ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫಾರ್ಮ್‌ಹೌಸ್‌ ಕೆಲಸಗಾರರಿಗೆ ಬಲವಂತವಾಗಿ ಮದ್ಯ ಕುಡಿಸಿ ಹಿಂಸೆ; ನಟ ಧನ್ವೀರ್‌ದು ಎನ್ನಲಾದ ವಿಡಿಯೊಗಳು ವೈರಲ್‌!

Actor Dhanveer: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ದರ್ಶನ್ ಆಪ್ತರೆಂದು ಗುರುತಿಸಿಕೊಂಡಿರುವ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಡುವಿನ ಭಿನ್ನಾಭಿಪ್ರಾಯ ಮೂಡಿದೆ. ಇಬ್ಬರ ನಡುವಿನ ವಿವಾದದ ಹಿನ್ನೆಲೆಯಲ್ಲಿ ಧನ್ವೀರ್ ವಿರುದ್ಧ ದೂರುಗಳು ದಾಖಲಾಗಿವೆ.

ಬೆಂಗಳೂರು: ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ ನಡುವಿನ ವಿವಾದ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಧನ್ವೀರ್‌ ಅವರದ್ದು ಎನ್ನಲಾದ ಕೆಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಧನ್ವೀರ್‌ಗೆ ಸಂಬಂಧಿಸಿವೆ ಎನ್ನಲಾದ ಆಡಿಯೊ ತುಣುಕುಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಈಗ ಕೆಲವು ವಿಡಿಯೊಗಳು ವೈರಲ್ ಆಗಿವೆ.

ಈ ವಿಡಿಯೊಗಳು ಫಾರ್ಮ್‌ಹೌಸ್‌ವೊಂದರಲ್ಲಿ ಚಿತ್ರೀಕರಿಸಲ್ಪಟ್ಟಿವೆ ಎನ್ನಲಾಗಿದ್ದು, ವಿಡಿಯೋಗಳಲ್ಲಿ ಕೆಲಸಗಾರರೊಂದಿಗೆ ಧನ್ವೀರ್ ಅನುಚಿತವಾಗಿ ವರ್ತಿಸುವ ದೃಶ್ಯಗಳಿವೆ ಎಂದು ವರದಿಯಾಗಿದೆ.

ಫಾರ್ಮ್‌ಹೌಸ್ ಕೆಲಸಗಾರರಿಗೆ ಹಿಂಸೆ?

ವೈರಲ್ ಆಗಿವೆ ಎನ್ನಲಾದ ಕೆಲವು ದೃಶ್ಯಗಳಲ್ಲಿ ಮೈಸೂರಿನ ಫಾರ್ಮ್‌ಹೌಸ್ ಕೆಲಸಗಾರರಿಗೆ ಬಲವಂತವಾಗಿ ಮದ್ಯ ಕುಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಕೆಲವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮತ್ತು ಹಗ್ಗದಿಂದ ಹೊಡೆದು ಕಿರುಕುಳ ನೀಡುವುದು ದಾಖಲಾಗಿವೆ. ವೈರಲ್ ವಿಡಿಯೊ ಬಗ್ಗೆ ನಟ ಧನ್ವೀರ್ ಪ್ರತಿಕ್ರಿಯೆ ನೀಡಿಲ್ಲ. ಈ ಆರೋಪಗಳ ಬಗ್ಗೆ ಧನ್ವೀರ್ ಏನು ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

10 ಕೋಟಿ ರೂ. ಅಕ್ರಮ ನಗದು ವ್ಯವಹಾರ ಆರೋಪ; ನಟ ಧನ್ವೀರ್ ವಿರುದ್ಧ ಐಟಿ, ಇಡಿಗೆ ದೂರು

ಬೆಂಗಳೂರು: ಅಕ್ರಮವಾಗಿ 10 ಕೋಟಿ ರೂಪಾಯಿ ನಗದು ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ. ವಕೀಲ ಪ್ರಶಾಂತ್ ಮೆಥಲ್ ಅವರು ಐಟಿ ಮತ್ತು ಇಡಿಗೆ ದೂರು ಸಲ್ಲಿಸಿದ್ದು, ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿದೆ ಎಂದು ಆರೋಪಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿಸುವ ನಟ ದರ್ಶನ್ ಅವರನ್ನು ಜೈಲಿನಿಂದ ಹೊರತರಲು ವಿಜಯಲಕ್ಷ್ಮಿ ಕಾನೂನಿನ ಹೋರಾಟ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ಮೊದಲು ಧನ್ವೀರ್ ಗೌಡ ಕೂಡ ಸಾಥ್ ನೀಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ಕಿರಿಕ್ ಆಗಿದ್ದು ಪರಸ್ಪರ ಇಬ್ಬರು ಆರೋಪ-ಪ್ರತ್ಯಾರೋಪ ಮಾಡಿದ್ದರು.

ಇನ್ನು ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ನಡುವೆ 10 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿದೆ ಎನ್ನಲಾಗಿದೆ. ಈ ಅಕ್ರಮ ವ್ಯವಹಾರದ ಸಂಪೂರ್ಣ ತನಿಖೆ ನಡೆಸುವಂತೆ ಪ್ರಶಾಂತ್ ಮೆಥಲ್ ಮನವಿ ಮಾಡಿದ್ದಾರೆ. ನಿಯಮಗಳ ಪ್ರಕಾರ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ವ್ಯವಹಾರ ಮಾಡುವಂತಿಲ್ಲ. ಆದರೆ ಈ ಪ್ರಕರಣದಲ್ಲಿ ಕಾನೂನು ಮೀರಿ ಬರೋಬ್ಬರಿ 10 ಕೋಟಿ ರೂಪಾಯಿ ನಗದು ರೂಪದಲ್ಲಿ ವ್ಯವಹಾರ ನಡೆಸಲಾಗಿದೆ. ಈ ಭಾರಿ ಪ್ರಮಾಣದ ಹಣದ ಮೂಲ ಯಾವುದು ಮತ್ತು ಈ ಅಕ್ರಮ ವಹಿವಾಟಿನ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.