Union Budget 2025: ವಾರ್ಷಿಕ 10 ಲಕ್ಷ ರೂ. ತನಕ ಆದಾಯ ತೆರಿಗೆ ಮುಕ್ತ ಘೋಷಣೆ? ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ? ಬಜೆಟ್ ನಿರೀಕ್ಷೆಗಳೇನು?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸುವ ನಿರೀಕ್ಷೆ ಇದೆ. ಆದಾಯ ತೆರಿಗೆಯ ಸ್ಲ್ಯಾಬ್ ಬದಲಾಗುವ ಸಾಧ್ಯತೆ ಇದೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Seetharaman) ಅವರು 2025-26ರ ಮುಂಗಡಪತ್ರವನ್ನು ಫೆ.1ರ ಶನಿವಾರ ಬೆಳಗ್ಗೆ 11ಗಂಟೆಗೆ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಹಾಗಾದರೆ ಬಜೆಟ್ ನಿರೀಕ್ಷೆಗಳೇನು?(Union Budget 2025) ತಿಳಿಯೋಣ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸುವ ನಿರೀಕ್ಷೆ ಇದೆ. ಆದಾಯ ತೆರಿಗೆಯ ಸ್ಲ್ಯಾಬ್ ಬದಲಾಗುವ ಸಾಧ್ಯತೆ ಇದೆ.
ಇದಕ್ಕೆ ಕಾರಣವೇನು?
ನಗರ ಪ್ರದೇಶಗಳಲ್ಲಿ ಜನರು ಖರ್ಚು ವೆಚ್ಚಗಳನ್ನು ಬಲವಂತವಾಗಿ ಕಡಿಮೆ ಮಾಡಿದ್ದಾರೆ. ಅವರ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ. ಹೀಗಾಗಿ ಬೇಡಿಕೆಯೂ ಮಂದಗತಿಯಲ್ಲಿದೆ. ಆದ್ದರಿಂದ ನಿರ್ಮಲಾ ಸೀತಾರಾಮನ್ ಅವರು ಜನರ ಕೈಯಲ್ಲಿ ನಗದು ಉಳಿಯುವಂತೆ ಮಾಡಲು ಹಲವಾರು ವಿಧಗಳಲ್ಲಿ ತೆರಿಗೆ ಕಡಿತ ಘೋಷಿಸುವ ನಿರೀಕ್ಷೆ ಇದೆ.
ತೆರಿಗೆದಾರರು ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ 10 ಲಕ್ಷ ರೂಪಾಯಿ ತನಕದ ಆದಾಯವನ್ನು ತೆರಿಗೆ ಮುಕ್ತಗೊಳಿಸಲು ಬೇಡಿಕೆ ಮುಂದಿಟ್ಟಿದ್ದಾರೆ. ಅದೇ ರೀತಿ 15 ಲಕ್ಷದಿಂದ 20 ಲಕ್ಷ ರೂ. ಆದಾಯ ಇರುವವರಿಗೆ ಹೊಸ ಟ್ಯಾಕ್ಸ್ ಸ್ಲ್ಯಾಬ್ ಅನ್ನು ನಿರೀಕ್ಷಿಸಲಾಗಿದೆ. ಕೆಲ ವರದಿಗಳ ಪ್ರಕಾರ, ಮಧ್ಯಮ ವರ್ಗದ ಜನರಿಗೆ 8 ರಿಂದ 10 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ mtftu 15 ರಿಂದ 20 ಲಕ್ಷ ರೂಪಾಯಿ ತನಕದ ಆದಾಯಕ್ಕೆ 25% ತೆರಿಗೆ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಇದು ಹೇಗೆ ಸಾಧ್ಯ ಎಂಬುದನ್ನೂ ನೋಡೋಣ.
ಮೊದಲನೆಯದಾಗಿ ಬೇಸಿಕ್ ಎಕ್ಸೆಂಮ್ಷನ್ ಲಿಮಿಟ್ ಅಥವಾ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು 2.5 ಲಕ್ಷ ರೂ.ಗಳಿಂದ 5 ಲಕ್ಷ ರೂಪಾಯಿಗಳಿಗೆ ಏರಿಸಬೇಕು ಹಾಗೂ 30% ಆದಾಯ ತೆರಿಗೆ ದರವನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ವರಮಾನ ಇರುವವರಿಗೆ ಅನ್ವಯಿಸಬೇಕು ಎಂಬ ಬೇಡಿಕೆಯಿದೆ.
ಎರಡನೆಯದಾಗಿ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಈಗ ನಾನಾ ಹೂಡಿಕೆಗಳಿಗೆ 1.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿಯ ಅನುಕೂಲ ಸಿಗುತ್ತದೆ. ಅದನ್ನು 3 ಲಕ್ಷ ರೂಪಾಯಿಗೆ ಏರಿಸಬೇಕು ಎಂಬ ಬೇಡಿಕೆ ಇದೆ.
ಮೂರನೆಯದಾಗಿ, ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಈಗಿನ 75,000 ರೂ.ಗಳಿಂದ, 1 ಲಕ್ಷದ 20 ಸಾವಿರ ರೂಪಾಯಿಗೆ ಏರಿಸುವ ನಿರೀಕ್ಷೆ ಇದೆ. ಇದರಿಂದಲೂ ಮಧ್ಯಮ ವರ್ಗದ ತೆರಿಗೆದಾರರಿಗೆ ಅನುಕೂಲವಾಗಲಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಹೆಚ್ಚಿನ ಡಿಡಕ್ಷನ್‌ಗಳು ಮತ್ತು ವಿನಾಯಿತಿಗಳನ್ನು ಜನ ನಿರೀಕ್ಷಿಸುತ್ತಿದ್ದಾರೆ. ಕಳೆದ ಸಲ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 75,000 ರೂಪಾಯಿಗೆ ಏರಿಸಿದ್ದರಿಂದ ಜನರಿಗೆ ತೆರಿಗೆಯಲ್ಲಿ 17,500 ರೂಪಾಯಿ ಉಳಿತಾಯವಾಗಿತ್ತು.
ನಾಲ್ಕನೆಯದಾಗಿ, ಮಕ್ಕಳ ಶಿಕ್ಷಣ ವೆಚ್ಚ ಮತ್ತು ಹೆಲ್ತ್ ಕೇರ್ ಖರ್ಚುಗಳಿಗೆ ಸಂಬಂಧಿಸಿ ಹೆಚ್ಚುವರಿ ಡಿಡಕ್ಷನ್‌ಗಳನ್ನು ಜನ ಬಯಸುತ್ತಿದ್ದಾರೆ.
ಐದನೆಯದಾಗಿ, ಹೊಸ ತೆರಿಗೆ ಪದ್ಧತಿಯಲ್ಲೂ ಗೃಹ ಸಾಲಗಾರರು ಆದಾಯ ತೆರಿಗೆ ಕಡಿತವನ್ನು ನಿರೀಕ್ಷಿಸುತ್ತಿದ್ದಾರೆ. ಈಗ ಇದು ಹಳೆಯ ಪದ್ಧತಿಯಲ್ಲಿ ಮಾತ್ರ ಇದೆ. ನೇರ ತೆರಿಗೆ ಸಂಹಿತೆ ಅಥವಾ ಡೈರೆಕ್ಟ್ ಟ್ಯಾಕ್ಸ್ ಕೋಡ್ ಅನ್ನು ಸರ್ಕಾರ 2025-26ರ ಬಜೆಟ್‌ನಲ್ಲಿ ಮಂಡಿಸಲಿದೆಯೇ ಎಂಬ ನಿರೀಕ್ಷೆಯೂ ಇದೆ.
