ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಟಿ ವಲಯಕ್ಕೆ ಭರ್ಜರಿ ಸುದ್ದಿ; ಕಾಗ್ನಿಜೆಂಟ್‌ನಿಂದ ಈ ವರ್ಷ 21,000 ಉದ್ಯೋಗಿಗಳ ನೇಮಕ

Cognizant Q1 Results: ಜಾಗತಿಕ ಟೆಕ್ ದೈತ್ಯ ಕಾಗ್ನಿಜೆಂಟ್ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷದ ಗಡಿ ದಾಟಿಸಿದೆ. 2026ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿರುವ ಅಮೆರಿಕ ಮೂಲದ ಕಾಗ್ನಿಜೆಂಟ್, ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ.

ಕಾಗ್ನಿಜೆಂಟ್ (ಸಂಗ್ರಹ ಚಿತ್ರ).

ಬೆಂಗಳೂರು‌, ಏ. 30: ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಸಾಲು ಸಾಲು ಲೇ-ಆಫ್‌ಗಳಿಂದಾಗಿ ಕಂಗೆಟ್ಟಿದ್ದ ಭಾರತದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ಜಾಗತಿಕ ಟೆಕ್ ದೈತ್ಯ 'ಕಾಗ್ನಿಜೆಂಟ್' (Cognizant) ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಕಾಗ್ನಿಜೆಂಟ್ ಮಾತ್ರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷದ ಗಡಿ ದಾಟಿಸಿದೆ.

2026ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ (ಕ್ಯೂ1) ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿರುವ ಅಮೆರಿಕ ಮೂಲದ ಕಾಗ್ನಿಜೆಂಟ್, ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕ್ಯೂ1ನಲ್ಲಿ ಕಂಪನಿಯ ಆದಾಯವು ಶೇ. 5.8ರಷ್ಟು ಏರಿಕೆ ಕಂಡು 5.4 ಬಿಲಿಯನ್ ಡಾಲರ್ (ಸುಮಾರು 51,200 ಕೋಟಿ ರುಪಾಯಿ) ತಲುಪಿದೆ. ಸ್ಥಿರ ಕರೆನ್ಸಿ ಲೆಕ್ಕಾಚಾರದಲ್ಲಿ ಇದು ಶೇ. 3.9ರಷ್ಟು ಬೆಳವಣಿಗೆಯಾಗಿದೆ. ಆದರೆ ಕಂಪನಿಯ ಕಾರ್ಯಾಚರಣೆ ಮಾರ್ಜಿನ್ ಈ ತ್ರೈಮಾಸಿಕದಲ್ಲಿ ಶೇ. 15.6ರಷ್ಟಿದ್ದು, ಹೊಂದಾಣಿಕೆಯ ಆಧಾರದ ಮೇಲೆ ಸ್ಥಿರವಾಗಿದ್ದರೂ, ವಾರ್ಷಿಕ ಲೆಕ್ಕಾಚಾರದಲ್ಲಿ 110 ಮೂಲಾಂಶಗಳಷ್ಟು ಕುಸಿತ ಕಂಡಿದೆ.

ಫೈನಾನ್ಶಿಯಲ್‌ ವಲಯದಲ್ಲಿ ಭರ್ಜರಿ ಬೆಳವಣಿಗೆ

ಫೈನಾನ್ಶಿಯಲ್‌ ಸರ್ವಿಸ್ ವಲಯ ಶೇ. 12.4ರಷ್ಟು ವೃದ್ಧಿ ಸಾಧಿಸಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ್ದರೆ, ಕಮ್ಯುನಿಕೇಶನ್ ಮತ್ತು ಮೀಡಿಯಾ ವಲಯ ಶೇ. 8.1ರಷ್ಟು ಹಾಗೂ ಪ್ರಾಡಕ್ಟ್ಸ್ ವಲಯ ಶೇ. 3.4ರಷ್ಟು ಬೆಳವಣಿಗೆ ದಾಖಲಿಸಿವೆ. ಭೌಗೋಳಿಕವಾಗಿ ನೋಡುವುದಾದರೆ, ಉತ್ತರ ಅಮೆರಿಕದಲ್ಲಿ ಶೇ. 5.1ರಷ್ಟು ಹಾಗೂ ಯುರೋಪ್ ಮಾರುಕಟ್ಟೆ ಶೇ. 3.5ರಷ್ಟು ಬೆಳವಣಿಗೆ ಕಂಡು ಬಂದಿದೆ.

ಎರಡನೇ ತ್ರೈಮಾಸಿಕದಲ್ಲಿ (ಕ್ಯೂ2) ಆದಾಯ ಶೇ. 3.8ರಿಂದ ಶೇ. 5.3ರಷ್ಟು ವೃದ್ಧಿಯಾಗುವ ನಿರೀಕ್ಷೆಯನ್ನು ಕಾಗ್ನಿಜೆಂಟ್ ವ್ಯಕ್ತಪಡಿಸಿದ್ದು, 2026ರ ಪೂರ್ಣ ಆರ್ಥಿಕ ವರ್ಷದಲ್ಲಿ ಆದಾಯದ ಬೆಳವಣಿಗೆ ಶೇ. 4.8 ರಿಂದ ಶೇ. 7.3ರಷ್ಟಿರಲಿದೆ (ಸ್ಥಿರ ಕರೆನ್ಸಿಯಲ್ಲಿ ಶೇ. 4 ರಿಂದ ಶೇ. 6.5) ಎಂದು ಅಂದಾಜಿಸಿದೆ.

