ಬೆಂಗಳೂರು: 'ಒಳಿತು ಮಾಡು ಮನುಸʼ ಹಾಡಿನ ಖ್ಯಾತಿಯ ನಮ್ ಋಷಿ, ನಿರ್ಮಾಣ, ನಿರ್ದೇಶನ ಹಾಗೂ ನಟನೆಯ ʼಫ್ರಾಡ್ ಋಷಿʼ ಚಿತ್ರದ (Fraud Rushi Movie) ಎರಡನೇ ಹಾಡು ʼಇವನೇ ಇವನೇ ಫ್ರಾಡು ಋಷಿʼ ಇತ್ತೀಚೆಗೆ ಬಿಡುಗಡೆಯಾಗಿದೆ. ನಮ್ ಋಷಿ ಬರೆದು ಶ್ರೀಗುರು ಸಂಗೀತ ನೀಡಿರುವ ಹಾಗೂ ಸೋಮಶೇಖರ್ ಅವರು ಹಾಡಿರುವ ಈ ಹಾಡನ್ನು ನಿರ್ಮಾಪಕ ಕೆ. ಮಂಜು ಬಿಡುಗಡೆ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಮ್ ಋಷಿ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
ಸಿನಿಮಾ ಮಾಡುವುದಕ್ಕೆ ದುಡ್ಡು ಬೇಕಾಗಿಲ್ಲ, ಒಳ್ಳೆಯ ತಂಡ ಬೇಕು. ಒಳ್ಳೆಯ ತಂಡವೆಂದರೆ, ಒಬ್ಬರನ್ನೊಬ್ಬರು ಪ್ರೀತಿಸುವಂತಿರಬೇಕು. ಅವರು ಬೆಳೆದರೆ ನಾವು ಖುಷಿಪಡಬೇಕು. ನಾವು ಬೆಳೆದರೆ ಅವರು ಖುಷಿಪಡಬೇಕು. ಸಣ್ಣ ವಿಷಯಗಳಿಗೆ ಕಿತ್ತಾಟಗಳಾಗುತ್ತವೆ. ಅದನ್ನೆಲ್ಲಾ ಮೀರಿದ ಒಂದು ತಂಡವಿರಬೇಕು. ಮಧು, ಸೋಮಶೇಖರ್, ಹರಿಕೃಷ್ಣ, ಮಂಜುನಾಥ್ ಮುಂತಾದವರ ಸಹಕಾರದಿಂದ ಈ ಚಿತ್ರ ರೂಪುಗೊಳ್ಳುತ್ತಿದೆ. ನಾನು ಕಲಾವಿದರಿಗೆ ದುಡ್ಡು ಕೊಟ್ಟು ನಟನೆ ಮಾಡಿಸುವುದಿಲ್ಲ. ಕಲಾವಿದರಲ್ಲಿ ಎರಡು ತರಹದ ಕಲಾವಿದರಿರುತ್ತಾರೆ. ಕೆಲವರು ವೃತ್ತಿಪರ ಕಲಾವಿದರು. ಇನ್ನೂ, ಕೆಲವರು ಪ್ಯಾಶನ್‍ಗಾಗಿ ಅಭಿನಯ ಮಾಡುತ್ತಾರೆ. ಅವರಿಗೆ ಹಣದ ಅವಶ್ಯಕತೆ ಇರುವುದಿಲ್ಲ. ವೃತ್ತಿಪರ ಕಲಾವಿದರಿಗೆ ದುಡ್ಡು ಕೊಡಬೇಕಾಗುತ್ತದೆ. ಆದರೆ, ಇನ್ನೊಂದು ಪ್ಯಾಶನ್ ಇರುವವರನ್ನು ಆಯ್ಕೆ ಮಾಡಿಕೊಂಡರೆ, ಅವರಿಗೆ ಹಣ ನೀಡದಿದ್ದರೂ ಆಗುತ್ತದೆ. ಜತೆಗೆ ಅವರಿಂದ ಸಹಕಾರವೂ ಸಿಗುತ್ತದೆ. ನಾನು ಅಂಥವರನ್ನೇ ಆಯ್ಕೆ ಮಾಡಿಕೊಂಡು ಚಿತ್ರ ಮಾಡುತ್ತಿದ್ದೇನೆ.
ಈ ಚಿತ್ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತದೆ. ಅಕ್ಟೋಬರ್ 10 ರಿಂದ ಚಿತ್ರೀಕರಣ ಶುರುವಾಗಲಿದೆ. ಇದು ದೊಡ್ಡ ಬಜೆಟ್ ಚಿತ್ರವಲ್ಲ. ಆದರೆ, ಕಂಟೆಂಟ್ ಬಹಳ ಚೆನ್ನಾಗಿದೆ. ಚಿತ್ರದಲ್ಲಿ ಎಂಟು ಹಾಡುಗಳಿವೆ. ನನ್ನ ಮೂರು ಯಶಸ್ವಿ ಹಾಡುಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇನೆ. ಕಡಿಮೆ ಬಜೆಟ್‍ನಲ್ಲಿ ಈ ಚಿತ್ರ ಮಾಡುತ್ತಿದ್ದೇನೆ. ಶಂಕರ್ ಛಾಯಾಗ್ರಹಣ ಮತ್ತು ಶ್ರೀಗುರು ಸಂಗೀತ ಈ ಚಿತ್ರಕ್ಕಿದೆ. ಒಂದೊಳ್ಳೆಯ ತಂಡ ಕಟ್ಟಿದ್ದೇನೆ. ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದಾರೆ. ಯಾಕೆ ಅಷ್ಟೊಂದು ಜನ ಎಂದು ಚಿತ್ರ ನೋಡಿದರೆ ಗೊತ್ತಾಗುತ್ತದೆ. ಇದುವರೆಗೂ ಯಾರೂ ಮುಟ್ಟದ ಮತ್ತು ಎಲ್ಲರೂ ಹೇಳುವುದಕ್ಕೆ ಹೆದರುವ ಒಂದು ವಿಷಯವನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಇದೊಂದು ಸೂಕ್ಷ್ಮ ವಿಷಯವಿರುವ ಕಥೆ. ಜನರಿಗೆ ಚಿತ್ರ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.
ʼಫ್ರಾಡ್ ಋಷಿʼ ಎಂದು ಏಕೆ ಇಟ್ಟಿದ್ದೇವೆ? ಎಂದು ಚಿತ್ರ ನೋಡಿದರೆ ಗೊತ್ತಾಗುತ್ತದೆ. ಫ್ರಾಡ್ ಅಂದರೆ ಮೋಸ ಮಾಡುವವರು ಅಂತ. ನಾವು ಬೇರೆಯವರು ಬದಲಾಯಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ, ನಾವು ಬೇರೆಯವರಿಗೆ ಬುದ್ಧಿ ಹೇಳುವುದಕ್ಕಿಂತ ನಾವೆಷ್ಟು ಬದಲಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಬೇರೆಯವರನ್ನು ಫ್ರಾಡ್ ಎಂದು ಕರೆದರೆ ಸಮಾಜ ಒಪ್ಪುವುದಿಲ್ಲ. ಅದೇ ನಮ್ಮನ್ನು ನಾವು ಫ್ರಾಡ್ ಎಂದು ಕರೆದರೆ ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಈ ಹೆಸರಿಟ್ಟಿದ್ದೇನೆ. ಈ ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ಚಿತ್ರೀಕರಣದ ಪೂರ್ವಭಾವಿಯಾಗಿ ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿದೆ. ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಕೆ. ಮಂಜು ಅವರಿಗೆ ಧನ್ಯವಾದ ಎಂದು ನಮ್ ಋಷಿ ಹೇಳಿದರು.
ಈ ಸುದ್ದಿಯನ್ನೂ ಓದಿ | Navaratri Nailart 2025: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಯ್ತು ನವರಾತ್ರಿ ನೇಲ್ ಆರ್ಟ್