#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kisan Credit Card Loan: ರೈತರಿಗೆ ಬಜೆಟ್‌ನಲ್ಲಿ ಗುಡ್‌ನ್ಯೂಸ್‌; ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಏರಿಕೆ: ಹೀಗೆ ಅಪ್ಲೈ ಮಾಡಿ

ತಮ್ಮ 8ನೇ ಬಜೆಟ್‌ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಮ ವರ್ಗ, ಕೃಷಿಕರಿಗೆ ಭರಪೂರ ಕೊಡುಗೆ ಘೋಷಿಸಿದ್ದಾರೆ. 1 ಗಂಟೆ 14 ನಿಮಿಷಗಳ ಬಜೆಟ್‌ ಭಾಷಣದಲ್ಲಿ ಅವರು ಹಲವು ಯೋಜನೆಗಳಿಗೆ ಅನುದಾನ ಘೋಷಿಸಿದ್ದಾರೆ. 3 ಲಕ್ಷ ರೂ. ಇದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಬಜೆಟ್‌ನಲ್ಲಿ ಗುಡ್‌ನ್ಯೂಸ್‌; ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಏರಿಕೆ

ಸಾಂದರ್ಭಿಕ ಚಿತ್ರ.

Profile Ramesh B Feb 1, 2025 5:59 PM

ಹೊಸದಿಲ್ಲಿ: ಶನಿವಾರ (ಫೆ. 1) ತಮ್ಮ 8ನೇ ಬಜೆಟ್‌ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಧ್ಯಮ ವರ್ಗ, ಕೃಷಿಕರಿಗೆ ಭರಪೂರ ಕೊಡುಗೆ ಘೋಷಿಸಿದ್ದಾರೆ. 1 ಗಂಟೆ 14 ನಿಮಿಷಗಳ ಬಜೆಟ್‌ ಭಾಷಣದಲ್ಲಿ ಅವರು ಹಲವು ಯೋಜನೆಗಳಿಗೆ ಅನುದಾನ ಘೋಷಿಸಿದ್ದಾರೆ. ಈ ಪೈಕಿ ಕೃಷಿಕರಿಗೆ ನೆರವಾಗುವ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card Loan) ಮೇಲಿನ ಸಾಲದ ಮಿತಿಯನ್ನು ಹೆಚ್ಚಿಸಲಾಗಿದ್ದು, ಈ ಮೂಲಕ ಗುಡ್‌ನ್ಯೂಸ್‌ ನೀಡಲಾಗಿದೆ. ಈ ಹಿಂದೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ 3 ಲಕ್ಷ ರೂ. ಇತ್ತು. ಇದೀಗ ಅದನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಕೆಸಿಸಿ ಮಿತಿ ಹೆಚ್ಚಳದಿಂದ ಏನು ಅನುಕೂಲ?

ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ರೈತರಿಗೆ, ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುತ್ತದೆ. ಇದರ ಮೂಲಕ ಕೃಷಿಕರ ಆರ್ಥಿಕತೆ ಸುಧಾರಿಸುವ ಗುರಿ ಹೊಂದಲಾಗಿದೆ.



ಕೆಸಿಸಿ ಎಂದರೇನು?

ಪ್ರಧಾನ ಮಂತ್ರಿ ಕ್ರೆಡಿಟ್‌ ಕಾರ್ಡ್‌ ಯೋಜನೆ ಎಂದೂ ಕರೆಯಲ್ಪಡುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯನ್ನು ಕೇಂದ್ರ ಸರ್ಕಾರ 1988ರಲ್ಲಿ ಜಾರಿಗೆ ತಂದಿದೆ. ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ನೀಡುತ್ತವೆ. ರೈತರಿಗೆ ರಸಗೊಬ್ಬರ, ಬೀಜ, ಕೀಟನಾಶಕ ಇತ್ಯಾದಿ ಕೃಷಿ ಉತ್ಪನ್ನಗಳ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು ಸರ್ಕಾರದ ಉದ್ದೇಶ.

ಕೃಷಿ ಚಟುವಟಿಕೆಗಳಿಗಾಗಿ ರೈತರು ಒಂದೇ ಸ್ಥಳದಿಂದ ಸಾಲವನ್ನು ಪಡೆಯಬಹುದು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸರಳವಾಗಿರುತ್ತದೆ. ರೈತರಿಗೆ ಶೇ. 2ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುತ್ತದೆ. ಜತೆಗೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವ ರೈತರಿಗೆ ಬಡ್ಡಿದರವನ್ನು ಹೆಚ್ಚುವರಿಯಾಗಿ ಶೇ. 3ರಷ್ಟು ಕಡಿಮೆ ಮಾಡಲಾಗುತ್ತದೆ. ಹೀಗೆ ಕೆಸಿಸಿ ಮೂಲಕ ರೈತರಿಗೆ ಸಾಕಷ್ಟು ಅನುಕೂಲ ಒದಗಿಸಲಾಗುತ್ತದೆ. ಇದೀಗ ಸಾಲದ ಮಿತಿ ಏರಿಸಿರುವುದರಿಂದ ಇನ್ನಷ್ಟು ಅನುಕೂಲವಾದಂತಾಗಿದೆ.

