ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್‌ʼನಲ್ಲಿ ಸಿದ್ದು ಹೇಳಿಕೆ ತಂದ ಸದ್ದಿಲ್ಲದ ಸಂಚಲನ

ರಾಜಕೀಯ ನಿವೃತ್ತಿ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿ ಸುವ ಇಂಗಿತ ವ್ಯಕ್ತಪಡಿಸಿದ್ದು, ಇದು ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ರಾಜಕೀಯ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲ, ಇಷ್ಟೂ ದಿನ ರಾಜಕೀಯ ಕ್ರಾಂತಿ ಬಗ್ಗೆ ಚಿಂತಿಸುತ್ತಿದ್ದ ಸಚಿವರು, ಶಾಸಕರು ಇದೀಗ ಮುಂಬರುವ 2028 ಚುನಾವಣೆಯನ್ನು ಗುರಿಯಾಗಿಸಿ ರಾಜಕಾರಣದಲ್ಲಿ ತೊಡಗಿದ್ದಾರೆ.

ಶಿವಕುಮಾರ್ ಬೆಳ್ಳಿತಟ್ಟೆ

2028ರ ಸ್ಪರ್ಧೆಗೆ ಸಿಎಂ ಸಿದ್ದರಾಮಯ್ಯ ಒಲವು, ಆಪ್ತ ಸಚಿವರ, ಶಾಸಕರ ಬೆಂಬಲ

ಬೆಂಗಳೂರು: ಬಹು ಚರ್ಚಿತ ‘ನವೆಂಬರ್ ಕ್ರಾಂತಿ’ ವಿಚಾರ ನಿಧಾನವಾಗಿ ತಣ್ಣಗಾಗುತ್ತಿದ್ದು ಅನೇಕ ಸಚಿವರು, ಶಾಸಕರ ವಲಯದಲ್ಲಿ ತುಸು ಉತ್ಸಾಹ ಕಾಣಲಾರಂಭಿಸಿದೆ. ರಾಜಕೀಯ ನಿವೃತ್ತಿ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಇದು ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ರಾಜಕೀಯ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲ, ಇಷ್ಟೂ ದಿನ ರಾಜಕೀಯ ಕ್ರಾಂತಿ ಬಗ್ಗೆ ಚಿಂತಿಸುತ್ತಿದ್ದ ಸಚಿವರು, ಶಾಸಕರು ಇದೀಗ ಮುಂಬರುವ 2028 ಚುನಾವಣೆಯನ್ನು ಗುರಿಯಾಗಿಸಿ ರಾಜಕಾರಣದಲ್ಲಿ ತೊಡಗಿದ್ದಾರೆ.

ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿಯಾಗಲಿದ್ದು, ಮುಂದಿನ ಚುನಾವಣೆ ವೇಳೆಗೆ ಪಕ್ಷದ ಟಿಕೆಟ್ ಹೋರಾಟ ಮತ್ತು ಟಿಕೆಟ್ ಸಿಕ್ಕರೆ ಗೆಲ್ಲುವುದು ಹೇಗೆ ಎಂದೆಲ್ಲಾ ಯೋಚಿಸುತ್ತಿದ್ದ ಕೆಲವು ಸಚಿವರು, ಶಾಸಕರಲ್ಲಿ ಈಗ ಒಂದು ರೀತಿ ಹುರುಪು ಕಾಣಿಸಿಕೊಂಡಿದೆ. ಆಪ್ತ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಅವರು ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ ಎನ್ನುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: CM Siddaramaiah: ಕಾಗಿನೆಲೆ ಅಭಿವೃದ್ಧಿಗೆ 34 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಿದ ಸಿಎಂ ಸಿದ್ದರಾಮಯ್ಯ

ಇದರೊಂದಿಗೆ ಮುಂದಿನ ರಾಜಕೀಯ ಚಿತ್ರಣ ಹೇಗಿರಬಹುದು ಎಂದು ಎಣಿಸಿದ್ದ ಬಹುತೇಕ ರಾಜಕಾರಣಿಗಳ ಲೆಕ್ಕಾಚಾರವೆಲ್ಲಾ ತಲೆಕೆಳಗಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ಸಂಪುಟ ಪುನಾರಚನೆಯಿಂದ ಸಚಿವ ಸ್ಥಾನ ಕೈ ತಪ್ಪುತ್ತದೆ ಎಂದುಕೊಂಡಿದ್ದವರೂ ಮಂತ್ರಿಗಿರಿ ಹೋದರೂ ಪರವಾಗಿಲ್ಲ ಎನ್ನುತ್ತಿದ್ದಾರೆ. ಈ ಸಚಿವರು ಮತ್ತು ಸುಮಾರು ೭೦ಕ್ಕೂ ಹೆಚ್ಚು ಶಾಸಕರಲ್ಲಿ ‘ನವೆಂಬರ್ ಕ್ರಾಂತಿ’ಯಾದರೆ ತಮ್ಮ ಗತಿ ಏನು ಎನ್ನುವ ಆತಂಕ ಇತ್ತು, ಜತೆಗೆ ಮುಂದಿನ ಚುನಾವಣೆಯಲ್ಲಿ ತಮ್ಮ ಪರ ಹೋರಾಟಕ್ಕೆ ಸಿದ್ದರಾಮಯ್ಯ ಬರುವರೇ ಎನ್ನುವ ಭೀತಿಯೂ ಇತ್ತು.

