ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಟಾಟಾ ಕ್ಯಾಪಿಟಲ್‌, ಎಲ್‌ಜಿ, ಲಲಿತಾ ಜ್ಯುವೆಲ್ಲರಿ IPO ಸುಗ್ಗಿ! ಹೂಡಿಕೆದಾರರಿಗೆ ನಾನಾ ಆಯ್ಕೆ!

ಸ್ಟಾಕ್‌ ಮಾರ್ಕೆಟ್‌ನಲ್ಲಿ ಹಲವಾರು ಕಂಪನಿಗಳು ಐಪಿಒ ಮೂಲಕ ಪ್ರವೇಶಿಸುತ್ತಿವೆ. ಈ ಅಕ್ಟೋಬರ್‌ ತಿಂಗಳಿನಲ್ಲಿ ಮೆಗಾ ಐಪಿಒಗಳು ನಡೆಯುತ್ತಿವೆ. ಟಾಟಾ ಕ್ಯಾಪಿಟಲ್, ಎಲ್‌ಜಿ ಎಲೆಕ್ಟ್ರಾನಿಕ್ಸ್‌, ವಿವರ್ಕ್‌ನಂಥ ಮೆಗಾ ಕಂಪನಿಗಳ ಐಪಿಒ ನಡೆಯುತ್ತಿದೆ. 2024ರ ಅಕ್ಟೋಬರ್‌ ಮತ್ತು 2025ರ ಸೆಪ್ಟೆಂಬರ್‌ ನಡುವೆ ಕಂಪನಿಗಳು ಸ್ಟಾಕ್‌ ಮಾರ್ಕೆಟ್‌ನಿಂದ 1 ಲಕ್ಷದ 70 ಸಾವಿರ ಕೋಟಿ ರುಪಾಯಿ ಮೊತ್ತವನ್ನು ಸಂಗ್ರಹಿಸಿವೆ.

ಟಾಟಾ ಕ್ಯಾಪಿಟಲ್‌, ಎಲ್‌ಜಿ, ಲಲಿತಾ ಜ್ಯುವೆಲ್ಲರಿ IPO ಸುಗ್ಗಿ!

-

Vishakha Bhat Vishakha Bhat Oct 9, 2025 5:01 PM

ಕೇಶವಪ್ರಸಾದ.ಬಿ

ಮುಂಬೈ: ಸ್ಟಾಕ್‌ ಮಾರ್ಕೆಟ್‌ನಲ್ಲಿ (Stock Market) ಹಲವಾರು ಕಂಪನಿಗಳು ಐಪಿಒ ಮೂಲಕ ಪ್ರವೇಶಿಸುತ್ತಿವೆ. ಈ ಅಕ್ಟೋಬರ್‌ ತಿಂಗಳಿನಲ್ಲಿ ಮೆಗಾ ಐಪಿಒಗಳು ನಡೆಯುತ್ತಿವೆ. ಟಾಟಾ ಕ್ಯಾಪಿಟಲ್, ಎಲ್‌ಜಿ ಎಲೆಕ್ಟ್ರಾನಿಕ್ಸ್‌, ವಿವರ್ಕ್‌ನಂಥ ಮೆಗಾ ಕಂಪನಿಗಳ ಐಪಿಒ ನಡೆಯುತ್ತಿದೆ. ಪ್ರಸಿದ್ಧ ಜ್ಯುವೆಲ್ಲರಿ ಸಂಸ್ಥೆಯಾಗಿರುವ ಲಲಿತಾ ಜ್ಯುವೆಲ್ಲರಿಯ ಐಪಿಒಗೆ ಸೆಬಿ ಅನುಮತಿ ಕೊಟ್ಟಿದೆ. ಹೂಡಿಕೆದಾರರಿಗೆ ನಾನಾ ಆಯ್ಕೆಗಳು ಲಭಿಸಿವೆ. ಅಕ್ಟೋಬರ್‌ ಮೊದಲ ವಾರದಲ್ಲಿಯೇ 30,000 ಕೋಟಿಗೂ ಹೆಚ್ಚಿನ ಮೌಲ್ಯದ ಐಪಿಒ ನಡೆಯುತ್ತಿರುವುದು ವಿಶೇಷ.

