ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರು 5 ಪಾಲಿಕೆಗಳ ಚುನಾವಣೆ ಸದ್ಯಕ್ಕಿಲ್ಲ

ಪಾಲಿಕೆಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಈಗಾಲೇ ಮುಗಿದಿದ್ದು, ಈ ಬಗ್ಗೆ ಸದ್ಯದ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ವಾರ್ಡ್‌ಗಳ ಪಟ್ಟಿ ಹಾಗೂ ಮೀಸಲು ಪಟ್ಟಿ ನೀಡು ವುದರಲ್ಲಿ ಸರಕಾರ ಇನ್ನೂ ಆಮೆ ವೇಗ ಅನುಸರಿಸುತ್ತಿದ್ದರಿಂದ ಇದರಿಂದ ಸಹಜವಾಗಿಯೇ ಚುನಾವಣಾ ಘೋಷಣೆ ಮುಂದೆ ಹೋಗುವಂತಾಗಿದೆ. ಈಗ ಸರಕಾರ ಚುನಾವಣೆ ನಡೆಸಲು ಇನ್ನೂ ಹೆಚ್ಚಿನ ಸಮಯ ಕೇಳುವ ಸಾಧ್ಯತೆ ಹೆಚ್ಚಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಸುಪ್ರೀಂಕೋರ್ಟ್ ಗಡುವು ಮುಕ್ತಾಯ, ಸಲ್ಲಿಕೆಯಾಗದ ವಾರ್ಡ್‌ಗಳ ಪಟ್ಟಿ, ಇಂದು ವಿಚಾರಣೆ

ರಾಜಧಾನಿ ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳ ಚುನಾವಣೆ ಇನ್ನೂ ಕೆಲ ಕಾಲ ಮುಂದೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಇನ್ನೇನು ಪಾಲಿಕೆಗಳಿಗೆ ಚುನಾವಣೆ ಘೋಷಣೆ ಆಗಿ ಬಿಡುತ್ತದೆ ಎಂದು ವಿವಿಧ ಪಕ್ಷಗಳ ಆಕಾಂಕ್ಷಿಗಳು ಕಾತುರದಿಂದ ಕಾಯುತ್ತಿರುವಾಗಲೇ ಸದ್ಯಕ್ಕೆ ಪಾಲಿಕೆ ಚುನಾವಣೆ ನಡೆಯದು ಎನ್ನುವ ಸಂದೇಶ ರವಾನೆಯಾಗಿದೆ.

ಪಾಲಿಕೆಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಈಗಾಲೇ ಮುಗಿದಿದ್ದು, ಈ ಬಗ್ಗೆ ಸದ್ಯದ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ವಾರ್ಡ್‌ಗಳ ಪಟ್ಟಿ ಹಾಗೂ ಮೀಸಲು ಪಟ್ಟಿ ನೀಡುವುದರಲ್ಲಿ ಸರಕಾರ ಇನ್ನೂ ಆಮೆ ವೇಗ ಅನುಸರಿಸುತ್ತಿದ್ದರಿಂದ ಇದರಿಂದ ಸಹಜವಾಗಿಯೇ ಚುನಾವಣಾ ಘೋಷಣೆ ಮುಂದೆ ಹೋಗುವಂತಾಗಿದೆ. ಈಗ ಸರಕಾರ ಚುನಾವಣೆ ನಡೆಸಲು ಇನ್ನೂ ಹೆಚ್ಚಿನ ಸಮಯ ಕೇಳುವ ಸಾಧ್ಯತೆ ಹೆಚ್ಚಾಗಿದೆ.

ಒಂದೊಮ್ಮೆ ಸುಪ್ರೀಂಕೋರ್ಟ್ ರಾಜ್ಯ ಸರಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರೆ ಮುಂದಿನ ವರ್ಷ ಮೇ ವೇಳೆಗೆ ಚುನಾವಣೆ ನಡೆಯಬಹುದು ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.

ಇದರೊಂದಿಗೆ ಐದು ಪಾಲಿಕೆಗಳಾಗಿರುವ ಕಾರಣ ಸ್ಪರ್ಧೆಗೆ ಹೆಚ್ಚು ಅವಕಾಶ ಎಂದು ತಯಾರಾಗಿದ್ದ ಆಕ್ಷಾಂಕ್ಷಿಗಳ ಆಸೆ ಸದ್ಯಕ್ಕೆ ಈಡೇರುವಂತೆ ಕಾಣುತ್ತಿಲ್ಲ. ಇದಕ್ಕೆ ಕಾರಣಗಳು ಸಾಕಷ್ಟಿವೆ. ಆದರೆ ತಾಂತ್ರಿಕ ಕಾರಣವೇನೆಂದರೆ, ಪಾಲಿಕೆಗಳ ವಾರ್ಡ್ ಪುನರ್ ವಿಂಗಡಣೆ ಕಾರ್ಯ ಇನ್ನೂ ಅಂತಿಮ ವಾಗಿಲ್ಲ.

