ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇದೇ ಮೊದಲ ಬಾರಿಗೆ ಲಾಭ ಗಳಿಸಿದ ಜಾವಾ-ಯೆಜ್ಡಿ-ಬಿಎಸ್‌ಎ: 2027ರಲ್ಲಿ 4 ಹೊಸ ಬೈಕ್ ಬಿಡುಗಡೆಗೆ ಕ್ಲಾಸಿಕ್ ಲೆಜೆಂಡ್ಸ್ ಸಜ್ಜು

Classic Legends: ಮಹೀಂದ್ರಾ ಸಮೂಹದ ‘ಕ್ಲಾಸಿಕ್ ಲೆಜೆಂಡ್ಸ್ʼ (ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಮೋಟಾರ್‌ಸೈಕಲ್ಸ್) 2026ನೇ ಆರ್ಥಿಕ ವರ್ಷದಲ್ಲಿ ಮೊದಲ ಬಾರಿ ಲಾಭ ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಕಂಪನಿಯು 2027ನೇ ಆರ್ಥಿಕ ವರ್ಷದಲ್ಲಿ ನಾಲ್ಕು ಹೊಸ ಮೋಟಾರ್‌ ಸೈಕಲ್ ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಬೆಂಗಳೂರು, ನ.21: ಭಾರತದ ಆಧುನಿಕ ಕ್ಲಾಸಿಕ್ ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಹೀಂದ್ರಾ ಸಮೂಹದ ‘ಕ್ಲಾಸಿಕ್ ಲೆಜೆಂಡ್ಸ್ʼ (ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಮೋಟಾರ್‌ಸೈಕಲ್ಸ್) (Jawa Yezdi BSA Motorcycles) 2026ನೇ ಆರ್ಥಿಕ ವರ್ಷದಲ್ಲಿ ಮೊದಲ ಬಾರಿ ಲಾಭ ಗಳಿಸುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ.

ಏಪ್ರಿಲ್ 2025ರಿಂದ ಮಾರ್ಚ್ 2026ರ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಶೇ.40 ಹಾಗೂ ಅಂತಾರಾಷ್ಟ್ರೀಯ ಮಾರಾಟವೂ ಸೇರಿ ಒಟ್ಟಾರೆ ಶೇ.55ರಷ್ಟು ಬೆಳವಣಿಗೆ ದಾಖಲಿಸಿದ್ದ ಸಂಸ್ಥೆಯು, 2027ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬರೋಬ್ಬರಿ ಶೇ. 125ರಷ್ಟು ಭರ್ಜರಿ ಪ್ರಗತಿ ಕಂಡಿದೆ. ಈ ಉತ್ಸಾಹದಲ್ಲಿ ಕಂಪನಿಯು 2027ನೇ ಆರ್ಥಿಕ ವರ್ಷದಲ್ಲಿ ನಾಲ್ಕು ಹೊಸ ಮೋಟಾರ್‌ಸೈಕಲ್ ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

1970ರ ದಶಕದಲ್ಲಿ ಭಾರತದ ಯುವಜನತೆಯ ಕನಸಾಗಿದ್ದ ಜಾವಾ ಮತ್ತು ಯೆಜ್ಡಿ ಬೈಕ್‌ಗಳು, 80 ಹಾಗೂ 90ರ ದಶಕದಲ್ಲಿ ಜಪಾನಿ ಕಂಪನಿಗಳ ಹಗುರ ಹಾಗೂ ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳ ಸ್ಪರ್ಧೆಯಿಂದ ಸವಾಲು ಎದುರಿಸಿದ್ದವು. ಜತೆಗೆ ಕಠಿಣ ಮಾಲಿನ್ಯ ನಿಯಂತ್ರಣ ನಿಯಮಗಳಿಂದಾಗಿ ಟೂ-ಸ್ಟ್ರೋಕ್ ಎಂಜಿನ್‌ಗಳನ್ನು ಮುಂದುವರಿಸಲು ಸಾಧ್ಯವಾಗದೆ ಯೆಜ್ಡಿ ತನ್ನ ಹಿಂದಿನ ಅಧ್ಯಾಯವನ್ನು ಮುಗಿಸಿತ್ತು.

ಬಳಿಕ 2018ರಲ್ಲಿ ಮಹೀಂದ್ರಾ ಸಮೂಹದ ಹೂಡಿಕೆಯೊಂದಿಗೆ ಅನುಪಮ್ ಥರೇಜಾ ಮತ್ತು ಬೊಮನ್ ರುಸ್ತುಂ ಇರಾನಿ ನೇತೃತ್ವದ ಕ್ಲಾಸಿಕ್ ಲೆಜೆಂಡ್ಸ್ ‘ಜಾವಾʼ ಬ್ರ್ಯಾಂಡ್ ಅನ್ನು ಮರಳಿ ತಂದಿತು. ಮೊದಲ ದಿನವೇ 1 ಲಕ್ಷಕ್ಕೂ ಹೆಚ್ಚು ಬುಕಿಂಗ್ ಲಭಿಸಿ ವೆಬ್‌ಸೈಟ್ ಸ್ಥಗಿತಗೊಳ್ಳುವಷ್ಟು ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು. ಆರಂಭಿಕ ಹಂತದಲ್ಲೇ ಕೋವಿಡ್-19 ಸಾಂಕ್ರಾಮಿಕದಿಂದ ಉತ್ಪಾದನೆ ಮತ್ತು ಪೂರೈಕೆ ಸರಪಳಿಗೆ ಅಡ್ಡಿಯಾದರೂ, ಸಂಸ್ಥೆಯು ತನ್ನ ಎಂಜಿನಿಯರಿಂಗ್ ಹಾಗೂ ವಿತರಣಾ ಜಾಲವನ್ನು ಗಟ್ಟಿಗೊಳಿಸಿ ಮುನ್ನಡೆಯಿತು.

