ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೆದುಳು ತಿನ್ನುವ ಅಮೀಬಾ ಕಾಯಿಲೆ

ದಕ್ಷಿಣ ರಾಜ್ಯಗಳಲ್ಲಿ ಈ ಸಲದ ಭಾರೀ ಮಳೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕೆರೆ ಕಟ್ಟೆ, ಕೊಳಗಳು ತುಂಬಿವೆ. ಹಾಗಾಗಿ ಅಂತಹ ಕಡೆ ಈಜಾಡುವುದನ್ನು ತಪ್ಪಿಸುವುದು ಈ ವಿಚಿತ್ರ ರೋಗವನ್ನು ತಡೆಗಟ್ಟಬಹುದು ಎಂಬುದು ತಜ್ಞ ವೈದ್ಯರ ಬಹುಮುಖ್ಯ ಸೂಚನೆ. ನಿಂತ ನೀರಿನಲ್ಲಿ ಮೆದುಳು ತಿನ್ನುವ ಅಮೀಬಾ ಗಳಿರುತ್ತವೆ.

ಮೆದುಳು ತಿನ್ನುವ ಅಮೀಬಾ ಕಾಯಿಲೆ

-

Ashok Nayak Ashok Nayak Sep 16, 2025 8:14 AM

ನರೇಂದ್ರ ಪಾರೆಕಟ್

ಏನಿದು ವಿಚಿತ್ರ ರೋಗ ? ಯಾಕಿದು ಮಾರಣಾಂತಿಕ

ಮೆದುಳು ತಿನ್ನುವ ಅಮೀಬಾ ಕಾಯಿಲೆ ಎಂಬ ಹೆಸರು ನಿಜಕ್ಕೂ ವಿಚಿತ್ರ ಹಾಗೂ ಅದು ಅಷ್ಟೇ ಅಪಾಯದ ರೋಗವೂ ಹೌದು ಎಂಬುದು ವೈದ್ಯರ ವಿಶ್ಲೇಷಣೆ. ಈ ರೋಗದ ಲಕ್ಷಣ ಗಳು ಏನೇನು ಮತ್ತು ಇದರಿಂದ ಹೇಗೆ ದೂರವಿರಬಹುದು ಎಂಬುದನ್ನು ಸಂಕ್ಷಿಪ್ತ ವಾಗಿ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ನೆರೆಯ ಕೇರಳ ರಾಜ್ಯದಿಂದ ವಿಚಿತ್ರ ಸುದ್ದಿಯೊಂದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಾ ಇದೆ, ಅದೇನೆಂದರೆ ‘ಮೆದುಳು ತಿನ್ನುವ ಅಮೀಬಾ ಕಾಯಿಲೆ’.... ಈ ರೋಗದ ಹೆಸರು ಕಳೆದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಹೆಚ್ಚೆಚ್ಚು ಕೇಳಿ ಬರುತ್ತಿದೆ. ನೆರೆಯ ರಾಜ್ಯ ಕೇರಳದಲ್ಲಿ ಈ ವಿಚಿತ್ರ ರೋಗಕ್ಕೆ ಕನಿಷ್ಠ ಮೂರ್ನಾಲ್ಕು ಮಂದಿ ಬಲಿಯಾಗಿದ್ದಾರೆ ಎಂಬುವುದು ಆಘಾತಕಾರಿ ಸುದ್ದಿ.

ಈ ರೋಗದ ಹೆಸರನ್ನು ಕೇಳಿದಾಕ್ಷಣ ನಮ್ಮ ಮೆದುಳನ್ನು ಅಮೀಬಾ ಹೇಗೆ ತಿನ್ನಬಹುದು ಎಂಬ ಪ್ರಶ್ನೆಯೂ ಕೆಲವರನ್ನಾದರೂ ಕಾಡದೆ ಇರಲಾರದು. ಮೆದುಳೆಂಬುದು ಮನುಷ್ಯ ದೇಹದ ಅತ್ಯಂತ ಪ್ರಮುಖ ಅವಯವ. ನಮ್ಮ ಪ್ರತಿಯೊಂದು ದೈನಂದಿನ ಚಟುವಟಿಕೆಯೂ ಮೆದುಳಿನ ಸಂದೇಶ ಪ್ರಕಾರವೇ ನಡೆಯುತ್ತದೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ನಮ್ಮ ಅಮೂಲ್ಯವಾದ ಮೆದುಳನ್ನೇ ತಿನ್ನುವ ರೋಗ ಪ್ರಾಣಕ್ಕೇ ಸಂಚಕಾರ ಎಂದಾಗ ಯಾರ ಎದೆಬಡಿತವೂ ಹೆಚ್ಚಾಗದಿರಲ್ಲ.

