ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಾಕೋಲೆಟ್‌ನಲ್ಲಿ ಶೃಂಗಾರ, ಹಾಸ್ಯ, ರೌದ್ರ; ಫೆಬೆಲ್‌ನಿಂದ 'ನವರಸ'ಗಳ ಅದ್ಭುತ ಕಲೆಕ್ಷನ್ ಬಿಡುಗಡೆ!

Fabelle: ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯ ಸಹಯೋಗದೊಂದಿಗೆ ಖ್ಯಾತ ಚಾಕಲೇಟ್ ಬ್ರ್ಯಾಂಡ್ ಫೆಬೆಲ್ ಸಂಸ್ಥೆಯು 'ನವ್-ರಸ್' ಕಲೆಕ್ಷನ್ ಎಂಬ ಹೊಸ ಶ್ರೇಣಿಯ ಚಾಕಲೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮನುಷ್ಯನ ಒಂಬತ್ತು ಭಾವನೆಗಳನ್ನು (ನವರಸ) ಸಂಗೀತ ಮತ್ತು ಚಾಕಲೇಟ್ ರುಚಿಯ ಮೂಲಕ ಏಕಕಾಲದಲ್ಲಿ ಅನುಭವಿಸುವ ಅದ್ಭುತ ಅವಕಾಶವನ್ನು ಸೃಷ್ಟಿಸಿದೆ.

ಮುಂಬೈ, ಅ.26: ಶತಮಾನಗಳಿಂದ ಕೇವಲ ಸಂಗೀತ, ನೃತ್ಯ, ನಾಟಕ ಮತ್ತು ಕಲೆಗಳ ಮೂಲಕ ಮಾತ್ರ ವ್ಯಕ್ತವಾಗುತ್ತಿದ್ದ ನವರಸಗಳನ್ನು ಈಗ ರುಚಿಯ ಮೂಲಕವೂ ಸವಿಯಬಹುದು ಎಂದರೆ ನೀವು ನಂಬುತ್ತೀರಾ? ಹೌದು, ಖ್ಯಾತ ಚಾಕೋಲೆಟ್‌ ಬ್ರ್ಯಾಂಡ್ 'ಫೆಬೆಲ್' (Fabelle) ಇಂತಹದ್ದೊಂದು ವಿಸ್ಮಯಕಾರಿ ಪ್ರಯೋಗಕ್ಕೆ ಕೈಹಾಕಿದೆ. ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯ ಸಹಯೋಗದೊಂದಿಗೆ ಫೆಬೆಲ್ ಸಂಸ್ಥೆಯು 'ನವ್-ರಸ್' ಕಲೆಕ್ಷನ್ ಎಂಬ ಹೊಸ ಶ್ರೇಣಿಯ ಚಾಕೋಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದು ಮನುಷ್ಯನ ಒಂಬತ್ತು ಭಾವನೆಗಳನ್ನು (ನವರಸ) ಸಂಗೀತ ಮತ್ತು ಚಾಕೋಲೆಟ್‌ ರುಚಿಯ ಮೂಲಕ ಏಕಕಾಲದಲ್ಲಿ ಅನುಭವಿಸುವ ಅದ್ಭುತ ಅವಕಾಶವನ್ನು ಸೃಷ್ಟಿಸಿದೆ.

FABELLE

ಸಂಗೀತ ಮತ್ತು ಚಾಕಲೇಟ್‌ನ ಅದ್ಭುತ ಸಂಗಮ

ಮನುಷ್ಯನ ಪ್ರಮುಖ ಒಂಬತ್ತು ಭಾವನೆಗಳಾದ ಶೃಂಗಾರ, ಹಾಸ್ಯ, ಕರುಣಾ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತ ರಸಗಳನ್ನು ಪ್ರತಿನಿಧಿಸುವ ಒಂಬತ್ತು ವಿಭಿನ್ನ ಚಾಕೋಲೆಟ್‌ಗಳನ್ನು ಫೆಬೆಲ್ ಸಿದ್ಧಪಡಿಸಿದೆ. ಇದರ ವಿಶೇಷತೆ ಏನೆಂದರೆ, ಪ್ರತಿ ಚಾಕಲೇಟ್‌ನೊಂದಿಗೆ ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯ ದಿಗ್ಗಜ ಕಲಾವಿದರು ಸಂಯೋಜಿಸಿದ ಒಂಬತ್ತು ಪ್ರತ್ಯೇಕ ಸಂಗೀತದ ತುಣುಕುಗಳಿರುತ್ತವೆ.

