ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget 2026: ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಘೋಷಿಸುವ ಮೂಲಕ ಕಾಂಗ್ರೆಸ್‌ಗೆ ಕೇಂದ್ರದಿಂದ ಮಾಸ್ಟರ್‌ ಸ್ಟ್ರೋಕ್‌

Mahatma Gandhi Gram Swaraj: ಗಾಂಧೀಜಿ ಹೆಸರಿನಲ್ಲಿ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಸಂಸತ್‌ನಲ್ಲಿ ಕೇಂದ್ರ ಬಜೆಟ್‌ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 'ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್' ಅನ್ನು ಪರಿಚಯಿಸಿದ್ದಾರೆ. ಇದು ಕೈಮಗ್ಗ ಕೇಂದ್ರಿತ ಯೋಜನೆಯಾಗಿದ್ದು ಈ ಮೂಲಕ ಸರ್ಕಾರವು ಜವಳಿ ಉದ್ಯಮದಲ್ಲಿ, ವಿಶೇಷವಾಗಿ ಖಾದಿ, ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತರಲು ಮುಂದಾಗಿದೆ.

ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)

ದೆಹಲಿ, ಫೆ. 1: ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿದ ವಿಚಾರ ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಾಗಿದೆ. ಯೋಜನೆಯನ್ನು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್‌ ಆ್ಯಂಡ್‌ ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G Bill) ಎಂದು ಮರುನಾಮಕರಣ ಮಾಡಿದ್ದು, ಮಹಾತ್ಮಾ ಗಾಂಧಿ ಹೆಸರು ಕೈ ಬಿಡಲಾಗಿದೆ ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆ ಕೇಂದ್ರ ಮಾಸ್ಟರ್‌ ಸ್ಟ್ರೋಕ್‌ ನೀಡಿದೆ. ಗಾಂಧೀಜಿ ಹೆಸರಿನಲ್ಲಿ ಹೊಸ ಯೋಜನೆಯನ್ನು ಘೋಷಿಸಲಾಗಿದೆ. ಸಂಸತ್‌ನಲ್ಲಿ ಕೇಂದ್ರ ಬಜೆಟ್‌ ಮಂಡಿಸಿದ (Budget 2026) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman), 'ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್' (Mahatma Gandhi Gram Swaraj) ಅನ್ನು ಪರಿಚಯಿಸಿದ್ದಾರೆ.

'ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್' ಕೈಮಗ್ಗ ಕೇಂದ್ರಿತ ಯೋಜನೆಯಾಗಿದ್ದು ಈ ಮೂಲಕ ಸರ್ಕಾರವು ಜವಳಿ ಉದ್ಯಮದಲ್ಲಿ, ವಿಶೇಷವಾಗಿ ಖಾದಿ, ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತರಲು ಮುಂದಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮನರೇಗಾ ಉದ್ಯೋಗ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಬದಲಾಯಿಸಿದೆ ಕೆಲವೇ ವಾರಗಳ ಅಂತರದಲ್ಲಿ ಈ ಘೋಷಣೆ ಹೊರ ಬಿದ್ದಿದೆ.

ಬಜೆಟ್‌ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್‌:



ಏನಿದು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ?

ಮಹಾತ್ಮ ಗಾಂಧಿ ಅವರ ಹೆಸರಿನ ಕೈಮಗ್ಗ ಯೋಜನೆಯನ್ನು ಘೋಷಿಸಿದ ನಿರ್ಮಲಾ ಸೀತಾರಾಮನ್, ಜವಳಿ ಉದ್ಯಮದ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶವನ್ನು ವಿವರಿಸಿದರು. "ನಾವು ಮೆಗಾ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲಿದ್ದೇವೆ. ಖಾದಿ ಮತ್ತು ಕೈಮಗ್ಗವನ್ನು ಬಲಪಡಿಸಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಪ್ರಾರಂಭಿಸಲು ಮುಂದಾಗಿದ್ದೇವೆ" ಎಂದು ಹೇಳಿದರು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಸಮಯದಲ್ಲಿ ಖಾದಿಯನ್ನು ಗಾಂಧೀಜಿ ಸ್ವರಾಜ್ (ಸ್ವ-ಆಡಳಿತ) ಮತ್ತು ಸ್ವದೇಶಿ (ಸ್ಥಳೀಯ) ಘೋಷಣೆಯನ್ನು ಜನಪ್ರಿಯಗೊಳಿಸಿದ್ದರು.

ಈ ಯೋಜನೆಯ ಮೂಲಕ ಜಾಗತಿಕ ಮಾರುಕಟ್ಟೆ ಸಂಪರ್ಕ ಮತ್ತು ಬ್ರ್ಯಾಂಡಿಂಗ್ ಬೆಂಬಲವನ್ನು ಒದಗಿಸುವ ಗುರಿ ಹೊಂದಲಾಗಿದ್ದು, ತರಬೇತಿ, ಕೌಶಲ್ಯ ಮತ್ತು ಉತ್ಪಾದನಾ ಗುಣಮಟ್ಟವನ್ನು ಸುಧಾರಿಸಲಿದೆ. ಇದು ನೇಕಾರರು, ಗ್ರಾಮೀಣ ಕೈಗಾರಿಕೆಗಳು, ಒಂದು ಜಿಲ್ಲೆ ಒಂದು ಉತ್ಪನ್ನ (ODOP) ಯೋಜನೆ ಮತ್ತು ಗ್ರಾಮೀಣ ಯುವಜನತೆಗೆ ಪ್ರಯೋಜನವನ್ನು ನೀಡುತ್ತದೆ ಎಂದು ವಿವರಿಸಿದ್ದಾರೆ.