ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Rate: ಚಿನ್ನದ ದರ 3 ವರ್ಷಕ್ಕೆ ಡಬಲ್!‌ ಖರೀದಿಗೆ ಈಗ ಸಕಾಲವೆ?

ಕಳೆದ ಮೂರೇ ವರ್ಷಗಳಲ್ಲಿ ಬಂಗಾರದ ದರ ಡಬಲ್‌ ಆಗಿದೆ. 2022ರಲ್ಲಿ 50,000 ರುಪಾಯಿಗಳ ಆಸುಪಾಸಿನಲ್ಲಿದ್ದ ಬಂಗಾರದ ದರ 2025ರಲ್ಲಿ 1 ಲಕ್ಷ ರುಪಾಯಿ ಗಡಿ ದಾಟಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ 25 ವರ್ಷಗಳಲ್ಲಿ ಚಿನ್ನದ ದರ ಹೇಗೆ, ಎಷ್ಟು ಸಲ ಡಬಲ್‌ ಆಗಿದೆ ಎನ್ನುವ ವಿರ ಇಲ್ಲಿದೆ.

ಚಿನ್ನದ ದರ 3 ವರ್ಷಕ್ಕೆ ಡಬಲ್!‌ ಖರೀದಿಗೆ ಈಗ ಸಕಾಲವೆ?

ಸಾಂದರ್ಭಿಕ ಚಿತ್ರ.

- ಕೇಶವ ಪ್ರಸಾದ್‌ ಬಿ.

ಬೆಂಗಳೂರು: ಚಿನ್ನದ ದರ (Gold Rate) ಇತ್ತೀಚೆಗೆ ಪ್ರತಿ 10 ಗ್ರಾಮ್‌ಗೆ 1 ಲಕ್ಷ ರುಪಾಯಿಗೆ ಏರಿಕೆಯಾಗಿತ್ತು. ಕಳೆದ ಮೂರೇ ವರ್ಷಗಳಲ್ಲಿ ಬಂಗಾರದ ದರ ಡಬಲ್‌ ಆಗಿದೆ. 2022ರಲ್ಲಿ 50,000 ರುಪಾಯಿಗಳ ಆಸುಪಾಸಿನಲ್ಲಿದ್ದ ಬಂಗಾರದ ದರ 2025ರಲ್ಲಿ 1 ಲಕ್ಷ ರುಪಾಯಿ ಗಡಿ ದಾಟಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಈ ಮಧ್ಯೆ ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕುಸಿತಕ್ಕೀಡಾಗಿದ್ದ ಡಾಲರ್‌ ಮೌಲ್ಯದಲ್ಲಿ ಏರಿಕೆಯಾಗಿರುವುದರಿಂದ ಬಂಗಾರದ ದರ ಕೂಡ ಸ್ವಲ್ಪ ಇಳಿಕೆಯಾಗಿದೆ. ಆದರೆ ಈ ಇಳಿಕೆಯ ಟ್ರೆಂಡ್‌ ತಾತ್ಕಾಲಿಕ ಎನ್ನುತ್ತಾರೆ ತಜ್ಞರು.

ಕಳೆದ 25 ವರ್ಷಗಳಲ್ಲಿ ಚಿನ್ನದ ದರ ಹೇಗೆ, ಎಷ್ಟು ಸಲ ಡಬಲ್‌ ಆಗಿದೆ ಎಂಬುದನ್ನು ನೋಡೋಣ.

ವಿವಿಧ ವರ್ಷಗಳಲ್ಲಿ ಹೆಚ್ಚಾದ ಚಿನ್ನದ ದರ

ವರ್ಷ 10 ಗ್ರಾಮ್‌ ಚಿನ್ನದ ದರ
2000 4,400 ರುಪಾಯಿ
2005 7,000 ರುಪಾಯಿ
2010 18,500 ರುಪಾಯಿ
2015 26,845 ರುಪಾಯಿ
2020 48,500 ರುಪಾಯಿ
2025 1,00,000 ರುಪಾಯಿ


ಈ ಸುದ್ದಿಯನ್ನೂ ಓದಿ: Gold Price: ಚಿನ್ನದ ದರ 55,000 ರೂ.ಗೆ ಇಳಿಯುತ್ತಾ? 1 ಲಕ್ಷ ರೂ.ಗೆ ಏರುತ್ತಾ?‌

ಬಂಗಾರದ ದರ ಜಿಗಿತಕ್ಕೆ ಕಾರಣವೇನು?