ಯಾರಿಗೆಲ್ಲ ಸಿಗುತ್ತೆ?

ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಹಣಕಾಸು ಸಂಸ್ಥೆಗಳು ಮತ್ತು ರಾಜ್ಯ ಸಹಕಾರಿ ಸಂಸ್ಥೆಗಳು ಕೃಷಿ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಸಂಬಂಧಿತ ಪದ್ಧತಿಗಳಲ್ಲಿ ತೊಡಗಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತವೆ.

ಅರ್ಹತೆಗಳೇನು?

  • ರೈತರ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು. ಸ್ವಂತ ಭೂಮಿಯನ್ನು ಹೊಂದಿಲ್ಲದಿದ್ದರೆ, ಕೃಷಿಗಾಗಿ ಬಾಡಿಗೆಗೆ ಪಡೆದ ಭೂಮಿ ಇರಬೇಕು.
  • 18-75 ವರ್ಷ ವಯಸ್ಸಿನವರಾಗಿರಬೇಕು.
  • ಬ್ಯಾಂಕ್ ಉಳಿತಾಯ ಖಾತೆ ಹೊಂದಿರಬೇಕು.
  • ಕೃಷಿ ಭೂಮಿ ಫಲವತ್ತಾಗಿರಬೇಕು.
  • ಬೆಳೆ ಉತ್ಪಾದನೆ ಅಥವಾ ಇತರ ಕೃಷಿ ಚಟುವಟಿಕೆಗಳಿಗೆ ಸಾಲವನ್ನು ಬಳಸಿಕೊಳ್ಳಲು ಪರಿಣಾಮಕಾರಿ ಯೋಜನೆಯನ್ನು ಹೊಂದಿರಬೇಕು.

ಅಗತ್ಯವಾದ ದಾಖಲೆಗಳು

  • ಗುರುತಿನ ಚೀಟಿ (ಆಧಾರ್ ಕಾರ್ಡ್‌, ವೋಟರ್‌ ಐಡಿ, ಪ್ಯಾನ್‌ ಕಾರ್ಡ್‌, ಲೈಸನ್ಸ್‌ ಪೈಕಿ ಯಾವುದಾದರೂ ಒಂದು).
  • ವಿಳಾಸ ದಾಖಲಾತಿ (ಆಧಾರ್‌ ಕಾರ್ಡ್‌, ವಿದ್ಯುತ್‌ ಅಥವಾ ನೀರಿನ ಬಿಲ್‌, ಬ್ಯಾಂಕ್‌ ಸ್ಟೇಟ್‌ಮೆಂಟ್‌, ಬಾಡಿಗೆ ಅಗ್ರಿಮೆಂಟ್‌, ವೋಟರ್‌-ಪೈಕಿ ಯಾವುದಾದರೋ ಒಂದು).
  • ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು.
  • ಪಾಸ್‌ಪೋರ್ಟ್ ಗಾತ್ರದ ಫೋಟೊ.
  • ಸಾಲ ನೀಡುವ ಹಣಕಾಸು ಸಂಸ್ಥೆಯ ಬೇಡಿಕೆಯ ಮೇರೆಗೆ ಪಿಡಿಸಿ (Post Dated Cheques)ಯಂತಹ ಹೆಚ್ಚುವರಿ ದಾಖಲೆಗಳು.

ಈ ಸುದ್ದಿಯನ್ನೂ ಓದಿ: Union Budget: ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ ಸಿಕ್ಕಿದ್ದೇನು? ಇಲ್ಲಿದೆ ಡಿಟೇಲ್ಸ್‌

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ರೈತರು ಆನ್‌ಲೈನ್‌ ಮತ್ತು ಅಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

  • ನೀವು ಅರ್ಜಿ ಸಲ್ಲಿಸಲು ಬಯಸುವ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • ಬಳಿಕ ʼApply' ಆಯ್ಕೆಯನ್ನು ಸೆಲೆಕ್ಟ್‌ ಮಾಡಿ. ಬಳಿಕ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ 'Submit' ಬಟನ್‌ ಕ್ಲಿಕ್‌ ಮಾಡಿ.
  • ನೀವು ಅರ್ಹರಾಗಿದ್ದರೆ 3-4 ದಿನಗಳಲ್ಲಿ ಈ ಬಗ್ಗೆ ನಿಮಗೆ ಮಾಹಿತಿ ಲಭ್ಯವಾಗುತ್ತದೆ.

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

  • ನೀವು ಅರ್ಜಿ ಸಲ್ಲಿಸಬೇಕಿರುವ ಬ್ಯಾಂಕ್‌ಗೆ ಭೇಟಿ ನೀಡಿ ಕಿಸಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ.