Share Market: ಸೆನ್ಸೆಕ್ಸ್ 575 ಅಂಕ ಜಿಗಿತ; ಚಿನ್ನದ ದರ ಮತ್ತಷ್ಟು ಏರಿಕೆ
Stock Market 15-10-25: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬುದವಾರ ಚೇತೋಹಾರಿ ಚಟುವಟಿಕೆ ಕಂಡುಬಂತು. ಸೆನ್ಸೆಕ್ಸ್ 575 ಅಂಕ ಏರಿಕೆಯಾಗಿದ್ದು, 82,605ಕ್ಕೆ ಸ್ಥಿರವಾಯಿತು. ನಿಫ್ಟಿ 178 ಅಂಕ ಏರಿಕೆಯಾಗಿ 25,323ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ಜಾಗತಿಕ ಮಾರುಕಟ್ಟೆಯಿಂದ ಸಕಾರಾತ್ಮಕ ಸುಳಿವು ಸಿಕ್ಕಿದ್ದರಿಂದ ಇವತ್ತು ಭಾರತೀಯ ಸ್ಟಾಕ್ ಮಾರ್ಕೆಟ್‌ನಲ್ಲಿ ಎಲ್ಲ ಸೆಕ್ಟರ್‌ಗಳಲ್ಲಿ ಷೇರುಗಳ ಖರೀದಿ ಭರಾಟೆ ಇತ್ತು.

-

- ಕೇಶವ ಪ್ರಸಾದ್ ಬಿ.
ಮುಂಬೈ, ಅ. 15: ಸೆನ್ಸೆಕ್ಸ್ (Sensex) ಬುಧವಾರ 575 ಅಂಕ ಏರಿಕೆಯಾಗಿದ್ದು, 82,605ಕ್ಕೆ ಸ್ಥಿರವಾಯಿತು. ನಿಫ್ಟಿ (Nifty) 178 ಅಂಕ ಏರಿಕೆಯಾಗಿ 25,323ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು (Share Market). ಜಾಗತಿಕ ಮಾರುಕಟ್ಟೆಯಿಂದ ಸಕಾರಾತ್ಮಕ ಸುಳಿವು ಸಿಕ್ಕಿದ್ದರಿಂದ ಇವತ್ತು ಭಾರತೀಯ ಸ್ಟಾಕ್ ಮಾರ್ಕೆಟ್‌ನಲ್ಲಿ ಎಲ್ಲ ಸೆಕ್ಟರ್‌ಗಳಲ್ಲಿ ಷೇರುಗಳ ಖರೀದಿ ಭರಾಟೆ ಇತ್ತು. ಬಿಎಸ್‌ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಇಂಡೆಕ್ಸ್‌ಗಳು ಚೇತರಿಕೆ ದಾಖಲಿಸಿತು. ಒಟ್ಟಾರೆಯಾಗಿ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 460 ಲಕ್ಷ ಕೋಟಿ ರುಪಾಯಿಗಳಿಂದ 464 ಲಕ್ಷ ಕೋಟಿ ರುಪಾಯಿಗೆ ಏರಿಕೆ ಆಯಿತು. ಅಂದರೆ ಷೇರು ಹೂಡಿಕೆದಾರರಿಗೆ 4 ಲಕ್ಷ ಕೋಟಿ ರುಪಾಯಿ ಲಾಭವಾಯಿತು.
ಹಾಗಾದರೆ ಸೆನ್ಸೆಕ್ಸ್-ನಿಫ್ಟಿ ಏರಿಕೆಗೆ ಕಾರಣವೇನು? ಎಂಬುದನ್ನು ನೋಡೋದಿದ್ರೆ, ಅಮೆರಿಕದಲ್ಲಿ ಅಲ್ಲಿನ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು ಇಳಿಸುವ ನಿರೀಕ್ಷೆ ಉಂಟಾಗಿದೆ. ಯುರೋಪ್‌ನಲ್ಲಿ ಸಿಎಸಿ 40 ಇಂಡೆಕ್ಸ್ 2 ಪರ್ಸೆಂಟ್ ಏರಿಕೆಯಾಗಿದೆ. ಏಷ್ಯಾದಲ್ಲಿ ಕೋಸ್ಪಿ ಇಂಡೆಕ್ಸ್ 2 ಪರ್ಸೆಂಟ್ ಏರಿಕೆಯಾಗಿದೆ.
ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಮಂಗಳವಾರ ನೀಡಿದ ಹೇಳಿಕೆಯಲ್ಲಿ, ಅಮೆರಿಕದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದ್ದರೂ, ಉದ್ಯೋಗಗಳು ಇಳಿಕೆಯಾಗಿವೆ ಎಂದು ತಿಳಿಸುವ ಮೂಲಕ ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ಬಡ್ಡಿ ದರ ಇಳಿಕೆಯ ಸುಳಿವನ್ನು ಕೊಟ್ಟಿದ್ದಾರೆ. ಅಮೆರಿಕದ ಯುಎಸ್ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿಯ ಸಭೆಯು ಅಕ್ಟೋಬರ್ 28-29ರಂದು ಮತ್ತು ಡಿಸೆಂಬರ್ 9-10ರಂದು ನಡೆಯಲಿದೆ. ಈ ಎರಡೂ ಸಂದರ್ಭಗಳಲ್ಲಿ ತಲಾ 0. 25% ಬಡ್ಡಿ ದರ ಇಳಿಕೆಯನ್ನು ನಿರೀಕ್ಷಿಸಲಾಗಿದೆ.
