Actress Soundarya: ಸೌಂದರ್ಯ ಸಾವಿನ ಹಿಂದೆ ಕೊಲೆ ಸಂಚು? ಬಹಿರಂಗ ಪತ್ರ ಬರೆದ ನಟಿಯ ಪತಿ ರಘು
ಸೌಂದರ್ಯ ಸಾವು ಆಕಸ್ಮಿಕ ಅಲ್ಲ, ಅದು ಹತ್ಯೆ. ಅದಕ್ಕೆ ನಟ ಮೋಹನ್ ಬಾಬು ಕಾರಣ ಎಂದು ಇತ್ತೀಚೆಗೆ ಖಮ್ಮಂ ಮೂಲದ ಚಿಟ್ಟಿಬಾಬು ಎಂಬವರು ದೂರು ನೀಡಿದ್ದಾರೆ. ಆಂಧ್ರದ ಶಂಶಾಬಾದ್ ಬಳಿಯ ಜಾಲಪಲ್ಲಿಯಲ್ಲಿ ಸೌಂದರ್ಯ ಒಡೆತನದ 6 ಎಕರೆ ಗೆಸ್ಟ್‌ಹೌಸ್ ಇತ್ತು. ಅದರ ಮೇಲೆ ನಟ ಮೋಹನ್ ಬಾಬು ಕಣ್ಣು ಹಾಕಿದ್ದರು. ಅದನ್ನು ನೀಡಲು ಸೌಂದರ್ಯ ಸಹೋದರ ಅಮರನಾಥ್ ಒಪ್ಪಲಿಲ್ಲ. ಹಾಗಾಗಿ ಸಂಚು ನಡೆಸಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ರಘು, ಸೌಂದರ್ಯ, ಮೋಹನ್ ಬಾಬು

ಬೆಂಗಳೂರು: ಖ್ಯಾತ ನಟಿ ಸೌಂದರ್ಯ (actress soundarya) ಅವರ 20 ವರ್ಷಗಳ ಹಿಂದಿನ ದುರಂತ ಮೃತ್ಯುವಿನ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ವಿಮಾನ ಅಪಘಾತದಲ್ಲಿ (Plane Crash) ಇವರ ಸಾವು ಅಕಸ್ಮಿಕವಲ್ಲ, ಕೊಲೆ ಎಂದು ಒಬ್ಬರು ನಟ, ನಿರ್ಮಾಪಕ ಮೋಹನ್ ಬಾಬು (mohan babu) ಅವರ ವಿರುದ್ಧ ಒಳಸಂಚಿನ ಕುರಿತು (allegations) ದೂರು ಸಲ್ಲಿಸಿದ್ದಾರೆ. ಅದರ ಹಿಂದೆಯೇ ಸೌಂದರ್ಯ ಅವರ ಪತಿ ರಘು ಅವರು ಬಹಿರಂಗ ಪತ್ರ ಬರೆದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸೌಂದರ್ಯ ಅವರು ಬಿಜೆಪಿ ಪರ ಪ್ರಚಾರ ಮಾಡಲು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರ ಪ್ರದೇಶಕ್ಕೆ ಹೊರಟಿದ್ದರು. ಟೇಕಾಫ್ ಆಗಿದ್ದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ದುರಂತಕ್ಕೀಡಾಗಿ ಸಾವನ್ನಪ್ಪಿದ್ದರು. ಸೌಂದರ್ಯ ಸಾವು ಆಕಸ್ಮಿಕ ಅಲ್ಲ, ಅದು ಹತ್ಯೆ. ಅದಕ್ಕೆ ನಟ ಮೋಹನ್ ಬಾಬು ಕಾರಣ ಎಂದು ಇತ್ತೀಚೆಗೆ ಖಮ್ಮಂ ಮೂಲದ ಚಿಟ್ಟಿಬಾಬು ಎಂಬವರು ದೂರು ನೀಡಿದ್ದಾರೆ. ಆಂಧ್ರದ ಶಂಶಾಬಾದ್ ಬಳಿಯ ಜಾಲಪಲ್ಲಿಯಲ್ಲಿ ಸೌಂದರ್ಯ ಒಡೆತನದ 6 ಎಕರೆ ಗೆಸ್ಟ್‌ಹೌಸ್ ಇತ್ತು. ಅದರ ಮೇಲೆ ನಟ ಮೋಹನ್ ಬಾಬು ಕಣ್ಣು ಹಾಕಿದ್ದರು. ಅದನ್ನು ನೀಡಲು ಸೌಂದರ್ಯ ಸಹೋದರ ಅಮರನಾಥ್ ಒಪ್ಪಲಿಲ್ಲ. ಹಾಗಾಗಿ ಸಂಚು ನಡೆಸಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಈ ಆರೋಪದ ಬಗ್ಗೆ ಸ್ವತಃ ಸೌಂದರ್ಯ ಅವರ ಪತಿ ಜಿ. ಎಸ್. ರಘು ಪ್ರತಿಕ್ರಿಯಿಸಿದ್ದು, ಬಹಿರಂಗ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. "ಕೆಲ ದಿನಗಳಿಂದ ನಟ ಮೋಹನ್ ಬಾಬು ಹಾಗೂ ಸೌಂದರ್ಯಗೆ ಸಂಬಂಧಿಸಿದಂತೆ ಹೈದರಾಬಾದ್ ಆಸ್ತಿಯ ವಿಚಾರವಾಗಿ ಸುಳ್ಳು ಸುದ್ದಿ ಕೇಳಿಬರುತ್ತಿದೆ. ಈ ನಿರಾಧಾರ ಸುಳ್ಳು ಸುದ್ದಿಯನ್ನು ನಾನು ಖಂಡಿಸುತ್ತೇನೆ. ನನ್ನ ಪತ್ನಿ ದಿವಂಗತ ಸೌಂದರ್ಯರಿಂದ ನಟ ಮೋಹನ್ ಬಾಬು ಯಾವ ಆಸ್ತಿಯನ್ನೂ ಅಕ್ರಮವಾಗಿ ತೆಗೆದುಕೊಳ್ಳಲಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ನನಗೆ ಗೊತ್ತಿರುವಂತೆ ನಾವು ಅವರೊಂದಿಗೆ ಯಾವುದೇ ಭೂ ವ್ಯವಹಾರ ನಡೆಸಿಲ್ಲ" ಎಂದು ರಘು ಬರೆದುಕೊಂಡಿದ್ದಾರೆ.
