ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1 Review: ಕಾಂತಾರ ಚಾಪ್ಟರ್‌ 1 ಎಂಬ ಮೂರು ಗಂಟೆಗಳ ರೋಮಾಂಚನ!

Rishab Shetty: ತುಳುನಾಡಿಗೆ ಕೈಲಾಸದಿಂದ ಅವತರಿಸುವ ಶಿವಗಣಗಳು ದೈವವಾಗಿ ನಾಡನ್ನು ಕಾಯುತ್ತವೆ. ಇದರ ನಡುವೆ ದೈವವನ್ನು ಬಂಧಿಸಲು ಯತ್ನಿಸುವ ದುರ್ಜನರು ಇದ್ದಾರೆ. ಈ ದುರ್ಜನರನ್ನು ಮಟ್ಟಹಾಕಲು ಮನುಷ್ಯಶಕ್ತಿಯೂ ದೈವಶಕ್ತಿಯೂ ಕೈ ಜೋಡಿಸಬೇಕಾಗುತ್ತದೆ. ರಿಷಬ್‌ ಶೆಟ್ಟಿಯ ಬೆರ್ಮೆ ಪಾತ್ರದಲ್ಲಿ ಇವೆರಡೂ ಜೋಡಿಯಾಗಿ ನಮ್ಮನ್ನು ರೋಮಾಂಚಿತಗೊಳಿಸುತ್ತವೆ.

ಕಾಂತಾರ ಚಾಪ್ಟರ್‌ 1 ಬರೀ ಸಿನಿಮಾ (Kantara Chapter 1) ಅಲ್ಲ, ಅದೊಂದು ಅನುಭೂತಿ. ಅದನ್ನು ಕಥೆಗಾಗಿ ನೋಡಬಾರದು, ಅದು ನೀಡುವ ರೋಮಾಂಚನಕ್ಕಾಗಿ ನೋಡಬೇಕು. ಅದು ನೀಡುವ ದೃಶ್ಯವೈಭವ, ಸೀಟಿನ ತುದಿಗೆ ತಂದು ಕೂರಿಸುವ ಥ್ರಿಲ್ಲಿಂಗ್‌ ಹೊಡೆದಾಟದ ದೃಶ್ಯಗಳು, ಕಾಡಿನ ಮರೆಯಲ್ಲಿ ಹುದುಗಿಕೊಂಡ ರಹಸ್ಯಗಳು, ತುಳುನಾಡಿನ ದೈವಗಳು ಮತ್ತು ಅದರಿಂದ ಕಾಯಲ್ಪಡುವ ಮನುಷ್ಯಲೋಕದ ಆಟ- ಹೋರಾಟಗಳ ಭಾವುಕ- ರಮ್ಯ ಲೋಕದ ಚಿತ್ರಣಕ್ಕಾಗಿ ಇದನ್ನು ನೋಡಬೇಕು. ದೊಡ್ಡ ತೆರೆಯಲ್ಲಿ ನೋಡಿದರೆ ಮಾತ್ರವೇ ಈ ದೃಶ್ಯ ವೈಭವದ ನೈಜ ಸಾಕ್ಷಾತ್ಕಾರ ಸಾಧ್ಯ.

ಕಥೆಯಲ್ಲಿ ಹೊಸತೇನಿಲ್ಲ. ಅದು ಒಳಿತು ಕೆಡುಕುಗಳ ಸಮರ. ಒಳಿತಿನ ವಿಜಯ. ಕೇಡಿನ ಶಕ್ತಿಗಳ ವಿರುದ್ಧ ಸಜ್ಜನರ, ಮನುಷ್ಯರು ನಂಬಿದ ದೈವಗಳ ವಿಜಯ. ಆರಂಭದಲ್ಲಿಯೇ ತುಳುನಾಡಿಗೆ ಕೈಲಾಸದಿಂದ ಅವತರಿಸುವ ಶಿವಗಣಗಳು ದೈವವಾಗಿ ನಾಡನ್ನು ಕಾಯುತ್ತವೆ. ಇದರ ನಡುವೆಯೂ ದೈವವನ್ನು ಬಂಧಿಸಲು ಯತ್ನಿಸುವ ದುರ್ಜನರು ಇದ್ದಾರೆ. ಈ ದುರ್ಜನರನ್ನು ಮಟ್ಟಹಾಕಲು ಮನುಷ್ಯಶಕ್ತಿಯೂ ದೈವಶಕ್ತಿಯೂ ಕೈ ಜೋಡಿಸಬೇಕಾಗುತ್ತದೆ. ರಿಷಬ್‌ ಶೆಟ್ಟಿಯ ಬೆರ್ಮೆ ಪಾತ್ರದಲ್ಲಿ ಇವೆರಡೂ ಜೋಡಿಯಾಗಿ ನಮ್ಮನ್ನು ರೋಮಾಂಚಿತಗೊಳಿಸುತ್ತವೆ.

ತುಳುನಾಡನ್ನು ಬಂಗ್ರ ಅರಸರು ಆಳುತ್ತಿದ್ದಾರೆ. ಬಂಗ್ರದ ಅರಸರ ಹೊಸ ರಾಜಕುಮಾರನಿಗೂ ಕಾಂತಾರದ ಕಾನನ ನಿವಾಸಿಗಳಿಗೂ ಇಕ್ಕಟ್ಟು ಬಿಕ್ಕಟ್ಟುಗಳು ತಲೆದೋರುತ್ತವೆ. ಇದನ್ನು ಪರಿಹರಿಸಲು ಕಾಂತಾರ ನಿವಾಸಿಗಳು ತಮಗೆ ಪರಿಚಿತವಲ್ಲದ ಹೊಸ ಲೋಕವನ್ನು ಪರಿಚಯಿಸಿಕೊಳ್ಳಬೇಕಾಗುತ್ತದೆ. ಕಾಡಿನ ಜೀವಿಗಳಿಗೆ ಆಧುನಿಕವೆನಿಸುವ ಕಾಳುಮೆಣಸಿನ ವ್ಯಾಪಾರ, ಬಂದರು, ಪೋರ್ಚುಗೀಸರು ಇವರೆಲ್ಲರೂ ಕತೆಯ ಆವರಣದೊಳಗೆ ಬರುತ್ತಾರೆ. ಕದಂಬರ ಕಾಲದಲ್ಲಿ ಕರ್ನಾಟಕಕ್ಕೆ ಪರಿಚಯವಾದ ಇವೆಲ್ಲವೂ ಕರಾವಳಿಯ ಈ ಕತೆಯಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡು ಆ ಕಾಲದ ಐತಿಹಾಸಿಕ- ಸಾಮಾಜಿಕ ಆವರಣವನ್ನು ಚೆನ್ನಾಗಿ ಕಣ್ಣ ಮುಂದೆ ನಿಲ್ಲಿಸಿವೆ.

ಕಾಂತಾರ ಮೊದಲ ಭಾಗದಲ್ಲಿ ಕಾಣಿಸಿಕೊಂಡ ದೈವಗಳು ಇಲ್ಲೂ ಇವೆ. ಪಂಜುರ್ಲಿ ದೈವದ ʼನಾನು ಬಿಟ್ಟರೂ ಕ್ಷೇತ್ರಪಾಲʼ ಬಿಡಲಾರ ಎಂಬ ಮಾತು ಮತ್ತೆ ನಿಜವಾಗುತ್ತದೆ. ಗುಳಿಗ ನೆತ್ತರು ಗುಳಿಗನಾಗಿ, ಅಗ್ನಿ ಗುಳಿಗನಾಗಿ, ಹೀಗೆ ನಾನಾವತಾರಗಳಲ್ಲಿ ರೋಮಾಂಚನ ಮೂಡಿಸುತ್ತಾನೆ. ಮೊದಲ ಭಾಗದಲ್ಲಿ ಇವರೆಲ್ಲರೂ ಬಂದು ಇಂಟರ್‌ವಲ್‌ ಕಾಣಿಸಿಕೊಂಡು, ಇನ್ನೇನು ಉಳಿದಿದೆ ಎಂದು ಪ್ರೇಕ್ಷಕ ಅಂದುಕೊಳ್ಳುವಂತಾಗುತ್ತದೆ. ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳುವ ಟ್ವಿಸ್ಟ್‌ ಅನ್ನು ನೀವು ಊಹಿಸಲಾರಿರಿ. ಆ ತಿರುವೇ ಕತೆಯ ಕೊನೆಯನ್ನು ಎಂದೂ ಮರೆಯಲಾಗದ ಒಂದು ದಿವ್ಯಾನುಭೂತಿಯಾಗಿ ಮಾಡುತ್ತದೆ. ಹದವಾದ ಗ್ರಾಫಿಕ್ಸ್‌ ಕೆಲಸಗಳು, ಅದ್ಭುತವಾದ ಸೆಟ್‌ಗಳು ಒಂದು ಸಾವಿರ ವರ್ಷಗಳ ಹಿಂದಿನ ಕತೆಯನ್ನು ನಮ್ಮ ಕಣ್ಣ ಮುಂದೆ ಸಾಕ್ಷಾತ್ಕರಿಸುತ್ತವೆ. ಕಾಡಿನಲ್ಲಿ ನಡೆಯುವ ಮೈ ನಡುಗಿಸುವ ಸಂಗತಿಗಳು, ವಿಚಿತ್ರ ಪ್ರಾಣಿಗಳು ನಮ್ಮನ್ನು ಕಕ್ಕಾಬಿಕ್ಕಿಯಾಗಿಸಲು ಸಮರ್ಥವಾಗಿವೆ.

ರಿಷಬ್‌ ಶೆಟ್ಟಿ ಅಕ್ಷರಶಃ ಚಿತ್ರವನ್ನು ಹೆಗಲ ಮೇಲೆ ಹೊತ್ತಿದ್ದಾರೆ. ಚೆನ್ನಾಗಿ ಕಟೆದು ಕಟ್ಟುಮಸ್ತಾಗಿಸಿಕೊಂಡ ಅವರ ಶರೀರವನ್ನು ದೈವಗಳು ನಾಟ್ಯ ಮಂದಿರವಾಗಿಸಿಕೊಂಡಿವೆ. ಆರಂಭದಿಂದ ಕೊನೆಯವರೆಗೂ ಅವರ ಎನರ್ಜಿ ಚಿತ್ರವನ್ನು ಸಾಗಿಸಿದೆ. ಯುವರಾಣಿ ಕನಕವತಿಯಾಗಿ ರುಕ್ಮಿಣಿ ವಸಂತ್‌ ಮೊದಲ ಭಾಗದಲ್ಲಿ ತಂಗಾಳಿಯಾಗಿ, ಎರಡನೇ ಭಾಗದಲ್ಲಿ ಬೆಂಕಿ ಬಿರುಗಾಳಿಯಾಗಿ ಕಾಣಿಸಿಕೊಳ್ಳುತ್ತಾರೆ. ಸಟಲ್‌ ಆದ ಅವರ ಅಭಿನಯ ಚಿತ್ರದ ಇನ್ನೊಂದು ಜೀವಾಳ. ವಿಲನ್‌ಗಳಾಗಿ ಗುಲ್ಶನ್‌ ದೇವಯ್ಯ, ಜಯರಾಮ್‌ ತಮ್ಮ ಪಾತ್ರಗಳಿಗೂ ಚಿತ್ರಕ್ಕೂ ಇನ್ನಷ್ಟು ಜೀವ ತುಂಬಿದ್ದಾರೆ. ತುಳುವಿನ ಬಹು ಬೇಡಿಕೆಯ ಕಲಾವಿದರಾದ ನವೀನ್‌ ಡಿ ಪಡೀಲ್‌, ದೀಪಕ್‌ ಶೆಟ್ಟಿ, ಪ್ರಕಾಶ್‌ ತುಮಿನಾಡು ಈ ಸಲವೂ ಸಿನಿಮಾಗೆ ಹಾಸ್ಯದ ಸ್ಪರ್ಶ ನೀಡಿದ್ದಾರೆ. ಚಿತ್ರೀಕರಣದ ಬಳಿಕ ಮಡಿದ ರಾಕೇಶ್‌ ಪೂಜಾರಿ ಅವರ ಪಾತ್ರವೂ ಸಾಕಷ್ಟು ಸ್ಕ್ರೀನ್‌ ಸ್ಪೇಸ್‌ ಪಡೆದುಕೊಂಡಿದೆ.

ಕಾಂತಾರ ಮತ್ತೊಮ್ಮೆ ಅಬ್ಬರಿಸಿದೆ. ಗಳಿಕೆಯ ವಿಷಯದಲ್ಲಿ ಇದು ಇನ್ನೊಂದು ದಾಖಲೆ ಮಾಡುವುದು ನಿಶ್ಚಿತವಾಗಿದೆ. ಕನ್ನಡ ಚಿತ್ರೋದ್ಯಮಕ್ಕೆ ಈಗಾಗಲೇ ಬಂದಿರುವ ಪ್ಯಾನ್‌ ಇಂಡಿಯಾ ಇಮೇಜನ್ನು ಇನ್ನಷ್ಟು ಗಟ್ಟಿಗೊಳಿಸಲೂ ಇದು ನೆರವಾಗಲಿದೆ. ಆದರೆ ಸಿನೆಮಾ ಅನುಭೂತಿಗಾಗಿ ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕನಿಗೆ ಇದು ಪೈಸಾ ವಸೂಲ್‌, ಪಕ್ಕಾ ರಸದೌತಣ ಅನ್ನುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: Kantara Chapter 1: ತೆರೆಮೇಲೆ ಮತ್ತೊಮ್ಮೆ ದೈವ ದರ್ಶನ ಮಾಡಿಸಿದ ರಿಷಬ್‌ ಶೆಟ್ಟಿ; ʼಕಾಂತಾರ: ಚಾಪ್ಟರ್‌ 1' ನೋಡಿದವರು ಏನಂದ್ರು?

ಹರೀಶ್‌ ಕೇರ

View all posts by this author