2024ರ ಅಕ್ಟೋಬರ್‌ ಮತ್ತು 2025ರ ಸೆಪ್ಟೆಂಬರ್‌ ನಡುವೆ ಕಂಪನಿಗಳು ಸ್ಟಾಕ್‌ ಮಾರ್ಕೆಟ್‌ನಿಂದ 1 ಲಕ್ಷದ 70 ಸಾವಿರ ಕೋಟಿ ರುಪಾಯಿ ಮೊತ್ತವನ್ನು ಸಂಗ್ರಹಿಸಿವೆ. ಇದಕ್ಕೆ ಕಾರಣ ದೇಶೀಯ ಹೂಡಿಕೆದಾರರ ಕೈಯಲ್ಲಿ ಸಾಕಷ್ಟು ದುಡ್ಡು ಇರುವುದು. ಸ್ಟಾಕ್‌ ಮಾರ್ಕೆಟ್‌ ಯಾವುದೇ ಬಾಹ್ಯ ಆಘಾತಗಳಿಗೆ ವಿಚಲಿತವಾಗದೆ ಪ್ರಬುದ್ಧತೆಯಿಂದ ಬೆಳೆಯುತ್ತಿರುವುದು. ಮ್ಯೂಚುವಲ್‌ ಫಂಡ್ಸ್‌, ವಿಮೆ ಸಂಸ್ಥೆಗಳು ಮತ್ತು ರಿಟೇಲ್‌ ಹೂಡಿಕೆದಾರರು ಗಣನೀಯ ಹಣವನ್ನು ಇಟ್ಟುಕೊಂಡಿದ್ದಾರೆ. ಮ್ಯೂಚುವಲ್‌ ಫಂಡ್‌ಗಳಿಗೂ ಪ್ರತಿ ತಿಂಗಳೂ ಒಳ ಹರಿವು ಸಮೃದ್ಧವಾಗಿದೆ. ಸೆಕೆಂಡರಿ ಮಾರುಕಟ್ಟೆಯಲ್ಲಿ ಮನಿ ಮೇಕಿಂಗ್‌ ಅವಕಾಶಗಳು ಕಡಿಮೆಯಾಗಿರುವುದರಿಂದ ಪ್ರೈಮರಿ ಮಾರ್ಕೆಟ್‌ನಲ್ಲಿ ಮ್ಯೂಚುವಲ್‌ ಫಂಡ್‌ಗಳೂ ಇನ್ವೆಸ್ಟ್‌ ಮಾಡುತ್ತಿರುವುದು ಗಮನಾರ್ಹ ಎಂದು ತಜ್ಞರು ಹೇಳುತ್ತಾರೆ.

