ಮುಂಬೈ: ಸತತ 10 ದಿನಗಳ ಕುಸಿತದ ಬಳಿಕ ಕೊನೆಗೂ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಬುಧವಾರ 22,300 ಅಂಕಗಳಿಗೆ ಚೇತರಿಸಿಕೊಂಡಿತು. ಸೆನ್ಸೆಕ್ಸ್ 740 ಅಂಕ ಜಿಗಿಯಿತು. ಅಂತಿಮವಾಗಿ ನಿಫ್ಟಿ 254 ಅಂಕ ಏರಿಕೊಂಡು 22,337ಕ್ಕೆ ದಿನದಾಟ ಮುಕ್ತಾಯಗೊಳಿಸಿತು. ಸೆನ್ಸೆಕ್ಸ್ 740 ಅಂಕ ಜಿಗಿದು 73,730ಕ್ಕೆ ಸ್ಥಿರವಾಯಿತು (Share Market). ಈ ರಿಬೌಂಡ್ ಪರಿಣಾಮ ಬಿಎಸ್‌ಇನಲ್ಲಿ ಲಿಸ್ಟೆಡ್ ಕಂಪನಿಗಳ ಮಾರ್ಕೆಟ್ ಕ್ಯಾಪಿಟಲೈಶೇಶನ್‌ನಲ್ಲಿ 7 ಲಕ್ಷದ 47 ಸಾವಿರ ಕೋಟಿ ರುಪಾಯಿ ಹೆಚ್ಚಳವಾಗಿದ್ದು, 393 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ಹಾಗಾದರೆ ಇದು ಸ್ಟಾಕ್ ಮಾರುಕಟ್ಟೆಯ ರಿಕವರಿಯಾ? ನೋಡೋಣ.
ಬಹಳ ನಿರ್ಣಾಯಕ ಘಟ್ಟದಲ್ಲಿ ಈ ಚೇತರಿಕೆ ಕಂಡು ಬಂದಿದೆ. ಫೆಬ್ರವರಿಯಲ್ಲಿ ಸ್ಟಾಕ್ ಮಾರ್ಕೆಟ್‌ಗೆ ಕೆಟ್ಟ ತಿಂಗಳಾಗಿತ್ತು. 20ರಲ್ಲಿ 18 ಸೆಶನ್ಸ್‌ನಲ್ಲಿ ಇಂಡೆಕ್ಸ್‌ಗಳು ರೆಡ್ ಆಗಿತ್ತು. ಎಕ್ಸಿಸ್ ಸೆಕ್ಟುರಿಟೀಸ್ ತಜ್ಞರ ಪ್ರಕಾರ ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ರಿಕವರಿ ಉಂಟಾಗುತ್ತದೆ. ನಿಫ್ಟಿ ಸತತ ಆರು ತಿಂಗಳುಗಳಿಂದ ಕುಸಿದಿರುವುದರಿಂದ ಚೇತರಿಸುವ ನಿರೀಕ್ಷೆ ಇದೆ.
ಏಷ್ಯಾದ ಮಾರುಕಟ್ಟೆಗಳಲ್ಲಿನ ಚೇತರಿಕೆಯು ಭಾರತದಲ್ಲೂ ಸಕಾರಾತ್ಮಕ ಪ್ರಭಾವ ಬೀರಿತು. ಕಳೆದ ಮೂವತ್ತು ವರ್ಷಗಳಲ್ಲಿಯೇ ನಿಫ್ಟಿ ಸತತವಾಗಿ 9 ದಿನಗಳ ಕುಸಿತವನ್ನು ದಾಖಲಿಸಿತ್ತು. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಟ್ರೇಡ್ ಟೆನ್ಷನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾನಾ ದೇಶಗಳ ಮೇಲೆ ಆಮದು ತೆರಿಗೆಯನ್ನು ಹೆಚ್ಚಿಸಿರುವುದರಿಂದ ಸ್ಟಾಕ್ ಮಾರ್ಕೆಟ್ ಸೂಚ್ಯಂಕಗಳು ಕುಸಿದಿತ್ತು.