ಚಾಕೋಲೆಟ್‌ ಬಾಕ್ಸ್‌ನೊಳಗಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಯಾ ಭಾವನೆಯ ಸಂಗೀತವನ್ನು ಕೇಳುತ್ತಲೇ, ಅದಕ್ಕೆ ತಕ್ಕಂತಿರುವ ಚಾಕೋಲೆಟ್‌ ಅನ್ನು ಸವಿಯಬಹುದು. "ಸಂಗೀತವನ್ನು ಕೇಳಬೇಕು, ಚಾಕೋಲೆಟ್‌ ಸವಿಯಬೇಕು, ಭಾವನೆಗಳನ್ನು ಅನುಭವಿಸಬೇಕು" ಎಂಬುದು ಈ ಪರಿಕಲ್ಪನೆಯ ಮೂಲ ಉದ್ದೇಶವಾಗಿದೆ.

ಯಾವ ಭಾವನೆಗೆ ಯಾವ ರುಚಿ?

ಫೆಬೆಲ್‌ನ ಪರಿಣಿತ ಚಾಕೋಲೆಟ್‌ ತಯಾರಕರು ಪ್ರತಿಯೊಂದು ರಸವನ್ನೂ ಅತ್ಯಂತ ನಾಜೂಕಾಗಿ ಚಾಕೋಲೆಟ್‌ ರೂಪಕ್ಕೆ ಇಳಿಸಿದ್ದಾರೆ. ಉದಾಹರಣೆಗೆ, ಪ್ರೀತಿಯನ್ನು ಸಂಕೇತಿಸುವ 'ಶೃಂಗಾರ' ರಸದ ಚಾಕೋಲೆಟ್‌ ಅನ್ನು ಹೃದಯದ ಆಕಾರದಲ್ಲಿ ಮಾಡಲಾಗಿದ್ದು, ಇದರಲ್ಲಿ ರೂಬಿ ಚಾಕೋಲೆಟ್‌ ಹಾಗೂ ಗುಲಾಬಿ ಹೂವಿನ (ಆಕ್ವಾ ರೋಸ್) ಪರಿಮಳವನ್ನು ಬೆರೆಸಲಾಗಿದೆ. ಇದು ಪ್ರೀತಿಯ ಮಧುರ ಭಾವವನ್ನು ನೀಡುತ್ತದೆ.

ಹಾಗೆಯೇ 'ರೌದ್ರ' ರಸವು ಮೂರನೇ ಕಣ್ಣಿನ ವಿನ್ಯಾಸವನ್ನು ಹೊಂದಿದ್ದು, ಇದರಲ್ಲಿ ಡಾರ್ಕ್ ಚಾಕೋಲೆಟ್‌ ಜತೆಗೆ ಮೆಣಸಿನಕಾಯಿಯ (ಆಂಕೋ ಚಿಲ್ಲಿ) ಖಾರ ಮತ್ತು ಕ್ಯಾಂಡಿಡ್ ಮಾವಿನ ಹಣ್ಣಿನ ಸಿಹಿಯನ್ನು ವಿಶಿಷ್ಟವಾಗಿ ಸಂಯೋಜಿಸಲಾಗಿದೆ. ಇದು ನಾಲಿಗೆಗೆ ವಿಶೇಷ ಅನುಭವವನ್ನು ನೀಡುತ್ತದೆ. ಇದೇ ರೀತಿ, ಧೈರ್ಯವನ್ನು ಪ್ರತಿನಿಧಿಸುವ 'ವೀರ' ರಸದಲ್ಲಿ ಶೇ. 70ರಷ್ಟು ಡಾರ್ಕ್ ಚಾಕೋಲೆಟ್‌ ಮತ್ತು ಮಕಾಡಾಮಿಯಾ ನಟ್ಸ್ ಬಳಸಿದ್ದರೆ, 'ಶಾಂತ' ರಸವನ್ನು ಬಿಳಿ ಗುಲಾಬಿಯ ವಿನ್ಯಾಸದಲ್ಲಿ ಅಕೇಶಿಯ ಜೇನುತುಪ್ಪ ಮತ್ತು ಮಿಲ್ಕ್ ಚಾಕೋಲೆಟ್‌ ಬಳಸಿ ತಯಾರಿಸಲಾಗಿದೆ.

'ಹಾಸ್ಯ' ರಸವನ್ನು ಟಾಫಿ ರುಚಿಯ ಮೂಲಕ ಅರಳಿಸಿದರೆ, 'ಬೀಭತ್ಸ' ರಸವನ್ನು ಕುಂಬಳಕಾಯಿ ಸ್ಪೈಸ್ ಮತ್ತು ಡಾರ್ಕ್ ಚಾಕೋಲೆಟ್‌ನ ಅನಿರೀಕ್ಷಿತ ಜೋಡಣೆಯ ಮೂಲಕ ಕಟ್ಟಿಕೊಡಲಾಗಿದೆ. 'ಕರುಣಾ', 'ಭಯಾನಕ' ಮತ್ತು 'ಅದ್ಭುತ' ರಸಗಳನ್ನೂ ಸಹ ಅದಕ್ಕೆ ತಕ್ಕನಾದ ವಿನ್ಯಾಸ, ಪರಿಮಳ ಹಾಗೂ ರುಚಿಯೊಂದಿಗೆ ಸಿದ್ಧಪಡಿಸಲಾಗಿದೆ.

ಕರಕುಶಲತೆ ಮತ್ತು ಕಲೆಯ ಅನಾವರಣ

ಮುಂಬೈನ ಐಟಿಸಿ ಗ್ರ್ಯಾಂಡ್ ಸೆಂಟ್ರಲ್‌ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಈ ಹೊಸ ಚಾಕೋಲೆಟ್‌ ಸಂಗ್ರಹವನ್ನು ಲೋಕಾರ್ಪಣೆ ಮಾಡಲಾಯಿತು. ಪಂಡಿತ್ ಅಜೋಯ್ ಚಕ್ರವರ್ತಿ ಹಾಗೂ ಪಂಡಿತ್ ಉಲ್ಲಾಸ್ ಕಶಾಲ್ಕರ್ ಅವರಂತಹ ಸಂಗೀತ ದಿಗ್ಗಜರ ಸಮ್ಮುಖದಲ್ಲಿ ಅತಿಥಿಗಳು ಲೈವ್ ಸಂಗೀತದ ಜತೆಗೆ ಚಾಕೋಲೆಟ್‌ ಸವಿಯುವ ಮೂಲಕ ನವರಸಗಳನ್ನು ಅನುಭವಿಸಿದರು.

ಈ ಬಗ್ಗೆ ವಿವರವನ್ನು ಹಂಚಿಕೊಂಡಿರುವ ಐಟಿಸಿ ಲಿ.ನ ಉಪಾಧ್ಯಕ್ಷ ಸುಭಾಷ್ ಬಾಲರ್, “ಫೆಬೆಲ್ ಯಾವಾಗಲೂ ಚಾಕೋಲೆಟ್‌ ಅನ್ನು ಕೇವಲ ಸಿಹಿತಿಂಡಿಯಾಗಿ ನೋಡದೆ, ಅದೊಂದು ಕರಕುಶಲ ಕಲೆ ಎಂದು ನಂಬಿದೆ. ಕಣ್ಣಿಗೆ ಕಾಣದ ಭಾವನೆಗಳನ್ನು ರುಚಿ ಮತ್ತು ವಿನ್ಯಾಸದ ಮೂಲಕ ಕಟ್ಟಿಕೊಡುವ ಪ್ರಯತ್ನ ಇದಾಗಿದೆ” ಎಂದರು.

ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯ ಕಾರ್ಯನಿರ್ವಾಹಕ ನಿರ್ದೇಶಕ ಶರದಿಂದು ದತ್ತ ಮಾತನಾಡಿ, “ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪದಗಳ ಹಂಗಿಲ್ಲದೆ ಭಾವನೆಗಳನ್ನು ಬಡಿದೆಬ್ಬಿಸುವ ಶಕ್ತಿಯಿದೆ. ಸಂಗೀತಗಾರರು ರಾಗ, ತಾಳದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಿದರೆ, ಚಾಕೋಲೆಟ್‌ ಪರಿಣಿತರು ಅದನ್ನು ರುಚಿ ಮತ್ತು ವಿನ್ಯಾಸದ ಮೂಲಕ ಹೊರತಂದಿದ್ದಾರೆ” ಎಂದು ಬಣ್ಣಿಸಿದರು.

ವಿಮಾನದಲ್ಲೂ ಕರಾವಳಿಯ ಚಿಕನ್ ಪುಳಿಮುಂಚಿಯ ಸ್ವಾದ, ಫಿಲ್ಟರ್ ಕಾಫಿಯ ಘಮ! ಹೊಸ ಮೆನು ಬಿಡುಗಡೆ ಮಾಡಿದ ಆಕಾಶ ಏರ್‌

ಐಷಾರಾಮಿ ಚಾಕೋಲೆಟ್‌ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿರುವ ಫೆಬೆಲ್‌ನ ಈ 'ನವ್-ರಸ್ ಕಲೆಕ್ಷನ್' ಬೆಲೆ 2,395 ರೂ.ಗಳಾಗಿದ್ದು ಆಯ್ದ ಫೆಬೆಲ್ ಬೊಟಿಕ್‌ಗಳಲ್ಲಿ ಹಾಗೂ ಆನ್‌ಲೈನ್ ಮೂಲಕ ಈ ವಿಶಿಷ್ಟ ಚಾಕೋಲೆಟ್‌ಗಳನ್ನು ಖರೀದಿಸಬಹುದಾಗಿದೆ. ಕಲೆ, ಸಂಗೀತ ಮತ್ತು ವಿಭಿನ್ನ ರುಚಿಯನ್ನು ಇಷ್ಟಪಡುವವರಿಗೆ ಇದು ಹೇಳಿಮಾಡಿಸಿದಂತಿದೆ.