ದೇಶದಲ್ಲಿ ಜೀವನೋಪಾಯಕ್ಕೆ ಮುಖ್ಯವಾಗಿ ಪ್ರತಿ ತಿಂಗಳು ಪಡೆಯುವ ವೇತನವನ್ನು ಅವಲಂಬಿಸಿರುವ ಮಧ್ಯಮ ವರ್ಗದ ಜನರು ಹಣದುಬ್ಬರದ ಪರಿಣಾಮ ಬಸವಳಿದಿದ್ದಾರೆ. ಅವರ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ. ದಿನೇ ದಿನೆ ಖರ್ಚು ವೆಚ್ಚಗಳು ಏರುತ್ತಿವೆ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಮಧ್ಯಮ ವರ್ಗದ ಜನರ ಕೈಯಲ್ಲ ದುಡ್ಡು ಉಳಿತಾಯವಾಗದಿದ್ದರೆ, ಅವರು ಖರ್ಚು ಮಾಡುವುದು ಹೇಗೆ? ಇದರ ಪರಿಣಾಮ ಉತ್ಪಾದನೆ ವಲಯದ ಮೇಲೆ ಕೂಡ ನಕಾರಾತ್ಮಕವಾಗಲಿದೆ. ಜನ ದುಡ್ಡು ಖರ್ಚು ಮಾಡಿದರೆ ಮಾತ್ರ ನಾನಾ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬರುತ್ತದೆ. ಜನರ ಬಳಿ ದುಡ್ಡಿರದಿದ್ದರೆ ವಸ್ತು ಮತ್ತು ಸೇವೆಗಳಿಗೆ ಬೇಡಿಕೆ ತಗ್ಗುತ್ತದೆ. ಆದ್ದರಿಂದಲೇ ಟ್ಯಾಕ್ಸ್ ರಿಲೀಫ್ ಕೊಡಿ ಎಂದು ಜನ ಒತ್ತಾಯಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Droupadi Murmu: ಸಂಸತ್ ಬಜೆಟ್ ಅಧಿವೇಶನ ಆರಂಭ; ಕುಂಭಮೇಳ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಘಾತ
ಈ ಸಲದ ಬಜೆಟ್ ಮೇಲೆ ರಿಯಲ್ ಎಸ್ಟೇಟ್ ಸೆಕ್ಟರ್ ಹಲವು ನಿರೀಕ್ಷೆಗಳನ್ನು ಒಳಗೊಂಡಿದೆ. ದೇಶದ ಮಧ್ಯಮ ವರ್ಗದ ಜನತೆಗೆ ಒಂದು ಮನೆಯನ್ನು ಖರೀದಿಸುವುದು ಅಥವಾ ಸೈಟ್ ತೆಗೆದುಕೊಂಡು ಮನೆ ಕಟ್ಟುವುದು ಜೀವಮಾನದ ಕನಸಾಗಿರುತ್ತದೆ. ಇನ್ನೂ ಸ್ವಲ್ಪ ಉಳ್ಳವರು ಎರಡನೇ ಮನೆಯನ್ನು ಹೊಂದಲು ಬಯಸುತ್ತಾರೆ. ಮತ್ತೆ ಕೆಲವರು ಬಾಡಿಗೆ ಮನೆಯನ್ನು ಕಟ್ಟಿ, ಇಳಿಗಾಲದಲ್ಲಿ ಆದಾಯದ ಮತ್ತೊಂದು ಮೂಲ ಇರಲಿ ಎಂದು ಬಯಸುತ್ತಾರೆ. ಹೀಗಾಗಿ ರಿಯಾಲ್ಟಿ ಕ್ಷೇತ್ರದ ಚೇತರಿಕೆಗೆ ಬಜೆಟ್ ಏನೆಲ್ಲ ಕೊಡುಗೆ ನೀಡಲಿದೆ ಎಂಬ ಕುತೂಹಲ ಉಂಟಾಗಿದೆ.
ವಿಶಾಲಾರ್ಥದಲ್ಲಿ ನೋಡುವುದಿದ್ದರೆ ಮೂಲ ಸೌಕರ್ಯ ಅಭಿವೃದ್ಧಿ, ಮೆಟ್ರೊ, ರೈಲ್ವೆ ನೆಟ್ ವರ್ಕ್, ಮಲ್ಟಿ ಮಾಡೆಲ್ ಕಾರಿಡಾರ್‌ಗಳು ನಗರ ಮತ್ತು ನಗರಗಳು ಸುತ್ತುಮುತ್ತಲು ವಾಣಿಜ್ಯೋದ್ದೇಶದ ರಿಯಾಲ್ಟಿ ಚಟುವಟಿಕೆಗಳನ್ನು ಪುಷ್ಟಿಗೊಳಿಸುತ್ತದೆ. ಇದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳನ್ನೂ ಸೃಷ್ಟಿಸುತ್ತದೆ.
ಸಿಮೆಂಟ್, ಉಕ್ಕಿನ ಜಿಎಸ್‌ಟಿ ಕಡಿಮೆ ಆಗುತ್ತಾ?
ಮನೆ ಕಟ್ಟುವಾಗ ಮುಖ್ಯವಾಗಿ ಬೇಕಾಗುವ ಸಿಮೆಂಟ್ ಮೇಲೆ ಈಗ ಬರೋಬ್ಬರಿ 28% ಜಿಎಸ್‌ಟಿ ಇದೆ. ಇದನ್ನು 18% ಗೆ ಇಳಿಸಿದರೆ ಮಧ್ಯಮ ವರ್ಗದ ಜನತೆಗೆ ಮತ್ತು ಜನ ಸಾಮಾನ್ಯರಿಗೆ ಸ್ವಂತ ಸೂರು ಕಟ್ಟುವ ಕನಸಿಗೆ ಪುಷ್ಟಿ ನೀಡಿದಂತಾಗುತ್ತದೆ. ಸಿಮೆಂಟ್ ಕಂಪನಿಗಳೂ ಈ ಬೇಡಿಕೆಯನ್ನು ಮುಂದಿಟ್ಟಿವೆ.
