಾದ ಅತಿ ದೊಡ್ಡ ಸಿನಿಮಾ ಅಂತ ಜನ ಹೇಳ್ತಿದ್ದಾರೆ. ಆದರೆ ನನ್ನ ಕಣ್ಣಿಗೆ ‘ಯಶ್’ನ ಜೀವನಗಾಥೆ ಅದಕ್ಕಿಂತ ದೊಡ್ಡದಾಗಿ ಕಾಣುತ್ತಿದೆ. ನೆರೆಯ ರಾಜ್ಯಗಳವರಿಗೆ, ಯಶ್ ಕೆಜಿಎಫ್ ಸಿನಿಮಾದಿಂದಾಗಿ ರಾತ್ರೋರಾತ್ರಿ ಬೆಳೆದುಬಿಟ್ಟ ಎಂದು ಅನಿಸಿರಬಹುದು. ಆದರೆ ಕರ್ನಾಟಕದ ಜನತೆಗೆ ಕಿರುತೆರೆಯ ಚಿಕ್ಕ ಪುಟ್ಟ ಪಾತ್ರದಿಂದ ಟಾಕ್ಸಿಕ್ ಎಂಬ ಗ್ಲೋಬಲ್ ಸಿನಿಮಾದ ತನಕ ಬೆಳೆದ ಯಶ್ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಾಗಿದ್ದೂ ಜನರ ಗಮನಕ್ಕೆ ಬಂದಿರುವುದು ‘ನಟ ಯಶ್’ನ ಬೆಳವಣಿಗೆಯೇ ಹೊರತು ಯಶ್ ಎಂಬ ವ್ಯಕ್ತಿತ್ವದ ಬೆಳವಣಿಗೆ ಅಲ್ಲ.
ಯಶ್ ಇಂದು ಸಾರ್ವಜನಿಕ ಭಾಷಣದಲ್ಲಿ ನಿರರ್ಗಳವಾಗಿ ಹಿಂದಿ, ತೆಲುಗು, ತಮಿಳು, ಇಂಗ್ಲಿಷ್ ಹಾಗೂ ಮಲಯಾಳಂ ಮಾತನಾಡುತ್ತಿದ್ದಾನೆ ಅಂದರೆ ಅದು ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರಿಂದ ಒಲಿದ ವಿದ್ಯೆ ಅಲ್ಲ. ಅದರ ಹಿಂದೆ ಆತನ ಸತತ ಪರಿಶ್ರಮ, ಶ್ರದ್ಧೆ, ಆಸಕ್ತಿ, ಹಟ ಇದೆ. ಆಯಾ ನೆಲದ ಭಾಷೆ ಮಾತಾಡಿ ಜನಮನ ಗೆಲ್ಲುತ್ತೇನೆ.
ಸಿನಿಮಾದಲ್ಲಿ ನಾನೇ ಡಬ್ ಮಾಡಿ ಸೈ ಅನಿಸಿಕೊಳ್ಳುತ್ತೇನೆ ಎಂಬ ಛಲದಿಂದ ವರ್ಷಗಟ್ಟಲೆ ಅಭ್ಯಾಸ ಮಾಡಿ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾನೆ. ಅದೇ ರೀತಿ ಧ್ವನಿ ಕೂಡ. ಇತ್ತೀಚಿನ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ರಜತ್ ಶರ್ಮ ಒಂದು ಪ್ರಶ್ನೆ ಕೇಳಿದ್ದರು. ಈ ಗಡ್ಡದ ಮೇಲೆ ಯಾಕಿಷ್ಟು ವ್ಯಾಮೋಹ ಅಂತ. ಗಡ್ಡದಿಂದ ತನ್ನನ್ನು ದೊಡ್ಡವನೆಂದು ಪರಿಗಣಿಸುತ್ತಾರೆ, ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಮನಗಂಡು ಯಶ್ ಗಡ್ಡ ಬೆಳೆಸುವ ನಿರ್ಧಾರಕ್ಕೆ ಬಂದಿದ್ದ. ಇದನ್ನೇ ಆತ ಧ್ವನಿಗೂ ಅಪ್ಲೈ ಮಾಡಿಕೊಂಡಿದ್ದು.
ಧ್ವನಿಯಲ್ಲಿ ತೂಕ ಇಲ್ಲದಿದ್ದರೆ ತಾನು ಮಾಡುವ ಲಾರ್ಜರ್ ದ್ಯಾನ್ ಲೈಫ್ ಪಾತ್ರಗಳಿಗೆ ನ್ಯಾಯ ಸಿಗುವುದಿಲ್ಲ, ಗ್ಲೋಬಲ್ ಲೆವೆಲ್ಲಲ್ಲಿ ವ್ಯವಹರಿಸುವಾಗ ತನ್ನ ಧ್ವನಿ ಇನ್ನಷ್ಟು ಗಡಸಿರಬೇಕು, ಮುಂದೆ ನಾನು ರಾವಣನ ಪಾತ್ರದೊಳಗೆ ಹೊಗಬೇಕು ಅಂದರೆ ನನ್ನ ಧ್ವನಿ ಗಟ್ಟಿಯಿರಬೇಕು ಎಂಬೆಲ್ಲ ವಿಷಯವನ್ನು ಮನಗಂಡು ತೀವ್ರವಾಗಿ ಧ್ವನಿ ಮೇಲೆ ವರ್ಕ್ ಮಾಡಿದ್ದರಿಂದಲೇ ಇಂದು ಯಶ್ ಧ್ವನಿಗೆ ಬೇರೆಯೇ ಗಾಂಭೀರ್ಯ ದೊರೆತಿದೆ.
ಹಾಗಂತ ಅವನೊಳಗೆ ಅಂದಿನ ಕಿರಾತಕ, ಡ್ರಾಮಾ ಕಾಲದ ಯಶ್ ಇಲ್ವೇ ಇಲ್ವಾ? ಖಂಡಿತಾ ಇದ್ದಾನೆ. ‘ಐಯಾಮ್ ಫ್ರಮ್ ಪಾಂಡವಪುರ, ಯೂ ನೋ ಮೈ ಇಂಗ್ಲೀಷ್ ಯಾ’ ಅಂತ ಮೊನ್ನೆ ಬೆಂಗಳೂರಿನ ಪ್ರೆಸ್ ಮೀಟ್‌ನಲ್ಲಿ ಯಶ್ ಹೇಳಿದ್ದು ಕೇಳಿರಬಹುದು. ಹಳೆಯ ಯಶ್, ಹಳೆಯ ಧ್ವನಿ, ಹಳೆಯ ಗ್ರಾಮ್ಯಶೈಲಿ ಎಲ್ಲವನ್ನೂ ಆತ ಭದ್ರವಾಗಿ ಗಂಟುಮೂಟೆ ಕಟ್ಟಿ ಎತ್ತಿಟ್ಟಿದ್ದಾನೆ. ಅರ್ಥಾತ್ ಆತನ ಬೇರುಗಳು ಭದ್ರವಾಗಿಯೇ ಇವೆ. ಆ ಭದ್ರ ಬೇರುಗಳ ಮೇಲೆ ಬೃಹತ್ತಾಗಿ ಬೆಳೆದಿದ್ದಾನೆ.
ನಿನ್ನೆ ರಂಗಸ್ವಾಮಿ ಮೂಕನಹಳ್ಳಿ ಹೇಳಿದ ಒಂದು ಇಂಗ್ಲಿಷ್ ನಾಣ್ಣುಡಿ ಕೇಳಿದೆ. ‘you are the average of the five people, you closely associated with’! ಅಂದ್ರೆ ನಿನ್ನ ಸುತ್ತ ಇರುವ ಐವರು ವ್ಯಕ್ತಿಗಳ ಸರಾಸರಿ ವ್ಯಕ್ತಿತ್ವ ನಿನ್ನದಾಗುತ್ತದೆ ಅಂತ. ನಾನು ಬರೀ ಋಣಾತ್ಮಕ ಚಿಂತನೆಯ, ನನಗಿಂತ ಕೆಳಮಟ್ಟದ ವಿಚಾರ ವಿರುವ, ಸತ್ವಹೀನ ಮಂದಿಯೊಂದಿಗೆ ಬದುಕುತ್ತಾ ಇದ್ದರೆ, ನಾನೆಂದೂ ಬೆಳೆಯೋದಿಲ್ಲ.
ಬೆಳೆಯಬೇಕು ಅಂದ್ರೆ, ನಮಗಿಂತ ಉನ್ನತ ವಿಚಾರ ಹೊಂದಿರುವ, ಧನಾತ್ಮಕ ಚಿಂತನೆಯ ಮಂದಿಯೊಂದಿಗೆ ಸಖ್ಯ ಬೆಳೆಸಬೇಕು, ಬೆರೆಯಬೇಕು, ಕಂಫರ್ಟ್ ಜೋನ್‌ನ ಹೊರಗೆ ಬಂದು ಹೊಸತನ್ನು ಕಲಿಯಬೇಕು. ಆಗಲೇ ಬೆಳೆಯೋಕೆ ಸಾಧ್ಯ. ಯಶ್ ಮಾಡಿದ್ದೂ ಅದನ್ನೇ. ವರ್ಲ್ಡ್ ಈಸ್ ಮೈ ಟೆರಿಟರಿ ಅಂತ ಕೆಜಿಎಫ್ ಸಿನಿಮಾದಲ್ಲಿ ಒಂದು ಡೈಲಾಗ್ ಇತ್ತು. ಅದನ್ನು ಯಶ್ ನಿಜಜೀವನ ಕ್ಕೆ ಅಳವಡಿಸಿಕೊಳ್ಳಲು ಬಯಸಿದ್ದು ವ್ಯಕ್ತಿತ್ವದ ವಿಚಾರದಲ್ಲಿ.
ಇಲ್ಲಿನ ಹೀರೋಗಳ ಜೊತೆ ಸ್ಟಾರ್ ವಾರ್ ಮಾಡುವ ಚಿಲ್ಲರೆತನದಿಂದ ಆಲೋಚನೆಯಿಂದ ಹೊರಬಂದ, ಅಕ್ಕಪಕ್ಕದ ರಾಜ್ಯದ ನಟರ ಜೊತೆ ಅಥವಾ ಬಾಲಿವುಡ್ ಕಾಲಿವುಡ್ ಎಂಬ ಸ್ಪರ್ಧೆ ಯಿಂದಲೂ ಮೇಲೆ ಹೋದ. ಜಗತ್ತಿನ ಭೂಪಟದಲ್ಲಿ ಇಂಡಿಯನ್ ಸಿನಿಮಾ ಸದ್ದು ಮಾಡಬೇಕು ಎಂಬ ದೊಡ್ಡ ಕ್ಯಾನ್ವಾಸ್ ಬರೆದುಕೊಂಡ. ಅದಕ್ಕಾಗಿ ಆತನ ಪರಿಶ್ರಮ ಬೇರೆಯದ್ದೇ ಇತ್ತು. ಫೆಲ್ಯೂರ್ ನಟರೊಂದಿಗೆ ಬಾರ್ ಒಳಗೆ ಕೂತು ಸಮಾನ ದುಃಖಿಗಳೆಂದು ಬೇಸರವನ್ನು ಎಂಜಾಯ್ ಮಾಡುವ ಮನಸ್ಥಿತಿಯಿಂದ ಮೈಕೊಡವಿ ಎದ್ದ.
ಫ್ರೆಂಡ್ ಸರ್ಕಲ್ ಬದಲಿಸಿಕೊಂಡ. ಗಾಂಧಿನಗರದ ಫಾರ್ಮುಲಾ ಸಿನಿಮಾ ಮಾಡಿದರೆ ಇಲ್ಲಿಗೇ ಸೀಮಿತ ನಾಗಿ ಹೋಗುತ್ತೇನೆ ಎಂದು ಪ್ಯಾನ್ ಇಂಡಿಯಾ ಕನಸುಕಂಡ. ಕನಸನ್ನು ಗುರಿಯಾಗಿ ಬದಲಿಸಿಕೊಂಡು ಹಗಲು ರಾತ್ರಿ ಕೆಲಸ ಮಾಡಿದ. ಕೆಜಿಎಫ್ʼನ ಗೆಲುವಿನ ನಂತರ ಮತ್ತೊಂದು ಕೆಜಿಎಫ್ ಮಾಡಿ ಅದೇ ಪ್ಯಾನ್ ಇಂಡಿಯಾ ಲೆವೆಲ್ಲಲ್ಲಿ ಇರೋದು ಬೇಡ ಅನಿಸಿ, ಗ್ಲೋಬಲ್ ಸಿನಿಮಾದ ರಿಸ್ಕಿಗೆ ರೆಡಿಯಾದ. ನಾನೊಂದು ದಿನ ಜಗತ್ತಿನ ಎಲ್ಲ ಮೀಡಿಯಾಗಳು, ಜಗತ್ತಿನ ಎಲ್ಲ ಸಿನಿಪ್ರೇಕ್ಷಕರು ನೋಡುವಂಥ, ಮಾತನಾಡಿಸುವಂಥ ವ್ಯಕ್ತಿಯಾಗುತ್ತೇನೆ. ಆಗ ನನ್ನನ್ನು ನಾನು ಪ್ರೆಸೆಂಟ್ ಮಾಡಿಕೊಳ್ಳುವುದಕ್ಕೆ ಸಿದ್ಧನಾಗಬೇಕು ಅಂತ ಸಿನಿಮಾದ ಜೊತೆಜೊತೆಗೆ ವ್ಯಕ್ತಿತ್ವ ಕಟ್ಟಿಕೊಳ್ಳುವ ಕೆಲಸ ಶುರುಮಾಡಿಕೊಂಡ.
ಕಳೆದ ಕೆಲವು ವರ್ಷಗಳಿಂದ ಯಶ್ ಆಡುವ ಮಾತನ್ನು, ಅವರು ಕೊಡುವ ದೃಷ್ಟಾಂತಗಳನ್ನು ಗಮನಿಸಿ ದರೆ, ಯಶ್ ಕೈಗೆ ಆ ಪುಸ್ತಕ ಸಿಕ್ಕಿರಬಹುದಾ.. ಆ ಪುಸ್ತಕ ಯಶ್ ಮೇಲೆ ಅಪಾರ ಪ್ರಭಾವ ಬೀರಿರಬಹುದಾ ಅಂತ ಅನಿಸದಿರದು. ಹೌದು, ಲೇಖಕ ಶಿವ್ ಖೇರಾ ಅವರ ಕೃತಿ ‘ಯೂ ಕ್ಯಾನ್ ವಿನ್’ ಯಶ್ ಆಡುವ ಪ್ರತಿ ಮಾತಿನಲ್ಲಿ, ಯಶ್‌ನ ಇಂದಿನ ವ್ಯಕ್ತಿತ್ವದಲ್ಲಿ ಗಾಢವಾಗಿ ಕಾಣಿಸುತ್ತದೆ. ರಾತ್ರೋರಾತ್ರಿ ಸಕ್ಸಸ್ ಕಂಡ ಅಂತ ಹೇಳುವವರಿಗೆಲ್ಲ ಯಶ್ ಸದಾ ಒಂದು ಕತೆ ಹೇಳುತ್ತಿದ್ದ.
‘ಬಿದಿರಿನ ಗಿಡ ನಾಲ್ಕು ವರ್ಷ ನೀವೆಷ್ಟೇ ನೀರು ಗೊಬ್ಬರ ಹಾಕಿದ್ರೂ ನೆಲದ ಮೇಲೆ ಒಂದಡಿ ಎತ್ತರ ಕೂಡ ಬೆಳೆಯೋದಿಲ್ಲ. ಆದರೆ ಆಮೇಲೆ ಐದನೇ ವರ್ಷದಲ್ಲಿ ಏಕಾಏಕಿ ತೊಂಬತ್ತು ಅಡಿ ಎತ್ತರಕ್ಕೆ ಬೆಳೆದು ಬಿಡುತ್ತೆ. ಜನರಿಗೆ ಕಾಣಿಸೋದು ಮಾತ್ರ ಆರೇ ವಾರದಲ್ಲಿ ಇಷ್ಟು ಎತ್ತರ ಬೆಳೆದಿರೋದು. ಆದರೆ ಆ ಗಿಡ ಮೊದಲ ನಾಲ್ಕು ವರ್ಷದಲ್ಲಿ ನೆಲದ ಕೆಳಗೆ ಬೇರು ಬಿಡುತ್ತಾ ಹೋಗಿರುತ್ತದೆ. ಅದು ಯಾರಿಗೂ ಕಾಣಿಸೋ ದಿಲ್ಲ.’ ಯಶ್ ಹೇಳುವ ಈ ಕಥೆ ಯೂ ಕ್ಯಾನ್ ವಿನ್ ಪುಸ್ತಕದ್ದೇ.
ಅದೇ ರೀತಿ ಟೀಕೆಗಳಿಗೆ, ಮನಕುಗ್ಗಿಸುವ ನೆಗೆಟಿವ್ ಮಾತುಗಳಿಗೆ ಕಿವಿ ಕೊಡಬಾರದು ಅಂತ ಜಾರ್ಜ್ ಸ್ಟಿಫನ್‌ಸನ್-ಸ್ಟೀಮ್ ಎಂಜಿನ್ ನ ಕಥೆ ಉದಾಹರಣೆಯಾಗಿ ಮೊನ್ನೆ ಹೈದರಾಬಾದ್ ಕಾರ್ಯಕ್ರಮ ದಲ್ಲಿ ಹೇಳುತ್ತಿದ್ದ. ಯೂ ಕ್ಯಾನ್ ವಿನ್ ಪುಸ್ತಕದ ಪ್ರತಿ ಅಂಶವನ್ನೂ ಯಶ್ ಓದಿ ತನ್ನ ಜೀವನಕ್ಕೆ ಅಳವಡಿಸಿ ಕೊಂಡಿರಬಹುದಾ ಎಂಬ ಗುಮಾನಿ ಮೂಡುತ್ತದೆ. ಏಕೆಂದರೆ ಆ ಪುಸ್ತಕ ತನ್ನ ಸರಳ ಶೈಲಿಯಲ್ಲಿ ಅಷ್ಟು ಪ್ರಭಾವಿಸುವ ಶಕ್ತಿ ಹೊಂದಿದೆ.
ಯಶಸ್ವಿ ವ್ಯಕ್ತಿಗಳು, ಭಿನ್ನವಾದದ್ದೇನನ್ನೋ ಮಾಡುವುದಿಲ್ಲ. ಮಾಡುವ ಕೆಲಸವನ್ನೇ ವಿಭಿನ್ನವಾಗಿ ಮಾಡುತ್ತಾರೆ ಅನ್ನುತ್ತದೆ ಆ ಪುಸ್ತಕದ ಒಂದು ಚಾಪ್ಟರ್. ದೃಷ್ಟಿಕೋನ, ಯಶಸ್ಸಿನ ಸೂತ್ರ, ಆತ್ಮ ವಿಶ್ವಾಸ, ಆತ್ಮಗೌರವ, ಸಂವಹನ ಕೌಶಲ, ಆಲೋಚನೆಗಳನ್ನು ಕ್ರಿಯೆಯಾಗಿ ಬದಲಿಸುವಿಕೆ, ಕನಸನ್ನು ಗುರಿಯಾಗಿ ಬದಲಿಸುವಿಕೆ, ದೂರದರ್ಶಿತ್ವ ಹೀಗೆ ಹಲವು ವಿಚಾರಗಳನ್ನು ಸರಳ ಕಥೆಗಳ ಮೂಲಕ ಹೇಳಿ ವ್ಯಕ್ತಿತ್ವ ಗಟ್ಟಿಗೊಳಿಸುವ ಈ ಪುಸ್ತಕ ಯಶ್ ಜೀವನದಲ್ಲಿ ದೊಡ್ಡ ಪಾತ್ರ ವಹಿಸಿರುವ ಸಾಧ್ಯತೆ ದಟ್ಟವಾಗಿದೆ.
ಪುಸ್ತಕದಿಂದಲೋ, ವ್ಯಕ್ತಿಯಿಂದಲೋ ಅಥವಾ ಬದುಕೆಂಬ ಬದುಕಿಂದಲೋ.. ಹೇಗೋ ಯಶ್ ಇಂದು ಊಹೆಗೂ ಮೀರಿ ಬೆಳೆದು ನಿಂತಿದ್ದಾನೆ ಎಂಬುದು ವಾಸ್ತವ. ಟಾಕ್ಸಿಕ್ ಅದೆಷ್ಟೇ ರೋಚಕ ಹಾಗೂ ಬೃಹತ್ ಸಿನಿಮಾ ಆಗಿರಬಹುದು. ಆದರೆ ಅದು ಯಶ್ ಯಶೋಗಾಥೆಗಿಂತ ದೊಡ್ಡ ದೆನಿಸುತ್ತಿಲ್ಲ. ಟಾಕ್ಸಿಕ್ ಗೆಲ್ಲಬೇಕು ಅನಿಸುತ್ತಿದೆ. ಆದರೆ ಇಂಡಸ್ಟ್ರಿಗಾಗಿ ಅಲ್ಲ, ಕನ್ನಡಿಗರಿಗಾಗಿ ಅಲ್ಲ, ಯಶ್‌ಗಾಗಿಯೂ ಅಲ್ಲ. ನಮಗಾಗಿ. ಯಾಕಂದ್ರೆ ಇಂಥ ಪ್ರೇರಣಾದಾಯಕ ವ್ಯಕ್ತಿತ್ವಗಳು ಸೋತು ಬಿಟ್ಟರೆ ನಾವು ಎದೆಗುಂದಿ ಬಿಡುತ್ತೇವೆ!