ಇದನ್ನೂ ಓದಿ: ‌Praveen Vivek Column: ಸಮರ್ಥ ನಾಯಕತ್ವ ಸಿಕ್ಕಿದರಷ್ಟೇ ರಾಜ್ಯ ಸಮೃದ್ಧವಾದೀತು !

ಸರಕಾರ ಪ್ರಕಟಿಸಿದ್ದ ವಾರ್ಡ್ ವಿಂಗಡಣೆಯ ಪಟ್ಟಿಗೆ ಸಲ್ಲಿಕೆಯಾಗಿದ್ದ ಆಕ್ಷೇಪಗಳಿಗೆ ಸರಕಾರ ಪ್ರತಿಕ್ರಿಯಿಸಿ ಅದನ್ನು ಅಂತಿಮಗೊಳಿಸುವ ಕೆಲಸವನ್ನು ಸರಕಾರ ಇನ್ನೂ ಪೂರ್ಣಗೊಳಿಸಿಲ್ಲ. ಇದನ್ನು ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಒಪ್ಪಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.

ಹಾಗೆಯೇ ಚುನಾವಣೆ ನಡೆಸಲು ಸಜ್ಜಾಗಿರುವ ರಾಜ್ಯ ಚುನಾವಣಾ ಆಯೋಗ, ವಾರ್ಡ್ ಮತ್ತು ಮೀಸಲು ಪಟ್ಟಿ ನಿರೀಕ್ಷೆಯಲ್ಲಿದ್ದು, ಇದನ್ನೇ ಆಯೋಗ ಕೂಡ ಕೋರ್ಟ್‌ನಲ್ಲಿ ಮಂಡಿಸುವ ಸಂಭವವಿದೆ. ಈ ಮಧ್ಯೆ, ಆಡಳಿತರೂಢ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಪಾಲಿಕೆಗಳ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಆಕ್ಷಾಂಕ್ಷಿಗಳನ್ನು ಗುರುತಿಸುವುದು ಮತ್ತು ಬಿಬಿಎಂಪಿ ಬದಲು ಪಾಲಿಕೆಗಳಾಗಿರುವ ಕಾರಣ ಚುನಾವಣೆಗೆ ಹೇಗೆ ಸಜ್ಜಾಗಬೇಕೆನ್ನುವ ಚರ್ಚೆ ಗಳಲ್ಲಿ ತೊಡಗಿದ್ದವು.

ಪಕ್ಷದ ನಾಯಕರು ಸ್ಥಳೀಯ ಮುಖಂಡರ ಸಭೆಯಲ್ಲಿ ಸಂಭವನೀಯ ಆಕಾಂಕ್ಷಿಗಳ ಬಗ್ಗೆಯೂ ಚರ್ಚೆ ಆರಂಭಿಸಿದ್ದರು. ಆದರೆ, ಇವರಷ್ಟು ವೇಗದಲ್ಲಿ ಸರಕಾರ ಚುನಾವಣೆ ನಡೆಸಲು ಉಮೇದು ತೋರಿಸದಿರುವುದು ಮುಖಂಡರ ಸಿದ್ಧತೆ ವೇಗಕ್ಕೆ ಬ್ರೇಕ್ ಹಾಕಿದಂತಾಗಲಿದೆ.

ಚುನಾವಣೆ ನಡೆದು 10 ವರ್ಷಗಳಾಯ್ತು !

