ಮುಂಬೈ, ಜ.16: ರಿಲಯನ್ಸ್ ಇಂಡಸ್ಟ್ರೀಸ್‌ನ ಟೆಲಿಕಾಂ ಅಂಗವಾದ ಜಿಯೋ ಪ್ಲಾಟ್‌ಫಾರ್ಮ್ಸ್ (Reliance Jio) 2025-26ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (Q3), ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್ ಅಂತ್ಯದ ತನಕದ ಅವಧಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಜಿಯೋದ ಇಬಿಐಟಿಡಿಎ (EBITDA) ವರ್ಷದಿಂದ ವರ್ಷಕ್ಕೆ ಶೇಕಡಾ 16.4ರಷ್ಟು ಹೆಚ್ಚಾಗಿ 19,303 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ನಿವ್ವಳ ಲಾಭ ಶೇಕಡಾ 11.2ರಷ್ಟು ಹೆಚ್ಚಾಗಿ 7,629 ಕೋಟಿ ರೂಪಾಯಿಗೆ ತಲುಪಿದೆ.
ಈ ತ್ರೈಮಾಸಿಕದಲ್ಲಿ, ಜಿಯೋ 89 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು, 2025ರ ಡಿಸೆಂಬರ್ ವೇಳೆಗೆ ಕಂಪನಿಯ ಒಟ್ಟು ಚಂದಾದಾರರ ಸಂಖ್ಯೆಯನ್ನು 51.53 ಕೋಟಿಗೆ ಹೆಚ್ಚಿಸಿಕೊಂಡಿದೆ. ತಲಾ ಡೇಟಾ ಬಳಕೆ ತಿಂಗಳಿಗೆ 40.7 ಜಿ.ಬಿ.ಯಷ್ಟಿದ್ದರೆ, ಒಟ್ಟು ಡೇಟಾ ದಟ್ಟಣೆ ವರ್ಷದಿಂದ ವರ್ಷಕ್ಕೆ ಶೇ 34ರಷ್ಟು ಹೆಚ್ಚಾಗಿ 62.3 ಬಿಲಿಯನ್ (6230 ಕೋಟಿ) ಜಿಬಿಗೆ ತಲುಪಿದೆ.
ಜಿಯೋದ ಕಾರ್ಯಕ್ಷಮತೆ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ, "ವಿಶ್ವದ ಅತ್ಯುತ್ತಮ ತಂತ್ರಜ್ಞಾನ ಪ್ಲಾಟ್ ಫಾರ್ಮ್‌ಗಳನ್ನು ಭಾರತೀಯ ಬಳಕೆದಾರರಿಗೆ ತರುವ ಮೂಲಕ ಜಿಯೋ ಭಾರತದ ಡಿಜಿಟಲ್ ಕ್ರಾಂತಿಯನ್ನು ವೇಗಗೊಳಿಸಿದೆ. ಜಿಯೋದ 50 ಕೋಟಿಗೂ ಹೆಚ್ಚು ಗ್ರಾಹಕರು, ಗಹನವಾದ ಗ್ರಾಹಕ ಒಳನೋಟಗಳು ಮತ್ತು ಪ್ಯಾನ್-ಇಂಡಿಯಾ ನೆಟ್‌ವರ್ಕ್ ಭಾರತವನ್ನು ಕೇವಲ ಎಐ-ಸಕ್ರಿಯಗೊಳಿಸುವುದು ಮಾತ್ರದಲ್ಲದೆ, ಎಐ-ಸಬಲ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಮುಂಬರುವ ವರ್ಷಗಳಲ್ಲಿ ಎಲ್ಲ ಪಾಲುದಾರರಿಗೆ ದೀರ್ಘಕಾಲೀನ ಮೌಲ್ಯ ಸೃಷ್ಟಿಗೆ ಕಾರಣವಾಗುತ್ತದೆ” ಎಂದು ತಿಳಿಸಿದ್ದಾರೆ.
ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ 2026ರ ಮೊದಲಾರ್ಧದಲ್ಲಿ ಜಿಯೋದ ಐಪಿಒ ಅನ್ನು ತರುವುದಾಗಿ ಘೋಷಿಸಿದ್ದರು. ಜಿಯೋದ ಈಗಿನ ಬಲವಾದ ಕಾರ್ಯಕ್ಷಮತೆಯು ಕಂಪನಿಯ ಯಶಸ್ವಿ ಲಿಸ್ಟಿಂಗ್‌ಗಾಗಿ ಭರವಸೆಯನ್ನು ಹುಟ್ಟುಹಾಕಿದೆ. ಅದರ ಫಲಿತಾಂಶಗಳಲ್ಲಿ, ತನ್ನ ಟ್ರೂ 5ಜಿ ಚಂದಾದಾರರ ಸಂಖ್ಯೆ ಈಗ 25.3 ಕೋಟಿ ಮೀರಿದೆ ಮತ್ತು ಒಟ್ಟು ವೈರ್‌ಲೆಸ್ ಡೇಟಾ ಟ್ರಾಫಿಕ್‌ನಲ್ಲಿ 5ಜಿ ಪಾಲು ಸರಿಸುಮಾರು ಶೇ. 53ರಷ್ಟು ತಲುಪಿದೆ ಎಂದು ಕಂಪನಿಯು ಹೇಳಿದೆ.
Reliance Jio: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್; ಎಲ್ಲಾ ಅನಿಯಮಿತ 5ಜಿ ಬಳಕೆದಾರರಿಗೆ ಉಚಿತ ಜೆಮಿನಿ 3 ಪ್ರವೇಶ!
ಬ್ರಾಡ್‌ಬ್ಯಾಂಡ್ ಮತ್ತು ಎಐ ಸೇರಿದಂತೆ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಕಂಪನಿಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಸ್ಥಿರ ಬ್ರಾಡ್‌ಬ್ಯಾಂಡ್ ಒಟ್ಟು ಸಂಖ್ಯೆ 2.53 ಕೋಟಿಗೆ ಏರಿದೆ, ಆದರೆ ಜಿಯೋಏರ್‌ಫೈಬರ್‌ನ ಚಂದಾದಾರರ ಸಂಖ್ಯೆ 1.15 ಕೋಟಿ ಮೀರಿದೆ. ಹೆಚ್ಚುವರಿಯಾಗಿ, ನೋಂದಾಯಿತ ಜಿಯೋ ಎಐ ಕ್ಲೌಡ್ ಬಳಕೆದಾರರ ಸಂಖ್ಯೆ ಸರಿಸುಮಾರು 5 ಕೋಟಿ ತಲುಪಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.