ಆದರೆ ಈಗ ಕೆಲವು ಸಚಿವರು, ಹೊಸಬರಿಗೆ ಮತ್ತು ಕೆಲವು ಹಿರಿಯರಿಗೆ ಅವಕಾಶ ಕೊಡುವುದಾದರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧವಾಗಿದ್ದಾರೆ. ಇನ್ನು ಅಚ್ಚರಿ ಎಂದರೆ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದಾದರೆ ಎಲ್ಲಾ ರೀತಿಯ ಸಹಕಾರ ನೀಡುವುದಕ್ಕೂ ಸಿದ್ಧ ಎನ್ನುವ ವಾಗ್ದಾನಗಳನ್ನೂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರಾಜ್ಯ ಕಾಂಗ್ರೆಸ್‌ ನಲ್ಲಿ ಈಗ ನವೆಂಬರ್ ಕ್ರಾಂತಿಗಿಂತ ಮುಂಬರುವ 2028ರ ಚುನಾವಣಾ ರಾಜಕಾರಣದ ಚರ್ಚೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಸಿದ್ದು ಸ್ಪರ್ಧೆ ಇವರಿಗೆ ಏಕೆ ಅನಿವಾರ್ಯ?

ಹೈಕಮಾಂಡ್ ಒಪ್ಪಿದರೆ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಇನ್ನಷ್ಟು ಗಾಬರಿಗೊಂಡ ಕೆಲವು ಹಿರಿಯ ಸಚಿವರು, ಶಾಸಕರು ಹಾಗೂ ಆಪ್ತ ಮುಖಂಡರು ಸಿದ್ದರಾಮಯ್ಯ ಅವರನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಬಹಿರಂಗ ಹೇಳಿಕೆ ನೀಡುವಂತೆ ಕೂಡ ಪೀಡಿಸಿದ್ದಾರೆ ಎನ್ನಲಾಗಿದೆ. ನಾಲ್ಕು ಜಿಲ್ಲೆಗಳನ್ನು ಬಿಟ್ಟರೆ ಮಧ್ಯ ಕರ್ನಾಟಕ ಮತ್ತು ಉತ್ತರದ ಅನೇಕ ಜಿಲ್ಲೆಗಳಲ್ಲಿ ಅನೇಕ ಸಚಿವರು, ಶಾಸಕರಿಗೆ ಹಿಂದುಳಿದವರ್ಗದ ಮತಗಳು ನಿರ್ಣಾಯಕ. ಇವುಗಳು ಲಭಿಸಬೇಕಾದರೆ ಸಿದ್ದರಾಮಯ್ಯ ಸಕ್ರಿಯವಾಗಿರಬೇಕು. ಚುನಾವಣಾ ಪ್ರಚಾರಕ್ಕೆ ಬರಬೇಕು. ಇವರು ಬರುವುದರಿಂದ ಸಚಿವರಾದ ಎಚ್ .ಸಿ.ಮಹಾದೇವಪ್ಪ, ಡಾ. ಪರಮೇಶ್ವರ್, ಮುನಿಯಪ್ಪ ಹಾಗೂ ತಿಮ್ಮಾಪುರ ಅವರ ಪ್ರಚಾರಕ್ಕೆ ಬರುತ್ತಾರೆ. ಆಗ ದಲಿತ ಮತಗಳು ಸುಲಭವಾಗಿ ಲಭಿಸಿ, ಗೆಲುವು ಸುಲಭವಾಗುತ್ತದೆ. ಅಲ್ಪಸಂಖ್ಯಾತ ಮುಖಂಡರೂ ಕೈ ಜೋಡಿಸುವುದರಿಂದ ಅವರ ಮತ ಗಳಿಂದಲೂ ಅನುಕೂಲವಾಗುತ್ತದೆ ಎನ್ನುವುದು ಬಹುತೇಕ ಶಾಸಕರ ಲೆಕ್ಕಾಚಾರ. ಹೀಗಾಗಿ ಕೆಲವು ಸಚಿವರು, ಶಾಸಕರ ಒತ್ತಾಯದ ಮೇಲೆ ಸಿದ್ದರಾಮಯ್ಯ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.

ಬದಲಾವಣೆ ಮುಂದೆ ಹೀಗಾಗಬಹುದು

ಬಿಹಾರ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿದ್ದು ಅದರ ಸ್ಪರೂಪ ಹೇಗಿರುತ್ತದೆ ಎನ್ನುವುದನ್ನು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರೇ ನಿರ್ಧರಿಸಲಿದ್ದಾರೆ ಎಂದು ಪಕ್ಷದ ಹಿರಿಯರು ತಿಳಿಸಿದ್ದಾರೆ. ಮುಂದೆ ನಡೆಯಬಹುದಾದ ಬದಲಾವಣೆಗಳು ಬಿಹಾರ ರಾಜಕೀಯ ಫಲಿತಾಂಶವನ್ನು ಅವಲಂಬಿಸುತ್ತದೆ ಎನ್ನುವುದಕ್ಕಿಂತ ರಾಜ್ಯದಲ್ಲಿ ಗ್ಯಾರಂಟಿಗಳನ್ನು ಬಳಸಿಕೊಂಡು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆನ್ನುವ ಮತ್ತು ಅದಕ್ಕೆ ಪೂರಕ ನಾಯಕತ್ವಗಳನ್ನು ಅವಲಂಬಿಸಿರುತ್ತದೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ. ಈ ಮಧ್ಯೆ ನ.15ರಂದು ಸಿದ್ದರಾಮಯ್ಯ ಅವರು ಕಲಬುರ್ಗಿ ಗೆ ಭೇಟಿ ನೀಡಲಿದ್ದು, ಅಲ್ಲಿಂದ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ನಡೆಯುವ ಚರ್ಚೆಯ ನಂತರ ವಷ್ಟೇ ಮುಂದಿನ ರಾಜಕೀಯ ಚಿತ್ರಣ ಸ್ಪಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಅವರ ಆಪ್ತ ಮೂಲಗಳು ತಿಳಿಸಿವೆ.