ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: Chapter 1: ನೀವು ದೈವಗಳ ಅನುಕರಣೆ ಮಾಡೋದು ಸರೀನಾ?; ಕಾಂತಾರ-1 ಚಿತ್ರತಂಡದ ವಿರುದ್ಧ ನೆಟ್ಟಿಗರ ಆಕ್ರೋಶ

Sandalwood News: ಒಂದೆಡೆ ಕಾಂತಾರ ಚಿತ್ರತಂಡ ದೈವಗಳನ್ನು ಅನುಕರಿಸಬಾರದು ಎಂದು ಎಚ್ಚರಿಕೆ ನೀಡಿದ್ದರೆ, ಮತ್ತೊಂದೆಡೆ ಚಿತ್ರತಂಡದ ವಿರುದ್ಧ ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಸಿನಿಮಾದಲ್ಲಿ ನೀವು ದೈವಗಳನ್ನು ಅನುಕರಿಸಿದರೆ ಸರಿ, ಪ್ರೇಕ್ಷಕರು ತಮ್ಮ ಖುಷಿಗಾಗಿ ದೈವಗಳನ್ನು ಅನುಕರಣೆ ಮಾಡಿದರೆ ತಪ್ಪಾ? ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಬೆಂಗಳೂರು: ಕಾಂತಾರ: ಚಾಪ್ಟರ್‌ 1 (Kantara: Chapter 1) ಚಿತ್ರ ದೇಶ-ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಕೆಲವೆಡೆ ಪ್ರೇಕ್ಷಕರು, ಸಿನಿಮಾದಲ್ಲಿ ತೋರಿಸಿದ ದೈವಪಾತ್ರಗಳನ್ನು ಅನುಕರಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ಸುದ್ದಿಯಾದ ಬೆನ್ನಲ್ಲೇ ಅಂತಹವರ ವಿರುದ್ಧ ಕಾನೂನು ಕ್ರಮ ಎಚ್ಚರಿಕೆಯನ್ನು ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್‌ ಶೆಟ್ಟಿ ಎಚ್ಚರಿಕೆ ನೀಡಿದ್ದರು. ಆದರೆ, ಇದೀಗ ಚಿತ್ರತಂಡದ ವಿರುದ್ಧವೇ ಕೆಲವರು ಆಕ್ರೋಶ ಹೊರಹಾಕುತ್ತಿರುವುದು ಕಂಡುಬಂದಿದೆ.

ದೈವಗಳನ್ನು ಅನುಕರಿಸುವ ಬಗ್ಗೆ ಪ್ರತಿಕ್ರಿಯಿಸಿದ್ದ ಹೊಂಬಾಳೆ ಫಿಲ್ಮ್ಸ್, ದೈವಾರಾಧನೆ ತುಳುನಾಡಿನ ನಂಬಿಕೆಯ ಪ್ರತೀಕ. ಅದು ತುಳುವರ ಅಸ್ಮಿತೆ. ದೈವದ ಬಗೆಗಿನ ಅಪಾರ ಗೌರವ ಮತ್ತು ಅಚಲ ಶ್ರದ್ಧೆಗೆ ಕಿಂಚಿತ್ತೂ ಚ್ಯುತಿ ಬಾರದಂತೆ ದೈವಗಳ ಮಹಿಮೆಯನ್ನು ಸಾರುವ ಭಕ್ತಿಪೂರ್ವಕ ಕಥೆಯನ್ನು ನಾವು ಕಾಂತಾರ ಸಿನಿಮಾದಲ್ಲಿ ತೋರಿಸಿದ್ದೇವೆ. ಆದರೆ, ಆದರೆ ಕೆಲವರು ಸಿನಿಮಾದಲ್ಲಿ ಬರುವ ಪಾತ್ರಗಳನ್ನು ಅನುಕರಿಸಿ ಎಲ್ಲೆಂದರಲ್ಲಿ ಅನುಚಿತ ರೀತಿಯ ವರ್ತನೆಗಳನ್ನು ಮಾಡುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇದು ನಮ್ಮ ನಂಬಿಕೆಗೆ ಮಾಡುವ ಅಪಚಾರವೂ ಹೌದು, ಅಕ್ಷಮ್ಯ ಅಪರಾಧವೂ ಹೌದು. ಇಂತಹ ವರ್ತನೆಗಳನ್ನು ನಾವು ಖಂಡಿತ ಸಹಿಸುವುದಿಲ್ಲ. ಯಾರಾದರೂ ದೈವಗಳನ್ನು ಅನುಕರಣೆ ಮಾಡಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರತಂಡ ಎಚ್ಚರಿಕೆ ನೀಡಿತ್ತು.