  • ಅಮೆರಿಕ-ಚೀನಾ ಟ್ರೇಡ್‌ ವಾರ್‌
  • ಡಾಲರ್‌ ದುರ್ಬಲವಾಗುತ್ತಿರುವುದು
  • ಸೆಂಟ್ರಲ್‌ ಬ್ಯಾಂಕ್‌ಗಳಿಂದ ಬಂಗಾರದ ಭರ್ಜರಿ ಖರೀದಿ

ಈಗ ಈ ಮೂರೂ ಕಾರಣಗಳನ್ನು ಮತ್ತಷ್ಟು ವಿವರವಾಗಿ ನೋಡೋಣ. ಅಮೆರಿಕ-ಚೀನಾ ಟ್ರೇಡ್‌ವಾರ್‌ಗೂ ಬಂಗಾರದ ದರ ಏರಿಕೆಗೂ ಸಂಬಂಧ ಏನು?

ಜಾಗತಿಕ ಮಟ್ಟದಲ್ಲಿ ದೇಶಗಳ ನಡುವಣ ಸಂಘರ್ಷ ಮತ್ತು ಆರ್ಥಿಕತೆಯ ಅನಿಶ್ಚಿತತೆ ಉಂಟಾದಾಗಲೆಲ್ಲ ಚಿನ್ನದ ದರ ಏರುತ್ತದೆ. ಅಮೆರಿಕ ಮತ್ತು ಚೀನಾ ನಡುವಣ ಟ್ರೇಡ್‌ ವಾರ್‌ನ ಪರಿಣಾಮ ಜಗತ್ತಿನ ಆರ್ಥಿಕತೆಗೆ ಯಾವೆಲ್ಲ ರೀತಿಯಲ್ಲಿ ಧಕ್ಕೆಯಾಗಲಿದೆ ಎಂಬ ಅನಿಶ್ಚಿತತೆ ಇದೆ. ಅಮೆರಿಕದಲ್ಲಿ ರಿಸೆಶನ್‌ ಉಂಟಾಗುವ ಆತಂಕವೂ ಇದೆ. ಹೀಗಾಗಿ ಹೂಡಿಕೆದಾರರು ತಮ್ಮ ಸಂಪತ್ತನ್ನು ರಕ್ಷಿಸಿಲು ಡಾಲರ್‌ ಬದಲಿಗೆ ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಅದರ ಬೆಲೆಯೂ ಏರುತ್ತಿದೆ. ಅಮೆರಿಕ ಮತ್ತು ಇರಾನ್‌ ನಡುವಣ ಸಂಘರ್ಷ ಕೂಡ ಚಿನ್ನದ ದರ ಹೆಚ್ಚಳಕ್ಕೆ ಕಾರಣವಾಗಬಹುದು.

ಎರಡನೆಯದಾಗಿ ಡಾಲರ್‌ ಮೌಲ್ಯದಲ್ಲಿ ಇಳಿಕೆಯಾಗುತ್ತಿರುವುದು ಕೂಡ ಬಂಗಾರದ ದರ ಏರಿಕೆಯಾಗಲು ಕಾರಣವಾಗಿದೆ. ಡಾಲರ್‌ ಮೌಲ್ಯ ಇಳಿಕೆಯಾದಾಗ ಬಂಗಾರದ ದರ ಹೆಚ್ಚುತ್ತದೆ? ಯಾಕೆ ಹೀಗಾಗುತ್ತದೆ? ಏಕೆಂದರೆ ಡಾಲರ್‌ ಬೆಲೆ ಕಡಿಮೆಯಾದಾಗ, ಬಂಗಾರವನ್ನು ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ. ಡಾಲರ್ ಪ್ರಬಲವಾದಾಗ ಚಿನ್ನದ ದರ ಇಳಿಯುತ್ತದೆ. ಡಾಲರ್‌ ದುರ್ಬಲವಾದಾಗ ಹಣದುಬ್ಬರ ಹೆಚ್ಚಬಹುದು. ಆಗ ಹಣದುಬ್ಬರದ ಎದುರು ಸಂಪತ್ತಿನ ರಕ್ಷಣೆಗೋಸ್ಕರ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಹೆಚ್ಚಿಸುತ್ತಾರೆ. ಇದೂ ದರ ಏರಿಕೆಕೆ ಕಾರಣವಾಗುತ್ತದೆ.