ಐಟಿ ವಲಯಕ್ಕೆ ನೆಮ್ಮದಿ ತಂದ ಕಾಗ್ನಿಜೆಂಟ್

ಟಿ‌ಸಿ‌ಎಸ್, ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಐಟಿ ದೈತ್ಯ ಕಂಪನಿಗಳು ಉದ್ಯೋಗ ನೇಮಕಾತಿಯನ್ನು ತಗ್ಗಿಸುತ್ತಿರುವ ಹೊತ್ತಿನಲ್ಲೇ, ಕಾಗ್ನಿಜೆಂಟ್ ಹೊಸ ನೇಮಕಾತಿಯಲ್ಲಿ ಮುಂಚೂಣಿಯಲ್ಲಿದೆ. ಕ್ಯೂ1 ಅಂತ್ಯದ ವೇಳೆಗೆ ಅಂದರೆ 2026ರ ಮಾರ್ಚ್ 31ರ ಕೊನೆಗೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಬರೋಬ್ಬರಿ 3,57,600ಕ್ಕೆ ತಲುಪಿದೆ.

ಕಳೆದ ಒಂದೇ ತ್ರೈಮಾಸಿಕದಲ್ಲಿ 6,000 ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ (2025ರ ಕ್ಯೂ1) ಹೋಲಿಸಿದರೆ ಉದ್ಯೋಗಿಗಳ ಸಂಖ್ಯೆಯಲ್ಲಿ 21,300ರಷ್ಟು ಭಾರಿ ಏರಿಕೆ ಕಂಡಿದೆ. ಕಾಗ್ನಿಜೆಂಟ್‌ನ ಹೆಚ್ಚಿನ ಉದ್ಯೋಗಿಗಳು ಭಾರತದಲ್ಲೇ ಇರುವುದರಿಂದ, ಇದು ದೇಶದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ರಿಲೀಫ್ ನೀಡಿದೆ. ಇನ್ನು ಕಂಪನಿ ಬಿಟ್ಟು ಹೋಗುವ ಉದ್ಯೋಗಿಗಳ ಪ್ರಮಾಣ (ಅಟ್ರಿಷನ್‌ ದರ) ಶೇ. 12.3ರಷ್ಟಿದ್ದು ಸ್ಥಿರವಾಗಿದೆ.

ಭಾರಿ ಒಪ್ಪಂದ, ಎಐನತ್ತ ಕಂಪನಿ ಚಿತ್ತ

ಕ್ಯೂ1ನಲ್ಲಿ ಕಾಗ್ನಿಜೆಂಟ್‌ನ ಬುಕಿಂಗ್‌ಗಳಲ್ಲಿ ಶೇ. 21ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಕಳೆದ 12 ತಿಂಗಳ ಒಟ್ಟು ಬುಕಿಂಗ್ ಮೌಲ್ಯ 29.6 ಬಿಲಿಯನ್ ಡಾಲರ್ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು 7 ಬೃಹತ್ ಡೀಲ್‌ಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಒಂದು 500 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಮೆಗಾ ಡೀಲ್ ಕೂಡ ಸೇರಿದೆ.

ʼನಮ್ಮ ಎಐ ಆಧಾರಿತ ಕಾರ್ಯತಂತ್ರವು ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಸ್ತುತ 5,000ಕ್ಕೂ ಹೆಚ್ಚು ಎಐ ಪ್ರಾಜೆಕ್ಟ್‌ಗಳು ನಡೆಯುತ್ತಿದ್ದು, ಶೇ. 40ರಷ್ಟು ಕೋಡಿಂಗ್ ಕೆಲಸಗಳನ್ನು ಎಐ ನೆರವಿನಿಂದಲೇ ಮಾಡಲಾಗುತ್ತಿದೆʼ ಎಂದೂ ಕಂಪನಿಯ ಸಿಇಒ ರವಿ ಕುಮಾರ್ ಎಸ್. ತಿಳಿಸಿದ್ದಾರೆ.

ಆಸ್ಟ್ರೇಯಾ ಕಂಪನಿ ಖರೀದಿಸಲಿದೆ ಕಾಗ್ನಿಜೆಂಟ್‌

ತನ್ನ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೆಂಟರ್ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಾಗ್ನಿಜೆಂಟ್, ಐಟಿ ಸೇವಾ ಪೂರೈಕೆದಾರ ಕಂಪನಿಯಾದ 'ಆಸ್ಟ್ರೇಯಾ' ವನ್ನು ಸುಮಾರು 600 ಮಿಲಿಯನ್ ಡಾಲರ್ (5,700 ಕೋಟಿ ರುಪಾಯಿ) ಮೌಲ್ಯದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಪ್ರಕ್ರಿಯೆ 2026ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯಗಳಿಗೆ ಎಐ: ಓಪನ್ಎಐ ಜತೆ ಕೈ ಜೋಡಿಸಿದ ಕಾಗ್ನಿಜೆಂಟ್

ಒಟ್ಟಾರೆಯಾಗಿ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಎಐ ತಂತ್ರಜ್ಞಾನದಿಂದ ಉದ್ಯೋಗ ಕಡಿತದ ಭೀತಿ ಎದುರಾಗಿರುವ ಈ ಸಮಯದಲ್ಲಿ, ಕಾಗ್ನಿಜೆಂಟ್‌ನ ಈ ಪಾಸಿಟಿವ್ ಬೆಳವಣಿಗೆ ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆಶಾಕಿರಣವಾಗಿದೆ.