2022ರಲ್ಲಿ ‘ಯೆಜ್ಡಿʼ ಬೈಕ್‌ಗಳನ್ನು ಭಾರತೀಯ ರಸ್ತೆಗಳಿಗೆ ಮರಳಿ ತಂದ ಕಂಪನಿಯು, ‘ಯೆಜ್ಡಿ ಸ್ಕ್ರ್ಯಾಂಬ್ಲರ್ʼ ಮೂಲಕ ಭಾರತದಲ್ಲಿ ಆಧುನಿಕ ಸ್ಕ್ರ್ಯಾಂಬ್ಲರ್ ಮಾದರಿಯನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿತು. ನಂತರ 2024ರಲ್ಲಿ ‘ಗೋಲ್ಡ್ ಸ್ಟಾರ್ 650’ ಬೈಕ್‌ನೊಂದಿಗೆ ಬ್ರಿಟಿಷ್ ಪರಂಪರೆಯ ‘ಬಿಎಸ್‌ಎʼ ಬ್ರ್ಯಾಂಡ್ ಅನ್ನು ಪರಿಚಯಿಸಿ ಮೂರು ಬ್ರ್ಯಾಂಡ್‌ಗಳ ಶ್ರೇಣಿಯನ್ನು ಪೂರ್ಣಗೊಳಿಸಿತು.

ಮಾರ್ಚ್ 2019ರಲ್ಲಿ ದೇಶದ 77 ನಗರಗಳಲ್ಲಿ ಕೇವಲ 85 ಡೀಲರ್‌ಶಿಪ್‌ಗಳನ್ನು ಹೊಂದಿದ್ದ ಕಂಪನಿ, 2026ರ ವೇಳೆಗೆ 450ಕ್ಕೂ ಹೆಚ್ಚು ಮಾರಾಟ, ಸೇವಾ ಮತ್ತು ಬಿಡಿಭಾಗ ಕೇಂದ್ರಗಳಿಗೆ ವಿಸ್ತರಿಸಿದೆ. ಇದರಲ್ಲಿ 2026ನೇ ಆರ್ಥಿಕ ವರ್ಷದಲ್ಲಿ ಕೇರಳವೊಂದರಲ್ಲೇ ಒಂದೇ ಹಂತದಲ್ಲಿ 20ಕ್ಕೂ ಹೆಚ್ಚು ಕೇಂದ್ರಗಳನ್ನು ತೆರೆಯಲಾಗಿದ್ದು, ದ್ವಿತೀಯ ಮತ್ತು ತೃತೀಯ ದರ್ಜೆ ನಗರಗಳ ಗ್ರಾಹಕರಿಗೂ ಬೈಕ್‌ಗಳು ಸುಲಭವಾಗಿ ಸಿಗುವಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಯುವ ಸವಾರರು ಸಾಮಾನ್ಯ ಕಮ್ಯೂಟರ್ ಬೈಕ್‌ಗಳಿಗಿಂತ ವಿನ್ಯಾಸ ಮತ್ತು ಕಾರ್ಯಕ್ಷಮತೆಗೆ ಹೆಸರಾದ ಮಧ್ಯಮ ಸಾಮರ್ಥ್ಯದ ಲೈಫ್‌ಸ್ಟೈಲ್ ಬೈಕ್‌ಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ಬೇಡಿಕೆಯನ್ನು ಪೂರೈಸಲು 2028ನೇ ಆರ್ಥಿಕ ವರ್ಷದ ವೇಳೆಗೆ ದೇಶಾದ್ಯಂತ 700 ಸೇವಾ ಮತ್ತು ಮಾರಾಟ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಜತೆಗೆ ಗ್ರಾಹಕರು, ಸೇವಾ ಪಾಲುದಾರರು ಹಾಗೂ ಸ್ವತಂತ್ರ ವರ್ಕ್‌ಶಾಪ್‌ಗಳಿಗೂ ಪ್ರಾಥಮಿಕ ಡೀಲರ್‌ಶಿಪ್‌ಗಳ ಹೊರಗೆ ಅಸಲಿ ಬಿಡಿಭಾಗಗಳು ಸುಲಭವಾಗಿ ಲಭ್ಯವಾಗುವಂತೆ ಅಧಿಕೃತ ವಿತರಣಾ ಜಾಲವನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.