ಬೆಂಗಳೂರು, ಜು. 28: ಕೃತಕ ಬುದ್ಧಿಮತ್ತೆ (AI) ಇಂದು ಎಲ್ಲ ರಂಗಗಳನ್ನೂ ಆವರಿಸಿಕೊಳ್ಳುತ್ತಿದೆ. ವಿಶೇಷವಾಗಿ ಟೆಲಿಕಾಂ, ಮಾಧ್ಯಮ, ಸೆಮಿಕಂಡಕ್ಟರ್ ಮತ್ತು ತಂತ್ರಜ್ಞಾನ (ಟಿಎಂಟಿ) ವಲಯಗಳಲ್ಲಿ ಎಐ ಬಗ್ಗೆ ಭಾರೀ ನಿರೀಕ್ಷೆಗಳಿದ್ದರೂ, ಅದರಿಂದ ಆಗುತ್ತಿರುವ ನಿಖರವಾದ ವ್ಯಾಪಾರ ಲಾಭವನ್ನು ಅಳೆಯುವಲ್ಲಿ ಕಂಪನಿಗಳು ಇನ್ನೂ ಹಿಂದೆ ಬಿದ್ದಿವೆ. ಹೀಗೊಂದು ಅಚ್ಚರಿಯ ಮಾಹಿತಿಯನ್ನು ಎಕನಾಮಿಸ್ಟ್ ಎಂಟರ್‌ಪ್ರೈಸ್ ಮತ್ತು ಜಾಗತಿಕ ಐಟಿ ದೈತ್ಯ ಸಂಸ್ಥೆ ಎಚ್‌ಸಿಎಲ್ ಟೆಕ್ ಜಂಟಿಯಾಗಿ ಬಿಡುಗಡೆ ಮಾಡಿರುವ ಹೊಸ ಸಂಶೋಧನಾ ವರದಿ ಬಹಿರಂಗಪಡಿಸಿದೆ.
ಅಮೆರಿಕ ಮತ್ತು ಯುರೋಪ್‌ನ ಟೆಲಿಕಾಂ, ಮಾಧ್ಯಮ ಹಾಗೂ ಟೆಕ್ ವಲಯದ 200ಕ್ಕೂ ಹೆಚ್ಚು ಉನ್ನತ ಮಟ್ಟದ ಅಧಿಕಾರಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಶೇ. 91ರಷ್ಟು ಭರವಸೆ, ಶೇ. 33ರಷ್ಟು ಲೆಕ್ಕಾಚಾರ!
ವರದಿಯ ಪ್ರಕಾರ, ಶೇ. 91ರಷ್ಟು ಸಂಸ್ಥೆಗಳು ತಾವು ಎಐ ಮೇಲೆ ಮಾಡಿರುವ ಹೂಡಿಕೆ ತಮಗೆ ಲಾಭ ತರುತ್ತಿದೆ ಎಂದು ಬಲವಾಗಿ ನಂಬಿವೆ. ಆದರೆ, ಆಘಾತಕಾರಿ ವಿಚಾರವೆಂದರೆ, ಕೇವಲ ಮೂರನೇ ಒಂದರಷ್ಟು (ಶೇ. 33) ಕಂಪನಿಗಳು ಮಾತ್ರ ಎಐನಿಂದ ತಮಗೆ ಆಗುತ್ತಿರುವ ನಿಖರವಾದ ವ್ಯಾಪಾರ ಲಾಭ ಎಷ್ಟೆಂಬುದನ್ನು ಅಳೆಯಲು ಶಕ್ತವಾಗಿವೆ. ನಿಖರವಾದ ಲಾಭದ ಲೆಕ್ಕಾಚಾರವೇ ಗೊತ್ತಿಲ್ಲದಿದ್ದಾಗ, ಎಐನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಉದ್ಯೋಗಿಗಳಿಗೆ ಕೌಶಲ್ಯದ ಕೊರತೆ
ಕಂಪನಿಗಳು ಎಐ ಪ್ರಯೋಗಗಳಿಂದ ಮುಂದೆ ಬಂದು, ಅವನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿವೆ. ಇವುಗಳ ಬಳಕೆಗೆ ಉದ್ಯೋಗಿಗಳ ಕೌಶಲ್ಯ ಹೆಚ್ಚಿಸುವುದು ಅತೀ ಮುಖ್ಯ ಎಂದು ಗೊತ್ತಿದ್ದರೂ, ಕೇವಲ ಶೇ. 20ರಷ್ಟು ಸಂಸ್ಥೆಗಳು ಮಾತ್ರ ತಮ್ಮ ಉದ್ಯೋಗಿಗಳಿಗೆ ಎಐ ತರಬೇತಿ ನೀಡುತ್ತಿವೆ ಅಥವಾ ಹೊಸಬರನ್ನು ನೇಮಿಸಿಕೊಳ್ಳುವಲ್ಲೂ ಸ್ಪಷ್ಟ ಕಾರ್ಯತಂತ್ರ ಹೊಂದಿವೆ ಎಂಬುದು ವರದಿ ಹೇಳಿದೆ.