ಬೆಂಗಳೂರಿನ ಈತನಕ ಅಸ್ತಿತ್ವದಲ್ಲಿದ್ದ ಬಿಬಿಎಂಪಿಯ 198 ವಾರ್ಡ್‌ಗಳಿಗೆ 2015ರಲ್ಲಿ ಚುನಾವಣೆ ನಡೆದು ಸೆಪ್ಟೆಂಬರ್‌ನಲ್ಲಿ ಜನಪ್ರತಿನಿಧಿಗಳ ಆಡಳಿತ ಆರಂಭವಾಗಿತ್ತು. ಆ ಅವಧಿ ಮುಗಿದ ನಂತರಪಾಲಿಕೆಗೆ ಚುನಾವಣೆ ನಡೆದು ೧೦ ವರ್ಷಗಳಿಗೂ ಹೆಚ್ಚಿನ ಅವಧಿಯಾಗಿದೆ. ಅಂದರೆ ಐದು ವರ್ಷಕ್ಕೂಹೆಚ್ಚಿನ ಕಾಲ ರಾಜಧಾನಿಯ ಜನ ಸ್ಥಳೀಯ ಆಡಳಿತವನ್ನೇ ನೋಡದಂತಾಗಿದೆ. ಹೀಗಾಗಿ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಚುನಾವಣೆ ನಡೆಸುವುದಾಗಿ ಸರಕಾರ ಕೋರ್ಟ್‌ನಲ್ಲಿ ಪ್ರಮಾಣ ಪತ್ರವನ್ನೂ ಸಲ್ಲಿಸಿತ್ತು. ಆದರೆ, ಸರಕಾರ ಕಳೆದ ಮೇ ೧೫ರಂದು ಗ್ರೇಟರ್ ಬೆಂಗಳೂರು ಕಾಯ್ದೆ ಜಾರಿ ಮಾಡಿ, ಅದರಂತೆ ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಜನೆ ಮಾಡಿದೆ. ಅದಕ್ಕೀಗ ವಾರ್ಡ್‌ಗಳ ಮರುವಿಂಗಡಣೆಯನ್ನೂ ನಡೆಸುತ್ತಿದ್ದು, ಅದಿನ್ನೂ ಅಂತಿಮಗೊಂಡಿಲ್ಲ. ಕೋರ್ಟ್ ನೀಡಿದ್ದ ಗಡುವಿನ ಪ್ರಕಾರ ಸರಕಾರ ನವೆಂಬರ್ ೧ರ ಒಳಗಾಗಿ ವಾರ್ಡ್ ವಿಂಗಡಿಸಿ ಅಂತಿಮ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿತ್ತು. ಆನಂತರ ನ.೩೦ರ ಒಳಗಾಗಿ ಮೀಸಲು ಪಟ್ಟಿ ನೀಡಬೇಕು. ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ನ.೩ಕ್ಕೆ ವಿಚಾರಣೆ ನಿಗದಿಯಾಗಿದೆ. ಆದರೆ ಗುಡುವು ಮುಗಿದು ಮೂರು ದಿನಗಳಾದರೂ ಸರಕಾರ ವಾರ್ಡ್ ವಿಂಗಡಿಸಿದ ಪಟ್ಟಿಯನ್ನೇ ಸಲ್ಲಿಸಿಲ್ಲ. ಇನ್ನು ಮೀಸಲು ಪಟ್ಟಿ ಸದ್ಯಕ್ಕೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಸರಕಾರ ಕೋರ್ಟ್‌ನಲ್ಲಿ ಚುನಾವಣೆಗೆ ಹೆಚ್ಚಿನ ಸಮಯ ಕೇಳುವುದು ಬಹುತೇಕ ಖಚಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚುನಾವಣೆ ನಿಜಕ್ಕೂ ನಡೆಯುವುದೇ?

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ದುಸ್ಥಿತಿಯಲ್ಲಿರುವುದು ಈಗಾಗಲೇ ಭಾರೀ ಚರ್ಚೆಗೆ ಗ್ರಾಸ ವಾಗಿದೆ. ಇಂಥ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ ಕಾಂಗ್ರೆಸ್‌ಗೆ ಅನುಕೂಲವಾಗುವ ಸಾಧ್ಯತೆ ಕಡಿಮೆ ಎನ್ನುವುದು ಬೆಂಗಳೂರು ಕಾಂಗ್ರೆಸ್ ಮುಖಂಡರ ವಾದ. ಅಷ್ಟಕ್ಕೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಈಗಷ್ಟೇ ಕ್ರಿಯಾ ಯೋಜನೆಗಳನ್ನು ರೂಪಿಸಿ ಕಾಮಗಾರಿಗಳ ಪಟ್ಟಿಯನ್ನು ಅಂತಿಮಗೊಳಿಸಿಲಾಗಿದೆ.

ಎಡೆ ಈಗಷ್ಟೇ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ರಸ್ತೆ ಪುನರ್ ನಿರ್ಮಾಣ, ದುರಸ್ತಿ ಸೇರಿದಂತೆ ಮುಖ್ಯ ಕಾಮಗಾರಿಗಳು ಬಹುತೇಕ ಮಾರ್ಚ್ ವೇಳೆಗೆ ಪೂರ್ಣವಾಗುವ ಸಾಧ್ಯತೆ ಇದೆ. ಆಗ ಮತದಾರರ ಅಭಿಪ್ರಾಯ ಪರ ರೂಪುಗೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿ ಸರಕಾರ ತಂತ್ರ ರೂಪಿಸಿದೆ. ಹೀಗಾಗಿ ಮುಂದಿನ ಮೇ ಸಮಯದಲ್ಲಿ ಚುನಾವಣೆ ನಡೆಸುವುದು ಸೂಕ್ತ ಎನ್ನುವ ಸಲಹೆಗಳು ಸರಕಾರಕ್ಕೆ ಬಂದಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.