ಎರಡನೆಯದಾಗಿ ಭಾರತದಲ್ಲಿ ರಿಟೇಲ್ ಹಣದುಬ್ಬರ ಇಳಿಕೆಯಾಗಿದ್ದು, ಇಲ್ಲೂ ಡಿಸೆಂಬರ್‌ನಲ್ಲಿ ಬಡ್ಡಿ ದರ ಇಳಿಕೆಯನ್ನು ನಿರೀಕ್ಷಿಸಲಾಗಿದೆ. ಇದು ಸ್ಟಾಕ ಮಾರುಕಟ್ಟೆಯನ್ನು ಚೇತೋಹಾರಿಯಾಗಿಸಿದೆ.
ಈ ಸುದ್ದಿಯನ್ನೂ ಓದಿ: EPFO rules: ಮಹತ್ವದ ಬದಲಾವಣೆ- ಪಿಎಫ್ ಖಾತೆಯಿಂದ ಶೇ. 100ರಷ್ಟು ವಿಥ್‌ಡ್ರಾ ಸಾಧ್ಯ!
ನಿಫ್ಟಿ 50ಯಲ್ಲಿ ಲಾಭ ಗಳಿಸಿದ ಷೇರುಗಳು:
- ನೆಸ್ಲೆ ಇಂಡಿಯಾ
- ಏಷ್ಯನ್ ಪೇಂಟ್ಸ್
- ಬಜಾಜ್ ಫಿನ್ ಸರ್ವ್
- ಬಜಾಜ್ ಫೈನಾನ್ಸ್
- ಐಸಿಐಸಿಐ ಲ್ಯಾಂಬರ್ಡ್ ಜನರಲ್ ಇನ್ಷೂರೆನ್ಸ್ ಕಂಪನಿ
- ಬ್ಯಾಂಕ್ ಆಫ್ ಮಹಾರಾಷ್ಟ್ರ
- ಪರ್ ಸಿಸ್ಟೆಂಟ್ ಸಿಸ್ಟಮ್ಸ್
- ಸಿಇಎಸ್‌ಸಿ ಲಿಮಿಟೆಡ್
ನಿಫ್ಟಿ 50ಯಲ್ಲಿ ನಷ್ಟಕ್ಕೀಡಾದ ಷೇರುಗಳು
- ಇನ್ಫೋಸಿಸ್
- ಟಾಟಾ ಮೋಟಾರ್
- ಟೆಕ್ ಮಹೀಂದ್ರಾ
- ಎಕ್ಸಿಸ್ ಬ್ಯಾಂಕ್
- ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್
- ಜಿಕೆ ಸಿಮೆಂಟ್
ಬುಧವಾರ ಎಚ್‌ಡಿಎಫ್‌ಸಿ ಲೈಫ್ ತನ್ನ ಎರಡನೇ ತ್ರೃಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಸಂಸ್ಥೆಯು 447 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಲಾಭವು 3.2% ಏರಿಕೆಯಾಗಿದೆ.
ಎಕ್ಸಿಸ್ ಬ್ಯಾಂಕ್ ಕೂಡ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಬ್ಯಾಂಕ್ 5,090 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 26% ಇಳಿಕೆಯಾಗಿದೆ. ಹೋದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 6918 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು.
ಫೊರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯವು 0.8% ಏರಿದ್ದು, 88.07 ರುಪಾಯಿ ಇತ್ತು.
ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ (IRFC) ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶ ಘೋಷಿಸಿದೆ. ಕಂಪನಿಯು 1,777 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು, 10% ಏರಿಕೆ ಆಗಿದೆ. ಕಳೆದ ವರ್ಷ ಕಂಪನಿಯು 1,613 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಐಆರ್‌ಎಫ್‌ಸಿ ಆದಾಯ 6,372 ಕೋಟಿ ರುಪಾಯಿಗೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 6899 ಕೋಟಿ ರುಪಾಯಿ ಆದಾಯ ಗಳಿಸಿತ್ತು.
ಬಂಗಾರದ ದರ ಸ್ಫೋಟ
ಬೆಂಗಳೂರಿನಲ್ಲಿ ಬಂಗಾರದ ದರ ಸ್ಫೋಟವಾಗಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲೇ ಚಿನ್ನದ ದರ ಏರುತ್ತಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಮ್‌ಗೆ 12,944 ರುಪಾಯಿಗೆ ಏರಿಕೆ ಆಗಿದೆ. 22 ಕ್ಯಾರಟ್‌ಗೆ 11,865 ರುಪಾಯಿಗೆ ಏರಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 1,95,000 ರುಪಾಯಿಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 4,200 ಡಾಲರ್‌ಗೆ ಏರಿಕೆ ಯಾಗಿದೆ. ಅಮೆರಿಕದಲ್ಲಿ ಬಡ್ಡಿ ದರ ಇಳಿಕೆಯ ನಿರೀಕ್ಷೆ, ಟಾರಿಫ್ ವಾರ್, ಆರ್ಥಿಕತೆಯ ಮಂದಗತಿಯೇ ಬಂಗಾರದ ದರ ಏರಿಕೆಗೆ ಕಾರಣವೇ ಹೊರತು ಭಾರತ ಸರಕಾರವಲ್ಲ.