ಈ ಸುದ್ದಿಯನ್ನೂ ಓದಿ:Income Tax: ನಮ್ಮ ದೇಶದಲ್ಲಿ ಹಿರಿಯ ಮತ್ತು ಅತೀ ಹಿರಿಯ ನಾಗರಿಕರಿಗೆ ಇರುವ ತೆರಿಗೆ ವಿನಾಯಿತಿಗಳ ಬಗ್ಗೆ ನಿಮಗೆಷ್ಟು ಗೊತ್ತು?
ಹೀಗಿದ್ದರೂ ಬುಧವಾರ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಅದಾನಿ ಎಂಟರ್‌ಪ್ರೈಸಸ್, ಟ್ರೆಂಟ್, ಟಾಟಾ ಸ್ಟೀಲ್, ಎನ್‌ಟಿಪಿಸಿ, ಟಾಟಾ ಮೋಟಾರ್ಸ್ ಷೇರು ಲಾಭ ಗಳಿಸಿತು.
ಈ ನಡುವೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯ ಮಧ್ಯಪ್ರವೇಶದಿಂದ ಅಪಾಯಕಾರಿ ಫ್ಯೂಚರ್ ಆಂಡ್ ಆಪ್ಷನ್ ಟ್ರೇಡಿಂಗ್ ವಹಿವಾಟಿನಲ್ಲಿ ತೊಡಗಿಸಿಕೊಳ್ಳುತ್ತಿರುವ ರಿಟೇಲ್ ಹೂಡಿಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕೋಟಕ್ ಈಕ್ವಿಟೀಸ್ ಪ್ರಕಾರ, ರಿಟೇಲ್ ಪ್ರೀಮಿಯಂ ಟರ್ನ್ ಓವರ್‌ನಲ್ಲಿ 20% ಇಳಿಕೆಯಾಗಿದೆ. ಸೆಬಿಯು ಕಳೆದ ವರ್ಷ ನಿಫ್ಟಿ ಮತ್ತು ಸೆನ್ಸೆಕ್ಸ್‌ನ ಆಪ್ಷನ್ ಟ್ರೇಡಿಂಗ್ ನಲ್ಲಿ ಕಾಂಟ್ರಾಕ್ಟ್ ಸೈಜ್ ಅನ್ನು 5-10 ಲಕ್ಷ ರುಪಾಯಿಯಿಂದ 15-20 ಲಕ್ಷ ರುಪಾಯಿಗೆ ಏರಿಸಿತ್ತು. ಇದರಿಂದ ರಿಟೇಲ್ ಹೂಡಿಕೆದಾರರು ಅಪಾಯಕಾರಿ ಆಪ್ಷನ್ ಆಂಡ್ ಟ್ರೇಡಿಂಗ್ ವಹಿವಾಟಿಗೆ ಹಿಂಜರಿಯುತ್ತಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಸ್ಟಾಕ್ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳ ಕುಸಿತದಿಂದ ಹೂಡಿಕೆದಾರರಿಗೆ 94 ಲಕ್ಷ ಕೋಟಿ ರುಪಾಯಿ ನೋಶನಲ್ ಲಾಸ್ ಆಗಿದೆ. ನೋಶನಲ್ ಲಾಸ್ ಅಂದ್ರೆ ನಿಮ್ಮ ಹೂಡಿಕೆಯ ಮೌಲ್ಯವು ದಾಖಲೆಗಳಲ್ಲಿ ನಷ್ಟವನ್ನು ತೋರಿಸುತ್ತದೆ. ಆದರೆ ವಾಸ್ತವ ಹಣಕಾಸು ನಷ್ಟವಾಗಿರುವುದಿಲ್ಲ. ಆದರೆ ನಿಮ್ಮ ಇನ್ವೆಸ್ಟ್‌ಮೆಂಟ್ ಅನ್ನು ಈಗಿನ ಮಾರುಕಟ್ಟೆ ದರದಲ್ಲಿ ಮಾರಿದರೆ ಮಾತ್ರ ನಷ್ಟವಾಗುತ್ತದೆ ಎಂದರ್ಥ.