ಆರ್ಥಿಕತೆಯನ್ನು ಚುರುಕುಗೊಳಿಸಬಲ್ಲ ವಸ್ತುಗಳಲ್ಲಿ ಸಿಮೆಂಟ್ ಕೂಡ ನಿರ್ಣಯಕ. ಕಾಂಕ್ರಿಟ್ ರಸ್ತೆಗಳೂ ದೀರ್ಘಕಾಲ ಬಾಳಿಕೆ ಬರುತ್ತವೆ. ಉಕ್ಕು, ಕಬ್ಬಿಣ ಕೂಡ ನಿರ್ಮಾಣ ಕ್ಷೇತ್ರದಲ್ಲಿ ಅಗತ್ಯ. ಇವುಗಳ ಮೇಲೆ 18% ಜಿಎಸ್ ಟಿ ಇದ್ದು, ಇದು ಕಡಿಮೆಯಾದರೆ ಅನುಕೂಲವಾಗಲಿದೆ.
ಪ್ರಧಾನ ಮಂತ್ರಿ ಆವಾಸ್ ಸ್ಕೀಮ್ ಇರುವುದರಿಂದ ಮಧ್ಯಮ ವರ್ಗದ ಜನರಿಗೂ ಇವತ್ತು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್‌ನ ಪ್ರಯೋಜನ ಸಿಗುವಂತಾಗಿದೆ. ಆದರೆ ಇದರ ಜತೆಗೆ ಮನೆ ನಿರ್ಮಾಣದ ಕಚ್ಚಾ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿದರೆ ಉತ್ತಮ. ವಸತಿ ಮತ್ತು ವಾಣಿಜ್ಯೋದ್ದೇಶದ ರಿಯಾಲ್ಟಿ ಪ್ರಾಜೆಕ್ಟ್‌ಗಳ ಜಿಎಸ್‌ಟಿ ಮತ್ತು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಏಕರೂಪಗೊಳಿಸುವುದರಿಂದ ವೆಚ್ಚ ಕಡಿಮೆಯಾಗಲಿದೆ.
ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಅಫರ್ಡಬಲ್ ಬಾಡಿಗೆ ಅಪಾರ್ಟ್‌ಮೆಂಟ್‌ಗಳನ್ನು ಸರ್ಕಾರವೇ ನಿರ್ಮಿಸಿಕೊಟ್ಟರೆ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಬರುವ ಜನರಿಗೆ ಸಂಬಳದಲ್ಲಿ ಬಾಡಿಗೆ ಖರ್ಚಿನಲ್ಲಿ ಉಳಿತಾಯಕ್ಕೆ ಅವಕಾಶ ಸಿಕ್ಕಂತಾಗುತ್ತದೆ.
ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳು ಈ ಸಲ ಘೋಷಣೆಯಾಗುವ ನಿರೀಕ್ಷೆ ಇದೆ. ಉದ್ಯೋಗ ಅಧಾರಿತ ಇನ್ಸೆಂಟಿವ್ ಯೋಜನೆಗಳು ಪ್ರಕಟವಾಗಬಹುದು. ಮಹಿಳೆಯರ ಕೌಶಲ ವೃದ್ಧಿಗೆ, ಸುರಕ್ಷತೆಗೆ, ಆರೋಗ್ಯ ವೃದ್ಧಿಗೆ ಮತ್ತು ಹಣಕಾಸು ಭದ್ರತೆಗೆ ಯೋಜನೆಗಳು ಪ್ರಕಟವಾಗುವ ನಿರೀಕ್ಷೆ ಇದೆ. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆ 2025ರಿಂದಾಚೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಉಚಿತ ಆಹಾರ ಧಾನ್ಯ ವಿತರಣೆ, ಪಿಎಂಎವೈ ಸ್ಕೀಮ್ ಅಡಿಯಲ್ಲಿ ಅಫರ್ಡೆಬಲ್ ಮನೆಗಳ ನಿರ್ಮಾಣ, ನರೇಗಾಕ್ಕೆ ಹೆಚ್ಚಿನ ಅನುದಾನವನ್ನು ನಿರೀಕ್ಷಿಸಲಾಗಿದೆ. ಜನಪ್ರಿಯ ಯೋಜನೆಗಳ ಜತೆಗೆ ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡುವ ವಿಷಯದಲ್ಲಿ ಬ್ಯಾಲೆನ್ಸ್ ಕಂಡುಕೊಳ್ಳಲು ಸರ್ಕಾರ ಯತ್ನಿಸುವ ನಿರೀಕ್ಷೆ ಇದೆ.
