Gangster Alla Prankster Movie: ಆ್ಯಕ್ಷನ್, ಕಾಮಿಡಿ ಚಿತ್ರ 'ಗ್ಯಾಂಗ್ ಸ್ಟರ್ ಅಲ್ಲ ಪ್ರಾಂಕ್ ಸ್ಟರ್' ಏ. 25ರಂದು ರಿಲೀಸ್
Gangster Alla Prankster Movie: ವುಡ್ ಕ್ರೀಪರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಗ್ಯಾಂಗ್ ಸ್ಟರ್ ಅಲ್ಲ ಪ್ರಾಂಕ್ ಸ್ಟರ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಏಪ್ರಿಲ್ 25ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಸುಮಾರು 60 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರಕ್ಕೆ ಜಾನ್ ಕೆನಡಿ ಸಂಗೀತ ಸಂಯೋಜಿಸಿದ್ದು, ನಾಲ್ಕು ಹಾಡುಗಳು ಚಿತ್ರದಲ್ಲಿವೆ.


ಬೆಂಗಳೂರು: ವುಡ್ ಕ್ರೀಪರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಗ್ಯಾಂಗ್ ಸ್ಟರ್ ಅಲ್ಲ ಪ್ರಾಂಕ್ ಸ್ಟರ್' (Gangster Alla Prankster Movie) ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಏಪ್ರಿಲ್ 25ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಮೊದಲು 'ಭಾವಚಿತ್ರ' ಎಂಬ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಕುಮಾರ್ ಮೂರನೇ ಪ್ರಯತ್ನವಾಗಿ 'ಗ್ಯಾಂಗ್ ಸ್ಟರ್ ಪ್ರಾಂಕ್ ಸ್ಟರ್' ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುವ ಜತೆಗೆ ನಾಯಕನಾಗಿಯೂ ನಟನೆ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಉಗ್ರಂ ಖ್ಯಾತಿಯ ತಿಲಕ್ ಶೇಖರ್ ಅಭಿನಯಿಸಿದ್ದಾರೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕಮ್ ನಟ ಗಿರೀಶ್ ಕುಮಾರ್, 'ನಮ್ಮ ಚಿತ್ರವನ್ನು ನೋಡಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರ ನೀಡಿದೆ. ಇದೊಂದು ಯೂಟ್ಯೂಬರ್ ಕಥೆಯಾಗಿದ್ದು, ಪ್ರಾಂಕ್ ವಿಡಿಯೋ ಮಾಡಿಕೊಂಡು ಇರುವವನ ಸಿನಿಮಾ. ಜೊತೆಗೆ ಇದೊಂದು ಆ್ಯಕ್ಷನ್, ಕಾಮಿಡಿ ಚಿತ್ರ ಕೂಡ. ಇದರಲ್ಲಿ ನಾನು ಪ್ರಾಂಕ್ ಸ್ಟಾರ್ ಆಗಿದ್ರೆ ತಿಲಕ್ ಅವರು ಗ್ಯಾಂಗ್ ಸ್ಟರ್ ಆಗಿರುತ್ತಾರೆ. ಈ ಚಿತ್ರ ಜೀವನದಲ್ಲಿ ಸಾಧನೆ ಮಾಡಬೇಕು ಎಂಬುವವರಿಗೆ ಸ್ಪೂರ್ತಿ ಆಗಿರುತ್ತದೆ. ಅಲ್ಲದೆ ಎಲ್ಲರ ಲೈಫ್ ಗೂ ಕನೆಕ್ಟ್ ಆಗುತ್ತದೆ' ಎಂದು ಹೇಳಿದರು.

ನಂತರ ಚಿತ್ರದ ನಾಯಕಿ ವಿರಾನಿಕ ಶೆಟ್ಟಿ ಮಾತನಾಡಿ, 'ನಾನಿಲ್ಲಿ ಶೃತಿ ಎಂಬ ಕಾಲೇಜ್ ಹುಡುಗಿ ಪಾತ್ರ ಮಾಡಿದ್ದೇನೆ. ಈ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಇದೆ. ನಾವಿಗ ಪ್ರಾಂಕ್ ವಿಡಿಯೋಗಳ ಮೂಲಕ ಪ್ರಮೋಷನ್ ಮಾಡುತ್ತಾ ಇದ್ದು, ಚಿತ್ರತಂಡ ನನಗೆ ಗೊತ್ತಿಲ್ಲದಂತೆ ನನ್ನನ್ನು ಫ್ರಾಂಕ್ ಮಾಡಿದ್ದರು. ಆ ವಿಡಿಯೋ ಜಾಲತಾಣದಲ್ಲಿ ಪ್ರಶಂಸೆ ಪಡೆಯುತ್ತಿದೆ' ಎಂದರು.
ವೇದಿಕೆಯಲ್ಲಿ ಕಲಾವಿದರಾದ ಯುವ ಕಿಶೋರ್, ಲೋಕೇಂದ್ರ, ಸೂರಜ್ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು.
ಏಪ್ರಿಲ್ 25ರಂದು ಸುಮಾರು 60 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರಕ್ಕೆ ಜಾನ್ ಕೆನಡಿ ಸಂಗೀತ ಸಂಯೋಜಿಸಿದ್ದು, ನಾಲ್ಕು ಹಾಡುಗಳು ಚಿತ್ರದಲ್ಲಿವೆ. ಅಜಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ಬಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ರತೀಶ್ ಕುಮಾರ್ , ಮಜಾಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರು ಇದ್ದಾರೆ.