ಬೆಂಗಳೂರು, ಮೇ7: ಭಾರತದಲ್ಲಿ ಡೇಟಿಂಗ್ ಟ್ರೆಂಡ್ ಬದಲಾಗುತ್ತಿದ್ದು, ʼಮುಂದೆ ಏನಾಗುತ್ತದೋ ನೋಡೋಣʼ ಎನ್ನುವ ಮನಸ್ಥಿತಿಗೆ ಬದಲಾಗಿ, ʼನನಗೆ ಏನು ಬೇಕು ಅನ್ನೋದು ಸ್ಪಷ್ಟವಾಗಿ ಗೊತ್ತಿದೆ, ಅದನ್ನು ಹೇಳಲು ನಾನೇನು ಹಿಂಜರಿಯುವುದಿಲ್ಲʼ ಎನ್ನುವ ನೇರ ನುಡಿಯ ಟ್ರೆಂಡ್ ಶುರುವಾಗಿದೆ. ಯಾವುದೇ ಗೊಂದಲಗಳಿಲ್ಲದೆ, ತಮ್ಮ ಇಷ್ಟಾನುಕೂಲಕ್ಕೆ ಮ್ಯಾಚ್ ಆಗುವವರನ್ನಷ್ಟೇ ಯುವಜನತೆ ಹುಡುಕುತ್ತಿದ್ದಾರೆ.
ಸಿಂಗಲ್ಸ್ ಯುವಜನತೆಯ ಈ ಹೊಸ ಟ್ರೆಂಡ್‌ಗೆ ತಕ್ಕಂತೆ, ಜಗತ್ತಿನ ಜನಪ್ರಿಯ ಡೇಟಿಂಗ್ ಆ್ಯಪ್ ಟಿಂಡರ್ ಭಾರತದಲ್ಲಿ ಅತ್ಯಂತ ಕುತೂಹಲಕಾರಿ 'ಆಸ್ಟ್ರಾಲಜಿ ಮೋಡ್' ಅನ್ನು ಪರಿಚಯಿಸಿದೆ. ಕೇವಲ ಫೋಟೋ ಅಥವಾ ಬಯೋ ನೋಡಿ ರೈಟ್ ಸ್ವೈಪ್ ಮಾಡುವ ಬದಲು, ಇಬ್ಬರ ವ್ಯಕ್ತಿತ್ವ, ಗುಣಲಕ್ಷಣಗಳು ಎಷ್ಟರ ಮಟ್ಟಿಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಜ್ಯೋತಿಷ್ಯದ ಮೂಲಕ ಅರಿಯಲು ಇದು ಸಹಾಯ ಮಾಡುತ್ತದೆ.
ಏನು ಹೇಳುತ್ತಿದೆ ಟಿಂಡರ್ ಸಮೀಕ್ಷೆ?
ಟಿಂಡರ್‌ನ 'Year in Swipe™ 2025' ವರದಿಯ ಪ್ರಕಾರ, ಯುವಜನತೆ ಈಗ ದೀರ್ಘಕಾಲಿಕ ಹಾಗೂ ಅರ್ಥಪೂರ್ಣ ಸಂಬಂಧಗಳನ್ನು ಬಯಸುತ್ತಿದ್ದಾರೆ. ಶೇ. 64ರಷ್ಟು ಮಂದಿ ಡೇಟಿಂಗ್‌ಗೆ 'ಭಾವನಾತ್ಮಕ ಪ್ರಾಮಾಣಿಕತೆ' ಅತ್ಯಗತ್ಯ ಎಂದಿದ್ದಾರೆ.
ಹಾಗೆಯೇ, ಶೇ.73ರಷ್ಟು ಮಂದಿ, ʼಯಾರ ಜತೆ ನಾವು ನಮ್ಮ ನೈಜ ವ್ಯಕ್ತಿತ್ವದೊಂದಿಗೆ ಇರಲು ಸಾಧ್ಯವೋ, ಅವರನ್ನು ಮಾತ್ರ ನಾವು ಇಷ್ಟಪಡುತ್ತೇವೆʼ ಎಂದು ಹೇಳಿದ್ದಾರೆ. ವಿಶೇಷವೆಂದರೆ, ಸಿಂಹ, ವೃಶ್ಚಿಕ, ತುಲಾ, ಕುಂಭ, ಮೇಷ ಮತ್ತು ಕನ್ಯಾ ರಾಶಿಯವರ ಪ್ರೊಫೈಲ್‌ಗಳು ಟಿಂಡರ್‌ನಲ್ಲಿ ಅತಿ ಹೆಚ್ಚು ಕಂಡುಬಂದಿವೆ.