ಹೀಗಿದ್ದರೂ, ಕೂಡ ಸ್ಟಾಕ್ ಮಾರ್ಕೆಟ್ ನಲ್ಲಿ ಆಗಿರುವ ನಷ್ಟವನ್ನು ಕ್ಯಾಪಿಟಲ್ ಗೇನ್ಸ್ ನಷ್ಟ ಎಂದು ತೋರಿಸಿ, ತೆರಿಗೆ ಕಡಿತದ ಅನುಕೂಲವನ್ನು ಪಡೆಯಬಹುದು. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಆಗಿರುವ ನಷ್ಟವನ್ನು ಒಂದು ಹಂತದ ತನಕ ಭರಿಸಿಕೊಳ್ಳಬಹುದು.
ಅಂದಹಾಗೆ ಡೊನಾಲ್ಡ್ ಟ್ರಂಪ್ ಅವರು ಗ್ಲೋಬಲ್ ಟ್ರೇಡ್ ವಾರ್ ಶುರು ಮಾಡಿದ್ದಾರೆ. ಕೆನಡಾ ಮತ್ತು ಮೆಕ್ಸಿಕೊದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 20% ಟ್ಯಾಕ್ಸ್ ಅನ್ನು ಪ್ರಕಟಿಸಿದ್ದಾರೆ. ಚೀನಾದ ಮೇಲೂ ಹೆಚ್ಚುವರಿ 10% ತೆರಿಗೆ ಜಾರಿಯಾಗಿದೆ. ಪ್ರತಿಯಾಗಿ ಚೀನಾ ಕೂಡ ಅಮೆರಿಕದಿಂದ ಆಮದಾಗುವ ವಸ್ತುಗಳಿಗೆ ತೆರಿಗೆ ಘೋಷಿಸಿ ತಿರುಗೇಟು ಕೊಟ್ಟಿದೆ.
ಏಪ್ರಿಲ್ 2ರಿಂದ ಅನ್ವಯವಾಗುವಂತೆ ಭಾರತ ಸೇರಿದಂತೆ ಹಲವು ದೇಶಗಳ ವಿರುದ್ಧ ರೆಸಿಪ್ರೊಕಲ್ ಟಾರಿಫ್‌ಗಳನ್ನು ಘೋಷಿಸಿದ್ದಾರೆ. ಅಂದರೆ ಅಮೆರಿಕದ ವಸ್ತುಗಳ ಆಮದಿಗೆ ಹೆಚ್ಚಿನ ತೆರಿಗೆ ವಿಧಿಸುವ ದೇಶಗಳು, ಅಮೆರಿಕಕ್ಕೆ ಮಾಡುವ ರಫ್ತಿನ ಮೇಲೆ ಹೆಚ್ಚಿನ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಇದರಿಂದ ಅಮೆರಿಕಕ್ಕೆ ತೆರಿಗೆ ಲಾಭವಾಗುತ್ತದೆ. ಆದರೆ ಅಲ್ಲೂ ಆಮದಾಗುವ ವಸ್ತುಗಳ ಬೆಲೆ ಏರುತ್ತದೆ. ಟ್ರಂಪ್ ಅವರು ಹೊರಿಸುವ ತೆರಿಗೆಯ ಭಾರದಿಂದ ಭಾರತಕ್ಕೆ ಪ್ರತಿ ವರ್ಷ 7 ಬಿಲಿಯನ್ ಡಾಲರ್ ನಷ್ಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಂದರೆ ಸುಮಾರು 60 ಸಾವಿರ ಕೋಟಿ ರುಪಾಯಿ ನಷ್ಟವಾಗಬಹುದು. ಲೆಕ್ಕಾಚಾರದ ದೃಷ್ಟಿಯಿಂದ ಭಾರತಕ್ಕೆ 60 ಸಾವಿರ ಕೋಟಿ ರುಪಾಯಿ ಅಂಥ ಮಹಾ ನಷ್ಟವೇನಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಉಂಟಾಗಿರುವ ನೋಶನಲ್ ನಷ್ಟ ಅಗಾಧವಾಗಿದೆ. ಜತೆಗೆ ಜಾಗತಿಕ ಆರ್ಥಿಕ ಮಂದಗತಿಯ ಪರಿಣಾಮಗಳನ್ನು ಪರಿಗಣಿಸಬೇಕಾಗುತ್ತದೆ.