ಎಐ-ಲೇಸರ್ ತಂತ್ರಜ್ಞಾನದಿಂದ ದೃಷ್ಟಿ ಚಿಕಿತ್ಸೆಯಲ್ಲಿ ದೊಡ್ಡ ಯಶಸ್ಸು
ನಿಯಂತ್ರಣದ ಕೊರತೆ
ಎಐ ಬಳಕೆಯ ವೇಗ ವಿಪರೀತವಾಗಿ ಹೆಚ್ಚಿದ್ದರೂ, ಕೇವಲ ಶೇ. 17ರಷ್ಟು ಕಂಪನಿಗಳು ಮಾತ್ರ ತಮ್ಮ ಎಐ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಮೇಲೆ ಸಕ್ರಿಯವಾಗಿ ನಿಗಾ ಇರಿಸಲು ಯಶಸ್ವಿಯಾಗಿವೆ.
ಈ ಹಿನ್ನೆಲೆಯಲ್ಲಿ, “ಕೇವಲ ಎಐ ಪ್ರಯೋಗಗಳಿಗೆ ಸೀಮಿತವಾಗದೆ, ಆ ಹೂಡಿಕೆಯನ್ನು ನೈಜ ವ್ಯಾಪಾರದ ಲಾಭವಾಗಿ ಪರಿವರ್ತಿಸುವ ಮತ್ತು ಗ್ರಾಹಕರಿಗೆ ವಿಭಿನ್ನ ಅನುಭವ ನೀಡುವ ಕಂಪನಿಗಳು ಮಾತ್ರ ಭವಿಷ್ಯದ ಸ್ಪರ್ಧೆಯಲ್ಲಿ ಗೆಲ್ಲಲಿವೆ,” ಎಂದು ಎಚ್‌ಸಿಎಲ್ ಟೆಕ್‌ನ ಟೆಲಿಕಾಂ, ಮೀಡಿಯಾ ಮತ್ತು ಟೆಕ್ ವಿಭಾಗದ ಗ್ಲೋಬಲ್ ಹೆಡ್ ಅನಿಲ್ ಗಂಜೂ ಅಭಿಪ್ರಾಯಪಟ್ಟಿದ್ದಾರೆ.
"ಎಐ ಮೂಲಕ ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು ಮತ್ತು ಗ್ರಾಹಕರೊಡನೆ ಉತ್ತಮ ಬಾಂಧವ್ಯ ಬೆಳೆಸಬಹುದು ಎಂಬುದನ್ನು ಉದ್ಯಮದ ನಾಯಕರು ಅರಿತಿದ್ದಾರೆ. ಆದರೆ ಸ್ಪಷ್ಟ ಕಾರ್ಯತಂತ್ರ, ಪಾಲುದಾರರೊಂದಿಗೆ ಸಹಭಾಗಿತ್ವ ಮತ್ತು ಶಿಸ್ತಿನ ನಿಯಂತ್ರಣವಿದ್ದರಷ್ಟೇ ಭವಿಷ್ಯದಲ್ಲಿ ವ್ಯಾಪಾರ ವೃದ್ಧಿಸಲು ಸಾಧ್ಯ" ಎಂದು ಎಕನಾಮಿಸ್ಟ್ ಎಂಟರ್‌ಪ್ರೈಸ್‌ನ 'ರಿಸರ್ಚ್ ಮೆಥಡ್ಸ್ ಮತ್ತು ಇನ್ನೋವೇಷನ್' ವಿಭಾಗದ ಪ್ರಿನ್ಸಿಪಾಲ್ ಷಾರ್ಲೆಟ್ ಬುಲ್ಲಾರ್ಡ್ ಡೇವಿಸ್ ಹೇಳಿದ್ದಾರೆ.
ಒಟ್ಟಿನಲ್ಲಿ, ಎಚ್‌ಸಿಎಲ್ ಟೆಕ್ ಬೆಂಬಲಿತ ʼThe Value Edge: Powering the Next Era of TMTʼ ವರದಿಯು ಕೃತಕ ಬುದ್ಧಿಮತ್ತೆಯ ಮೇಲಿರುವ ಅಪಾರ ನಿರೀಕ್ಷೆಗಳು ಮತ್ತು ವಾಸ್ತವದ ನಡುವಿನ ಅಂತರವನ್ನು ಬಿಚ್ಚಿಟ್ಟಿದೆ.