ಹೇಗೆ ಕಾರ್ಯನಿರ್ವಹಿಸುತ್ತದೆ ಈ 'ಆಸ್ಟ್ರಾಲಜಿ ಮೋಡ್'?
ಬಳಕೆದಾರರು ಈ ಮೋಡ್‌ನಲ್ಲಿ ತಮ್ಮ ಹುಟ್ಟಿದ ದಿನಾಂಕ, ಸ್ಥಳ ಮತ್ತು ಸಮಯವನ್ನು ನಮೂದಿಸಿದರೆ ಸಾಕು, ಈ ಫೀಚರ್ ಅವರ ಜ್ಯೋತಿಷ್ಯದ 'ಬಿಗ್ 3' ಚಿಹ್ನೆಗಳನ್ನು ಬಿಚ್ಚಿಡುತ್ತದೆ.
ಸನ್ ಸೈನ್: ಇದು ವ್ಯಕ್ತಿಯ ಮೂಲ ವ್ಯಕ್ತಿತ್ವವನ್ನು ತಿಳಿಸುತ್ತದೆ.
ಮೂನ್ ಸೈನ್: ವ್ಯಕ್ತಿಯ ಭಾವನಾತ್ಮಕ ಪ್ರವೃತ್ತಿ ಹೇಗಿದೆ ಎಂಬುದನ್ನು ವಿವರಿಸುತ್ತದೆ.
ರೈಸಿಂಗ್ ಸೈನ್: ಸಮಾಜ ಅಥವಾ ಇತರರು ಇವರನ್ನು ಹೇಗೆ ನೋಡುತ್ತಾರೆ ಎಂಬುದನ್ನು ಸೂಚಿಸುತ್ತದೆ.
ಇದರ ಜತೆಗೆ 'ವ್ಯೂವ್ ಕಾಂಪಾಟಿಬಿಲಿಟಿ' ಎನ್ನುವ ಆಯ್ಕೆಯೂ ಇದ್ದು, ಇದರಲ್ಲಿ 'ಕಾಸ್ಮಿಕ್ ಸ್ಪಾರ್ಕ್' (ಸಂವಹನ, ಆಕರ್ಷಣೆ) ಮತ್ತು 'ಎಲಿಮೆಂಟ್ ಮಿಕ್ಸ್' (ಬೆಂಕಿ, ಭೂಮಿ, ಗಾಳಿ, ನೀರು) ಆಧಾರದ ಮೇಲೆ ಇಬ್ಬರ ನಡುವಿನ ಹೊಂದಾಣಿಕೆಯನ್ನು ಅಳೆಯಬಹುದು. ಇದು ಪರಸ್ಪರ ಮಾತುಕತೆ ಶುರು ಮಾಡಲು ಅತ್ಯುತ್ತಮ ದಾರಿಯಾಗಿದೆ.
ಏನಂತಾರೆ ಸಂಬಂಧಗಳ ತಜ್ಞರು?
ʼಯುವಜನರಲ್ಲಿ ಸ್ವಯಂ-ಅರಿವು ಹೆಚ್ಚಾಗುತ್ತಿದೆ. ತಮಗೆ ಹೊಂದಿಕೆಯಾಗದ ಸಂಬಂಧಗಳ ಮೇಲೆ ಸಮಯ ವ್ಯರ್ಥ ಮಾಡಲು ಅವರು ಸಿದ್ಧರಿಲ್ಲ. ಜ್ಯೋತಿಷ್ಯವು ಈಗ ಕೇವಲ ಮದುವೆಗೆ ಗಂಟು ಬೆಸೆಯುವ ಅಗತ್ಯ ನಿಯಮವಾಗಿ ಉಳಿದಿಲ್ಲ. ಬದಲಾಗಿ ತಮ್ಮನ್ನು ತಾವು ವ್ಯಕ್ತಪಡಿಸುವ, ತಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರಿಗೆ ಅರ್ಥಮಾಡಿಸುವ ಒಂದು ಆಕರ್ಷಕ ಟೂಲ್ ಕೂಡ ಆಗಿ ಬದಲಾಗಿದೆʼ ಎಂದು ಟಿಂಡರ್ ಇಂಡಿಯಾದ ರಿಲೇಶನ್‌ಶಿಪ್ ಎಕ್ಸ್‌ಪರ್ಟ್ ಡಾ. ಚಾಂದಿನಿ ತುಗ್ನೈಟ್ ಹೇಳಿದ್ದಾರೆ.
