ಬೆಂಗಳೂರು: ಭಾರತದ ಅತಿ ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ‘ಬಯೋಕಾನ್’ (Biocon) ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ತಮ್ಮ ಸಂಸ್ಥೆಯ ಮುಂದಿನ ಉತ್ತರಾಧಿಕಾರಿಯನ್ನು ಹೆಸರಿಸಿದ್ದಾರೆ. ತಮ್ಮ ಸಹೋದರನ ಮಗಳಾದ ಕ್ಲೇರ್ ಮಜುಂದಾರ್ (Claire Mazumdar) ಅವರನ್ನು ಬಯೋಕಾನ್ ಸಾಮ್ರಾಜ್ಯವನ್ನು ಮುನ್ನಡೆಸಲು ಆಯ್ಕೆ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಕಿರಣ್ ಮಜುಂದಾರ್ ಶಾ ಅವರು ಕಂಪನಿಯ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಕಂಪನಿಯು ಮುಂದಿನ ಹಂತದ ಪ್ರಗತಿಗಾಗಿ ಸುಧಾರಿತ ಜೈವಿಕ ತಂತ್ರಜ್ಞಾನ ಮತ್ತು ಕಾರ್ಯಾಚರಣೆಗಳಲ್ಲಿ ಕೃತಕ ಬುದ್ಧಿಮತ್ತೆಯ ಸಂಯೋಜನೆಯ ಮೇಲೆ ಗಮನ ಕೇಂದ್ರೀಕರಿಸುತ್ತಿರುವ ಸಂದರ್ಭದಲ್ಲಿ ನಾಯಕತ್ವ ಹಸ್ತಾಂತರ ಆಗಲಿರುವುದು ಗಮನಾರ್ಹ.
ಕ್ಲೇರ್ ಮಜುಂದಾರ್ ಯಾರು?
37 ವರ್ಷದ ಕ್ಲೇರ್ ಮಜುಂದಾರ್ ಅವರು ಪ್ರಸ್ತುತ ಅಮೆರಿಕ ಮೂಲದ ‘ಬಿಕಾರಾ ಥೆರಪಿಟಿಕ್ಸ್’ (Bicara Therapeutics) ಎಂಬ ಜೈವಿಕ ಔಷಧ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಯೋಕಾನ್‌ನಿಂದಲೇ ಆರಂಭವಾದ, ನಾಸ್ಡಾಕ್ ಲಿಸ್ಟೆಡ್ ಸಂಸ್ಥೆಯಾಗಿದೆ. ತಮಗೆ ಮಕ್ಕಳಿಲ್ಲದ ಕಾರಣ, ಕಂಪನಿಯ ಭವಿಷ್ಯ ಮತ್ತು ಮಾಲೀಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಕ್ಲೇರ್ ಅವರೇ ಸೂಕ್ತ ವ್ಯಕ್ತಿ ಎಂದು ಕಿರಣ್ ಅವರು ನಿರ್ಧರಿಸಿದ್ದಾರೆ. ಕ್ಲೇರ್ ಅವರ ನಾಯಕತ್ವ ಮತ್ತು ಜಾಗತಿಕ ಮಟ್ಟದಲ್ಲಿ ಬಯೋಟೆಕ್ ವ್ಯವಹಾರವನ್ನು ಬೆಳೆಸಿದ ರೀತಿಗೆ ಕಿರಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ಲೇರ್ ಮಜುಂದಾರ್ ಅವರ ಶೈಕ್ಷಣಿಕ ಹಿನ್ನೆಲೆ
ಕ್ಲೇರ್ ಅವರು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಂತಹ ವಿಶ್ವವಿಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದಿದ್ದಾರೆ. ಕ್ಲೇರ್ ಅವರ ಕುಟುಂಬದ ಇತರ ಸದಸ್ಯರೂ ಕೂಡ ಉನ್ನತ ಹುದ್ದೆಗಳಲ್ಲಿಇದ್ದಾರೆ. ಸಹೋದರ ಎರಿಕ್ ಮಜುಂದಾರ್ ಅವರು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಐ ತಜ್ಞರಾಗಿದ್ದಾರೆ. ಪತಿ ಥಾಮಸ್ ರಾಬರ್ಟ್ಸ್ ಅವರು ಅಮೆರಿಕದ ಮೆಸಾಚುಸೆಟ್ಸ್ ಜೆನರಲ್ ಹಾಸ್ಪಿಟಲ್‌ನಲ್ಲಿ ಕ್ಯಾನ್ಸರ್ ತಜ್ಞರಾಗಿದ್ದಾರೆ.
ಬಯೋಕಾನ್ ಸಂಸ್ಥೆಯು ಈಗ ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ಜೈವಿಕ ಔಷಧಗಳ ಸಂಶೋಧನೆಯತ್ತ ಹೆಚ್ಚು ಗಮನಹರಿಸುತ್ತಿದ್ದು, ಕ್ಲೇರ್ ಅವರ ತಾಂತ್ರಿಕ ಜ್ಞಾನವು ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಕಿರಣ್ ಮಜುಂದಾರ್ ಶಾ (73) ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಬಯೋಕಾನ್ ಸ್ಥಾಪಿಸಿ ಭಾರತದ ಅತಿದೊಡ್ಡ ಬಯೋಟೆಕ್ ಕಂಪನಿಯಾಗಿ ಬೆಳೆಸಿದ್ದಾರೆ. ಸ್ವರ್ಗಸ್ಥರಾಗಿರುವ ಅವರ ಪತಿ ಜಾನ್ ಶಾ ಅವರು ಈ ಹಿಂದೆ ಸಮೂಹದ ಉಪಾಧ್ಯಕ್ಷರಾಗಿದ್ದರು.
ಮೇ.8 ರಿಂದ ಅಮೆಜಾನ್ ಇಂಡಿಯಾದ ಗ್ರೇಟ್ ಸಮ್ಮರ್ ಸೇಲ್ 2026 ನೊಂದಿಗೆ ಕ್ಯುರೇಟೆಡ್ AI ಫೈಂಡ್ ಗಳಿಂದ ಮಾಡಿ ಶಾಪಿಂಗ್
ಕಿರಣ್ ಮಜುಂದಾರ್ ಪ್ರತಿಕ್ರಿಯೆ ಏನು?
ಇನ್ನು ಕಂಪನಿಯ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಕಿರಣ್ ಮಜುಂದಾರ್ ಅವರು, ತಾವು ತತ್ಕ್ಷಣಕ್ಕೆ ಬಯೋಕಾನ್ನ ಜವಾಬ್ದಾರಿ ಬಿಡುತ್ತಿಲ್ಲ. ಕ್ಲೇರ್ ಅವರು ನನ್ನ ಸ್ಥಾನಕ್ಕೆ ಸೂಕ್ತ ಸಮಯದಲ್ಲಿ ಬರುತ್ತಾರೆ ಎಂದು ಎಕ್ಸ್ ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.