ಮಾರುಕಟ್ಟೆ ತಜ್ಞರ ಪ್ರಕಾರ ಈ ವರ್ಷ ಐಪಿಒ ಲಿಸ್ಟಿಂಗ್‌ನಲ್ಲಿ ಹೂಡಿಕೆದಾರರಿಗೆ ಸಿಕ್ಕಿರುವ ಲಾಭ ಗಣನೀಯವೇನೂ ಆಗಿಲ್ಲ. ಆದರೂ, ಬೆಂಚ್‌ ಮಾರ್ಕ್‌ ಇಂಡೆಕ್ಸ್‌ ರಿಟರ್ನ್‌ಗೆ ಹೋಲಿಸಿದರೆ ಹೆಚ್ಚು ಗಳಿಸಿದ್ದಾರೆ. 2025ರ ಈ ವರ್ಷ ಎನ್‌ಎಸ್‌ಇ ನಿಫ್ಟಿ 50 ಇಂಡೆಕ್ಸ್‌ 5.6% ರಿಟರ್ನ್‌ ಕೊಟ್ಟಿದೆ. ಏಷ್ಯನ್‌ ಈಕ್ವಿಟಿಗಳ ಬ್ರಾಡರ್‌ ಗೇಜ್‌ ಇದೇ ಅವಧಿಯಲ್ಲಿ 23% ರಿಟರ್ನ್‌ ಕೊಟ್ಟಿದ್ದು, ಇದಕ್ಕೆ ಹೋಲಿಸಿದರೆ ಎನ್‌ಎಸ್‌ಇ ನಿಫ್ಟಿ ಇಂಡೆಕ್ಸ್‌ ಕೊಟ್ಟಿರುವುದು ಬಹಳ ಕಡಿಮೆ. ವಾಲ್ಯುಯೇಶನ್‌ ಕನ್ಸರ್ನ್‌ ಪರಿಣಾಮವಾಗಿ ಭಾರತೀಯ ಸ್ಟಾಕ್‌ ಮಾರ್ಕೆಟ್‌ಗೆ ಹಿನ್ನಡೆಯಾಗಿದೆ. ಜತೆಗೆ ಅಮೆರಿಕ-ಭಾರತ ವಾಣಿಜ್ಯ ಬಿಕ್ಕಟ್ಟು, ಅನಿಶ್ಚಿತತೆ ಪರಿಣಾಮ ಬೀರಿದೆ.

ಇಷ್ಟೆಲ್ಲ ಸವಾಲುಗಳ ನಡುವೆಯೂ ಇದುವರೆಗೆ ಮೈನ್‌ ಬೋರ್ಡ್‌ ವಿಭಾಗದಲ್ಲಿ 73 ಐಪಿಒಗಳು ನಡೆದಿವೆ. ಎಸ್‌ಎಂಇ ವಲಯದಲ್ಲಿ 198 ಐಪಿಒಗಳು ನಡೆದಿವೆ. ಮೈನ್‌ ಬೋರ್ಡ್‌ ಐಪಿಒಗಳಲ್ಲಿ ಕನಿಷ್ಠ 10 ಕಂಪನಿಗಳು ಲಿಸ್ಟಿಂಗ್‌ ಆಗುವ ದಿನ 30 ಪರ್ಸೆಂಟ್‌ ರಿಟರ್ನ್‌ ಕೊಟ್ಟಿವೆ. ವಿದೇಶಿ ಹೂಡಿಕೆದಾರರು ಕೂಡ ಸೆಕೆಂಡರಿ ಮಾರ್ಕೆಟ್‌ ಬದಲಿಗೆ ಪ್ರೈಮರಿ ಮಾರ್ಕೆಟ್‌ನಲ್ಲಿ ಐಪಿಒದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

2025ರಲ್ಲಿ ಇದುವರೆಗೆ ಎಚ್‌ಡಿಬಿ ಫೈನಾನ್ಷಿಯಲ್‌ ಸರ್ವೀಸ್‌, ಹೆಕ್ಸಾವೇರ್‌ ಟೆಕ್ನಾಲಜೀಸ್‌, ನ್ಯಾಶನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ, ಜೆಎಸ್‌ಡಬ್ಲ್ಯು ಸಿಮೆಂಟ್‌, ಡಾ. ಅಗ್ರವಾಲ್ಸ್‌ ಹೆಲ್ತ್‌ಕೇರ್‌, ಅಥೆರ್‌ ಎನರ್ಜಿ, ಬೆಲ್‌ರೈಸ್‌ ಇಂಡಸ್ಟ್ರೀಸ್‌ ಮೊದಲಾದ ಕಂಪನಿಗಳು ಐಪಿಒ ನಡೆಸಿವೆ.

ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇಂಡಿಯಾ:

ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇಂಡಿಯಾದ 11,607 ಕೋಟಿ ರುಪಾಯಿ ಗಾತ್ರದ ಐಪಿಒ ಹೂಡಿಕೆದಾರರ ಗಮನ ಸೆಳೆದಿದೆ. ಗ್ರೇ ಮಾರ್ಕೆಟ್‌ನಲ್ಲಿ 24 ಪರ್ಸೆಂಟ್‌ ಪ್ರೀಮಿಯಂ ದರ ಇತ್ತು. ಐಪಿಒ ದರ 1,080-1,140 ರುಪಾಯಿಗಳ ಶ್ರೇಣಿಯಲ್ಲಿತ್ತು. ಐಪಿಒ ಲಾಟ್‌ ಸೈಜ್‌ ಬಗ್ಗೆ ಹೇಳುವುದಿದ್ದರೆ, ಕನಿಷ್ಠ 13 ಷೇರುಗಳನ್ನು ಖರೀದಿಸಬೇಕಾಗುತ್ತದೆ. ಅಂದರೆ 14,820 ರುಪಾಯಿ ಆಗುತ್ತದೆ. ರಿಟೇಲ್‌ ಹೂಡಿಕೆದಾರರು 2 ಲಕ್ಷ ರುಪಾಯಿ ತನಕ ಬಿಡ್‌ ಮಾಡಬಹುದು.

ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಎಲ್‌ಜಿ ಎಲೆಕ್ಟ್ರಾನಿಕ್ಸ್‌, ಯಾವುದೇ ಸಾಲವನ್ನು ಹೊಂದಿಲ್ಲ. ಕನ್‌ಸ್ಯೂಮರ್‌ ಡ್ಯೂರಬೆಲ್ಸ್‌ಗೆ ಉತ್ತಮ ಬೇಡಿಕೆಯೂ ಇರುವುದರಿಂದ ಲಾಂಗ್‌ ಟರ್ಮ್‌ ಹೂಡಿಕೆಗೆ ಪರಿಶೀಲಿಸಬಹುದು ಎನ್ನುತ್ತಾರೆ ತಜ್ಞರು. ಕಂಪನಿಯು ಭಾರತದ ದೊಡ್ಡ ಹೋಮ್‌ ಅಪ್ಲೈಯನ್ಸ್‌ ಮತ್ತು ಕನ್‌ ಸ್ಯೂಮರ್‌ ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ಗಳಲ್ಲೊಂದಾಗಿದೆ. ಟಿವಿ, ರೆಫ್ರಿಜರೇಟರ್‌, ಏರ್‌ ಕಂಡೀಶನರ್‌, ವಾಷಿಂಗ್‌ ಮೆಷೀನ್‌ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಝೀರೊ ಡೆಟ್‌ ಮತ್ತೊಂದು ಪ್ಲಸ್‌ ಪಾಯಿಂಟ್.‌ ಉತ್ಪಾದನಾ ಸಾಮರ್ಥ್ಯವನ್ನೂ ಹೆಚ್ಚಿಸಿದೆ. ಅಕ್ಟೋಬರ್‌ 14ರಂದು ಬಿಎಸ್‌ ಇ ಮತ್ತು ಎನ್ಎಸ್‌ಇನಲ್ಲಿ ಲಿಸ್ಟ್‌ ಆಗಲಿದೆ. ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇಂಡಿಯಾ 2024-25ರಲ್ಲಿ 24,631 ಕೋಟಿ ರುಪಾಯಿಗಳ ಆದಾಯವನ್ನು ಗಳಿಸಿದೆ. 2.203 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ದಕ್ಷಿಣ ಕೊರಿಯಾದ ದಿಗ್ಗಜ ಕಂಪನಿಯಾದ ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇಂಡಿಯಾದ ಐಪಿಒ ಅಕ್ಟೋಬರ್‌ 9ಕ್ಕೆ ಮುಕ್ತಾಯವಾಗುತ್ತಿದೆ. ಇದು ಆಫರ್‌ ಫಾರ್‌ ಸೇಲ್‌ ಆಗಿದ್ದು, ಕೊರಿಯಾ ಮೂಲದ ಮಾತೃಸಂಸ್ಥೆಯು 10 ಕೋಟಿ 18 ಲಕ್ಷ ಷೇರುಗಳನ್ನು ಮಾರಾಟ ಮಾಡುತ್ತಿದೆ.

ಟಾಟಾ ಕ್ಯಾಪಿಟಲ್‌ ಐಪಿಒ:

ಟಾಟಾ ಕ್ಯಾಪಿಟಲ್‌ ಐಪಿಒ 15,512 ಕೋಟಿ ರುಪಾಯಿ ಗಾತ್ರದ್ದಾಗಿದ್ದು, 2025ರಲ್ಲಿ ಇದುವರೆಗಿನ ದೊಡ್ಡ ಐಪಿಒ ಆಗಿದೆ. ಟಾಟಾ ಸಮೂಹಕ್ಕೆ ಸೇರಿರುವ ಟಾಟಾ ಕ್ಯಾಪಿಟಲ್‌ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಕಮರ್ಶಿಯಲ್‌ ಫೈನಾನ್ಸ್‌, ಕನ್‌ ಸ್ಯೂಮರ್‌ ಲೋನ್‌, ವೆಲ್ತ್‌ ಸರ್ವೀಸ್‌ ಅನ್ನು ನೀಡುತ್ತದೆ. ಪರ್ಸನಲ್‌ ಲೋನ್‌, ಹೋಮ್‌ ಲೋನ್‌, ಬಿಸಿನೆಸ್‌ ಲೋನ್‌, ಕಾರ್ಪೊರೇಟ್‌ ಲೋನ್‌, ಎಸ್‌ಎಂಇ ಲೋನ್‌ಗಳನ್ನು ನೀಡುತ್ತದೆ.

ವಿವರ್ಕ್‌ ಇಂಡಿಯಾ:

ಕೋ-ವರ್ಕಿಂಗ್‌ ಸ್ಪೇಸ್‌ ಸೇವೆ ಒದಗಿಸುವ ಅಮೆರಿಕ ಮೂಲದ ವಿವರ್ಕ್‌ ಇಂಡಿಯಾ ಕಂಪನಿಯ ಐಪಿಇ ಗಾತ್ರ 3,000 ಕೋಟಿ ರುಪಾಯಿಗಳಾಗಿದೆ.

ಈ ಸುದ್ದಿಯನ್ನೂ ಓದಿ: Larry Ellison: ಒರಾಕಲ್‌ ಷೇರು ಬೆಲೆ ಹೆಚ್ಚಳ; ಕೋಟ್ಯಧಿಪತಿಗಳಾದ ಭಾರತೀಯ ಉದ್ಯೋಗಿಗಳು

ಮುಂಬರುವ ಐಪಿಒಗಳ ಲಿಸ್ಟ್:‌

  1. ಚೆನ್ನೈ ಮೂಲದ ಲಲಿತ್‌ ಜ್ಯುವೆಲ್ಲರಿ ಸಂಸ್ಥೆಗೆ 1,700 ಕೋಟಿ ರುಪಾಯಿ ಗಾತ್ರದ ಐಪಿಒ ನಡೆಸಲು ಸೆಬಿ ಅನುಮೋದಿಸಿದೆ.
  2. ಕೆನರಾ ರೊಬೆಕೊ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಐಪಿಒ ಗಾತ್ರ 1,326 ಕೋಟಿ ರುಪಾಯಿಗಳಾಗಿದೆ.
  3. ಲೆನ್ಸ್‌ ಕಾರ್ಟ್‌ ಸಲ್ಯೂಷನ್ಸ್‌ನ 2,150 ಕೋಟಿ ರುಪಾಯಿ ಗಾತ್ರದ ಐಪಿಒಗೆ ಸೆಬಿ ಅನುಮೋದಿಸಿದೆ.
  4. ಟೆನ್ನೆಕೊ ಕ್ಲೀನ್‌ ಕಂಪನಿಯ 3,000 ಕೋಟಿ ಗಾತ್ರದ ಐಪಿಒಗೆ ಸೆಬಿ ಅನುಮೋದಿಸಿದೆ.