ಮೂರನೆಯದಾಗಿ ಸೆಂಟ್ರಲ್‌ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ. ಕಳೆದ ಮೂರು ವರ್ಷಗಳಿಂದ ನಾನಾ ದೇಶಗಳ ಸೆಂಟ್ರಲ್‌ ಬ್ಯಾಂಕ್‌ಗಳು ಸರಾಸರಿ ಸಾವಿರ ಟನ್ನಿಗೂ ಹೆಚ್ಚು ಚಿನ್ನವನ್ನು ಖರೀದಿಸಿವೆ. ಮುಖ್ಯವಾಗಿ ಚೀನಾ ಸೆಂಟ್ರಲ್‌ ಬ್ಯಾಂಕ್‌ ಹೆಚ್ಚು ಖರೀದಿಸಿದೆ. ಭಾರತದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ 2024ರೊಂದರಲ್ಲೇ 70 ಟನ್‌ ಚಿನ್ನ ಖರೀದಿಸಿದೆ. ಆರ್‌ಬಿಐನಲ್ಲಿರುವ ಒಟ್ಟು ಬಂಗಾರದ ಪ್ರಮಾಣ 879 ಟನ್‌ಗೆ ಏರಿಕೆಯಾಗಿದೆ. ಜಾಗತಿಕ ಟ್ರೆಂಡ್‌ಗೆ ಅನುಸಾರವಾಗಿ ಆರ್‌ಬಿಐ ಬಂಗಾರ ಕೊಳ್ಳುತ್ತಿದೆ.

ಆರ್‌ಬಿಐಯಿಂದ ಚಿನ್ನ ಖರೀದಿ

2022: 1,082 ಟನ್‌

2023: 1,037 ಟನ್‌

2024: 1,045 ಟನ್

ಚಿನ್ನದ ದರ, 2025ರ ಮುನ್ನೋಟ

ಈಗ ಪ್ರತಿ ಔನ್ಸ್‌ಗೆ ದರ: 3,318 ಡಾಲರ್.‌

ನಾನಾ ಸಂಸ್ಥೆಗಳ ಮುನ್ನೋಟ ನೋಡೋಣ

ಗೋಲ್ಡ್‌ಮನ್‌ ಸ್ಯಾಕ್ಸ್‌: 3,700 ಡಾಲರ್, 11% ಏರಿಕೆ

UBS ಮತ್ತು ಬ್ಯಾಂಕ್‌ ಆಫ್‌ ಅಮೆರಿಕ: 3,500 ಡಾಲರ್‌ , 5% ಏರಿಕೆ

ಜೆ.ಪಿ. ಮೋರ್ಗಾನ್‌: 2,600 ಡಾಲರ್‌ , 19% ಇಳಿಕೆ

ಮೋರ್ಗಾನ್‌ ಸ್ಟ್ಯಾನ್ಲಿ: 3,100 ಡಾಲರ್‌, 1% ಇಳಿಕೆ

ಎಕ್ಸಿಸ್‌ ಮ್ಯೂಚುವಲ್‌ ಫಂಡ್‌: 3,000 ಡಾಲರ್‌, 10% ಇಳಿಕೆ

ಮೋತಿಲಾಲ್‌ ಓಸ್ವಾಲ್‌: 10% ಇಳಿಕೆ

ಹೀಗೆ ತಜ್ಞರು ಭಿನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಆದ್ದರಿಂದ ನಿಮ್ಮದೇ ಅಧ್ಯಯನ ಮತ್ತು ವಿಶ್ಲೇಷಣೆಯನ್ನು ನಡೆಸಿ ಚಿನ್ನದ ಖರೀದಿ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಿ.

ಈಗ ಬಂಗಾರವನ್ನು ಖರೀದಿಸಬಹುದೇ? ಅಲ್ಪಾವಧಿಗೆ ಚಿನ್ನದ ದರದಲ್ಲಿ ಒಂದಷ್ಟು ಇಳಿಕೆಯಾಗಬಹುದು. ಆದ್ದರಿಂದ ದರ ಇಳಿಕೆಯಾದಾಗ ಖರೀದಿಸುವುದು ಸೂಕ್ತ. ಆದರೆ ದರ ಇಳಿಕೆ ತಾತ್ಕಾಲಿಕವಾಗಿರಲಿದೆ ಎನ್ನುತ್ತಾರೆ ಬಹುತೇಕ ತಜ್ಞರು. ಒಂದಷ್ಟು ತಿಂಗಳುಗಳ ಬಳಿಕ ಮತ್ತೆ ದರ ಏರಿಕೆಯನ್ನೂ ನಿರೀಕ್ಷಿಸಲಾಗಿದೆ.

gold rate (4)

ಅಮೆರಿಕದ ಖ್ಯಾತ ಹೂಡಿಕೆದಾರ ಜಿಮ್‌ ರೋಜರ್ಸ್‌ ಅವರು ನೀಡಿರುವ ಸಲಹೆಗಳು ನಿಮಗೆ ಉಪಯುಕ್ತ ಆಗಬಹುದು. ಚಿನ್ನದಲ್ಲಿ ಹೂಡಿಕೆ ಮಾಡಿ, ಅನವಶ್ಯಕವಾಗಿ ಅದನ್ನು ಮಾರಾಟ ಮಾಡುವುದು ಬೇಡ ಎನ್ನುತ್ತಾರೆ ಜಿಮ್‌ ರೋಜರ್ಸ್.‌

"ನಾನು ಹಲವಾರು ವರ್ಷಗಳಿಂದ ಬಂಗಾರ ಮತ್ತು ಬೆಳ್ಳಿಯನ್ನು ಖರೀದಿಸುತ್ತೇನೆ. ನಾನು 1971ರಲ್ಲಿ ಮೊದಲ ಸಲ ಚಿನ್ನವನ್ನು ಖರೀದಿಸಿದ್ದೆ. ಅದು ಈಗಲೂ ನನ್ನ ಬಳಿ ಇದೆ. ಜನರಿಗೆ ನಾನು ಏನು ಮಾಡುತ್ತಿದ್ದೇನೆ ಅದನ್ನೇ ಹೇಳುತ್ತೇನೆ. ಚಿನ್ನದ ದರದಲ್ಲಿ ಕೆಲವೊಮ್ಮೆ ಇಳಿಕೆಯಾಗಬಹುದು. ಆದರೆ ಒಟ್ಟಾರೆಯಾಗಿ ದೀರ್ಘಾವಧಿಗೆ ದರ ಏರುತ್ತಲೇ ಇರುತ್ತದೆ. ಆದ್ದರಿಂದ ಬಂಗಾರವನ್ನು ಖರೀದಿಸುವುದನ್ನು ನಿಲ್ಲಿಸಬೇಡಿ. ಜಗತ್ತು ಆರ್ಥಿಕ ಹಿಂಜರಿತಕ್ಕೆ ಒಳಗಾದರೆ ಬಂಗಾರದಲ್ಲಿನ ನಿಮ್ಮ ಹೂಡಿಕೆ ನಿಮ್ಮ ಸಂಪತ್ತನ್ನು ಸಂರಕ್ಷಿಸುತ್ತದೆ ಎಂಬ ನಂಬಿಕೆ ನನ್ನದು. ಬಂಗಾರ ಮತ್ತು ಬೆಳ್ಳಿ ನಿಮಗೆ ಮಾತ್ರವಲ್ಲದೆ, ನಿಮ್ಮ ಮಕ್ಕಳಿಗೂ ಸಹಾಯಕವಾಗುತ್ತದೆ. ಅದನ್ನು ಮಾರಬೇಡಿʼʼ ಎಂದು ಹೇಳಿದ್ದಾರೆ.

ʼʼಡಾಲರ್‌ ಕೂಡ ವಿಶ್ವದ ಪ್ರಮುಖ ಕರೆನ್ಸಿ. ಅದು ಸೇಫ್‌ ಹೆವೆನ್‌ ಎಂದು ಅನೇಕ ಮಂದಿ ಈಗಲೂ ನಂಬಿಕೆ ಇರಿಸಿಕೊಂಡಿದ್ದಾರೆ. ರಿಸೆಶನ್‌ ಬರಬಹುದು. ಅಮೆರಿಕದ ಇತಿಹಾಸದಲ್ಲಿ ಈ ಹಿಂದೆ ಕೂಡ ರಿಸೆಶನ್‌ ಬಂದಿದೆ. ಹಾಗಂತ ಡಾಲರ್‌ ಸೇಫ್‌ ಎಂಬ ನಂಬಿಕೆ ಈಗಲೂ ಇದೆ. ರಿಸೆಶನ್‌ ಆದಾಗ ಅಮೆರಿಕದಂಥ ದೇಶಗಳಿಂದ ಹೂಡಿಕೆಯು ಭಾರತದಂತಹ ಪ್ರಗತಿಶೀಲ ರಾಷ್ಟ್ರಗಳ ಮಾರುಕಟ್ಟೆಗೆ ಹರಿದು ಬರಬಹುದು. ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕತೆಯ ಅಭಿವೃದ್ಧಿಯೂ ಉತ್ತಮವಾಗಿದೆʼʼ ಎಂದು ಜಿಮ್‌ ರೋಜರ್ಸ್ ವಿವರಿಸಿದ್ದಾರೆ.

"ನನ್ನ ಮಟ್ಟಿಗೆ ಚಿನ್ನದಲ್ಲಿ ಹೂಡಿಕೆ ಮಾಡೋದು ಅಂದ್ರೆ ಕೇವಲ ಇನ್ವೆಸ್ಟ್‌ಮೆಂಟ್‌ ಅಲ್ಲ, ಜಾಗತಿಕ ಅನಿಶ್ಚಿತತೆಯ ಎದುರು ವಿಮೆ ಇದ್ದ ಹಾಗೆ. ಆದ್ದರಿಂದ ದರ ಇಳಿಕೆಯಾದಾಗ ಚಿನ್ನ-ಬೆಳ್ಳಿ ಎರಡರಲ್ಲಿಯೂ ಹೂಡಿಕೆ ಮಾಡಿʼʼ ಎನ್ನುತ್ತಾರೆ ಜಿಮ್‌ ರೋಜರ್ಸ್.‌

ಭಾರತೀಯರು ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಚಿನ್ನದ ಬಳಕೆದಾರರು. ಅಮೆರಿಕನ್ನರು ತಮ್ಮ ಮನೆಗಳಲ್ಲಿ 8,100 ಟನ್‌ ಚಿನ್ನವನ್ನು ಹೊಂದಿದ್ದರೆ, ರಷ್ಯನ್ನರು 2,332 ಟನ್‌ ಇಟ್ಟುಕೊಂಡಿದ್ದಾರೆ. ಆದರೆ ಭಾರತೀಯರು ತಮ್ಮ ಮನೆಗಳಲ್ಲಿ ಇಟ್ಟುಕೊಂಡಿರುವ ಮತ್ತು ಇಲ್ಲಿನ ದೇವಸ್ಥಾನಗಳಲ್ಲಿರುವ ಬಂಗಾರವನ್ನೆಲ್ಲ ಒಟ್ಟುಗೂಡಿಸಿದರೆ 21,000 ಟನ್‌ ಆಗುತ್ತದೆ. ಇದು ಅಮೆರಿಕ, ಜರ್ಮನಿ, ಇಟಲಿ, ಫ್ರಾನ್ಸ್‌, ರಷ್ಯಾದ ಜನರು ಹೊಂದಿರುವ ಒಟ್ಟು ಬಂಗಾರಕ್ಕಿಂತಲೂ ಹೆಚ್ಚು.

ಬಂಗಾರವನ್ನು ಅನುತ್ಪಾದಕ ಆಸ್ತಿ ಅಥವಾ Non-Productive asset ಎಂದೇ ಕರೆಯಲಾಗುತ್ತಿತ್ತು. ಇದರಿಂದ ಭಾರತದ ಚಾಲ್ತಿ ಖಾತೆ ಕೊರತೆ ಹೆಚ್ಚುತ್ತದೆ. ಆಮದು ಖರ್ಚು ಜಾಸ್ತಿಯಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಬಂಗಾರದ ದರ ಏರುತ್ತಿರುವ ವೇಗದ ಪರಿಣಾಮವಾಗಿ ಟೀಕೆಗಳು ಬರುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಶೇಕಡಾವಾರು ರಿಟರ್ನ್‌ ದೃಷ್ಟಿಯಿಂದ ಚಿನ್ನವು ಸೆನ್ಸೆಕ್ಸ್‌ ಅನ್ನೂ ಹಿಂದಿಕ್ಕಿದೆ.

ಅಕ್ಷಯ ತೃತೀಯಕ್ಕೆ ಮುನ್ನ ಚಿನ್ನದ ದರದಲ್ಲಿ ಒಂದು ಲಕ್ಷ ರುಪಾಯಿ ಮಟ್ಟಕ್ಕಿಂತ ಸ್ವಲ್ಪ ಇಳಿಕೆಯಾಗಿರುವುದರಿಂದ ಖರೀದಿಸಬಹುದು ಎನ್ನುತ್ತಾರೆ ತಜ್ಞರು. ನೀವು ಭೌತಿಕ ಬಂಗಾರದ ಗಟ್ಟಿ, ನಾಣ್ಯ, ಆಭರಣಗಳಲ್ಲಿಯೇ ಹೂಡಿಕೆ ಮಾಡಬೇಕೆಂದೇನೂ ಇಲ್ಲ. ಗೋಲ್ಡ್‌ ಇಟಿಎಫ್‌ಗಳಲ್ಲಿಯೂ ಇನ್ವೆಸ್ಟ್‌ ಮಾಡಬಹುದು.

ಕೆಲವು ಪ್ರಮುಖ ಗೋಲ್ಡ್‌ ಇಟಿಎಫ್‌ಗಳು

ಎಕ್ಸಿಸ್‌ ಗೋಲ್ಡ್‌ ಇಟಿಎಫ್‌

ಇನ್ವೆಸ್ಕೊ ಇಂಡಿಯಾ ಗೋಲ್ಡ್‌ ಇಟಿಎಫ್‌

ಎಸ್‌ಬಿಐ ಇಟಿಎಫ್‌ ಗೋಲ್ಡ್‌ ಫಂಡ್‌

ಕೋಟಕ್‌ ಗೋಲ್ಡ್‌ ಇಟಿಎಫ್‌

ಆದಿತ್ಯ ಬಿರ್ಲಾ ಸನ್‌ ಲೈಫ್‌ ಗೋಲ್ಡ್‌ ಇಟಿಎಫ್‌

ಐಸಿಐಸಿಐ ಪ್ರುಡೆನ್ಷಿಯಲ್‌ ಗೋಲ್ಡ್‌ ಇಟಿಎಫ್‌

ಐಡಿಬಿಐ ಗೋಲ್ಡ್‌ ಇಟಿಎಫ್‌

ನಿಪ್ಪೋನ್‌ ಇಂಡಿಯಾ ಇಟಿಎಫ್‌ ಗೋಲ್ಡ್‌ ಬೀಸ್

ಯುಟಿಐ ಗೋಲ್ಡ್‌ ಇಟಿಎಫ್‌

ಕ್ವಾಂಟಮ್‌ ಗೋಲ್ಡ್‌ ಇಟಿಎಫ್‌

ಎಚ್‌ಡಿಎಫ್‌ಸಿ ಗೋಲ್ಡ್‌ ಇಟಿಎಫ್