ಬೆಂಗಳೂರು, ಏ.20: ಪ್ರಮುಖ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್‌ಫಾರ್ಮ್ 'ಸ್ವಿಗ್ಗಿ' (Swiggy) ತನ್ನ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು (Headquarters) ಬೆಂಗಳೂರಿನ ಐಟಿ ಕಾರಿಡಾರ್ 'ವೈಟ್‌ಫೀಲ್ಡ್' ಗೆ ಸ್ಥಳಾಂತರಿಸಿದೆ. ಉದ್ಯೋಗಿಗಳ ಯೋಗಕ್ಷೇಮ ಮತ್ತು ಕಂಪನಿಯ ಮುಂದಿನ ಹಂತದ ಬೃಹತ್ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅತ್ಯಾಧುನಿಕ ಕ್ಯಾಂಪಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
'ದಿ ಎವೆರಿಡೇ ಎನೇಬಲರ್' ಪರಿಕಲ್ಪನೆ
ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ವಿಗ್ಗಿ, ತನ್ನ ಹೊಸ ಕಚೇರಿಯನ್ನು ʼದಿ ಎವೆರಿಡೇ ಎನೇಬಲರ್ʼ ಎಂಬ ಪರಿಕಲ್ಪನೆಯಡಿ ವಿನ್ಯಾಸಗೊಳಿಸಿದೆ. ಕಚೇರಿಯ ಒಳಾಂಗಣವು ಸ್ವಿಗ್ಗಿಯ ಕಾರ್ಯವೈಖರಿಯನ್ನು ಪ್ರತಿಬಿಂಬಿಸುವಂತಿದ್ದು, ಡೆಲಿವರಿ ಪಾರ್ಟ್‌ನರ್ಸ್, ರೆಸ್ಟೋರೆಂಟ್ ಪಾಲುದಾರರು ಹಾಗೂ ಗ್ರಾಹಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ‘ದಿ ಸ್ಟ್ರೀಟ್ ಲಾಜಿಸ್ಟಿಕ್ಸ್ ಹಬ್’, ‘ದಿ ಕ್ಯುಲಿನರಿ ನೈಬರ್‌ಹುಡ್ʼ, ಮತ್ತು ‘ಡಾರ್ಕ್ ಸ್ಟೋರ್ ಕಿಚನ್ʼ ಎಂಬ ವಿಶಿಷ್ಟ ವಲಯಗಳನ್ನು ಸೃಷ್ಟಿಸಲಾಗಿದೆ.
ಒಟ್ಟು ನಾಲ್ಕು ಮಹಡಿಗಳಲ್ಲಿ ಹರಡಿಕೊಂಡಿರುವ ಈ ಬೃಹತ್ ಕ್ಯಾಂಪಸ್‌ನಲ್ಲಿ ಫುಡ್ ಡೆಲಿವರಿ, ಕ್ವಿಕ್ ಕಾಮರ್ಸ್, ಡೈನಿಂಗ್ ಔಟ್ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಸ್ವಿಗ್ಗಿಯ ಎಲ್ಲಾ ವಿಭಾಗಗಳನ್ನು ಒಂದೇ ಸೂರಿನಡಿ ತರಲಾಗಿದೆ. ಉದ್ಯೋಗಿಗಳಿಗಾಗಿ ಮೀಟಿಂಗ್ ರೂಮ್‌ಗಳು, ಆಂಫಿಥಿಯೇಟರ್ ಶೈಲಿಯ ಕಲಿಕಾ ಕೇಂದ್ರಗಳು, ದೊಡ್ಡ ಕೆಫೆಟೇರಿಯಾ, ಮನರಂಜನಾ ವಲಯಗಳು ಮತ್ತು ವೆಲ್‌ನೆಸ್ (ಆರೋಗ್ಯ) ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.
ʼಸ್ವಿಗ್ಗಿಯ ಈ ಹೊಸ ಪ್ರಧಾನ ಕಚೇರಿಯು ನಮ್ಮ ಗುರುತು ಮತ್ತು ನಾವು ಸಾಗುತ್ತಿರುವ ಗುರಿಯ ಪ್ರತಿಬಿಂಬವಾಗಿದೆ. ನಮ್ಮ ತಂಡಗಳನ್ನು ಮತ್ತಷ್ಟು ಹತ್ತಿರ ತರಲು, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸೃಜನಶೀಲತೆ ಹಾಗೂ ಹೊಣೆಗಾರಿಕೆಯ ಸಂಸ್ಕೃತಿಯನ್ನು ಬೆಳೆಸಲು ಈ ಕ್ಯಾಂಪಸ್ ಅನ್ನು ವಿನ್ಯಾಸಗೊಳಿಸಲಾಗಿದೆʼ ಎಂದು ಸ್ವಿಗ್ಗಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್ಆರ್‌ಒ) ಗಿರೀಶ್ ಮೆನನ್ ತಿಳಿಸಿದ್ದಾರೆ.
ಶೇ.85ರಷ್ಟು ಹಳೆಯ ವಸ್ತುಗಳ ಮರುಬಳಕೆ!
ಕಾರ್ಪೊರೇಟ್ ವಲಯದಲ್ಲಿ ಹೊಸ ಕಚೇರಿಗೆ ಹೋಗುವಾಗ ಹಳೆಯ ವಸ್ತುಗಳನ್ನು ಎಸೆಯುವ ಸಂಸ್ಕೃತಿಗೆ ಬ್ರೇಕ್ ಹಾಕಿರುವ ಸ್ವಿಗ್ಗಿ, ತನ್ನ ಹಿಂದಿನ 'ಔಟರ್ ರಿಂಗ್ ರೋಡ್' ಕಚೇರಿಯ ಶೇ. 85ರಷ್ಟು ಪೀಠೋಪಕರಣಗಳು ಮತ್ತು ವಸ್ತುಗಳನ್ನು ಮರುಬಳಕೆ ಮಾಡಿದೆ.
ಸಂಪೂರ್ಣವಾಗಿ ಮರುಬಳಕೆಯಾಗುವ ವಸ್ತುಗಳಿಂದಲೇ ನಿರ್ಮಾಣವಾಗಿರುವ ಈ ಕ್ಯಾಂಪಸ್, ಜಾಗತಿಕ ಪರಿಸರ ಮಾನ್ಯತೆಗಳಾದ ಲೀಡ್ (LEED), ವೆಲ್ (WELL) ಮತ್ತು IGBC ಗುಣಮಟ್ಟವನ್ನು ಹೊಂದಿದೆ.
ಸ್ಮಾರ್ಟ್ ತಂತ್ರಜ್ಞಾನದ ಅಳವಡಿಕೆಯಿಂದ ಶೇ.25ರಷ್ಟು ವಿದ್ಯುತ್ ಉಳಿತಾಯವಾಗಲಿದೆ. ಕಚೇರಿಯಾದ್ಯಂತ ಗಾಳಿಯನ್ನು ಶುದ್ಧೀಕರಿಸುವ ಗಿಡಗಳನ್ನು ನೆಡಲಾಗಿದ್ದು, ಪೇಪರ್ ಮುಕ್ತ ಡಿಜಿಟಲ್ ಕಾರ್ಯವೈಖರಿಯನ್ನು ಅಳವಡಿಸಿಕೊಳ್ಳಲಾಗಿದೆ. ಕಚೇರಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸ್ಥಳದಲ್ಲೇ ವಿಂಗಡಿಸುವ ಮೂಲಕ ಪ್ರತಿದಿನ ಸುಮಾರು 17 ಕೆ.ಜಿ. ತ್ಯಾಜ್ಯ ಭೂಮಿಗೆ ಸೇರುವುದನ್ನು ತಪ್ಪಿಸಲಾಗುತ್ತಿದೆ.
ವಾಶ್‌ರೂಮ್‌ಗಳಲ್ಲಿ ವಾಟರ್ ಡ್ಯಾಶ್‌ಬೋರ್ಡ್!
ಜಲ ಸಂರಕ್ಷಣೆಗೂ ಒತ್ತು ನೀಡಿರುವ ಸ್ವಿಗ್ಗಿ, ನೀರಿನ ಬಳಕೆಯನ್ನು ತಗ್ಗಿಸಲು ಲೋ-ಫ್ಲೋ ಫಿಕ್ಸ್ಚರ್‌ಗಳನ್ನು ಅಳವಡಿಸಿದೆ. ಇದರ ಜತೆಗೆ, ವಾಶ್‌ರೂಮ್‌ಗಳಲ್ಲಿ ರಿಯಲ್-ಟೈಮ್ ಮಾನಿಟರಿಂಗ್ ಡ್ಯಾಶ್‌ಬೋರ್ಡ್‌ಗಳನ್ನು ಅಳವಡಿಸಲಾಗಿದ್ದು, ಉದ್ಯೋಗಿಗಳಿಗೆ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸುವ ವಿನೂತನ ಪ್ರಯತ್ನ ಮಾಡಲಾಗಿದೆ.
ವೈಟ್‌ಫೀಲ್ಡ್‌ಗೆ ಸ್ಥಳಾಂತರಗೊಂಡಿರುವುದರಿಂದ ಬೆಂಗಳೂರಿನ ಪ್ರಮುಖ ಟೆಕ್ ಮತ್ತು ಬಿಸಿನೆಸ್ ಕಾರಿಡಾರ್‌ಗೆ ಸ್ವಿಗ್ಗಿ ಇನ್ನಷ್ಟು ಹತ್ತಿರವಾಗಿದೆ. ಭವಿಷ್ಯದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಸೆಳೆಯಲು ಮತ್ತು ಕಂಪನಿಯ ಮೂಲಸೌಕರ್ಯ ಅಭಿವೃದ್ಧಿಗೆ ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.