ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಬುಧವಾರ ಭಾರತದ ವಿರುದ್ಧ 25 ಪರ್ಸೆಂಟ್ ಆಮದು ಸುಂಕದ ಅಸ್ತ್ರವನ್ನು ಪ್ರಯೋಗಿಸಿದ ಬಳಿಕ, ಗುರುವಾರ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಪಾತಾಳಕ್ಕೆ ಕುಸಿತಕ್ಕೀಡಾಗಬಹುದು ಎಂದು ಭಾವಿಸಲಾಗಿತ್ತು (Stock Market). ಅದೇ ರೀತಿ ಇಂದು ಬೆಳಗ್ಗೆ ಕೆಲ ಕಾಲ ಕುಸಿತಕ್ಕೀಡಾದರೂ, ನೋಡ ನೋಡುತ್ತಿರುವಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ ಚೇತರಿಸಿಕೊಂಡು, ನಷ್ಟದಿಂದ ಲಾಭದ ಹಳಿಗೆ ಮರಳಿತು.
ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್ 950 ಅಂಕಗಳ ಕುಸಿತದಿಂದ ಚೇತರಿಸಿತ್ತು. ಮಧ್ಯಾಹ್ನ 2.20ರ ವೇಳೆಗೆ ಸೆನ್ಸೆಕ್ಸ್ 143 ಅಂಕ ಏರಿಕೆಯಾಗಿ 81,625 ಅಂಕಗಳ ಎತ್ತರದಲ್ಲಿ ಇತ್ತು. ನಿಫ್ಟಿ 47 ಅಂಕ ಏರಿಕೆಯಾಗಿ 24,902 ರ ಮಟ್ಟದಲ್ಲಿ ಇತ್ತು. ಅಂತಿಮವಾಗಿ ಸೆನ್ಸೆಕ್ಸ್ 296 ಅಂಕ ಕಳೆದುಕೊಂಡು 81,185ಕ್ಕೆ ಸ್ಥಿರವಾಯಿತು. ನಿಫ್ಟಿ 87 ಅಂಕ ಕಳೆದುಕೊಂಡು 24,768ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಟಾಟಾ ಸ್ಟೀಲ್, ಸನ್ ಫಾರ್ಮಾ ಷೇರುಗಳ ದರ ಅಂತಿಮವಾಗಿ ಇಳಿಕೆ ದಾಖಲಿಸಿತು.
ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿಯಬಹುದು ಎಂಬ ಆತಂಕಕ್ಕೆ ಬಲವಾದ ಕಾರಣಗಳು ಇತ್ತು. ಮೊದಲನೆಯದಾಗಿ ಟ್ರಂಪ್ ಅವರು ಆಗಸ್ಟ್ 1ರಿಂದಲೇ ಅನ್ವಯವಾಗುವಂತೆ 25 ಪರ್ಸೆಂಟ್ ಟಾರಿಫ್ ಅನ್ನು ಘೋಷಿಸಿ, ಭಾರತದ ವಿರುದ್ಧ ವಾಣಿಜ್ಯ ಸಂಘರ್ಷ ಶುರು ಮಾಡಿರುವುದು. ಇದರಿಂದ ಭಾರತದ ಜವಳಿ, ಸ್ಮಾರ್ಟ್ ಫೋನ್ ಉತ್ಪಾದನೆ, ಔಷಧ ರಫ್ತಿಗೆ ಪ್ರತಿಕೂಲ ಪರಿಸ್ಥಿತಿ ಉಂಟಾಗುವ ಆತಂಕ ಇತ್ತು. ಆದರೆ ಆರಂಭದಲ್ಲಿ ಸೆನ್ಸೆಕ್ಸ್-ನಿಫ್ಟಿ ಬಿದ್ದರೂ, ಬಳಿಕ ಚೇತರಿಸಿತು. ಡಿಪ್‌ನಲ್ಲಿ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಆಸಕ್ತಿ ವಹಿಸಿದರು. ದೇಶದ ಅಗಾಧ ಮಾರುಕಟ್ಟೆ ಮೇಲೆ ಷೇರುದಾರರಿಗೆ ಅಪಾರವಾದ ಭರವಸೆ ಇರುವುದನ್ನು ಈ ವಿದ್ಯಾಮಾನ ಬಿಂಬಿಸಿತು.
ಟ್ರಂಪ್ ಅವರ 25% ಟಾರಿಫ್, ಭಾರತದ ಜತೆಗೆ ಚೌಕಾಸಿ ನಡೆಸುವ ತಂತ್ರದ ಭಾಗ ಎಂಬುದನ್ನು ಷೇರುದಾರರು ಮನವರಿಕೆ ಮಾಡಿಕೊಂಡಿದ್ದಾರೆ. ಅಂತಿಮ ಟ್ರಾಕ್ಸ್ ರೇಟ್ ಕಡಿಮೆಯಾಗಬಹುದು ಎಂಬ ನಂಬಿಕೆ ಇತ್ತು. ಹೀಗಾಗಿ ಸೂಚ್ಯಂಕಗಳು ಚೇತರಿಸಿತು. ವ್ಯಾಪಾರ ಮಾತುಕತೆ ಸುಗಮವಾಗುವ ನಿರೀಕ್ಷೆಯೂ ಉಂಟಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದ ಇಳಿಕೆಯಾಯಿತು. ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 73 ಡಾಲರ್‌ಗೆ ಇಳಿಯಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಚೇತರಿಕೆ ದಾಖಲಿಸಿತು. 87 ರುಪಾಯಿಗೆ ಸುಧಾರಿಸಿತು. ಕೋಲ್ ಇಂಡಿಯಾ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 8743 ಕೋಟಿ ರುಪಾಯಿ ತ್ರೈಮಾಸಿಕ ಲಾಭ ಗಳಿಸಿತು. ಪ್ರತಿ ಷೇರಿಗೆ 5.50 ರುಪಾಯಿ ಡಿವಿಡೆಂಡ್ ಅನ್ನು ಕೋಲ್ ಇಂಡಿಯಾ ಕೊಟ್ಟಿದೆ.
ಈ ಸುದ್ದಿಯನ್ನೂ ಓದಿ | Reliance Industries: 'ಫಾರ್ಚೂನ್ ಗ್ಲೋಬಲ್ 500' ಪಟ್ಟಿಯಲ್ಲಿ ಮುಂದುವರಿದ ರಿಲಯನ್ಸ್ ಇಂಡಸ್ಟ್ರೀಸ್ ಪಾರಮ್ಯ