ಆದರೆ, ಒಂದೆಡೆ ದೈವಗಳನ್ನು ಅನುಕರಿಸಬಾರದು ಎಂದು ಚಿತ್ರತಂಡ ಎಚ್ಚರಿಕೆ ನೀಡಿದ್ದರೆ, ಮತ್ತೊಂದೆಡೆ ಚಿತ್ರತಂಡದ ವಿರುದ್ಧ ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬಗ್ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ಒಂದು ಆರಾಧನಾ ಪದ್ಧತಿಯನ್ನು, ಜನರ ಶೃದ್ಧೆಯನ್ನು ಕಮರ್ಷಿಯಲ್ ಸರಕಾಗಿ ನ್ಯಾಯಯುತ ಹಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಹಣಕ್ಕೆ ಮಾರಬಹುದು. ಆದರೆ ಜನರು ಏನೋ ತಮ್ಮ ಸಂತೋಷಕ್ಕೆ ಇಮಿಟೇಟ್ ಮಾಡಿದರೆ ಮಾತ್ರ ನೀವು ಸಹಿಸಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅದೂ ಬಿಡಿ, ರಾಜ್ ಶೆಟ್ಟಿ ತಮ್ಮ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಕೊಲೆ ಮಾಡಿ ಮೈಮೇಲೆಲ್ಲಾ ರಕ್ತ ಮೆತ್ತಿಕೊಂಡು 'ಸೋಜುಗಾದಾ ಸೂಜುಮಲ್ಲಿಗೆ' ಹಾಡಿಗೆ ಕುಣಿದರಲ್ಲಾ... ಅದು ಇನ್ನೊಬ್ಬರ ನಂಬಿಕೆಯಲ್ವ? ಮಾದಪ್ಪನ ಭಕ್ತರು ಆಕ್ಷೇಪ ಎತ್ತಿದರೂ ಕನಿಷ್ಠ ಒಂದು ವಿಷಾದ ವ್ಯಕ್ತಪಡಿಸಲಿಲ್ಲ ಯಾಕೆ? ಎಂದು ಕಿಡಿಕಾರಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸುತ್ತಾ, ಬೆಲ್ ಬಾಟಮ್ ಚಿತ್ರದಲ್ಲಿ ಕೂಡ ಕಳ್ಳತನ ಮಾಡುವ ದೃಶ್ಯಕ್ಕೆ ಸಿದ್ದಪ್ಪಾಜಿ ಹಾಡು ಬಳಸಿದ್ದಾರೆ. ಅದೇ ರೀತಿ ಮೆರವಣಿಗೆಗಳಲ್ಲಿ ವೀರಗಾಸೆ ಅಥವಾ ಕರಗದ ವೇಷ ಹಾಕಿಕೊಂಡು, ಅಸಭ್ಯ ಹಾಡುಗಳಿಗೆ ಕುಣಿಯುವುದು ಕೂಡ ನಮ್ಮ ನಂಬಿಕೆಗಳಿಗೆ ಅಪಮಾನ ಮಾಡಿದಂತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.



ಈ ಸುದ್ದಿಯನ್ನೂ ಓದಿ | Kantara Chapter 1: ನಿಲ್ಲದ ಅತಿರೇಕ; ʼಕಾಂತಾರ: ಚಾಪ್ಟರ್‌ 1' ಚಿತ್ರ ನೋಡಲು ಥಿಯೇಟರ್‌ಗೆ ದೈವದ ವೇಷ ತೊಟ್ಟು ಬಂದ ವ್ಯಕ್ತಿ

ದೈವಾರಾಧನೆಯ ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ

ದೈವಗಳ ಅನುಕರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಿಷಬ್‌ ಶೆಟ್ಟಿಗೆ ತುಳುಕೂಟ ಪತ್ರ ಬರೆದಿತ್ತು. ನಂತರ ಈ ಕುರಿತು ಪ್ರತಿಕ್ರಿಯಿಸಿದ್ದ ಹೊಂಬಾಳೆ ಫಿಲ್ಸ್ಮ್, ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ಹೋಲುವುದು ಅಥವಾ ಅವರ ರೂಪ-ವೇಷಧಾರಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೃತ್ಯಗಳಿಂದ ದೂರವಿರಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿತ್ತು.

ತುಳುನಾಡಿನ ಸಂಸ್ಕೃತಿಯ ಪ್ರೌಢತೆಯ ಸಂಕೇತವಾದ ದೈವಾರಾಧನೆ ನಮ್ಮ ನಂಬಿಕೆ, ಭಕ್ತಿ ಹಾಗೂ ತಾಯ್ನಾಡಿನ ಹೆಮ್ಮೆಯ ಪ್ರತಿರೂಪವಾಗಿದೆ. ಕಾಂತಾರ ಮತ್ತು ಕಾಂತಾರ ಚಾಪ್ಟರ್-1 ಚಿತ್ರಗಳನ್ನು ನಾವು ಗೌರವದೊಂದಿಗೆ ಮಹಿಮೆಯನ್ನು ಕೊಂಡಾಡುವ ಸದುದ್ದೇಶದಿಂದ ನಿರ್ಮಿಸಿದ್ದೇವೆ. ದೈವಾರಾಧನೆಯ ಗೌರವ ಹಾಗೂ ಅಚಲ ಭಕ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಶ್ರಮಪಟ್ಟು ಕೆಲಸಮಾಡಿದ್ದೇವೆ. ಇದರೊಂದಿಗೆ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರಿ ಯಶಸ್ವಿಯಾಗಿದ್ದೇವೆ. ಪ್ರೇಕ್ಷಕರಿಂದ ಬ೦ದಿರುವ ಅಪಾರವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಹೃತ್ತೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಆದಾಗ್ಯೂ, ಇತ್ತೀಚೆಗೆ ಕೆಲವು ಜನರು ಚಿತ್ರದಲ್ಲಿ ತೋರಿಸಿದ ದೈವಪಾತ್ರಗಳನ್ನು ಅನುಕರಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಚಿತ್ರಗಳಲ್ಲಿ ತೋರಿಸಲಾದ ದೈವಾರಾಧನೆ ಅಥವಾ ದೈವಪೂಜೆ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯಕ್ಕೆ ಆಧಾರಿತವಾಗಿದೆ. ಇದನ್ನು ಹಾಸ್ಯಾಸ್ಪದವಾಗಿ ಅಣುಕು ಪ್ರದರ್ಶನ ಮಾಡುವಂತಿಲ್ಲ. ಇಂತಹ ಕೃತ್ಯಗಳು ನಮ್ಮ ನಂಬಿಕೆ ಮತ್ತು ಧಾರ್ಮಿಕ ಸಂವೇದನೆಯನ್ನು ಹೀನಗೊಳಿಸುತ್ತವೆ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ತೀವ್ರ ನೋವುಂಟುಮಾಡುತ್ತವೆ.

ಈ ಸುದ್ದಿಯನ್ನೂ ಓದಿ | Kantara: Chapter 1: ʼಕಾಂತಾರʼ ಚಿತ್ರ ನೋಡಿ ದೈವದ ಅನುಕರಣೆ ಮಾಡಬೇಡಿ; ತುಳುಕೂಟದಿಂದ ಮನವಿ: ನಟ ರಿಷಭ್ ಶೆಟ್ಟಿಗೆ ಪತ್ರ

ಆದುದರಿಂದ, ಹೋಂಬಾಳೆ ಫಿಲ್ಡ್ ಜನತೆ ಹಾಗೂ ಪ್ರೇಕ್ಷಕರಿಗೆ ಮನವಿ ಮಾಡಿಕೊಳ್ಳುತ್ತದೆ – ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ಹೋಲುವುದು ಅಥವಾ ಅವರ ರೂಪ-ವೇಷಧಾರಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೃತ್ಯಗಳಿಂದ ದೂರವಿರಿ. ಇದನ್ನು ಚಿತ್ರಮಂದಿರಗಳಲ್ಲಿ ಆಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಲಿ ಎಲ್ಲೂ ಮಾಡುವಂತಿಲ್ಲ. ದೈವಾರಾಧನೆಯ ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿತ್ತು.