"ನನಗೆ ಕಳೆದ 25 ವರ್ಷಗಳಿಂದ ಮೋಹನ್ ಬಾಬು ಪರಿಚಯವಿದೆ. ಅವರೊಟ್ಟಿಗೆ ನಮ್ಮ ಕುಟುಂಬ ಬಹಳ ಆತ್ಮೀಯ, ಉತ್ತಮ ಸ್ನೇಹ ಹಂಚಿಕೊಂಡಿದೆ. ನನ್ನ ಪತ್ನಿ, ಅತ್ತೆ, ಭಾವನಿಗೆ ಮೋಹನ್ ಬಾಬು ಬಗ್ಗೆ ಪರಸ್ಪರ ನಂಬಿಕೆ ಗೌರವವಿದೆ. ನಾನು ಕೂಡ ಮೋಹನ್ ಬಾಬು ಅವರನ್ನು ತುಂಬಾ ಗೌರವಿಸುತ್ತೇನೆ. ಹಾಗಾಗಿ ಈ ಸತ್ಯವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಯಸುತ್ತೇನೆ. ನಾವು ಮೋಹನ್ ಬಾಬು ಸರ್ ಜೊತೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದೇವೆ. ನಾವೆಲ್ಲಾ ಒಂದೇ ಕುಟುಂಬದಂತೆ ಇದ್ದೇವೆ. ಅವರೊಟ್ಟಿಗೆ ನಮಗೆ ಯಾವುದೇ ಆಸ್ತಿ ವ್ಯವಹಾರ ಇಲ್ಲ ಎಂದು ನಾನು ಮತ್ತೆ ಹೇಳುತ್ತಿದ್ದೇನೆ. ಇದು ಸುಳ್ಳು ಸುದ್ದಿ ಆಗಿರುವುದರಿಂದ ಪ್ರಚಾರ ಮಾಡುವುದನ್ನು ನಿಲ್ಲಿಸಬೇಕೆಂದು ಕೋರುತ್ತಿದ್ದೇನೆ" ಎಂದು ದಿವಂಗತ ನಟಿ ಸೌಂದರ್ಯ ಪತಿ ರಘು ತಿಳಿಸಿದ್ದಾರೆ.
ಬಹುಭಾಷಾ ನಟಿ ಸೌಂದರ್ಯ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಆಕೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಹೆಚ್ಚು ಜನಪ್ರಿಯತೆ ಸಾಧಿಸಿದ್ದರು. ʼಆಪ್ತಮಿತ್ರʼ ಅವರಿಗೆ ಕನ್ನಡದಲ್ಲಿ ಭಾರಿ ಖ್ಯಾತಿ ತಂದುಕೊಟ್ಟಿತ್ತು. 'ರಾಯುಡು', 'ಶ್ರೀರಾಮುಲಯ್ಯ', 'ಪೆದರಾಯುಡು', 'ಕೊಂಡವೀಟಿ ಸಿಂಹಾಸನ', 'ಪೋಸ್ಟ್ ಮ್ಯಾನ್' ಸಿನಿಮಾಗಳಲ್ಲಿ ಮೋಹನ್ ಬಾಬು ಜೊತೆ ಸೌಂದರ್ಯ ತೆರೆ ಹಂಚಿಕೊಂಡಿದ್ದರು. 'ಶಿವ ಶಂಕರ್' ಸೌಂದರ್ಯ ನಟಿಸಿದ ಕೊನೆಯ ಸಿನಿಮಾ. ಮೋಹನ್ ಬಾಬು ಜೊತೆಗೆ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ತಮ್ಮ ಮೇಲಿನ ಆರೋಪದ ಬಗ್ಗೆ ನಟ ಮೋಹನ್ ಬಾಬು ಪ್ರತಿಕ್ರಿಯಿಸಿಲ್ಲ.