ಯುರೋಪ್, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೊ ರಾಷ್ಟ್ರಗಳು ದಶಕಗಳಿಂದಲೂ ಅಮೆರಿಕದ ಉತ್ಪಗಳ ಆಮದು ಮೇಲೆ ಭಾರಿ ತೆರಿಗೆ ವಿಧಿಸುತ್ತಿವೆ. ಅಮೆರಿಕದ ಆಟೊಮೊಬೈಲ್ ಮೇಲೆ ಭಾರತದಲ್ಲಿ 100% ಆಮದು ಸುಂಕ ಇದೆ. ಈಗ ನಮ್ಮ ಸರದಿ. ನಾವು ಈ ದೇಶಗಳಿಂದ ಅಮೆರಿಕಕ್ಕೆ ಆಮದು ಆಗುವ ವಸ್ತುಗಳಿಗೆ ಆಮದು ತೆರಿಗೆ ಹೆಚ್ಚಿಸುತ್ತೇವೆ ಎಂಬುದು ಟ್ರಂಪ್ ಅವರ ವಾದ.
ಈಗಾಗಲೇ ಅಮೆರಿಕವು ಕೆನಡಾ, ಮೆಕ್ಸಿಕೊ ಮತ್ತು ಚೀನಾ ವಿರುದ್ಧ ಆಮದು ತೆರಿಗೆಯನ್ನು ಹೆಚ್ಚಿಸಿದೆ. ಏಪ್ರಿಲ್ 2 ರಿಂದ ಭಾರತ ಇತರ ದೇಶಗಳ ವಿರುದ್ಧ ಆಮದು ತೆರಿಗೆ ಹೆಚ್ಚಳವಾಗಲಿದೆ.
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಕೆಮಿಕಲ್ಸ್, ಮೆಟಲ್ ಪ್ರಾಡಕ್ಟ್‌ಗಳು, ಜ್ಯುವೆಲ್ಲರಿ, ಆಟೊಮೊಬೈಲ್, ಫಾರ್ಮಾಸ್ಯುಟಿಕಲ್ಸ್ ಮತ್ತು ಆಹಾರೋತ್ಪನ್ನಗಳ ಮೇಲೆ ಆಮದು ತೆರಿಗೆ ಹೆಚ್ಚಲಿದೆ. ಬೇರೆ ದೇಶಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ ತೆರಿಗೆಯನ್ನು ಹೆಚ್ಚಿಸುವ ಮೂಲಕ ಸಂಗ್ರಹವಾಗುವ ಹಣವನ್ನು ಟ್ರಂಪ್ ಅವರು ಏನು ಮಾಡಲಿದ್ದಾರೆ? ಅಮೆರಿಕದಲ್ಲಿ ಜನರಿಗೆ ತೆರಿಗೆ ಹೊರೆಯನ್ನು ಇಳಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಆಗ ಉಂಟಾಗುವ ನಷ್ಟವನ್ನು ಭರಿಸಲು, ಟಾರಿಫ್ ವಾರ್‌ನಿಂದ ಸಂಗ್ರಹವಾಗುವ ಹಣವನ್ನು ಟ್ರಂಪ್ ಬಳಸುವ ನಿರೀಕ್ಷೆ ಇದೆ. ಆದರೆ ಇದು ಅಂಥ ಪರಿಣಾಮಕಾರಿಯಾಗದು ಎನ್ನುತ್ತಾರೆ ತಜ್ಞರು.