ದಕ್ಷಿಣ ರಾಜ್ಯಗಳಲ್ಲಿ ಈ ಸಲದ ಭಾರೀ ಮಳೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕೆರೆ ಕಟ್ಟೆ, ಕೊಳಗಳು ತುಂಬಿವೆ. ಹಾಗಾಗಿ ಅಂತಹ ಕಡೆ ಈಜಾಡುವುದನ್ನು ತಪ್ಪಿಸುವುದು ಈ ವಿಚಿತ್ರ ರೋಗವನ್ನು ತಡೆಗಟ್ಟಬಹುದು ಎಂಬುದು ತಜ್ಞ ವೈದ್ಯರ ಬಹುಮುಖ್ಯ ಸೂಚನೆ. ನಿಂತ ನೀರಿನಲ್ಲಿ ಮೆದುಳು ತಿನ್ನುವ ಅಮೀಬಾಗಳಿರುತ್ತವೆ.

ಅವು ದೇಹದಲ್ಲಿ ಸುಲಭವಾಗಿ ಸೇರಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಅದು ಸಾವಿಗೂ ಕಾರಣವಾಗುತ್ತದೆ ಎಂಬುದು ಈ ರೋಗದ ಕುರಿತಾಗಿರುವ ವೈದ್ಯರ ವಿವರಣೆ. ಮೆದುಳು ತಿನ್ನುವ ಅಮೀಬಾಕ್ಕೆ ಕೇರಳದಲ್ಲಿ ಈಗಾಗಲೇ ನಾಲ್ವರು ಬಲಿಯಾಗಿರುವ ವಿಷಯವು ವೈದ್ಯಲೋಕದಲ್ಲೂ ಆತಂಕ ಸೃಷ್ಟಿಸಿದೆ.

ಮೆದುಳನ್ನು ತಿನ್ನುವ ಅಮೀಬಾ ಎಂದರೇನು: ನೇಗ್ಲೇರಿಯಾ ಫೌಲೆರಿ ಎಂಬ ವೈeನಿಕ ಹೆಸರಿನ ಜೀವಿಯಾದ ಅಮೀಬಾವನ್ನು ಸಾಮಾನ್ಯವಾಗಿ ಮೆದುಳನ್ನು ತಿನ್ನುವ ಅಮೀಬಾ ಎಂದು ಕರೆಯ ಲಾಗುತ್ತದೆ. ಇದು ಸಾಮಾನ್ಯವಾಗಿ ಸರೋವರಗಳು, ನದಿಗಳು, ನೀರಿನ ಬುಗ್ಗೆಗಳು ಮತ್ತು ಕೊಳಗಳಂತಹ ಸಿಹಿನೀರಿನಲ್ಲಿ ಕಂಡುಬರುತ್ತದೆ, ಬೆಚ್ಚಗಿನ ನೀರಿನಲ್ಲೂ ಕೆಲವೊಮ್ಮೆ ಸಮೃದ್ಧ ವಾಗಿ ಬದುಕುತ್ತದಂತೆ.

ಕಲುಷಿತ ನೀರಿನಲ್ಲಿ ಈಜುವಾಗ ಅಥವಾ ಡೈವಿಂಗ್ ಮಾಡುವಾಗ ಅಮೀಬಾ ಜೀವಿಯು ನೀರಿನ ಮೂಗಿನ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತದೆ. ಒಮ್ಮೆ ಒಳಗೆ ಹೋದ ನಂತರ, ಅದು ಮೆದುಳನ್ನು ತಲುಪುತ್ತದೆ. ಆ ಬಳಿಕ ಅದು ಮೆದುಳಿನಲ್ಲಿ ತೀವ್ರವಾದ ಸೋಂಕನ್ನು ಉಂಟು ಮಾಡಲಾರಂಭಿಸುತ್ತದೆ. ಈ ಸೋಂಕು ತಗಲಿದರೆ 1 ರಿಂದ 9 ದಿನಗಳಲ್ಲಿ ತೀವ್ರ ತಲೆನೋವು, ಜ್ವರ, ವಾಂತಿ, ಕುತ್ತಿಗೆ ಬಿಗಿತ, ಮಾನಸಿಕ ಗೊಂದಲಗಳ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಇದೊಂದು ಅಪರೂಪ ಹಾಗೂ ಮಾರಣಾಂತಿಕ ರೋಗವಾಗಿದ್ದು, ಕೇಂದ್ರ ನರವ್ಯೂಹದ ಮೇಲೆ ಅದು ತ್ವರಿತವಾಗಿ ಪರಿಣಾಮ ಬೀರುತ್ತದೆ. ಇದರ ಸಾವಿನ ದರ 90ರಷ್ಟಿದೆ ಎಂಬುದು ಈಗಿನ ತಾಜಾ ಸುದ್ದಿ. ಯಾವುದೇ ವಯಸ್ಸಿನ ಭೇದಭಾವ ಇಲ್ಲದೆ ಯಾರಿಗೂ ಬರಬಹುದಾದ ಕಾಯಿಲೆ ಇದೆಂದೂ ಹೇಳಲಾಗುತ್ತಿದೆ.ಸಾಮಾನ್ಯ ತಲೆನೋವು ಮತ್ತು ವಾಕರಿಕೆಯಿಂದ ಇದರ ಲಕ್ಷಣಗಳು ಪ್ರಾರಂಭ ವಾಗುತ್ತವೆ.

ನೋವು ತೀವ್ರವಾದರೆ ಸೋಂಕಿತ ವ್ಯಕ್ತಿಯ ಜೀವವನ್ನು ಉಳಿಸುವುದು ಕಷ್ಟ. 1962 ಮತ್ತು 2024ರ ನಡುವೆ ಅಮೆರಿಕದಲ್ಲಿ ವರದಿಯಾದ 167 ಮಿದುಳು ತಿನ್ನುವ ಅಮೀಬಾ ರೋಗ ಪ್ರಕರಣಗಳಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಬದುಕುಳಿದಿದ್ದಾರೆ ಎಂಬುದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಮಾಹಿತಿ. ಅದರ ಪ್ರಕಾರ, ಹೆಚ್ಚಿನ ಸಾವುಗಳು ಅನಾರೋಗ್ಯಕ್ಕೆ ಒಳಗಾದ ಐದು ದಿನಗಳೊಳಗೆ ಸಂಭವಿಸಿವೆ ಎಂಬುದಾಗಿದೆ.

ಮೆದುಳು ತಿನ್ನುವ ಅಮೀಬಾ ಸೋಂಕು ತಗುಲಿದ ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ ಅದು ಕೋಮಾ ಹಂತಕ್ಕೂ ಹೋಗಬಹುದು. ಮಿದುಳಿನ ಊತದ ಮೂಲಕವೂ ವ್ಯಕ್ತಿ ಸಾವಿಗೀಡಾಗ ಬಹುದು. ಈ ಸೋಂಕಿಗೆ ಒಳಗಾಗು ವುದನ್ನು ತಡೆಯಲು ಇರುವ ಪ್ರಮುಖ ಮುನ್ನೆ ಚ್ಚರಿಕೆ ಎಂದರೆ, ನಿಂತ ನೀರಿನಲ್ಲಿ ಈಜುವುದು, ಡೈವಿಂಗ್ ಮಾಡುವುದನ್ನು ತಪ್ಪಿಸುವುದಾಗಿದೆ. ರೋಗದ ಸೋಂಕು ಪತ್ತೆ ಮಾಡಲು ಹಾಗೂ ಚಿಕಿತ್ಸೆ ಪಡೆಯಲು ಮೆದುಳಿನ ಬಯಾಪ್ಸಿಗೆ ವೈದ್ಯರು ಶಿಫಾರಸು ಮಾಡು ವುದೂ ಕೂಡಾ ರೋಗ ಲಕ್ಷಣ ಅಧ್ಯಯನದ ಒಂದು ಭಾಗ.

ಮೆನಿಂಜೈಟಿಸ್ ಎಂದರೇನು?

ಮೆದುಳು ತಿನ್ನುವ ಅಮೀಬಾ ರೋಗದ ಮತ್ತೊಂದು ಸ್ವರೂಪದ ಖಾಯಿಲೆ. ಮೆನಿಂಜೈಟಿಸ್ ಎಂದರೆ ಮೆದುಳು ಮತ್ತು ಬೆನ್ನುಹುರಿಯನ್ನು ಆವರಿಸುವ ಸೂಕ್ಷ್ಮ ಪೊರೆಯಾದ ಮೆನಿಂಜಸ್‌ನ ಉರಿಯೂತ. ಇದು ಶಾಶ್ವತ ಮಿದುಳಿಗೆ ಹಾನಿ, ಗಂಭೀರ ತೊಡಕುಗಳು ಮತ್ತು ಕೆಲವು ಸಂದರ್ಭ ಗಳಲ್ಲಿ ಸಾವಿಗೆ ಕಾರಣವಾಗಬಹುದು.

ಮೆದುಳು ತಿನ್ನುವ ರೋಗದಲ್ಲಿ (ಮೆನಿಂಜೈಟಿಸ್) ಹಲವಾರು ವಿಧಗಳಿವೆ. ಅವುಗಳಲ್ಲಿ ಪ್ರಮುಖ ವಾದವು ಈ ಕೆಳಗಿನಂತಿವೆ.

