ಹೈಸ್ಕೂಲ್ ಮಕ್ಕಳಿಗೆ ಅ, ಆ, ಇ, ಈ ಪಾಠ
ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಓದುತ್ತಾ ಇಂಗ್ಲಿಷ್ ವ್ಯಾಕರಣವನ್ನು ನಿರ್ಭೀತವಾಗಿ ಕಲಿಯ ಬೇಕಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡದ ವರ್ಣಮಾಲೆ ಅ, ಆ, ಇ, ಈ, ಇಂಗ್ಲಿಷ್ ಅಲ್ಫಾಬೆಟ್ ಗಳಾದ ಎ, ಬಿ, ಸಿ, ಡಿಯನ್ನೇ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ ಎನ್ನುವ ಕಳವಳಕಾರಿ ವಿಷಯ ಹೊರ ಬಿದ್ದಿದೆ.


ವೀರೇಶ್ ಎಸ್.ಕೆಂಭಾವಿ, ಯಾದಗಿರಿ
ಎಸ್‌ಎಸ್‌ಎಲ್‌ಸಿವರೆಗೆ ಬಂದರೂ ಕನ್ನಡದ ವರ್ಣಮಾಲೆ ಬಾರದ ವಿದ್ಯಾರ್ಥಿಗಳು
ಒಂದೇ ಶಾಲೆಯಲ್ಲಿ 30 ಮಕ್ಕಳು, ಇನ್ನಷ್ಟು ಶಾಲೆಗಳಲ್ಲಿ ಇಂಥದ್ದೇ ಪರಿಸ್ಥಿತಿ ಸಂಭವ
ಪಾಠದ ಜತೆಗೆ ಬೇಸಿಕ್ ಹೇಳಿಕೊಡುತ್ತಿರುವ ಹೈಸ್ಕೂಲ್ ಶಿಕ್ಷಕರು
ಯಾದಗಿರಿ ಜಿಲ್ಲೆಯ ಫಲಿತಾಂಶ ಹಿನ್ನಡೆಗೆ ಭಾಷಾ ಕಲಿಕೆಯ ಸಮಸ್ಯೆ.
ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಓದುತ್ತಾ ಇಂಗ್ಲಿಷ್ ವ್ಯಾಕರಣವನ್ನು ನಿರ್ಭೀತವಾಗಿ ಕಲಿಯಬೇಕಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡದ ವರ್ಣಮಾಲೆ ಅ, ಆ, ಇ, ಈ, ಇಂಗ್ಲಿಷ್ ಅಲ್ಫಾಬೆಟ್ ಗಳಾದ ಎ, ಬಿ, ಸಿ, ಡಿಯನ್ನೇ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ ಎನ್ನುವ ಕಳವಳಕಾರಿ ವಿಷಯ ಹೊರ ಬಿದ್ದಿದೆ.
ಜಿಲ್ಲೆಯ ಕೆಂಭಾವಿ ಪಟ್ಟಣದ ಬಾಲಕರ ಪ್ರೌಢಶಾಲೆಯ ಶಿಕ್ಷಕರಿಗೆ, ಶಿಕ್ಷಣ ಇಲಾಖೆಯ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (DIK) ಕಾರ್ಯಕ್ರಮದಡಿ ಓದಲು ಬರೆಯಲು ಬಾರದ ವಿದ್ಯಾರ್ಥಿ ಗಳನ್ನು ಗುರುತಿಸುವುದರ ಜತೆಗೆ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಕಳಪೆ ಸಾಧನೆಗೆ ಕಾರಣವೇನು ಎಂಬುದರ ಬೆನ್ನಟ್ಟಿದಾಗ ಈ ವಿಷಯದ ದರ್ಶನವಾಗಿದೆ.
ಸದ್ಯ ಎಸ್‌ಎಸ್‌ಎಲ್‌ಸಿ ಓದುತ್ತಿರುವ ನೂರಕ್ಕೂ ಹೆಚ್ಚು ಮಕ್ಕಳಲ್ಲಿ 30 ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನೇ ಓದಲು ಬರುವುದಿಲ್ಲ, ಹೀಗಾಗಿ ಪಠ್ಯದ ಜತೆಗೆ ಅ, ಆ, ಇ, ಈ, ಎ, ಬಿ, ಸಿ, ಡಿ ಜತೆಗೆ ಸಂಕಲನ, ವ್ಯವಕಲನ, ಹಿಂದಿ ಭಾಷೆಯ ಬೇಸಿಕ್ ಪಾಠವನ್ನು ಕಲಿಸಬೇಕಾದ ಅನಿವಾರ್ಯತೆ ಇಲ್ಲಿನ ಶಿಕ್ಷಕರಿಗೆ ಒದಗಿ ಬಂದಿದೆ.
ಇನ್ನು ಯಾದಗಿರಿ ಜಿಲ್ಲೆಯ ಒಂದೇ ಶಾಲೆಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕನಿಷ್ಠ ಕನ್ನಡದ ಜ್ಞಾನ ಇಲ್ಲವೆಂದರೆ ಇಡೀ ಜಿಲ್ಲೆಯ ಶಾಲೆಗಳ ಪರಿಸ್ಥಿತಿಯೇನು ಎನ್ನುವ ಪ್ರಶ್ನೆ ಎದುರಾಗುವುದರ ಜತೆಗೆ ಇವರು ಹತ್ತನೇ ತರಗತಿವರೆಗೂ ಹೇಗೆ ದಾಟಿಕೊಂಡು ಬಂದರು ಎನ್ನುವ ಚಿಂತೆ ಸಹ ಇದೀಗ ಶಿಕ್ಷಣಪ್ರೇಮಿಗಳಲ್ಲಿ ಪ್ರಾರಂಭವಾಗಿದೆ.
*
ಮೇಲಧಿಕಾರಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮಾನದಂಡವನ್ನಾಗಿ ಪರಿಗಣಿಸಿ ಪ್ರೌಢ ಶಾಲಾ ಶಿಕ್ಷಕರ ಮೇಲೆ ಒತ್ತಡ ಹಾಕುತ್ತಾರೆ. ಆದರೆ ಪ್ರಾಥಮಿಕ ಹಂತದಲ್ಲಿ ಕಾಗುಣಿತ, ಒತ್ತಕ್ಷರಗಳು, ಓದುವುದು, ಬರೆಯುವುದು, ಗಣಿತ ಮೂಲ ಕ್ರಿಯೆಗಳು ಇತರ ಕನಿಷ್ಠ ಫಲಿಕಾಂಶಗಳು ಬಾರದಿದ್ದರೆ ವಿದ್ಯಾರ್ಥಿಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವೇ?
-ಹೆಸರು ಹೇಳಲು ಇಚ್ಛಿಸದ, ಪ್ರೌಢಶಾಲಾ ಶಿಕ್ಷಕರು
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ತರಗತಿ ಮಕ್ಕಳಲ್ಲಿ ಓದಲು, ಬರೆಯಲು ಬಾರದವರನ್ನು ಗುರುತಿಸುವ ಕೆಲಸ ಎ-ಎಲ್‌ಎನ್ ಮಾಹೆ ಕಾರ್ಯಕ್ರಮದಡಿ ರಾಜ್ಯಾದ್ಯಂತ ನಡೆಯುತ್ತಿದೆ. ಇದು ಒಂದು ಊರು, ಜಿಲ್ಲೆಯ ಸಮಸ್ಯೆಯಲ್ಲ. ಇಡೀ ರಾಜ್ಯದ ಸಮಸ್ಯೆಯಾಗಿದೆ.
ಚನ್ನಬಸಪ್ಪ ಮುಧೋಳ, ಡಿಡಿಪಿಐ ಯಾದಗಿರಿ