ನವದೆಹಲಿ, ಸೆ. 11: ದೇಶದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮತ್ತಷ್ಟು ಬಲವರ್ಧನೆಗೆ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ (Central Government), ಸಮಗ್ರ ಸಕ್ಕರೆ ವಲಯದ ಆರ್ಥಿಕ ಸುಸ್ಥಿರತೆಗೆ ಮುಂದಡಿ ಇರಿಸಿದೆ. ಸಕ್ಕರೆ ವಲಯದಲ್ಲಿ ಆರ್ಥಿಕವಾಗಿ ಸುಸ್ಥಿರ ವ್ಯವಸ್ಥೆ ರೂಪಿಸುವ ಧ್ಯೇಯದೊಂದಿಗೆ ಹೆಜ್ಜೆ ಹಾಕಿದ ಕೇಂದ್ರ ಸರ್ಕಾರ, ಸಕಾಲಿಕವಾಗಿ ಕಬ್ಬಿನ ಬಾಕಿ ಹಣ ಪಾವತಿಗೆ ಮೊದಲ ಆದ್ಯತೆ ನೀಡಿದ್ದು, ಪ್ರಸ್ತುತ ಶೇ. 97ರಷ್ಟು ಬಾಕಿ ಹಣ ಪಾವತಿಸಿ ನೆರವಾಗಿದೆ.
2024-25ರ ಸಕ್ಕರೆ ಹಂಗಾಮಿನಲ್ಲಿ ಒಟ್ಟು ₹1,02,687 ಕೋಟಿ ಬಾಕಿ ಮೊತ್ತದಲ್ಲಿ 2026ರ ಏಪ್ರಿಲ್ 20ರ ವೇಳೆಗೆ ₹1,02,209 ಕೋಟಿ ಪಾವತಿ ಮಾಡಿದೆ. ಅಂದರೆ ಶೇ. 99.5ರಷ್ಟು ಬಾಕಿ ವಿಲೇವಾರಿ ಮಾಡಿ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಸುಸ್ಥಿರತೆ ಕಲ್ಪಿಸಿದೆ. ಪ್ರಸ್ತುತ 2025-26ರ ಸಕ್ಕರೆ ಹಂಗಾಮಿನಲ್ಲಿ ಆಗಸ್ಟ್ 20ರ ವೇಳೆಗೆ ಶೇ. 97ರಷ್ಟು ಕಬ್ಬಿನ ಬಾಕಿ ಹಣ ಪಾವತಿಸಿದೆ. ಮಾತ್ರವಲ್ಲ, ಹಿಂದಿನ ಸಕ್ಕರೆ ಹಂಗಾಮುಗಳ ಬಹುತೇಕ ಎಲ್ಲ ಬಾಕಿ ಹಣವನ್ನೂ ಪಾವತಿಸಿದ್ದು, ಇದು ಸಕ್ಕರೆ ಕಾರ್ಖಾನೆಗಳಲ್ಲಿ ಗಮನಾರ್ಹ ಸುಧಾರಣೆ ಮತ್ತು ರೈತರಿಗೆ ಸಮಯೋಚಿತ ಪಾವತಿಯನ್ನು ಪ್ರತಿಬಿಂಬಿಸುತ್ತದೆ.
7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಭೇಟಿ; ಮೋದಿ-ಕ್ಸಿ ದ್ವಿಪಕ್ಷೀಯ ಸಭೆ
FRP ಗಣನೀಯ ಹೆಚ್ಚಳ
ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಲ್ಲಿ (FRP) ಗಣನೀಯ ಹೆಚ್ಚಳ ಕಂಡಿದೆ. 2014-15ರಲ್ಲಿ ಪ್ರತಿ ಕ್ವಿಂಟಾಲ್‌ಗೆ ₹220ರಷ್ಟಿದ್ದ FRP ಪ್ರಸ್ತುತವಾಗಿ ಪ್ರತಿ ಕ್ವಿಂಟಾಲ್‌ಗೆ ₹365ಕ್ಕೆ ಏರಿಕೆಯಾಗಿದೆ. ಅಂದರೆ ಸರಿಸುಮಾರು ಶೇ.66ರಷ್ಟು ಅಧಿಕವಾಗಿದೆ. ಪ್ರಮುಖವಾಗಿ ಸಕ್ಕರೆ ಇಳುವರಿ ಪ್ರಮಾಣ ಶೇ. 9.5ಕ್ಕಿಂತ ಕಡಿಮೆಯಿರುವ ರೈತರಿಗೂ ಯಾವುದೇ ಕಡಿತವಿಲ್ಲದೆ FRP ನೀಡಲು ನಿರ್ಧರಿಸಿದ್ದು, 2026-27ರ ಸಕ್ಕರೆ ಹಂಗಾಮಿನಲ್ಲಿ ರೈತರು ಪ್ರತಿ ಕ್ವಿಂಟಾಲ್ ಕಬ್ಬಿಗೆ ಸರಾಸರಿ ₹338.3 ದರ ಪಡೆಯಲಿದ್ದಾರೆ.
5 ಕೋಟಿ ಕಬ್ಬು ಬೆಳೆಗಾರರಿಗೆ ಪ್ರಯೋಜನ
2026-27ರ ಸಕ್ಕರೆ ಹಂಗಾಮಿನ FRPಯು ಪ್ರಸ್ತುತ 2025-26ರ ಹಂಗಾಮಿನ ದರಕ್ಕಿಂತ ಶೇ. 2.81ರಷ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ದೇಶದ ಸುಮಾರು 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಅವಲಂಬಿತರಿಗೆ ಪ್ರಯೋಜನ ದೊರಕಲಿದೆ. ಅಲ್ಲದೆ, ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಸಕ್ಕರೆ ವಲಯದಲ್ಲಿ ತೊಡಗಿರುವ ಸುಮಾರು 5 ಲಕ್ಷ ಮಂದಿಗೆ ಅನುಕೂಲ ಆಗಲಿದೆ.
ಎಥೆನಾಲ್ ಉತ್ಪಾದನೆಗೆ ಆದ್ಯತೆ, ಬೆಳೆಗಾರರ ಸಬಲತೆ
ಭಾರತ ವಾರ್ಷಿಕವಾಗಿ ಸುಮಾರು 300-340 LMT ಸಕ್ಕರೆ ಉತ್ಪಾದಿಸುತ್ತಿದ್ದು, ದೇಶೀಯ ಬಳಕೆ 280-290 LMT ಇದೆ. ಸಕ್ಕರೆ ಹೆಚ್ಚುವರಿ ದಾಸ್ತಾನು ಬೆಲೆ ಕುಸಿತಕ್ಕೂ ಕಾರಣವಾಗಿ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಮತ್ತು ಕಬ್ಬು ಬೆಳೆಗಾರರ ಬಾಕಿ ಪಾವತಿ ಮೇಲೆ ಪರಿಣಾಮ ಬೀರುತ್ತಿತ್ತು. ಇದನ್ನರಿತು ಕೇಂದ್ರ ಸರ್ಕಾರ ಇದೀಗ ಹೆಚ್ಚುವರಿ ಸಕ್ಕರೆ ಮತ್ತು ಕಬ್ಬು ಆಧಾರಿತ ಕಚ್ಚಾ ವಸ್ತುಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸುವಲ್ಲಿ ಮಹತ್ತರ ಅವಕಾಶ ಕಲ್ಪಿಸಿ ಸಮಸ್ಯೆ ಪರಿಹರಿಸಿದೆ.
ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಹೆಚ್ಚುವರಿ ಆದಾಯ
ಕೇಂದ್ರ ಸರ್ಕಾರ ಕೈಗೊಂಡ ರಾಷ್ಟ್ರೀಯ ಜೈವಿಕ ಇಂಧನ ನೀತಿ ಮತ್ತು EBP ಕಾರ್ಯಕ್ರಮವು ಕಬ್ಬಿಗೆ ಪ್ರಮುಖ ಮಾರುಕಟ್ಟೆ ಸೃಷ್ಟಿಸಿದೆ. 2014-15ರಿಂದ 2024-25ರ ಅವಧಿಯಲ್ಲಿ ಎಥೆನಾಲ್ ಮಾರಾಟದಿಂದ ಸಕ್ಕರೆ ಕಾರ್ಖಾನೆಗಳು ₹1.29 ಲಕ್ಷ ಕೋಟಿಗೂ ಹೆಚ್ಚು ಆದಾಯ ಗಳಿಸಿವೆ. 2014-15ರಿಂದ ಅಕ್ಟೋಬರ್ 2025ರವರೆಗೆ ರೈತರಿಗೆ ₹1,36,300 ಕೋಟಿಗೂ ಹೆಚ್ಚಿನ ಮೊತ್ತದ ತ್ವರಿತ ಪಾವತಿಯನ್ನು ಸುಗಮಗೊಳಿಸಿದೆ.
ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗೆ ₹1,000 ಕೋಟಿ
ಕೇಂದ್ರ ಸರ್ಕಾರ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗಾಗಿ NCDCಗೆ ₹1,000 ಕೋಟಿ ಅನುದಾನ ಒದಗಿಸಿದ್ದು, NCDC ಎಥೆನಾಲ್ ಘಟಕ, ಸಹ-ಉತ್ಪಾದನಾ ಘಟಕ ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ₹10,000 ಕೋಟಿ ಸಾಲ ಒದಗಿಸಿದೆ. ಅಲ್ಲದೆ, ಅವಧಿ ಸಾಲದ ಮೇಲಿನ ಬಡ್ಡಿ ದರವನ್ನೂ ಶೇ. 8.5ಕ್ಕೆ ಕಡಿತಗೊಳಿಸಿದೆ.
ಸಕ್ಕರೆ ಕಾರ್ಖಾನೆಗಳಿಗೆ SDF ಪ್ರಯೋಜನ
ಸಹಕಾರಿ ಸಕ್ಕರೆ ಕಾರ್ಖಾನೆಗಳು ಆಧುನೀಕರಣ, ಸಹ-ಉತ್ಪಾದನೆ ಮತ್ತು ಎಥೆನಾಲ್ ಯೋಜನೆಗಳಿಗಾಗಿ ಸಕ್ಕರೆ ಅಭಿವೃದ್ಧಿ ನಿಧಿ (SDF) ಆರ್ಥಿಕ ನೆರವು ಪಡೆಯಲೂ ಅವಕಾಶ ಕಲ್ಪಿಸಿದೆ. 2026ರ ಮಾರ್ಚ್ ವೇಳೆಗೆ ಉತ್ತರ ಪ್ರದೇಶದ 4 ಸಹಕಾರಿ ಸಕ್ಕರೆ ಕಾರ್ಖಾನೆಗಳು SDF ಅಡಿಯಲ್ಲಿ ಪ್ರಯೋಜನ ಪಡೆದಿವೆ.
ಪಾರದರ್ಶಕತೆಗಾಗಿ ಡಿಜಿಟಲೀಕರಣ
ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಿದ ಕೇಂದ್ರ ಸರ್ಕಾರ, ಸಕ್ಕರೆ ವಲಯದಲ್ಲಿ 'ನ್ಯಾಷನಲ್ ಸಿಂಗಲ್ ವಿಂಡೋ ಸಿಸ್ಟಮ್' (NSWS) ಅಳವಡಿಸಿದೆ. ಈ ಮೂಲಕ ಸಕ್ಕರೆ ಕಾರ್ಖಾನೆಗಳ ನಿಯಮಗಳ ಅನುಸರಣೆ ಮತ್ತು ಮಾಸಿಕ ವರದಿಯನ್ನು ಡಿಜಿಟಲೀಕರಣಗೊಳಿಸಿದ್ದು, ಸುಮಾರು 535 ಕಾರ್ಖಾನೆಗಳು ಮಾಸಿಕ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸುತ್ತಿವೆ. ಮಾಸಿಕ ಸಕ್ಕರೆ ಮಾರಾಟದಲ್ಲಿ ಪಾರದರ್ಶಕ ಮತ್ತು ನಿಖರ ನಿರ್ವಹಣೆಗಾಗಿ 'ಚಿನಿ ದರ್ಪಣ್' ಪೋರ್ಟಲ್ ಸಹ ಅಭಿವೃದ್ಧಿಪಡಿಸಿದೆ.
ಸಕ್ಕರೆ ರಫ್ತು ವಿಸ್ತರಣೆ
2025-26ರಲ್ಲಿ 20 LMTವರೆಗೆ ಸಕ್ಕರೆ ರಫ್ತುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದ್ದು, ಪರಿಣಾಮ 2016-17 ರಲ್ಲಿ ಕೇವಲ 0.47 LMT ರಫ್ತಾಗಿದ್ದರೆ, 2025-26ರಲ್ಲಿ ಭಾರತ 8 LMT ಸಕ್ಕರೆಯನ್ನು ರಫ್ತು ಮಾಡಿದೆ. ಪ್ರಮುಖವಾಗಿ ಶ್ರೀಲಂಕಾ, ಪಶ್ಚಿಮ ಏಷ್ಯಾ ಮತ್ತು ಪೂರ್ವ ಆಫ್ರಿಕಾಗೆ ರಫ್ತು ಮಾಡಲಾಗುತ್ತಿದೆ. ಇದು ಕಾರ್ಖಾನೆಗಳಿಗೆ ಹೆಚ್ಚುವರಿ ಉತ್ಪಾದನೆ ನಿರ್ವಹಣೆಗೆ ಅನುಕೂಲವಾಗಿದೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಲು ಬಳ್ಳಾರಿ ನೆಲದಲ್ಲೇ ಬಿಜೆಪಿ ಸಂಕಲ್ಪ: ಪ್ರಲ್ಹಾದ್ ಜೋಶಿ
ಕಬ್ಬು ಉತ್ಪಾದನೆಯೂ ವೃದ್ಧಿ
2025-26ರಲ್ಲಿ ಭಾರತದಲ್ಲಿ ಕಬ್ಬು ಉತ್ಪಾದನೆ 500 MMT ತಲುಪಿದೆ. 2015-16ಕ್ಕೆ ಹೋಲಿಸಿದರೆ 348.44 ದಶಲಕ್ಷ ಮೆಟ್ರಿಕ್ ಟನ್ ಗಿಂತ ಶೇ.43.5ರಷ್ಟು ಹೆಚ್ಚಾಗಿದೆ. ಕಬ್ಬು ಬೆಳೆಯುವ ಪ್ರದೇಶ 2015-16ರಲ್ಲಿ 49.27 ಲಕ್ಷ ಹೆಕ್ಟೇರ್ ಇದರ, ಈಗದು 58.87 ಲಕ್ಷ ಹೆಕ್ಟೇರ್‌ಗೆ ವಿಸ್ತಾರವಾಗಿದೆ. ಕೇಂದ್ರ ಸರ್ಕಾರ ಹೀಗೆ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗೆ ಸಮಯೋಚಿತ ಹೆಜ್ಜೆ ಇರಿಸಿದೆ.