ವೈರಲ್ ಮೆನಿಂಜೈಟಿಸ್: ಇದು ಅತ್ಯಂತ ಸಾಮಾನ್ಯ ಮತ್ತು ಕಡಿಮೆ ತೀವ್ರ ಸ್ವರೂಪವಾಗಿದ್ದು, ಚಿಕಿತ್ಸೆಯಿಲ್ಲದೆಯೇ ತಾನಾಗಿಯೇ ಗುಣವಾಗುತ್ತದೆ.

ಬ್ಯಾಕ್ಟೀರಿಯಾ ಮೆನಿಂಜೈಟಿಸ್: ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವ ಗಂಭೀರ ರೂಪದ ರೋಗ ಇದಾಗಿದೆ. ಸಮಯೋಚಿತ ಚಿಕಿತ್ಸೆ ದೊರೆಯದಿದ್ದರೆ ಇದು ಶಾಶ್ವತ ಮಿದುಳಿನ ಹಾನಿ, ಪಾರ್ಶ್ವವಾಯು, ಶ್ರವಣ ನಷ್ಟ ಅಥವಾ ಸಾವಿಗೂ ಕಾರಣವಾಗಬಹುದು.

ಫಂಗಲ್ ಮೆನಿಂಜೈಟಿಸ್: ಈ ಕಾಯಿಲೆ ಉಲ್ಬಣಗೊಂಡರೆ ಎಷ್ಟೇ ರೋಗನಿರೋಧಕ ಶಕ್ತಿಯನ್ನು ಹೊಂದಿರಲಿ, ಅಂತವರ ಮೇಲೂ ಪರಿಣಾಮ ಬೀರುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಜಾಗತಿಕ ತಾಪಮಾನ ಹೆಚ್ಚಾದಂತೆ ಈ ವಿಚಿತ್ರ ಅಮೀಬಾ ಜೀವಿಯು ವಾತಾವರಣದಲ್ಲಿ ವೇಗವಾಗಿ ಹರಡುತ್ತದೆ. ತಾಪಮಾನ ಹೆಚ್ಚಾದಾಗ ಜನರು ಸರೋವರಗಳು ಮತ್ತು ನದಿಗಳಂತಹ ಬೆಚ್ಚಗಿನ, ಸಂಸ್ಕರಿಸದ ನೀರಿನಲ್ಲಿ ಈಜಲು ಮತ್ತು ಧುಮುಕಲು ಇಷ್ಟಪಡುತ್ತಾರೆ. ಇದು ಸೋಂಕಿನ ಅಪಾಯ ವನ್ನು ಹೆಚ್ಚಿಸುತ್ತದೆ.

ಸೋಂಕನ್ನು ತಡೆಗಟ್ಟುವ ವಿಧಾನಗಳು

ಬೆಚ್ಚಗಿನ ಸಿಹಿನೀರಿನ ಸ್ಥಳಗಳಲ್ಲಿ, ವಿಶೇಷವಾಗಿ ನಿಶ್ಚಲವಾದ ನೀರಿನಲ್ಲಿ, ಮೂಗನ್ನು ಮುಚ್ಚುವ ಸುರಕ್ಷಿತ ವಸ್ತುಗಳು ಇಲ್ಲದೆ ಈಜುವುದು ಅಪಾಯ. ಮೂಗಿನ ಒಳಭಾಗವನ್ನು ಸ್ವಚ್ಛಗೊಳಿಸಲು ಟ್ಯಾಪ್ ನೀರನ್ನು ಬಳಸದೆ ಇರುವುದು ಉತ್ತಮ. ಬಿಸಿಯಾದ ವಾತಾವರಣ ಮತ್ತು ನಿಂತ ನೀರು ಸೂಕ್ಷ ಜೀವಿಗಳ ಸಂತಾನೋತ್ಪತ್ತಿಯ ಸ್ಥಳವಾಗಿದೆ. ಅವು ದೆಹವನ್ನೊಮ್ಮೆ ಪ್ರವೇಶಿಸಿದರೆ ಮಿದುಳು ತಿನ್ನುವ ಅಮೀಬಾ ಸೇರಿದಂತೆ ಇತರ ಮಾರಕ ಕಾಯಿಲೆಗಳಿಗೂ ಕಾರಣವಾಗಬಹುದು. ಹಾಗಾಗಿ ಇಂತಹ ಕಾಯಿಲೆ ಬಹಳ ಅಪರೂಪವಾದರೂ, ಒಮ್ಮೆ ಬಂದರೆ ರೋಗಿಗಳು ಪ್ರಾಣವನ್ನೇ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚು.