ಬೆಂಗಳೂರು: ರಿಷಬ್ ಶೆಟ್ಟಿ (Rishab shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ವಾರಾಂತ್ಯದಲ್ಲಿ ಒಳ್ಳೇ ಕಲೆಕ್ಷನ್ (Kantara Chpter 1 collection) ಮಾಡಿ ಸೋಮವಾರವೂ ದಾಪುಗಾಲು ಹಾಕಿದೆ. ಕಳೆದ ಗುರುವಾರ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಮೊದಲ ದಿನವೇ ಸುಮಾರು 80 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿತ್ತು. ವಾರಾಂತ್ಯದಲ್ಲಿ ಸಾಕಷ್ಟು ಜನ ಥಿಯೇಟರ್‌ಗೆ ನುಗ್ಗಿದ್ದರು. ಸೋಮವಾರವೂ ಅದರ ಗಳಿಕೆ ತಗ್ಗಿಲ್ಲ.
ಶನಿವಾರ, ಭಾನುವಾರಗಳಿಗೆ ಹೋಲಿಸಿದರೆ ಸಿನಿಮಾದ ಗಳಿಕೆ ಸೋಮವಾರ ತುಸು ಕುಸಿದಿದೆಯಾದರೂ, ಉತ್ತಮ ಮೊತ್ತವೇ ಚಿತ್ರ ನಿರ್ಮಾಪಕರ ಕೈ ಸೇರಿದೆ. ಸೋಮವಾರದ ದಿನ ‘ಕಾಂತಾರ: ಚಾಪ್ಟರ್ 1’ ಸಿನಿಮಾ 30 ಕೋಟಿಗೂ ಹೆಚ್ಚಿನ ಮೊತ್ತದ ಹಣವನ್ನು ಗಳಿಕೆ ಮಾಡಿದೆ. ಆ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 250 ಕೋಟಿಯನ್ನು ದಾಟಿದೆ.
ಸೋಮವಾರದಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 30.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೊತ್ತದಲ್ಲಿ ಅತಿ ಹೆಚ್ಚಿನ ಮೊತ್ತ ಕರ್ನಾಟಕದಿಂದಲೇ ಕಲೆಕ್ಷನ್ ಆಗಿದೆ. ಕರ್ನಾಟಕದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೋಮವಾರದಂದು ಸಹ ಸುಮಾರು 75% ಆಕ್ಯುಪೆನ್ಸಿ ಇತ್ತೆನ್ನುತ್ತದೆ ವರದಿ. ತಮಿಳಿನಲ್ಲಿ 43%, ಮಲಯಾಳಂನಲ್ಲಿ 40%, ತೆಲುಗಿನಲ್ಲಿ ತುಸು ಕಡಿಮೆ 36% ಹಾಗೂ ಹಿಂದಿ ಭಾಗದಲ್ಲಿ 18% ಆಕ್ಯುಪೆನ್ಸಿ ಇತ್ತು.
ಸೋಮವಾರ 30.50 ಕೋಟಿ ಗಳಿಕೆಯ ಮೂಲಕ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಭಾರತದ ಕಲೆಕ್ಷನ್ ಕೇವಲ ಐದು ದಿನಕ್ಕೆ 250 ಕೋಟಿ ರೂಪಾಯಿ ದಾಟಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಸೃಷ್ಟಿಸಿದ್ದು, ಇನ್ನೊಂದು ವಾರದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲೆಕ್ಷನ್ ಭಾರತದಲ್ಲಿ 500 ಕೋಟಿ ದಾಟುವ ನಿರೀಕ್ಷೆ ಇದೆ. ವಿದೇಶಗಳಲ್ಲಿಯೂ ಈ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದ್ದು ಕಳೆದ ಐದು ದಿನಗಳಲ್ಲಿ ವಿದೇಶಗಳಲ್ಲಿ 100 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಿನಿಮಾ ಕಲೆ ಹಾಕಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಆಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದು, ಹೊಂಬಾಳೆ ಫಿಲಮ್ಸ್ ಸಿನಿಮಾದ ನಿರ್ಮಾಣ ಸಂಸ್ಥೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾನಲ್ಲಿ ಬಾಲಿವುಡ್ನಲ್ಲಿ ಮಿಂಚುತ್ತಿರುವ ಕನ್ನಡದ ನಟ ಗುಲ್ಷನ್ ದೇವಯ್ಯ, ಮಲಯಾಳಂ ನಟ ಜಯರಾಮ್ ಇನ್ನೂ ಹಲವು ನಟರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.