ಉದ್ಯೋಗ ಸೃಷ್ಟಿಗೆ ಸಿಗುತ್ತಾ ಆದ್ಯತೆ?
ಉದ್ಯೋಗ ಸೃಷ್ಟಿಗೆ ಬಜೆಟ್ ಆದ್ಯತೆ ನೀಡಬೇಕು ಎಂದು ಆರ್ಥಿಕ ತಜ್ಞರು ಒತ್ತಾಯಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಸರ್ಕಾರ ಬಂಡವಾಳ ವೆಚ್ಚ ಅಥವಾ ಕ್ಯಾಪಿಟಲ್ ಎಕ್ಸ್‌ಮೆಂಡೀಚರ್ ಆಗಿ 54 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಹೀಗಿದ್ದರೂ, ಖಾಸಗಿ ಬಂಡವಾಳ ಹೂಡಿಕೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ನಿರುದ್ಯೋಗದ ಸಮಸ್ಯೆ ಈಗಲೂ ಉಳಿದುಕೊಂಡಿದೆ. 5 ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕತೆಯಾಗುವತ್ತ ಮುನ್ನಡೆಯುತ್ತಿರುವ ಭಾರತ, ಹಣದುಬ್ಬರ, ನಿರುದ್ಯೋಗದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾಗಿದೆ.
ಕೇಂದ್ರ ಸರ್ಕಾರ ಭವಿಷ್ಯದ ದಿನಗಳಲ್ಲಿ ಗ್ರೀನ್ ಫ್ಯೂಚರ್ ಮತ್ತು ಗ್ರೀನ್ ಜಾಬ್ಸ್ ಎಂಬ ಪರಿಕಲ್ಪನೆಯನ್ನು ಹೊಂದಿದೆ. ಅಂದರೆ ಪರಿಸರಸ್ನೇಹಿ ಉದ್ಯೋಗಗಳ ಸೃಷ್ಟಿ. ಅಂದರೆ ನವೀಕರಿಸಬಹುದಾದ ಇಂಧನ ವಲಯ, ತ್ಯಾಜ್ಯ ನಿರ್ವಹಣೆ, ಸುಸ್ಥಿರ ಕೃಷಿ ಇತ್ಯಾದಿ ವಲಯಗಳಲ್ಲಿ ಉದ್ಯೋಗ ಸೃಷ್ಟಿಯಾಗಿದೆ.
ಕೇಂದ್ರ ಸರ್ಕಾರ 2024-25ರ ಬಜೆಟ್‌ನಲ್ಲಿ 11 ಲಕ್ಷ ಕೋಟಿ ರೂಪಾಯಿಗಳನ್ನು ಕ್ಯಾಪಿಟಲ್ ಎಕ್ಸ್‌ಪೆಂಡೀಚರ್ ಅಥವಾ ಬಂಡವಾಳ ವೆಚ್ಚವಾಗಿ ಮೀಸಲಿಟ್ಟಿತ್ತು. ಇದರಲ್ಲಿ ಈ ಸಲ 10-15% ಏರಿಸಬೇಕೆಂಬ ಒತ್ತಾಯ ಇದೆ. ದೇಶದ ಆರ್ಥಿಕತೆಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಕ್ಯಾಪೆಕ್ಸ್ ನಿರ್ಣಾಯಕವಾಗುತ್ತದೆ. ಈ ಬಂಡವಾಳ ವೆಚ್ಚದಲ್ಲಿ ರಸ್ತೆ, ಸೇತುವೆಗಳ ನಿರ್ಮಾಣ, ಆಸ್ಪತ್ರೆ ಕಟ್ಟಡ, ಇತರ ಮೂಲ ಸೌಕರ್ಯ ವೆಚ್ಚಗಳು ಇರುತ್ತವೆ. ಇದು ಉದ್ಯೋಗಗಳನ್ನೂ ಒದಗಿಸುತ್ತದೆ.
ಹಾಗಾದರೆ ಕರ್ನಾಟಕದ ನಿರೀಕ್ಷೆ ಏನು?
ಬೆಂಗಳೂರಿನ ಅಭಿವೃದ್ಧಿ ಹಾಗೂ ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಬಜೆಟ್ ನೆರವನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದೆ.