ದೆಹಲಿ, ಮೇ 16: ಇತ್ತೀಚೆಗೆ ದೇಶದಲ್ಲಿ ಬೆಳ್ಳಿಗೆ ʼಬಂಗಾರʼ ದರ ಕಂಡುಬರುತ್ತಿದ್ದು, ಬೆಲೆ ಹೆಚ್ಚುತ್ತಿರುವ ಮಧ್ಯೆ ಕೇಂದ್ರ ಸರ್ಕಾರ (Central Government) ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ ಇನ್ನುಮುಂದೆ ಬೆಳ್ಳಿ ಬಾರ್ (Silver Bar) ಆಮದು ಮಾಡಿಕೊಳ್ಳಲು ವಿಶೇಷ ಪರವಾನಗಿ ಕಡ್ಡಾಯವಾಗಲಿದೆ (Silver Imports). ಈವರೆಗೆ ಬೆಳ್ಳಿ ಬಾರ್ ಆಮದಿನ ಮೇಲೆ ಯಾವುದೇ ನಿರ್ಬಂಧ ಇರಲಿಲ್ಲ. ಇದೀಗ ಹೊರಡಿಸಿರುವ ಆದೇಶದಲ್ಲಿ ಶೇ. 99.9 ಶುದ್ಧತೆಯ ಬೆಳ್ಳಿ ಬಾರ್ ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯದ ವಿಶೇಷ ಪರವಾನಗಿ ಪಡೆಯುವುದು ಕಡ್ಡಾಯ.
ʼʼಭಾರತ ಸರ್ಕಾರವು ಬೆಳ್ಳಿ ಬಾರ್‌ಗಳ ಆಮದು ನೀತಿಯನ್ನು ಬಿಗಿಗೊಳಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವುಗಳ ಸ್ಥಿತಿಯನ್ನು ʼಉಚಿತʼದಿಂದ ನಿರ್ಬಂಧಿತʼ ಸ್ಥಿತಿಗೆ ಬದಲಾಯಿಸಿದೆʼʼ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮೇ 16ರಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ಆಮದು ನೀತಿಯನ್ನು ವಿದೇಶಿ ವ್ಯಾಪಾರ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1992 ಮತ್ತು ವಿದೇಶಿ ವ್ಯಾಪಾರ ನೀತಿ 2023ರ ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದೆ.
ಬೆಳ್ಳಿ ಬಾರ್ ಆಮದಿನ ಕುರಿತಾದ ಹೊಸ ನಿಯಮ:
ಈ ನಿಯಮವು ಶೇಕಡ 99.9 ಅಥವಾ ಅದಕ್ಕಿಂತ ಹೆಚ್ಚಿನ ತೂಕದ ಬೆಳ್ಳಿಗೆ ಅನ್ವಯವಾಗುತ್ತದೆ. ಜತೆಗೆ ಚಿನ್ನ ಮತ್ತು ಪ್ಲಾಟಿನಂ ಲೇಪಿತ ಬೆಳ್ಳಿ ಸೇರಿ ಇತರ ನಿರ್ದಿಷ್ಟ ಬೆಳ್ಳಿ ಬಾರ್‌ಗಳನ್ನೂ ಒಳಗೊಂಡಿದೆ. ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳಿಗೆ ಒಳಪಟ್ಟು ಇವುಗಳ ಆಮದಿಗೆ ಮುಕ್ತವಾಗಿ ಅನುಮತಿ ನೀಡಲಾಗಿತ್ತು. ಹೊಸ ನಿಯಮದ ಅಡಿಯಲ್ಲಿ ಈ ಸರಕುಗಳ ಆಮದಿಗೆ ಸರ್ಕಾರಿ ಪರವಾನಗಿ ಅಗತ್ಯ. ವಿದೇಶದಿಂದ ದೇಶಕ್ಕೆ ಹರಿದು ಬರುವ ಬೆಳ್ಳಿಯ ಪ್ರಮಾಣವನ್ನು ನಿಯಂತ್ರಿಸುವುದು ಇದರ ಉದ್ದೇಶ ಎನ್ನಲಾಗಿದೆ. ಈಗ ಆಮದಿಗೆ ನಿರ್ಬಂಧ ವಿಧಿಸಿರುವುದರಿಂದ ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಚಿನ್ನ, ಬೆಳ್ಳಿ ಬಲು ದುಬಾರಿ; ಆಮದು ಸುಂಕ ಶೇ. 15 ಏರಿಕೆ ಮಾಡಿದ ಕೇಂದ್ರ
ಚಿನ್ನ, ಬೆಳ್ಳಿ ಆಮದು ಸುಂಕ ಶೇಕಡ 15 ಏರಿಕೆ ಮಾಡಿದ ಕೇಂದ್ರ
2 ದಿನಗಳ ಹಿಂದೆಯಷ್ಟೆ ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಮೇಲಿನ ಒಟ್ಟು ಒಟ್ಟು ಆಮದು ಸುಂಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇಕಡ 15ಕ್ಕೆ ಏರಿಕೆ ಮಾಡಿತ್ತು. ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಮತ್ತು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಈ ಹಿಂದೆ ಮೂಲ ಕಸ್ಟಮ್ಸ್ ಸುಂಕ ಶೇಕಡ 5ರಷ್ಟಿತ್ತು. ಈಗ ಇದನ್ನು ಶೇ. 10ಕ್ಕೆ ಏರಿಕೆ ಮಾಡಲಾಗಿದೆ. ಸೆಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಮೂಲ ಕಸ್ಟಮ್ಸ್ ಸುಂಕ ಶೇಕಡ 5ರಷ್ಟು ಏರಿಕೆ ಮಾಡಿದ್ದರಿಂದ ಒಟ್ಟು ಆಮದು ಸುಂಕ ಶೇಕಡ 15ಕ್ಕೆ ಏರಿಕೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.