ಅಷ್ಟೇ ಅಲ್ಲ ಡಾ. ಚಾಂದಿನಿ ಅವರು ಉತ್ತಮ ಡೇಟಿಂಗ್‌ಗೆ ಟಿಪ್ಸ್ ಕೂಡ ನೀಡಿದ್ದಾರೆ. ಅವರ ಪ್ರಕಾರ,
ಜ್ಯೋತಿಷ್ಯವೇ ಅಂತಿಮವಲ್ಲ: ಇದನ್ನು ಕೇವಲ ಮಾತುಕತೆ ಆರಂಭಿಸಲು ಬಳಸಿ. ಜ್ಯೋತಿಷ್ಯದ ಆಧಾರದ ಮೇಲೆಯೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ನಡವಳಿಕೆಯೇ ಮುಖ್ಯ: ನಿಜವಾದ ಹೊಂದಾಣಿಕೆ ಇರುವುದು ಪರಸ್ಪರ ಸಂವಹನ, ಸಮಸ್ಯೆಗಳನ್ನು ಬಗೆಹರಿಸುವ ರೀತಿ ಮತ್ತು ನಡವಳಿಕೆಯಲ್ಲಿ. ಕೇವಲ ರಾಶಿಗಳು ಹೊಂದಾಣಿಕೆಯಾದ ಮಾತ್ರಕ್ಕೆ ಸಂಬಂಧ ಗಟ್ಟಿಯಾಗಿರುವುದಿಲ್ಲ.
ಬ್ಯಾಲೆನ್ಸ್ ಇರಲಿ: ಇಂತಹ ಫಿಲ್ಟರ್‌ಗಳನ್ನು ಎಂಜಾಯ್ ಮಾಡಿ, ಆದರೆ ಅದೇ ಕಾರಣಕ್ಕೆ ಉತ್ತಮ ವ್ಯಕ್ತಿಗಳನ್ನು ಕಳೆದುಕೊಳ್ಳಬೇಡಿ ಎಂಬುದಾಗಿ ಸಲಹೆ ನೀಡಿದ್ದಾರೆ.
2012ರಲ್ಲಿ ಆರಂಭವಾದ ಟಿಂಡರ್, ಕೇವಲ ಎರಡು ವರ್ಷಗಳಲ್ಲಿ 1 ಬಿಲಿಯನ್ ಮ್ಯಾಚ್‌ಗಳನ್ನು ಸೃಷ್ಟಿಸಿ ಇತಿಹಾಸ ನಿರ್ಮಿಸಿತ್ತು. ಇಂದು 185ಕ್ಕೂ ಹೆಚ್ಚು ದೇಶಗಳಲ್ಲಿ, 60ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ಈ ಆ್ಯಪ್, 63 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದ್ದು, 100 ಬಿಲಿಯನ್‌ಗೂ ಅಧಿಕ ಮ್ಯಾಚ್‌ಗಳಿಗೆ ಸಾಕ್ಷಿಯಾಗಿದೆ.
Fashion Tips 2026: ಕೋಲ್ಡ್ ಶೋಲ್ಡರ್ ಫ್ಯಾಷನ್‌ವೇರ್ ಪ್ರಿಯರಿಗೆ ಸಿಂಪಲ್ ಟಿಪ್ಸ್
ಇದೀಗ ಟಿಂಡರ್‌ನ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಇದು ಯುವ ಭಾರತದ ಡೇಟಿಂಗ್ ಶೈಲಿಯನ್ನು ಮೇಲ್ನೋಟದ ಆಕರ್ಷಣೆಯಿಂದಾಚೆಗೆ, ಭಾವನಾತ್ಮಕ ಮತ್ತು ವ್ಯಕ್ತಿತ್ವದ ಹೊಂದಾಣಿಕೆಯೆಡೆಗೆ ಕೊಂಡೊಯ್ಯಲಿದೆ.